Homeಕರ್ನಾಟಕಜೆಡಿಎಸ್ ಬಿಜೆಪಿ ಕೂಡಿಕೆ: ರಾಜಕೀಯ ಪಕ್ಷವಾಗಿ ಸತ್ತು ಅಸ್ತಿತ್ವ ಉಳಿಸಿಕೊಳ್ಳುವ ಬಗೆ

ಜೆಡಿಎಸ್ ಬಿಜೆಪಿ ಕೂಡಿಕೆ: ರಾಜಕೀಯ ಪಕ್ಷವಾಗಿ ಸತ್ತು ಅಸ್ತಿತ್ವ ಉಳಿಸಿಕೊಳ್ಳುವ ಬಗೆ

- Advertisement -
- Advertisement -

’ಬಿಜೆಪಿಯೊಂದಿಗೆ ಸೇರುವುದರಿಂದ ಜೆಡಿಎಸ್ ನಾಶವಾಗಿಬಿಡುತ್ತದೆ; ಬಿಜೆಪಿ ಅದನ್ನು ನುಂಗಿಬಿಡಲಿದೆ’ ಎಂದು ಹೇಳುವ ನನ್ನ ಸ್ನೇಹಿತರೊಂದಿಗೆ ಹಲವು ದಿನಗಳಿಂದ ನನಗೆ ಭಿನ್ನಾಭಿಪ್ರಾಯವಿದೆ. ನನ್ನ ಪ್ರಕಾರ ಈ ಕೂಡಿಕೆ ಮಾಡಿಕೊಳ್ಳದಿದ್ದರೆ ಜೆಡಿಎಸ್ ನಾಶವಾಗಿಬಿಡುವ ಸಾಧ್ಯತೆಯೇ ಹೆಚ್ಚು. ಆದರೆ ಈ ಮೈತ್ರಿಯ ಮೂಲಕ ಅದು ಒಂದು ರಾಜಕೀಯ ಪಕ್ಷವಾಗಿ ಅವಸಾನ ಹೊಂದುತ್ತದೆ. ಇದೊಂಥರಾ ವೈರುಧ್ಯದ ಮಾತಾಗಿ ಕೇಳಿಸಬಹುದು. ಅದನ್ನು ಈ ಬರಹದ ಕಡೆಯಲ್ಲಿ ಚರ್ಚಿಸುತ್ತೇನೆ.

ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸಾಮರ್ಥ್ಯಕ್ಕೆ ಮೀರಿದ ಮಾತುಗಳನ್ನು ಅತಿಯಾಗಿ ಆಡಿದ ಪಕ್ಷ ಯಾವುದಾದರೂ ಇದ್ದರೆ ಅದು ಜೆಡಿಎಸ್ಸೇ. ’ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ, ನಮ್ಮದು ಮಿಷನ್ 123’ ಎಂದೆಲ್ಲಾ ಹೇಳಿಕೊಂಡಿದ್ದ ಜೆಡಿಎಸ್ ನಾಯಕರು ಕನಿಷ್ಠ 50 ಮುಟ್ಟುವುದರ ಕುರಿತು ಆಪ್ತವಲಯದಲ್ಲಿ ಆಶಾವಾದ ವ್ಯಕ್ತಪಡಿಸುತ್ತಿದ್ದರು. ತೀರಾ ಮೂವತ್ತಾದರೂ ಬಾರದೆ ಹೋದೀತು ಎಂದು ಅವರು ಎಣಿಸಿರಲಿಲ್ಲ. ಹಿಂದಿನ ಚುನಾವಣೆಯಲ್ಲಿ 37, ಅದಕ್ಕೂ ಹಿಂದಿನ ಚುನಾವಣೆಯಲ್ಲಿ 40 ಸೀಟುಗಳನ್ನು ಗೆದ್ದಿದ್ದ ಅದು ಈ ಸಾರಿಯೂ ಅತಂತ್ರ ವಿಧಾನಸಭೆಯ ನಿರೀಕ್ಷೆಯಲ್ಲಿಯೇ ಇತ್ತು. ಅದಕ್ಕೆ ಸರಿಯಾಗಿ ಬಹುತೇಕ ಸಮೀಕ್ಷೆಗಳೂ ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಬಹುಮತಕ್ಕಿಂತ ಕಡಿಮೆ ಸೀಟುಗಳನ್ನು ಅಂದಾಜಿಸಿದ್ದವು. ಹಾಗೆ ನೋಡಿದರೆ ಎಲ್ಲರಿಗಿಂತ ಮುಂಚೆ ಜನತಾ ಜಲಧಾರೆ ಮತ್ತು ನಂತರ ಪಂಚರತ್ನ ಯಾತ್ರೆ ಹಾಗೂ ತನ್ನ ಅಭ್ಯರ್ಥಿಗಳಿಗೆ ಪರೀಕ್ಷೆ-ತರಬೇತಿ ಇತ್ಯಾದಿಗಳೆಲ್ಲವನ್ನೂ ಹಮ್ಮಿಕೊಂಡಿದ್ದೂ ಸಹಾ ಜೆಡಿಎಸ್ಸೇ.

ಆದರೆ ಈ ವಿಶ್ವಾಸ ರಾಜಕೀಯ ವಲಯದಲ್ಲಿ ಬಹುತೇಕರಿಗೆ ಇರಲಿಲ್ಲ. ಜೆಡಿಎಸ್ ಖಚಿತವಾಗಿ ಹಿಂದಿನ ವರ್ಷಗಳಿಗಿಂತ ಕಡಿಮೆ ಸೀಟುಗಳನ್ನು ಪಡೆಯುತ್ತದೆಂಬುದು ಎರಡನೇ ಹಂತದ ರಾಜಕೀಯ ನಾಯಕರಿಗೂ ತಿಳಿದುಹೋಗಿತ್ತು. ಚುನಾವಣೆಗಿಂತ ಸಾಕಷ್ಟು ಮುಂಚೆಯೇ ಜೆಡಿಎಸ್ಸಿನ ಹಾಲಿ ಎಂಎಲ್‌ಎಗಳ ಪೈಕಿ ಕನಿಷ್ಠ ನಾಲ್ಕು ಜನ ಕಾಂಗ್ರೆಸ್ ಪಕ್ಷದ ಕಡೆಗೆ ಹೋಗಿಯಾಗಿತ್ತು. ಇನ್ನು ಸ್ಥಳೀಯ ನಾಯಕರೂ ಭಾರೀ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿದ್ದರು. ಅಧಿಕಾರಸ್ಥ ಪಕ್ಷವಾಗಿದ್ದ ಮತ್ತು ದೆಹಲಿಯಲ್ಲಿ ಇಂದಿಗೂ ಬಲಿಷ್ಠವಾಗಿರುವ ಬಿಜೆಪಿಯಿಂದಲೂ ಹಾಲಿ ಎಂಎಲ್‌ಸಿಗಳೇ ಸಾಲುಸಾಲು ಹೊರಟುಬಿಟ್ಟಿದ್ದರು.

ಹೀಗಿದ್ದೂ ಜೆಡಿಎಸ್ ಯಾವ ಬಲದ ಮೇಲೆ ಗೆಲುವಿನ ವಿಶ್ವಾಸ ಇಟ್ಟುಕೊಂಡಿತ್ತೆಂಬುದು ಜೆಡಿಎಸ್‌ನ ಪರಮೋಚ್ಚ ನಾಯಕರಿಗೇ ಗೊತ್ತು. ಅದೇನೇ ಇರಲಿ, ಜೆಡಿಎಸ್ಸಿಗೆ ಈ ಸಾರಿ ಬಿಜೆಪಿಯೊಂದಿಗೆ ಒಳ ಒಪ್ಪಂದವಂತೂ ಇರಲಿಲ್ಲ ಎಂಬುದು ಸ್ಪಷ್ಟ. 2018ರಲ್ಲಿ ಜೆಡಿಎಸ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಅತ್ಯಂತ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಪ್ಪಂದವಲ್ಲದಿದ್ದರೂ, ಕಣ್ಸನ್ನೆಯ ಹೊಂದಾಣಿಕೆಯಂತೂ ಇತ್ತು. ಆದರೆ, ಈ ಸಾರಿ ಬಿಜೆಪಿಗೆ ತನ್ನ ಸೋಲು ಖಚಿತವೆಂದು ಗೊತ್ತಾದ ಮೇಲೂ ಜೆಡಿಎಸ್ ಜೊತೆ ಅಂದು ಹೊಂದಾಣಿಕೆ ಮಾಡಿಕೊಂಡಿರಲಿಲ್ಲ; ಬದಲಿಗೆ ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಸ್ವಂತ ಬಲದ ಮೇಲೆ ನುಗ್ಗಿತ್ತು.

ತನ್ನೆಲ್ಲಾ ಪ್ರಯತ್ನದ ಹೊರತಾಗಿಯೂ ಈ ಸಾರಿ ಜೆಡಿಎಸ್ ಅತ್ಯಂತ ಹೀನಾಯ ಸೋಲನ್ನು ಅನುಭವಿಸಿತು. ಜೆಡಿಎಸ್ ಹುಟ್ಟಿಕೊಂಡ ಮೊದಲ ಚುನಾವಣೆಯಲ್ಲಿ ಹತ್ತೇ ಸ್ಥಾನಗಳನ್ನು ಗೆದ್ದಾಗಲೂ 10.42% ಮತಗಳನ್ನು ಪಡೆದುಕೊಂಡಿತ್ತು. ಆ ನಂತರ ಎರಡೆರಡು ಬಾರಿ ಅಧಿಕಾರ ಅನುಭವಿಸಿ ಬಲ ಪಡೆದುಕೊಂಡ ನಂತರದ ಈ ಚುನಾವಣೆಯಲ್ಲಿ 13.29% ಮತಗಳೊಂದಿಗೆ 19 ಸ್ಥಾನಗಳಿಗೆ ಸೀಮಿತವಾಯಿತು.

ಕುಟುಂಬ ರಾಜಕಾರಣದ ಜೊತೆಗೆ ಹಲವು ಕಾರಣಗಳು ಈ ಸೋಲಿಗೆ ಕಾರಣವಾಗಿದ್ದವು. ಬಹಳ ಮುಖ್ಯವಾಗಿ ಒಂದು ರಾಜಕೀಯ ಪಕ್ಷವಾಗಿ ಜೆಡಿಎಸ್‌ನ ಅಸ್ತಿತ್ವದ ತಳಹದಿಯೇ ಅತ್ಯಂತ ದುರ್ಬಲವಾಗಿದೆ. ಅದರ ವ್ಯಕ್ತಿತ್ವ ಏನು ಎಂಬುದೇ ಗೊತ್ತಾಗದಷ್ಟು ವೈರುಧ್ಯಗಳು ಅದರಲ್ಲಿ ತುಂಬಿವೆ. ನಾಲ್ಕು ಸಂಗತಿಗಳನ್ನು ನೋಡೋಣ. ಒಂದು- ಜಾತ್ಯತೀತತೆಯು ಹೆಸರಿನಲ್ಲೇ ಇರುವ ಈ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರು ಚುನಾವಣೆಗೆ ಮುಂಚೆ ಬಿಜೆಪಿಗೆ ’ಪೇಶ್ವೆ ಬ್ರಾಹ್ಮಣರ ಪಕ್ಷ’ ಎಂಬ ಹೊಸ ನಾಮಕರಣ ಮಾಡಿ, ಬಹಳ ವಿನೂತನವಾಗಿ ಮತ್ತು ಪರಿಣಾಮಕಾರಿಯಾಗಿ ಅದರ ಮುಖವಾಡವನ್ನು ಕಳಚಲೆತ್ನಿಸಿದ್ದರು. ಆರೆಸ್ಸೆಸ್ಸನ್ನೂ ನೇರಾನೇರ ಅವರು ಎದುರುಗೊಂಡಿದ್ದ ರೀತಿ ಹಲವರಿಗೆ ಅಚ್ಚರಿ ಹುಟ್ಟಿಸಿತ್ತು. ಆದರೆ, ಅದೇ ಕುಮಾರಸ್ವಾಮಿ ಸಲೀಸಾಗಿ ಬಿಜೆಪಿಯ ಜೊತೆಗೆ ಹೋಗಿಬಿಡಬಹುದು ಎಂಬ ಅನುಮಾನ ಎಲ್ಲಾ ಕಾಲಕ್ಕೂ ಬಿಜೆಪಿಯ-ಸಂಘಪರಿವಾರದ ವಿರೋಧಿಗಳಿಗೆಲ್ಲಾ ಇದ್ದೇ ಇತ್ತು. ’ಜಾತ್ಯತೀತತೆ ಅಂದ್ರೆ ಏನ್ರೀ?’ ಅಂತ ಇನ್ನೊಮ್ಮೆ ಕುಮಾರಸ್ವಾಮಿಯವರು ಕೇಳಲ್ಲ ಎನ್ನುವ ನಂಬಿಕೆ ಯಾರಿಗೂ ಇಲ್ಲ. ಮುಸ್ಲಿಮರು ಓಟು ಹಾಕುವುದಾದರೆ ತಾನು ಜಾತ್ಯತೀತ, ಇಲ್ಲದಿದ್ದರೆ ಅಲ್ಲ ಎಂದು ಯಾರಾದರೂ ಹೇಳುವುದಾದರೆ ಅದಕ್ಕೆ ತನ್ನದೇ ಆದ ಒಂದು ವ್ಯಕ್ತಿತ್ವ ಇಲ್ಲ ಎಂದೇ ಅರ್ಥ. ಸ್ವತಃ ದೇವೇಗೌಡರೇ, ’ಬಿಜೆಪಿಯ ಜೊತೆಗೆ ಹೋಗದೇ ಇದ್ದ ಪಕ್ಷ ಯಾವುದಾದರೂ ಇದೆಯಾ?’ ಎಂದು ಕೇಳುವುದರ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ಭಾರತದ ರಾಜಕಾರಣದಲ್ಲಿ ರಾಜಕೀಯ ಪಕ್ಷವಾಗಿ ಬೆಳೆಯಲು ಜಾತ್ಯತೀತವಾಗಿರುವುದು ಕಡ್ಡಾಯವೇನಲ್ಲ. ಆದರೆ ಈ ಕುರಿತ ಜೆಡಿಎಸ್ಸಿನ ನಿಲುವು ಯಾರಿಗೂ ಖಚಿತವಿಲ್ಲದೇ ಹೋದರೆ ಹೇಗೆ?

ಎರಡು- ರೈತರ ಪಕ್ಷವೆಂದು ತನ್ನನ್ನು ಬಿಂಬಿಸಿಕೊಳ್ಳಬಯಸುವ ಜೆಡಿಎಸ್ ರೈತವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಬಿಜೆಪಿ ಅಧಿಕಾರದಲ್ಲಿದ್ದಾಗಲೂ ವಿಧಾನಪರಿಷತ್ತಿನಲ್ಲಿ ಜೊತೆಯಾಯಿತು; ಇದೀಗ ಅದನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರಕ್ಕೆ ಅಡ್ಡಿಯಾಗಿ ನಿಂತಿತು. ದೇವೇಗೌಡರ ಕಾರಣಕ್ಕೆ ಮತ್ತು ಇದು ರೈತರದ್ದೇ ಪಕ್ಷ ಎಂದು ಬಿಂಬಿಸಿಕೊಳ್ಳಲು ಜೆಡಿಎಸ್ ಮಾಡುತ್ತಾ ಬಂದಿದ್ದ ರಾಜಕಾರಣದ ಕಾರಣಕ್ಕೆ ಇದ್ದ ಇಮೇಜೂ ದುರ್ಬಲಗೊಳ್ಳುತ್ತಾ ಬಂದಿದೆ. ಜಾತಿ ಐಡೆಂಟಿಟಿಯ ಹೊರತಾಗಿ ಜೆಡಿಎಸ್ ಯಾರ ಪಕ್ಷ? ರೈತರದ್ದಾ? ನಗರ ಕೇಂದ್ರಿತವಾ? ಮಧ್ಯಮ ವರ್ಗಕ್ಕೆ ಆಪ್ಯಾಯಮಾನವಾ? ಯಾವುದೂ ಅಲ್ಲ.

ಮೂರು- ಜೆಡಿಎಸ್ಸಿಗೆ ಒಕ್ಕಲಿಗರ ಪಕ್ಷವೆಂಬ ಹಣೆಪಟ್ಟಿ ಈಗಲೂ ಇದೆ. ಆದರೂ ಒಕ್ಕಲಿಗರಲ್ಲಿ ಈ ಪಕ್ಷದ ಕುರಿತು ತೀವ್ರ ಅಸಮಾಧಾನ ಇರುವವರೂ ಇದ್ದಾರೆ. ಒಕ್ಕಲಿಗರ ಶೇ.50ರಷ್ಟು ಓಟನ್ನೂ ಜೆಡಿಎಸ್ ಪಡೆದುಕೊಳ್ಳುತ್ತಿಲ್ಲ (ಇದೇ ಬರಹದಲ್ಲಿ ಅದನ್ನು ನಂತರ ಚರ್ಚಿಸಲಾಗಿದೆ). ಜೊತೆಗೆ ಇನ್ನು ಯಾವ ಸಮುದಾಯವನ್ನು ಜೆಡಿಎಸ್ ತನ್ನ ಬೇಸ್ ಎಂದುಕೊಳ್ಳಬಹುದು? ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದ ನಂತರ, ಲಿಂಗಾಯಿತ ಸಮುದಾಯಕ್ಕೆ ಸೇರಿದ ಎನ್.ತಿಪ್ಪಣ್ಣ, ಗೊಲ್ಲ ಸಮುದಾಯಕ್ಕೆ ಸೇರಿದ ಎ.ಕೃಷ್ಣಪ್ಪನವರನ್ನು, ದಲಿತ ಸಮುದಾಯಕ್ಕೆ ಸೇರಿದ ಎಚ್.ಕೆ.ಕುಮಾರಸ್ವಾಮಿಯವರನ್ನು, ಮುಸ್ಲಿಂ ಸಮುದಾಯಕ್ಕೆ ಸೇರಿದ ಸಿ.ಎಂ.ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸಲಾಗಿತ್ತು. ಆದರೆ ಅವರು ಯಾರೂ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಲೀ, ತಮ್ಮದೇ ಸ್ವತಂತ್ರ ವರ್ಚಸ್ಸನ್ನು ಬೆಳೆಸಿಕೊಳ್ಳುವುದಕ್ಕಾಗಲೀ ಅಲ್ಲಿ ಸಾಧ್ಯವೇ ಇರಲಿಲ್ಲ. ಇದರಾಚೆಗೆ ಸಮುದಾಯಗಳಾಗಿ ಮುಸ್ಲಿಂ ಮತ್ತು ಮಾದಿಗ ಸಮುದಾಯವನ್ನು ತನ್ನೆಡೆಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಜೆಡಿಎಸ್ ಮಾಡಿದೆ. ಇವ್ಯಾವುವೂ ಫಲ ಕೊಟ್ಟಿಲ್ಲ.

ನಾಲ್ಕು- ಒಂದೇ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಏಕೈಕ ಕಾರಣಕ್ಕೆ ಯಾವ ಪಕ್ಷವೂ ಪ್ರಾದೇಶಿಕ ರಾಜಕಾರಣ ಮಾಡುವ ಪಕ್ಷವಾಗುವುದಿಲ್ಲ. ಇದು ಜೆಡಿಎಸ್ಸಿಗೆ ಸರಿಯಾಗಿ ಹೊಂದಿಕೊಳ್ಳುವ ವ್ಯಾಖ್ಯಾನವಾಗಿದೆ. ಆಗಿಂದಾಗ್ಗೆ ಪ್ರಾದೇಶಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲವು ಮಾತುಗಳನ್ನು ಜೆಡಿಎಸ್ ನಾಯಕರು ಆಡುತ್ತಾರಾದರೂ, ಇದು ’ಪ್ರಾದೇಶಿಕ ಹಿತಾಸಕ್ತಿ’ಯನ್ನು ಎತ್ತಿ ಹಿಡಿಯುವ ಪಕ್ಷ ಎಂದು ಕರ್ನಾಟಕದ ಜನರಿಗೆ ಅನಿಸಿಲ್ಲ. ಹಾಗೆ ನೋಡಿದರೆ, ಒಕ್ಕೂಟ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಅದೇ ನೆಲೆಯಲ್ಲಿ ಎದುರಿಸುವ ಕೆಲಸವನ್ನು ಜೆಡಿಎಸ್ ಎಂದೂ ಮಾಡಿಲ್ಲ.

ಜೆಡಿಎಸ್ಸಿನ ವ್ಯಕ್ತಿತ್ವವೇನು ಎಂದೇ ಗೊತ್ತಾಗುವಂತಿಲ್ಲ ಎಂಬುದನ್ನು ವಿವರಿಸಲು ಇಂತಹ ಇನ್ನೂ ಹಲವು ಉದಾಹರಣೆಗಳನ್ನು ನೀಡಬಹುದು.

ವಾಸ್ತವದಲ್ಲಿ ಪ್ರಾದೇಶಿಕ ಪಕ್ಷವೂ, ರೈತರ ಪಕ್ಷವೂ, ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಪಕ್ಷವೂ, ವಿನೂತನ ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುವ ಪಕ್ಷವೂ, ಕರ್ನಾಟಕ ಬ್ರಾಂಡ್‌ಅನ್ನು ಸಮರ್ಥವಾಗಿ ಸ್ಥಾಪಿಸುವ ಪಕ್ಷವಾಗಿ (ಕುಮಾರಸ್ವಾಮಿಯವರಿಗೆ ಮೊದಲ ಅವಧಿಯಲ್ಲಿ ಜನಪ್ರಿಯ ತಂದಿದ್ದ ಅಂಶ!) ಜನಸಾಮಾನ್ಯರ ಪಕ್ಷವೆಂಬ ಭಾವನೆಯನ್ನೂ ಹುಟ್ಟಿ ಹಾಕುವ ಸಾಧ್ಯತೆ ಎಲ್ಲವೂ ಇದ್ದ ಪಕ್ಷ ಜೆಡಿಎಸ್. ಆದರೆ ಅದ್ಯಾವುದನ್ನೂ ಅದು ಇದುವರೆಗೆ ಪಡೆದುಕೊಂಡಿರದೇ ಇದ್ದುದಕ್ಕೆ ದೇವೇಗೌಡರೂ ಕಾರಣ ಹುಡುಕಿದಂತಿಲ್ಲ.

ಕುಟುಂಬ ರಾಜಕಾರಣ ಎಲ್ಲಾ ರಾಜ್ಯಗಳಲ್ಲೂ ಎಲ್ಲಾ ಪಕ್ಷಗಳಲ್ಲೂ ಇದೆ. ಒಂದು ರೀತಿಯಲ್ಲಿ ಅದು ಭಾರತದ ರಾಜಕಾರಣದ ಅವಿಭಾಜ್ಯ ಅಂಗವಾಗಿದೆ. ಆದರೆ, ಅದನ್ನು ಜೆಡಿಎಸ್ ಅನುಸರಿಸಿಕೊಂಡು ಬಂದ ರೀತಿ ವಿಚಿತ್ರವಾಗಿದೆ. ಡಿಎಂಕೆಯಂತಹ ಪಕ್ಷದಲ್ಲೂ ಕುಟುಂಬದಿಂದ ಹೊರತಾದ ನಾಯಕರುಗಳು ಬೇಕಾದಷ್ಟು ಜನರಿದ್ದಾರೆ. ಆದರೆ ಜೆಡಿಎಸ್ಸಿನಲ್ಲಿ ಅಂತಹ ಸಾಧ್ಯತೆಯಿಲ್ಲದಂತೆ ಮಾಡಲಾಗಿದೆ. ಅದೇ ಹೊತ್ತಿನಲ್ಲಿ ಕುಟುಂಬದೊಳಗಿಂದ ಯಾರು ಬೇಕಾದರೂ ಯಾವಾಗ ಬೇಕಾದರೂ ಉದ್ಭವಿಸಿಬಿಡಬಹುದು ಎನ್ನುವ ಸ್ಥಿತಿ ಇದೆ. ಇದನ್ನು ಕರ್ನಾಟಕದ ಜನರು, ಒಕ್ಕಲಿಗರೂ ಸಹಾ ಒಪ್ಪುವುದು ಸುಲಭವಿಲ್ಲ.

ಈ ಚುನಾವಣೆಯನ್ನೇ ನೋಡುವುದಾದರೆ, ಒಂದು ರೀತಿಯಲ್ಲಿ ಇದು ಜೆಡಿಎಸ್ಸಿನ ಕುಟುಂಬ ರಾಜಕಾರಣದ ವಿರುದ್ಧದ ತೀರ್ಪೂ ಆಗಿದೆ. ಸ್ವತಃ ಕುಮಾರಸ್ವಾಮಿಯವರು ಹಿಂದಿನ ಸಾರಿಗಿಂತ ಕಡಿಮೆ ಮತಗಳ ಅಂತರದಿಂದ ಗೆದ್ದರು. ಅವರ ಮಗ ನಿಖಿಲ್ ರಾಮನಗರದಲ್ಲಿ ಸೋಲುವುದು ಖಚಿತವೆಂದು ಅವರಿಗೆ ಕಳೆದ ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶದಿಂದಲೂ ಗೊತ್ತಾಗಲಿಲ್ಲವೆಂಬುದು ಆಶ್ಚರ್ಯಕರ. ಚನ್ನಪಟ್ಟಣದ ಪಕ್ಕವೇ ಮದ್ದೂರಿದೆ. ಅಲ್ಲಿಂದ ಸ್ಪರ್ಧಿಸಿದ್ದು ದೇವೇಗೌಡರ ಬೀಗರಾದ ಡಿ.ಸಿ.ತಮ್ಮಣ್ಣನವರು. ಅವರು 2018ರಲ್ಲಿ 54 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು; ಈ ಸಾರಿ 25 ಸಾವಿರ ಮತಗಳಿಂದ ಸೋತರು. ಇನ್ನು ಹೊಳೆನರಸೀಪುರದಲ್ಲಿ ಎಂದೆಂದೂ ಅಜೇಯರಾದ (ಯಾವ ಕ್ಷೇತ್ರವೂ ಕಾಣದಷ್ಟು ಅಭಿವೃದ್ಧಿಯನ್ನೂ ಕಾಣಿಸಿರುವ) ಎಚ್.ಡಿ.ರೇವಣ್ಣ ಹಿಂದಿನ ಸಾರಿ 44 ಸಾವಿರ ಮತಗಳ ಅಂತರದಿಂದ ಗೆದ್ದಿದ್ದವರು, ಈ ಸಾರಿ ಕೇವಲ 3152 ಮತಗಳಿಂದಷ್ಟೇ ಗೆಲ್ಲುತ್ತಾರೆಂದು ಯಾರೂ ಊಹಿಸಿರಲಿಲ್ಲ. ಹೊಳೆನರಸೀಪುರಕ್ಕೆ ಹೊಂದಿಕೊಂಡ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಇವರ ಕುಟುಂಬದವರಾದ ಸಿ.ಎನ್.ಬಾಲಕೃಷ್ಣರಿಗೆ ಎದುರಾಳಿಗಳೇ ಇರಲಿಲ್ಲ. ಕಳೆದ ಸಾರಿ 53 ಸಾವಿರ ಮತಗಳಿಂದ ಗೆದ್ದಿದ್ದ ಬಾಲಕೃಷ್ಣ, ಈ ಸಾರಿ 6 ಸಾವಿರದಿಂದ ಗೆಲ್ಲಲು ಏದುಸಿರುಬಿಡುವಂತಾಯಿತು.

ಇದನ್ನೂ ಓದಿ: ಯಾರೊಂದಿಗೂ ಮೈತ್ರಿ ಇಲ್ಲ, ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ: ಎಚ್.ಡಿ ದೇವೇಗೌಡ

ಇದಕ್ಕೆ ವ್ಯತಿರಿಕ್ತವಾಗಿ ಇದೇ ಹೊಳೆನರಸೀಪುರಕ್ಕೆ ಹೊಂದಿಕೊಂಡ ಇನ್ನೆರಡು ಕ್ಷೇತ್ರಗಳ ಫಲಿತಾಂಶ ನೋಡಿದರೆ ಮತ್ತೊಂದು ಸಂಗತಿಯೂ ಕಾಣಿಸುತ್ತದೆ. ಈ ಹಿಂದಿನ ಚುನಾವಣೆಗಳಲ್ಲಿ ತನ್ನ ಪಕ್ಷಕ್ಕೆ ಸೇರಿದ್ದ ಮೂವರು ಅಭ್ಯರ್ಥಿಗಳನ್ನು ಕಳೆದುಕೊಂಡಿದ್ದ ಜೆಡಿಎಸ್ ಈ ಸಾರಿ, ಕೆ.ಆರ್.ಪೇಟೆಯಲ್ಲಿ ಹೊಸ ಅಭ್ಯರ್ಥಿಯನ್ನು ನಿಲ್ಲಿಸಿದ್ದರೂ 22 ಸಾವಿರ ಮತಗಳಿಂದ ಗೆದ್ದಿತು. ಆ ಕಡೆ ಹಾಸನದಲ್ಲಿ (ಕುಟುಂಬದ ಅಭ್ಯರ್ಥಿ ಭವಾನಿಯವರಿಗೆ ಕೊಡದಿದ್ದರಿಂದ) ಪ್ರಬಲ ಎದುರಾಳಿ ಹಾಲಿ ಶಾಸಕ ಪ್ರೀತಂ ಗೌಡರ ಎದುರು ಸ್ವರೂಪ್ ಅವರನ್ನು ನಿಲ್ಲಿಸಿಕೊಂಡು ಗೆದ್ದಿತು. ಅಂದರೆ ಜೆಡಿಎಸ್ ಎಂಬ ಪಕ್ಷಕ್ಕೆ ಮತ್ತು ದೇವೇಗೌಡರ ಕುಟುಂಬದ ನಾಯಕತ್ವಕ್ಕೆ ಮನ್ನಣೆ ಯಾವ್ಯಾವುದೋ ರೀತಿಯಲ್ಲಿ ಇಂದಿಗೂ ಇದೆ. ಆದರೆ ಕುಟುಂಬವೇ ಎಲ್ಲೆಡೆ ನಿಲ್ಲುವುದಕ್ಕೆ ಒಕ್ಕಲಿಗರೇ ಹೆಚ್ಚಿರುವ ಕ್ಷೇತ್ರಗಳಲ್ಲೂ ಜನರಿಂದ ಒಪ್ಪಿಗೆ ಸಿಕ್ಕಿಲ್ಲ. ಇದು ಅತ್ಯಂತ ಹೆಚ್ಚು ಎದ್ದು ಕಂಡಿದ್ದು 2019ರ ಲೋಕಸಭಾ ಚುನಾವಣೆಯಲ್ಲಿ- ಮಂಡ್ಯ ಕ್ಷೇತ್ರದಲ್ಲಿ. ನಿಖಿಲ್ ಕುಮಾರಸ್ವಾಮಿ 1,26,000 ಮತಗಳ ಅಂತರದಿಂದ ಸೋತಿದ್ದು, ಎಂಟಕ್ಕೆ ಎಂಟೂ ಜೆಡಿಎಸ್ ಶಾಸಕರೇ ಇದ್ದ, ಅವರಲ್ಲಿ ಮೂವರು ಸಚಿವರೇ ಇದ್ದ ಕ್ಷೇತ್ರದಲ್ಲಿ; ಮುಖ್ಯಮಂತ್ರಿಯ ಮಗನಾಗಿ.

ಡಿಎಂಕೆ, ಶಿವಸೇನೆ, ಆರ್‌ಜೆಡಿ, ನ್ಯಾಷನಲ್ ಕಾಂಗ್ರೆಸ್ ಈ ಪಕ್ಷಗಳಲ್ಲೂ ಒಂದೇ ಕುಟುಂಬಕ್ಕೆ ಸೇರಿದ ಎರಡು ಮತ್ತು ಮೂರನೇ ತಲೆಮಾರಿನ ಕುಡಿಗಳು ರಾಜಕಾರಣಕ್ಕೆ ಬಂದಿದ್ದಾರೆ. ಸ್ವತಃ ಕಾಂಗ್ರೆಸ್ಸಿನಲ್ಲಿ ನಾಲ್ಕನೇ ತಲೆಮಾರು ನಾಯಕತ್ವದಲ್ಲಿದೆ. ಆದರೆ, ಅವರೆಲ್ಲರೂ (ಸ್ವಜನಪಕ್ಷಪಾತ, ಭ್ರಷ್ಟಾಚಾರ, ಪಕ್ಷದೊಳಗಿನ ಸರ್ವಾಧಿಕಾರದ ಹೊರತಾಗ್ಯೂ) ಆ ಪಕ್ಷದ ಯಾವುದೋ ತತ್ವಗಳ ಜೊತೆಗೆ ಸಮೀಕರಿಸಿಕೊಂಡಿದ್ದಾರೆ. ಚೌಧರಿ ಚರಣಸಿಂಗರಷ್ಟಲ್ಲದಿದ್ದರೂ, ಲೋಕದಳಕ್ಕೆ ಈಗಲೂ ರೈತರ ಛಾಪು ಇದ್ದೇ ಇದೆ. ರಾಕೇಶ್ ಟಿಕಾಯಿತ್ ಅವರಿಗೆ ದೆಹಲಿಯ ಗಡಿಯಲ್ಲಿ ಅವಮಾನವಾಯಿತೆಂಬ ವರ್ತಮಾನ ಬಂದ ಕೆಲವೇ ಗಂಟೆಗಳಲ್ಲಿ ಅಲ್ಲಿಗೆ ಅಜಿತ್ ಸಿಂಗ್ ಮಗ ಜಯಂತ್ ಚೌಧುರಿ ಹೋಗಿದ್ದರು. ಡಿಎಂಕೆಯ ಹೊಸ ತಲೆಮಾರಿನ ಕುಡಿಯೂ ದ್ರಾವಿಡ ರಾಜಕಾರಣದ ಜೊತೆಗೇ ಗುರುತಿಸಿಕೊಳ್ಳುತ್ತಾರೆ. ತೇಜಸ್ವಿ ಯಾದವ್, ಲಾಲೂ ಪ್ರಸಾದ್ ಯಾದವರ ಮುಂದುವರಿಕೆಯಂತೆಯೇ ಕಾಣುತ್ತಾರೆ. ದೇವೇಗೌಡರ ಯಾವ ಗುಣದ ಲವಲೇಶವನ್ನು ನಿಖಿಲ್ ಅಥವಾ ಪ್ರಜ್ವಲ್‌ರಿಗೆ ಆರೋಪಿಸಬಹುದು ಎಂದು ಎಷ್ಟು ತಲೆಕೆರೆದುಕೊಂಡರೂ ಹೊಳೆಯುವುದಿಲ್ಲ. ಪಕ್ಷಕ್ಕೇ ಇರದ ವ್ಯಕ್ತಿತ್ವವನ್ನು ವ್ಯಕ್ತಿಗಳಲ್ಲಿ ಕಾಣುವುದು ದುಸ್ತರವೇ ಸರಿ.

ಇಷ್ಟೆಲ್ಲದರ ನಂತರವೂ ಜೆಡಿಎಸ್ಸಿಗೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಒಂದು ಪಾತ್ರ ಇತ್ತು ಮತ್ತು ಬಹುಶಃ ಈಗಲೂ ಇದೆ. ದೇವೇಗೌಡರಿಗಿಂತ ಭಿನ್ನವಾದ ರಾಜಕಾರಣದಿಂದ ತನ್ನದೇ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಕುಮಾರಸ್ವಾಮಿಯವರಿಗೂ ಆ ಸಾಧ್ಯತೆ ಇತ್ತು. ಅದರ ಕುರಿತು ಬರೆಯುವುದು ಈ ಲೇಖನದ ಗಾತ್ರವನ್ನು ವಿಪರೀತ ಹಿಗ್ಗಿಸಬಹುದಾದ್ದರಿಂದ ಇಲ್ಲಿ ಚರ್ಚಿಸಹೋಗಿಲ್ಲ. ಸ್ವತಃ ದೇವೇಗೌಡರು ಅಧಿಕಾರದಲ್ಲಿದ್ದ ಸೀಮಿತ ಅವಧಿಯಲ್ಲಿ ಆಡಳಿತಗಾರನಾಗಿ ಸಾಧಿಸಿದ್ದನ್ನು ಸಾಕಷ್ಟು ಹೇಳಿಕೊಳ್ಳಲು ಸಾಧ್ಯತೆಗಳಿದ್ದವು.

ಅಂತಹ ಸಾಧ್ಯತೆಗಳನ್ನು ಆವಿಷ್ಕರಿಸಿ ಅಳವಡಿಸಿಕೊಳ್ಳುವ ಪ್ರಯತ್ನಕ್ಕೆ ಜೆಡಿಎಸ್ ಗಂಭೀರ ಪ್ರಯತ್ನ ಹಾಕಲಿಲ್ಲ. ಹೀಗಾಗಿ ಜೆಡಿಎಸ್ಸಿಗೆ ರಾಜಕೀಯ ಪಕ್ಷಕ್ಕಿರಬೇಕಾದ ಮೂಲಭೂತ ಬುನಾದಿ ದುರ್ಬಲವಾಗತೊಡಗಿ ಬಹಳ ಕಾಲವಾಯಿತು. ಕಳೆದ ಚುನಾವಣೆಯ ಹೊತ್ತಿಗೆ ಕೆಲವು ಪ್ರಯೋಗಗಳನ್ನು ಮಾಡುವ ಪ್ರಯತ್ನ ಕುಮಾರಸ್ವಾಮಿಯವರಿಂದ ನಡೆಯಿತಾದರೂ, ಅವುಗಳನ್ನು ಜನರ ಮುಂದಿಡುವ ರೀತಿಗಳು ಎಡವಟ್ಟಿನಿಂದ ಕೂಡಿದ್ದವು. ಮೂಲಭೂತ ಬದಲಾವಣೆಗಳಿಗೆ ಕಾರಣವಾಗಬಹುದಿದ್ದ ಪಂಚರತ್ನ ಎಂಬ ಐದು ಮಹತ್ತರ ಭರವಸೆಗಳನ್ನು ಕಾಂಗ್ರೆಸ್ ಗ್ಯಾರಂಟಿಗಳೊಂದಿಗೆ ಹೋಲಿಸಿ ನೋಡಿದರೆ ಇದು ಅರ್ಥವಾಗುತ್ತದೆ. ಎಲ್ಲಾ ರೀತಿಯಲ್ಲೂ ಗ್ಯಾರಂಟಿಗಳಿಗಿಂತ ಉನ್ನತವಾದ ಭರವಸೆಗಳು ಪಂಚರತ್ನದಲ್ಲಿದ್ದವು. ಆದರೆ, ಕಾಂಗ್ರೆಸ್ ಗ್ಯಾರಂಟಿಗಳನ್ನು ತಲುಪಿಸಲು ಯಶಸ್ವಿಯಾಯಿತು, ಅದರ ಮೇಲೆ ಜನರಿಗೆ ಭರವಸೆಯೂ ಬಂದಿತು. ಆದರೆ, ಪಂಚರತ್ನದ ಐದು ಆಯಾಮಗಳು ಯಾವುವು ಎಂದು ಜೆಡಿಎಸ್ಸಿನ ಒಬ್ಬ ವಕ್ತಾರರನ್ನು ಕೇಳಿದರೆ, ಅವರೇ ತಡಬಡಾಯಿಸಿದರು!

ಇಂತಹ ಸಮಸ್ಯೆಗಳ ಜೊತೆಗೆ ಸಾಂದರ್ಭಿಕವಾಗಿ ಏರ್ಪಟ್ಟ ಸ್ಥಿತಿಯಿಂದಾಗಿ 2023ರ ಚುನಾವಣೆಯಲ್ಲಿ ಅದು 19 ಸ್ಥಾನಗಳಿಗೆ ಮತ್ತು 13% ಮತಗಳಿಗೆ ಸೀಮಿತವಾಯಿತು. ಈ ಸ್ಥಿತಿಯಲ್ಲಿ ಅದರ ಈಗಿನ ಶಾಸಕರನ್ನೂ ಉಳಿಸಿಕೊಳ್ಳುವುದು ಸುಲಭವಲ್ಲ. ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ಸಿಗೆ ಹೋಗಲು ಸಿದ್ಧವಾಗಿದ್ದ ಜಿ.ಟಿ.ದೇವೇಗೌಡರು ಮಗನಿಗೂ ಹುಣಸೂರು ಟಿಕೆಟ್ ಕೊಟ್ಟು ಎಂಎಲ್‌ಎ ಮಾಡಿರೋದ್ರಿಂದ ಪಕ್ಷದಲ್ಲೇ ಉಳಿತಾರೋ ಅಥವಾ ಮಗನನ್ನೂ ಕರೆದುಕೊಂಡು ಹೋಗುತ್ತಾರೋ ಖಚಿತವಿಲ್ಲ. ಅದೇ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಕಾಂಗ್ರೆಸ್ಸಿನಿಂದ ಶಾಸಕನಾಗಿರುವ ಮಗನ ದಾರಿಯನ್ನು ಅರಕಲಗೂಡಿನ ಜೆಡಿಎಸ್ ಶಾಸಕ ಮಂಜು ತುಳಿಯುತ್ತಾರೋ ಏನೋ ಎನ್ನುವ ಆತಂಕವಂತೂ ಇದ್ದೇ ಇರುತ್ತದೆ. ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರೇ ಪಕ್ಷದಲ್ಲಿ ಮುಂದುವರಿಯುತ್ತಾರೋ ಇಲ್ಲವೋ ತಿಳಿದಿಲ್ಲ. ಪಕ್ಷವನ್ನು ನಡೆಸುವವರಿಗೆ ಇಂತಹ ಹಲವು ಆತಂಕಗಳು ಇರುವ ಸಾಧ್ಯತೆಗಳಿವೆ. ರಾಜ್ಯದಲ್ಲಿ 135 ಸೀಟುಗಳಿಂದ ಸುಭದ್ರವಾಗಿರುವ ಕಾಂಗ್ರೆಸ್ಸು, ದೆಹಲಿಯಲ್ಲಿ ಇಡಿ, ಸಿಬಿಐ, ಐಟಿ ಇತ್ಯಾದಿಗಳನ್ನು ತಮ್ಮ ಪಕ್ಷದ ಕಚೇರಿಯಾಗಿಸಿಕೊಂಡು ಎಲ್ಲರನ್ನೂ ಹಣಿಯುತ್ತಾ ಕೂತಿರುವ ಬಿಜೆಪಿ- ಇವುಗಳ ನಡುವೆ ಪಕ್ಷದ ಶಾಸಕರನ್ನು ಜೊತೆಗಿರಿಸುವ ಬಂಧ ಯಾವುದು? ತತ್ವ ಸಿದ್ಧಾಂತವೇ? ದೇವೇಗೌಡರ ಕುಟುಂಬಕ್ಕೆ ನಿಷ್ಠೆಯೇ? ರೈತರ ಪಕ್ಷ ಎಂಬುದೇ? ಜಾತಿ ಪ್ರೇಮವೇ? ಹಣಬಲವೇ?- ಇವುಗಳಲ್ಲಿ ಯಾವೊಂದೂ ಗಟ್ಟಿನೆಲೆಯ ಮೇಲೆ ನಿಂತಿಲ್ಲವೆಂಬುದೇ ಅನಿಶ್ಚಿತತೆಯ ಆತಂಕವನ್ನು ಹೆಚ್ಚಿಸುತ್ತದೆ.

ಹೀಗಿರುವಾಗ ಜೆಡಿಎಸ್ ನಾಯಕರಿಗೆ ಬಿಜೆಪಿಯ ಜೊತೆಗೆ ಹೋಗುವುದು ಅಸ್ತಿತ್ವದ ದೃಷ್ಟಿಯಿಂದ ಅತ್ಯಗತ್ಯ ಅನ್ನಿಸಿದ್ದರೆ ಆಶ್ಚರ್ಯವಿಲ್ಲ. ಮುಖ್ಯವಾಗಿ ತಾನು ಮೊದಲ ಅಥವಾ ಎರಡನೇ ಸ್ಥಾನದಲ್ಲಿರುವ, ಮೂರನೇ ಎರಡು ಭಾಗಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಜೆಡಿಎಸ್ ಎದುರಾಳಿ ಕಾಂಗ್ರೆಸ್ಸೇ ಹೊರತು ಬಿಜೆಪಿಯಲ್ಲ. ರಾಜ್ಯ ಅಧಿಕಾರದಲ್ಲಿ ಕಾಂಗ್ರೆಸ್ ಕೂತಿರುವಾಗ ಜೆಡಿಎಸ್‌ನ ಬುಡ ಅಲುಗಾಡಿದರೆ ಆ ಜಾಗದಲ್ಲಿ ಬಂದು ಕೂರುವುದು ಬಿಜೆಪಿ. ಜೆಡಿಎಸ್‌ಅನ್ನು ಪೂರ್ಣ ಮೂಲೋತ್ಪಾಟನೆ ಮಾಡಿದರೆ ಕಾಂಗ್ರೆಸ್ಸಿಗೆ ಲಾಭವಿಲ್ಲ. ಏಕೆಂದರೆ ಆ ಜಾಗವನ್ನು ಬಿಜೆಪಿ ತುಂಬುತ್ತದೆಯೇ ಹೊರತು, ಕಾಂಗ್ರೆಸ್ ತುಂಬಲಾರದು. ಜೆಡಿಎಸ್ ಮತ್ತು ಬಿಜೆಪಿಗಳೆರಡೂ ಕಾಂಗ್ರೆಸ್ ವಿರುದ್ಧ ಇರುವ ಸ್ಪೇಸಿನಲ್ಲೇ ಕಾರ್ಯಾಚರಣೆ ನಡೆಸಬೇಕು. ಆ ಅರ್ಥದಲ್ಲಿ ಜೆಡಿಎಸ್ ಇರುವತನಕ ಬಿಜೆಪಿಗೆ ಪೂರ್ಣಬಹುಮತ ಪಡೆಯಲು ಕೆಲವು ಅಡ್ಡಿಗಳಿವೆ. ಏಳೆಂಟು ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಈ ಪಕ್ಷವನ್ನು ಪಕ್ಕಕ್ಕೆ ಸರಿಸಿದರೆ ಅಲ್ಲಿಂದ ಪಡೆದುಕೊಳ್ಳಬಹುದಾದ ಸೀಟುಗಳು ಬಿಜೆಪಿಯನ್ನು 113ರ ಗಡಿ ದಾಟಿಸುತ್ತದೆ. ಇದನ್ನು ಅರಿತಿದ್ದರಿಂದಲೇ ಬಿಜೆಪಿಯ ಕೇಂದ್ರ ನಾಯಕತ್ವ, ಜೆಡಿಎಸ್ಸನ್ನು ಮುಗಿಸಿಯೇಬಿಡೋಣವೆಂದು ದಕ್ಷಿಣಕ್ಕೆ ಈ ಸಾರಿ ದಾಂಗುಡಿಯಿಟ್ಟಿದ್ದು. ಅದರಲ್ಲಿ ಅದು ಭಾಗಶಃ ಯಶಸ್ವಿಯೂ ಆಯಿತು. ಹೈದ್ರಾಬಾದ್ ಕರ್ನಾಟಕ, ಮುಂಬಯಿ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕ ಇಷ್ಟೂ ಕಡೆ ಓಟು ಕಳೆದುಕೊಂಡಿರುವ ಬಿಜೆಪಿಯ, ಒಟ್ಟಾರೆ ಓಟಿನ ಪ್ರಮಾಣ ಅಷ್ಟೇ ಉಳಿದುಕೊಳ್ಳಲು ಕಾರಣವಾಗಿದ್ದು ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಿಸಿಕೊಂಡ ಮತಗಳಿಂದ. ಅಂದರೆ ಜೆಡಿಎಸ್ ಪ್ರಾಬಲ್ಯವಿರುವ ಪ್ರದೇಶದಿಂದ. ಆದರೆ, ಚುನಾವಣೋತ್ತರ ಪರಿಸ್ಥಿತಿಯಲ್ಲಿ ಅದು ಸ್ವಂತ ಬಲದಿಂದ ಮುಂದಿನ ದಿನಗಳನ್ನು ಎದುರಿಸುವ ಚೈತನ್ಯವಿಲ್ಲದೇ ಜೆಡಿಎಸ್ಸಿನ ಸಖ್ಯಕ್ಕಾಗಿ ಹಾತೊರೆಯುತ್ತಿದೆ. ಒಂದು ವೇಳೆ ಬಿಜೆಪಿ ಹೀಗೆ ಮಾಡದೇ, ಆಗಿದ್ದಾಗಲೀ ಜೆಡಿಎಸ್ಸನ್ನು ಮುಗಿಸಿಯೇಬಿಡೋಣವೆಂದು ಹೊರಟರೆ ಅದರ ಲುಕ್ಸಾನು ಪೂರ್ಣ ಜೆಡಿಎಸ್ಸಿಗೇ ಆಗುತ್ತದೆ.

ಹೀಗಾಗಿ, ಜೆಡಿಎಸ್ಸಿಗೂ ಬಿಜೆಪಿಯ ಜೊತೆಗೆ ಹೋದರೆ ಈ ಸದ್ಯ ಅನುಕೂಲವೇ ಇದೆ. ಕೇಂದ್ರದಲ್ಲೂ ಅಧಿಕಾರದಲ್ಲಿರುವ ಬಿಜೆಪಿಯ ಸಖ್ಯ ಸಿಗುತ್ತದೆ ಮತ್ತು ತನ್ನ ಸ್ಪೇಸಿಗೆ ಬಿಜೆಪಿ ಕೈ-ಬಾಯಿ ಹಾಕದಂತೆ ನೋಡಿಕೊಳ್ಳುವ ಸುಸಂದರ್ಭ ಏರ್ಪಡುತ್ತದೆ. ಹೀಗಾಗಿ ಬಿಜೆಪಿಯ ಜೊತೆಗೆ ಹೋದರೆ ಸರ್ವನಾಶ ಎಂಬುದು ನಿಜವಲ್ಲ. ಹೋಗದಿದ್ದರೇನೇ ಅದರ ಅಸ್ತಿತ್ವ ಬಹುಬೇಗ ಇಲ್ಲವಾಗುವ ಸಾಧ್ಯತೆ ಇದೆ. ಒಂದಷ್ಟು ಭಾಗವನ್ನು ಕಾಂಗ್ರೆಸ್ಸೂ, ಬಹುಭಾಗವನ್ನು ಬಿಜೆಪಿಯೂ ತಿಂದುಬಿಡುತ್ತವೆ. ಇದೇ ಈ ಲೇಖನದ ಮೊದಲಲ್ಲೇ ಹೇಳಿದ ಒಂದು ವಾದಕ್ಕೆ ಆಧಾರ.

ಆದರೆ, ಒಂದು ರಾಜಕೀಯ ಪಕ್ಷವಾಗಿ ಜೆಡಿಎಸ್ ಅವಸಾನ ಹೊಂದುತ್ತದೆ ಎಂಬ ಇನ್ನೊಂದು ವಾದಕ್ಕೆ ಕಾರಣವೇನು? ಮೇಲೆ ಮತ್ತೆಮತ್ತೆ ಒತ್ತುಕೊಟ್ಟು ಹೇಳಿರುವಂತೆ ಯಾವುದೇ ರಾಜಕೀಯ ಪಕ್ಷಕ್ಕೆ ಒಂದು ವ್ಯಕ್ತಿತ್ವ ಇರುತ್ತದೆ. ಅದು ಭ್ರಷ್ಟವಾಗಿರಬಹುದು; ಒಂದಷ್ಟು ಕುಟುಂಬ ರಾಜಕಾರಣ ಇರಬಹುದು; ಬಲಾಢ್ಯರಿಗೇ ಉಪಯೋಗ ತಂದುಕೊಡುವ ಪಕ್ಷವಾಗಿರಬಹುದು. ಆದರೆ, ಒಂದು ವ್ಯಕ್ತಿತ್ವವಂತೂ ಇರುತ್ತದೆ. ಜೆಡಿಎಸ್ ಇಂದು ಬಳಲುತ್ತಿರುವುದು ಅಂತಹ ವ್ಯಕ್ತಿತ್ವ ಅಥವಾ ಸಾರ್ವಜನಿಕ ಗುಣ ಹೊಂದಿಲ್ಲದೇ ಇರುವುದರಿಂದ. ಆ ಪಕ್ಷದ ಮೂಲನೆಲೆಯೆಂದು ಹೇಳಲಾಗುವ ಒಕ್ಕಲಿಗರೂ ಈ ಚುನಾವಣೆಯಲ್ಲಿ (ಈದಿನ.ಕಾಮ್ ಮತ್ತು ಇಂಡಿಯಾ ಟುಡೇ ಮೈ ಆಕ್ಸಿಸ್ ಸಮೀಕ್ಷೆಯ ಸರಾಸರಿ ಪರಿಗಣಿಸುವುದಾದರೆ) ಶೇ.39ರಷ್ಟು ಮಾತ್ರ ಓಟು ಹಾಕಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ತಲಾ ಶೇ.28ರಷ್ಟು ಮತ ಹಾಕಿದ್ದಾರೆ. ಒಕ್ಕಲಿಗರಲ್ಲಿ ಒಂದಷ್ಟು ಜನರಿಗೆ ಕಾಂಗ್ರೆಸ್ಸೂ, ಇನ್ನೊಂದಿಷ್ಟು ಜನರಿಗೆ ಬಿಜೆಪಿಯೂ ಮುಂದೆಯೂ ಹಿತವೆನಿಸುತ್ತಾ ಹೋಗಬಹುದು. ಒಕ್ಕಲಿಗರನ್ನು ದಾಟಿಯೂ ಬೇರೆಬೇರೆ ಸಮುದಾಯಗಳಿಗೆ ಜೆಡಿಎಸ್ ತಮ್ಮ ಹಿತ ಕಾಯುತ್ತದೆ ಎಂದೆನಿಸಲು ಏನು ಮಾಡಬೇಕು ಎಂಬುದೇ ಜೆಡಿಎಸ್ಸಿಗೆ ಗೊತ್ತಿದ್ದಂತಿಲ್ಲ.

ಇದರಾಚೆಗೆ ಜೆಡಿಎಸ್‌ನ ಅಸ್ತಿತ್ವ ಇರುವುದು ಮೂರನೆಯ ಶಕ್ತಿಯಾಗಿ. ಅಂದರೆ, ಬೇರಾವ ಕಾರಣವಿರದಿದ್ದರೂ ಮೂರನೆಯ ಶಕ್ತಿ ಎಂಬುದಕ್ಕೇ ಒಂದು ಸ್ಪೇಸ್ ಇರಲು ಸಾಧ್ಯ. ಈಗ ಬಿಜೆಪಿಯ ಜೊತೆಗೆ ಹೋಗುವುದರಿಂದ ಅದನ್ನೂ ಕಳೆದುಕೊಳ್ಳಲಿದೆ. ಅಂದರೆ ಮೊದಲೇ ರಾಜಕೀಯ ಪಕ್ಷವಾಗಿ ತಾನು ಯಾವ ಮೌಲ್ಯಗಳು, ಯಾವ ಸಮುದಾಯಗಳು, ಯಾವ ಕಾರ್ಯಕ್ರಮಗಳು, ಯಾವ ಪ್ರದೇಶಗಳ ಅಥವಾ ಯಾವ ಚೌಕಟ್ಟು ಹಾಗೂ ಜಾಗ (Framework and location)ಗಳಲ್ಲಿ ಇರುತ್ತೇನೆಂಬುದರ ಕುರಿತು ಅದಕ್ಕೆ ಗೊಂದಲವಿದೆ. ಅದನ್ನೂ ರೂಪಿಸಿಕೊಳ್ಳದೇ, ರಾಜಕೀಯ ಶಕ್ತಿಯಾಗಿ ಮೂರನೇ ಶಕ್ತಿ ಎಂಬುದಕ್ಕಿರುವ ಮಹತ್ವವನ್ನೂ ಕಳೆದುಕೊಂಡ ಮೇಲೆ ನಿಧಾನಕ್ಕೆ ಜೆಡಿಯು ರೀತಿ ಅವಸಾನವಾಗುತ್ತದೆ. ಬಿಜೆಪಿಗೆ ಲಿಂಗಾಯಿತ ಸಮುದಾಯವನ್ನು ಬಿಟ್ಟುಕೊಟ್ಟ ಜೆಡಿಯು, ಮಲೆನಾಡು ಮತ್ತು ಕರಾವಳಿಗಳಲ್ಲಿನ ಬಿಲ್ಲವ ಸಮುದಾಯವನ್ನು ಬಿಜೆಪಿಗೆ ಬಿಟ್ಟುಕೊಟ್ಟ ಬಂಗಾರಪ್ಪನವರ ಕೆಸಿಪಿ/ಕೆವಿಪಿಗಳಂತೆ ಜೆಡಿಎಸ್ ಸಹಾ ಕರಗಿಹೋಗಲಿದೆ.

ಹಾಗಿದ್ದರೆ ಜೆಡಿಎಸ್ ಏನು ಮಾಡಬಹುದಿತ್ತು? ಅದರ ನೆಲೆ ಕಾಂಗ್ರೆಸ್ ವಿರೋಧಿ ಸ್ಪೇಸಿನದ್ದೇ. ಬಿಜೆಪಿ ದುರ್ಬಲಗೊಂಡಿರುವ ಮತ್ತು ಒಬ್ಬ ಹೊಸ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನನ್ನೂ ಆರಿಸಿಕೊಳ್ಳದ ಸ್ಥಿತಿಯಲ್ಲಿರುವ ಈ ಹೊತ್ತಿನಲ್ಲಿ ಆ ಇಡೀ ಸ್ಪೇಸನ್ನು ಆವರಿಸಿಕೊಳ್ಳಲು ಜೆಡಿಎಸ್ ಹೊರಡಬಹುದಿತ್ತು. ಈ ಮೂರನೇ ಶಕ್ತಿಯು ಕುಮಾರಸ್ವಾಮಿಯವರ ಬಲವೊಂದರ ಕಾರಣಕ್ಕೇ ವಿಧಾನಸಭೆಯಲ್ಲಿ ಮತ್ತು ಹೊರಗೆ ಎರಡನೇ ಸ್ಥಾನಕ್ಕೆ ಬರಬಹುದಾದರೆ, ರಾಜಕೀಯ ಪಕ್ಷವಾಗಿ ಎರಡನೇ ಸ್ಥಾನಕ್ಕೆ ಬರುವುದೇಕೆ ಸಾಧ್ಯವಾಗುವುದಿಲ್ಲ? ಅದಕ್ಕಿರುವ ಪೂರ್ವಷರತ್ತು ರಾಜಕೀಯ ಪಕ್ಷವೊಂದರ ಗುಣವನ್ನು ಮತ್ತು ವ್ಯಕ್ತಿತ್ವವನ್ನು ಪಡೆದುಕೊಳ್ಳುವುದು. ಅದಿಲ್ಲದೇ ಬಿಜೆಪಿಯ ಜೊತೆಗೆ ಹೋಗುವುದರಿಂದ ತಕ್ಷಣದಲ್ಲಿ ಪಕ್ಷವನ್ನು ಉಳಿಸಿಕೊಳ್ಳಬಹುದಾದರೂ, ದೀರ್ಘಕಾಲದಲ್ಲಿ ಕರಗಿಹೋಗಲು ಬೇಕಾದ ಭೂಮಿಕೆಯನ್ನು ಜೆಡಿಎಸ್ಸಿನ ಪರಮೋಚ್ಚ ನಾಯಕರು ರೂಪಿಸುತ್ತಿದ್ದಂತಿದೆ. ಇದು ಕರ್ನಾಟಕದ ದೃಷ್ಟಿಯಿಂದ ಒಳ್ಳೆಯದೋ ಕೆಟ್ಟದ್ದೋ ಗೊತ್ತಾಗಲು ಒಂದೆರಡು ವರ್ಷಗಳು ಬೇಕಾಗಬಹುದು; ಆದರೆ ಜೆಡಿಎಸ್ಸಿಗೆ ತಕ್ಷಣದಲ್ಲಿ ಅಸಿತ್ವ ಉಳಿದುಕೊಳ್ಳಲು ನೆರವಾಗುತ್ತದೆ ಮತ್ತು ದೀರ್ಘಕಾಲದಲ್ಲಿ ಬಿಜೆಪಿಯು ಅದನ್ನು ಇಲ್ಲವಾಗಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...