Homeಮುಖಪುಟಮಧ್ಯಪ್ರದೇಶ: ಆದಿವಾಸಿ ಯುವಕನ ಮೇಲೆ ಗುಂಡು ಹಾರಿಸಿದ ಬಿಜೆಪಿ ಶಾಸಕನ ಪುತ್ರ

ಮಧ್ಯಪ್ರದೇಶ: ಆದಿವಾಸಿ ಯುವಕನ ಮೇಲೆ ಗುಂಡು ಹಾರಿಸಿದ ಬಿಜೆಪಿ ಶಾಸಕನ ಪುತ್ರ

- Advertisement -
- Advertisement -

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರ ಪುತ್ರ ಗುಂಡು ಹಾರಿಸಿದ್ದರಿಂದ 34 ವರ್ಷದ ಆದಿವಾಸಿ ಯುವಕ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದಿದ್ದಾರೆ.

ಘಟನೆಯ ನಂತರ ಪೊಲೀಸರು ಬಿಜೆಪಿ ಶಾಸಕ ರಾಮ್ ಲಲ್ಲು ವೈಶ್ಯರವರ ಪುತ್ರ 40 ವರ್ಷದ ವಿವೇಕಾನಂದ ವೈಶ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಮೊರ್ಬಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್ ಸಿಂಗ್ ಪರಿಹಾರ್ ತಿಳಿಸಿದ್ದಾರೆ.

ಬಿಜೆಪಿ ಶಾಸಕ ರಾಮ್ ಲಲ್ಲು ವೈಶ್ಯರವರು ಸಿಂಗ್ರೌಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಪುತ್ರ ಕ್ಷುಲ್ಲಕ ವಿಷಯಕ್ಕೆ ಗಲಾಟೆ ನಡೆದಿದ್ದರಿಂದ ಕುಪಿತಗೊಂಡು ಸೂರ್ಯ ಕುಮಾರ್ ಖೈರಿವಾರ್ ಎಂಬಾತನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತ ಖೈರಿವಾರ ಬಲ ತೋಳಿಗೆ ಗುಂಡೇಟು ಬಿದ್ದಿದ್ದು ಸದ್ಯ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಪರಿಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.

ವಿವೇಕಾನಂದ ವೈಶ್ಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು ಸೆಕ್ಷನ್ 25 (ಯಾವುದೇ ನಿಷೇಧಿತ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಅಥವಾ ಸಾಗಿಸುವುದು) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ 27 (ಶಸ್ತ್ರಾಸ್ತ್ರ, ಮದ್ದುಗುಂಡುಗಳ ಬಳಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಪರಿಹಾರ್ ತಿಳಿಸಿದ್ದಾರೆ.

ವೈಶ್ಯ ಪ್ರಸ್ತುತ ಮತ್ತೊಂದು ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾನೆ. ಕಳೆದ ವರ್ಷ ಜುಲೈನಲ್ಲಿ ಅವರು ಅರಣ್ಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಪ್ರಸ್ತುತ ಪ್ರಕರಣದಲ್ಲ ಸಂತ್ರಸ್ತ ಬುಡಕಟ್ಟು ಸಮುದಾಯಕ್ಕೆ ಸೇರಿದ್ದರೂ ಆರೋಪಿಯ ಮೇಲೆ ಏಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಏಕೆ ಪ್ರಕರಣ ದಾಖಲಿಸಲಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಪೊಲೀಸರು, ಸಂತ್ರಸ್ತನು ಬುಡಕಟ್ಟು ಜನಾಂಗದವರೆಂದು ಬಹಿರಂಗಪಡಿಸಲು ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿದರೆ ಆಗ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಇದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ವರ್ಷ ಜುಲೈ 20 ರಂದು ಬಿಜೆಪಿ ಶಾಸಕರ ಪುತ್ರ ವೈಶ್ಯ ಅರಣ್ಯ ಸಿಬ್ಬಂದಿ ಸಂಜೀವ್ ಶುಕ್ಲಾ ಅವರನ್ನು ಬೆದರಿಸಲು ಗುಂಡು ಹಾರಿಸಿದ್ದರು. ಆ ಘಟನೆಯ ನಂತರ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸ್ವಲ್ಪ ಸಮಯದವರೆಗೆ ನಾಪತ್ತೆಯಾಗಿದ್ದ ಆತ ಈ ವರ್ಷದ ಫೆಬ್ರವರಿಯಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಶರಣಾಗಿದ್ದ. ಆನಂತರ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ. ಈಗ ಮತ್ತೊಬ್ಬರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಿಂಗಳ ಹಿಂದೆಯಷ್ಟೇ ಮಧ್ಯಪ್ರದೇಶದಲ್ಲಿ ಆದಿವಾಸಿ ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ನಡೆದಿತ್ತು. ಆನಂತರ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಯ ಮನೆ ಧ್ವಂಸಕ್ಕೆ ಆದೇಶಿಸಿದ್ದರು ಮತ್ತು ಸಂತ್ರಸ್ತನ ಪಾದ ತೊಳೆದಿದ್ದರು.

ಇದನ್ನೂ ಓದಿ: 10 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಪ್ರಾಂಶುಪಾಲನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...