Homeಅಂಕಣಗಳುಫೇಕ್ ನ್ಯೂಸ್ ತಡೆಗಟ್ಟುವಿಕೆಗೆ ಕ್ರಮಗಳು ಅಗತ್ಯ- ಬೆಕ್ಕಿಗೆ ಗಂಟೆ ಕಟ್ಟುವವರ್‍ಯಾರು? ಹೇಗೆ?

ಫೇಕ್ ನ್ಯೂಸ್ ತಡೆಗಟ್ಟುವಿಕೆಗೆ ಕ್ರಮಗಳು ಅಗತ್ಯ- ಬೆಕ್ಕಿಗೆ ಗಂಟೆ ಕಟ್ಟುವವರ್‍ಯಾರು? ಹೇಗೆ?

- Advertisement -
- Advertisement -

ಫೇಕ್ ನ್ಯೂಸ್ ಅಥವಾ ನಕಲಿ-ಸುಳ್ಳು ಸುದ್ದಿ ಜಾಲ ಮತ್ತು ಹರಡುವಿಕೆ ಈಗ ಯಾವುದೇ ಜಾಗತಿಕ ಪಿಡುಗಿಗಿಂತಲೂ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜಗತ್ತಿನಾದ್ಯಂತ ಹಲವು ಸರ್ಕಾರಗಳು ಇದರ ತಡೆಗೆ ಗಂಭೀರ ಪ್ರಯತ್ನಗಳನ್ನು ಮಾಡುತ್ತಿವೆ. ಇನ್ನೂ ಕೆಲವು ದೇಶಗಳ ಪ್ರಭುತ್ವಗಳು ಈ ಫೇಕ್ ನ್ಯೂಸ್ ಎಕೋಸಿಸ್ಟಮ್‌ಅನ್ನು ತಮ್ಮ ಅವಕಾಶಕ್ಕೆ ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂಸ್ಥೆಗಳನ್ನು ಇನ್ನಷ್ಟು ಅಪಾಯಕ್ಕೆ ತಳ್ಳುತ್ತಿವೆ. ಭಾರತವೂ ಕೂಡ ಇಂತಹುದೇ ಒಂದು ಅಪಾಯಕಾರಿ ಸಂದರ್ಭ-ಸನ್ನಿವೇಶದಲ್ಲಿದೆ. ಆಡಳಿತ ಒಕ್ಕೂಟ ಸರ್ಕಾರದ ಮುಂದಾಳತ್ವ ವಹಿಸಿರುವ ಬಿಜೆಪಿ ಪಕ್ಷ ಮತ್ತು ಅದರ ಸೈದ್ಧಾಂತಿಕ ಬೆಂಬಲಿಗೆ ಸಂಘ ಪರಿವಾರ ಇಂತಹ ಫೇಕ್ ನ್ಯೂಸ್ ಜಾಲದ ಭಾರಿ ಫಲಾನುಭವಿ ಆಗಿರುವುದು ಗುಟ್ಟಾಗೇನೂ ಉಳಿದಿಲ್ಲ. ಆದುದರಿಂದ ಒಕ್ಕೂಟ ಸರ್ಕಾರದಿಂದ ಏನಾದರೂ ಸಕಾರಾತ್ಮಕ ಕ್ರಮವನ್ನು ನಿರೀಕ್ಷಿಸುವುದು ವಿಫಲ ಆಶಾವಾದವಾದೀತು! ಅಲ್ಲದೆ, ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿಸಂಹಿತೆ) 2021ರ ಕೇಂದ್ರ ಸರ್ಕಾರದ ತಿದ್ದುಪಡಿ ಫೇಕ್ ಸುದ್ದಿಗಳನ್ನು ನಿಯಂತ್ರಿಸುವ ಉದ್ದೇಶದಲ್ಲಿ ಯಾವ ರೀತಿಯಲ್ಲೂ ಸ್ಪಷ್ಟತೆಯನ್ನು ತೋರಿಲ್ಲ. ಬದಲಿಗೆ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋಗೆ ಹೆಚ್ಚಿನ ಅಧಿಕಾರ ನೀಡಿ, ಒಕ್ಕೂಟ ಸರ್ಕಾರದ ಅಣತಿಯಂತೆ ಜಾಲತಾಣಗಳ ನಿರ್ಬಂಧಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಅಸಲಿ ಫೇಕ್ ಸುದ್ದಿಗಳಿಗೆ ಕಡಿವಾಣ ಹಾಕುವುದಕ್ಕಿಂತಲೂ ಸರ್ಕಾರವನ್ನು ಪ್ರಶ್ನಿಸುವ ಮಾಧ್ಯಮ ಸಂಸ್ಥೆಗಳು ಕೆಂಗಣ್ಣಿಗೆ ಒಳಗಾಗುವ ಸಂಭವವೇ ಹೆಚ್ಚು ಎಂಬ ಆತಂಕ-ಆರೋಪಗಳನ್ನು ವ್ಯಕ್ತಪಡಿಸುವಂತೆ ಮಾಡಿದೆ.

ಇಂತಹ ಪರಿಸ್ಥಿತಿಯಲ್ಲಿ ಫೇಕ್ ನ್ಯೂಸ್ ಕಾರ್ಖಾನೆಗೆ ಹೆಚ್ಚು ಬಲಿಯಾಗುತ್ತಿರುವವರು ಬಿಜೆಪಿಯೇತರ ಪಕ್ಷಗಳು ಮುನ್ನಡೆಸುತ್ತಿರುವ ರಾಜ್ಯ ಸರ್ಕಾರಗಳು ಮತ್ತು ಸಂಘ ಪರಿವಾರದ ಒಡಕಿನ ಮತ್ತು ದ್ವೇಷದ ಸಿದ್ಧಾಂತದಲ್ಲಿ ನಂಬಿಕೆಯಿಲ್ಲದ ಹಾಗೂ ಅದನ್ನು ವಿರೋಧಿಸುವ ಜನಸಾಮಾನ್ಯರು. ಕೆಲವು ತಿಂಗಳುಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಡಿಎಂಕೆ ಪಕ್ಷದ ಸ್ಟಾಲಿನ್ ಅವರ ಹುಟ್ಟುಹಬ್ಬದ ದಿನ ಬಿಹಾರದ ಉಪಮುಖ್ಯಮಂತ್ರಿ-ಆರ್‌ಜೆಡಿ ಪಕ್ಷದ ಮುಖಂಡ ತಮಿಳುನಾಡಿಗೆ ಆಗಮಿಸಿ ಶುಭ ಕೋರಿದ್ದರು. ಇದೇ ಸಮಯಕ್ಕೆ ಕಾದಿದ್ದರೇನೋ ಎಂಬಂತೆ ಫೇಕ್ ನ್ಯೂಸ್ ಜಾಲ ಅಲರ್ಟ್ ಆಯಿತು; “ಮನೀಶ್ ಕಶ್ಯಪ್” Manish Kashyap Son of Bihar ಎಂಬ ಯುಟ್ಯೂಬ್ ವಾಹಿನಿ) ಎಂಬ ವ್ಯಕ್ತಿ ತನ್ನ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಅಕೌಂಟ್‌ನಲ್ಲಿ, ’ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರನ್ನು ಕಂಡಕಂಡಲ್ಲಿ ಮಚ್ಚಿನಿಂದ ಕೊಚ್ಚಿ ಕೊಲ್ಲಲಾಗುತ್ತಿದೆ’ ಎಂದು ಬಾಯಿಗೆ ಬಂದಂತೆ ಸುಳ್ಳನ್ನು ಬಡಬಡಿಸತೊಡಗಿದ. ಆತನ ವಿಡಿಯೋವನ್ನು 6 ಮಿಲಿಯನ್ ಜನ ವೀಕ್ಷಿಸಿದ್ದರು. ನೋಡನೋಡುತ್ತಿದ್ದಂತೆ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಒಂದೇ ಏಟಿನಲ್ಲಿ ಡಿಎಂಕೆ ವಿರುದ್ಧ ಮತ್ತು ಬಿಹಾರದ ಜೆಡಿಯು-ಆರ್‌ಜೆಡಿ ಮೈತ್ರಿಯ ವಿರುದ್ಧ ದ್ವೇಷವನ್ನು ಹರಡುವುದಕ್ಕೆ ಈ ಫೇಕ್‌ನ್ಯೂಸ್‌ಗೆ ಸಾಧ್ಯವಾಗಿತ್ತು. ಈ ಫೇಕ್ ನ್ಯೂಸ್‌ಅನ್ನು ತಹಬದಿಗೆ ತಂದು ಕ್ರಮ ತೆಗೆದುಕೊಳ್ಳುವಷ್ಟರಲ್ಲಿ ಅದು ಸಾಕಷ್ಟು ಡ್ಯಾಮೇಜ್ ಮಾಡಿ ಮುಗಿಸಿತ್ತು. ಸಿಆರ್‌ಪಿಸಿಯ ಕೆಲವು ಸೆಕ್ಷನ್‌ಗಳನ್ನು ರಾಜ್ಯ ಸರ್ಕಾರಗಳು ಇಂತಹ ಪ್ರಕರಣದಲ್ಲಿ ಅನ್ವಯಿಸಬಹುದಾದರೂ, ನಕಲಿ ಸುದ್ದಿಗಳ ವಿಡಿಯೋ-ಪೋಸ್ಟ್‌ಗಳನ್ನು ತಕ್ಷಣವೇ ತೆಗೆದುಹಾಕುವಂತಹ, ಹಾಗೆ ಮಾಡಲು ಆಯಾ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸುವಂತಹ ಅಥವಾ ನಿಯಂತ್ರಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಲು ಕಾನೂನುಗಳನ್ನು ರೂಪಿಸುವ ಅಧಿಕಾರ ಹೊಂದಿಲ್ಲ. ಇದೇ ರೀತಿ ಬಹಳ ಇತ್ತೀಚಿಗೆ ಉಡುಪಿಯ ಕಾಲೇಜೊಂದರ ಹಾಸ್ಟೆಲ್‌ನಲ್ಲಿ ನಡೆದ ಒಂದು ಅನಗತ್ಯ ತಮಾಷೆಯ ಪ್ರಕರಣಕ್ಕೆ ಕೋಮು ಆಯಾಮ ತಂದು ನಕಲಿ ವಿಡಿಯೋಗಳನ್ನು ಸೃಷ್ಟಿಸಿ, ಕೋಮು ದ್ವೇಷ ಸೃಷ್ಟಿಸಲು ಸಂಘ ಪರಿವಾರ ನಡೆಸುತ್ತಿರುವ ಸಂಚನ್ನು ಗಮನಿಸಬಹುದು. (ಇದರ ಬಗ್ಗೆ ಶುದ್ಧೋದನ ಅವರ ವರದಿ ಈ ಸಂಚಿಕೆಯಲ್ಲಿ ಪ್ರಕಟವಾಗಿದೆ.) ಕರ್ನಾಟಕ ಸರ್ಕಾರ ಮತ್ತು ಪೊಲೀಸರು ಎಷ್ಟೇ ಸ್ಪಷ್ಟೀಕರಣ ನೀಡಿದರೂ, ಹಲವು ಪ್ರಗತಿಪರ ಸುದ್ದಿ ಸಂಸ್ಥೆಗಳು ಎಷ್ಟೇ ಫ್ಯಾಕ್ಟ್ ಚೆಕ್ ಮಾಡಿದರೂ ಸುಳ್ಳಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಮತ್ಯಾವುದೋ ರೂಪದಲ್ಲಿ ಹೊಸದೊಂದು ಕಾನೂನನ್ನು ರೂಪಿಸಿದರೂ, ಅವುಗಳು ಅಷ್ಟು ಪರಿಣಾಮಕಾರಿಯಾಗಲು ಸಾಧ್ಯವಿಲ್ಲ ಎಂಬುದು ಇಲ್ಲಿಯವರೆಗಿನ ಉದಾಹರಣೆಗಳು ತೋರಿಸಿವೆ. ಅಲ್ಲದೆ ಇಂತಹ ನಿಯಂತ್ರಣಗಳನ್ನೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬಗೆಯುವ ನಕಲಿ ನರೆಟಿವ್‌ಗಳು ಕೂಡ ಹೆಚ್ಚಾಗುವ ಸಾಧ್ಯತೆಯಿದೆ. ಈ ಎಲ್ಲಾ ಕಾರಣಗಳಿಂದ ಮಾಧ್ಯಮದ ಬಗ್ಗೆ ಹೆಚ್ಚು ಅರಿವನ್ನು ಉಂಟುಮಾಡುವ ಶೈಕ್ಷಣಿಕ ಹಾಗೂ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳಷ್ಟೇ ಒಂದಷ್ಟು ಸುಧಾರಣೆಗಳಿಗೆ ಅನುವು ಮಾಡಿಕೊಡಲು ಸಾಧ್ಯವೇನೋ!

ಇಂತಹ ಒಂದು ಯೋಜನೆಯನ್ನು ಸರ್ಕಾರ ಕೈಗೊಳ್ಳುವುದಕ್ಕೆ ವಿಶಾಲವಾದ ಸಮಾಲೋಚನೆಗಳು ಅಗತ್ಯವಿದ್ದರೂ, ಕೆನಡಾ, ಡೆನ್ಮಾರ್ಕ್ ಅಮೆರಿಕದ ಕೆಲವು ರಾಜ್ಯಗಳು ಸೇರಿದಂತೆ ಹಲವು ಕಡೆ ಜಾರಿಯಾಗಿರುವ ಮೀಡಿಯಾ ಲಿಟರೆಸಿ ಯೋಜನೆಗಳಿಂದ ಕೆಲವು ಅಂಶಗಳನ್ನು ತೆಗೆದುಕೊಂದು ಕರ್ನಾಟಕ ತಮಿಳುನಾಡಿನಂತಹ ಮುಂತಾದ ರಾಜ್ಯ ಸರ್ಕಾರಗಳು ಕೆಲವು ಸಕಾರಾತ್ಮಕ ಕ್ರಮಗಳಿಗೆ ಮುಂದಾಗುವುದು ಅವಶ್ಯಕವಾಗಿದೆ. ಮೊದಲನೆಯದಾಗಿ, ಮಾಧ್ಯಮಿಕ ಶಾಲಾ ಹಂತದಿಂದ ಪಿಯುಸಿವರೆಗೂ (ಪದವಿ ಶಿಕ್ಷಣಕ್ಕೂ ಇನ್ನೂ ಗಂಭೀರ ರೀತಿಯಲ್ಲಿ ಇದನ್ನು ಕೊಂಡೊಯ್ಯಬೇಕಿರುವ ಬಗ್ಗೆ ಚಿಂತಿಸಬೇಕಿದೆ), ಮೊದಲ ಹಂತಗಳಲ್ಲಿ ನಕಲಿ ಸುದ್ದಿಗಳ-ನಕಲಿ ನರೆಟಿವ್‌ಗಳ ಸ್ವರೂಪದ ಬಗ್ಗೆ ಪಾಠಗಳನ್ನು ಸೇರಿಸುವುದು, ಮುಂದಿನ ಹಂತಗಳಲ್ಲಿ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚುವುದನ್ನು ಶಿಕ್ಷಣದ ಭಾಗವಾಗಿಸುವುದು ಹಾಗೂ ನಿಜ ಸುದ್ದಿ ಮೂಲಗಳನ್ನು ಪತ್ತೆಹಚ್ಚುವ ಬಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವುದನ್ನು ಪಠ್ಯಕ್ರಮದ ಭಾಗವನ್ನಾಗಿಸಲೇಬೇಕಾಗಿದೆ. ಇದರ ಜೊತೆಗೆ ರಿಗರಸ್ ಆದ ಕಾರ್ಯಾಗಾರಗಳನ್ನು ಶಾಲೆಗಳಲ್ಲಿ ಮಾಡಬೇಕಿದೆ. ಮತ್ತು ಇದನ್ನು ಕಡ್ಡಾಯವಾಗಿಯೇ ಕಲಿಸಬೇಕಿದೆ. ಎರಡನೆಯದಾಗಿ, ವಯಸ್ಕರಿಗಾಗಿ ಮೀಡಿಯಾ ಲಿಟರೆಸಿ ಯೋಜನೆಗಳನ್ನು ವ್ಯಾಪಕವಾಗಿ ಹಮ್ಮಿಕೊಂಡು, ಕೋರ್ಸ್‌ಗಳನ್ನು (ಸುಲಭವಾದ ಪ್ರಾತ್ಯಕ್ಷಿತೆಗಳ ಮೂಲಕ) ವಿನ್ಯಾಸ ಮಾಡಬೇಕಿದೆ. ಶಾಲಾ ಶಿಕ್ಷಣವನ್ನು ಮುಗಿಸಿರುವವರು ಅಥವಾ ಶಿಕ್ಷಣದಿಂದ ಹೊರಗುಳಿದವರು ಈ ಕೋರ್ಸ್‌ಗಳನ್ನು ಸುಲಭವಾಗಿ (ಆನ್‌ಲೈನ್ ಅಥವಾ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ) ಅಕ್ಸೆಸ್ ಮಾಡಿ ತೆಗೆದುಕೊಳ್ಳಲು ಉತ್ತೇಜಿಸಬೇಕಿದೆ. ಇದನ್ನು ಉತ್ತೇಜಿಸುವುದಕ್ಕಾಗಿಯೇ ಈ ತಿಳಿವಳಿಕೆಯ ಕಾರ್ಯಕ್ರಮದ ಜೊತೆಗೆ ಯಾವುದಾದರೂ ಕಲ್ಯಾಣ ಯೋಜನೆಯನ್ನು ಬೆಸೆಯುವುದೂ ಅವಶ್ಯಕವಾದೀತು. ಮೂರನೆಯದಾಗಿ, ಸರ್ಕಾರ ತಾನು ನೀಡಬಹುದಾದ ಜಾಹೀರಾತು ಸ್ಪೇಸ್‌ಗಳಲ್ಲಿ ಸಾಧ್ಯವಾದಷ್ಟು ನಕಲಿ ಸುದ್ದಿಗಳ ಬಗ್ಗೆ ಎಚ್ಚರ ನೀಡುವ ಕೆಲಸಗಳನ್ನು ಮಾಡಬೇಕಿದೆ. ತಾನು ನೀಡುವ ಅನ್ಯ ಯೋಜನೆಗಳ ಮಾಮೂಲಿ ಜಾಹೀರಾತುಗಳಲ್ಲಿಯೂ ಫೇಕ್ ಸುದ್ದಿಗಳ ಬಗ್ಗೆ ಅರಿವು ಮೂಡಿಸಲು ಒಂದಷ್ಟು ಜಾಗವನ್ನು ಬಳಸಿಕೊಳ್ಳಬೇಕಿದೆ. ಎಷ್ಟೋ ಬಾರಿ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮಾರ್ಗದಲ್ಲಿ ನಂಬಿಕೆಯಿಟ್ಟ ಮಾಧ್ಯಮಗಳು ಸರ್ಕಾರದ ಜೊತೆಗೆ ಈ ಅಭಿಯಾನದಲ್ಲಿ ಕೈಜೋಡಿಸಲು ಉತ್ಸುಕವಾಗಿರುತ್ತವೆ. ಇನ್ನು ಕೊನೆಯದಾಗಿ, ಸುಳ್ಳು ಹರಡುವ ಮಾಧ್ಯಮಗಳನ್ನು ಎಚ್ಚರಿಸುವ ಮತ್ತು ಅವುಗಳನ್ನು ಸರಿದಾರಿಗೆ ತರಲು ಅವುಗಳ ಜೊತೆಗೆ ನಿರಂತರ ಸಮಾಲೋಚನೆ ನಡೆಸುವ ಔಟ್‌ರೀಚ್ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕಾಗುತ್ತದೆ.

ಈ ಮೇಲಿನ ಸಲಹೆಗಳು ಸರ್ಕಾರ ಮಾಡಬೇಕಾದ ಎಷ್ಟೋ ಕೆಲಸಗಳಲ್ಲಿ ಕೆಲವೇ ಕೆಲವು. ಆದರೆ ಪ್ರಜಾಪ್ರಭುತ್ವದ ಉಳಿವಿಗೆ ಈ ಫೇಕ್ ನ್ಯೂಸ್ ಫ್ಯಾಕ್ಟರಿಗಳನ್ನು ನಿಯಂತ್ರಿಸಬೇಕಾದ ಸಮಯದಲ್ಲಿ ಈ ಕ್ರಮಗಳ ಬಗ್ಗೆ ಜವಾಬ್ದಾರಿಯುತ ಸರ್ಕಾರಗಳು ತಕ್ಷಣಕ್ಕೆ ಚಿಂತಿಸಬೇಕಿದೆ.


ಇದನ್ನೂ ಓದಿ: ಜಾತಿವಾದಿ, ಜನಾಂಗೀಯವಾದಿ ನಿಂದನೆ: ಆರಗ ಜ್ಞಾನೆಂದ್ರ ವಿರುದ್ಧ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read