Homeಕರ್ನಾಟಕಹೆಡ್ಗೆವಾರ್‌ ಸಂಘಪರಿವಾರದವರಿಗೆ ಮಾತ್ರ ಆದರ್ಶ, ರಾಜ್ಯದ ಜನತೆ ಅಲ್ಲ: ಭಗತ್‌ ಸಿಂಗ್‌ ಪಾಠ ಕೈ ಬಿಟ್ಟ...

ಹೆಡ್ಗೆವಾರ್‌ ಸಂಘಪರಿವಾರದವರಿಗೆ ಮಾತ್ರ ಆದರ್ಶ, ರಾಜ್ಯದ ಜನತೆ ಅಲ್ಲ: ಭಗತ್‌ ಸಿಂಗ್‌ ಪಾಠ ಕೈ ಬಿಟ್ಟ ಸರ್ಕಾರದ ವಿರುದ್ದ ಎಸ್‌ಎಫ್‌ಐ ಆಕ್ರೋಶ

- Advertisement -
- Advertisement -

ರಾಜ್ಯದ ಪಠ್ಯ ಪುಸ್ತಕದಲ್ಲಿ ಸ್ವಾತಂತ್ಯ ಹೋರಾಟಗಾರ ಭಗತ್‌ ಸಿಂಗ್ ಪಾಠ ಸೇರಿ ಅನೇಕ ಪ್ರಗತಿಪರ ಚಿಂತನೆಯ ಪೂರಕ ಪಾಠಗಳನ್ನು ಕೈ ಬಿಟ್ಟು ಸಂಘಪರಿವಾರದ ಸಂಸ್ಥಾಪಕ ಹೆಡಗೇವಾರ್ ಭಾಷಣ ಸೇರ್ಪಡೆ ಹಾಗೂ ಶಿಕ್ಷಣದ ಕೇಸರೀಕರಣ ಖಂಡಿಸಿ ಎಸ್ಎಫ್ಐ ರಾಜ್ಯ ಸಮಿತಿ ಮಂಗಳವಾರ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ಪ್ರತಿಭಟನೆ ನಡೆಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಆರ್. ವಿಶಾಲ್ ರವರ ಮೂಲಕ ಮನವಿ ಸಲ್ಲಿಸಿದ್ದಾರೆ.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣನ್, “ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಾಠವನ್ನು 10ನೇ ತರಗತಿ ಪಠ್ಯದಿಂದ ಕೈ ಬಿಟ್ಟು, ಸ್ವಾತಂತ್ರ್ಯ ಚಳುವಳಿಯಿಂದ ದೂರವಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ.ಹೆಡಗೇವಾರ್‌ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಬಿಜೆಪಿ ವಸಾಹತುಶಾಹಿ ಬ್ರಿಟಿಷರ ಜೊತೆಗೆ ರಾಜಿಯಾದ ಸಾವರ್ಕರ್ ಸಂತತಿ ಆದ್ದರಿಂದಲೇ ಅಪ್ಪಟ ದೇಶಪ್ರೇಮಿ ಭಾಗ ಸಿಂಗ್ ಪಠ್ಯವನ್ನು ತೆಗೆದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಸ್ಎಫ್ಐ ರಾಜ್ಯಾಧ್ಯಕ್ಷರು ಅಮರೇಶ ಕಡಗದ ಮಾತನಾಡಿ, “2022-23ರ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಎಂಬ ಭಾಷಣವನ್ನು ಸೇರಿಸಲಾಗಿದೆ. ಈ ಪಠ್ಯದಲ್ಲಿ ಆರೆಸ್ಸೆಸ್‌‌ ಶಾಖೆಯ ಕಾರ್ಯವಿಧಾನ, ಭಗವಾಧ್ವಜ ಗೌರವಿಸಬೇಕು ಎಂದೆಲ್ಲಾ ಹೇಳಲಾಗಿದೆ. ಇದು ರಾಷ್ಟ್ರ ಧ್ವಜ ಮತ್ತು ಸಂವಿಧಾನಕ್ಕೆ ವಿರುದ್ದವಾದದ್ದು. ಇತ್ತಿಚೆಗೆ ಬಿಜೆಪಿ ಈಶ್ವರಪ್ಪ ಹೇಳಿದ ಮಾತಿನಂತೆ ಬಿಜೆಪಿ ಕೇಸರಿ ಧ್ವಜವೇ ದೇಶದ ಧ್ವಜ ಎಂದು ಬಿಂಬಿಸುವ ರೀತಿಯಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಾಂಸಾಹಾರ ವಿರೋಧಿಸಿ JNU ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ ABVP ದುಷ್ಕರ್ಮಿಗಳು

ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ ಮಾತನಾಡಿ, “ನೂತನ ಶಿಕ್ಷಣ ನೀತಿಯ ಗುರಿಯೇ ಶಿಕ್ಷಣದ ಕೋಮುವಾದೀಕರಣ ಆಗಿರುವುದರಿಂದ ಎನ್ಇಪಿ ಜಾರಿ ಅಂದರೆ ರಾಜ್ಯದ ವಿದ್ಯಾರ್ಥಿಗಳು ಓದುವ ಪಠ್ಯಪುಸ್ತಕಗಳಲ್ಲಿ ಬಿಜೆಪಿ ಆರ್ಎಸ್ಎಸ್ ಕೋಮುವಾದಿ ವಿಚಾರಗಳನ್ನು ತುಂಬುವುದಾಗಿದೆ. ಇದರ ಭಾಗವಾಗಿ ಪಠ್ಯಪುಸ್ತಕದಲ್ಲಿ 5ನೇ ಪಾಠವಾಗಿ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಪಾಠವನ್ನು ಸೇರಿಸಲಾಗಿದೆ. ಈ ಆದರ್ಶ ಪುರುಷ ಸಂಘಪರಿವಾರದವರಿಗೆ ಮಾತ್ರ. ದೇಶಕ್ಕೆ ಭಗತ್ ಸಿಂಗ್, ಮಹಾತ್ಮ ಗಾಂಧಿ,ಅಂಬೇಡ್ಕರ್ , ಬಸವಣ್ಣ ರಂತಹವರು ಆದರ್ಶ ಆಗಿದ್ದಾರೆ” ಎಂದು ಹೇಳಿದ್ದಾರೆ.

ಹತ್ತನೇ ತರಗತಿಯ ಈ ವರ್ಷದ ಪರಿಷ್ಕೃತ ಪಠ್ಯದಲ್ಲಿ, ಪ್ರಗತಿಪರ ಸಾಹಿತಿಗಳಾದ ಪಿ. ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’, ಜಿ. ರಾಮಕೃಷ್ಣ ಅವರ ‘ಭಗತ್ ಸಿಂಗ್’, ಸಾರಾ ಅಬೂಬಕ್ಕರ್ ಅವರ ‘ಯುದ್ಧ’, ಎ.ಎನ್. ಮೂರ್ತಿ ರಾವ್ ಅವರ ‘ವ್ಯಾಘ್ರ ಕಥೆ’ ಮತ್ತು ಶಿವಕೋಟ್ಯಾಚಾರ್ಯರ ‘ಸುಕುಮಾರ ಸ್ವಾಮಿ ಕಥೆ’ಯನ್ನುಪಾಠಗಳನ್ನು ಕೈಬಿಡಲಾಗಿದೆ. ಬದಲಿಗೆ ಬರಹಗಾರ ಶಿವಾನಂದ ಕಳವೆ ಅವರ ‘ಸ್ವದೇಶಿ ಸೂತ್ರದ ಸರಳ ಹಬ್ಬ’, ಎಂ. ಗೋವಿಂದ ಪೈ ಅವರ ‘ನಾನು ಪ್ರಾಸ ಬಿಟ್ಟ ಕಥೆ’, ವೇದ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಶನ ಉಪದೇಶ’ ಮತ್ತು ಶತಾವಧಾನಿ ಆರ್. ಗಣೇಶ್ ಅವರ “ಶ್ರೇಷ್ಠ ಭಾರತೀಯ ಚಿಂತನೆಗಳು” ಸೇರಿಸಲಾಗಿದೆ ಸೇರಿಸಲಾಗಿದೆ.

“ಪಠ್ಯ ಪುಸ್ತಕ ಪುನಃ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದಂತೆ ಹೆಡ್ಗೆವಾರ್ ಅವರನ್ನು ಬರಹಗಾರರಾಗಿ ಆಯ್ಕೆ ಮಾಡಿದ್ದೇವೆ ಹೊರತು ಅವರ ಸಿದ್ಧಾಂತ ಅಥವಾ ಸಂಘಟನೆಯ ಆಧಾರದ ಮೇಲೆ ಅಲ್ಲ ಎಂದು ತಿಳಿಸಿದ್ದಾರೆ. ಇದು ಒಂದು ಕಪಟತನವಾಗಿದ್ದು, ಕೋಮುವಾದ ಹರಡಿಸುವ ಹೇಳಿಕೆ ಆಗಿದೆ. ಈ ಪಠ್ಯ ವಿಧ್ಯಾರ್ಥಿಗಳು ಓದಿದರೆ ನಾಡಿನ ಸೌಹಾರ್ದತೆ ನಾಶವಾಗಲಿದೆ. ಯಾವುದೇ ವ್ಯಕ್ತಿಯ ಬರಹ ಸೈದ್ದಾಂತಿಕ ನೆಲೆಯಲ್ಲಿಯೇ ಗುರುತಿಸಬೇಕೆ ವಿನಹಃ ಅವರ ಬರಹಗಾರ ಎಂಬ ಹಣೆ ಪಟ್ಟೆಯಲ್ಲಿ ಅಲ್ಲಾ ಎಂಬುದು ಸ್ಪಷ್ಟ” ಎಂದು ವಾಸುದೇವ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ವಿಸ್ಟ್ರಾನ್ ದಾಂಧಲೆಗೆ ಎಸ್‌ಎಫ್‌ಐ ಕಾರಣ: ಸಂಸದ ಮುನಿಸ್ವಾಮಿ ಹೇಳಿಕೆ ವಿರುದ್ಧ ಆಕ್ರೋಶ

“ಅಷ್ಟಕ್ಕೂ ಈ ಹೆಡ್ಗೆವಾರ್ ಯಾವ ಬರಹಗಾರ ಎಂಬ ಬಗ್ಗೆ ರೋಹಿತ ಚಕ್ರತಿರ್ಥ ಅವರೇ ಉತ್ತರಿಸಬೇಕು? ನಾಡಿನಲ್ಲಿ ಅನೇಕ ಬರಹಗಾರರ ಯೋಗ್ಯ ಪಠ್ಯಗಳಿದ್ದರು ಹೆಡಗೇವಾರ್ ಭಾಷಣ ಸೇರಿಸುವ ಅನಿವಾರ್ಯತೆ ಏನಿತ್ತು. ಯಾವ ಸಾಮಾಜಿಕ ನೆಲೆಯಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದು ತಿಳಿಸಬೇಕು” ವಾಸುದೇವ ಅವರು ಎಂದು ಸವಾಲು ಹಾಕಿದ್ದಾರೆ.

“ಕನ್ನಡ ನಾಡಿನ ಹಲವು ಬರಹಗಾರರ ಪಠ್ಯ ಇರಬೇಕಿತ್ತು. ಬದಲಿಗೆ ಸಂಘಪರಿವಾರದ ಸಂಸ್ಥಾಪಕನನ್ನು ಪರಿಚಯಿಸಿ ಶಿಕ್ಷಣದ ಕೇಸರೀಕರಣ, ಕೋಮುವಾದೀಕರಣ ಮೂಲಕ ವಿಷ ಬೀಜ ಬಿತ್ತುವ ಕೆಲಸಕ್ಕೆ ರಾಜ್ಯ ಬಿಜೆಪಿ ಸರ್ಕಾರ ಕೈ ಹಾಕಿರುವುದಕ್ಕೆ ನಾಡಿನ ಪ್ರಜ್ಞಾವಂತ ಜನರ ವಿರೋಧವಿದೆ. ಈ ಕಪಟತೆ ಹೆಚ್ಚು ದಿನ ನಡೆಯುವುದಿಲ್ಲ. ಹೆಡ್ಗೆವಾರ್‌ ಸಂಘದ ಸಂಸ್ಥಾಪಕರಾಗಿ ರೋಹಿತ ಚಕ್ರತಿರ್ಥ ಅವರಿಗೆ ಆದರ್ಶ ಆಗಿರಬಹುದು ಆದರೆ ದೇಶದ ಜನತೆಗಲ್ಲಾ” ಎಂದು ಅವರು ಕಿಡಿ ಕಾರಿದ್ದಾರೆ.

ಹೆಡ್ಗೆವಾರ್ ಅವರ ‘ಯಾರಾಗಬೇಕು ಆದರ್ಶ ಪುರುಷ’ ಭಾಷಣ ಸಂಘ ಪರಿವಾರಕ್ಕೆ ಆದರ್ಶ ಅನಿಸಬಹುದೇ ಹೊರತು, ಈ ನಾಡಿನ ವಿದ್ಯಾರ್ಥಿಗಳಿಗಲ್ಲಾ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ) ರಾಜ್ಯ ಸಮಿತಿ ಹೇಳಿದ್ದು, “ತಕ್ಷಣವೇ ಪಠ್ಯವನ್ನು ಮೊದಲಿನಂತೆ ಯತಾವತ್ತಾಗಿ ಜಾರಿ ಮಾಡಬೇಕು. ಜಾರಿ ಮಾಡದಿದ್ದರೆ ಎಸ್ ಎಫ್ ಐ ಸಾರ್ವಜನಿಕರು, ದೇಶಪ್ರೇಮಿಗಳು, ಶಿಕ್ಷಣ ಪ್ರೇಮಿಗಳ, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಪಾಲಕರನ್ನು ಒಳಗೊಂಡು ರಾಜ್ಯದಾದ್ಯಂತ ತೀವ್ರ ಹೋರಾಟಕ್ಕೆ ಮುಂದಾಗುತ್ತದೆ” ಎಂದು ಎಚ್ಚರಿಸಿದೆ.

ಇದನ್ನೂ ಓದಿ: ಹಿಜಾಬ್‌ v/s ಕೇಸರಿ ಶಾಲು: ಮತೀಯ ದ್ವೇಷದ ಹಿಂದೆ ಎಬಿವಿಪಿ ಕೈವಾಡ- ಎಸ್‌ಎಫ್‌ಐ

ಪ್ರತಿಭಟನೆಯಲ್ಲಿ ಎಸ್ಎಸ್ಐ ರಾಜ್ಯ ಉಪಾಧ್ಯಕ್ಷರು ದಿಲಿಪ್ ಶೆಟ್ಟಿ, ರಾಜ್ಯ ಪದಾಧಿಕಾರಿಗಳಾದ ಸೋಮಶೇಖರ್, ಶಿವಪ್ಪ, ದೊಡ್ಡ ಬಸವರಾಜ್, ಗಣೇಶ್, ಅಂಕಿತಾ, ರಾಥೋಡ್ , ಬಸವರಾಜ್ ಭೋವಿ, ಆನಂದ್, ರಾಜಶ್ವೇರಿ, ಅಭಿಷೇಕ್, ಮಹೇಶ್ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -