Homeಅಂಕಣಗಳುಮಾತು ಮರೆತ ಭಾರತ; ಅಸ್ಪೃಶ್ಯರು ಪರಿಶಿಷ್ಟ ಜಾತಿಗಳಾಗಿದ್ದು ಹೇಗೆ?

ಮಾತು ಮರೆತ ಭಾರತ; ಅಸ್ಪೃಶ್ಯರು ಪರಿಶಿಷ್ಟ ಜಾತಿಗಳಾಗಿದ್ದು ಹೇಗೆ?

- Advertisement -
- Advertisement -

ಇಂದಿಗೂ ಹಲವಾರು ದಲಿತರು ತಮ್ಮನ್ನು ಪರಿಶಿಷ್ಟ ಜಾತಿಗಳು ಎಂದು ಏಕೆ ಕರೆಯುತ್ತಾರೆ ಎಂಬ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡುವುದಿಲ್ಲ. ಕಾನೂನು ಅಭ್ಯಾಸ ಮಾಡಿದ ದಲಿತರು ಹಾಗೂ ದಲಿತೇತರರನ್ನು ಕೇಳಿದರೆ ’ಭಾರತದ ಸಂವಿಧಾನದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ನಮೂದಿಸಿರುವ ಜಾತಿಗಳು’ ಎಂದು ಉತ್ತರಿಸುತ್ತಾರೆ ಎಂಬ ನಂಬಿಕೆ ನನಗಿದೆ. ಆದರೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡಿಸಿದ ಅಸ್ಪೃಶ್ಯರನ್ನು ಹೇಗೆ ಗುರುತಿಸಲಾಯಿತು ಎಂದು ಮತ್ತೊಂದು ಉಪಪ್ರಶ್ನೆಯನ್ನು ಕೇಳಿದರೆ ಬಹುಶಃ ಅವರಲ್ಲಿಯೂ ಉತ್ತರವಿರಲಾರದು. ಇತಿಹಾಸವನ್ನೇ ಮರೆತ ಭಾರತದ ಪರಿಸ್ಥಿತಿ ಇದು. ಈಗ ಅಸ್ಪೃಶ್ಯರು ಪರಿಶಿಷ್ಟ ಜಾತಿಗಳು ಹೇಗಾದರು ಎಂಬ ಬಗ್ಗೆ ತಿಳಿದುಕೊಳ್ಳೋಣ.

ಮೊಘಲರ ಕಾಲದಲ್ಲಿ ಜನಗಣತಿ ಮಾಡುವ ವಾಡಿಕೆ ಇತ್ತು. ಬ್ರಿಟಿಷರ ಕಾಲದಲ್ಲಿ ಅದು ನಿಯಮಬದ್ಧವಾಯಿತು. ಭಾರತದಲ್ಲಿ ಮೊದಲ ಸಾಮಾನ್ಯ ಗಣತಿ ನಡೆದದ್ದು 1881ರಲ್ಲಿ. ಈ ಗಣತಿಯಲ್ಲಿ ಭಾರತೀಯರನ್ನು ಜಾತಿ ಹಾಗೂ ಧರ್ಮಗಳ ಆಧಾರದಲ್ಲಿ ಗಣತಿ ಮಾಡಲಾಯಿತು. ಆದರೆ ಈ ಗಣತಿ ಹಿಂದೂ ಜಾತಿಗಳಲ್ಲಿನ ಸ್ಪೃಶ್ಯ ಮತ್ತು ಅಸ್ಪೃಶ್ಯತೆಯನ್ನು ಪರಿಗಣಿಸಿರಲಿಲ್ಲ ಹಾಗೂ ಸ್ಪೃಶ್ಯರಲ್ಲಿನ ಮೇಲ್ಜಾತಿ, ಕೆಳಜಾತಿಗಳನ್ನು ನಿರ್ದಿಷ್ಟಪಡಿಸಲಿಲ್ಲ. ಹಾಗಾಗಿ ಅಸ್ಪೃಶ್ಯರ ನಿಖರ ಜನಸಂಖ್ಯೆಯೂ ತಿಳಿಯಲಿಲ್ಲ.

ಎರಡನೆಯ ಸಾರ್ವತ್ರಿಕ ಜನಗಣತಿ ನಡೆದದ್ದು 1891ರಲ್ಲಿ. ಈ ಜನಗಣತಿಯಲ್ಲಿ ಈ ಹಿಂದಿನ ನ್ಯೂನತೆಯನ್ನು ಸರಿಪಡಿಸಲಾಯಿತು. ಜಾತಿ, ಜನಾಂಗ ಹಾಗೂ ಶ್ರೇಣೀಕರಣಗಳನ್ನು ಪರಿಗಣಿಸಿದರು. ಆದರೂ ಅಸ್ಪೃಶ್ಯರ ನಿಖರ ಸಂಖ್ಯೆ ತಿಳಿಯಲಿಲ್ಲ.

ಮೂರನೆಯ ಸಾರ್ವತ್ರಿಕ ಗಣತಿ ನಡೆದದ್ದು 1901ರಲ್ಲಿ. ಈ ಗಣತಿಯಲ್ಲಿ ಸಾಮಾಜಿಕ ಮೇಲರಿಮೆ ಹಾಗೂ ಕೀಳರಿಮೆಯನ್ನೇ ಆಧಾರವಾಗಿಟ್ಟುಕೊಂಡು ಲೆಕ್ಕಹಾಕಲಾಯಿತು. ಈ ಕಾರಣದಿಂದಲೇ ಹಿಂದೂ ಮೇಲ್ಜಾತಿಗಳು 1901ರ ಜನಗಣತಿಯನ್ನು ತೀವ್ರವಾಗಿ ವಿರೋಧಿಸಿದರು. ಜಾತಿಯ ಬಗೆಗಿನ ಪ್ರಶ್ನೆಗಳನ್ನೇ ಕೈಬಿಡಬೇಕೆಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿದರು. (ಈಗಲೂ ಹಿಂದೂ ಮೇಲ್ಜಾತಿಗಳು ಜಾತಿಗಣತಿಯನ್ನು ವಿರೋಧಿಸುತ್ತಿವೆ) ಆದರೆ ಬ್ರಿಟಿಷ್ ಅಧಿಕಾರಿಗಳು ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಜೊತೆಗೆ ಜಾತಿಯಾಧಾರಿತ ಗಣತಿಯನ್ನು ಸಮರ್ಥಿಸಿಕೊಳ್ಳುತ್ತ ’ಒಂದು ಸಾಮಾಜಿಕ ಸಂಸ್ಥೆಯಾಗಿ ಜಾತಿಯ ಅನುಕೂಲ ಮತ್ತು ಪ್ರತಿಕೂಲಗಳು ಏನೆಂಬುದರ ಬಗ್ಗೆ ಯಾವುದೇ ಅಭಿಪ್ರಾಯವಿರಲಿ, ಭಾರತದಲ್ಲಿ ಜನಸಂಖ್ಯೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸುವಾಗ, ಜಾತಿಯು ಮುಖ್ಯವಾದ ಒಂದು ಅಂಗವಾಗಿರದಿದ್ದರೆ ಯಾವುದೇ ಉಪಯುಕ್ತವಾದ ಚರ್ಚೆ ಸಾಧ್ಯವಾಗುತ್ತದೆಂದು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಜಾತಿಯು ಈಗಲೂ ಸಹ ಭಾರತದ ಸಾಮಾಜಿಕ ತಳಹದಿಯ ಅಡಿಗಲ್ಲು’ ಎಂದು ಸವಾಲಿಗೆ ಉತ್ತರಿಸಿದರು.

ಹೀಗಿದ್ದಾಗಲೂ 1901ರ ಜನಗಣತಿಯು ಭಾರತದ ಅಸ್ಪೃಶ್ಯರ ನಿಖರ ಜನಸಂಖ್ಯೆಯನ್ನು ಸರಿಯಾಗಿ ಲೆಕ್ಕಿಸುವುದರಲ್ಲಿ ವಿಫಲವಾಯಿತು. ಇದಕ್ಕೆ ಪ್ರಮುಖ ಎರಡು ಕಾರಣಗಳಿದ್ದವು. 1. ಅಸ್ಪೃಶ್ಯರು ಎಂದು
ನಿರ್ಧರಿಸುವ ಪ್ರಮಾಣಗಳಿರಲಿಲ್ಲ 2. ಅಸ್ಪೃಶ್ಯರೊಂದಿಗೆ ಇತರೆ ಹಲವು ಅಸ್ಪೃಶ್ಯರಲ್ಲದ ಅಲೆಮಾರಿ, ಬುಡಕಟ್ಟು ಜನಾಂಗವನ್ನು ಸೇರಿಸಲಾಗಿತ್ತು. ಈ ಎರಡೂ ನ್ಯೂನತೆಗಳಿಗೆ 1911ರ ಜನಗಣತಿಯು ಪರಿಹಾರ ಕಂಡುಕೊಂಡಿತು. ಅಸ್ಪೃಶ್ಯರನ್ನು ನಿರ್ದಿಷ್ಟವಾಗಿ ಪತ್ತೆಹಚ್ಚಲು 10 ಪ್ರಮಾಣಗಳನ್ನು ಅಳವಡಿಸಿತು. ಈ ಪ್ರಮಾಣಗಳ ಮೂಲಕ ಅಸ್ಪೃಶ್ಯರನ್ನು ಪಟ್ಟಿ ಮಾಡಿತು. ಅವು ಈ ಕೆಳಗಿನಂತಿವೆ.

(1)ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು (2) ಬ್ರಾಹ್ಮಣ ಅಥವಾ ಇತರ ಹಿಂದೂ ಗುರುಗಳಿಂದ ಮಂತ್ರವನ್ನು ಸ್ವೀಕರಿಸದವರು (3) ವೇದಗಳ ಪ್ರಾಮಾಣ್ಯವನ್ನು ನಿರಾಕರಿಸುವವರು (4) ಪ್ರಮುಖ ಹಿಂದೂ ದೇವತೆಗಳನ್ನು ಪೂಜೆ ಮಾಡದವರು (5) ಕಟ್ಟಾ ಬ್ರಾಹ್ಮಣರಿಂದ ಸೇವೆ ಪಡೆಯದಿದ್ದವರು (6) ಬ್ರಾಹ್ಮಣ ಪೂಜಾರಿಗಳನ್ನೇ ಹೊಂದದಿದ್ದವರು (7) ಸಾಮಾನ್ಯ ಹಿಂದೂ ದೇವಾಲಯದೊಳಕ್ಕೆ ಪ್ರವೇಶ ಇಲ್ಲದವರು (8) ಮಾಲಿನ್ಯ ಉಂಟುಮಾಡುವವರು (9) ಸತ್ತವರನ್ನು ಹೂಳುವವರು ಮತ್ತು (10) ಗೋವನ್ನು ಪೂಜಿಸದವರು ಮತ್ತು ಗೋಮಾಂಸವನ್ನು ತಿನ್ನುವವರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ಮೇಲಿನ ಪ್ರಮಾಣಗಳ ಆಧಾರದ ಮೇಲೆ ಅಸ್ಪೃಶ್ಯರ ಜನಸಂಖ್ಯೆಯನ್ನು ನಿರ್ಧರಿಸಲಾಯಿತು. ಇದನ್ನೂ ಹಿಂದೂ ಮೇಲ್ಜಾತಿಗಳು ಸತತವಾಗಿ ವಿರೋಧಿಸಿದರು. ಇದಕ್ಕೆ ಕಾರಣ ಅಸ್ಪೃಶ್ಯರು ಹಿಂದೂ ಪರಿಧಿಯಿಂದ ಹೊರಗೆ ಹೋಗುತ್ತಾರೆ ಎಂಬುದಲ್ಲ. ಬದಲಾಗಿ ಬ್ರಿಟಿಷ್ ಶಾಸನಸಭೆಗಳಲ್ಲಿ ಅಸ್ಪೃಶ್ಯರ ಜನಸಂಖ್ಯೆಯನ್ನೂ ಸೇರಿಸಿಕೊಂಡು ಹಿಂದೂ ಮೇಲ್ಜಾತಿಗಳು ಹೆಚ್ಚಿನ ಸದಸ್ಯತ್ವ ಗಿಟ್ಟಿಕೊಳ್ಳಬಹುದಲ್ಲ ಎಂಬ ದುರಾಲೋಚನೆ. ಆದರೆ ಅದು ಹಾಗಾಗಲಿಲ್ಲ.

ಅಸ್ಪೃಶ್ಯರು ಹಾಗೂ ಅಲೆಮಾರಿ, ಬುಡಕಟ್ಟುಗಳಿಗೂ ಸಂಬಂಧಿಸಿದಂತೆ ಮೇಲಿನ 10 ಪ್ರಮಾಣಗಳಲ್ಲಿ ಕೆಲವು ಸಾಮ್ಯತೆಗಳಿದ್ದವು. ಆದ್ದರಿಂದ 1931ರಲ್ಲಿ ನಡೆದ ಜನಗಣತಿಯು ಅಸ್ಪೃಶ್ಯರನ್ನು ಗುರುತಿಸಲು ಮತ್ತೆ 9 ಪ್ರ್ರಾಮಾಣಿತ ಪ್ರಶ್ನೆಗಳನ್ನು ಹಾಕಿಕೊಂಡು ಮತ್ತಷ್ಟು ನಿಖರಗೊಳ್ಳಲು ಪ್ರಯತ್ನಿಸಿತು. ಅವು ಈ ಕೆಳಗಿನಂತಿವೆ.

  1. ಈ ಜಾತಿ ಅಥವಾ ವರ್ಗಗಳಿಗೆ ಕ್ಷೌರಿಕರು, ನೀರು ಸರಬರಾಜು ಮಾಡುವವರು, ದರ್ಜಿ ಇತ್ಯಾದಿಗಳು ಮೇಲ್ಜಾತಿ ಹಿಂದೂಗಳಿಗೆ ಒದಗಿಸುವಂತೆ ಸೇವೆಗಳನ್ನು ಒದಗಿಸುವರೇ?
  2. ಈ ಜಾತಿ ಅಥವಾ ವರ್ಗಗಳಿಗೆ ಬ್ರಾಹ್ಮಣರು ಸೇವೆ ಒದಗಿಸುತ್ತಾರೆಯೇ ಅಥವಾ ಇಲ್ಲವೇ?
  3. ಈ ಜಾತಿಗಳು ಹಿಂದೂ ಮೇಲ್ಜಾತಿಗಳನ್ನು ಮುಟ್ಟುವುದರಿಂದ ಅಥವಾ ಸಮೀಪಿಸುವುದರಿಂದ ಹಿಂದೂ ಮೇಲ್ಜಾತಿಯವರು ಮೈಲಿಗೆ ಎಂದು ಭಾವಿಸುವರೇ?
  4. ಈ ಜಾತಿ ಅಥವಾ ವರ್ಗಗಳು ಕೈಯಾರೆ ನೀಡಿದ ನೀರನ್ನು ಹಿಂದೂ ಮೇಲ್ಜಾತಿಯವರು ಸೇವಿಸುವರೇ?
  5. ಈ ಜಾತಿ ಅಥವಾ ವರ್ಗಗಳು ಸಾರ್ವಜನಿಕ ಸ್ಥಳಗಳಾದ ರಸ್ತೆಗಳು, ಶಾಲೆಗಳು, ಜಾತ್ರೆಗಳು ಅಥವಾ ಬಾವಿಗಳ ಬಳಿ ಪ್ರವೇಶಿಸದಂತೆ ನಿಷೇಧಕ್ಕೊಳಗಾಗಿರುವರೇ?
  6. ಈ ಜಾತಿ ಅಥವಾ ವರ್ಗಗಳಿಗೆ ಹಿಂದೂ ದೇಗುಲಗಳಲ್ಲಿ ಪ್ರವೇಶವಿಲ್ಲವೇ?
  7. ಈ ಜಾತಿ ಅಥವಾ ವರ್ಗದ ವಿದ್ಯಾವಂತರೊಂದಿಗೆ ಇತರೆ ಮೇಲ್ಜಾತಿ ಅಥವಾ ಮೇಲ್ವರ್ಗದವರು ಸಾಮಾಜಿಕವಾಗಿ ಸಮಾನರೆಂದು ಭಾವಿಸಿ ಬೆರೆಯುತ್ತಾರೆಯೇ?
  8. ಈ ಜಾತಿ ಅಥವಾ ವರ್ಗವು ಬೇಜವಾಬ್ದಾರಿ, ಅನಕ್ಷರತೆ ಅಥವಾ ಬಡತನದ ಕಾರಣದಿಂದ ತುಳಿತಕ್ಕೊಳಗಾಗಿದೆಯೇ ಮತ್ತು ಈ ಮೇಲಿನ ಕಾರಣಗಳಿಗಾಗಿ ಸಾಮಾಜಿಕವಾಗಿ ಅಶಕ್ತಗೊಂಡಿಲ್ಲವೇ?
  9. ಈ ಜಾತಿ ಅಥವಾ ವರ್ಗ ತಾನು ಮಾಡುತ್ತಿರುವ ಕಸುಬಿನ ಕಾರಣಕ್ಕಾಗಿಯೇ ಶೋಷಣೆಗೊಳಗಾಗಿದೆಯೇ ಮತ್ತು ಈ ಕಸುಬಿನ ಕಾರಣಕ್ಕೆ ಸಾಮಾಜಿಕವಾಗಿ ಅಶಕ್ತತೆಗೆ ಒಳಗಾಗಿದೆಯೇ?

ಈ ಮೇಲಿನ ಪ್ರಮಾಣಗಳ ಆಧಾರದಲ್ಲಿ ಅಸ್ಪೃಶ್ಯರನ್ನು 1931ರ ಜನಗಣತಿಯು ’ಏಕರೂಪ ಸಮುದಾಯ’ಗಳೆಂದು ಪಟ್ಟಿ ಮಾಡಿತು. (ಈಗ ಭಾರತದ ಉಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿಗಳು ಏಕರೂಪ ಸಮುದಾಯಗಳಲ್ಲ ಎಂದು ಅಭಿಪ್ರಾಯಪಟ್ಟಿದೆ) ಸೈಮನ್ ಕಮಿಷನ್ ಮುಂದೆ ಅಂಬೇಡ್ಕರ್ ಸಾಕ್ಷಿ ನೀಡಿದ ನಂತರ ಹಾಗೂ ಪೂನಾ ಒಪ್ಪಂದದ ನಂತರ ಅಸ್ಪೃಶ್ಯರ ಜನಸಂಖ್ಯೆಯ ಆಧಾರದಲ್ಲಿ ಅವರಿಗೆ ಶಾಸನಸಭೆಗಳಲ್ಲಿ ನಾಮಕರಣ ಮಾಡುವ ಹಾಗೂ ಜನಸಂಖ್ಯಾವಾರು ಮೀಸಲಾತಿ ಕಲ್ಪಿಸುವ ವ್ಯವಸ್ಥೆ ಜಾರಿಯಾಯಿತು.

ಅದೇನೇ ಇರಲಿ, ಈ ಜನಗಣತಿಯಲ್ಲಿ ನಿರ್ಧರಿಸಿದ್ದ ಪ್ರಮಾಣಗಳಿಂದಲೇ ಅಸ್ಪೃಶ್ಯರನ್ನು ಲೆಕ್ಕಹಾಕಲಾಗಿದೆ ಎಂಬುದು ಸೂರ್‍ಯನಷ್ಟೇ ಸತ್ಯ. ಇದರ ಆಧಾರದಲ್ಲಿಯೇ 1935ರ ಬ್ರಿಟಿಷ್ ಭಾರತದ ಕಾಯ್ದೆಯಲ್ಲಿ ಅಸ್ಪೃಶ್ಯರನ್ನೊಳಗೊಂಡ ಒಂದು ಪಟ್ಟಿ ಮಾಡಲಾಯಿತು. ಅದೇ ಪರಿಶಿಷ್ಟ ಜಾತಿ. ಅದೇ ನಿಯಮವು 1950 ಭಾರತದ ಸಂವಿಧಾನ ವಿಧಿ 341ರಲ್ಲಿ ಅಳವಡಿಸಲಾಯಿತು.

ಅಂದಿನಿಂದ ಭಾರತದ ಅಸ್ಪೃಶ್ಯರನ್ನು ಪರಿಶಿಷ್ಟ ಜಾತಿಗಳು ಎಂದು ಕರೆಯಲಾಗುತ್ತಿದೆ. ಪರಿಶಿಷ್ಟ ಜಾತಿ ಎಂದರೆ ಅಸ್ಪೃಶ್ಯ ಜಾತಿಗಳನ್ನು ಹೆಸರಿಸಿರುವ ಪಟ್ಟಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಓದುಗರು ಡಾ. ಬಿ. ಆರ್. ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳು ಸಂಪುಟ 4ನ್ನು ನೋಡಬಹುದಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಮಾತು ಮರೆತ ಭಾರತ; ಕರ್ನಾಟಕದಲ್ಲಿ ಅಸ್ಪೃಶ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿರುವ ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು: ಸುಪ್ರೀಂ

0
ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಇಡೀ ರಾಷ್ಟ್ರದ ಎದುರು ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ...