Homeಅಂಕಣಗಳುಬಹುಜನ ಭಾರತ; ಕೆಡವಲಾದ ಬೌದ್ಧ ಜೈನ ನೆಲೆಗಳನ್ನೂ ಮರು ನಿರ್ಮಿಸಲಾಗುವುದೇ?

ಬಹುಜನ ಭಾರತ; ಕೆಡವಲಾದ ಬೌದ್ಧ ಜೈನ ನೆಲೆಗಳನ್ನೂ ಮರು ನಿರ್ಮಿಸಲಾಗುವುದೇ?

- Advertisement -
- Advertisement -

ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ ಕುರಿತು ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನಿಂದ ಸ್ಫೂರ್ತಿ ಪಡೆದಿರುವ ಶಕ್ತಿಗಳು ಕಾಶಿ-ಮಥುರಾ ವಿವಾದಗಳನ್ನು ಬಡಿದೆಬ್ಬಿಸಲು ತೊಡಗಿವೆ. ಹಿಂದೂ ದೇವಾಲಯಗಳನ್ನು ಕೆಡವಿ ಕಟ್ಟಿರುವ ಮಸೀದಿಗಳಿವು ಎಂಬುದು ಈ ಶಕ್ತಿಗಳ ವಾದ. ಮುಸ್ಲಿಮ್ ದಾಳಿಕೋರರು- ದೊರೆಗಳು ಹಲವು ದೇವಾಲಯಗಳನ್ನು ಕೆಡವಿದ್ದು ಹೌದು. ಆದರೆ ಹಿಂದು ರಾಜರು ಕೂಡ ಹಿಂದೂ ಧರ್ಮದ ಪುನರುತ್ಥಾನದ ಹೆಸರಿನಲ್ಲಿ ಬೌದ್ಧ ಮತ್ತು ಜೈನ ಧಾರ್ಮಿಕ ನೆಲೆಗಳನ್ನು ಕೆಡವಿರುವ ಹೇರಳ ಉದಾಹರಣೆಗಳಿವೆ.

ಸೋಮೇಶ್ವರ ದೇವಾಲಯವನ್ನು ಅಪವಿತ್ರಗೊಳಿಸಿ ಮೂರ್ತಿಯನ್ನು ಭಂಗ ಮಾಡಿದ ಮಹಮ್ಮದ್ ಘಜನಿ ಮುಲ್ತಾನದ ಮಸೀದಿಗಳ ಮೇಲೆಯೂ ದಾಳಿ ನಡೆಸಿದ್ದ ಮತ್ತು ಐವತ್ತು ಸಾವಿರ ಮಂದಿ ಶಿಯಾ ಮುಸಲ್ಮಾನರನ್ನೂ ಕೊಂದುಹಾಕಿದ್ದ ಎಂಬ ಸಂಗತಿಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ. ವಿವಾದಗಳನ್ನು ಕೆದಕುವವರು ಇತಿಹಾಸವನ್ನು ಓದಿಕೊಳ್ಳಬೇಕಿದೆ.

ಸಾಮಾಜಿಕ ಸಾಮರಸ್ಯದಿಂದ ಕೂಡಿದ್ದು, ಧಾರ್ಮಿಕ ಹಿಂಸಾಚಾರವೇ ಇಲ್ಲದ ಸುವರ್ಣಯುಗ ಎಂಬ ಪ್ರಾಚೀನ ಭಾರತದ ಕಾಲಮಾನದ ಬಣ್ಣನೆಯನ್ನು ಇತಿಹಾಸಜ್ಞ ದ್ವಿಜೇಂದ್ರ ನಾರಾಯಣ ಝಾ ಅವರು ಒಪ್ಪಿಲ್ಲ.

ಎದುರಾಳಿಗಳ ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳಲ್ಲಿನ ಪ್ರತಿಮೆಗಳನ್ನು ನೆಲಸಮಗೊಳಿಸಿ ಅಪವಿತ್ರಗೊಳಿಸುವುದೇ ಅಲ್ಲದೆ ಅವುಗಳ ಸ್ವಾಧೀನ- ಬಳಕೆಯು ಇಸ್ಲಾಮ್ ಆಗಮಿಸುವ ಮುನ್ನವೇ ಭಾರತದಲ್ಲಿ ರೂಢಿಯಲ್ಲಿತ್ತು ಎಂದು ಝಾ ವಿವರಿಸಿದ್ದಾರೆ.

ಭಾರತದ ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸ ತಜ್ಞರಾದ ಝಾ ಅವರು “Against the Grain- Notes on Identity, Intolerance and History” ಎಂಬ ತಮ್ಮ ಕೃತಿಯಲ್ಲಿ ಈ ಸಂಗತಿಯನ್ನು ವಿಷದವಾಗಿ ತಿಳಿಸಿದ್ದಾರೆ.

ಬೌದ್ಧ ಮಠಗಳು, ಸ್ತೂಪಗಳು ಹಾಗೂ ಇತರೆ ಕಟ್ಟಡಗಳನ್ನು ಬ್ರಾಹ್ಮಣ್ಯ ಶಕ್ತಿಗಳು ಅಪವಿತ್ರಗೊಳಿಸಿ, ಕೆಡವಿ, ಸ್ವಾಧೀನಕ್ಕೆ ಪಡೆದು ಬಳಸಿರುವುದಕ್ಕೆ ಸಾಕ್ಷ್ಯಗಳಿವೆ. ಇಂತಹ ಸಾಕ್ಷ್ಯಗಳು ಅಶೋಕನ ಆಳ್ವಿಕೆಯ ಅಂತ್ಯದವರೆಗೆ ವಿಸ್ತರಿಸಿವೆ.

ಅಶೋಕನ ಮಕ್ಕಳಲ್ಲೊಬ್ಬನಾದ ಜಾಲೌಕನು ವೈಷ್ಣವನಾಗಿದ್ದ. ಬೌದ್ಧ ವಿಹಾರಗಳನ್ನು ನೆಲಸಮಗೊಳಿಸಿದ ಕುರಿತು ಹನ್ನೆರಡನೆಯ ಶತಮಾನದ ಕಲ್ಹಣನ ಕಾಶ್ಮೀರಿ ಪಠ್ಯ ’ರಾಜತರಂಗಿಣಿ’ಯಲ್ಲಿ ಉಲ್ಲೇಖವಿದೆ. ಈ ಪುರಾವೆಯನ್ನು ಗಮನಿಸಿದರೆ ಶ್ರಮಣ ಧರ್ಮಗಳ ಮೇಲಿನ ದಾಳಿ ಅಶೋಕನ ಜೀವಿತಕಾಲ ಇಲ್ಲವೇ ಆತನ ಮರಣದ ತಕ್ಷಣವೇ ಆರಂಭವಾಯಿತು ಎಂಬುದಕ್ಕೆ ಈ ಉಲ್ಲೇಖವೇ ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಮೌರ್ಯರ ಆಳ್ವಿಕೆಯ ನಂತರದ ಅವಧಿಯ ಶ್ರಮಣರನ್ನು ಕಾಡಿದ ಸಾಕ್ಷ್ಯವನ್ನು ದಿವ್ಯವದನ ಎಂಬ ಬೌದ್ಧ- ಸಂಸ್ಕೃತ ಪಂಡಿತನು ದಾಖಲಿಸಿದ್ದಾನೆ. ಪುಷ್ಯಮಿತ್ರ ಶುಂಗನೆಂಬ ಬ್ರಾಹ್ಮಣ ದೊರೆಯು ಬೌದ್ಧ ಧರ್ಮದ ಮಹಾನ್ ಪೀಡಕನೆಂದು ಗುರುತಿಸಿದ್ದಾನೆ. ಅವನ ಭಾರೀ ಸೇನೆಯು ಸ್ತೂಪಗಳನ್ನು ಹಾಳುಗೆಡವುತ್ತ, ವಿಹಾರಗಳನ್ನು ಸುಡುತ್ತ, ಭಿಕ್ಷುಗಳನ್ನು ಕೊಲ್ಲುತ್ತ ಸಾಕಲದ ಕಡೆಗೆ (ಈಗಿನ ಸಿಯಾಲ್ ಕೋಟ್) ಸಾಗಿತು. ಪ್ರತಿ ಶ್ರಮಣನ ತಲೆಗೆ ನೂರು ವರಹಗಳ ಬಹುಮಾನವನ್ನು ಶುಂಗನು ಸಾಕಲದಲ್ಲಿ ಘೋಷಿಸಿದ. ಬ್ರಾಹ್ಮಣರು ಮತ್ತು ಶ್ರಮಣರು ಹಾವು ಮುಂಗುಸಿಗಳಂತೆ ಶಾಶ್ವತ ಶತ್ರುಗಳು ಎಂದು ಪತಂಜಲಿಯ ತನ್ನ ಮಹಾಭಾಷ್ಯ ಕೃತಿಯಲ್ಲಿ ಬಣ್ಣಿಸಿದ್ದಾನೆ. ವಿಶೇಷವಾಗಿ ಮಧ್ಯಪ್ರದೇಶದ ಅನೇಕ ಬೌದ್ಧ ಕೇಂದ್ರಗಳಲ್ಲಿ ಕಂಡು ಬಂದಿರುವ ಅವಶೇಷಗಳ ರಾಶಿಯ ಪದರಗಳು ಬೌದ್ಧ ಸ್ಮಾರಕಗಳ ಮೇಲೆ ಶುಂಗನು ನಡೆಸಿದ ದಾಳಿಯ ಸಾಧ್ಯತೆಯನ್ನು ಗಟ್ಟಿಗೊಳಿಸುತ್ತವೆ. ಉದಾಹರಣೆಗೆ ಅಶೋಕನ ಕಾಲದಿಂದ ಪ್ರಮುಖ ಬೌದ್ಧ ತಾಣವಾಗಿದ್ದ ಸಾಂಚಿಯು ಶುಂಗನ ಕಾಲದಲ್ಲಿ ಹಲವು ಸೌಧಗಳನ್ನು ಒಡೆದು ಹಾಕಿದ ಪುರಾವೆಗಳತ್ತ ಬೆರಳು ಮಾಡುತ್ತದೆ. ಸುತ್ತಮುತ್ತಲ ಕಟನಿ ಮತ್ತು ರೇವಾ ಜಿಲ್ಲೆಗಳ ಸತಧಾರ ಮತ್ತು ದೂರಕೊಥಾರದಂತಹ ಜಾಗಗಳಲ್ಲಿಯೂ ಇಂತಹುದೇ ಪುರಾವೆಗಳು ದೊರೆಯುತ್ತವೆ ಎಂದು ಝಾ ವಿವರಿಸಿದ್ದಾರೆ.

ಇಂತಹ ದಾಳಿಗಳು ಮಧ್ಯಪ್ರದೇಶದಲ್ಲಿ ಶುಂಗನ ನಂತರವೂ ನಡೆಯುತ್ತವೆ. ಉದಾಹರಣೆಗೆ ಅಹ್ಮದ್‌ಪುರದಲ್ಲಿ ಐದನೆಯ ಶತಮಾನದ ಸ್ತೂಪವೊಂದರ ಮೇಲೆ ಬ್ರಾಹ್ಮಣ ದೇಗುಲವನ್ನು ಕಟ್ಟಿದಂತೆ ತೋರುತ್ತದೆ. ವಿದಿಶಾದ ಸುತ್ತಮುತ್ತ ಎಂಟನೆಯ ಶತಮಾನದಲ್ಲಿ ಬೌದ್ಧ ಕೇಂದ್ರಗಳು ಶೈವ ಅಥವಾ ಜೈನ ಪೂಜಾ ಸ್ಥಾನಗಳಾಗಿ ಬದಲಾಗಿರುವ ಹಲವು ತಾಣಗಳು ಪತ್ತೆಯಾಗಿವೆ. ವಿದಿಶಾದ ಈಶಾನ್ಯ ದಿಕ್ಕಿನಲ್ಲಿ 250ಕಿ.ಮೀ. ದೂರದಲ್ಲಿ ಹತ್ತನೆಯ ಶತಮಾನದ ನಂತರ ಚಾಂದೇಲರ ಆಳ್ವಿಕೆಯಲ್ಲಿ ದೇವಾಲಯ ನಗರವಾಗಿ ಖಜುರಾಹೋ ತಲೆಯೆತ್ತುವ ಮುನ್ನ ಅಲ್ಲಿದ್ದದ್ದು ಬೌದ್ಧ ನೆಲೆ. ಐದನೆಯ ಶತಮಾನದ ಸ್ತೂಪದ ತಳಹದಿಯ ಮೇಲೆ ಬ್ರಾಹ್ಮಣ ದೇವಾಲಯವನ್ನು ನಿರ್ಮಿಸಿರುವಂತೆ ಕಂಡುಬಂದಿದೆ. ಸುತ್ತಮುತ್ತ ಪ್ರತೀಕಗಳು ಪತ್ತೆಯಾಗಿವೆ. ಇದೇ ತಾಣದಲ್ಲಿ ಬೌದ್ಧ ಸ್ಮಾರಕವೊಂದರ ಅವಶೇಷಗಳ ಮೇಲೆ ಒಂಬತ್ತನೆಯ ಅಥವಾ ಹತ್ತನೆಯ ಶತಮಾನದಲ್ಲಿ ಘಂಟೈ ದೇವಾಲಯವನ್ನು ಆಗಿನ ಕಾಲಮಾನದಲ್ಲಿ ಪ್ರಬಲ ನೆಲೆ ಹೊಂದಿದ್ದ ಜೈನರು ನಿರ್ಮಿಸಿದ್ದಾಗಿ ತೋರುತ್ತದೆ.

ಪಶ್ಚಿಮ ಉತ್ತರಪ್ರದೇಶದ ಮಥುರಾದಲ್ಲಿ ಕುಶಾನರ ಕಾಲದಲ್ಲಿ ಈಗ ನೆಲೆ ನಿಂತಿರುವ ಭೂತೇಶ್ವರ ಮತ್ತು ಗೋಕರ್ಣೇಶ್ವರ ದೇವಾಲಯಗಳು ಪ್ರಾಚೀನಕಾಲದ ಬೌದ್ಧ ಕೇಂದ್ರಗಳಾಗಿದ್ದವು. ಅಲಹಾಬಾದಿನ ಸನಿಹದ ಕೌಶಾಂಬಿಯಲ್ಲಿ ಘೋಸಿತಾರಂ ಎಂಬ ಮಹಾನ್ ಬೌದ್ಧ ಮಠವನ್ನು ಸುಟ್ಟು ಹಾಕಿ ಧ್ವಂಸ ಮಾಡಿದ ಕೃತ್ಯ ಪುಷ್ಯಮಿತ್ರ ಶುಂಗನದೇ. ಬುದ್ಧ ತನ್ನ ಮೊದಲ ಪ್ರವಚನ ನೀಡಿದ ವಾರಾಣಸಿ ಬಳಿಯ ಸಾರನಾಥ ಕೂಡ ಬ್ರಾಹ್ಮಣ ದಾಳಿಗೆ ಗುರಿಯಾಯಿತು. ಮೌರ್ಯರ ಕಾಲದ ವಸ್ತುಗಳನ್ನು ಮರುಬಳಸಿ ಬ್ರಾಹ್ಮಣ ಕಟ್ಟಡಗಳನ್ನು ನಿರ್ಮಿಸಲಾಯಿತು. ಬುದ್ಧನು ತನ್ನ ಬಹುಪಾಲು ಜೀವಿತಕಾಲವನ್ನು ಕಳೆದ ಶ್ರಾವಸ್ತಿಯ ಕುಶಾನ ಬೌದ್ಧ ತಾಣವನ್ನು ಬ್ರಾಹ್ಮಣರು ಸ್ವಾಧೀನಪಡಿಸಿಕೊಂಡು ಗುಪ್ತರ ಕಾಲದಲ್ಲಿ ರಾಮಾಯಣ ಗೋಡೆ ಚಿತ್ರಗಳ ಗುಡಿಯನ್ನು ನಿರ್ಮಿಸಿದರು. ಈ ಮಾತಿಗೆ ಐದನೆಯ ಶತಮಾನದ ಚೀನೀ ಯಾತ್ರಿಕ ಫಾಹಿಯಾನನ ಉಲ್ಲೇಖವೇ ಸಾಕ್ಷಿ ಎಂದು ಝಾ ಹೇಳಿದ್ದಾರೆ.

ದ್ವಿಜೇಂದ್ರ ನಾರಾಯಣ ಝಾ

ಬೌದ್ಧ ಮತದ ಮೇಲೆ ಬ್ರಾಹ್ಮಣವಾದವು ಅಂತಿಮ ವಿಜಯ ಸಾಧಿಸಿದ ನಂತರ ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯೊಂದರಲ್ಲೇ 49 ಬೌದ್ಧ ತಾಣಗಳಿಗೆ ಬೆಂಕಿ ಇಟ್ಟು ನಾಶ ಮಾಡಿರುವುದಾಗಿ ಕಂಡುಬಂದಿದೆ. ಪುರಾತತ್ವ ಶಾಸ್ತ್ರಜ್ಞ ಆಲೋಯ್ಸ್ ಆಂಟನ್ ಫೂಹ್ರರ್ ಅವರ ಸಂಶೋಧನಾ ಪ್ರಬಂಧವೊಂದು ಈ ಸಂಗತಿಯ ಮೇಲೆ ಬೆಳಕು ಚೆಲ್ಲಿದೆ.

ಆರನೆಯ ಶತಮಾನದ ಹೂಣ ರಾಜ ಮಿಹಿರಕುಲನು ಶಿವನ ಆರಾಧಕ. ಸುಮಾರು 1,600 ಬೌದ್ಧ ಸ್ತೂಪಗಳು ಮತ್ತು ವಿಹಾರಗಳನ್ನು ನಾಶ ಮಾಡಿದ್ದಷ್ಟೇ ಅಲ್ಲದೆ ಸಾವಿರಾರು ಮಂದಿ ಭಿಕ್ಷುಗಳನ್ನು ಕೊಂದು ಹಾಕಿದ. ಗಾಂಧಾರದ ಸಾವಿರ ಸಂಘಾರಾಮಗಳು ಅಳಿದು ಅವಶೇಷಗಳಾದವು. ಉಡ್ಡಿಯಾನದ 1,400 ಸಂಘಾರಾಮಗಳಿಗೂ ಇದೇ ಸ್ಥಿತಿ ಒದಗಿತ್ತು ಎಂದು ಗುಪ್ತರ ಆಳ್ವಿಕೆಯ ನಂತರದ ಶತಮಾನಗಳಲ್ಲಿ 631ರಿಂದ 645ರ ನಡುವೆ ಹರ್ಷವರ್ಧನನ ಆಳ್ವಿಕೆಯಲ್ಲಿ ಪ್ರವಾಸ ನಡೆಸಿದ ಚೀನೀ ಯಾತ್ರಿಕ ಹ್ಯೂಯೆನ್ ತ್ಸಾಂಗ್ ದಾಖಲಿಸಿದ್ದಾನೆ. ಗೌಡದೇಶದ ರಾಜ ಶಶಾಂಕನು ಬಿಹಾರದ ಬೋಧ ಗಯಾದ ಬೋಧಿವೃಕ್ಷವನ್ನು ಕಡಿದು ಹಾಕಿಸಿದ. ಸ್ಥಳೀಯ ದೇವಾಲಯವೊಂದರಿಂದ ಬುದ್ಧನ ಪ್ರತಿಮೆಯನ್ನು ತೆಗೆದು ಮಹೇಶ್ವರನ ವಿಗ್ರಹವನ್ನು ಇರಿಸುವಂತೆ ಆದೇಶ ನೀಡಿದನೆಂದೂ ಹ್ಯೂಯೆನ್ ತ್ಸಾಂಗ್ ಹೇಳಿದ್ದಾನೆ. ಬೋಧ ಗಯಾ ಪುನಃ ಬೌದ್ಧರ ಸುಪರ್ದಿಗೆ ಬಂದದ್ದು ಬೌದ್ಧ ಮತಾವಲಂಬಿ ಪಾಲ ಸಂತತಿಯ ದೊರೆಗಳ ಕಾಲದಲ್ಲಿ. ಅಂತಾರಾಷ್ಟ್ರೀಯ ಖ್ಯಾತಿಯ ನಳಂದ ವಿಶ್ವವಿದ್ಯಾಲಯದ ವಿಶಾಲ ಸಮುಚ್ಚಯದಲ್ಲಿ ಹ್ಯೂಯೆನ್ ತ್ಸಾಂಗ್ ಐದು ವರ್ಷಗಳಿಗೂ ಹೆಚ್ಚು ಕಾಲ ವಾಸವಿದ್ದ. ಈ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಸುಟ್ಟು ಹಾಕಿದ್ದು ಭಕ್ತಿಯಾರ್ ಖಿಲ್ಜಿ ಎಂಬ ಪ್ರಚಾರದಲ್ಲಿ ತಥ್ಯಾಂಶವಿಲ್ಲ ಎಂದು ಝಾ ಹೇಳುತ್ತಾರೆ. ಹನ್ನೆರಡನೆಯ ಶತಮಾನದಲ್ಲಿ ನಿರ್ಮಿಸಲಾದ ಪುರಿಯ ಜಗನ್ನಾಥ ಮಂದಿರದ ಕೂಡ ತಲೆಯೆತ್ತಿದ್ದು ಬೌದ್ಧ ತಾಣದ ಮೇಲೆಯೇ. ಸ್ವಾಮಿ ವಿವೇಕಾನಂದರು ಕೂಡ ಈ ಅಂಶವನ್ನು ಪುಷ್ಟೀಕರಿಸಿದ್ದಾರೆ. ಜಗನ್ನಾಥ ರಥೋತ್ಸವದ ಜಗನ್ನಾಥ, ಬಲರಾಮ ಹಾಗೂ ಸುಭದ್ರರ ಪ್ರತಿಮೆಗಳ ಮೆರವಣಿಗೆಯು ಬೌದ್ಧ ಧರ್ಮದ ಬುದ್ಧ, ಧಮ್ಮ ಹಾಗೂ ಸಂಘದ ರಥೋತ್ಸವವನ್ನು ಆಧರಿಸಿದಂತಹವು ಎಂದು ಬಂಕಿಮಚಂದ್ರ ಚಟರ್ಜಿ ಕೂಡ ಹೇಳಿದ್ದಾರೆ.

ಪುರಿ ಜಿಲ್ಲೆಯ ಪೂರ್ಣೇಶ್ವರ, ಕಾಂತೇಶ್ವರ, ಕೇದಾರೇಶ್ವರ, ಸೋಮೇಶ್ವರ ಹಾಗೂ ಅಂಗೇಶ್ವರ ದೇವಾಲಯಗಳನ್ನು ಬೌದ್ಧ ವಿಹಾರಗಳ ಮೇಲೆ ಕಟ್ಟಲಾಗಿದೆ ಇಲ್ಲವೇ ಬೌದ್ಧ ವಿಹಾರಗಳ ಸಾಮಗ್ರಿಗಳಿಂದ ಕಟ್ಟಲಾಗಿದೆ ಎಂಬುದು ಝಾ ವಾದ.

ಎಪಿಗ್ರಾಫಿಯಾ ಇಂಡಿಯಾದ ಇಪ್ಪತ್ತನಾಲ್ಕನೆಯ ಸಂಪುಟದ 141-144 ಪುಟಗಳಲ್ಲಿ ದಾಖಲಾಗಿರುವ ಸಂಗತಿಯಿದು- ’ದಕ್ಷಿಣ ಭಾರತದ ರಾಜ ವೀರ ಗೊಗ್ಗಿದೇವ ತನ್ನನ್ನು ತಾನು ಜೈನ ಶಾಸನಗಳ ಪಾಲಿನ ಬೆಂಕಿ ಎಂದೂ, ಜಿನ ಅನುಯಾಯಿಗಳೆಂಬ ವನ್ಯಮೃಗಗಳ ಬೇಟೆಗಾರನೆಂದೂ, ಬೌದ್ಧ ಕಟ್ಟಳೆಗಳ ನೆಲಸಮಗಾರನೆಂದೂ’ ಬಣ್ಣಿಸಿಕೊಂಡಿದ್ದಾನೆ. ಲೋಕಾಯತ-ಚಾರ್ವಾಕ ಮುಂತಾದ ಬ್ರಾಹ್ಮಣೇತರ ಕೃತಿಗಳ ಉದ್ದೇಶಪೂರ್ವಕ ನಾಶವನ್ನು ಈ ಸಂಪುಟದಲ್ಲಿ ಬಣ್ಣಿಸಲಾಗಿದೆ. ನಾಗಾರ್ಜುನಕೊಂಡದಂತಹ ಬೃಹತ್ ಬೌದ್ಧ ವಿಹಾರವನ್ನು ನಾಶಪಡಿಸಲಾಗುತ್ತದೆ. ಶಂಕರದಿಗ್ವಿಜಯದ ಪ್ರಕಾರ ಹೊಸದಾಗಿ ನಿಯುಕ್ತರಾದ ಬ್ರಹ್ಮಕ್ಷತ್ರ ರಾಜರು ಬೌದ್ಧ ಮತಾವಲಂಬಿಗಳನ್ನು ಕೊಲ್ಲುವಂತೆಯೂ, ಅವರನ್ನು ಕೊಲ್ಲಲು ಒಪ್ಪದವರನ್ನು ಕೂಡ ಸಂಹರಿಸಲು ಕ್ಷತ್ರಿಯರಿಗೆ ಆದೇಶ ನೀಡುತ್ತಾರೆ.

ಈಗ, ಕೆಡವಲಾದ ಈ ಬೌದ್ಧ ಜೈನ ನೆಲೆಗಳನ್ನೂ ಮರು ನಿರ್ಮಿಸಲಾಗುವುದೇ?


ಇದನ್ನೂ ಓದಿ: ಪಠ್ಯಪುಸ್ತಕ ಬದಲಿಸಿದವರ ಗುರಿ ’ಕರ್ನಾಟಕ’ವೂ ಆಗಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...