Homeಮುಖಪುಟಬಹುಜನ ಭಾರತ; ಮರೆಯಾದ ಮಂಡಲ್ ರಾಜಕಾರಣದ ದನಿ ಸಮಾಜವಾದಿ ಮುಲಾಯಂಸಿಂಗ್

ಬಹುಜನ ಭಾರತ; ಮರೆಯಾದ ಮಂಡಲ್ ರಾಜಕಾರಣದ ದನಿ ಸಮಾಜವಾದಿ ಮುಲಾಯಂಸಿಂಗ್

- Advertisement -
- Advertisement -

ಸಮಾಜವಾದೀ ಪಾರ್ಟಿಯ ಮುಲಾಯಂ ಏಕಾಏಕಿ ಹೀಗೇಕೆ ಎಂದು ಕಳೆದ ಐವತ್ತು ವರ್ಷಗಳಲ್ಲಿ ರಾಜಕಾರಣಿಗಳು, ರಾಜಕೀಯ ವೀಕ್ಷಕರು ತಲೆಕೆಡಿಸಿಕೊಂಡ ಅನೇಕ ಸಂದರ್ಭಗಳಿವೆ. ಆದರೆ ಏಕಾಏಕಿ ಹೀಗೇಕೆ ಎಂಬ ಪ್ರಶ್ನೆ ಮುಲಾಯಂ ಸಿಂಗ್ ಅವರನ್ನು ತಾಕಲೇ ಇಲ್ಲ. ಅಥವಾ ಅವರು ತಗುಲಿಸಿಕೊಳ್ಳದೆ ನಿರಂತರ ಕೊಡವಿಕೊಳ್ಳುತ್ತಲೇ ಮುಂದೆ ನಡೆದುಬಿಟ್ಟರು. ಇಂತಹ ರಾಜನೀತಿಯ ಗಣಿತ ರಕ್ತಗತ ಈ ಒರಟು ಸಮಾಜವಾದಿಗೆ.

ರಾಮಮನೋಹರ ಲೋಹಿಯಾ, ಚೌಧರಿ ಚರಣಸಿಂಗ್ ಹಾಗೂ ಜಯಪ್ರಕಾಶ ನಾರಾಯಣ ಅವರಲ್ಲಿ ಭರವಸೆ ಹುಟ್ಟಿಸಿ ದೇಶದ ರಾಜಕಾರಣದಲ್ಲಿ ಕಾಂಗ್ರೆಸ್ ವಿರೋಧಿ ರಂಗವನ್ನು ಕಟ್ಟಿಸಿದ ಪ್ರಮುಖರಲ್ಲಿ ಮುಖ್ಯರು ಮುಲಾಯಂಸಿಂಗ್. 1962ರ ಫರ್ರ್‍ಊಕಾಬಾದ್ ಲೋಕಸಭಾ ಉಪ ಚುನಾವಣಾ ಪ್ರಚಾರದಲ್ಲಿ ಲೋಹಿಯಾ ಕಣ್ಣಿಗೆ ಬಿದ್ದಿದ್ದ ಚುರುಕಿನ ಹುಡುಗ ಮುಲಾಯಂ.

ಮಗ ಜಗಜ್ಜೆಟ್ಟಿ ಆಗಲೆಂಬುದು ಮುಲಾಯಂ ತಂದೆಯ ಆಸೆಯಾಗಿತ್ತು. ಹಾಗೆಯೇ ಅಸಾಧಾರಣ ಕುಸ್ತಿ ಪಟುವೂ ಆಗಿ ರೂಪುಗೊಂಡರು. ಸರಿಯಾದ ಅವಕಾಶ ನೋಡಿ ಪಟ್ಟುಹಾಕಿ ಎದುರಾಳಿಯನ್ನು ಚಿತ್ ಮಾಡಬೇಕೆಂಬ ಅಖಾಡಾದ ನಿಯಮವನ್ನು ರಾಜಕಾರಣದಲ್ಲಿ ಕಡೆಯತನಕ ಮರೆಯಲಿಲ್ಲ. ಚಾರ್ಖಾ ಹೆಸರಿನ ಕುಸ್ತಿ ಪಟ್ಟೊಂದು ಅವರಿಗೆ ಕರತಲಾಮಲಕ ಆಗಿತ್ತು. ತಮ್ಮ ರಾಜಕೀಯ ಗುರು ನಥ್ಥುಸಿಂಗ್‌ರ ಕಣ್ಣಿಗೆ ಬಿದ್ದದ್ದು ಕೆಂಪು ಮಣ್ಣಿನ ಕುಸ್ತಿ ಅಖಾಡದಲ್ಲೇ. 1962ರಲ್ಲಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳ ಪ್ರಚಾರ ನಡೆದಿದ್ದ ದಿನಗಳು. ನಥ್ಥುಸಿಂಗ್ ಸಂಯುಕ್ತ ಸಮಾಜವಾದಿ ಪಾರ್ಟಿಯ ಜಸ್ವಂತ್ ನಗರ್ ಕ್ಷೇತ್ರದ ಹುರಿಯಾಳು. ಕುಸ್ತಿ ನೋಡಲು ಬಂದ ನಥ್ಥುಸಿಂಗ್ ಮುಲಾಯಂ ಸೆಣಸಿಗೆ ಮನಸೋತಿದ್ದರು. ಕುಸ್ತಿ ಪಂದ್ಯವೊಂದರಲ್ಲಿ ಮುಲಾಯಂ ಸ್ನಾಯುಬಲ ನಥ್ಥುಸಿಂಗ್ ಕಣ್ಣು ಕುಕ್ಕಿತ್ತು. ಅಂದಿನಿಂದ ಎದುರಾಳಿಯನ್ನು ಚಿತ್ತು ಮಾಡುವ ಕಲೆ ಅವರಿಗೆ ಕೈ ಕೊಟ್ಟದ್ದು ವಿರಳವೇ ಎನ್ನಬೇಕು

ಚೌಧರಿ ಚರಣಸಿಂಗ್

ಕುಸ್ತಿ ನೋಡಲು ಬಂದಿದ್ದ ನಥ್ಥು ಸಿಂಗ್ ಹಿಂದೆಯೇ ನಡೆದ ಮುಲಾಯಂ ಚುನಾವಣಾ ಪ್ರಚಾರದಲ್ಲಿ ತೊಡಗಿಬಿಟ್ಟರು. ಎಸ್.ಎಸ್.ಪಿ. ಜೊತೆ ಅವರ ಬೆಸುಗೆ ಗಟ್ಟಿಯಾಗಿತ್ತು. 1967ರಲ್ಲಿ ಅದೇ ಜಸ್ವಂತ್ ನಗರದಿಂದ ಎಸ್.ಎಸ್.ಪಿ. ಉಮೇದುವಾರರಾಗಿ ಕಣಕ್ಕಿಳಿದರು. ಆ ಚುನಾವಣೆಯಲ್ಲಿ ಪ್ರಬಲ ಎದುರಾಳಿ ಲಖ್ಖನ್ ಸಿಂಗ್ ಯಾದವ್ ಅವರನ್ನು ಸೋಲಿಸಿದ್ದರು ಮುಲಾಯಂ. ಅಲ್ಲಿಂದಾಚೆಗೆ ಸೋಲಿಲ್ಲದ ಸರದಾರನೆಂದೇ ಹೆಸರಾದರು. ಹತ್ತು ಸಲ ವಿಧಾನಸಭೆಗೆ ಮತ್ತು ಏಳು ಬಾರಿ ಲೋಕಸಭೆಗೆ ಆರಿಸಿಬಂದರು. ಮೂರು ಸಲ ಮುಖ್ಯಮಂತ್ರಿಯಾದರು. ಒಮ್ಮೆ ಕೇಂದ್ರ ರಕ್ಷಣಾ ಸಚಿವರಾದದ್ದು ಉಂಟು.

1974ರಲ್ಲಿ ಸಂಯುಕ್ತ ಸಮಾಜವಾದಿ ಪಾರ್ಟಿಯನ್ನು ತೊರೆದು ಚೌಧರಿ ಚರಣಸಿಂಗ್ ಅವರ ಭಾರತೀಯ ಲೋಕದಳ ಸೇರಿದ್ದರು. 1987ರಲ್ಲಿ ಚರಣಸಿಂಗ್ ನಿಧನದ ನಂತರ ಅಜಿತ್ ಸಿಂಗ್ ಜೊತೆ ಭಿನ್ನಾಭಿಪ್ರಾಯದ ಕಾರಣ ಭಾರತೀಯ ಲೋಕದಳ ಹೋಳಾಯಿತು. ಲೋಕದಳ (ಬಿ) ಸೇರಿದರು. ಎರಡೂ ಲೋಕದಳಗಳು ಜನತಾದಳದಲ್ಲಿ ವಿಲೀನವಾದವು. 1989ರಲ್ಲಿ ಜನತಾದಳ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಮುಲಾಯಂ ಮೊದಲ ಸಲ ಮುಖ್ಯಮಂತ್ರಿಯಾದರು. ಆಗ ಕೈ ತಪ್ಪಿದ ಉತ್ತರ ಪ್ರದೇಶ ರಾಜ್ಯಾಧಿಕಾರ ಈಗಲೂ ಕಾಂಗ್ರೆಸ್ ಕೈ ವಶ ಆಗಿಲ್ಲ.

ಮೈನ್‌ಪುರಿ-ಇಟಾವಾ ಎಂಬುದು ಉತ್ತರಪ್ರದೇಶದ ಹಿಂದುಳಿದ ಸೀಮೆ. ಅತಿ ಅಗ್ಗದ ಪಿಸ್ತೂಲುಗಳನ್ನು ಉತ್ತರಭಾರತದ ಆಡುಭಾಷೆಯಲ್ಲಿ ಕಟ್ಟಾ ಎಂದು ಕರೆಯಲಾಗುತ್ತದೆ. ಇಂತಹ ಪಿಸ್ತೂಲುಗಳ ಹೇರಳ ತಯಾರಿಕೆ ಮೈನ್‌ಪುರಿಯ ಗೋಪ್ಯ ಗುಡಿ ಕೈಗಾರಿಕೆ. 1967ರಿಂದ 1992ರ ತನಕ ಪಕ್ಷದಿಂದ ಪಕ್ಷಕ್ಕೆ ಜಿಗಿದ ಈ ಊಸರವಳ್ಳಿ ಮುಖ್ಯಮಂತ್ರಿಯಾಗಲು ಬಿಜೆಪಿಯಿಂದ ಹಿಡಿದು ಬಿಎಸ್‌ಪಿಯ ತನಕ ನೆರವು ಪಡೆಯದ ರಾಜಕೀಯ ಪಕ್ಷಗಳೇ ಇಲ್ಲ. ಕಾಂಗ್ರೆಸ್ಸಿನ ಊರುಗೋಲು ಹಿಡಿದದ್ದು ಎರಡು ಬಾರಿ. ಬಿಜೆಪಿಯ ಬೆಂಬಲ ಪಡೆದದ್ದು ಒಮ್ಮೆ ಪ್ರತ್ಯಕ್ಷವಾಗಿ ಮತ್ತೊಮ್ಮೆ ಪರೋಕ್ಷವಾಗಿ. 92ರಲ್ಲಿ ತಾವೇ ರಚಿಸಿದ ಸಮಾಜವಾದಿ ಪಾರ್ಟಿಯ ಸೂತ್ರ ಹಿಡಿದು ನೆಲೆಗೊಂಡರು. 1989ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದದ್ದು ಜನತಾದಳ ಪಕ್ಷದಿಂದ. ಬಿಜೆಪಿಯ ಬೆಂಬಲದಿಂದ ದಕ್ಕಿದ್ದ ಪಟ್ಟವಿದು. ಪ್ರಧಾನಿ ವಿ.ಪಿ.ಸಿಂಗ್ ಅವರು ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ಕಲ್ಪಿಸುವ ಮಂಡಲ್ ಆಯೋಗದ ವರದಿಯನ್ನು ಜಾರಿ ಮಾಡಿದ ನಂತರ ಮಂಡಲದ ವಿರುದ್ಧ ಕಮಂಡಲ ಕತ್ತಿ ಹಿರಿದ ಕಾಲಘಟ್ಟ; ಮುಲಾಯಂ ಕುರ್ಚಿ ಅಲ್ಲಾಡತೊಡಗಿತ್ತು. ಮಂಡಲದ ವಿರುದ್ಧ ಕಮಂಡಲವನ್ನು ಹೂಡಿ ಹಿಂದೂಗಳನ್ನು ಬಾಬರಿ ಮಸೀದಿ ವಿರುದ್ಧ ಕೆರಳಿಸಿದ ಆಡ್ವಾಣಿಯವರ ರಾಮ ರಥಯಾತ್ರೆ ಆರಂಭವಾಗಿತ್ತು. ರಥಯಾತ್ರೆಯನ್ನು ಸ್ವಾಗತಿಸಲು ಮತ್ತು ಬಾಬರಿ ಮಸೀದಿಯನ್ನು ಕೆಡವುವ ಕರಸೇವೆ ಮಾಡಲು 1990ರ ಅಕ್ಟೋಬರ್ 30ರ ಮುಹೂರ್ತ ನಿಗದಿಯಾಗಿತ್ತು. ಬಾಬರಿ ಮಸೀದಿಯನ್ನು ಕೆಡವುವುದಿರಲಿ, ಅದರ ಮೇಲೆ ಪಾರಿವಾಳ ಕೂಡ ರೆಕ್ಕೆ ಬಡಿಯಲು ಬಿಡುವುದಿಲ್ಲ ಎಂದು ಸರ್ಪಗಾವಲು ಹಾಕಿದರು ಮುಲಾಯಂ. ಅಯೋಧ್ಯೆಯಲ್ಲಿ ಸಾವಿರಾರು ಕರಸೇವಕರು ಜಮೆಯಾದರು. ಕೆರಳಿ ಪೊಲೀಸರೊಂದಿಗೆ ಘರ್ಷಣೆಗೆ ಇಳಿದ ಕರಸೇವಕರನ್ನು ನಿಯಂತ್ರಿಸಲು ಮುಲಾಯಂ ಸರ್ಕಾರ ಗೋಲಿಬಾರ್‌ಗೆ ಆದೇಶ ನೀಡಿತ್ತು. 28 ಮಂದಿ ಕರಸೇವಕರು ಗೋಲಿಬಾರ್‌ನಲ್ಲಿ ಮಡಿದರು. ಬಾಬರಿ ಮಸೀದಿ ಅಂದು ಬೀಳಲಿಲ್ಲ ನಿಜ. ಆದರೆ ಎರಡು ವರ್ಷಗಳ ನಂತರ ಕೇಂದ್ರದಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಉತ್ತರಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ಅವರ ಬಿಜೆಪಿ ಸರ್ಕಾರದ ಹಯಾಮಿನಲ್ಲಿ ಬಾಬರಿ ಮಸೀದಿ ನೆಲಸಮವಾಯಿತು.

28 ಮಂದಿ ಕರಸೇವಕರ ಸಾವಿಗೆ ಕಾರಣರಾದರೆಂದು ಕ್ರುದ್ಧಗೊಂಡ ಬಿಜೆಪಿ ಮುಲಾಯಂ ಹೆಸರಿನ ಹಿಂದೆ ಮುಲ್ಲಾ ಎಂಬ ವಿಶೇಷಣವನ್ನು ಸೇರಿಸಿತು. ಮುಲ್ಲಾ ಮುಲಾಯಂ ಸಿಂಗ್ ಎಂಬ ಅಭಿದಾನ ಬಹಳ ಕಾಲದ ತನಕ ಮುಲಾಯಂ ಹೆಗಲೇರಿದ ಒಜ್ಜೆಯಾಗಿ ಉಳಿಯಿತು. 28 ಕರಸೇವಕರನ್ನು ಮುಲಾಯಂ ಗೋಲಿಬಾರ್‌ನಲ್ಲಿ ಕಳೆದುಕೊಂಡು ಬಾಬರಿ ಮಸೀದಿ ಧ್ವಂಸ ಕಾರ್ಯಾಚರಣೆಯಲ್ಲಿ ಹಿನ್ನಡೆ ಎದುರಿಸಿದ ಬಿಜೆಪಿ ಮರು ವರ್ಷ(1991) ನಡೆದ ವಿಧಾನಸಭಾ ಚುನಾವಣೆಗಳನ್ನು ಗೆದ್ದು ಅಧಿಕಾರ ಹಿಡಿಯಿತು. ಆದರೆ ಉತ್ತರಪ್ರದೇಶದ ಮುಸಲ್ಮಾನ ಸಮುದಾಯದ ಮುಲಾಯಂ ನಿಷ್ಠೆ ಬಹುತೇಕ ಅಚಲವಾಗಿ ಉಳಿಯಿತು. 2009ರಲ್ಲಿ ಕಲ್ಯಾಣ್ ಸಿಂಗ್ ಸಹವಾಸ ಮಾಡಿದ ಮುಲಾಯಂ ಅವರನ್ನು ಮುಸಲ್ಮಾನರು ದೂರಮಾಡಿ ಲೋಕಸಭೆಗೆ ಕಾಂಗ್ರೆಸ್ ಕೈ ಹಿಡಿದಿದ್ದರು.

ಈ ನಡುವೆ ಕೇಂದ್ರದ ತ್ರಿಶಂಕು ರಾಜಕಾರಣದ ಲಾಭದ ವಾಸನೆ ಹಿಡಿದ ಮುಲಾಯಂ 2004ರಲ್ಲಿ ಲೋಕಸಭೆಗೆ ಗೆದ್ದು ಬಂದರು. ಆದರೆ ಯುಪಿಎ ಎಡಪಕ್ಷಗಳ ಬಾಹ್ಯ ಬೆಂಬಲ ಪಡೆದು ಅಧಿಕಾರ ಹಿಡಿಯಿತು. ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ರಾಜ್ಯ ರಾಜಕಾರಣಕ್ಕೆ ಮರಳಿ ಮುಖ್ಯಮಂತ್ರಿಯಾಗಿ ಮುಂದುವರಿದರು. 2007ರ ವಿಧಾನಸಭಾ ಚುನಾವಣೆಗಳಲ್ಲಿ ದಾಪುಗಾಲಿಟ್ಟ ಮಾಯಾವತಿ ಬಹುಜನಸಮಾಜ ಪಾರ್ಟಿಯ ಆನೆ ಮುಲಾಯಂ ಅವರನ್ನು ರಾಜಕೀಯವಾಗಿ ಮೆಟ್ಟಿ ನಜ್ಜುಗುಜ್ಜು ಮಾಡಿತ್ತು.

ದಶಕಗಳ ಕಾಲ ನಡೆಸಿದ ರಾಜಕಾರಣ ಅವರನ್ನು ’ವಾಸ್ತವವಾದಿ’ ಎಂಬ ಮುಸುಕಿನ ಮರೆಯಲ್ಲಿ ಅವಕಾಶವಾದಿ ರಾಜಕಾರಣಿಯಾಗಿ ರೂಪಿಸಿತ್ತು. ರಾಮಮನೋಹರ ಲೋಹಿಯಾ, ರಾಜನಾರಾಯಣ್, ಚರಣ್ ಸಿಂಗ್ ರೂಪಿಸಿದ್ದ ವ್ಯಕ್ತಿತ್ವ ಕಾಲಕಾಲಕ್ಕೆ ಪೊರೆ ಕಳಚಿ ಬಂಡವಾಳವಾದಿಗಳು ಮತ್ತು ಭಾರೀ ಉದ್ಯಮ ಸದನಗಳ ಸಂಗದಲ್ಲಿ ಮಿಂದಿತ್ತು. ಸಮಾಜವಾದಿ ವಿಚಾರ ಪ್ರಣಾಳಿಕೆ ಮುಲಾಯಂ ಪಕ್ಷದ ಹೆಸರಿಗಷ್ಟೇ ಸೀಮಿತ ಆಯಿತು. ಅಮರ್ ಸಿಂಗ್ ಮಾದರಿಯ ಪವರ್ ಬ್ರೋಕರ್ ಮುಲಾಯಂ ಅವರ ನೆಚ್ಚಿನ ಬಂಟನಾದರು. ಬಾಲಿವುಡ್ ತಾರೆಗಳ ಬೆಡಗಿನ ಲೋಕ ಅವರ ಕಣ್ಣಾಲಿಗಳನ್ನು ತುಂಬಿ ತೇಲಿಸಿತು.

ವಿಮಾನಯಾನಗಳ ನಡುವೆ ಮನೆಯಿಂದ ಥರ್ಮಾಸ್ ಫ್ಲಾಸ್ಕ್‌ಗಳಲ್ಲಿ ತುಂಬಿ ತರುತ್ತಿದ್ದ ಮಜ್ಜಿಗೆಯನ್ನು ಕುಡಿಯುತ್ತಿದ್ದ ದಿನಗಳಿಂದ ಬಹುದೂರ ನಡೆದು ಬಂದಿದ್ದರು. ರಾಜಕಾರಣದಲ್ಲಿ ಅವರ ನಿಷ್ಠೆ ಯಾರಿಗೂ ಇಲ್ಲ. 1996ರಲ್ಲಿ ದೇವೇಗೌಡರ ಸಂಪುಟದಲ್ಲಿ ರಕ್ಷಣಾ ಮಂತ್ರಿ. ಹಠಾತ್ತನೆ ಕಾಂಗ್ರೆಸ್ ಬೆಂಬಲವನ್ನು ಸೀತಾರಾಮ ಕೇಸರಿ ವಾಪಸು ಪಡೆದಾಗ ಗೌಡರ ಜಾಗದಲ್ಲಿ ಪ್ರಧಾನಿ ಆಗುವ ಅವಕಾಶ ಮುಲಾಯಂ ಕೈ ತಪ್ಪಿದ್ದು ಕೂದಲೆಳೆಯ ಅಂತರದಲ್ಲಿ. ಅಂದಿನಿಂದ ಬಹು ಕಾಲ ಪ್ರಧಾನಿ ಪದವಿಯ ಬಯಕೆಯ ಬೆಂಕಿಯನ್ನು ಎದೆಯಲ್ಲಿ ಆರದೆ ಉರಿಸಿಕೊಂಡೇ ಬಂದಿದ್ದರು.

1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಲೋಕಸಭೆಯಲ್ಲಿ ಬಹುಮತ ಸಾಬೀತು ಮಾಡಲಾಗದೆ 13 ದಿನಗಳ ಅಲ್ಪಾಯುಷ್ಯದ ನಂತರ ಅವಸಾನಗೊಂಡಿತ್ತು. ಎರಡನೆಯ ಅತಿದೊಡ್ಡ ಪಕ್ಷ ಕಾಂಗ್ರೆಸ್ಸನ್ನು ಸರ್ಕಾರ ರಚಿಸುವಂತೆ ರಾಷ್ಟ್ರಪತಿ ಆಹ್ವಾನಿಸಿದ್ದರು. ಸರ್ಕಾರ ರಚನೆಗೆ ಅಗತ್ಯವಿರುವ 272 ಸದಸ್ಯರ ಬೆಂಬಲ ತಮಗೆ ಇರುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಾರಿದ್ದರು. ಈ 272ರ ಪೈಕಿ ಮುಲಾಯಂ ಸಿಂಗ್ ಅವರ ಸಮಾಜವಾದಿ ಪಾರ್ಟಿಯ20 ಸದಸ್ಯ ಬಲವೂ ಸೇರಿತ್ತು. ಆದರೆ ಮುಲಾಯಂ ಸಿಂಗ್ ಹಿಂದೆಗೆದಿದ್ದರು.

ವಿದೇಶಿ ಮೂಲದ ಸೋನಿಯಾ ಪ್ರಧಾನಿಯಾಗುವುದು ಸೂಕ್ತವಲ್ಲ ಎಂದು ಬಹಿರಂಗವಾಗಿ ಸಾರಿ, ತಮ್ಮ ಬೆಂಬಲ ಇಲ್ಲವೆಂದು ರಾಷ್ಟ್ರಪತಿಗೆ ಪತ್ರ ನೀಡಿದರು ಕೂಡ. ಹೀಗೆ ಅವರು ನಿಲುವು ಬದಲಾಯಿಸುವ ಮುನ್ನ ಬಿಜೆಪಿಯ ತಲೆಯಾಳು ಎಲ್.ಕೆ.ಆಡ್ವಾಣಿ ಅವರನ್ನು ಭೇಟಿ ಮಾಡಿದ್ದರು. ಆಡ್ವಾಣಿಯವರೇ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿರುವ ಈ ಘಟನೆಯನ್ನು ಮುಲಾಯಂ ಕಡೆತನಕ ಅಲ್ಲಗಳೆಯಲಿಲ್ಲ. 1991ರ ಏಪ್ರಿಲ್ 21ರ ರಾತ್ರಿ. ವಾಜಪೇಯಿ ರಾಜೀನಾಮೆ ಸಲ್ಲಿಸಿ ಮೂರೇ ದಿನಗಳು ಉರುಳಿದ್ದವು. ಈ ಭೇಟಿಯನ್ನು ಏರ್ಪಡಿಸಿದ್ದವರು ಜಾರ್ಜ್ ಫರ್ನಾಂಡಿಸ್. ಸ್ಥಳ ಸುಜನ್ ಸಿಂಗ್ ಪಾರ್ಕಿನ ಜಯಾ ಜೇಟ್ಲಿ ಅವರ ಮನೆ. ಗೋಪ್ಯ ಕಾಪಾಡಲೆಂದು ಜಯಾ ಜೇಟ್ಲಿ ತಾವೇ ಓಡಿಸುತ್ತಿದ್ದ ತಮ್ಮ ಕಾರಿನಲ್ಲಿ ಆಡ್ವಾಣಿ ಅವರನ್ನು ಕರೆದೊಯ್ದಿದ್ದರು. ಆಗಲೇ ಕಾಯುತ್ತಿದ್ದ ಮುಲಾಯಂ ಕಾಂಗ್ರೆಸ್ ಸರ್ಕಾರ ರಚನೆಗೆ ಬೆಂಬಲ ನೀಡುವುದಿಲ್ಲವೆಂದು ಅಡ್ವಾಣಿ ಅವರಿಗೆ ಮಾತು ಕೊಟ್ಟರು. ಕೊಟ್ಟ ಮಾತಿನಂತೆ 23ರಂದು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಸೋನಿಯಾಗೆ ತಮ್ಮ ಬೆಂಬಲ ಇಲ್ಲವೆಂದು ಪತ್ರ ನೀಡಿದರು ಕೂಡ. ಕಾಂಗ್ರೆಸ್ ಸರ್ಕಾರ ರಚನೆಯ ಪ್ರಯತ್ನಕ್ಕೆ ಸೋಲಾಗಿತ್ತು.

ಸೋನಿಯಾ ಗಾಂಧಿ

ಇಂತಹುದೇ ಇನ್ನೊಂದು ಉದಾಹರಣೆ. 2008ರ ಜುಲೈ ತಿಂಗಳು. ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ವಿರೋಧಿಸಿ ಎಡಪಕ್ಷಗಳು ಯುಪಿಎಗೆ ನೀಡಿದ್ದ ತಮ್ಮ ಬಾಹ್ಯ ಬೆಂಬಲವನ್ನು ವಾಪಸು ಪಡೆದಿದ್ದವು. ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿದ್ದ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದೀ ಪಾರ್ಟಿ ಏಕಾಏಕಿ ನಿಲವು ಬದಲಿಸಿತ್ತು. ಈ ಒಪ್ಪಂದ ದೇಶಹಿತ ಸಾಧನೆಯದು ಎಂದು ಡಾ.ಕಲಾಂ ಹೇಳಿದ್ದಾರೆ. ನಾವು ಸರ್ಕಾರದೊಂದಿಗಿದ್ದೇವೆ ಎಂದಿತು. ಡಾ.ಮನಮೋಹನ ಸಿಂಗ್ ಸರ್ಕಾರ ವಿಶ್ವಾಸಮತಯಾಚನೆಯಲ್ಲಿ ಗೆದ್ದಿತ್ತು.

ಈ ಎರಡೂ ನಿರ್ಧಾರಗಳ ಹಿಂದೆ ಮುಲಾಯಂ ತಮ್ಮ ಹಿತಸಾಧನೆಯನ್ನು ಪ್ರಧಾನವಾಗಿ ಇಟ್ಟುಕೊಂಡೇ ದಾಳ ಉರುಳಿಸಿದ್ದರು ಎಂಬುದರಲ್ಲಿ ಸಂಶಯವೇ ಇಲ್ಲ. ಆ ಹಿತ ಏನು ಬೇಕಾದರೂ ಆಗಿರಬಹುದು..

ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ನಂತರ ಅವರೊಂದಿಗೂ ಮುಲಾಯಂ ಕಟ್ಟಿಕೊಂಡಿದ್ದ ಸ್ನೇಹಸೇತುವೆಯ ಗೋಪ್ಯ ಬಹುಕಾಲ ಗುಟ್ಟಾಗಿ ಉಳಿಯಲಿಲ್ಲ.

ಡಕಾಯಿತರ ರಾಣಿ ಎಂಬ ಅಭಿದಾನ ಪಡೆದಿದ್ದ ಫೂಲನ್ ದೇವಿ ಲೋಕಸಭೆಗೆ ಆಯ್ಕೆಯಾಗಿ ಸದನದಲ್ಲಿ ನಿಂತು ಸಾಮಾಜಿಕ ನ್ಯಾಯದ ಕುರಿತು ಮಾತನಾಡಿದ ಐತಿಹಾಸಿಕ ಗಳಿಗೆಗಳನ್ನು ದೇಶದ ತಳಸಮುದಾಯಗಳು ತಲೆದೂಗಿ ಸ್ವಾಗತಿಸಿದ್ದವು. ಆದರೆ ಮಧ್ಯಮವರ್ಗಿಗಳು ಪುರೋಹಿತಶಾಹಿಗಳು ಜನತಂತ್ರದ ದುರ್ಗತಿಯಿದು ಎಂದು ಹಳಿದಿದ್ದವು. ಇಂತಹ ಗಳಿಗೆಗಳನ್ನು ಆಗು ಮಾಡಿದ್ದ ಕೀರ್ತಿ ಮುಲಾಯಂಗೆ ಸಲ್ಲಬೇಕು. ಆಕೆಯ ವಿರುದ್ಧದ ಎಲ್ಲ ಕೇಸುಗಳನ್ನು ವಾಪಸು ಪಡೆದು ಸಮಾಜವಾದಿ ಪಾರ್ಟಿಯ ಟಿಕೆಟ್ ನೀಡಿ ಮಿರ್ಜಾಪುರ ಕ್ಷೇತ್ರದಿಂದ ಗೆಲ್ಲಿಸಿ ಲೋಕಸಭೆಗೆ ಕರೆತಂದಿದ್ದವರು ಇದೇ ಮುಲಾಯಂಸಿಂಗ್.

ಭಾರತದ ಮಂಡಲ್ ರಾಜಕಾರಣ ಮತ್ತು ಕಾಂಗ್ರೆಸ್ ವಿರೋಧಿ ರಾಜಕಾರಣದ ಬಹುದೊಡ್ಡ ಅಧ್ಯಾಯವೊಂದು ಕೊನೆಯಾಗಿದೆ ಎಂಬುದು ಸವಕಲು ಮಾತಾದರೂ ನಿಜ.


ಇದನ್ನೂ ಓದಿ: ಹಿಜಾಬ್: ‘ವಿಭಿನ್ನ ತೀರ್ಪು’ ನೀಡಿದ ಸುಪ್ರಿಂಕೋರ್ಟ್‌ ದ್ವಿಸದಸ್ಯ ಪೀಠ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...