Homeಕರ್ನಾಟಕವಿಶ್ಲೇಷಣೆ: ರಾಜ್ಯ ರಾಜಕಾರಣದಲ್ಲಿ ದಲಿತರನ್ನು ಒಡೆದು ಆಳುವುದು ಸುಲಭವೇ?

ವಿಶ್ಲೇಷಣೆ: ರಾಜ್ಯ ರಾಜಕಾರಣದಲ್ಲಿ ದಲಿತರನ್ನು ಒಡೆದು ಆಳುವುದು ಸುಲಭವೇ?

“ದಲಿತರ ಮತಗಳನ್ನು ಬಿಜೆಪಿ ಕೇಂದ್ರೀಕರಿಸುತ್ತಿರುವುದು ಹೇಗೆ? ದಲಿತ ರಾಜಕಾರಣ ಎದುರಿಸುತ್ತಿರುವ ಬಿಕ್ಕಟ್ಟುಗಳೇನು?”

- Advertisement -
- Advertisement -

ಭಾರತ ಜಾತಿ ಆಧಾರಿತ ದೇಶ. ಜಾತಿ ಸಮೀಕರಣಗಳೇ ಇಲ್ಲಿನ ಚುನಾವಣೆ ಫಲಿತಾಂಶವನ್ನು ನಿರ್ಧರಿಸುತ್ತವೆ ಎಂದು ಬಿಡಿಸಿ ಹೇಳಬೇಕಿಲ್ಲ. ಆದರೆ ಈ ಜಾತಿ ಲೆಕ್ಕಾಚಾರದಲ್ಲಿ ಬಲಾಢ್ಯ ಸಮುದಾಯಗಳಿಗೆ ಕಾಡದ ಬಿಕ್ಕಟ್ಟನ್ನು ದಲಿತ ಹಾಗೂ ಹಿಂದುಳಿದ ಸಮುದಾಯಗಳು ಎದುರಿಸುತ್ತವೆ.

ಕರ್ನಾಟಕದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಲೇ ಚುನಾವಣೆಯ ರಂಗು ಬಿರುಸುಪಡೆದಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನು ಒಡೆಯುವ ಲೆಕ್ಕಾಚಾರದಲ್ಲಿ ಬಿಜೆಪಿ ಸಕ್ರಿಯವಾಗಿದ್ದಂತೆ ಕಾಣುತ್ತಿದೆ. ಹೀಗಾಗಿ ದಲಿತ ಮತಗಳನ್ನು ಕೇಂದ್ರೀಕರಿಸಿರುವುದು ಬಿಜೆಪಿಯ ಇತ್ತೀಚಿನ ನಡೆಗಳಿಂದ ಸ್ಪಷ್ಟವಾಗುತ್ತಿದೆ.

ಜಸ್ಟೀಸ್ ಎಚ್.ಎನ್.ನಾಗಮೋಹನದಾಸ್ ಸಮಿತಿಯ ಶಿಫಾರಸ್ಸಿನ ಅನ್ವಯ ಎಸ್‌.ಸಿ. ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ, ಎಸ್‌.ಟಿ. ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ಚುನಾವಣೆಯ ಹೊಸ್ತಿಲಲ್ಲಿ ತೆಗೆದುಕೊಂಡಿರುವ ಈ ನಿರ್ಧಾರದ ಹಿಂದೆ ಜಾತಿ ಲೆಕ್ಕಾಚಾರ ಇರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೀಸಲಾತಿ ಹೆಚ್ಚಳದ ಬೆನ್ನಲ್ಲೇ ಒಳಮೀಸಲಾತಿಯ ಚರ್ಚೆ ಮುನ್ನೆಲೆಗೆ ಬಂದಿದೆ. ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿಯನ್ನು ತರಬೇಕು ಎಂಬುದು ಮೂರು ದಶಕದ ಕೂಗು. ಎಸ್‌ಸಿಯೊಳಗಿನ ಸ್ಪೃಶ್ಯ ಜಾತಿಗಳೇ ಮೀಸಲಾತಿಯನ್ನು ಕಬಳಿಸುತ್ತಿವೆ ಎನ್ನುವ ದೂರು ವ್ಯಾಪಕವಾದ ಹಿನ್ನೆಲೆಯಲ್ಲಿ 2005ರ ಸೆಪ್ಟೆಂಬರ್‌ನಲ್ಲಿ ಧರಂಸಿಂಗ್ ನೇತೃತ್ವದ ಸರಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಆಯೋಗವನ್ನು ರಚಿಸಿತು. ಸದಾಶಿವ ಆಯೋಗ(2005)ವು ಕೇವಲ 2 ವರ್ಷದ ಸಮೀಕ್ಷಾ ಕಾರ್ಯದ ಮಿತಿ ಹೊಂದಿತ್ತಾದರೂ, ಹಣಕಾಸು ಹಾಗೂ ಇನ್ನಿತರ ಸಮರ್ಪಕ ಸೌಲಭ್ಯ ದೊರೆಯದೆ 7 ವರ್ಷಗಳ ನಂತರ ಸಾಕಷ್ಟು ವಿಳಂಬವಾಗಿ 2012ರ ಜೂನ್‌ನಲ್ಲಿ ತನ್ನ ಶಿಫಾರಸು ವರದಿಯನ್ನು ನೀಡಿತು. ಆಗ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದರು.

ಜಸ್ಟೀಸ್ ಎ.ಜೆ.ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿನ 101 ಉಪಪಂಗಡಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ, ಶೇ.15ರ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಿದೆ. ಅದರಂತೆ ಶೇ. 33.4ರಷ್ಟಿರುವ ಎಡಗೈ(ಮಾದಿಗ) ಸಮುದಾಯಕ್ಕೆ ಶೇ. 6ರಷ್ಟು, ಶೇ. 32ರಷ್ಟಿರುವ ಬಲಗೈ (ಹೊಲೆಯ) ಸಮುದಾಯಕ್ಕೆ ಶೇ. 5ರಷ್ಟು, ಶೇ. 23.64ರಷ್ಟಿರುವ ಸ್ಪೃಶ್ಯ ಪರಿಶಿಷ್ಟರಿಗೆ ಶೇ. 3ರಷ್ಟು ಹಾಗೂ ಇತರೆ ಪರಿಶಿಷ್ಟರಿಗೆ ಶೇ. 1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿದೆ. ಅಲ್ಲದೆ ರಾಜ್ಯದಲ್ಲಿರುವ 20.54 ಲಕ್ಷ ಕುಟುಂಬಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಾಹಿತಿ, 96 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಸರ್ವೆ, 1.58 ಲಕ್ಷ ಉದ್ಯೋಗಿಗಳನ್ನು ಸಮೀಕ್ಷೆಗೆ ಒಳಪಡಿಸಿದೆ.

ಇದನ್ನೂ ಓದಿರಿ: ಚಿಕ್ಕಮಗಳೂರು: ಬಿಜೆಪಿ ಮುಖಂಡನ ದೌರ್ಜನ್ಯದಿಂದ ಮಗು ಕಳೆದುಕೊಂಡ ತಾಯಿಗೆ ಮಗು ಮರಳಿಸುವಿರೇ?- ಕಾಂಗ್ರೆಸ್

ಆರ್‌ಟಿಐ ಮಾಹಿತಿಯೊಂದರ ಪ್ರಕಾರ ಒಟ್ಟು ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ ಲಭ್ಯವಿರುವ ಮೀಸಲಾತಿಯಲ್ಲಿ ಅವಕಾಶ ಪಡೆದು ಕೇಂದ್ರ, ರಾಜ್ಯಗಳಲ್ಲಿ 1,38,000 ಜನರು ಸೇವೆ ಸಲ್ಲಿಸುತ್ತಿದ್ದಾರೆ.  ಶೇ. 6ರಂತೆ ಮಾದಿಗ ಜಾತಿಗೆ ಸಿಗಬೇಕಾದ ಒಟ್ಟು ಹುದ್ದೆಗಳ ಸಂಖ್ಯೆ 55,200. ಪ್ರಸ್ತುತ ಸಿಕ್ಕಿರುವ ಹುದ್ದೆಗಳು 23,000 ಮಾತ್ರ. ಅಂದರೆ 32,000 ಹುದ್ದೆಗಳಿಂದ ಮಾದಿಗ ಜಾತಿ ವಂಚಿತವಾಗಿದೆ.

ಪರಿಶಿಷ್ಟ ಜಾತಿಗೆ ಎಷ್ಟೇ ಮೀಸಲಾತಿಯನ್ನು ಹೆಚ್ಚಿಸಿದರೂ ಒಳಮೀಸಲಾತಿ ಜಾರಿಯಾಗದಿದ್ದರೆ, ಅಸ್ಪೃಶ್ಯರಿಗೆ ಅದರ ಲಾಭ ಆಗುವುದಿಲ್ಲ. ಹೀಗಾಗಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಾಗಬೇಕು, ವರದಿಯು ಸಾರ್ವಜನಿಕ ಚರ್ಚೆಗೆ ಒಳಪಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಒಳಮೀಸಲಾತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ನಾಯಕರೆಲ್ಲರೂ ನೀಡುತ್ತಿದ್ದಾರೆ. ಅಂದರೆ ಒಳಮೀಸಲಾತಿಗಾಗಿ ಮೂರು ದಶಕಗಳಿಂದಲೂ ಹೋರಾಡುತ್ತ ಬಂದಿದ್ದ ಮಾದಿಗ ಸಮುದಾಯದ ಮತಗಳನ್ನು ಬಿಜೆಪಿ ಗುರಿಯಾಗಿಸಿಕೊಂಡಿರುವುದು ಸ್ಪಷ್ಟ.

ಮೀಸಲಾತಿ ಹೆಚ್ಚಳದ ನಂತರ ಮಾದರ ಚೆನ್ನಯ್ಯ ಸ್ವಾಮೀಜಿಯವರಿಂದ ಹೇಳಿಕೆಗಳನ್ನು ಕೊಡಿಸುತ್ತಿರುವುದು, ಮಾದಿಗ ಸಮುದಾಯದ ಬಿಜೆಪಿ ನಾಯಕ ಗೋವಿಂದ ಕಾರಜೋಳ ಅವರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು, ದಲಿತರ ಮನೆಗೆ ಹೋಗಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಊಟ ಮಾಡುತ್ತಿರುವುದು- ಮೊದಲಾದವು ಚುನಾವಣಾ ಹೊಸ್ತಿಲಲ್ಲಿ ಪ್ರಯೋಗಿಸುತ್ತಿರುವ ಅಸ್ತ್ರಗಳಾಗಿವೆ. ಮತ್ಯಾವುದೇ ಜಾತಿಗಳ ಸಮಸ್ಯೆಗಳಿಗೆ ತೋರದಷ್ಟು ಆಸಕ್ತಿಯನ್ನು ದಲಿತರ ವಿಚಾರಕ್ಕೆ ತೋರಲಾಗುತ್ತಿದೆ.

ಇದನ್ನೂ ಓದಿರಿ: ಸುರಪುರ: ಬೌದ್ಧಧಮ್ಮಕ್ಕೆ ಮರಳುವ ಮುನ್ನ ಹಿಂದೂ ದೇವರುಗಳ ಫೋಟೋ ನದಿಗೆ ವಿಸರ್ಜನೆ

ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲೇ ಒಳಮೀಸಲಾತಿ ಜಾರಿಗೊಳಿಸುವುದಾಗಿ ಮಾದಿಗ ಸಮುದಾಯಕ್ಕೆ ಭರವಸೆಯನ್ನು ನೀಡಿದ್ದರಿಂದ ದೊಡ್ಡಮಟ್ಟದಲ್ಲಿ ಮಾದಿಗ ಸಮುದಾಯ ಬಿಜೆಪಿಯನ್ನು ಬೆಂಬಲಿಸಿತ್ತು. ಆಪರೇಷನ್‌ ಕಮಲದ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಈವರೆಗೆ ಏನನ್ನೂ ಮಾಡದೆ ಕೊನೆ ಕ್ಷಣದಲ್ಲಿ ಮೀಸಲಾತಿಯ ಮಾತನಾಡುತ್ತಿದೆ. (ಸಿದ್ದರಾಮಯ್ಯನವರು ತಮ್ಮ ಅಧಿಕಾರವಧಿಯ ಕೊನೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಿದ್ದರು. ಆ ನಂತರದಲ್ಲಿ ಇದು ಚರ್ಚೆಗೆ ಬರಲಿಲ್ಲ. ಕೊನೆ ಕ್ಷಣದ ಕಸರತ್ತು ಸಮುದಾಯವನ್ನು ಒಡೆಯುವ ತಂತ್ರವೆಂದು ಭಾವಿಸಿದ್ದ ಲಿಂಗಾಯತರು, ಯಡಿಯೂರಪ್ಪನವರ ನೇತೃತ್ವದ ಬಿಜೆಪಿಯನ್ನು ಬೆಂಬಲಿಸಿದ್ದರು. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ತೋರಿದ ಆತುರವನ್ನು ಸದಾಶಿವ ಆಯೋಗದ ವರದಿ ಜಾರಿಗೆ ತೋರಲಿಲ್ಲ. ಒಳಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಕ್ರಮ ಜರುಗಿಸಲಿಲ್ಲ.)

ಕರ್ನಾಟಕ ರಾಜಕಾರಣದಲ್ಲಿ ಪ್ರಬಲ ಜಾತಿಗಳಾದ ಲಿಂಗಾಯತ, ಒಕ್ಕಲಿಗ ಸಮುದಾಯಗಳು ತಮ್ಮ ರಾಜಕೀಯ ನೆಲೆಗಳನ್ನು ಗುರುತಿಸಿಕೊಂಡಂತೆ ಅಸ್ಪೃಶ್ಯ ಸಮುದಾಯಕ್ಕೆ ಒಂದು ನಿರ್ದಿಷ್ಟವಾದ ರಾಜಕೀಯ ವೇದಿಕೆ ಇಲ್ಲದಿರುವುದು ಹಾಗೂ ಅಸ್ಪೃಶ್ಯ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಮತಗಳು ಚದುರಿ ಹೋಗುತ್ತಿರುವುದು ಸಮುದಾಯದ ಹಿತಾಸಕ್ತಿಯ ದೃಷ್ಟಿಯಲ್ಲಿ ಆತಂಕ ಉಂಟು ಮಾಡಿದೆ. ಬಹುದೊಡ್ಡ ಅಸ್ಪೃಶ್ಯ ಸಮುದಾಯಗಳಾದ ಮಾದಿಗ ಹಾಗೂ ಹೊಲೆಯರು ಒಂದು ವೇದಿಕೆಯಲ್ಲಿ ನಿಂತು ರಾಜಕೀಯ ಶಕ್ತಿಯಾಗಿ (political force) ರೂಪುಗೊಂಡಿಲ್ಲ. ಹೀಗಾಗಿ ದಲಿತ ರಾಜಕಾರಣ ಚದುರಿ ಹೋದಂತಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಎಂಬುದನ್ನು ಜನಸಂಖ್ಯಾ ಅಂಕಿಅಂಶಗಳೇ ಹೇಳುತ್ತವೆ. 2011ರ ಜನಗಣತಿಯ ಪ್ರಕಾರ ಜಿಲ್ಲಾವಾರು ಪ್ರಭಾವ ಹೀಗಿದೆ:

ಪರಿಶಿಷ್ಟ ಜಾತಿಗಳು: ಕೋಲಾರ 30.32 %, ಚಾಮರಾಜನಗರ 25.42 %, ಕಲಬುರಗಿ 25.28 %, ಚಿಕ್ಕಬಳ್ಳಾಪುರ 24.90 %, ಬೀದರ್‌ 23.47 %, ಚಿತ್ರದುರ್ಗ 23.45 %, ಯಾದಗಿರಿ 23.28 %, ಚಿಕ್ಕಮಗಳೂರು 22.29 %, ಬೆಂಗಳೂರು ರೂರಲ್‌ 21.57%, ಬಳ್ಳಾರಿ 21.10%, ರಾಯಚೂರು 20.79 %, ಬಿಜಾಪುರ 20.34 %, ದಾವಣಗೆರೆ 20.18%.

ಪರಿಶಿಷ್ಟ ಪಂಗಡ: ರಾಯಚೂರು 19.03 %, ಬಳ್ಳಾರಿ 18.41 %, ಚಿತ್ರದುರ್ಗ 18.23 %, ಬೀದರ್‌ 13.85 %, ಯಾದಗಿರಿ 12.51 %, ಚಿಕ್ಕಬಳ್ಳಾಪುರ 12.47 %, ದಾವಣಗೆರೆ 11.98 %, ಕೊಪ್ಪಳ 11.82 %, ಚಾಮರಾಜನಗರ 11.78 %, ಮೈಸೂರು 11.15 %, ಕೊಡಗು 10.47 %.

ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಯಾದಗಿರಿ, ಬಿಜಾಪುರ, ಕಲ್ಬುರ್ಗಿ ಬೀದರ್‌ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಯ ಜನರು ಶೇ. 20ರಿಂದ 30ರವರೆಗೆ ಇರುವುದರಿಂದ ಇಲ್ಲಿ ನಿರ್ಣಾಯಕವಾಗಲಿದ್ದಾರೆ. ಹಾಗೆಯೇ ಪರಿಶಿಷ್ಟ ಪಂಗಡದ ಮತಗಳು ಕೊಡಗು, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಶೇ. 10ರಿಂದ 20 ಇದ್ದಾರೆ. ಯಾವುದೇ ಸಮುದಾಯದ ಜನರು ಒಂದೆಡೆ ಶೇ. 10ಕ್ಕಿಂತ ಹೆಚ್ಚಿದ್ದರೆ ಚುನಾವಣೆ ಮೇಲೆ ಪ್ರಭಾವ ಬೀರುತ್ತಾರೆ. ಶೇ. 4ರಷ್ಟು ಮೀಸಲಾತಿಯನ್ನು ಒಮ್ಮೆಲೆ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದರಿಂದ ನಾಯಕ ಸಮುದಾಯದ ಮತಗಳನ್ನು ಅನಾಯಾಸವಾಗಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದೇ ಮಾತನ್ನು ಪರಿಶಿಷ್ಟ ಜಾತಿಯ ವಿಚಾರದಲ್ಲಿ ಹೇಳುವುದು ಕಷ್ಟ. ಹೊಲೆಯ ಹಾಗೂ ಮಾದಿಗ ಸಮುದಾಯಗಳ ಮತಗಳು ಒಂದೆಡೆ ಬಿದ್ದರೆ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವರು. ಸಾಂಪ್ರದಾಯಕವಾಗಿ ಕಾಂಗ್ರೆಸ್‌ನೊಂದಿಗೆ ಜೊತೆಗಿದ್ದ ದಲಿತರನ್ನು ಚದುರಿಸುವುದು ಬಿಜೆಪಿಯ ತಂತ್ರಗಾರಿಕೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ದಲಿತ ಬರಹಗಾರ ಸಾಕ್ಯ ಸಮಗಾರ, “1995ರ ನಂತರ ಬಿವಿಎಸ್ (ಬಹುಜನ ವಿದ್ಯಾರ್ಥಿ ಸಂಘ) ಕರ್ನಾಟಕದಲ್ಲಿ ಸ್ಥಾಪನೆಯಾಯಿತು. ಬಿಎಸ್‌ಪಿಯ ವಿದ್ಯಾರ್ಥಿ ಘಟಕವಾಗಿ ಕೆಲಸ ಮಾಡಲಾರಂಭಿಸಿತು. ಕಾಂಗ್ರೆಸ್ ಮತಬ್ಯಾಂಕ್ ಆಗಿದ್ದ ದಲಿತರನ್ನು ತನ್ನತ್ತ ಬಿಎಸ್‌ಪಿ ಉತ್ತರಪ್ರದೇಶದಲ್ಲಿ ಸೆಳೆದ ರೀತಿಯಲ್ಲಿಯೇ ಇಲ್ಲಿಯೂ ಪ್ರಯೋಗಗಳು ನಡೆದವು. 1995ರ ನಂತರ ರಾಜ್ಯದಲ್ಲಿ ಕೆಲವೆಡೆ ಕಾಂಗ್ರೆಸ್‌ನ ಮತಗಳು ಕಡಿಮೆಯಾಗುವಲ್ಲಿ ಬಿಎಸ್‌ಪಿ ಪಾತ್ರವೂ ಇತ್ತು. ಆದರೆ ಉತ್ತರ ಪ್ರದೇಶದಷ್ಟು ಪ್ರಭಾವವನ್ನು ಇಲ್ಲಿನ ಬಿಎಸ್‌ಪಿ ಬೀರಲಿಲ್ಲ. ದಲಿತರ ಮತಗಳು ಕಾಂಗ್ರೆಸ್‌ಗೆ ಹೋಗುವುದನ್ನು ತಡೆಯಬೇಕೆಂದು 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಸಂಘಪರಿವಾರ ಗಮನ ಹರಿಸಿತು. 2013ರ ವಿಧಾನಸಭಾ ಚುನಾವಣೆ ವೇಳೆಗೆ ಬಿಎಸ್‌ಪಿ ಪ್ರಭಾವ ಕುಸಿತ ಕಂಡಿತು. ಕಾಂಗ್ರೆಸ್‌ಗೆ ದಲಿತ ಮತಗಳು ಮರಳಿದವು. ಆದರೆ 2019ರಲ್ಲಿ ಪರಿಸ್ಥಿತಿ ಬದಲಾಯಿತು. ಉತ್ತರ ಪ್ರದೇಶದಲ್ಲಿ ದಲಿತರನ್ನು ಒಡೆದಂತೆಯೇ ಇಲ್ಲಿಯೂ ವಿಭಾಗಿಸುವ ತಂತ್ರಗಾರಿಕೆಯನ್ನು ಆರ್‌ಎಸ್‌ಎಸ್ ಹಾಗೂ ಅಮಿತ್ ಶಾ ರೂಪಿಸಿದರು” ಎಂದು ವಿವರಿಸಿದರು.

“ಯುಪಿಯಲ್ಲಿ ದಲಿತರನ್ನು ಜಾತವರು ಮತ್ತು ಜಾತವೇತರರೂ ಎಂದೂ, ಒಬಿಸಿಗಳನ್ನು ಯಾದವರು ಮತ್ತು ಯಾದವೇತರರು ಎಂದು ಒಡೆಯಲಾಯಿತು. ಕರ್ನಾಟಕದಲ್ಲಿನ ಒಳಮೀಸಲಾತಿ ಹೋರಾಟವನ್ನು ಗಮನಿಸಿದ ಸಂಘಪರಿವಾರ ಒಳಮೀಸಲಾತಿ ಬಯಸುವ ಮತ್ತು ವಿರೋಧಿಸುವ ಜಾತಿಗಳ ನಡುವೆ ಬಿರುಕು ಮೂಡಿಸಿತು. ಈ ಹಿಂದೆ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಎಸ್‌ಸಿಯೊಳಗಿನ ಭೋವಿ, ಲಂಬಾಣಿ ಜಾತಿಗಳು ದೇಶದಲ್ಲಿ ಮೋದಿ ಅಧಿಕಾರವಧಿ ಆರಂಭವಾದ ನಂತರ ಬಿಜೆಪಿ ತೆಕ್ಕೆಗೆ ಬಂದರು. ಶೇ. 50ಕ್ಕಿಂತ ಹೆಚ್ಚು ಮತಗಳು ಬಿಜೆಪಿಗೆ ಮಾರುಹೋದವು. ಹೀಗಾಗಿ ಬಿಜೆಪಿಯವರು ಎಸ್‌ಸಿಯೊಳಗಿನ ಹೊಲೆಯ ಮಾದಿಗರತ್ತ ಗಮನ ಹರಿಸಿದರು. ಇವರನ್ನು ಒಡೆಯುವುದು ಪಕ್ಷಕ್ಕೆ ಅನಿವಾರ್ಯವಾಗಿತ್ತು” ಎಂದು ವಿಶ್ಲೇಷಿಸುತ್ತಾರೆ ಸಾಕ್ಯ ಸಮಗಾರ.

“ಈ ವೇಳೆಗಾಗಲೇ ಜಾತಿ ಗಣತಿಯ ಅಂಕಿ-ಅಂಶಗಳು ಸೋರಿಕೆಯಾಗಿದ್ದವು. ಪರಿಶಿಷ್ಟ ಜಾತಿಯಲ್ಲಿ ಒಂದು ಕೋಟಿ ಎಂಟು ಲಕ್ಷ ಜನರಿದ್ದಾರೆಂದು ತಿಳಿದುಬಂತು. ಶೇ. 80ರಷ್ಟು ದಲಿತರು ಹೊಲೆಯ ಹಾಗೂ ಮಾದಿಗರಿದ್ದಾರೆಂದು ಬಯಲಾಯಿತು. ಇಷ್ಟು ಪ್ರಬಲವಾದ ಕಾಂಗ್ರೆಸ್ ಮತಬ್ಯಾಂಕ್‌ಅನ್ನು ಒಡೆಯಬೇಕೆಂದು ಆರ್‌ಎಸ್‌ಎಸ್ ಪ್ರವೇಶಿಸಿತು. ಒಳಮೀಸಲಾತಿ ಚರ್ಚೆಯ ಬಿರುಕನ್ನು ಗಮನಿಸಿದ ಬಿಜೆಪಿ, ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿತು. ಹೀಗಾಗಿ ಬಹಿರಂಗವಾಗಿ ಬಿಜೆಪಿಯನ್ನು ಮಾದಿಗ ಸಮುದಾಯ ಬೆಂಬಲಿಸಿತು. ಕೊಟ್ಟ ಮಾತಿಗೆ ತಪ್ಪಿದ ಕಾರಣ ಬಿಜೆಪಿಗೆ ಈಗ ಭಯ ಶುರುವಾಗಿದೆ” ಎಂದು ತಿಳಿಸಿದರು.

“ಒಳಮೀಸಲಾತಿಯನ್ನು ಏಕಾಏಕಿ ಜಾರಿ ಮಾಡಲು ಸಾಧ್ಯವಿಲ್ಲ. ಒಳಮೀಸಲಾತಿ ಹೋರಾಟದ ಮೂಲಕ ಮುಂಚೂಣಿಗೆ ಬಂದ, ಕೇಂದ್ರದಲ್ಲಿ ರಾಜ್ಯ ಖಾತೆ ಸಚಿವರೂ ಆಗಿರುವ ನಾರಾಯಣಸ್ವಾಮಿಯವರೇ ಈಗ ಒಳಮೀಸಲಾತಿ ಜಾರಿ ಅಸಾಧ್ಯ ಎಂದಿದ್ದಾರೆ. ಒಳಮೀಸಲಾತಿ ಬೇಡ ಎನ್ನುತ್ತಿರುವ ಲಂಬಾಣಿ, ಭೋವಿ ಸಮುದಾಯವೂ ಬಿಜೆಪಿಗೆ ಬೇಕು; ಮಾದಿಗ, ಹೊಲೆಯ ಸಮುದಾಯವೂ ಬೇಕು. 2019ರ ಕಣ್ಣಾಮುಚ್ಚಾಲೆ ಆಟ ಈಗ ಸಫಲವಾಗುವುದಿಲ್ಲ. ಕೊಟ್ಟ ಭರವಸೆಯನ್ನು ಈಡೇರಿಸಿಕೊಂಡಿಲ್ಲ. ಸಂವಿಧಾನ ತಿದ್ದುಪಡಿಯ ಮೂಲಕವೇ ಒಳಮೀಸಲಾತಿ ಆಗಬೇಕಾಗಿದೆ. ಸ್ಪೃಶ್ಯ-ಅಸ್ಪೃಶ್ಯರ ನಡುವಿನ ಹಗ್ಗಜಗ್ಗಾಟ ಬಿಜೆಪಿಗೆ ನುಂಗಲಾರದ ತುಪ್ಪ” ಎಂದು ಅಭಿಪ್ರಾಯಪಟ್ಟರು.

“ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯ ಸ್ಪೃಶ್ಯರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಳಮೀಸಲಾತಿ ಜಾರಿ ವಿಚಾರವು ಅಷ್ಟು ಸುಲಭವಲ್ಲ, ಹೋರಾಟ ತೀವ್ರವಾಗಬೇಕು. ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಪೋಷಿಸುವ ಕೋಮುವಾದಿಗಳಿಗೆ ಕಳೆದ ಚುನಾವಣೆಯಲ್ಲಿ ದಲಿತರು ಮತ ನೀಡಿರುವುದು ಆತಂಕಕಾರಿ. ದಲಿತರೊಳಗಿನ ಬಿರುಕನ್ನು ಬಿಜೆಪಿ ಚೆನ್ನಾಗಿ ಗ್ರಹಿಸಿದಂತಿದೆ” ಎಂದು ಹೇಳಿದರು.

ಅಂಬೇಡ್ಕರ್‌ವಾದಿ ಬರಹಗಾರ ರಘೋತ್ತಮ ಹೊ.ಬ. ಪ್ರತಿಕ್ರಿಯಿಸಿ, “ಒಳ ಮೀಸಲಾತಿ ಬಗ್ಗೆ ಕಳೆದ 25 ವರ್ಷಗಳಿಂದ ಮಾದಿಗ ಸಮುದಾಯ ಹೋರಾಟ ಮಾಡುತ್ತಿದೆ. ಹೊಲೆಯ, ಛಲವಾದಿ ಅಥವಾ ಬಲಗೈ ಸಮುದಾಯ ಇದನ್ನು ತನ್ನ ವಿರುದ್ಧದ ಹೋರಾಟವೆಂದು ಭಾವಿಸಿದೆ. ಆದರೆ ವಾಸ್ತವ ಬೇರೆಯೇ ಇದೆ. ಹೊಲೆಯ ಮತ್ತು ಮಾದಿಗ ಎರಡೂ ಅಸ್ಪೃಶ್ಯ ಸಮುದಾಯಗಳ ಪಾಲು ಎಸ್ಸಿ ಪಟ್ಟಿಯಲ್ಲಿ ಇರುವ ಸ್ಪೃಶ್ಯ ಸಮುದಾಯಗಳಿಗೆ ದಕ್ಕುತ್ತಿದೆ. ಅಂದಹಾಗೆ ಇಲ್ಲಿ ನಾವು ಎಸ್ಸಿ ಪಟ್ಟಿಯಲ್ಲಿ ಇರುವ ಸ್ಪೃಶ್ಯ ಸಮುದಾಯಗಳ ವಿರೋಧಿಗಳಾಗಬೇಕಿಲ್ಲ. ಆದರೆ ಯಾರ ಜನಸಂಖ್ಯೆ ಎಷ್ಟೋ ಅಷ್ಟು ನಮ್ಮ ಪಾಲು ಸಿಗಬೇಕಿದೆ. ಈ ನಿಟ್ಟಿನಲ್ಲಿ ಎಸ್ಸಿ ಮೀಸಲಾತಿ ಶೇ. 17 ಕ್ಕೆ ಏರಿದರೂ ಅದರ ಲಾಭ ಎಸ್ಸಿ ಪಟ್ಟಿಯಲ್ಲಿ ಇರುವ ಸ್ಪೃಶ್ಯ ಸಮುದಾಯಗಳಿಗೆ ದಕ್ಕುತ್ತದೆ. ಇದಕ್ಕೆ ಪರಿಹಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವುದೇ ಆಗಿದೆ. ಆದ್ದರಿಂದ ಸಮಸ್ಯೆಯ ಗಂಭೀರತೆ ಅರಿತುಕೊಂಡು ಹಳೆಯ ವಿರೋಧಿಸುವ ಚಾಳಿ ಬಿಟ್ಟು ಬಲಗೈ/ ಛಲವಾದಿ/ ಹೊಲೆಯ ಸಮುದಾಯ ಕೂಡ ಒಳ ಮೀಸಲಾತಿಗಾಗಿ ಒತ್ತಾಯಿಸಬೇಕಿದೆ” ಎಂದು ಕೋರಿದರು.

ಬಿಡುಗಡೆಯೇ ಆಗದ ವರದಿ ಜಾರಿ ಸಾಧ್ಯವೇ?: ಮೀಸಲಾತಿ ಹೆಚ್ಚಳದ ಕುರಿತು ಸಿ.ಎಸ್.ದ್ವಾರಕನಾಥ್‌ ಅಭಿಪ್ರಾಯ

ದಲಿತರನ್ನು ಕೇಂದ್ರೀಕರಿಸಿ ಬಿಜೆಪಿ ಇಟ್ಟಿರುವ ಹೆಜ್ಜೆಗಳ ಕುರಿತು ಎಚ್ಚರಿಕೆ ಅಗತ್ಯ ಎನ್ನುತ್ತಾರೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕನಾಥ್. ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ಕನ್‌ವಿನ್ಸ್ (ಮನವೊಲಿಕೆ) ಅಥವಾ ಕನ್‌ಪ್ಯೂಸ್‌ (ಗೊಂದಲ ಮೂಡಿಸುವುದು) ಸಂಘಪರಿವಾರದ ತಂತ್ರಗಾರಿಕೆ. ಆರಂಭದಿಂದಲೂ ಮೀಸಲಾತಿಯನ್ನು ಆರ್‌ಎಸ್‌ಎಸ್‌ ವಿರೋಧಿಸುತ್ತಾ ಬಂದಿದೆ. ಮೂಲಭೂತವಾಗಿ ಮೀಸಲಾತಿಯನ್ನು ಇವರು ಒಪ್ಪಲ್ಲ ಎಂಬುದು ಅನೇಕ ಸಂದರ್ಭಗಳಿಂದ, ನಡವಳಿಕೆಗಳಿಂದ, ಸರ್ಕಾರ ತೆಗೆದುಕೊಂಡ ನಿರ್ಣಯಗಳಿಂದ ಸ್ಪಷ್ಟವಾಗುತ್ತದೆ. ಮೀಸಲಾತಿ ತೆರವು ಮಾಡುವುದು ಕಷ್ಟವೆಂದು ಅರಿತ ಮೇಲೆ, ಅದನ್ನು ಗೊಂದಲಮಯಗೊಳಿಸುವ ಕೆಲಸಕ್ಕೆ ಕೈಹಾಕಿದ್ದಾರೆ” ಎಂದು ಎಚ್ಚರಿಸಿದರು.

“ಮೀಸಲಾತಿ ಹೆಚ್ಚಳ ಮಾಡುವುದಾಗಿ ಈಗ ಹೇಳಿದ್ದಾರೆ. ಮೇಲ್ನೋಟಕ್ಕೆ ಒಳ್ಳೆಯ ನಿರ್ಧಾರದಂತೆ ಸಮುದಾಯಗಳು ಭಾವಿಸುತ್ತವೆ. ವಾಸ್ತವಗಳು ಬೇರೆ ಇವೆ. ಜಸ್ಟೀಸ್‌ ನಾಗಮೋಹನದಾಸ್‌ ಅವರ ವರದಿಯನ್ನು ಇವರು ಬಿಡುಗಡೆ ಮಾಡಿದ್ದಾರಾ? ಅದನ್ನು ಯಾರು ನೋಡಿದ್ದಾರೆ? ಯಾರು ಓದಿದ್ದಾರೆ?” ಎಂದು ಪ್ರಶ್ನಿಸಿದರು.

“ನಾಗಮೋಹನದಾಸ್ ಅವರು ತಮ್ಮ ವರದಿಯ ಕುರಿತು ಸಂಕ್ಷಿಪ್ತ ಪತ್ರಿಕಾ ಹೇಳಿಕೆಯನ್ನು ವರದಿ ಸಲ್ಲಿಸುವಾಗ ನೀಡಿದ್ದರು. ಮೀಸಲು ಹೆಚ್ಚಳಕ್ಕೆ ನೀಡಿರುವ ಅಂಕಿ-ಅಂಶಗಳೇನು? ಯಾವ ಮಾನದಂಡಗಳನ್ನು ಅನುಸರಿಸಿದ್ದಾರೆ? ಇತ್ಯಾದಿ ಅಂಶಗಳು ತಿಳಿಯಬೇಕಾದರೆ ವರದಿಯನ್ನು ಬಿಡುಗಡೆ ಮಾಡಬೇಕು. ಸಾರ್ವಜನಿಕವಾಗಿ ಹಾಗೂ ಸದನದಲ್ಲಿ ಚರ್ಚೆಯಾಗಬೇಕು. ಇದ್ಯಾವುದೂ ಆಗಿಲ್ಲ” ಎಂದು ವಿಷಾದಿಸಿದರು.

“ಮೀಸಲಾತಿಯಂತಹ ಯಾವುದೇ ವಿಚಾರದಲ್ಲಿ ಸುಪ್ರೀಂಕೋರ್ಟ್ ಅಂಕಿ-ಅಂಶಗಳನ್ನು ಕೇಳುತ್ತಿದೆ. ಇಡೀ ದೇಶದಲ್ಲಿ ಅಂಕಿ-ಅಂಶವನ್ನು ಹೊಂದಿರುವ ರಾಜ್ಯ ಕರ್ನಾಟಕ. ಕಾಂತರಾಜ ಆಯೋಗದ ವರದಿ ನಮ್ಮ ಬಳಿ ಇದೆ. ಬಿಜೆಪಿಯರಿಗೆ ಪ್ರಾಮಾಣಿಕತೆ ಇದ್ದರೆ ಮೊದಲು ಇದನ್ನು ಬಿಡುಗಡೆ ಮಾಡಿ, ನಂತರ ನಾಗಮೋಹನದಾಸ್ ಅವರ ವರದಿಯನ್ನು ಜಾರಿಮಾಡಬೇಕು” ಎಂದು ಒತ್ತಾಯಿಸಿದರು.

ಇವುಗಳನ್ನು ಓದಿರಿ: ದಲಿತರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ‘ದಲಿತ್ ಫೈಲ್ಸ್‌’ ಕ್ಯಾಟಗರಿಯಲ್ಲಿ ಓದಬಹುದು-  ಇಲ್ಲಿ ಕ್ಲಿಕ್ ಮಾಡಿರಿ

ಕಾಂಗ್ರೆಸ್‌ ಮುಖಂಡರೂ ಆಗಿರುವ ಸಿ.ಎಸ್.ದ್ವಾರಕನಾಥ್‌, “ಮೀಸಲಾತಿ ವಿಚಾರಗಳನ್ನು ಗೊಂದಲಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲ್ಲ. ಮೊದಲಿನಿಂದಲೂ ಮೀಸಲಾತಿ ಪರವಾಗಿಯೇ ಕಾಂಗ್ರೆಸ್ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸುಳ್ಳುಗಳ ಮೂಲಕವೇ ಅಧಿಕಾರ ನಡೆಸುವ ಬಿಜೆಪಿಯ ಎದುರು ಕಾಂಗ್ರೆಸ್ ಸ್ಪರ್ಧಿಸುವುದು ಕಷ್ಟ” ಎಂದು ಸ್ಪಷ್ಟಪಡಿಸಿದರು.

ದಲಿತ ಅಸ್ಮಿತೆಯ ಹೊಸ ಪಕ್ಷ ಕಟ್ಟಬೇಕಿದೆ: ಕೋಟಿಗಾನಹಳ್ಳಿ ರಾಮಯ್ಯ  

ಮೀಸಲಾತಿ, ಒಳಮೀಸಲಾತಿ ಜಾರಿಯ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡಿರುವ ಅಸ್ಪೃಶ್ಯ ಸಮುದಾಯಗಳು ಈ ವಿಚಾರದಲ್ಲಿ ಒಮ್ಮತಕ್ಕೆ ಬರುತ್ತಿವೆಯಾದರೂ, ಅದರಾಚೆಯ ದಲಿತ ರಾಜಕಾರಣ ಡೋಲಾಯಮಾನವಾಗಿದೆ. ಒಕ್ಕಲಿಗರು, ಲಿಂಗಾಯತರಿಗೆ ಇರುವಂತೆ ಒಂದು ರಾಜಕೀಯ ನೆಲೆ ಇಲ್ಲವಾಗಿರುವುದು ಮತ್ತೊಂದು ಬಿಕ್ಕಟ್ಟಾಗಿದೆ. ಈ ನಿಟ್ಟಿನಲ್ಲಿಯೂ ದಲಿತ ಚಿಂತಕರು ಆಲೋಚಿಸುತ್ತಿದ್ದಾರೆ.

ಹೋರಾಟಗಾರ, ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, “ದಲಿತರ ಸ್ವತಂತ್ರ ರಾಜಕೀಯ ಅಸ್ತಿತ್ವಕ್ಕೆ ಅವಕಾಶವೇ ಇಲ್ಲ ಎಂಬ ವಾತಾವರಣವನ್ನು ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಎದುರಿಸಿದ ಸೋಲು ಉಂಟು ಮಾಡಿದೆ. ಕರ್ನಾಟಕದಲ್ಲಿ ದಲಿತ ಅಸ್ತಿತ್ವ ಇರುವ ರಾಜಕಾರಣವನ್ನು ರೂಪಿಸುವ ಕೆಲಸ ಮೊದಲು ಆಗಬೇಕಿದೆ. ಕರ್ನಾಟಕದ ರಾಜಕಾರಣ ಮುಂದೇನಾಗುತ್ತದೆ ಎಂದು ಸದ್ಯಕ್ಕೆ ನಿರ್ಧರಿಸಲಾಗದು. ಆದರೆ ಹೊಸ ಪ್ರಾದೇಶಿಕ ಪಕ್ಷವೊಂದು ಅಗತ್ಯವಾಗಿ ಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

“ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಹೊರತಾದ ರಾಜಕಾರಣ ಕರ್ನಾಟಕದಲ್ಲಿ ರೂಪುಗೊಳ್ಳದಿದ್ದರೆ ಯಥಾಸ್ಥಿತಿಯಲ್ಲೇ ಮುಂದುವರಿಯುತ್ತೇವೆ. ದಲಿತರು ಪ್ರತ್ಯೇಕವಾದ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಗಿದೆ. ಬೇರೆ ದಾರಿಯೇ ಇಲ್ಲ” ಎಂದು ಎಚ್ಚರಿಸಿದರು.

“ಸದ್ಯದ ಪರಿಸ್ಥಿತಿಯಲ್ಲಿ ಪ್ರಜ್ಞಾವಂತರು, ಎಡಪಂಥೀಯರು, ದಲಿತ, ರೈತ, ಕಾರ್ಮಿಕರು- ತಮ್ಮ ಅಸ್ತಿತ್ವ ಕರಗಿ ಹೋಗದಂತೆ ಉಳಿಸಿಕೊಳ್ಳಬೇಕಾಗಿದೆ. ಬಿಜೆಪಿಯಂತಹ ಅಪಾಯಕಾರಿ ಪಕ್ಷವನ್ನು ವಿರೋಧಿಸಬೇಕಾಗಿದೆ” ಎಂದು ಮನವಿ ಮಾಡಿದರು.

ಕೊನೆಯದಾಗಿ…

ರಾಜ್ಯ ಬಿಜೆಪಿ ಸರ್ಕಾರ ಈವರೆಗೆ ದಲಿತರ ವಿಚಾರಗಳಿಗೆ ಸಂಬಂಧಿಸಿದಂತೆ ಗಂಭೀರವಾಗಿರಲಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಪ್ರತಿವರ್ಷವೂ ಕಡಿತ ಮಾಡಿದ್ದು ಏತಕ್ಕೆ? ದಲಿತರಿಗೆ ಮೀಸಲಾದ ಹಣವನ್ನು ಅನ್ಯಕಾರ್ಯಗಳಿಗೆ ದುರುಪಯೋಗ ಮಾಡಿಕೊಳ್ಳುವ ಯತ್ನಗಳು ನಡೆಯುತ್ತಿವೆಯಲ್ಲ ಏಕೆ? ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದೇಕೆ? ಮತಾಂತರ ನಿಷೇಧ ಕಾಯ್ದೆಯನ್ನು ತಂದು ದಲಿತರ ಧಾರ್ಮಿಕ ಸ್ವತಂತ್ರಕ್ಕೆ ಅಡ್ಡಿಯಾಗಿದ್ದು ಸರಿಯೇ? ಪಠ್ಯಪುಸ್ತಕದಲ್ಲಿ ಅಂಬೇಡ್ಕರ್‌ ವಿಚಾರಧಾರೆಗೆ ವಿರುದ್ಧವಾಗಿ ಬ್ರಾಹ್ಮಣೀಕರಣ ಮಾಡಿದ್ದು ಸರಿಯೇ? ಹೊಸಧರ್ಮಗಳ ಉದಯ ಪಾಠವನ್ನು ಕಿತ್ತುಹಾಕಿದ್ದು ಏನನ್ನು ಸೂಚಿಸುತ್ತದೆ? ದಲಿತ ವಿರೋಧಿಯಾಗಿ ನಡೆದುಕೊಂಡ ಸರ್ಕಾರ ಕೊನೆ ಕ್ಷಣದಲ್ಲಿಯೂ ದಲಿತರನ್ನು ವಿಭಾಗಿಸಲು ಹೊರಟಿರುವುದು ಏನನ್ನು ಸೂಚಿಸುತ್ತದೆ? ಮತ್ತೊಂದೆಡೆ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್‌, ಪರಿಶಿಷ್ಟ ಜಾತಿಗಳ ವಿಚಾರದಲ್ಲಿ ನಿಷ್ಕ್ರಿಯವಾಗಿರುವುದು ಢಾಳಾಗಿ ಕಾಣುತ್ತಿದೆ. ಇಂದಿನ ರಾಜಕೀಯ ಬಿಕ್ಕಟ್ಟುಗಳಲ್ಲಿನ ಕಾಂಗ್ರೆಸ್ ಪಾಲನ್ನು ಕಡೆಗಣಿಸಲು ಸಾಧ್ಯವಿಲ್ಲ.

ಪಂಜಾಬ್ ಚುನಾವಣೆಯ ಫಲಿತಾಂಶ ಕರ್ನಾಟಕದ ದಲಿತರನ್ನು ಎಚ್ಚರಿಸಲಿದೆಯೇ? ಕ್ಯಾಪ್ಟನ್ ಅಮರಿಂದರ್ ಸಿಂಗ್ ದುರಾಡಳಿತ ಹಾಗೂ ಪಕ್ಷದೊಳಗಿನ ಕಿತ್ತಾಟ ಮುಗಿಲು ಮುಟ್ಟಿ, ಚುನಾವಣೆ ಆರು ತಿಂಗಳು ಇರುವಾಗ ಕಾಂಗ್ರೆಸ್, ದಲಿತ ಸಿಎಂ ದಾಳ ಹಾಕಿತು. ಸಿಖ್ ದಲಿತರಾದ ಚರಣ್ ಜಿತ್ ಸಿಂಗ್ ಚೆನ್ನಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಆದರೆ ಅತಿ ಹೆಚ್ಚು ದಲಿತರಿರುವ ಪಂಜಾಬಿನ ಚುನಾವಣಾ ಫಲಿತಾಂಶ ಉಲ್ಟಾ ಹೊಡೆಯಿತು. ಚುನಾವಣೆ ಹತ್ತಿರದಲ್ಲಿದ್ದಾಗ ದಲಿತರನ್ನು ದಾಳವಾಗಿ ಕಾಂಗ್ರೆಸ್ ಬಳಸಿದೆ ಎಂಬ ಸಂದೇಶ ರವಾನೆಯಾಯಿತು. ಅಮರಿಂದರ್ ಸಿಂಗ್ ಮಾಡಿದ ಯಡವಟ್ಟು ಹಾಗೂ ಚುನಾವಣೆ ಹತ್ತಿರದಲ್ಲಿದ್ದಾಗ ಮಾಡಿದ ಜಾತಿ ತಂತ್ರಗಾರಿಕೆಯನ್ನು ಪಂಜಾಬ್‌ ಜನತೆ ಅನುಮಾನದಿಂದ ನೋಡಿದರೆಂದು ಅನಿಸುವುದಿಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...