Homeನ್ಯಾಯ ಪಥಹುಣ್ಣಿಮೆ ಹಾಡು- 200; ’ಆದಿಮ’ ಸಾಂಸ್ಕೃತಿಕ ಲೋಕಕ್ಕೆ ಶರಣು

ಹುಣ್ಣಿಮೆ ಹಾಡು- 200; ’ಆದಿಮ’ ಸಾಂಸ್ಕೃತಿಕ ಲೋಕಕ್ಕೆ ಶರಣು

- Advertisement -
- Advertisement -

ಕೋಲಾರ ನಗರಕ್ಕೆ ಹೊಂದಿಕೊಂಡ ಶತಶೃಂಗ ಶ್ರೇಣಿಯ ತೇರಹಳ್ಳಿ ಬೆಟ್ಟದ ಮೇಲಿನ ಶಿವಗಂಗೆ ಗ್ರಾಮದಲ್ಲಿ ಒಂದೂವರೆ ದಶಕದ ಹಿಂದೆ ಆರಂಭವಾದ ’ಆದಿಮ ಸಾಂಸ್ಕೃತಿಕ ಕೇಂದ್ರದತ್ತ ಈಗ ಎಲ್ಲರ ಚಿತ್ತ. ಸಾಂಸ್ಕೃತಿಕವಾಗಿ ಕೋಲಾರದ ನೆಲ ಬಂಜರೇನೂ ಅಲ್ಲ. ಆದರೆ ಅಲ್ಲಿ ಪಾತಿ ಮಾಡಿ, ನಾಟಿ ಹಾಕುವ ಕೈಂಕರ್ಯ ಅಗತ್ಯವಿತ್ತು. ಆ ಕೆಲಸವನ್ನು ನಿರಂತರ ಮಾಡುತ್ತಾ ಬಂದಿರುವ ಆದಿಮ ಈಗ ಎಲ್ಲರೂ ನಿಬ್ಬೆರಗಾಗಲು ಕಾರಣವಾಗಿದೆ. ಆದಿಮ ಬಿತ್ತಿದ ’ಹುಣ್ಣಿಮೆ ಹಾಡು’ ಎಂಬ ಸಾಂಸ್ಕೃತಿಕ ಬೀಜಕ್ಕೆ ಈಗ ಇನ್ನೂರರ ಸಂಭ್ರಮ. ಏನಾದರೂ ಕಟ್ಟಬೇಕು ಎಂಬ ಕ್ರಿಯಾಶೀಲ ಮನಸ್ಸುಗಳು ಒಂದೆಡೆ ಸೇರಿದರೆ ಅದ್ಭುತ ಲೋಕವೇ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿರುವ ಆದಿಮ, ತನ್ನ ನಿರಂತರ ಪ್ರಯೋಗಗಳಿಂದಾಗಿ ಸೂಜಿಗಲ್ಲಿನಂತೆ ಸೆಳೆಯುತ್ತಲೇ ಇದೆ.

ದಲಿತ ಚಳವಳಿಗಳ ನೆಲ ಕೋಲಾರ. ಸಾಂಸ್ಕೃತಿಕವಾಗಿಯೂ ವೈಶಿಷ್ಟ್ಯಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಗುರುತಿಸಬಹುದಾದ ಒಂದು ಕೇಂದ್ರಸ್ಥಾನ ಇಲ್ಲದಿರುವುದನ್ನು ಮನಗೊಂಡ ಚಳವಳಿಯ ಸಂಗಾತಿಗಳು ಹುಟ್ಟಿ ಹಾಕಿದ್ದೇ ’ಆದಿಮ’. ಎಪ್ಪತ್ತು ಎಂಬತ್ತರ ದಶಕದಲ್ಲಿ ಚಳವಳಿಯ ಮುಂಚೂಣಿಯಲ್ಲಿದ್ದ ಕೋಟಿಗಾನಹಳ್ಳಿ ರಾಮಯ್ಯ, ಎನ್.ವೆಂಕಟೇಶ್, ಎನ್.ಮುನಿಸ್ವಾಮಿ, ಸಿ.ಮುನಿಯಪ್ಪ ಮೊದಲಾದವರ ಮುಂದಾಲೋಚನೆಗಳ ಫಲವಾಗಿ ಮೂಡಿದ್ದೇ ಆದಿಮ.


1990ರ ಅವಧಿಯಲ್ಲಿ ದಲಿತ ಚಳವಳಿಯೊಳಗೆ ಒಂದಿಷ್ಟು ಪಲ್ಲಟಗಳಾದವು. ಚುನಾವಣಾ ರಾಜಕಾರಣದತ್ತ ಕೆಲವು ಮುಖಂಡರು ಹೊರಳಿದರು. ಆದರೆ ಸಾಂಸ್ಕೃತಿಕ ಚಳವಳಿಯ ಭಾಗವಾಗಿಯೇ ಮುಂದುವರಿಯಲು ಮತ್ತೊಂದಿಷ್ಟು ಮಂದಿ ಯೋಚಿಸಿದರು. ಏನಾದರೂ ಹೊಸ ಪ್ರಯೋಗಗಳನ್ನು ಮಾಡಬೇಕೆಂಬ ತುಡಿತ ಇದ್ದವರಲ್ಲಿ ಹುಟ್ಟಿದ್ದೇ ’ದಿನಕ್ಕೊಂದು ರೂಪಾಯಿ ಮನೆಗೊಂದು ಹುಂಡಿ’ ಪರಿಕಲ್ಪನೆ.
ಹೋರಾಟಗಾರ ತಿಮ್ಮಯ್ಯನವರಿದ್ದ ರೂಮಿನಲ್ಲಿ ಕನ್ನಡಿಗೆ ಒಂದು ರೂಪಾಯಿ ನಾಣ್ಯವನ್ನು ಅಂಟಿಸಲಾಗಿತ್ತು. ಅದನ್ನು ನೋಡಿದ ಕೋಟಿಗಾನಹಳ್ಳಿ ರಾಮಯ್ಯನವರಲ್ಲಿ ಹೊಸ ಆಲೋಚನೆ ಮೂಡಿತು. ’ಒಂದು ರೂಪಾಯಿ’ ಕೂಡಿಡುವ ಕ್ರಮವನ್ನು ಸ್ನೇಹಿತರೆಲ್ಲ ಚರ್ಚಿಸಿದರು. ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವುದಕ್ಕಾಗಿ 1995ರಲ್ಲಿ ಹದಿನೈದರಿಂದ ಇಪ್ಪತ್ತು ಜನ ಕೂಡಿಕೊಂಡು ದಿನಕ್ಕೊಂದು ರೂಪಾಯಿ ಕಾನ್ಸೆಪ್ಟ್ ರೂಪಿಸಿಕೊಂಡರು. ಪ್ರತಿದಿನ ತಮ್ಮ ಸಂಪಾದನೆಯ ಒಂದು ರೂಪಾಯಿಯನ್ನು ಹುಂಡಿಯಲ್ಲಿ ಸಂಗ್ರಹಿಸುತ್ತಾ ಹೋದರು. ಜೊತೆಗೆ ಜನರಿಂದ ಒಂದು ರೂಪಾಯಿ ಸಂಗ್ರಹಿಸಿದರು. ಪ್ರತಿ ತಿಂಗಳ ಎರಡನೇ ಶನಿವಾರ ಯಾವುದಾದರೂ ಜಾಗದಲ್ಲಿ ಕೂತು ಹಣವನ್ನು ಲೆಕ್ಕ ಹಾಕುತ್ತಿದ್ದರು. ಯಾರೆಲ್ಲ ಹಣ ನೀಡಿದ್ದಾರೆ ಎಂಬುದನ್ನೆಲ್ಲ ಬರೆದಿಡುತ್ತಾ ಹೋದರು. ಹದಿನೈದರಿಂದ ಇಪ್ಪತ್ತು ಸಾವಿರ ಸಂಗ್ರಹವಾದ ಮೇಲೆ ಅದನ್ನು ಬ್ಯಾಂಕ್‌ಗೆ ಹಾಕುವ ಬದಲು, ಎಲ್ಲಿಯಾದರೂ ವಿನಿಯೋಗ ಮಾಡಲು ಯೋಚಿಸಿದರು. ಅದನ್ನು ಜನಸಾಮಾನ್ಯರ ಯಾವುದಾದರೂ ಕಸುಬುಗಳಲ್ಲಿಯೋ ಅಥವಾ ಆಚರಣೆಗಾಗಿಯೋ ಬಳಸುವುದೆಂದು ನಿರ್ಧರಿಸಿ ಕುರಿ ಖರೀದಿ ಮಾಡುವ ನಿರ್ಧಾರಕ್ಕೆ ಬಂದು ನಾಲ್ಕು ಕುರಿಗಳನ್ನು ಖರೀದಿಸಿ ಬೆಟ್ಟದ ಮೇಲೆ ಒಬ್ಬರಿಗೆ ಕೊಡುತ್ತಾರೆ. ಒಂದು ಕುರಿ ಎರಡು ಮರಿಯನ್ನು ಹಾಕಿದರೆ- ಒಂದು ಮರಿ, ಸಾಕಿದವರಿಗೆ ಇನ್ನೊಂದು ಕುರಿ ಕೊಟ್ಟವರಿಗೆ ಎಂಬ ಒಪ್ಪಂದ ಮಾಡಿಕೊಂಡರು. ಆದರೆ ಪ್ಲಾನ್ ಸಕ್ಸಸ್ ಆಗಲಿಲ್ಲ. ಮರಿಗಳು ಸತ್ತು ಹೋಗಿದ್ದರಿಂದಲೋ, ಕಾಯಿಲೆ ಎದುರಿಸಿದ್ದರಿಂದಲೋ ಹಿನ್ನಡೆ ಅನುಭವಿಸಿದರು. ಒಮ್ಮೆ ಬೆಟ್ಟದ ಮೇಲೆ ಸಭೆ ಮಾಡುವಾಗ, “ನಾವು ಎಲ್ಲೆಂದರಲ್ಲಿ ಕೂತು ಎದ್ದು ಹೋಗುವುದಕ್ಕಿಂತ ಎಲ್ಲಾದರೊಂದು ಜಾಗ ಹುಡುಕಿಕೊಳ್ಳೋಣ” ಎಂದು ನಿರ್ಧರಿಸಿದರು. ಆಗ ಅವರ ಬಳಿ ಮುವತ್ತಾರು ಸಾವಿರ ರೂಪಾಯಿ ಸಂಗ್ರಹವಾಗಿತ್ತು. ಭೂಮಿ ಖರೀದಿ ಮಾಡುವುದು ನಿಶ್ಚಯವಾಯಿತು. ಬೆಟ್ಟದ ಮೇಲೆಯೇ ಒಂದು ಜಾಗವನ್ನು ಹುಡುಕಿ ವೆಂಕಟೇಶಪ್ಪ ಎಂಬವರಿಂದ ಹತ್ತು ಗುಂಟೆ ಜಮೀನನ್ನು ಆ ಹಣದಲ್ಲಿ ಖರೀದಿಸಿದರು. ಈ ಜಾಗದಲ್ಲಿ ಯಾವುದೇ ಆಧುನಿಕ ಉಪಕರಣಗಳನ್ನು ಬಳಸದೆ ಪದ್ಮಾಲಯ ನಾಗರಾಜ್ ಮತ್ತು ಶಿಕ್ಷಕರ ತಂಡ ಗಿಡ, ಮಣ್ಣು, ಕಲ್ಲುಗಳನ್ನು ಬಳಸಿ ಹುಲ್ಲಿನ ಕುಟೀರ ಕಟ್ಟಲು ಶುರು ಮಾಡಿತು. ಬೇಲಿಯ ಕಡ್ಡಿಗಳು, ಗರಿಗಳನ್ನು ಕುಟೀರಕ್ಕೆ ಬಳಸಿದರು. ಹಗಲು ಮತ್ತು ರಾತ್ರಿ ವೇಳೆ ಅಲ್ಲಿ ಕಳೆಯುತ್ತಿದ್ದರಿಂದ ಯಾವುದಾದರೂ ಚಟುವಟಿಕೆ ಆರಂಭಿಸಲು ಯೋಚಿಸಿದಾಗ ಹೊಮ್ಮಿದ್ದೇ- ’ಹುಣ್ಣಿಮೆ ಹಾಡು’. ಈ ನೆಲದ ತತ್ವಪದಗಳು, ಜನಪದ ಹಾಡುಗಳನ್ನು ಅಭ್ಯಾಸ ಮಾಡಿಸಿ ಹುಣ್ಣಿಮೆಯಲ್ಲಿ ಪ್ರದರ್ಶನ ಮಾಡಿಸುವ ಕಾರ್ಯಕ್ರಮ ಹಮ್ಮಿಕೊಂಡರು. ಹೀಗೆ ಆಗಸ್ಟ್ 10, 2005ರಂದು ಆರಂಭವಾದ ಮೊದಲ ಹುಣ್ಣಿಮೆ ಹಾಡು ಕಾರ್ಯಕ್ರಮವನ್ನು ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದ್ದರು. ರಾಮಯ್ಯನವರ ಗುರು ಹಾಗೂ ಶಿಕ್ಷಣತಜ್ಞ ಶ್ರೀರಾಮ ರೆಡ್ಡಿಯವರು ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು. ಹೀಗೆ ಹುಣ್ಣಿಮೆ ಹಾಡು ಅಂದಿನಿಂದ ಇಂದಿನವರೆಗೆ ಬೆಳೆಯುತ್ತಾ ಬಂದಿತು.

’ಮರಳಿ ಮಣ್ಣಿಗೆ ಎಂದು ನೆಲಮೂಲದ ಪಾರಂಪರಿಕ ತಿಳಿವಿನೆಡೆಗೆ ನಮ್ಮ ಜನಸಮುದಾಯಗಳನ್ನು ಒಯ್ಯುವ ನಿರಂತರ ಪ್ರಯತ್ನವೆಸಗುತ್ತಾ, ನೆಲಸಂಸ್ಕೃತಿಯ ನೆಲನಡಿಗೆಯೇ ನಮ್ಮೆಲ್ಲರ ಉಳಿವಿನ ಏಕೈಕ ಮಾರ್ಗವೆಂದು ಆದಿಮ ನಂಬಿ ನಡೆಯುತ್ತಿದೆ’ ಎಂಬುದು ಆದಿಮ ಕಟ್ಟಾಳುಗಳ ಮಾತು.

ಪ್ರತಿತಿಂಗಳ ಹುಣ್ಣಿಮೆಯ ರಾತ್ರಿಯಲ್ಲಿ ನಡೆಯುವ ’ಹುಣ್ಣಿಮೆ ಹಾಡು’ ನಾಡಿನಾದ್ಯಂತ ಹೆಸರಾಗಿದೆ. ನೆಲಸಂಸ್ಕೃತಿಯ ಅಗಾಧತೆಯನ್ನು ಮತ್ತು ಪ್ರಾಮುಖ್ಯತೆಯನ್ನು ಬಿತ್ತುವಂತಹ ನಾಟಕ, ಜನಪದ ಕಲಾ ಪ್ರದರ್ಶನ, ಹಾಡುಗಾರಿಕೆ, ತತ್ವಪದ ಗಾಯನ, ದೇಸೀಕಲೆಗಳು ಇವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ, ನಮ್ಮ ನಡುವಿನ ಸಾಧಕರಿಗೆ ’ಗದ್ದುಗೆ ಗೌರವ’ ನೀಡುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಾ ಬರಲಾಗಿದೆ. ಈವರೆಗೆ ನಡೆದಿರುವ 199 ಹುಣ್ಣಿಮೆ ಹಾಡು ಕಾರ್ಯಕ್ರಮಗಳಲ್ಲಿ ನಾಡಿನ ಹಲವಾರು ಕಲಾವಿದರು ಭಾಗಿಯಾಗಿದ್ದಾರೆ. ಉಮಾಶ್ರೀ, ಬಿ.ಜಯಶ್ರೀ, ಕರಿಬಸವಯ್ಯ, ರಮೇಶ್ ಅರವಿಂದ್, ಮೈಸೂರ್ ಲೋಕೇಶ್, ಮಂಡ್ಯ ರಮೇಶ್, ದುನಿಯಾ ವಿಜಯ್, ಹಂಸಲೇಖ, ವಿ.ಮನೋಹರ್, ಮೈಸೂರು ರಂಗಾಯಣದ ಜನಾರ್ದನ್, ಬಿ.ಬಸವಲಿಂಗಯ್ಯ, ಪಿಚ್ಚಳ್ಳಿ ಶ್ರೀನಿವಾಸ್, ಡಿ. ಆರ್.ರಾಜಪ್ಪ, ಬಾನಂದೂರು ಕೆಂಪಯ್ಯ, ನಾಡೋಜ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ, ದರೋಜಿ ಈರಮ್ಮ, ಗೊಲ್ಲಹಳ್ಳಿ ಶಿವಪ್ರಸಾದ್, ಇಸ್ಮಾಯಿಲ್ ಗೋನಾಳ್, ಇಕ್ಬಾಲ್ ಅಹ್ಮದ್, ಪಂಡಿತ್ ವೆಂಕಟೇಶ್ ಕುಮಾರ್- ಹೀಗೆ ಕಲಾವಿದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಹುಣ್ಣಿಮೆ ಹಾಡುಗಳನ್ನು ಪರಾಮರ್ಶೆ ಮಾಡಿಕೊಳ್ಳುತ್ತಾ, ಇನ್ನೂ ಭಿನ್ನವಾಗಿ ಬೇರೆ ಪ್ರಯೋಗಗಳನ್ನು ಮಾಡಲು ಸಾಧ್ಯವೇ? ವಿಭಿನ್ನ ಜನ ಸಮೂಹವನ್ನು ಒಳಗೊಳ್ಳಬಹುದೇ ಎಂದು ಯೋಚಿಸುತ್ತಾ ಹುಟ್ಟಿಕೊಂಡಿದ್ದೇ ’ಚುಕ್ಕಿ ಮೇಳ’ ಹೆಸರಿನ ಮಕ್ಕಳ ಬೇಸಿಗೆ ಶಿಬಿರ.

ಮಕ್ಕಳಲ್ಲಿನ ಬಹು ವಿವಿಧ ಬುದ್ಧಿವಂತಿಕೆ, ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಚುಕ್ಕಿ ಮೇಳ ಶುರು ಮಾಡಲಾಯಿತು. ಸಾಮಾನ್ಯವಾಗಿ ಬಸವ ಜಯಂತಿಗೆ ಆರಂಭಿಸಿ, ಬುದ್ಧ ಪೂರ್ಣಿಮೆಗೆ ಮುಕ್ತಾಯವಾಗುವ ಈ ಶಿಬಿರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮಕ್ಕಳನ್ನು ಪೋಷಕರು ಕರೆತರುತ್ತಾರೆ. ಮಕ್ಕಳೇ ಕತೆಯನ್ನು ಕಟ್ಟಿ, ನಾಟಕವನ್ನು ರೂಪಿಸುವುದು ನಡೆಯುತ್ತದೆ. ಮಕ್ಕಳ ಪ್ರತಿಭೆಯನ್ನು ಹೊರತೆಗೆಯಲು ಸಂಪನ್ಮೂಲ ವ್ಯಕ್ತಿಗಳು ಬರುತ್ತಾರೆ. ಶಿಬಿರಗಳಲ್ಲಿ ಮಕ್ಕಳಿಗೆ ನಾಟಕ, ಜನಪದ ನೃತ್ಯ, ಹಾಡುಗಾರಿಕೆ, ಚರ್ಮವಾದ್ಯ ವಾದನ ತರಬೇತಿ, ಜೇಡಿಮಣ್ಣಿನ ಕಲೆ, ಚಿತ್ರಕಲೆ ಮೊದಲಾದವುಗಳಲ್ಲಿ ತರಬೇತಿ ನೀಡಿ, ಸಮಾರೋಪದ ದಿನ ಪ್ರದರ್ಶಿಸಲಾಗುತ್ತದೆ. ವಿವಿಧ ಹಿನ್ನೆಲೆಯ ಮಕ್ಕಳು ಇಲ್ಲಿಗೆ ಪ್ರತಿವರ್ಷ ಬರುತ್ತಾರೆ. ವಿಶೇಷವೆಂದರೆ ಯಾವುದೇ ಮಕ್ಕಳಿಂದ ಫೀಸ್ ತೆಗೆದುಕೊಳ್ಳುವುದಿಲ್ಲ. ಸಮುದಾಯದ ಮೂಲಕವೇ ಶಿಬಿರ ನಡೆಸಲಾಗುತ್ತದೆ. ಜನರೇ ರೇಷನ್, ತಿಂಡಿ ತಿನಿಸು ತಂದು ಕೊಡುವುದು ವಾಡಿಕೆಯಾಗಿದೆ. ವಾರಕ್ಕೊಮ್ಮೆ ಪೋಷಕರು ಬಂದು ಹೋಗಲು ಅವಕಾಶವಿರುತ್ತದೆ. ಇಲ್ಲಿ ಬೆಳೆದಂತಹ ಮಕ್ಕಳು ಕಲಾವಿದರಾಗಿ, ಹಾಡುಗಾರರಾಗಿ ಹೊಮ್ಮಿರುವುದು ಗಮನಾರ್ಹ.

“ಆದಿಮದ ಬೇಸಿಗೆ ಶಿಬಿರದಲ್ಲಿ ಕಲಿತ ಮಕ್ಕಳ ಬೆಳವಣಿಗೆ ಭಿನ್ನವಾಗಿದೆ. ತರಗತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಭಾಗಿಯಾಗುತ್ತಾರೆ” ಎಂದು ಶಿಕ್ಷಕರು ಮತ್ತು ಪೋಷಕರು ಒಪ್ಪಿಕೊಳ್ಳುತ್ತಾರೆ. ಇಂದಿನ ಶಿಕ್ಷಣ ವ್ಯವಸ್ಥೆ ವಂಚಿಸಿ ತಿನ್ನುವುದನ್ನು ಕಲಿಸುತ್ತಿದ್ದರೆ, ಆದಿಮ ಶಿಬಿರವು ಹಂಚಿ ತಿನ್ನುವುದನ್ನು ಹೇಳಿಕೊಡುತ್ತದೆ ಎಂಬುದು ಪೋಷಕರ ಸಾಮಾನ್ಯ ಅಭಿಪ್ರಾಯ.

’ನ್ಯಾಯಪಥ’ದೊಂದಿಗೆ ಮಾತನಾಡಿದ ಆದಿಮ ಟ್ರಸ್ಟ್‌ನ ಸದಸ್ಯರಾದ ಹ.ಮಾ.ರಾಮಚಂದ್ರ ಅವರು ಚುಕ್ಕಿಮೇಳದ ಪರಿಣಾಮದ ಕುರಿತು ಹೇಳುತ್ತಾ ಘಟನೆಯೊಂದನ್ನು ನೆನೆದರು: “ಚುಕ್ಕಿ ಮೇಳ ಶುರುವಾಗಿ ಸುಮಾರು ಐದಾರು ವರ್ಷಗಳಾಗಿತ್ತು. ಆ ವರ್ಷ ಶಿಕ್ಷಕರೊಬ್ಬರು ತಮ್ಮ ಮಗುವನ್ನು ನೋಡಲು ಬಂದರು. ಮಗುವಿಗೆ ತಿನಿಸುಗಳನ್ನು ತಂದು, ಯಾರು ಇಲ್ಲದ ಕಡೆ ಕರೆದುಕೊಂಡು ಹೋಗಿ ಕೊಡಲು ಮುಂದಾದರು. ತಕ್ಷಣ ಆ ಮಗು, ’ಅಪ್ಪ, ಇಲ್ಲಿ ನಾನೊಬ್ಬನೇ ಇಲ್ಲ. ನಾವು ನೂರೈವತ್ತು ಜನ ಇದ್ದೇವೆ. ತರುವುದಾದರೆ ಎಲ್ಲರಿಗೂ ತಗೊಂಡು ಬಾ’ ಎಂದಿತ್ತು. ಒಂದೇ ವಾರದಲ್ಲಿ ಮಗುವಿನಲ್ಲಿ ಇಂತಹ ಪರಿವರ್ತನೆ ಕಂಡುಬಂದಿತ್ತು. ಈ ರೀತಿಯ ಬೆಳವಣಿಗೆ ಸಮಾಜದ ದೃಷ್ಟಿಯಲ್ಲಿ ಬಹಳ ಒಳ್ಳೆಯದು” ಎನ್ನುತ್ತಾರೆ ರಾಮಚಂದ್ರ.

ಈತನಕ ಆದಿಮ 13 ಮಕ್ಕಳ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಪ್ರತಿ ಶಿಬಿರದಲ್ಲಿ ಸುಮಾರು 150ರಿಂದ 200 ಮಕ್ಕಳು ಪಾಲ್ಗೊಳ್ಳುತ್ತಾರೆ. 2009ರ ಶಿಬಿರದಲ್ಲಿ 316 ಮಕ್ಕಳು ಶಿಬಿರಾರ್ಥಿಗಳಾಗಿ ಸೇರಿದ್ದರು. ಆದಿಮ ಹತ್ತಾರು ಪ್ರಯೋಗಗಳ ಶಾಲೆಯಾಗಿಯೂ ಗುರುತಿಸಿಕೊಂಡಿದೆ. ಅವಿಭಜಿತ ಕೋಲಾರ ಜಿಲ್ಲೆಯ ಗಡಿಭಾಗಗಳಲ್ಲಿ ಜನರ ನಾಲಿಗೆಯ ಮೇಲಿದ್ದ ತೆಲುಗು ಭಾಷೆಯ ಜಾನಪದ ಗೀತೆಗಳನ್ನು ಕನ್ನಡ ಭಾಷೆಗೆ ಅನುವಾದಿಸುವ ಎರಡು ಕಮ್ಮಟಗಳನ್ನು 2006 ಮತ್ತು 2007ಲ್ಲಿ ಯಶಸ್ವಿಯಾಗಿ ನಡೆಸಿತ್ತು. ಬಳಿಕ ಆ ಹಾಡುಗಳನ್ನು ಬಳಸಿಕೊಂಡು ಕಿನ್ನೂರಿ ನುಡಿದೋ ಎಂಬುವ ವಿನೂತನ ನೃತ್ಯರೂಪಕವನ್ನು ಸಿದ್ಧಪಡಿಸಿ ನಾಡಿನಾದ್ಯಂತ ಪ್ರದರ್ಶನ ನೀಡಲಾಗಿತ್ತು. ನಾಡಿನ ಖ್ಯಾತ ರಂಗಸಂಗೀತಗಾರರನ್ನು ಆಹ್ವಾನಿಸಿ ಸ್ಥಳೀಯ ಆಸಕ್ತರಿಗೆ ತರಬೇತಿ ನೀಡುವ ಕೆಲಸವನ್ನು ನಿರಂತರ ಮಾಡುತ್ತಾ ಬರಲಾಗಿದೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕುರಿತಾಗಿ, ಕತೆಗಾರ ಶ್ರೀಕೃಷ್ಣ ಆಲನಹಳ್ಳಿ ಸಾಹಿತ್ಯದ ಕುರಿತಾಗಿ, ಲಂಕೇಶರ ಸಾಹಿತ್ಯದ ಕುರಿತಾಗಿ ಸಂವಾದ, ವಿಚಾರಸಂಕಿರಣ, ಸಾಹಿತ್ಯ ಸಪ್ತಾಹಗಳನ್ನು ನಡೆಸಲಾಗಿದೆ.

ಆಸಕ್ತ ಸ್ಥಳೀಯ ಯುವಜನರನ್ನು ಆಯ್ಕೆ ಮಾಡಿಕೊಂಡು ನಮ್ಮ ನೆಲದ ಸೊಗಡನ್ನು ಪ್ರತಿನಿಧಿಸುವ ನಾಟಕಗಳ ತರಬೇತಿ ನೀಡಿ, ನಾಡಿನಾದ್ಯಂತ ಪ್ರದರ್ಶನಗಳನ್ನು ನೀಡಲಾಗಿದೆ. ಕೋಟಿಗಾನಹಳ್ಳಿ ರಾಮಯ್ಯನವರು ರಚಿಸಿರುವ ಕಿನ್ನೂರಿ ನುಡಿದೋ, ಹಕ್ಕಿಹಾಡು ನಾಟಕಗಳು 175 ಪ್ರದರ್ಶನಗಳನ್ನು ಕಂಡಿವೆ. ಅಷ್ಟೇ ಅಲ್ಲದೆ ಕಣ್ಣಾಸ್ಪತ್ರೆ ಕ್ಯೂನಲ್ಲಿ ಜಗದಂಬೆ, ನಾಯಿತಿಪ್ಪ, ಲೆಟ್ ಪಾಲಿಥ್ರೈವ್ ಯಾನೆ ಯಾರೇ ಕೂಗಾಡಲಿ ಈ ಎಲ್ಲಾ ನಾಟಕಗಳು ಗಮನ ಸೆಳೆದಿವೆ.

ಮಕ್ಕಳ ಶಿಬಿರಗಳಲ್ಲಿ ಕೋಟಿಗಾನಹಳ್ಳಿ ರಾಮಯ್ಯನವರ ರತ್ನಪಕ್ಷಿ, ಡರ್ ಬರ್ ಬುಡ್ಡಣ್ಣ, ಮರ್ಜೀನಾ ಮತ್ತು 40 ಜನ ಕಳ್ಳರು, ಕಲ್ ಕಮಲ್ ಕಲೇ ಪರಾಕ್, ಸುಮ್ಸುಮ್ಕೆ, ಒಗಟಿನ ರಾಣಿ, ಹಕ್ಕಿಹಾಡು, ನೆಲದೇವತೆಗಳ ಹೆಜ್ಜೆಗಳಲ್ಲಿ, ಭೀಮ ದ ವೋಲ್ವೊ ಬಸ್, ಮನುಕುಲ ಕಥನ ಮೊದಲಾದ ನಾಟಕಗಳ ತರಬೇತಿ ನೀಡಲಾಗಿದೆ. ಆದಿಮದ ’ಮತ್ತೆ ಏಕಲವ್ಯ ನಾಟಕ ತಂಡ ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ 1 ತಿಂಗಳ ಕಾಲ ಹಲವಾರು ಕಡೆ ಪ್ರದರ್ಶನಗಳನ್ನು ನೀಡಿತ್ತು. ಜಪಾನಿನ ಡೊಳ್ಳು ತಂಡದವರು, ಸ್ಪಿಟ್ಜರ್‌ಲ್ಯಾಂಡಿನ ಮರಗಾಲಿನ ಕಲಾವಿದರು ಆದಿಮಕ್ಕೆ ಬಂದು ಪ್ರದರ್ಶನ ನೀಡಿ, ಸ್ಥಳೀಯರಿಗೆ ವಿದೇಶಿ ಕಲೆಯ ಪರಿಚಯ ಮಾಡಿಕೊಟ್ಟಿದ್ದರು. ಇಲ್ಲಿನ ಕಲಾಪರಂಪರೆ, ಜಾನಪದ ಸಂಸ್ಕೃತಿಯನ್ನು ತಿಳಿಯುವುದಕ್ಕಾಗಿ ಫಿನ್‌ಲ್ಯಾಂಡಿನ ಡೈನಾ ಕುಕ್ಕ ಹಾರ್ವಿಲಾಯ್ತಿ ಎಂಬವರು ಸುಮಾರು ಆರು ತಿಂಗಳು ಆದಿಮದಲ್ಲೇ ನೆಲೆಸಿ, ಡೊಳ್ಳು ಕುಣಿತವನ್ನು ಕಲಿತಿದ್ದರು. ಜೊತೆಗೆ ಅವರ ’ಪಾಯ್ಸ್’ ಎಂಬ ಸಮರ ಕಲೆಯನ್ನು 2009ರ ಚುಕ್ಕಿಮೇಳದ ಮಕ್ಕಳಿಗೆ ಕಲಿಸಿಕೊಟ್ಟಿದ್ದರು. ಹಾಗೆಯೇ ಜರ್ಮನಿಯ ಡಯಾನಾ 2013ರಲ್ಲಿ ಒಂದು ತಿಂಗಳ ಕಾಲ ಆದಿಮದಲ್ಲಿ ಉಳಿದುಕೊಂಡು ಅಭ್ಯಸಿಸುವುದರ ಜೊತೆಗೆ, ಇಲ್ಲಿನ ಮಕ್ಕಳಿಗೆ ವ್ಯರ್ಥ ಪದಾರ್ಥಗಳಿಂದ ಕಲೆಯನ್ನು ಸೃಷ್ಟಿಸುವುದನ್ನು ಹೇಳಿಕೊಟ್ಟಿದ್ದರು. ಜಗತ್ ಪ್ರಸಿದ್ಧ ನಿರ್ದೇಶಕ ಅಕೀರಾ ಕುರಸೋವಾನ ಸಿನಿಮಾಗಳ ಪ್ರದರ್ಶನ, ಟ್ರಾನ್‌ಜೆಂಡರ್‌ಗಳಿಗಾಗಿ ನಡೆದ ಶಿಬಿರ, ಅಂಬೇಡ್ಕರೈಟ್ ಗೇಲ್ ಓಮ್‌ವೆಡ್ಟ್ ಕುರಿತಾದ ವಿಚಾರಸಂಕಿರಣ, ನಮ್ಮ ನಡುವಿನ ಮಹನೀಯರು ಕಣ್ಮರೆಯಾದಾಗ ಅವರ ನೆನಪಿನಲ್ಲಿ ಹುಣ್ಣಿಮೆ ಹಾಡು ಆಯೋಜನೆ- ಹೀಗೆ ಆದಿಮದ ಕ್ರಿಯಾಶೀಲತೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮತ್ತೊಂದು ಮುಖ್ಯವಾದ ಸಂಗತಿಯನ್ನು ಹೇಳಲೇಬೇಕು: ಅಂತರ್ಜಾತಿ ಮತ್ತು ಸರಳ ವಿವಾಹಗಳಿಗೆ ಆದಿಮ ಆಸರೆಯಾಗಿದೆ. ಪೌರೋಹಿತ್ಯ ಇಲ್ಲದೆ ಈವರೆಗೆ ಹದಿನೈದು ಮದುವೆಗಳನ್ನು ಆದಿಮ ನಡೆಸಿದೆ.

ಚಿಂತನೆಗಳನ್ನು ಬೆಳೆಸುವುದಷ್ಟೇ ಅಲ್ಲದೆ ಜನಚಳವಳಿಗಳೊಂದಿಗೆ ನಿರಂತರ ಸಂಪರ್ಕವನ್ನು ಆದಿಮ ಇರಿಸಿಕೊಂಡಿದೆ. ’ಆದಿಮ ಸ್ಕೂಲ್ ಆಫ್ ಥಾಟ್ ಪರಿಕಲ್ಪನೆಯೊಂದಿಗೆ ರೈತ ಚಳವಳಿ, ಮಹಿಳಾ ಚಳವಳಿ, ಕಾರ್ಮಿಕ ಚಳವಳಿ, ದಲಿತ ಚಳವಳಿ ಸೇರಿದಂತೆ ಎಲ್ಲ ಜನಪರ ಹೋರಾಟಗಳ ಅಧ್ಯಯನ ಶಿಬಿರಗಳಿಗೆ ಆದಿಮ ಅವಕಾಶ ಕಲ್ಪಿಸಿದೆ. ಆದಿಮ ಪ್ರಕಾಶನ ಆರಂಭಿಸಿ ಹದಿನಾಲ್ಕು ಕೃತಿಗಳನ್ನು ಈವರೆಗೆ ಪ್ರಕಟಿಸಲಾಗಿದೆ. ಕೋಲಾರದಲ್ಲಿ ಪುಸ್ತಕ ಮಳಿಗೆ ತೆರೆದು ಅಪರೂಪದ ಕೃತಿಗಳನ್ನು ಜನರಿಗೆ ತಲುಪಿಸಲಾಗಿದೆ.

ಇಂತಹ ಆದಿಮಕ್ಕೆ ಹಲವು ಕೈಗಳು ಆಸರೆಯಾಗಿರುವುದು ಸುಳ್ಳಲ್ಲ. ಚಿತ್ರಕಲಾ ಅಕಾಡೆಮಿಯವರು ಶಿಲ್ಪಕಲಾ ಶಿಬಿರ ಮಾಡಿ, ವಿಶಿಷ್ಟ ಕಲಾಕೃತಿಗಳನ್ನು ಕೆತ್ತಿಕೊಟ್ಟಿದ್ದಾರೆ. ಯಾವುದೇ ಮಠಾಧಿಪತಿಗಳಾಗಲೀ, ರಾಜಕೀಯ ಪಕ್ಷವಾಗಲೀ ಆದಿಮದ ಬೆನ್ನಿಗೆ ಇಲ್ಲ ಎಂಬುದು ನಿಜ. ಆದರೆ 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪ್ರತಿ ವರ್ಷ ಐದು ಲಕ್ಷ ರೂಗಳನ್ನು ಕೊಡಲು ಮುಂದಾಯಿತು. ಚುಕ್ಕಿ ಮೇಳಕ್ಕೆ ಹನ್ನೆರಡು ಲಕ್ಷ ಖರ್ಚಾಗುತ್ತಿತ್ತು. ನಂತರ ಬಂದ ಸರ್ಕಾರಗಳು ಅನುದಾನ ಕಡಿಮೆ ಮಾಡಿದ್ದು ಉಂಟು. ಈ ಎಲ್ಲ ಸಂಕಷ್ಟವನ್ನು ಆದಿಮದ ಕಟ್ಟಾಳುಗಳು ನಿಭಾಯಿಸಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಒಮ್ಮೆ ಆಕಸ್ಮಿಕವಾಗಿ ಆದಿಮಕ್ಕೆ ಬಂದು, ಇಲ್ಲಿನ ಚಟುವಟಿಕೆಗಳನ್ನು ನೋಡಿ ಚಕಿತರಾಗಿದ್ದರು. ಆ ವೇಳೆಗೆ ಆದಿಮಕ್ಕೆ ಎರಡು ಎಕರೆ ಭೂಮಿ ಇತ್ತು. ಹೆಚ್ಚುವರಿ ಮೂರು ಎಕರೆ ಭೂಮಿಯನ್ನು ನೀಡುವಂತೆ ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಹಾಗೆಯೇ ಪೆಂಡಿಂಗ್ ಇರುವುದನ್ನು ತಿಳಿದ ರಮೇಶ್ ಕುಮಾರ್ ಅವರು, ವಿಶೇಷ ಆಸ್ಥೆ ವಹಿಸಿ ಮೂರು ಎಕರೆ ಜಮೀನು ಮಾಡಿಸಿಕೊಟ್ಟರು. ರಾಜಕಾರಣಿಗಳಾದ ಕೃಷ್ಣೇಭೈರೇಗೌಡ, ರಮೇಶ್ ಕುಮಾರ್, ಸುದರ್ಶನ್ ಮೊದಲಾದವರು ಆದಿಮಕ್ಕೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ.

“ಸಂಸ್ಥೆಯು ಟ್ರಸ್ಟ್ ಮೂಲಕ ನಡೆಯುತ್ತಿದೆ. ಟ್ರಸ್ಟ್‌ನ ಬೈಲಾ ಪ್ರಕಾರ ಎಲ್ಲವೂ ದಾಖಲಾಗುತ್ತದೆ. ಒಂದು ರೂಪಾಯಿ ಕಲೆಕ್ಟ್ ಮಾಡುತ್ತಿದ್ದ ದಿನಾಂಕಗಳಿಂದ ಹಿಡಿದು ಈವರೆಗೆ ಯಾರು ಎಷ್ಟು ಕೊಟ್ಟರು ಎಂಬುದೆಲ್ಲ ದಾಖಲೆ ಇಡಲಾಗಿದೆ. ಪ್ರತಿ ವರ್ಷ ಆಡಿಟ್ ಮಾಡಲಾಗುತ್ತದೆ” ಎನ್ನುತ್ತಾರೆ ಟ್ರಸ್ಟ್ ಸದಸ್ಯರಾದ ಹ.ಮಾ.ರಾಮಚಂದ್ರ.

ರಾಮಯ್ಯನವರು ಅಧ್ಯಕ್ಷರಾಗಿ ಹತ್ತು ವರ್ಷ ಕೆಲಸ ಮಾಡಿದ್ದರು. 2014ರ ಚುನಾವಣೆಯಲ್ಲಿ ಆಮ್ ಆದ್ಮಿಗೆ ಹೋಗಬೇಕೆಂದು ನಿರ್ಧರಿಸಿದ್ದರು. ರಾಜಕೀಯಕ್ಕೆ ಪ್ರವೇಶಿಸಿದವರು ಇಲ್ಲಿನ ಜವಾಬ್ದಾರಿಯನ್ನು ಮುಂದುವರಿಸಬಾರದು ಎಂಬ ನಿಯಮಕ್ಕೆ ಬದ್ಧರಾಗಿ ರಾಮಯ್ಯನವರೇ ಕಮಿಟಿ ಸಭೆ ಕರೆದು ಎನ್.ಮುನಿಸ್ವಾಮಿಯವರಿಗೆ ಅಧ್ಯಕ್ಷ ಸ್ಥಾನ ನೀಡಿದರು. ಏಳು ಮಂದಿ ಸದಸ್ಯರು ಟ್ರಸ್ಟ್ ನಡೆಸಿಕೊಂಡು ಹೋಗುತ್ತಿದ್ದಾರೆ.

ಅನೇಕ ಚಿಂತಕರು ಹೇಳುವ ಪ್ರಕಾರ, “ಕೋಲಾರದಲ್ಲಿ ಕೋಮುಶಕ್ತಿಗಳಿಗೆ ತಡೆಯಾಗಿ ಆದಿಮ ನಿಂತಿದೆ. ಆದಿಮ ಎಲ್ಲ ಜನ ಸಮೂಹವನ್ನು, ಜಾತಿ ಮತಗಳನ್ನು ಒಳಗೊಂಡು ಬೆಳೆಯುತ್ತಿರುವುದು ಮತೀಯ ಶಕ್ತಿಗಳಿಗೆ ಇಷ್ಟವಿಲ್ಲ. ಆದರೆ ಬಹುತ್ವದ ನೆಲ ಕೋಲಾರದಲ್ಲಿ ಆದಿಮದ ಬೇರುಗಳು ಆಳವಾಗಿವೆ.”

“ಸ್ಥಳೀಯ ಜ್ಞಾನಶಿಸ್ತುಗಳನ್ನು ಅವಲಂಬಿಸಿ, ನೆಲಪಠ್ಯಗಳನ್ನು ರಚಿಸುತ್ತಾ ಅದರನ್ವಯ ರಂಗಶಿಕ್ಷಣ ಪರಂಪರೆಯನ್ನು ಕಟ್ಟುವ ಕೆಲಸವನ್ನು ಆದಿಮ ಮಾಡುತ್ತಿದೆ. ಜನಪರವಾಗಿ ಯೋಚನೆ ಮಾಡುವ ಎಲ್ಲರೂ ನಮ್ಮೊಂದಿಗೆ ಇದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ, ಎನ್.ವೆಂಕಟೇಶ್, ಎನ್.ಮುನಿಸ್ವಾಮಿ, ಸಿ.ಮುನಿಯಪ್ಪ, ಕೆ.ವೈ.ನಾರಾಯಣಸ್ವಾಮಿ, ಲಕ್ಷ್ಮೀಪತಿ ಕೋಲಾರ, ಸಿ.ಎಸ್.ದ್ವಾರಕನಾಥ್, ಪ್ರೊ. ಶಿವರಾಮಯ್ಯ- ಹೀಗೆ ಹಲವು ಸಮಾಜಮುಖಿ ಚಿಂತಕರು-ಕಾರ್ಯಕರ್ತರು ಸೇರಿ ಕಟ್ಟಿದ ಸಂಸ್ಥೆ ಇದಾಗಿದೆ” ಎನ್ನುತ್ತಾರೆ ಆದಿಮದ ಟ್ರಸ್ಟಿಗಳು.

ಮೂರು ದಿನ ಹುಣ್ಣಿಮೆ ಹಾಡು-200: ಸಿಎಂ ಭಾಗಿ

ಡಿಸೆಂಬರ್ 25, 26, 27ರಂದು ಆದಿಮ ಆವರಣದಲ್ಲಿ ಹುಣ್ಣಿಮೆ ಹಾಡು- 200 (ಆದಿಮ ಸಾಂಸ್ಕೃತಿಕ ಯಾನ- 200) ನಡೆಯಲಿದೆ. ಡಿ.25ರಂದು ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಡಿ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಉದ್ಘಾಟನೆಯ ವೇಳೆ ಧರಣೀದೇವಿ ಮಾಲಗತ್ತಿ, ಇಂದೂಧರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಂತರ ನಡೆಯುವ ಗೋಷ್ಠಿಗಳಲ್ಲಿ ಡಾ.ಅರುಣ್ ಜೋಳದ ಕೂಡ್ಲಿಗಿ, ಪ್ರೊ.ಪುರುಷೋತ್ತಮ ಬಿಳಿಮಲೆ, ಸಿದ್ಧನಗೌಡ ಪಾಟೀಲ್, ಸನತ್ ಕುಮಾರ್ ಬೆಳಗಲಿ ಭಾಗವಹಿಸುವರು. ಸಂಜೆ ಕೋಟಿಗಾನಹಳ್ಳಿ ರಾಮಯ್ಯನವರ ಹಕ್ಕಿಹಾಡು ನಾಟಕ ಪ್ರದರ್ಶನ ಇರುತ್ತದೆ.

ಡಿ.26ರಂದು ನಡೆಯುವ ವಿಶೇಷ ಉಪನ್ಯಾಸಗಳಲ್ಲಿ ಬಿ.ಎಂ.ಬಷೀರ್, ಲಕ್ಷ್ಮಿಪತಿ ಕೋಲಾರ, ಡಾ.ಚಂದ್ರಶೇಖರ ನಂಗಲಿ, ಡಾ.ನಟರಾಜ ಬೂದಾಳು, ರಹಮತ್ ತರೀಕೆರೆ ಪ್ರೊ.ಸ್ಟಾಲಿನ್ ರಾಜಾಂಗಂ, ಶ್ರೀನಿವಾಸರಾಜು ದೊಡ್ಡೇರಿ ಇರುವರು. ಸಂಜೆ ಪ್ರಮೋದ್ ಶಿಗ್ಗಾಂವ್ ನಿರ್ದೇಶನದಲ್ಲಿ ’ಏಕಲವ್ಯ’ ಯಕ್ಷಗಾನ ಇರಲಿದೆ.

ಡಿಸೆಂಬರ್ 27ರಂದು ನಡೆಯುವ ವಿಶೇಷ ಉಪನ್ಯಾಸಗಳಲ್ಲಿ ಮಾಸ್ಟರ್ ಜೀ ಗಂಗಾಧರಿ ಕೆ., ನವೀನ್ ಸೂರಿಂಜೆ, ಡಾ.ರಾಜಪ್ಪ ದಳವಾಯಿ ಪಾಲ್ಗೊಳ್ಳುವರು. ನಂತರ ಕಿನ್ನೂರಿ ನುಡಿದೋ ವಾದ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆಗೆ ಸಮಾರೋಪ ಏರ್ಪಡಿಸಲಾಗಿದ್ದು ಸಿಎಂ ಸಿದ್ದರಾಮಯ್ಯ, ಸಚಿವರಾದ ಕೃಷ್ಣಬೈರೇಗೌಡ, ಎಂ.ಸಿ.ಸುಧಾಕರ, ಡಾ.ಎಚ್.ಸಿ.ಮಹದೇವಪ್ಪ ಮೊದಲಾದವರು ಹಾಜರಿರುವರು.

– ಯತಿರಾಜ್ ಬ್ಯಾಲಹಳ್ಳಿ
ಪತ್ರಕರ್ತರು, ಈದಿನ.ಕಾಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣ; ದಾಳಿಕೋರ ಥಾಮಸ್ ಮ್ಯಾಥ್ಯೂ ಗುರುತು ಪತ್ತೆ

0
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದಲ್ಲಿ ಭಾಗಿಯಾಗಿರುವ ಶಂಕಿತನನ್ನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಎಫ್‌ಬಿಐ...