Homeಕರ್ನಾಟಕಸಾರ್ವಜನಿಕ ಸ್ಥಳಗಳಲ್ಲಿ ಓದುವುದು, ಪ್ರತಿಭಟಿಸುವುದು ತಪ್ಪೇ?

ಸಾರ್ವಜನಿಕ ಸ್ಥಳಗಳಲ್ಲಿ ಓದುವುದು, ಪ್ರತಿಭಟಿಸುವುದು ತಪ್ಪೇ?

- Advertisement -
- Advertisement -

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ತೆಗೆದುಕೊಂಡ ಎರಡು ಜನಪ್ರಿಯ ನಿರ್ಧಾರಗಳು ಹೀಗಿದ್ದವು: ಒಂದು, ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿ, ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅದು ಅನ್ವಯಿಸುತ್ತದೆ ಎಂದು ಹೇಳಿದ್ದು. ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು ಎಂದಿದ್ದು. ಎರಡು, ವಾಹನ ಸಂಚಾರಕ್ಕೆ ನೀಡಲಾಗಿರುವ ಝೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿರುವುದಾಗಿ ತಿಳಿಸಿದ್ದು. ಝೀರೋ ಟ್ರಾಫಿಕ್‌ನಿಂದಾಗಿ ಉಳಿದ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದರು ಮುಖ್ಯಮಂತ್ರಿಗಳು.

ಈ ಎರಡು ನಿರ್ಧಾರಗಳು ಪರಿಣಾಮಕಾರಿಯಾಗಿ ಪಾಲನೆಯಾಗಿವೆಯೇ ಎಂಬುದು ಬೇರೆಯೇ ಮಾತು. ಮೊದಲ ನಿರ್ಧಾರ- ಪುಸ್ತಕ ಪ್ರೀತಿಯನ್ನು ತೋರುವ ನಿಟ್ಟಿನಲ್ಲಿದ್ದರೆ, ಎರಡನೆಯದ್ದು- ಟ್ರಾಫಿಕ್ ಸಮಸ್ಯೆ ಉಂಟಾಗಬಾರದು ಎಂಬ ಕಾಳಜಿಯನ್ನು ಹೊಂದಿದೆ. ಮೊದಲ ಘೋಷಣೆ ಸ್ವಾಗತಾರ್ಹವಾದರೂ ಎರಡನೇ ಘೋಷಣೆಯನ್ನು ವಿಶಾಲ ದೃಷ್ಟಿಕೋನದಲ್ಲಿ ವಿಮರ್ಶೆಗೆ ಒಳಪಡಬೇಕಾಗುತ್ತದೆ.

ಕಾಕತಾಳೀಯವೆಂಬಂತೆ ಈ ಎರಡು ನಿರ್ಧಾರಗಳಿಗೆ ಸಂಬಂಧಿಸಿದ ಕೆಲವು ಅನಪೇಕ್ಷಣೀಯ ವಿದ್ಯಮಾನಗಳು ಘಟಿಸಿವೆ. ಸರ್ಕಾರದ ಮುಖ್ಯಸ್ಥರೇ ಪುಸ್ತಕ ಪ್ರೀತಿಯನ್ನು ತೋರುವಾಗ- ತೋಟಗಾರಿಕೆ ಇಲಾಖೆಯು ಬೆಂಗಳೂರಿನ ಪುಸ್ತಕ ಪ್ರೇಮಿಗಳಿಗೆ ತೊಂದರೆಯಾಗುವಂತಹ ಬೆಳವಣಿಗೆಗೆ ಕಾರಣವಾಗಿದೆ.

ಪುಸ್ತಕ ಓದುವವರ ಸಂಖ್ಯೆ ಹೆಚ್ಚಬೇಕಿದೆ ಎನ್ನುವ ಈ ದಿನಮಾನಗಳಲ್ಲಿ ಪುಸ್ತಕ ಪ್ರೀತಿಯನ್ನು ಉದ್ದೀಪಿಸುವ ವಿನೂತನ ಪ್ರಯೋಗಗಳೂ ನಮ್ಮ ಸುತ್ತಲೂ ಆಗುತ್ತಿವೆ. ಅದರಲ್ಲಿ ’ಲಾಲ್‌ಬಾಗ್ ರೀಡ್ಸ್’ ಎಂಬುದೂ ಒಂದು.

ಲಾಲ್‌ಬಾಗ್ ರೀಡ್ಸ್- ಒಂದು ಓದುಗ ಸಮುದಾಯ. ದಿನವೆಲ್ಲಾ ದುಡಿಮೆ ಮಾಡಿ ಏಕತಾನತೆ ಕಂಡ ವಿವಿಧ ವೃತ್ತಿಯ ಹಿನ್ನೆಲೆಯ ಮಂದಿ ಸುಂದರ ಹಸಿರು ಪರಿಸರದ ನಡುವೆ ಓದುವ ಒಂದು ಹವ್ಯಾಸಕ್ಕೆ ಕಳೆದ ಮೇ ತಿಂಗಳಲ್ಲಿ ಚಾಲನೆ ನೀಡಿದರು. ಈ ಓದುಗ ತಂಡಕ್ಕೆ ’ಲಾಲ್‌ಬಾಗ್ ರೀಡ್ಸ್’ ಎಂಬ ಹೆಸರು ಇಟ್ಟುಕೊಂಡರು. ಇನ್ಸ್ಟಾಗ್ರಾಮ್‌ನಲ್ಲಿ ಅದೇ ಹೆಸರಲ್ಲಿ ಖಾತೆ ಸೃಷ್ಟಿಸಿ ಕೆಲವು ಫೋಟೋಗಳನ್ನೂ ಅಪ್‌ಲೋಡ್ ಮಾಡುತ್ತಾ ಬಂದರು. ಭಾನುವಾರ ಮುಂಜಾನೆ ನಿಗದಿತ ಸಮಯಕ್ಕೆ ಸೇರಿ, ಲಾಲ್‌ಬಾಗ್‌ನ ವಿವಿಧೆಡೆ ಚದುರಿ ಅಲ್ಲಲ್ಲಿ ನೆಲಹಾಸಿನ ಮೇಲೋ ಬೆಂಚಿನ ಮೇಲೋ ಕುಳಿತು ಓದುವುದನ್ನು ಮುಂದುವರಿಸಿದರು. ಸುಮಾರು ಐವತ್ತರಿಂದ ಅರವತ್ತು ಮಂದಿ ಈ ತಂಡದಲ್ಲಿದ್ದರು. ಒಂದೆರಡು ತಾಸು ಓದು ಮುಗಿಸಿ ಮನೆಗೆ ಮರಳುವ ಮುನ್ನ ಎಲ್ಲರೂ ಒಂದೆಡೆ ಸೇರಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ಚಟುವಟಿಕೆ ಕಳೆದ ನಾಲ್ಕು ತಿಂಗಳಿನಿಂದ ಚಾಲ್ತಿಯಲ್ಲಿತ್ತು. ಆದರೆ ಇವರು ಹೀಗೆ ಓದುತ್ತಿರುವುದರಿಂದ ಲಾಲ್‌ಬಾಗ್‌ನ ಪ್ರಾಣಿ ಮತ್ತು ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಎಂದು ಯಾರೋ ಒಬ್ಬರು ದೂರು ನೀಡಿದರು. ಇದನ್ನೇ ನೆಪವಾಗಿಟ್ಟುಕೊಂಡ ತೋಟಗಾರಿಕೆ ಇಲಾಖೆ ಓದುವ ಚಟುವಟಿಕೆಗೆ ನಿರ್ಬಂಧ ಹೇರಿತು.

ಲಾಲ್‌ಬಾಗ್‌ನಲ್ಲಿರುವ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಇತ್ತೀಚೆಗೆ ನಿರ್ದೇಶನವನ್ನು ನೀಡಿದ್ದು ಲಾಲ್‌ಬಾಗ್ ರೀಡ್ಸ್ ತಂಡಕ್ಕೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. “ಈ ಸಸ್ಯೋದ್ಯಾನದಲ್ಲಿ ಗುಂಪು ಚಟುವಟಿಕೆಗಳನ್ನು ನಡೆಸುವಂತಿಲ್ಲ. ಸಾರ್ವಜನಿಕರೊಬ್ಬರು ದೂರು ನೀಡಿದ್ದಾರೆ. ಇಲ್ಲಿ ಸಮುದಾಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ನಿಮ್ಮಿಂದಾಗಿ ಪ್ರಾಣಿಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಸಮುದಾಯದ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು” ಎಂದಿದ್ದಾರೆ.

ಶ್ರುತಿ ಷಾ ಮತ್ತು ಹರ್ಷ್ ಸ್ನೇಹಾಂಶು ಎಂಬ ಸಹೃದಯರು ’ಕಬ್ಬನ್ ರೀಡ್ಸ್’ ಎಂಬ ಪ್ರಯೋಗವನ್ನು ಆರಂಭಿಸಿದ್ದರು. ಅದರ ಮುಂದುವರಿದ ಭಾಗವಾಗಿ ’ಲಾಲ್‌ಬಾಗ್ ರೀಡ್ಸ್’ ಹುಟ್ಟಿಕೊಂಡಿತು. ಪ್ರಪಂಚದ ಸುಮಾರು 60 ನಗರಗಳಲ್ಲಿ ಇಂತಹ ಆಂದೋಲನವಾಗುತ್ತಿದ್ದು ಬೆಂಗಳೂರಿನಲ್ಲೂ ಚಾಲನೆಗೆ ಬಂತು. ವೈಟ್‌ಫೀಲ್ಡ್ ರೀಡ್ಸ್, ಸ್ಯಾಂಕಿ ರೀಡ್ಸ್, ಹೊಸೂರು ಸರ್ಜಾಪುರ ರೋಡ್ ರೀಡ್ಸ್ – ಈ ಆಂದೋಲನದ ಅವತರಣಿಕೆಗಳಾಗಿವೆ. “ಆದರೀಗ ಉದ್ಯಾನದಲ್ಲಿ ಓದುವುದೇ ತಪ್ಪಾಗಿದೆ. ತೋಟಗಾರಿಕೆ ಇಲಾಖೆಯು ಮುಖ್ಯಮಂತ್ರಿಯವರ ಆಶಯಕ್ಕೆ ವಿರುದ್ಧವಾಗಿ ನಿಂತಿದೆ” ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಲಿಯೊ ಸಾಲ್ಡಾನಾ.

ಲಿಯೊ ಸಾಲ್ಡಾನಾ

“ಓದುಗರ ಮೇಲೆ ಕಾನೂನು ಕ್ರಮ ಜರುಗಿಸಲು ಮುಂದಾಗಿರುವ ತೋಟಗಾರಿಕೆ ಇಲಾಖೆಯ ನಿರ್ಧಾರವನ್ನು ಮುಖ್ಯಮಂತ್ರಿಯವರು ಒಪ್ಪುತ್ತಾರೆಯೇ? ತೋಟಗಾರಿಕೆ ಇಲಾಖೆಯ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಈ ಕುರಿತು ಏನು ಹೇಳುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ’ನ್ಯಾಯಪಥ’ದೊಂದಿಗೆ ಮಾತನಾಡಿದ ’ಲಾಲ್‌ಬಾಗ್ ರೀಡ್ಸ್’ನ ಮೇಲ್ವಿಚಾರಕಿ ನಂದಿತಾ ಬೂಪಾಳಂ, “ಮೇ ತಿಂಗಳಿನಿಂದಲೂ ಈ ಚಟುವಟಿಕೆಯನ್ನು ಮಾಡುತ್ತಾ ಬಂದಿದ್ದೆವು. ಎಂದಿಗೂ ಸಮಸ್ಯೆಯಾಗಿರಲಿಲ್ಲ. ಬೆಂಗಳೂರಿನಂತಹ ನಗರದೊಳಗೆ ಸುಂದರ ಪರಿಸರವನ್ನು ಹೊಂದಿರುವ ಲಾಲ್‌ಬಾಗ್, ಕಬ್ಬನ್ ಪಾರ್ಕ್‌ನಲ್ಲಿ ಕುಳಿತು ಓದುವ ಮೂಲಕ ಪ್ರಕೃತಿಯ ಮಡಿಲಿನ ಅನುಭವ ಪಡೆಯುವುದು ಈ ಚಟುವಟಿಕೆಯ ಉದ್ದೇಶ. ಇತ್ತೀಚೆಗೆ ವ್ಯಕ್ತಿಯೊಬ್ಬರು ಬಂದು ನಮ್ಮೊಂದಿಗೆ ಜಗಳವಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನೀವು ಗುಂಪುಗುಂಪಾಗಿ ಲಾಲ್‌ಬಾಗ್‌ಗೆ ಬರುವಂತಿಲ್ಲ, ಹುಲ್ಲುಹಾಸಿನ ಮೇಲೆ ಕೂರುವಂತಿಲ್ಲ, ಲಾಲ್‌ಬಾಗ್ ಪರಿಸರವನ್ನು ಹಾಳು ಮಾಡುತ್ತಿದ್ದೀರಿ. ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದೀರಿ ಎಂದು ಆರೋಪಗಳನ್ನು ಮಾಡಿದರು. ನಮ್ಮ ವಿರುದ್ಧ ಉಪನಿರ್ದೇಶಕರಿಗೆ ದೂರು ನೀಡಿದರು. ನಾವು ಉಪನಿರ್ದೇಶಕರನ್ನು ಭೇಟಿ ನೀಡಿ ಮಾತನಾಡಿದೆವು. ಆದರೆ ಅವರ ಪ್ರತಿಕ್ರಿಯೆ ಆಘಾತ ತಂದಿತು. ಇನ್ಸ್ಟಾಗ್ರಾಮ್‌ನಲ್ಲಿ ಲಾಲ್‌ಬಾಗ್ ಎಂಬ ಹೆಸರನ್ನೇ ನೀವು ಬಳಸುವಂತಿಲ್ಲ. ಈ ಹೆಸರು ಬಳಸಿದರೆ ನಿಮ್ಮ ವಿರುದ್ಧ ಎಫ್‌ಐಆರ್ ಮಾಡ್ತೀವಿ ಎಂದರು. ನಮ್ಮ ಚಟುವಟಿಕೆಯ ಕುರಿತು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆವು. ಭಾನುವಾರ ಬಂದು ನಮ್ಮನ್ನು ಗಮನಿಸಿ. ನಾವು ಗುಂಪಾಗಿ ಸೇರುವುದಿಲ್ಲ. ಎಲ್ಲರೂ ಬೇರೆಬೇರೆ ಚದುರಿ ಕುಳಿತು ಓದುತ್ತೇವೆ ಎಂದರೂ ಆಲಿಸಲಿಲ್ಲ. ಲಾಲ್‌ಬಾಗ್‌ನಲ್ಲಿ ಯೋಗ ಮಾಡುವವರೂ ಬರುತ್ತಾರೆ. ಫ್ಲವರ್ ಷೋಗೆಂದು ತರುವ ಪ್ಲಾಸ್ಟಿಕ್‌ಗಳು ಹಾಗೆಯೇ ಇರುತ್ತವೆ. ಇದ್ಯಾವುದರಿಂದಲೂ ಪರಿಸರಕ್ಕೆ ಹಾನಿ ಮಾಡಿಲ್ಲ, ಆದರೆ ನಮ್ಮ ಚಟುವಟಿಕೆಯಿಂದ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ. ತೋಟಗಾರಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಒಂದೆರಡು ಗಂಟೆ ಹುಲ್ಲಿನ ಮೇಲೆ ಕೂತರೆ ಏನೂ ಆಗಲ್ಲ. ಆದರೆ ಐದಾರು ಗಂಟೆ ಕುಳಿತರೆ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳೇ ಹೇಳಿದ್ದಾರೆ. ಆದರೆ ಲಾಲ್‌ಬಾಗ್‌ನ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದರು.

ಇದನ್ನೂ ಓದಿ: ಸುಳ್ಳು ಪೋಸ್ಟ್‌: ಬಿಜೆಪಿ ಕಾರ್ಯಕರ್ತೆ ಶಕುಂತಲಾ ವಿರುದ್ಧ ಪ್ರಕರಣ ದಾಖಲು

ನಮ್ಮೊಂದಿಗೆ ಮಾತನಾಡಿದ ಫೋಟೋಗ್ರಾಫರ್ ಮಹೇಶ್ ಶಾಂತರಾಮ್, “ಓದುವುದಕ್ಕೆ ಪಾರ್ಕ್ ಬೇಡ ಎನ್ನುವುದಾದರೆ, ಇನ್ನೇತಕ್ಕೆ? ಬೀಗ ಹಾಕಿಬಿಡಲಿ. ಜೊತೆಗೆ ಫೋಟೋಗಳನ್ನು ಇಲ್ಲಿ ತೆಗೆಯಬಾರದು ಎನ್ನುತ್ತಾರೆ. ಹಲವು ದೇಶಗಳನ್ನು ಸುತ್ತಿದ್ದೇನೆ. ಇಂತಹ ನಿಯಮಗಳನ್ನು ಎಲ್ಲಿಯೂ ನೋಡಿಲ್ಲ ಎಂದು ವ್ಯಂಗ್ಯವಾಡಿದ ಅವರು, “ದುರಾಡಳಿತ ನಡೆಸಿದ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದೆವು. ಆದರೆ ಕಾಂಗ್ರೆಸ್ ಸರ್ಕಾರದಲ್ಲೂ ಇವೇ ಪ್ರಮಾದಗಳಾಗುತ್ತಿವೆ. ಸರ್ಕಾರ ಬದಲಾದರೂ ಸರ್ಕಾರಿ ಅಧಿಕಾರಿಗಳ ಮನಸ್ಥಿತಿ ಬದಲಾಗಲ್ಲ” ಎಂದು ವಿಷಾದಿಸಿದರು.

ಮುಖ್ಯಮಂತ್ರಿಯವರ ಎರಡನೇ ಜನಪ್ರಿಯ ಘೋಷಣೆಯನ್ನು ನೋಡೋಣ. ಝೀರೋ ಟ್ರಾಫಿಕ್‌ನಿಂದ ವಾಹನ ದಟ್ಟಣೆಯಾಗುತ್ತದೆ ಎಂಬ ಅವರ ಕಾಳಜಿ ಒಳ್ಳೆಯದೇ. ಆದರೆ ಮುಖ್ಯಮಂತ್ರಿಯಾದವರ ಕೆಲಸಗಳು ಮಹತ್ವದ್ದಾಗಿರುತ್ತವೆ. ಅವರಿಗೆ ಝಿರೋ ಟ್ರಾಫಿಕ್ ವ್ಯವಸ್ಥೆ ಇರುವುದು ಜನರ ಸೇವೆಗಾಗಿಯೇ ಅಲ್ಲವೇ? ನಿಗದಿತ ಸಮಯದಲ್ಲಿ ಪೂರ್ವ ನಿರ್ಧರಿತ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಯವರು ಇರಬೇಕಾದದ್ದು ಅಗತ್ಯ ಅಲ್ಲವೇ? ಟ್ರಾಫಿಕ್ ಸಮಸ್ಯೆ ಎಂಬ ಕಾರಣ ಯಾವುದ್ಯಾವುದಕ್ಕೋ ಅನ್ವಯವಾಗುತ್ತಾ ಜನರ ಮೂಲಭೂತ ಹಕ್ಕುಗಳನ್ನೇ ಮೊಟುಕುಗೊಳಿಸುತ್ತಿರುವುದು ಅಪಾಯಕಾರಿ.

ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗಳು ಫ್ರೀಡಂ ಪಾರ್ಕ್ ಬಿಟ್ಟು ಬೇರೆಲ್ಲೂ ನಡೆಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ ಎಂದು ಹೇಳಿಕೊಂಡು ಸಾಕಷ್ಟು ಪ್ರತಿಭಟನೆಗಳನ್ನು ಹತ್ತಿಕ್ಕಿದ್ದನ್ನು ನೋಡಿದ್ದೇವೆ. ಆದರೆ ಹೈಕೋರ್ಟ್‌ನ ಅಂತಿಮ ತೀರ್ಪು ಅಂತಹ ನಿರ್ಬಂಧಗಳನ್ನೇನೂ ಹೇರಿಲ್ಲ. ಇದನ್ನು ಪೊಲೀಸ್ ಇಲಾಖೆಯ ನಿರ್ಧಾರಕ್ಕೆ ಬಿಟ್ಟಿರುವುದು ಸ್ಪಷ್ಟವಾಗಿದೆ. ಸಾರ್ವಜನಿಕ ಸ್ಥಳಗಳ ವಿಚಾರದಲ್ಲಿ ಸರ್ಕಾರಿ ಇಲಾಖೆಗಳು ತೆಗೆದುಕೊಳ್ಳುತ್ತಿರುವ ಪ್ರತಿಗಾಮಿ ನಿಲುವುಗಳ ಸಂಬಂಧ ನಾವು ಪುನರ್ ಅವಲೋಕಿಸಿಕೊಳ್ಳುವ ಅಗತ್ಯವಿದೆ.

ಫ್ರೀಡಂಪಾರ್ಕ್‌ನಲ್ಲಿಯಷ್ಟೇ ಪ್ರತಿಭಟನೆ ಮಾಡಬೇಕೆಂಬ ನಿಯಮಕ್ಕೆ, “ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಹೀಗಾಗಿ ಹಾದಿಬೀದಿಯಲ್ಲಿ ಪ್ರತಿಭಟನೆ ಮಾಡುವಂತಿಲ್ಲ” ಎಂಬ ಸಬೂಬು ನೀಡಲಾಗುತ್ತದೆ.

ಈ ಧೋರಣೆಯನ್ನು ಹೋರಾಟಗಾರರು ಪ್ರಶ್ನಿಸುತ್ತಲೇ ಬಂದಿದ್ದಾರೆ. ಪರ್ಯಾಯ ಕಾನೂನು ವೇದಿಕೆಯ ವಿನಯ್ ಶ್ರೀನಿವಾಸ್ ಅವರು ’ನ್ಯಾಯಪಥ’ಕ್ಕೆ ಪ್ರತಿಕ್ರಿಯಿಸಿ, “ಫ್ರೀಡಂಪಾರ್ಕ್‌ನಲ್ಲಿಯೇ ಮಾತ್ರ ಸೇರಬೇಕು ಎಂಬುದು ಸಂವಿಧಾನದ 19ನೇ ವಿಧಿ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿದೆ. ಯಾರಿಗೂ ತೊಂದರೆಯನ್ನು ನೀಡದೆ ಶಾಂತಿಯುತವಾಗಿ ಸಭೆ ಸೇರುವುದು ನಮಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಅದನ್ನು ದಮನ ಮಾಡುವುದು ಸಂವಿಧಾನ ಉಲ್ಲಂಘನೆಯಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

“ಪ್ರಜಾಪ್ರಭುತ್ವದಲ್ಲಿ ಪ್ರತಿರೋಧ ಮುಖ್ಯ. ಕೇವಲ ಫ್ರೀಡಂಪಾರ್ಕ್‌ನಲ್ಲಷ್ಟೇ ಪ್ರತಿರೋಧ ತೋರಿಸಿ ಎಂದರೆ ಅರ್ಥವಿಲ್ಲ. ಟ್ರಾಫಿಕ್ ಸಮಸ್ಯೆ ಆಗುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ. ಮುಖ್ಯಮಂತ್ರಿಯವರು ಓಡಾಡುವಾಗಲೂ ಆ ಸಮಸ್ಯೆಯಿದೆ. ಚಳವಳಿಗಳಿಗೂ ವಾಹನ ದಟ್ಟಣೆಗೂ ಸಂಬಂಧ ಕಲ್ಪಿಸುವುದು ನ್ಯಾಯವಲ್ಲ. ಟ್ರಾಫಿಕ್ ನೆಪ ಇಟ್ಟುಕೊಂಡು ಪ್ರತಿರೋಧಗಳನ್ನು ಹತ್ತಿಕ್ಕಲು ಆಳುವ ಸರ್ಕಾರಗಳು ಯತ್ನಿಸುತ್ತಿರುತ್ತವೆ” ಎಂದು ಎಚ್ಚರಿಸಿದರು.

“ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಲಭ್ಯವಿರಬೇಕು. ಲಾಲ್‌ಬಾಗ್‌ನಲ್ಲಿ ಪುಸ್ತಕ ಓದಬಾರದು ಎಂದರೆ ಹೇಗೆ? ಕಬ್ಬನ್ ಪಾರ್ಕ್‌ನ ಒಂದಿಷ್ಟು ಜಾಗವನ್ನು ಹೈಕೋರ್ಟ್‌ನ ಪಾರ್ಕಿಂಗ್‌ಗಾಗಿ ಬಳಸಲಾಗುತ್ತಿದೆ. ಸಾರ್ವಜನಿಕ ಜಾಗಗಳು ಕೇವಲ ಸರ್ಕಾರದ ಸ್ವತ್ತಲ್ಲ, ಸರ್ಕಾರ ಅದನ್ನು ನೋಡಿಕೊಳ್ಳಬಹುದಷ್ಟೇ. ಫ್ರೀಡಂಪಾರ್ಕ್ ವಿಚಾರದಲ್ಲಿಯೂ ನಾವು ಸಾಕಷ್ಟು ಸಾರಿ ದನಿ ಎತ್ತಿದ್ದೇವೆ. ಫ್ರೀಡಂಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕೆಂದು ಹೈಕೋರ್ಟ್ ಈ ಹಿಂದೆ ಮಧ್ಯಂತರ ಆದೇಶ ನೀಡಿತ್ತು. ಆದರೆ ಅಂತಿಮ ಆದೇಶದಲ್ಲಿ ಇಂತಹ ನಿರ್ದೇಶನವಿಲ್ಲ. ಪೊಲೀಸ್ ಮಾರ್ಗಸೂಚಿಗಳನ್ನು ಪಾಲಿಸಿ ಎಂದಷ್ಟೇ ಹೇಳಿದೆ. ಹೀಗಾಗಿ ಗೃಹ ಇಲಾಖೆ ಮಾರ್ಗಸೂಚಿಗಳನ್ನು ಬದಲಾಯಿಸಬೇಕು” ಎಂದು ಒತ್ತಾಯಿಸಿದರು.

ಸಿರಿಮನೆ ನಾಗರಾಜ್

ಹಿರಿಯ ಹೋರಾಟಗಾರರಾದ ಸಿರಿಮನೆ ನಾಗರಾಜ್ ಪ್ರತಿಕ್ರಿಯಿಸಿ, “ಬಿಡಬ್ಲ್ಯುಎಸ್‌ಎಸ್‌ಎಸ್‌ಬಿ (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ) ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು. ಕಾರ್ಮಿಕರು ಕಚೇರಿಯ ಎದುರಲ್ಲೇ ಪ್ರತಿಭಟಿಸಿದರೆ ಬೀರುವ ಪರಿಣಾಮವೇ ಬೇರೆ, ಫ್ರೀಡಂಪಾರ್ಕ್‌ನಲ್ಲಿ ಕುಳಿತು ಹೋರಾಡಿದರೆ ಬರುವ ಪ್ರತಿಕ್ರಿಯೆಯೇ ಬೇರೆ. ಅಧಿಕಾರಿಗಳು ಇಲ್ಲಿಗೆ ಬರುವುದೇ ಇಲ್ಲ. ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರಿಂದ ಅಧಿಕಾರಿಗಳು ಸ್ಪಂದಿಸಿದ್ದರು” ಎಂದರು.

“ಬೀದಿ ಹೋರಾಟಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ವಾದವೇ ಸರಿಯಲ್ಲ. ತಿಂಗಳುಗಟ್ಟಲೆ ನೋವುಂಡ ಜನರು ಬೀದಿಗೆ ಬಂದಿರುತ್ತಾರೆ ಎಂಬುದನ್ನು ಮರೆಯಬಾರದು. ಸರ್ಕಾರ ಸಮಸ್ಯೆಗಳನ್ನು ಬಗೆಹರಿಸಿದರೆ ಜನರೇಕೆ ಬೀದಿಗೆ ಬರುತ್ತಾರೆ? ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರತಿಭಟನೆಗಳು ನಡೆದಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳಬಹುದು. ಹತ್ತು ಗಂಟೆಯಿಂದ ಐದು ಗಂಟೆಯವರೆಗೆ ಮಾತ್ರ ಪ್ರತಿಭಟನೆ ಮಾಡಬೇಕು ಎಂದು ಹೇಳುತ್ತಾರೆ. ಇದೇನು ಆಫೀಸ್ ಕೆಲಸವೇ?” ಎಂದು ಪ್ರಶ್ನಿಸಿದರು.

“ಎಲ್ಲವನ್ನೂ ಬೀದಿಯಲ್ಲೇ ನಡೆಸಬೇಕೆಂದು ಜನರು ಉದ್ದೇಶಿಸುವುದಿಲ್ಲ. ಮೋದಿ ಬಂದು ಇಲ್ಲಿ ರೋಡ್ ಷೋ ಮಾಡಿದಾಗ ತೊಂದರೆಯಾಗಲಿಲ್ಲವೇ? ರಾಜಕಾರಣಿಗಳು ಕಾರ್ಯಕ್ರಮಗಳನ್ನು ಮಾಡುವಾಗ ಜನರಿಗೆ ಸಮಸ್ಯೆಯಾಗುವುದಿಲ್ಲವೇ?” ಎಂದು ಕೇಳಿದರು.

ಹೋರಾಟದ ಹಕ್ಕನ್ನು ಮರಳಿ ಪಡೆಯುವುದಕ್ಕಾಗಿ ಹಲವು ಸಂಘಟನೆಗಳ ಮುಖಂಡರು ನಿರಂತರ ಪ್ರಯತ್ನಿಸುತ್ತಿದ್ದಾರೆ. ಚಳವಳಿಗಳ ಪರ ಕಾಳಜಿ ತೋರುವ ಮುಖ್ಯಮಂತ್ರಿಯವರು ಹಕ್ಕನ್ನು ಮರುಸ್ಥಾಪಿಸುತ್ತಾರೋ, ಇಲ್ಲ ತಾವು ಕೂಡ ಹಿಂದಿನ ಮುಖ್ಯಮಂತ್ರಿಗಳಂತೆಯೇ ಎಂದು ಸ್ಪಷ್ಟಪಡಿಸಿ ಭ್ರಮನಿರಸನಕ್ಕೆ ಕಾರಣರಾಗುತ್ತಾರೋ- ನೋಡೋಣ.

ನಿಯಮ ಮುರಿಯುವ ಎಚ್ಚರಿಕೆ

ಫ್ರೀಡಂಪಾರ್ಕ್ ಹೊರತಾಗಿಯೂ ಇತರೆಡೆ ಪ್ರತಿಭಟಿಸುವ ಅವಕಾಶವನ್ನು ನೀಡದಿದ್ದರೆ ನಿಯಮಗಳನ್ನು ಉಲ್ಲಂಘಿಸಲಾಗುವುದು ಎಂದು ’ಹೋರಾಟದ ಹಕ್ಕಿಗಾಗಿ ಜನಾಂದೋಲನ’ ವೇದಿಕೆ ಎಚ್ಚರಿಕೆ ನೀಡಿದೆ.

ಈ ವೇದಿಕೆ ಇತ್ತೀಚೆಗೆ ಪತ್ರಿಕಾ ಪ್ರಕಟಣೆಯೊಂದನ್ನು ನೀಡಿದ್ದು, “ಹಿಂದಿನ ಬಿಜೆಪಿ ಆಡಳಿತದಲ್ಲಿ ತೆಗೆದುಕೊಂಡ ನಿರ್ಧಾರದಿಂದಾಗಿ ಪ್ರತಿಭಟನೆಯ ಹಕ್ಕನ್ನು ಬೆಂಗಳೂರು ಕಳೆದುಕೊಂಡಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಈ ನಿರ್ಬಂಧವನ್ನು ತರಲಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಇದು ಸರಿಯಲ್ಲ. 2022ರಲ್ಲಿ, ಪ್ರತಿಭಟನೆಗಳ ಮೇಲೆ ನಿರ್ಬಂಧಗಳ ಕುರಿತ ಸ್ವಯಂಪ್ರೇರಿತ ಸಾರ್ವಜನಿಕ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸುತಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಹೊರಬೀಳುವ ಮುನ್ನವೇ ಪ್ರತಿಭಟನೆಗಳನ್ನು ನಿಯಂತ್ರಿಸುವ, ’ಪ್ರಜಾಪ್ರಭುತ್ವ ವಿರೋಧಿ ಪ್ರತಿಭಟನೆಗಳು, ಪ್ರದರ್ಶನ ಮತ್ತು ಪ್ರತಿಭಟನಾ ಮೆರವಣಿಗೆಗಳ ಪರವಾನಗಿ ಮತ್ತು ನಿಯಂತ್ರಣ (ಬೆಂಗಳೂರು ನಗರ) ಆದೇಶ, 2021’ಅನ್ನು ಬೆಂಗಳೂರಿನ ಪೊಲೀಸ್ ಆಯುಕ್ತರು ಹೊರಡಿಸಿದರು. ಈ ಆದೇಶ ಎಲ್ಲಾ ಪ್ರತಿಭಟನೆಗಳನ್ನು ಫ್ರೀಡಂಪಾರ್ಕ್‌ಗೆ ಮಾತ್ರ ಸೀಮಿತಗೊಳಿಸಿದೆ. ಈ 2021ರ ಆದೇಶವನ್ನು ಹೊರಡಿಸಿದ ನಂತರ, ಹೈಕೋರ್ಟ್ ಪಿಐಎಲ್‌ನ್ನು ಮುಕ್ತಾಯಗೊಳಿಸಿತು. ಬೆಂಗಳೂರಿಗರ ಪ್ರತಿಭಟಿಸುವ ಹಕ್ಕಿಗೆ ಅಡ್ಡಿಯಾಗಿರುವುದು, ಮಾಜಿ ಪೊಲೀಸ್ ಆಯುಕ್ತರು ಜಾರಿಗೊಳಿಸಿದ ಈ ಅಸಾಂವಿಧಾನಿಕ ಆದೇಶವೇ ಹೊರತು ನ್ಯಾಯಾಲಯದ ತೀರ್ಪಲ್ಲ” ಎಂದು ಸ್ಪಷ್ಟಪಡಿಸಲಾಗಿದೆ.

ದೇವನಹಳ್ಳಿಯಲ್ಲಿ ಭೂಸ್ವಾಧೀನಕ್ಕೆ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ, ಒಳಮೀಸಲಾತಿ ಕೋರಿದ ದಲಿತ ಸಂಘಟನೆ ಕಾರ್ಯಕರ್ತರಿಗೆ, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪೌರಕಾರ್ಮಿಕರಿಗೆ, ಸ್ಯಾಂಕಿ ಮೇಲುಸೇತುವೆ ಸಮಸ್ಯೆ ವಿರೋಧಿಸಿ ಮಲ್ಲೇಶ್ವರಂ ನಿವಾಸಿಗಳು ನಡೆಸುತ್ತಿರುವ ಹೋರಾಟಕ್ಕೆ, ಪ್ರೈಡ್ ಮಾರ್ಚ್ ಆಯೋಜಿಸಲು ಬಯಸಿದ್ದ ಎಲ್‌ಜಿಬಿಟಿಕ್ಯೂಐ ಸಮುದಾಯದವರಿಗೆ ಪ್ರತಿಭಟನೆಯ, ಮೆರವಣಿಗೆಯ ಹಕ್ಕನ್ನು ನಿರಾಕರಿಸಲಾಗಿದೆ. ಈ ಮೂಲಭೂತ ಹಕ್ಕನ್ನು ಚಲಾಯಿಸಿದ ಕೆಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವೇದಿಕೆ ಆತಂಕ ವ್ಯಕ್ತಪಡಿಸಿದೆ.

2021ರ ದೆಹಲಿ ಸಾಮೂಹಿಕ ಅತ್ಯಾಚಾರದ ನಂತರದ ಪ್ರತಿಭಟನೆಗಳ ಫಲವಾಗಿ ಅತ್ಯಾಚಾರ-ವಿರೋಧಿ ಕಾನೂನುಗಳು ಬಲವಾದವು. ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆಗಳು ಕಾರ್ಮಿಕ ವಿರೋಧಿ ಪಿಎಫ್ ನಿಯಮಗಳನ್ನು ರದ್ದುಗೊಳಿಸಿದವು. ಪ್ರತಿಭಟನೆಯ ನಂತರವೇ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳವಾಗಿದೆ. ರೈತರ ಪ್ರತಿಭಟನೆಗಳು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಕಾರಣವಾದವು. ಮರಗಳನ್ನು ಎಗ್ಗಿಲ್ಲದೆ ಕಡಿಯುವುದನ್ನು ಪ್ರತಿಭಟಿಸಿದ್ದರಿಂದಲೇ ಬೆಂಗಳೂರಿನ ಬಹಳಷ್ಟು ಮರಗಳು ಇನ್ನೂ ಉಳಿದುಕೊಂಡಿವೆ. ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದರಿಂದಲೇ ಸಂವಿಧಾನ ವಿರೋಧಿ ಎನ್‌ಆರ್‌ಸಿ-ಸಿಎಎ ಜಾರಿ ಮಾಡಲಾಗಿಲ್ಲ ಎಂದು ನಮೂದಿಸಿರುವ ಹೋರಾಟಗಾರರು ಬೀದಿ ಹೋರಾಟಗಳ ಮಹತ್ವವನ್ನು ಸಾರಿ ಹೇಳುತ್ತಿದ್ದಾರೆ.

ಯತಿರಾಜ್ ಬ್ಯಾಲಹಳ್ಳಿ
ಪತ್ರಕರ್ತರು, ಈದಿನ.ಕಾಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...