Homeಮುಖಪುಟನೇತಾಜಿ ಸುಭಾಷ್‌ ಚಂದ್ರ ಬೋಸ್ ನೆನಪು: ಆರ್‌ಎಸ್‌ಎಸ್‌ ಬಚ್ಚಿಡುವ ಸತ್ಯಗಳಿವು

ನೇತಾಜಿ ಸುಭಾಷ್‌ ಚಂದ್ರ ಬೋಸ್ ನೆನಪು: ಆರ್‌ಎಸ್‌ಎಸ್‌ ಬಚ್ಚಿಡುವ ಸತ್ಯಗಳಿವು

ಸುಭಾಷ್ ಚಂದ್ರ ಬೋಸ್‌, ಗಾಂಧೀಜಿ, ನೆಹರೂ ಅವರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಗುರಿ ಮಾತ್ರ ಒಂದೇ ಆಗಿತ್ತು...

- Advertisement -
- Advertisement -

ಸ್ವಾತಂತ್ರ್ಯ ಹೋರಾಟಗಾರರಾದ ನೇತಾಜಿ ಸುಭಾಷ್ ಚಂದ್ರ ಬೋಸ್‌ ಅವರನ್ನು ಹೊಗಳುತ್ತಾ, ಮತ್ತೊಂದೆಡೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಪಂಡಿತ್‌ ಜವಹರಲಾಲ್‌ ನೆಹರೂ ಅವರನ್ನು ಅತೀವವಾಗಿ ಟೀಕಿಸುವ ಆರ್‌ಎಸ್‌ಎಸ್‌ನವರು ಸುಳ್ಳುಗಳನ್ನು ಹೇಳುತ್ತಿದ್ದಾರೆಯೇ? ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ಬಿಂಬಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಸಹಜವಾಗಿ ಹುಟ್ಟುತ್ತವೆ.

ಇದಕ್ಕೆ ತದ್ವಿರುದ್ಧವಾಗಿ ನೇತಾಜಿಯವರ ಒಡನಾಟ ಗಾಂಧೀಜಿ ಮತ್ತು ನೆಹರೂ ಅವರೊಂದಿಗಿತ್ತು. ಈ ನಾಯಕರ ಚಿಂತನೆಗಳು ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ವಿರೋಧಿಸಿದ್ದವು ಎಂದು ಇತಿಹಾಸ ಹೇಳುತ್ತದೆ. ಆದರೂ ನೇತಾಜಿಯವರನ್ನು ತನ್ನವರೆಂದು ಬಿಂಬಿಸಿಕೊಳ್ಳಲು ಸಂಘಪರಿವಾರ ಯತ್ನಿಸುತ್ತದೆ. ಇದರ ಭಾಗವಾಗಿಯೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 2021ರಲ್ಲಿ ಜನವರಿ 23ನೇ ತಾರೀಕನ್ನು ‘ಪರಾಕ್ರಮ ದಿವಸ’ (ನೇತಾಜಿ ಜನ್ಮದಿನ) ಎಂದು ಘೋಷಿಸಿತ್ತು.

ನೇತಾಜಿಯವರ 126ನೇ ಜನ್ಮದಿನದ ಅಂಗವಾಗಿ 21 ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಅಂಡಮಾನ್ ನಿಕೋಬಾರ್‌ನಲ್ಲಿರುವ ಹೆಸರು ಇರದಿರುವ ಅತಿದೊಡ್ಡ ದ್ವೀಪಗಳಿಗೆ ಇಡುವ ಕಾರ್ಯಕ್ರಮ ನಡೆದಿದೆ.

ಕಾರ್ಯಕ್ರಮವನ್ನು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, “ಸಾವರ್ಕರ್ ಮತ್ತು ದೇಶಕ್ಕಾಗಿ ಹೋರಾಡಿದ ಅನೇಕ ವೀರರು ಅಂಡಮಾನ್‌ನ ಈ ನೆಲದಲ್ಲಿ ಬಂಧಿತರಾಗಿದ್ದರು. ನಾನು 4-5 ವರ್ಷಗಳ ಹಿಂದೆ ಪೋರ್ಟ್ ಬ್ಲೇರ್‌ಗೆ ಭೇಟಿ ನೀಡಿದಾಗ ಅಲ್ಲಿನ 3 ಪ್ರಮುಖ ದ್ವೀಪಗಳಿಗೆ ಭಾರತೀಯ ಹೆಸರುಗಳನ್ನು ಇಟ್ಟು ಬಂದಿದ್ದೆ” ಎಂದಿದ್ದಾರೆ.

ಇದನ್ನೂ ಓದಿರಿ: ನೇತಾಜಿ ಜನ್ಮದಿನ: ಹೀಗಿದ್ದರು ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮೋದಿಯವರು ಟ್ಯಾಗೋರ್‌ ಮತ್ತು ಬೋಸ್ ಅವರ ಅನುಯಾಯಿಯಂತೆ ಬಿಂಬಿಸಿಕೊಳ್ಳಲು ಯತ್ನಿಸಿದ್ದರು. “ಕಾಂಗ್ರೆಸ್ಸೇತರ ಸ್ವಾತಂತ್ರ್ಯ ಹೋರಾಟಗಾರರನ್ನೆಲ್ಲ ತಮ್ಮವರೆಂದು ಬಿಂಬಿಸಿಕೊಳ್ಳಲು ಸಂಘಪರಿವಾರ ಯತ್ನಿಸುತ್ತಿದೆ. ಇದು ಅವರ ಇತ್ತೀಚಿನ ವರ್ಷಗಳ ತಂತ್ರಗಾರಿಕೆ” ಎನ್ನುತ್ತಾರೆ ಚಿಂತಕ ಶಿವಸುಂದರ್‌.

ನೇತಾಜಿ ಬೋಸ್ ಅವರ ಮಗಳಾದ ಅನಿತಾ ಬೋಸ್‌ ಇತ್ತೀಚೆಗೆ ಮಾತನಾಡಿ, ಆರ್‌ಎಸ್‌ಎಸ್‌ನ ಅಜೆಂಡಾಗಳನ್ನು ಕಟುವಾಗಿ ಟೀಕಿಸಿದ್ದಾರೆ. “ನನ್ನ ತಂದೆಯವರು ಆರ್‌ಎಸ್‌ಎಸ್‌ ಸಿದ್ಧಾಂತಕ್ಕೆ ವಿರುದ್ಧವಿದ್ದರು” ಎಂದು ಅವರು ನೆನಪಿಸಿದ್ದಾರೆ.

“ನನ್ನ ತಂದೆ ಧರ್ಮನಿಷ್ಠ ಹಿಂದೂವಾಗಿದ್ದರು. ಆದರೆ ಎಲ್ಲ ಧರ್ಮಗಳನ್ನೂ ಗೌರವಿಸುತ್ತಿದ್ದರು. ಪ್ರತಿಯೊಬ್ಬರೂ ಜತೆಯಾಗಿ ಬದುಕಬೇಕು ಎಂಬ ನೀತಿಯಲ್ಲಿ ನಂಬಿಕೆ ಇರಿಸಿದ್ದರು. ಆರೆಸ್ಸೆಸ್‌ಗೆ ಇದರಲ್ಲಿ ನಂಬಿಕೆ ಇದೆ ಎಂದು ನನಗೆ ಅನಿಸುತ್ತಿಲ್ಲ” ಎಂದು ‘ಇಂಡಿಯಾ ಟುಡೆ’ ವಾಹಿನಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

“ನೇತಾಜಿ ಅವರ ಸಿದ್ಧಾಂತವನ್ನು ಆರೆಸ್ಸೆಸ್ ಅನುಸರಿಸಲು ಆರಂಭಿಸಿದರೆ, ಅದು ಭಾರತಕ್ಕೆ ಬಹಳ ಒಳ್ಳೆಯ ಸಂಗತಿ. ನೇತಾಜಿ ಅವರು ಜಾತ್ಯತೀತತೆಯಲ್ಲಿ ನಂಬಿಕೆ ಇರಿಸಿದ್ದರು. ಆ ಮಟ್ಟಕ್ಕೆ ಆರೆಸ್ಸೆಸ್ ಆಲೋಚಿಸುತ್ತದೆ ಎಂದು ನನಗೆ ಖಾತರಿ ಇಲ್ಲ. ಆರೆಸ್ಸೆಸ್ ಹಿಂದೂ ರಾಷ್ಟ್ರೀಯವಾದಿ ಆಲೋಚನೆಗಳನ್ನು ಪ್ರತಿಪಾದಿಸಲು ಬಯಸಿದ್ದರೆ, ಅದು ನೇತಾಜಿ ಅವರ ಸಿದ್ಧಾಂತದ ಜತೆ ತಾಳೆಯಾಗುವುದಿಲ್ಲ. ನೇತಾಜಿ ಅವರನ್ನು ಅದಕ್ಕೆ ಬಳಸಿಕೊಳ್ಳುವುದಾದರೆ ನಾನು ಅದನ್ನು ಒಪ್ಪುವುದಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

“ನೇತಾಜಿ ಅವರಿಗೆ ಕೇವಲ ಬಾಯಿ ಮಾತಿನ ಗೌರವವನ್ನು ಅವರು ಸಲ್ಲಿಸುವುದಿಲ್ಲ ಎಂದು ನನಗೆ ಖಂಡಿತವಾಗಿಯೂ ಭಾವಿಸುತ್ತೇನೆ. ನೇತಾಜಿಯವರ 126ನೇ ಜನ್ಮದಿನವನ್ನು ಅವರು ಆಚರಿಸುತ್ತಿರುವುದನ್ನು ನಾನು ಗೌರವಿಸುತ್ತೇನೆ. ಉಪಖಂಡದ ಒಳಿತಿಗಾಗಿ, ನೇತಾಜಿಯವರ ಸಿದ್ಧಾಂತಗಳನ್ನು ಪಾಲಿಸುವುದು ಒಳಿತು” ಎಂದು ಅನಿತಾ ಬೋಸ್ ತಿಳಿಸಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಚಿಂತಕ ಶಿವಸುಂದರ್‌, “ಸುಭಾಷ್ ಚಂದ್ರ ಬೋಸ್ ಮತ್ತು ನೆಹರೂ ಅವರ ನಡುವೆ ಸೈದ್ಧಾಂತಿಕ ವ್ಯತ್ಯಾಸವಿತ್ತು. ಹೇಳಬೇಕೆಂದರೆ ನೆಹರೂ ಹೆಸರನ್ನು ತಮ್ಮ ಸೇನೆಯ ತಂಡವೊಂದಕ್ಕೆ ಇಟ್ಟಿದ್ದರು. ಹಾಗೆಂದು ಅವರೆಂದೂ ಆರ್‌ಎಸ್‌ಎಸ್‌ ವಿಚಾರಗಳನ್ನು ಒಪ್ಪಿಕೊಂಡಿರಲಿಲ್ಲ. ಆರ್‌ಎಸ್‌ಎಸ್ ಅಪಾಯಕಾರಿ ಎಂದೇ ಭಾವಿಸಿದ್ದರು. ಸೈದ್ಧಾಂತಿಕ ಭಿನ್ನತೆ ಹೊಂದಿದ್ದ ಕಾರಣವನ್ನೇ ಇಟ್ಟುಕೊಂಡು, ವಿಚಾರಗಳನ್ನು ಮರೆಮಾಚಿ ಸುಭಾಷ್ ಚಂದ್ರ ಬೋಸ್ ನಮ್ಮ ಪರ ಎಂದು ತೋರಿಸಲು ಆರ್‌ಎಸ್‌ಎಸ್‌ನವರು ಯತ್ನಿಸುತ್ತಾರೆ” ಎಂದು ವಿವರಿಸಿದರು.

“ಬ್ರಿಟನ್ ವಿರೋಧಿ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಜಪಾನ್‌, ಜರ್ಮನಿಯಲ್ಲಿ ಸೆರೆಸಿಕ್ಕ ಭಾರತೀಯರನ್ನು ನೇತಾಜಿ ಒಗ್ಗೂಡಿಸಿದರು. ಬ್ರಿಟನ್ನಿನ ಮೇಲೆ ಯುದ್ಧ ಸಾರಿ ಇಂಡಿಯನ್‌ ನ್ಯಾಷನಲ್ ಆರ್ಮಿ (ಐಎನ್‌ಎ) ಕಟ್ಟಿ ಸೇನಾತ್ಮಕವಾಗಿ ಸ್ವಾತಂತ್ರ್ಯ ಹೋರಾಟ ನಡೆಸಲು ಮುಂದಾದರು. ಆ ಪ್ರಯತ್ನದಲ್ಲಿರುವಾಗಲೇ ಸಾವಿಗೀಡಾದರು. ಮುಖ್ಯವಾಗಿ 1938ರಲ್ಲಿ ಬೋಸ್ ಅವರು ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು. ಯಾವುದೇ ಕಾರಣಕ್ಕೂ ಮುಸ್ಲಿಂ ಲೀಗ್ ಮತ್ತು ಹಿಂದೂ ಮಹಾಸಭಾದವರು ಕಾಂಗ್ರೆಸ್‌ನ ಸದಸ್ಯರಾಗಬಾರದು ಎಂದು ಠರಾವನ್ನು ನೇತಾಜಿ ಮಂಡಿಸಿದ್ದರು” ಎಂದು ತಿಳಿಸಿದರು.

ಇದನ್ನೂ ಓದಿರಿ: ಸುಭಾಷ್ ಚಂದ್ರ ಬೋಸ್ ಸಾವಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸಲು ಮಮತಾ ಬ್ಯಾನರ್ಜಿ ಆಗ್ರಹ

“ಸಾವರ್ಕರ್ ಅವರನ್ನು ಸುಭಾಷ್ ಚಂದ್ರ ಬೋಸ್‌ ಸಂಪರ್ಕಿಸಿದ್ದರು, ಹೀಗಾಗಿಯೇ ಇಂಡಿಯನ್ ಐಎನ್‌ಎಯನ್ನು ಬೋಸ್ ಕಟ್ಟಿದರು ಎಂದು ಸುಳ್ಳುಗಳನ್ನು ಆರ್‌ಎಸ್‌ಎಸ್‌ನವರು ಹರಿಬಿಡುತ್ತಿದ್ದಾರೆ. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಜರ್ಮಿನಿ ಹಾಗೂ ಜಪಾನ್‌ಗೆ ಸೆರೆಸಿಕ್ಕ ಭಾರತೀಯರನ್ನು ಒಂದು ಕಡೆ ಸೇರಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಲು ನೇತಾಜಿ ಪ್ರಯತ್ನಿಸುತ್ತಿದ್ದರೆ, ಅದೇ ಕಾಲಘಟ್ಟದಲ್ಲಿ ಬೋಸ್‌ ಅವರ ಆಲೋಚನೆಗಳಿಗೆ ವಿರುದ್ಧವಾಗಿ ಸಾವರ್ಕರ್‌ ಮತ್ತು ಆರ್‌ಎಸ್‌ಎಸ್‌ನವರು ಬ್ರಿಟಿಷರ ಪರವಾಗಿ ಕೆಲಸ ಮಾಡುತ್ತಿದ್ದರು. ಹಿಂದೂಗಳನ್ನು ಬ್ರಿಟಿಷರ ಸೇನೆಯೊಳಗೆ ನೋಂದಾಯಿಸುತ್ತಾ ಬ್ರಿಟಿಷರ ಕೈ ಬಲಪಡಿಸುತ್ತಿದ್ದರು. ಈ ರೀತಿಯಲ್ಲಿ ದೊಡ್ಡದಾದ ದ್ರೋಹ ನೇತಾಜಿಯವರಿಗೆ ಆರ್‌ಎಸ್‌ಎಸ್ ಮಾಡಿದೆ” ಎಂದು ಅಭಿಪ್ರಾಯಪಟ್ಟರು.

“ಆರ್‌ಎಸ್‌ಎಸ್‌ ನಾಯಕರ್‍ಯಾರೂ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತವರಲ್ಲ. ಹೀಗಾಗಿ ಸುಳ್ಳು ಇತಿಹಾಸವನ್ನು ಕಟ್ಟುತ್ತಿದ್ದಾರೆ ಅಥವಾ ರಾಷ್ಟ್ರಕ್ಕಾಗಿ ಪ್ರಾಣ ತೆತ್ತ ನಾಯಕರನ್ನು ತಮ್ಮವರೆಂದು ನಂಬಿಸುವ ಕೆಲಸ ಮಾಡುತ್ತಿದ್ದಾರೆ” ಎಂದರು.

ಗಾಂಧೀಜಿ, ನೇತಾಜಿ ಮತ್ತು ನೆಹರೂ

ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಸುಭಾಷ್ ಚಂದ್ರ ಬೋಸ್ ಅವರು ಭಿನ್ನಾಭಿಪ್ರಾಯಗಳ ನಡುವೆಯೇ ಪರಸ್ಪರ ಗೌರವ- ಪ್ರೀತಿಯನ್ನು ಹೊಂದಿದ್ದರು ಎನ್ನುತ್ತಾರೆ ದೆಹಲಿ ಮೂಲದ ಹಿರಿಯ ಪತ್ರಕರ್ತ ‘ವೆಂಕಟ್ ಪಾರ್ಸಾ’. ತಮ್ಮ ಲೇಖನವೊಂದರಲ್ಲಿ ಈ ಮಹಾನಾಯಕರ ಒಡನಾಟದ ಕುರಿತು ವಿಸ್ತೃತವಾಗಿ ವಿವರಿಸಿದ್ದಾರೆ.

ಭಾರತೀಯ ನಾಗರಿಕ ಸೇವೆಗೆ (ICS) ಆಯ್ಕೆಯಾಗಿದ್ದ ಬೋಸ್ ಅವರು, ಐಸಿಎಸ್ ತೊರೆದು ಕಾಂಗ್ರೆಸ್ ಸೇರುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಬೋಸ್ ಅವರಿಗೆ ಕಾಂಗ್ರೆಸ್‌ನಲ್ಲಿ ದೇಶಬಂಧು ಚಿತ್ತ ರಂಜನ್ ದಾಸ್ ಮಾರ್ಗದರ್ಶಕರಾಗಿದ್ದರು. ಸಿ.ಆರ್.ದಾಸ್ ಅವರ ನಿಧನದ ನಂತರ, ಬೋಸ್ ಅವರು ಜವಾಹರಲಾಲ್ ನೆಹರೂ ಅವರೊಂದಿಗೆ ಆತ್ಮೀಯರಾದರು, ಕಾಂಗ್ರೆಸ್‌ನಲ್ಲಿ ಒಟ್ಟಾಗಿ ಕೆಲಸ ಮಾಡಿದರು.

ಜನಪ್ರಿಯತೆಯ ವಿಷಯದಲ್ಲಿ, ಸುಭಾಷ್ ಚಂದ್ರ ಬೋಸ್ ಕಾಂಗ್ರೆಸ್‌ನಲ್ಲಿ ಮಹಾತ್ಮ ಗಾಂಧಿಯವರ ನಂತರದ ಸ್ಥಾನದಲ್ಲಿದ್ದರು. ಬೋಸ್ ಅವರ ಭಾರತದ ಕಲ್ಪನೆಯು ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಅವರ ಭಾರತದ ಕಲ್ಪನೆಗಿಂತ ಭಿನ್ನವಾಗಿರಲಿಲ್ಲ. ಬೋಸ್ ಅವರು ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್ಸಿಗರಾಗಿದ್ದರು, ಸ್ವಾತಂತ್ರ್ಯ ಪಡೆಯಬೇಕೆಂಬ ಗುರಿಯನ್ನು ಸಾಧಿಸಲು ತಮ್ಮ ತಂತ್ರವನ್ನು ಬದಲಾಯಿಸಿದ್ದರು.

1938ರಲ್ಲಿ ಹರಿಪುರದಲ್ಲಿ ಮಹಾತ್ಮ ಗಾಂಧಿಯವರ ಸಲಹೆ ಮೇರೆಗೆ ಬೋಸ್ ಕಾಂಗ್ರೆಸ್ ಅಧ್ಯಕ್ಷರಾದರು. ಆದರೆ 1939ರಲ್ಲಿ ತ್ರಿಪುರಿಯಲ್ಲಿ, ಮಹಾತ್ಮಾ ಗಾಂಧಿಯವರ ಇಚ್ಛೆಗೆ ವಿರುದ್ಧವಾಗಿ ಬೋಸ್, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು. ಗಾಂಧೀಜಿ ನಾಮನಿರ್ದೇಶಿತ ಪಟ್ಟಾಭಿ ಸೀತಾರಾಮಯ್ಯ ಅವರನ್ನು ಸೋಲಿಸುವ ಮೂಲಕ ಗೆದ್ದರು. “ಪಟ್ಟಾಭಿಯ ಸೋಲು ನನ್ನ ಸೋಲು” ಎಂದು ಗಾಂಧೀಜಿ ಘೋಷಿಸಿದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (CWC) ರಚಿಸುವ ವಿಷಯದಲ್ಲಿ ಗಾಂಧೀಜಿಯವರು ಬೋಸ್ ಅವರೊಂದಿಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದಾಗ, ಮಹಾತ್ಮರ ಮೇಲಿನ ಗೌರವದಿಂದಾಗಿ ಬೋಸ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. “ನನಗಿಂತ ಹೆಚ್ಚಾಗಿ ಕಾಂಗ್ರೆಸ್‌ಗೆ ಗಾಂಧೀಜಿಯವರ ಅಗತ್ಯವಿದೆ” ಎಂದು ನುಡಿದಿದ್ದರು ನೇತಾಜಿ.

ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುವ ತಂತ್ರಗಳ ಬಗ್ಗೆ ಬೋಸ್ ಗಾಂಧೀಜಿಯವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಗುರಿಯನ್ನು ಸಾಧಿಸುವ ಮಾರ್ಗಗಳು ಅಂತ್ಯದಷ್ಟೇ ಮುಖ್ಯ ಎಂದು ಗಾಂಧೀಜಿ ನಂಬಿದ್ದರು. ಸಾಧ್ಯವಿರುವ ಯಾವುದೇ ವಿಧಾನದಿಂದಾದರೂ ಗುರಿಯನ್ನು ಸಾಧಿಸಬೇಕೆಂಬುದು ಬೋಸ್ ನಿಲುವಾಗಿತ್ತು. ಈ ಎಲ್ಲರ ಗುರಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವುದಾಗಿತ್ತು.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರ ದುರ್ಬಲತೆಯನ್ನು ಗ್ರಹಿಸಿದ ಬೋಸ್, ಭಾರತೀಯ ಸ್ವಾತಂತ್ರ್ಯಕ್ಕಾಗಿ ಸೇನಾ ಹೋರಾಟಕ್ಕೆ ಧುಮಿಕಿದರು. ಕಾಂಗ್ರೆಸ್ ತೊರೆದ ನಂತರವೂ ಬೋಸ್ ಎಡಪಂಥೀಯ ಪಕ್ಷವಾಗಿದ್ದ ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದರು. ಸುಭಾಷ್ ಅವರು ಮಹಾತ್ಮಾ ಗಾಂಧಿಯವರಿಂದ ದೂರವಾದ ನಂತರವೂ, ಗಾಂಧೀಜಿಯವರಿಗೆ ಬಾಪು ಎಂದು ಸಂಬೋಧಿಸುವುದನ್ನು ಮುಂದುವರಿಸಿದರು, ‘ಬಾಪು’ ಎಂಬುದು ತಂದೆಯ ಸಮಾನರಿಗೆ ಬಳಸುವ ಪದವಾಗಿದೆ. ಮಹಾತ್ಮಾ ಗಾಂಧಿಯವರನ್ನು ‘ರಾಷ್ಟ್ರಪಿತ’ ಎಂದು ಕರೆದದ್ದು ಸುಭಾಷ್ ಎಂದೇ ಹೇಳಲಾಗುತ್ತದೆ.

ಆಜಾದ್ ಹಿಂದ್ ರೇಡಿಯೋ ಕಾರ್ಯಕ್ರಮಕ್ಕೆ ನೇತಾಜಿಯವರು ಗಾಂಧೀಜಿಯವರನ್ನು ಆಹ್ವಾನಿಸಿದ್ದರು, ಭಾರತೀಯ ಸ್ವಾತಂತ್ರ್ಯವನ್ನು ಭದ್ರಪಡಿಸುವ ಆಜಾದ್ ಹಿಂದ್ ಫೌಜ್ ಮಿಷನ್‌ಗೆ ತಮ್ಮ ಆಶೀರ್ವಾದ ಇರಬೇಕೆಂದು ಗಾಂಧೀಜಿಯವರಲ್ಲಿ ಕೋರಿದರು.

ಕ್ವಿಟ್ ಇಂಡಿಯಾ ಚಳವಳಿಯ ನಂತರ ಬೋಸ್ ಪ್ರತಿಕ್ರಿಯಿಸಿ, “ಮಹಾತ್ಮ ಗಾಂಧಿಯವರು ಭಾರತಕ್ಕೆ ಮತ್ತು ಭಾರತದ ಸ್ವಾತಂತ್ರ್ಯದ ಕಾರಣಕ್ಕಾಗಿ ಸಲ್ಲಿಸಿದ ಸೇವೆಯು ತುಂಬಾ ವಿಶಿಷ್ಟವಾಗಿದೆ ಮತ್ತು ಅಪ್ರತಿಮವಾಗಿದೆ, ಸರ್ವಕಾಲಕ್ಕೂ ಅವರ ಹೆಸರನ್ನು ನಮ್ಮ ರಾಷ್ಟ್ರೀಯ ಇತಿಹಾಸದಲ್ಲಿ ಚಿನ್ನದಕ್ಷರದಲ್ಲಿ ಬರೆಯಲಾಗುತ್ತದೆ” ಎಂದು ಬಣ್ಣಿಸಿದ್ದರು.

ಅದೇ ರೀತಿ ಬೋಸ್ ಮತ್ತು ನೆಹರೂ ಒಡನಾಡಿಗಳಾಗಿದ್ದರು. ಕಾಂಗ್ರೆಸ್‌ನ ಕೆಲವೇ ಕೆಲವು ಯುವ ನಾಯಕರಲ್ಲಿ ಬೋಸ್ ಮತ್ತು ನೆಹರೂ ಆತ್ಮೀಯ ಸ್ನೇಹಿತರಾಗಿದ್ದರು. ನೆಹರೂ ಅವರ ಪತ್ನಿ ಕಮಲಾ ನೆಹರೂ ಅವರು ಫೆಬ್ರವರಿ 28, 1936ರಂದು ನಿಧನರಾದರು. ಆ ಸಮಯದಲ್ಲಿ, ಬೋಸ್ ಮಾರ್ಚ್ 6, 1936 ರಂದು ನೆಹರೂ ಅವರಿಗೆ ಪತ್ರ ಬರೆದು, “ಇಂದಿನ ಮುಂಚೂಣಿಯ ನಾಯಕರಲ್ಲಿ, ಕಾಂಗ್ರೆಸ್ ಅನ್ನು ಪ್ರಗತಿಪರ ದಿಕ್ಕಿನಲ್ಲಿ ಮುನ್ನಡೆಸಲು ನಾವು ಎದುರು ನೋಡಬಹುದಾದ ಏಕೈಕ ವ್ಯಕ್ತಿ ನೀವು. ಇದಲ್ಲದೆ, ನಿಮ್ಮ ಸ್ಥಾನವು ಅನನ್ಯವಾಗಿದೆ. ಮಹಾತ್ಮ ಗಾಂಧಿಯವರು ಸಹ ಬೇರೆಯವರಿಗಿಂತ ನಿಮ್ಮೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾರೆಂದು ನಾನು ಭಾವಿಸುತ್ತೇನೆ” ಎಂದಿದ್ದರು.

ಪಂಡಿತ್ ಜವಹರಲಾಲ್ ನೆಹರೂ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್

ನೇತಾಜಿ ಮತ್ತು ನೆಹರೂ ಇಬ್ಬರೂ ಬಹುತ್ವ ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಉಳ್ಳವರಾಗಿದ್ದರು. ಬೋಸ್ ಜೈ ಹಿಂದ್ ಎಂಬ ಘೋಷಣೆ ಕೂಗಿದರು. ಅವರು ತಮ್ಮ ಸೈನ್ಯವನ್ನು ಆಜಾದ್ ಹಿಂದ್ ಫೌಜ್ ಎಂದು ಹೆಸರಿಸಿದರು. ಬೋಸ್ ಅವರು “ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂದು ಕರೆ ನೀಡಿದರು.

ಇಬ್ಬರೂ ಸಂಪೂರ್ಣ ಸ್ವಾತಂತ್ರ್ಯಕ್ಕೆ ಬದ್ಧರಾಗಿದ್ದರು; ಸಮಾಜವಾದದ ಮಾದರಿಯಲ್ಲಿ ನಂಬಿಕೆ ಇಟ್ಟುಕೊಂಡಿದ್ದರು; ಇಬ್ಬರೂ ಕೇಂದ್ರೀಕೃತ ಯೋಜನೆಯಲ್ಲಿ, ಬೃಹತ್‌ ಕೈಗಾರಿಕೆ ಮತ್ತು ಭಾರತವನ್ನು ಕೈಗಾರಿಕೀಕರಣಗೊಳಿಸುವ ಅಗತ್ಯತೆಯಲ್ಲಿ ನಂಬಿಕೆ ಉಳ್ಳವರಾಗಿದ್ದರು.

ಯೋಜನಾ ಆಯೋಗ ರಚನೆಗೂ ಸುಭಾಷ್‌ ಚಂದ್ರ ಬೋಸ್‌ ಅವರ ಚಿಂತನೆಯೇ ಕಾರಣ ಎನ್ನಲಾಗಿದೆ. ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಸುಭಾಷ್ ಚಂದ್ರ ಬೋಸ್ ಅವರು ಜವಾಹರಲಾಲ್ ನೆಹರೂ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಯೋಜನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಭಾರತದ ಸ್ವಾತಂತ್ರ್ಯದ ನಂತರ ಮೊದಲ ಪ್ರಧಾನಿಯಾಗಿ ಆಯ್ಕೆಯಾದ ನೆಹರೂ ಅವರು ಶಾಸನಬದ್ಧ ಯೋಜನಾ ಆಯೋಗವನ್ನು ಸ್ಥಾಪಿಸಿದರು.

ಬೋಸ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಕಾಂಗ್ರೆಸ್‌ ಪಕ್ಷವು ಸಮಾಜವಾದಿ ಕಾರ್ಯಕ್ರಮವನ್ನು ರೂಪಿಸಿತು, ಭೂಸುಧಾರಣೆ ಕುರಿತು ಚಿಂತಿಸಿತು. ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಭೂ ಸುಧಾರಣೆಗೆ ಒತ್ತುಕೊಟ್ಟರು.

ಇದನ್ನೂ ಓದಿರಿ: ನೇತಾಜಿಯವರ ಅವಶೇಷಗಳನ್ನು ಭಾರತಕ್ಕೆ ತನ್ನಿ: ಬೋಸ್ ಮಗಳ ಆಗ್ರಹ

ಬೋಸ್ ಮತ್ತು ನೆಹರೂ ಅವರ ನಡುವೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಜರ್ಮನಿಯ ಹಿಟ್ಲರ್ ಜೊತೆಯಲ್ಲಿ ವ್ಯಾವಹಾರಿಕ ಸಂಬಂಧ ಹೊಂದುವುದು ಅಪಾಯವೆಂದು ಬೋಸ್ ಅವರಿಗೆ ಅನಿಸಲಿಲ್ಲ, ಆದರೆ ನೆಹರೂ ಅದನ್ನು ವಿರೋಧಿಸಿದರು.

ಆಗಸ್ಟ್ 18, 1945ರಂದು ವಿಮಾನ ಅಪಘಾತದಲ್ಲಿ ಬೋಸ್ ಅವರು ಕೊನೆಯುಸಿರೆಳೆದರು. ಬೋಸ್ ಅವರ ಹೆಂಡತಿ ಎಮಿಲಿ ಶೆಂಕಿ ಅವರಿಗೆ ಆಜೀವ ಆರ್ಥಿಕ ನೆರವು ನೀಡಲು ಕಾಂಗ್ರೆಸ್ ಮೂಲಕ ನೆಹರೂ ವ್ಯವಸ್ಥೆ ಮಾಡಿದರು.

ನೇತಾಜಿಯವರು ದುರಂತ ಮರಣ ಹೊಂದಿದ ನಂತರ ಕಾಂಗ್ರೆಸ್ ಪಕ್ಷವು ಐಎನ್‌ಎ ಮಾಜಿ ಸಿಬ್ಬಂದಿಗೆ ಸಹಾಯ ಮಾಡುವುದಕ್ಕಾಗಿಯೇ ‌‘ಐಎನ್‌ಎ ಪರಿಹಾರ ಸಮಿತಿ’ಯನ್ನು ಸ್ಥಾಪಿಸಿತು. ನೇತಾಜಿ ಅವರ ಪಾರ್ಥಿವ ಶರೀರವನ್ನು ಸಂರಕ್ಷಿಸಲಾಗಿರುವ ಜಪಾನ್‌ನ ರೆಂಕೋಜಿ ದೇವಸ್ಥಾನಕ್ಕೆ ಪಂಡಿತ್ ಜವಾಹರಲಾಲ್ ನೆಹರೂ ಅವರು 1957ರ ಅಕ್ಟೋಬರ್‌ನಲ್ಲಿ ಭೇಟಿ ನೀಡಿದ್ದರು. ಸುಭಾಷ್ ಚಂದ್ರ ಬೋಸ್ ಕೂಗಿದ ‘ಜೈ ಹಿಂದ್’ ಘೋಷಣೆಯನ್ನು ಕಾಂಗ್ರೆಸ್ ಅಂಗೀಕರಿಸಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...