Homeಮುಖಪುಟಇದು ಇಂಡಿಯಾವೂ ಹೌದು, ಭಾರತವೂ ಹೌದು

ಇದು ಇಂಡಿಯಾವೂ ಹೌದು, ಭಾರತವೂ ಹೌದು

- Advertisement -
- Advertisement -

ಜುಲೈ 17-18ರಂದು ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಒಕ್ಕೂಟ ಸಭೆಯಲ್ಲಿ, ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಆ ಒಕ್ಕೂಟ ಮಹತ್ತರವಾದ ಹೆಜ್ಜೆಯೊಂದನ್ನು ಇಟ್ಟಿತು. ಕಾಂಗ್ರೆಸ್ ಸೇರಿದಂತೆ ಒಟ್ಟು 26 ಪಕ್ಷಗಳು ಒಂದಾದ ಈ ಮೈತ್ರಿಕೂಟಕ್ಕೆ ಹೊಸ ಹೆಸರನ್ನು ಇಟ್ಟಿದ್ದು ವಿರೋಧ ಪಕ್ಷಗಳಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದ್ದಂತೂ ನಿಜ. ಹಿಂದಿನ ’ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್’ (ಯುಪಿಎ) ಬದಲಿಗೆ ’ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್’ (I.N.D.I.A.) ಎಂದು ಮರುನಾಮಕರಣ ಮಾಡಿಕೊಂಡಿದ್ದು ಗೋಧಿ ಮಾಧ್ಯಮಗಳಲ್ಲೂ ಸೇರಿದಂತೆ ದೊಡ್ಡಮಟ್ಟದಲ್ಲಿ ಕವರ್ ಆಯಿತು. ’ಇಂಡಿಯಾ’ ಎಂದು ಕರೆಯಲ್ಪಟ್ಟ ಈ ಮೈತ್ರಿಕೂಟದ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆಡಿದ ಮಾತುಗಳು ಹೀಗಿದ್ದವು: “ಇಂಡಿಯಾ ಎಂಬ ಪರಿಕಲ್ಪನೆ ಇಂದು ಅಪಾಯದಲ್ಲಿದೆ. ದೇಶವನ್ನು ಕೆಲವೇ ಕೆಲವು ಉದ್ಯಮಿಗಳ ಕೈಗೆ ನೀಡಲಾಗುತ್ತಿದೆ. ನಿರುದ್ಯೋಗ ಹೆಚ್ಚಿದೆ, ಬೆಲೆ ಏರಿಕೆಯಾಗಿದೆ. ಮುಂಬರುವ ಚುನಾವಣೆ ಯಾರ ನಡುವಿನ ಯುದ್ಧ? ಎರಡು ರಾಜಕೀಯ ಬಣಗಳ ನಡುವಿನ ಸಮರ ಇದಲ್ಲ. ಇಂಡಿಯಾ ಎಂಬ ಪರಿಕಲ್ಪನೆಯನ್ನು ವ್ಯಾಖ್ಯಾನಿಸುವ ಸಮರವಿದು- ಹೀಗಾಗಿ ನಾವು ಈ ಹೆಸರಿನಿಂದ ಹೋರಾಟಕ್ಕಿಳಿದಿದ್ದೇವೆ. ನಾವು ಈ ಇಂಡಿಯಾದ ಜನರ ದನಿಯನ್ನು ರಕ್ಷಿಸುತ್ತೇವೆ. ಇಂಡಿಯಾ ಎಂಬ ಪರಿಕಲ್ಪನೆಯನ್ನು ರಕ್ಷಿಸುತ್ತೇವೆ. ಈ ಸಮರ ಇಂಡಿಯಾ ಮತ್ತು ಬಿಜೆಪಿಯ ನಡುವಿನದ್ದಾಗಿದೆ. ಇಂಡಿಯಾ ಮತ್ತು ಮೋದಿ ನಡುವಿನ ಸಮರ ಇದಾಗಿದೆ.”

ರಾಷ್ಟ್ರೀಯತೆ, ದೇಶ ರಕ್ಷಣೆಯ ಹೆಸರಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಮಾಡುವ ರಾಜಕಾರಣಕ್ಕೆ ವಿರೋಧಿ ಮೈತ್ರಿಕೂಟ ಇಟ್ಟುಕೊಂಡಿರುವ ’ಇಂಡಿಯಾ’ ಎಂಬ ಹೆಸರೇ ನುಂಗಲಾರದ ತುತ್ತಿನಂತೆ ಭಾಸವಾಗಿದೆ. ತನ್ನನ್ನು ಮಾತ್ರ ’ಭಾರತೀಯ’ ಎಂದು ಬಿಂಬಿಸಿಕೊಳ್ಳುವ ’ಭಾರತೀಯ ಜನತಾ ಪಾರ್ಟಿ’ (ಬಿಜೆಪಿ)ಗೆ ಪ್ರತಿಪಕ್ಷಗಳ ಈ ಪ್ರಯೋಗ ಇಕ್ಕಟ್ಟಿಗೆ ಸಿಲುಕಿಸಿದೆ. ವಿರೋಧ ಪಕ್ಷಗಳು ’ಇಂಡಿಯಾ’ ಎಂಬ ಹೆಸರನ್ನು ಇಟ್ಟುಕೊಂಡ ಬಳಿಕ ಸಂಘಪರಿವಾರ ’ಭಾರತ’ ಎಂಬ ಹೆಸರನ್ನಷ್ಟೇ ಬಳಸುವ ಮೂಲಕ ’ಇಂಡಿಯಾ’ ಬೇರೆ, ’ಭಾರತ’ ಬೇರೆ ಎಂಬ ಚರ್ಚೆಯನ್ನು ಹುಟ್ಟು ಹಾಕುತ್ತಿದೆ.

ಜಿ20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ’ಪ್ರೆಸಿಡೆಂಟ್ ಆಫ್ ಭಾರತ್’ ಎಂದು ನಮೂದಿಸಿದ್ದು ಹೊಸ ಸಂಪ್ರದಾಯಕ್ಕೆ ನಾಂದಿ ಆಡಿತು. ಸಾಮಾನ್ಯವಾಗಿ ’ಪ್ರೆಸಿಡೆಂಟ್ ಆಫ್ ಇಂಡಿಯಾ’ ಎಂದು ಬಳಸುವುದು ಈವರೆಗಿನ ರೂಢಿಯಾಗಿತ್ತು. ’ಇಂಡಿಯಾ’ ಬದಲು ’ಭಾರತ್’ ಎಂದು ನಮೂದಿಸಿದ್ದು, ದೇಶದ ಹೆಸರು ಬದಲಿಸುವ ಕಸರತ್ತಿನಂತೆ ಕಾಣತೊಡಗಿದೆ. ಬಿಜೆಪಿ ಬೆಂಬಲಿಗರು, ಸಂಘಪರಿವಾರದ ಮೂಲದವರು ’ಭಾರತ್’ ಎಂಬ ಹೆಸರನ್ನೇ ಹೆಚ್ಚಾಗಿ ಬಳಸತೊಡಗಿದ್ದಾರೆ; ಮತ್ತು ಈ ಬದಲಾವಣೆ ಆಗಿಯೇ ತೀರಿದೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.

“ದೇಶದ ಹೆಸರು ಇಂಡಿಯಾ ಬದಲು, ಭಾರತ ಎಂದು ಬದಲಾಗಬೇಕೆ? ಬೇರೆ ದೇಶಗಳು ಕೂಡ ಒಂದೇ ಹೆಸರನ್ನು ಹೊಂದಿವೆ. ಹಲವು ದೇಶಗಳು ತಮ್ಮ ಹೆಸರನ್ನು ಬದಲಿಸಿಕೊಂಡ ಉದಾಹರಣೆಗಳಿವೆ, ಇಂಡಿಯಾ ಎಂಬುದು ವಸಾಹತುಶಾಹಿ ಬ್ರಿಟಿಷರು ನೀಡಿದ ಹೆಸರಾಗಿದ್ದರಿಂದ ನಾವ್ಯಾಕೆ ಇಂಡಿಯಾ ಎಂದು ಬಳಸಬೇಕು?” ಎಂಬಿತ್ಯಾದಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಪ್ರಧಾನಿ ಮೋದಿಯವರ ಇಂಡೋನೇಷ್ಯಾ ಪ್ರತಿನಿಧಿಗಳ ಭೇಟಿಯ ಕುರಿತು ಪೋಸ್ಟರ್‌ಒಂದನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ’ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ’ ಎಂಬುದನ್ನು ’ಪ್ರೈಮ್ ಮಿನಿಸ್ಟರ್ ಆಫ್ ಭಾರತ್’ ಎಂದು ಬಳಸಲಾಗಿತ್ತು. ನಿಧಾನಕ್ಕೆ  ‘ಇಂಡಿಯಾ’ ಎಂದು ಬಳಸುವಲ್ಲೆಲ್ಲಾ ’ಭಾರತ್’ ಎಂಬುದನ್ನು ಹೆಚ್ಚಾಗಿ ಪ್ರಯೋಗಿಸುವ ಬೆಳವಣಿಗೆ ನಿಚ್ಚಳವಾಗಿ ಕಾಣುತ್ತಿದೆ. ಇದು ದೇಶದ ಹೆಸರನ್ನು ’ಭಾರತ್’ ಎಂದಾಗಿ ಬದಲಿಸುವ ಕಾರ್ಯಸೂಚಿಯಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಈ ನಡುವೆ ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, “ಭಾರತದ ಹೆಸರನ್ನು ಇಂಡಿಯಾವಾಗಿ ಬದಲಿಸುತ್ತಾರೆಂಬುದು ಕೇವಲ ವದಂತಿಯಷ್ಟೇ” ಎಂದಿದ್ದಾರೆ. ಆದರೆ ಬಿಜೆಪಿ ಈವರೆಗಿನ ಸಂಪ್ರದಾಯವನ್ನು ಮುರಿದು ’ಇಂಡಿಯಾ’ ಎಂದು ಬಳಸುತ್ತಿದ್ದಲೆಲ್ಲ ’ಭಾರತ್’ ಎಂದು ನಮೂದಿಸುತ್ತಿರುವ ಉದ್ದೇಶವಾದರೂ ಏನು? ವಿರೋಧ ಪಕ್ಷಗಳು ತಮ್ಮ ಕೂಟಕ್ಕೆ ’ಇಂಡಿಯಾ’ (I.N.D.I.A) ಎಂದು ಇಟ್ಟುಕೊಂಡಿದ್ದೇ ಇದಕ್ಕೆ ಕಾರಣವಾ?

ಹಾಗೆ ನೋಡಿದರೆ ’ಇಂಡಿಯಾ ಮತ್ತು ಭಾರತ’ ಎರಡೂ ಕೂಡ ನಮ್ಮ ಸಂವಿಧಾನದಲ್ಲಿ ಮಾನ್ಯವಾಗಿವೆ. ನಮ್ಮ ಸಂವಿಧಾನದ ಮೊದಲ ವಿಧಿ, “India, that is Bharat, shall be a Union of States” (ಇಂಡಿಯಾ ಅಂದರೆ ಭಾರತ- ರಾಜ್ಯಗಳ ಒಕ್ಕೂಟವಾಗಿದೆ) ಎಂದು ಹೇಳುತ್ತದೆ. ಹೀಗಾಗಿ ’ಇಂಡಿಯಾ’ ಎಂದರೂ ಅಷ್ಟೇ, ’ಭಾರತ’ ಎಂದರೂ ಅಷ್ಟೇ.

ದೇಶದ ಹೆಸರು ಏನಾಗಿರಬೇಕು ಎಂಬುದರ ಕುರಿತು ನಮ್ಮ ಸಂವಿಧಾನ ರಚನಾಕಾರರು ಸುದೀರ್ಘ ಚರ್ಚೆಗಳನ್ನು ನಡೆಸಿದ್ದರು. ಸೆಪ್ಟೆಂಬರ್ 17, 1949ರಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ’ಭಾರತ್’ ಮತ್ತು ’ಇಂಡಿಯಾ’ ಎರಡನ್ನೂ ಒಳಗೊಂಡಿರುವ ನಿಬಂಧನೆಯ ಅಂತಿಮ ಆವೃತ್ತಿಯನ್ನು ಸದನಕ್ಕೆ ಪ್ರಸ್ತುತಪಡಿಸಿದರು. ಮಾರನೇ ದಿನ ಈ ಕುರಿತು ವಿಶೇಷ ಚರ್ಚೆ ನಡೆಯುತ್ತದೆ. ’ಇಂಡಿಯಾ’ ಎಂಬುದು ವಸಾಹತುಶಾಹಿಯನ್ನು ನೆನಪಿಸುತ್ತದೆ ಎಂದು ಸದನದ ಹಲವಾರು ಸದಸ್ಯರು ಅಭಿಪ್ರಾಯಪಡುತ್ತಾರೆ.

ಜಬಲ್ಪುರದ ಸೇಠ್ ಗೋವಿಂದ್ ದಾಸ್ ಅವರು ’ಇಂಡಿಯಾ’ ಎಂಬುದಕ್ಕಿಂತ ’ಭಾರತ’ಕ್ಕೆ ಆದ್ಯತೆ ನೀಡಿ ಎನ್ನುತ್ತಾರೆ. ’ಭಾರತ್’ ಎಂಬುದಕ್ಕೆ ಇಂಗ್ಲಿಷ್‌ನಲ್ಲಿ ’ಇಂಡಿಯಾ’ ಹೆಸರನ್ನು ಪರ್ಯಾಯವಾಗಿ ಬಳಸುವಂತೆ ಅನೇಕರು ಒತ್ತಾಯಿಸುತ್ತಾರೆ.

“ಇಂಡಿಯಾ, ಅಂದರೆ ಭಾರತ- ಎಂಬುದು ದೇಶದ ಹೆಸರಿಗೆ ಸುಂದರವಾದ ಪದಗಳಲ್ಲ. ’ವಿದೇಶಗಳಲ್ಲಿ ಇಂಡಿಯಾ ಎಂದು ಕರೆಯಲ್ಪಡುವ ಭಾರತ’ ಎಂಬುದಾಗಿ ನಮೂದಿಸಬೇಕಿತ್ತು” ಎನ್ನುತ್ತಾರೆ ಗೋವಿಂದ ದಾಸ್. ಹರಿವಿಷ್ಣು ಕಾಮತ್ ಅವರು, “ಇಂಡಿಯಾ ಎಂಬ ಪದವು ಕೇವಲ ಭಾರತದ ಅನುವಾದ” ಎಂದು ವಾದಿಸುತ್ತಾರೆ.

ಗುಡ್ಡಗಾಡು ಜಿಲ್ಲೆಗಳನ್ನು ಪ್ರತಿನಿಧಿಸಿದ್ದ ಯುನೈಟೆಡ್ ಪ್ರಾವಿನ್ಸ್‌ನ ಹರಗೋವಿಂದ್ ಪಂತ್, “ಉತ್ತರ ಭಾರತದ ಜನರು ಭರತವರ್ಷ ಎಂಬುದನ್ನು ಬಯಸುತ್ತಾರೆ. ಈ ನೆಲದ ಶ್ರೀಮಂತಿಕೆಯ ಬಗ್ಗೆ ತಿಳಿದಿರುವ ವಿದೇಶಿಗರು ಈ (ಇಂಡಿಯಾ) ಹೆಸರನ್ನು ನಮ್ಮ ದೇಶಕ್ಕೆ ನೀಡಿದ್ದಾರೆ ಎಂದು ನಾವು ತಿಳಿದಿರಬೇಕು. ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಲು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡರು. ’ಇಂಡಿಯಾ’ ಎಂಬ ಪದಕ್ಕೆ ಅಂಟಿಕೊಂಡರೆ, ಹೊರಗಿನ ಸಾಮ್ರಾಜ್ಯ ನಮ್ಮ ಮೇಲೆ ಹೇರಿರುವ ಈ ಅವಮಾನಕರ ಪದವನ್ನು ಉಳಿಸಿಕೊಳ್ಳಲು ನಾವು ನಾಚಿಕೆಪಡುವುದಿಲ್ಲ ಎಂದು ತೋರಿಸುತ್ತದೆ” ಎಂದು ಅಭಿಪ್ರಾಯ ತಾಳುತ್ತಾರೆ.

ವಿಷ್ಣು ಪುರಾಣ ಮತ್ತು ಬ್ರಹ್ಮ ಪುರಾಣವು ’ಭಾರತ’ವನ್ನು ಉಲ್ಲೇಖಿಸುತ್ತದೆ ಎಂದು ದಾಸ್ ವಾದಿಸುತ್ತಾರೆ. ಏಳನೇ ಶತಮಾನದ ಚೀನೀ ಪ್ರವಾಸಿ ಹ್ಯೂಯೆನ್ ತ್ಸಾಂಗ್ ಈ ದೇಶವನ್ನು ಭಾರತ ಎಂದು ಉಲ್ಲೇಖಿಸಿದ್ದಾನೆ ಎಂದು ಇತರರು ಹೇಳುತ್ತಾರೆ. ಭಾರತ, ಭರತವರ್ಷ ಅಥವಾ ಭರತಭೂಮಿ ಎಂಬ ಪದಗಳನ್ನು ಪ್ರಾಚೀನ ಗ್ರಂಥಗಳನ್ನು ಉಲ್ಲೇಖಿಸಿ ಪ್ರಸ್ತಾಪಿಸುತ್ತಾರೆ.

ಡಾ.ಬಿ.ಆರ್.ಅಂಬೇಡ್ಕರ್

“ಇತಿಹಾಸಕಾರರು ಮತ್ತು ಭಾಷಾಶಾಸ್ತ್ರಜ್ಞರು ಈ ದೇಶದ ಹೆಸರಿನ ಕುರಿತು ವಿಶೇಷವಾಗಿ ಭಾರತ್ ಎಂಬ ಹೆಸರಿನ ಸಂಬಂಧ ಆಳವಾಗಿ ಪರಿಶೀಲಿಸಿದ್ದಾರೆ. ಎಲ್ಲರೂ ಭಾರತ್ ಎಂಬ ಹೆಸರಿನ ಮೂಲವನ್ನು ಒಪ್ಪುವುದಿಲ್ಲ. ಈ ಹೆಸರು ದುಶ್ಯಂತ ಮತ್ತು ಶಕುಂತಲಾ ಅವರ ಪುತ್ರ ಭರತನಿಂದಾಗಿ ಬಂತೆಂದು ಕೆಲವರು ಹೇಳುತ್ತಾರೆ. ಆತ ಪ್ರಾಚೀನ ಭಾರತದಲ್ಲಿ ದಿಗ್ವಿಜಯ ಸಾಧಿಸಿದವನು. ಅವನ ನಂತರ ಈ ಭೂಮಿ ಭಾರತ ಎಂದು ಕರೆಯಲ್ಪಟ್ಟಿತು” ಎನ್ನುತ್ತಾರೆ ದಾಸ್.

ಮತ್ತೊಂದೆಡೆ, ಪಂಡಿತ್ ಠಾಕೂರ್ ದಾಸ್ ಭಾರ್ಗವ ಅವರಂತಹ ಸದಸ್ಯರು ದೇಶಕ್ಕೆ ’ಇಂಡಿಯಾ’ ಎಂದು ಹೆಸರಿಸುವುದನ್ನು ಬೆಂಬಲಿಸುತ್ತಾರೆ. “ನನಗೆ ಇದರ ಬಗ್ಗೆ ಯಾವುದೇ ಗಂಭೀರ ಆಕ್ಷೇಪವಿಲ್ಲ. ಪ್ರಪಂಚದ ಇತರ ಭಾಗಗಳಿಂದ ನಾವು ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲ ಎಂಬುದು ಸತ್ಯ; ನಾವು ಇಂಗ್ಲೆಂಡ್ ಮತ್ತು ಪ್ರಪಂಚದ ಇತರ ಭಾಗಗಳೊಂದಿಗೆ ಶತಮಾನಗಳಿಂದಲೂ ಒಡನಾಟ ಹೊಂದಿದ್ದೇವೆ. ಇಂಡಿಯಾ ಎಂಬ ಹೆಸರಿನಿಂದ ಜಗತ್ತು ನಮ್ಮನ್ನು ಯಾವಾಗಲೂ ಗುರುತಿಸುತ್ತದೆ. ಆದರೆ ನಮ್ಮ ಹೃದಯ ಮತ್ತು ಆತ್ಮಗಳಲ್ಲಿ ನಮ್ಮ ದೇಶವು ಯಾವಾಗಲೂ ಭಾರತವಾಗಿ ಉಳಿಯುತ್ತದೆ” ಎನ್ನುತ್ತಾರೆ.

ಈ ಚರ್ಚೆಗಳನ್ನು ಗಮನಿಸಿ, ’ಭಾರತ- ಇಂಡಿಯಾ’ ಎರಡನ್ನೂ ಒಳಗೊಳ್ಳುವ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, “ನಾವು ಮಾಡಬೇಕಾದ ಕೆಲಸ ಸಾಕಷ್ಟಿದೆ” ಎನ್ನುತ್ತಾರೆ.

ಆದಾಗ್ಯೂ, ಅಂದಿನ ಭಾರತದ ರಾಷ್ಟ್ರಪತಿಗಳು ತಿದ್ದುಪಡಿಗಳನ್ನು ಮತಕ್ಕೆ ಹಾಕಿದಾಗ, ಸಂವಿಧಾನದ 1 ನೇ ವಿಧಿಯಲ್ಲಿ “ಇಂಡಿಯಾ, ಅಂದರೆ ಭಾರತ” (India, That is Bharat) ಎಂಬುದು ಅಧಿಕೃತವಾಗುತ್ತದೆ.

ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆಯಲ್ಲಿ ಸೀಟ್‌ ಹಂಚಿಕೆ ಬಗ್ಗೆ ಚರ್ಚೆ

’ಇಂಡಿಯಾ, ದಟ್ ಇಸ್ ಭಾರತ್: ಒನ್ ಕಂಟ್ರಿ, ಟು ನೇಮ್’ ಎಂಬ ಸಂಶೋಧನಾ ಪ್ರಬಂಧವನ್ನು ಬರೆದಿರುವ ಕ್ಯಾಥರೀನ್ ಕ್ಲೆಮೆಂಟೈನ್-ಓಜಾ ಅವರು ದೇಶದ ಹೆಸರಿನ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ವಿ.ಸುಂದರಂ ಹೇಳಿರುವ ಅಭಿಪ್ರಾಯವನ್ನು ದಾಖಲಿಸಿದ್ದಾರೆ: “ಭಾರತ ಎಂಬುದು ಹಿಂದೂ ಧಾರ್ಮಿಕತೆಯನ್ನು ಪ್ರತಿನಿಧಿಸುತ್ತದೆ. ಆದರೆ ಈ ದೇಶ ಹಿಂದೂಕರಣವಾಗುವುದಿಲ್ಲ ಎಂಬ ಭರವಸೆಯನ್ನು ಅಲ್ಪಸಂಖ್ಯಾತರಿಗೆ ಸಂವಿಧಾನ ರಚನಕಾರರು ನೀಡಬಯಸಿದರು. ಹೀಗಾಗಿ ಇಂಡಿಯಾ ಎಂಬುದನ್ನು ಬಳಸುತ್ತಾರೆ. ಸಂವಿಧಾನ ರಚನೆಯಾದ ಕಾಲಘಟ್ಟದಲ್ಲಿನ ರಾಜಕೀಯ ಸನ್ನಿವೇಶಗಳನ್ನು ನೋಡಿದರೆ ಇದು ಮಹತ್ವವನ್ನು ಪಡೆಯುತ್ತದೆ. ಭಾರತ ಸಂವಿಧಾನ ರಚನೆಯಾಗಿದ್ದು ದೇಶ ವಿಭಜನೆಯ ನಂತರದಲ್ಲಿ. ಆ ಸಂದರ್ಭದಲ್ಲಿ ದೇಶ ಹಲವು ಸಾವು, ನೋವು, ರಕ್ತಪಾತವನ್ನು ಕಂಡಿತ್ತು” ಎನ್ನುತ್ತಾರೆ ಸುಂದರಂ. ಇದು ನಮ್ಮ ಸಂವಿಧಾನ ರಚನೆಯ ಇತಿಹಾಸ. ಅಷ್ಟೇ ಅಲ್ಲ 2015ರಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವೇ ಹೆಸರು ಬದಲಿಸುವ ಚರ್ಚೆಯನ್ನು ವಿರೋಧಿಸಿತ್ತು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಭಾರತವೆಂದೇ ಅಧಿಕೃತವಾಗಿ ಬಳಸಬೇಕು, ಇಂಡಿಯಾ ಬಳಕೆ ರದ್ದು ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿತ್ತು. “ಭಾರತವನ್ನಾದರೂ ಬಳಸಿ, ಇಂಡಿಯಾವನ್ನಾದರೂ ಬಳಸಿ. ಅದು ನಾಗರಿಕರ ಸ್ವಾತಂತ್ರ್ಯಕ್ಕೆ ಬಿಟ್ಟದ್ದು” ಎಂದು ನ್ಯಾಯಮೂರ್ತಿಗಳಾದ ಟಿ.ಎಸ್.ಠಾಕೂರ್ ಮತ್ತು ಯು.ಯು.ಲಲಿತ್ ಸ್ಪಷ್ಟಪಡಿಸಿದ್ದರು.
“ಇಂಡಿಯಾಗೆ ಬದಲಾಗಿ ಭಾರತವೆಂದು ಕರೆಯುವ ಅಗತ್ಯವಿಲ್ಲ. ಸಂವಿಧಾನದ ಪ್ರಥಮ ಅನುಚ್ಛೇದವನ್ನು ಬದಲಾಯಿಸಬೇಕಾದ ಯಾವುದೇ ಪರಿಸ್ಥಿತಿಗಳು ಉದ್ಭವಿಸಿಲ್ಲ” ಎಂದು ಕೇಂದ್ರ ಗೃಹ ಮಂತ್ರಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣ ವಚನ ಸಲ್ಲಿಸಿತ್ತು.

ಎಚ್.ಎನ್.ನಾಗಮೋಹನ ದಾಸ್

’ಇಂಡಿಯಾ’ ಅಥವಾ ’ಭಾರತ’ ವಿವಾದ ಸಂಬಂಧ ’ನ್ಯಾಯಪಥ’ಕ್ಕೆ ಪ್ರತಿಕ್ರಿಯೆ ನೀಡಿದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್, “ಇಂಡಿಯಾ ಎಂಬುದನ್ನು ತೆಗೆದುಹಾಕಿ ಕೇವಲ ಭಾರತ ಎಂದು ಉಳಿಸಿಕೊಳ್ಳುವುದರಿಂದ ಆಗುವ ಪ್ರಯೋಜನವಾದರೂ ಏನು? ಕೇವಲ ಹೆಸರು ಬದಲಿಸುವುದರಿಂದ ಬದುಕು ಬದಲಾಗಲ್ಲ. ಇಂದು ಜನರಿಗೆ ಬೇಕಾಗಿರುವುದು ಬದುಕಿನ ಬದಲಾವಣೆ. ದೇಶದಲ್ಲಿ ಹಸಿವು, ಬಡತನ, ಅನಕ್ಷರತೆ, ನಿರುದ್ಯೋಗ, ಕೃಷಿ ಬಿಕ್ಕಟ್ಟು, ಕೈಗಾರಿಕಾ ಬಿಕ್ಕಟ್ಟು ಹೆಚ್ಚಾಗುತ್ತಿವೆ. ಮಹಿಳೆಯರ ಮೇಲೆ ದೌರ್ಜನ್ಯ, ಸಾಮಾಜಿಕ ಆರ್ಥಿಕ ಅಸಮಾನತೆ ದಿನೇದಿನೇ ಬೆಳೆಯುತ್ತಲೇ ಇವೆ. ಈ ಪರಿಸ್ಥಿತಿಗಳು ಬದಲಾಗುವ ನಿಟ್ಟಿನಲ್ಲಿ ಸರ್ಕಾರ ತನ್ನ ನೀತಿಗಳನ್ನು ರೂಪಿಸಬೇಕಾಗಿದೆ. ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಆಧುನಿಕ ವಿಜ್ಞಾನದ ಸಾಧ್ಯತೆಗಳನ್ನು ಬಳಸಿಕೊಳ್ಳಬೇಕಾಗಿದೆ. ಆ ಕೆಲಸ ಮಾಡುವ ಬದಲು ಹೆಸರು ಬದಲಿಸಿದರೆ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.

“ಈ ಹಿಂದೆ ರಸ್ತೆ, ನಗರ, ಸರ್ಕಲ್‌ಗಳ ಹೆಸರು ಬದಲಾಯಿಸುವುದನ್ನು ನೋಡಿದೆವು. ಇದೆಲ್ಲದರ ಫಲವಾಗಿ ನಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಸಾಧ್ಯವಾಯಿತಾ? ಬದುಕನ್ನು ಬದಲಿಸುವ ದಿಕ್ಕಿನಲ್ಲಿ ಸರ್ಕಾರ ಕೆಲಸ ಮಾಡಬೇಕಿದೆ. ಇಂಡಿಯಾ ಮತ್ತು ಭಾರತ- ಎರಡು ಕೂಡ ಸಂವಿಧಾನದಲ್ಲಿ ತಿಳಿಯಪಡಿಸಿದಂತೆ ಮುಂದುವರಿಯಲಿ. ಅನಗತ್ಯ ವಿವಾದ ಎಬ್ಬಿಸಬೇಡಿ” ಎಂದು ಮನವಿ ಮಾಡಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್.ದ್ವಾರಕನಾಥ್ ಪ್ರತಿಕ್ರಿಯಿಸಿ, “ಭಾರತ ಮತ್ತು ಇಂಡಿಯಾ ಎರಡು ಕೂಡ ಸಹಜವಾಗಿ ಜನರಲ್ಲಿ ಬೆರೆತುಹೋಗಿವೆ. ಇಂಡಿಯಾ ಎಂಬ ಹೆಸರಲ್ಲೇ (ಖೇಲೋ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯ, ಸೈನ್ ಇಂಡಿಯ, ಸ್ಕಿಲ್ ಇಂಡಿಯ, ಡಿಜಿಟಲ್ ಇಂಡಿಯಾ) ಬಿಜೆಪಿಯವರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಿದ್ದಾರೆ. ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರಗಳು ಭಾರತ್ ಹೆಸರಲ್ಲಿ ಸಂಸ್ಥೆಗಳನ್ನು (ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಭಾರತ್ ಸಂಚಾರ ನಿಗಮ, ಭಾರತೀಯ ರಿಸರ್ವ್ ಬ್ಯಾಂಕ್, ಭಾರತ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಭಾರತೀಯ ಉಕ್ಕು ಮತ್ತು ಕಬ್ಬಿಣ ನಿಗಮ) ಕಟ್ಟಿವೆ. ಇವುಗಳನ್ನೆಲ್ಲ ಬಿಜೆಪಿಯವರು ಹೇಗೆ ಬದಲಿಸುತ್ತಾರೆ?” ಎಂದು ಕೇಳಿದರು.

ಸಿ.ಎಸ್.ದ್ವಾರಕನಾಥ್

“ರಚನಾತ್ಮಕ ಕೆಲಸಗಳ ಕುರಿತು ಬಿಜೆಪಿ ಯಾವತ್ತೂ ಕೆಲಸ ಮಾಡಿಲ್ಲ. ಇಂತಹ ವಿವಾದಗಳನ್ನು ತಂದು ಜನರನ್ನು ದಿಕ್ಕುತಪ್ಪಿಸುತ್ತದೆ” ಎಂದು ವಿಷಾದಿಸಿದರು.

ಚುನಾವಣೆ ಹತ್ತಿರ ಬಂದಂತೆ ಭಾವನಾತ್ಮಕ ವಿಚಾರಗಳನ್ನು ಬಿಜೆಪಿ ಮುನ್ನೆಲೆಗೆ ತರುತ್ತಿರುವ ಸೂಚನೆಗಳು ಸ್ಪಷ್ಟವಾಗುತ್ತಿವೆ. ಮುಂದಿನ ಲೋಕಸಭಾ ಚುನಾವಣೆ ವಿಷಯಾಧಾರಿತವಾಗಿ, ದೇಶದ ನೈಜ ಸಮಸ್ಯೆಗಳನ್ನು ಆಧರಿಸಿ ನಡೆಯಲಿ ಎಂಬುದು ಪ್ರಜ್ಞಾವಂತರ ಆಶಯ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಓಂ ಬಿರ್ಲಾ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್; ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲು

0
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ ನಂತರ, ಮಹಾರಾಷ್ಟ್ರದ ಸೈಬರ್ ಪೊಲೀಸರು ಜನಪ್ರಿಯ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ...