Homeನ್ಯಾಯ ಪಥಪೌರತ್ವ ವಸೂಲಿ - ನಾಝಿ ಜರ್ಮನಿಯಿಂದ ಕಲಿಯಬೇಕಾದುದು...

ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು…

- Advertisement -
- Advertisement -

ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ, ಪೌರತ್ವಕ್ಕೆ ಧರ್ಮವನ್ನು ಮಾನದಂಡವನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಿರುವ ಬಹುಶಃ ಜಗತ್ತಿನ ಒಂದೇ ಒಂದು ರಾಷ್ಟ್ರವಾಗಿರಬಹುದು ಭಾರತ. ಇದು ನೆರೆಯ ಮೂರು ರಾಷ್ಟ್ರಗಳ ಅಭ್ಯರ್ಥಿಗಳಿಗೆ ಮಾತ್ರ ಬಾಧಕವಾಗಿರುವ ನಿಯಮವಾಗಿದೆ. ಇದೇ ಸಂದರ್ಭ, ದೇಶವ್ಯಾಪಿಯಾಗಿ ರಾಷ್ಟ್ರೀಯ ಪೌರತ್ವ ಕಾಯ್ದೆ ಎನ್ನುವ ಪೌರತ್ವ ನಿರ್ಣಯ ಪರಿಶೀಲನೆಯನ್ನು ಬಹುಬೇಗನೆ ಆರಂಭಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಪಾರ್ಲಿಮೆಂಟ್‍ನಲ್ಲಿ ಪ್ರಸ್ತಾವಿಸಿದ್ದೂ ಆಯಿತು. ಎಲ್ಲವನ್ನೂ ಒಂದೇ ದೃಷ್ಟಿಕೋನದಲ್ಲಿ ನೋಡಿದರೆ, ಈ ಆಜ್ಞಾಧಾರಕ ಪ್ರಚಾರ ಕೋಲಾಹಲವು ದೇಶದ ಮತೀಯ ಅಲ್ಪಸಂಖ್ಯಾತರ ಅತಿ ಅಪಾಯಕರವಾದ ಭವಿಷ್ಯದ ಕಡೆಗೆ ಬೊಟ್ಟು ಮಾಡುತ್ತದೆ ಎಂದು ತಿಳಿಯಬಹುದು.

1933ರಲ್ಲಿ ಜರ್ಮನಿಯಲ್ಲಿ ನಾಝಿಗಳು ಅಧಿಕಾರದ ಗದ್ದುಗೆ ಏರಿದಾಗ ಯಹೂದಿಗಳಿಗೇನಾಯಿತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಸೂಕ್ತವೆನಿಸುತ್ತದೆ. ಯಹೂದಿಯರ ವಿರುದ್ಧ ವಿವೇಚನೆಯನ್ನು ಸಾರುವ ಕಾನೂನು ತಿದ್ದುಪಡಿಗಳ ಮೂಲಕವಾಗಿತ್ತು ನಾಝಿ ಆಳ್ವಿಕೆಯ ಆರಂಭ ಘಟ್ಟ. ಭಾರತ 1930ರ ಮತ್ತು ನಲ್ವತ್ತರ ದಶಕಗಳ ಜರ್ಮನಿಯ ಹಾಗಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳಬಹುದು. ಆದರೆ ಯಹೂದಿಗಳನ್ನು ಸ್ಪಷ್ಟವಾಗಿ ಗುರಿಯಿಟ್ಟು, ಕೊನೆಗೆ ಉನ್ಮೂಲನೆಗೆ ವಿಧೇಯರಾಗುವಂತೆ ಮಾಡಿದ ಇತಿಹಾಸವನ್ನು ಸ್ಮರಿಸದೇ ಇರಲಾಗದು. ನಾಝಿಗಳ ಅಂದಿನ ಗುರಿ ಆರು ದಶಲಕ್ಷದಷ್ಟು ಯಹೂದಿಗಳಾಗಿದ್ದರು. ಕಾನೂನು ತಿದ್ದುಪಡಿಗೊಳಿಸುವ ಹಾಗೂ ಮುಂದುವರಿದ ಬೀದಿಕಾಳಗಗಳ ಮೂಲಕವಾಗಿತ್ತು ಅದರ ಪ್ರಾರಂಭ.

ನಾಝಿ ಜರ್ಮನಿಯಲ್ಲಿ ಏನಾಯಿತು?
ಆರ್ಯ ವಂಶದಿಂದ ಯಹೂದಿಗಳನ್ನು ಬೇರ್ಪಡಿಸಿ ಅವರ ಆರ್ಥಿಕ, ಸಾಮಾಜಿಕ, ರಾಜಕೀಯ ಹಕ್ಕುಗಳನ್ನು ಕೊನೆಗೊಳಿಸುವ ಉದ್ದೇಶದಿಂದ, ನಾಝಿ ಪಕ್ಷವು ಇಪ್ಪತ್ತೈದು ಕಾರ್ಯತಂತ್ರಗಳನ್ನು ರೂಪಿಸಿದ್ದು 1920 ರಲ್ಲಾಗಿತ್ತು. ಆಗಿನ್ನೂ ಅವರು ಅಧಿಕಾರದಲ್ಲಿರಲಿಲ್ಲ. 1933 ರಲ್ಲಿ ಅಧಿಕಾರದ ಗದ್ದುಗೆ ಏರಿದ ಕೂಡಲೇ ನಾಝಿಗಳು ತಮ್ಮ ಲಕ್ಷ್ಯ ಸಾಧನೆಗಾಗಿ ಯಹೂದಿಗಳನ್ನು ಒಂಟಿಯಾಗಿಸುವ ಕಾನೂನುಗಳು ಮತ್ತು ನಿಯಂತ್ರಣಗಳನ್ನು ಹೇರಲಾರಂಭಿಸಿದರು. ರಾಷ್ಟ್ರಮಟ್ಟದಿಂದ ಪ್ರಾಂತಗಳವರೆಗೂ ವಿವಿಧ ವಲಯಗಳಾಗಿ 2000 ಕ್ಕೂ ಹೆಚ್ಚು ಕಾನೂನು ತಿದ್ದುಪಡಿಗಳನ್ನು ಜಾರಿಗೊಳಿಸಿದರು. ಈ ಸೆಮಿಟಿಕ್ ವಿರೋಧಿ ನಿಯಮಗಳಲ್ಲಿ ಕೆಲವೊಂದನ್ನು ಇಲ್ಲಿ ಜೋಡಿಸುವ ಪ್ರಯತ್ನ ಮಾಡಲಾಗಿದೆ. (ಬ್ರಿಟಿಷ್ ಲೈಬ್ರರಿಯಿಂದ ಮತ್ತು ಇತರ ಮೂಲಗಳಿಂದ ಸಂಗ್ರಹಿಸಲಾಗಿದೆ)

1933: ಯಹೂದಿಗಳನ್ನು ಸರ್ಕಾರಿ ಸೇವೆಗಳು ಮತ್ತು ವಕೀಲ ಹುದ್ದೆಗಳಿಂದ ತಡೆಯುವುದು, ಸರಕಾರಿ ಶಾಲೆಗಳಲ್ಲಿ ಯಹೂದಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಮಿತಿಗೊಳಿಸುವುದು, ಸ್ಥಳೀಯ ಯಹೂದಿಗಳ ಮತ್ತು ಅನಪೇಕ್ಷಿತರ ಪೌರತ್ವವನ್ನು ತಡೆಹಿಡಿಯುವುದು, ಮಾಧ್ಯಮ ಸಂಸ್ಥೆಗಳಿಂದ ಅವರನ್ನು ದೂರ ಇಡುವುದು, ಮೃಗಬಲಿ ನಿಷೇಧ ಸೇರಿದಂತೆ ಹಲವು ಹೊಸ ಕಾನೂನುಗಳು ಬರತೊಡಗಿದವು.

1934: ಮೆಡಿಕಲ್, ಡೆಂಟಲ್, ಫಾರ್ಮಸಿ, ಕಾನೂನು ಸಂಬಂಧಪಟ್ಟಂತಹ ಪರೀಕ್ಷೆಗಳಿಂದ ಯಹೂದಿ ವಿದ್ಯಾರ್ಥಿಗಳನ್ನು ತಡೆಯಲಾಯಿತು. ಮುಂದೆ ಸೈನಿಕ ಸೇವೆಗೂ ಅವಕಾಶಗಳು ನೀಡದಂತೆ ನಿಯಮಗಳು ಬಂದವು.

1935: ಹಿಟ್ಲರ್‌ನ ನ್ಯೂರಂಬರ್ಗ್ ಕಾನೂನುಗಳು ಬಂದವು. ಯಹೂದಿಗಳಿಗೆ ಪೌರತ್ವ ಮತ್ತು ಮತದಾನದ ಹಕ್ಕನ್ನು ನಿಷೇಧಿಸುವುದರ ಜೊತೆಗೆ, ಜರ್ಮನ್ ಪ್ರಜೆ ಅಥವಾ ಜರ್ಮನಿಯರ ರಕ್ತ ಸಂಬಂಧಿಯಾಗಿ ಹುಟ್ಟಿದವರೊಂದಿಗೆ ವಿವಾಹ ಮತ್ತು ಲೈಂಗಿಕ ಸಂಬಂಧಗಳನ್ನೂ ನಿಷೇಧಿಸುವ ಕಾನೂನುಗಳಾಗಿತ್ತು ಅದು.

1935-36: ಪಾರ್ಕ್‍ಗಳು, ರೆಸ್ಟೋರೆಂಟ್‍ಗಳು ಹಾಗೂ ಸ್ವಿಮ್ಮಿಂಗ್ ಪೂಲ್‍ಗಳಲ್ಲಿ ಯಹೂದಿಗಳ ಪ್ರವೇಶವನ್ನು ತಡೆಯಲಾಯಿತು. ಇಲೆಕ್ಟ್ರಿಕಲ್ ಆಪ್ಟಿಕಲ್ ಉಪಕರಣಗಳು, ಸೈಕಲ್‍ಗಳು, ಟೈಪ್‍ರೈಟರ್‍ಗಳು, ರೆಕೋರ್ಡ್‍ಗಳಂತಹ ಯಾವುದೇ ವಸ್ತುಗಳನ್ನು ಉಪಯೋಗಿಸಬಾರದು. ಜರ್ಮನ್ ಶಾಲೆಗಳಲ್ಲೂ ಮತ್ತು ವಿಶ್ವವಿದ್ಯಾಲಯಗಳಲ್ಲಿ ಯಹೂದಿ ವಿದ್ಯಾರ್ಥಿಗಳನ್ನು ಹೊರದಬ್ಬಲಾಯಿತು. ಯಹೂದಿ ಅಧ್ಯಾಪಕರಿಗೆ ಸರ್ಕಾರಿ ಉದ್ಯೋಗ ನೀಡಲು ನಿರಾಕರಿಸಲಾಯಿತು.

1938 : ಯಹೂದಿಗಳಿಗೆ ಪ್ರತ್ಯೇಕ ಐಡೆಂಟಿಟಿ ಕಾರ್ಡುಗಳನ್ನು ನೀಡಲ್ಪಟ್ಟವು. ಚಿತ್ರಮಂದಿರಗಳು, ಸಂಗೀತ ಶಾಲೆಗಳು ,ಬೀಚ್‍ಗಳು, ರೆಸಾರ್ಟ್‍ಗಳು ಸೇರಿದಂತೆ ಹಲವು ಕಡೆಗಳಲ್ಲಿ ಪ್ರವೇಶ ನಿಷೇಧ. ಹೆಸರಿನ ಜೊತೆ ಸಾರಾ, ಇಸ್ರಾಯಿಲ್ ಎಂದು ಸೇರಿಸುವುದು ಕಡ್ಡಾಯವಾಯಿತು. ಯಹೂದಿ ಪಾಸ್‍ಪೋರ್ಟ್‍ಗಳಲ್ಲಿ ಗುರುತಿಗಾಗಿ ‘ಜೆ’ ಎಂಬ ಕೆಂಪು ಬಣ್ಣದ ಅಕ್ಷರವನ್ನು ಸ್ಟಾಂಪ್ ಮಾಡಲಾಯಿತು. ಆ ವರ್ಷ ನವೆಂಬರ್ ಒಂಬತ್ತರ ರಾತ್ರಿಯು “ಒಡೆದ ಗಾಜಿನ ರಾತ್ರಿ” ಎಂದು ಇತಿಹಾಸವು ಬರೆಯಿತು. ಆ ದಿನ ನಾಝಿ ಕ್ರೌರ್ಯವು ಮುಗಿಲು ಮುಟ್ಟಿತ್ತು. ದೇಶದೆಲ್ಲೆಡೆ ಯಹೂದಿಗಳ ಮೇಲೆ ಹಿಂಸಾತ್ಮಕ ಅಕ್ರಮಗಳು ನಡೆದವು. ಸಾವಿರಾರು ಸಿನಗೋಗುಗಳು ಅಗ್ನಿಗಾಹುತಿಯಾದವು. ಅಂಗಡಿ ಮುಂಗಟ್ಟುಗಳನ್ನು ಧ್ವಂಸಕ್ಕೊಳಗಾದವು.

1939: ಅನೇಕ ಯಹೂದಿ ಕುಟುಂಬಗಳು ಬರಿಗಾಲಲ್ಲಿ ವಲಸೆ ಹೋಗಬೇಕಾಯಿತು. ಯಹೂದಿ ಬಾನುಲಿಗಳು ಅಪಹರಿಸಲ್ಪಟ್ಟವು. ಎಲ್ಲರೂ ಸ್ವರ್ಣ ಮತ್ತು ಬೆಳ್ಳಿ ಆಭರಣಗಳಂತಹ ಬೆಲೆಬಾಳುವ ವಸ್ತುಗಳನ್ನು ನಯಾ ಪೈಸೆಯ ನಷ್ಟ ಪರಿಹಾರವಿಲ್ಲದೇ ಸರಕಾರಕ್ಕೆ ಹಸ್ತಾಂತರಿಸಬೇಕೆಂಬ ಆಜ್ಞೆ ಹೊರಡಿಸಲಾಯಿತು. ಯಹೂದಿ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ.

1940: ಯಹೂದಿಗಳ ಟೆಲಿಫೋನ್‍ಗಳು ಅಪಹರಿಸಲ್ಪಟ್ಟವು. ಬಟ್ಟೆಬರೆಗಳಿಗಿದ್ದ ಯುದ್ಧದ ಸಮಯದ ರೇಷನ್ ಸೌಲಭ್ಯ ನಿಂತು ಹೋದವು.

1941: ಯಹೂದಿಗಳಿಗೆ ಸಾರ್ವಜನಿಕ ದೂರವಾಣಿಗಳ ಮೇಲೆ ನಿಷೇಧ ಹೇರಿಕೆ. ನಾಯಿಗಳನ್ನು ಸಾಕುವುದೋ, ದೇಶಾಂತರ ಹೋಗುವುದೋ ಮಾಡುವಂತಿಲ್ಲ.

1942: ಚಳಿಗೆ ಉಪಯೋಗಿಸುತ್ತಿದ್ದ ಫರ್ ಜಾಕೆಟ್‍ಗಳು ಮತ್ತು ಕಂಬಳಿ ಹೊದಿಕೆಗಳನ್ನು ಬಳಸದಂತೆ ನಿಷೇಧಿಸಲಾಯಿತು. ಅಲ್ಲದೇ ಮೊಟ್ಟೆ ಹಾಗೂ ಹಾಲಿನಂತಹ ಆಹಾರಗಳನ್ನೂ ಖರೀದಿಸುವಂತಿಲ್ಲ.
ಕಾನೂನು ತಿದ್ದುಪಡಿಗಳ ಕೆಲವೊಂದು ಸ್ಯಾಂಪಲ್‍ಗಳಷ್ಟೇ ಇದು. ಜೀವನದಲ್ಲಿ ಯಹೂದಿಗಳು, ರೋಮನ್ನರು, ಲೈಂಗಿಕ ಅಲ್ಪಸಂಖ್ಯಾತರು, ಕಾರ್ಮಿಕ ಸಂಘಗಳ ಕಾರ್ಯಕರ್ತರು, ಕಮ್ಯೂನಿಸ್ಟ್‍ಗಳು, ಸೋಶಿಯಲ್ ಡೆಮೊಕ್ರೆಟ್‍ಗಳು, ಕರಿಯರು ಮುಂತಾದ ಆರ್ಯೇತರರ ಜೊತೆ ವ್ಯವಸ್ಥಿತವಾಗಿ ಪ್ರತ್ಯೇಕಿಸಲ್ಪಟ್ಟು, ಪೀಡನೆಗೂ ಗುರಿಯಾಗಿ ಅಂತಿಮವಾಗಿ ಅತಿ ದಾರುಣವಾದ ರೀತಿಯಲ್ಲಿ ಹತ್ಯೆಗೈಯ್ಯಲ್ಪಟ್ಟರು. ಇಂತಹ, ಭಯಾನಕ ಅತಿಕ್ರಮಕ್ಕೂ ಮುನ್ನ ತಂದಂತಹ ಕಾನೂನುಗಳಾಗಿದ್ದವು ಅವು. ನಾಝಿ ಗೂಂಡಾ ಪಡೆ ಈ ನಿಯಮಗಳನ್ನು ಕಾರ್ಯರೂಪಕ್ಕೆ ತಂದರು. ಹಿನ್ನೆಲೆಯಲ್ಲಿ ಫ್ಯಾಸಿಸ್ಟ್ ಅಧಿಕಾರಿಗಳು ಮತ್ತು ಅವರ ನೇತಾರ ಅಡಾಲ್ಫ್ ಹಿಟ್ಲರ್ ಜೊತೆಸೇರಿ ಅನುಮತಿ ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯ ಆಶಯಬೇರುಗಳು:
ನಾಝಿಗಳು ಮಾಡಿದ ಎಲ್ಲಾ ಕೆಲಸಗಳನ್ನೂ ಶ್ಲಾಘಿಸಿದವರು ಆರೆಸ್ಸೆಸಿಗರು ಎಂಬುದು ನೆನೆಪಿರಲಿ. ಸರಸಂಘಚಾಲಕ ಎಂ.ಎಸ್ ಗೋಳ್ವಾಲ್ಕರ್ ಅವರ ಪ್ರಸಿದ್ಧ ಕೃತಿ ‘ವಿ ಅವರ್ ನೇಶನ್ ಹುಡ್ ಡಿಫೈನ್ಡ್’ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸೆಮಿಟಕ್ ವಂಶವನ್ನು ಅಥವಾ ಯಹೂದಿಗಳನ್ನು ದೇಶದಿಂದ ಉನ್ಮೂಲನೆಗೈದು ಜರ್ಮನಿ ಜಗತ್ತನ್ನೇ ನಿಬ್ಬೆರಗಾಗಿಸಿತು. ವಿಶೇಷವಾದ ವಂಶಾಭಿಜಾತ್ಯ ಪ್ರಜ್ಞೆಯಾಗಿತ್ತು ಅಲ್ಲಿ ಉದಯಗೊಂಡದ್ದು. ಆಳವಾಗಿ ಬೇರೂರಿದ ವೈವಿಧ್ಯತೆಗಳಿರುವ ವಂಶಗಳನ್ನು ಮತ್ತು ಸಂಸ್ಕøತಿಯನ್ನು ಹೇಗೆ ಸಮೀಕರಿಸಿ ಏಕೀಕರಿಸಬಹುದು ಎಂಬುದನ್ನು ಜರ್ಮನಿ ಮಾಡಿ ತೋರಿಸಿತು. ಇದು ನಮಗೆ ಹಿಂದುಸ್ತಾನಿಗೆ ಕಲಿಯುವುದಕ್ಕೂ ಹಾಗೂ ಅಳವಡಿಸುವುದಕ್ಕೂ ಇರುವಂತಹ ಪಾಠವಾಗಿದೆ. (ಪುಟ: 87-88)

ಗೋಳ್ವಾಲ್ಕರ್ ಹಿಂದೂ ರಾಷ್ಟ್ರವನ್ನು ವ್ಯಾಖ್ಯಾನಿಸುವುದು ಈ ರೀತಿಯಾಗಿದೆ. “ರಾಷ್ಟ್ರೀಯತೆ ಅಥವಾ ಹಿಂದೂ ವಂಶ, ಧರ್ಮ, ಸಂಸ್ಕತಿ, ಭಾಷೆ ಸವಿಶೇಷತೆಗಳನ್ನು ಸ್ವಾಧೀನಪಡಿಸದವರು ನಿಜವಾದ ರಾಷ್ಟ್ರೀಯ ಜೀವನದಿಂದ ಹೊರಗೆ ನಿಲ್ಲುತ್ತಾರೆ. ( ಪುಟ 99)

ಬರೀ ವಂಶ, ಧರ್ಮ, ಸಾಂಸ್ಕೃತಿಕ ವೈವಿಧ್ಯತೆಗಳನ್ನು ಕೊಂಡಾಡುವವರನ್ನು ವಿದೇಶಿಗಳಾಗಿ ಪರಿಗಣಿಸಬೇಕೆಂದು ಅವರು ಉಪದೇಶಿಸುತ್ತಾರೆ ( ಪುಟ 101).

ಮುಂದುವರಿಯುತ್ತಾ ಹೇಳುತ್ತಾರೆ “ ಹಿಂದುಸ್ತಾನಿನ ವಿದೇಶಿ ವಂಶಜರು ಒಂದೋ ಇಲ್ಲಿನ ಭಾಷೆ ಮತ್ತು ಸಂಸ್ಕ್ಕತಿಯನ್ನು ಸ್ವೀಕರಿಸಬೇಕು. ಹಿಂದೂ ಧರ್ಮವನ್ನು ಅವರು ಆದರದಿಂದ ಕಾಣಲು ಕಲಿಯಬೇಕು. ಹಿಂದುತ್ವ ಮತ್ತು ಹಿಂದೂ ಸಂಸ್ಕೃತಿಯ ಮಹತ್ವತೆಗಲ್ಲದೆ ಪ್ರೋತ್ಸಾಹ ಕೊಡಬಾರದು. ಹಿಂದೂ ಸಂಸ್ಕøತಿಯೊಂದಿಗೆ ವಿಲೀನಗೊಳ್ಳಲು ಅವರು ಅವರೊಳಗಿನ ವಿಭಿನ್ನ ಅಸ್ತಿತ್ವವನ್ನು ತೊರೆಯಬೇಕು. ಇಲ್ಲವಾದರೆ, ಹಿಂದೂ ರಾಷ್ಟ್ರಕ್ಕೆ ಮಣಿದು, ಮರು ಮಾತನಾಡದೆ, ಯಾವ ಹಕ್ಕುಗಳಿಗೂ ಅರ್ಹರಾಗದೆ, ಪೌರತ್ವ ಹಕ್ಕುಗಳಲ್ಲೂ ಕೂಡಾ ಪ್ರಾಶಸ್ತ್ಯವಿಲ್ಲದ ನೆಲೆಯಲ್ಲಿ ಅವರಿಗೆ ಇಲ್ಲಿ ಜೀವಿಸಬಹುದು” (ಪುಟ105).

ಅಂತಿಮ ಪ್ರಯೋಗವನ್ನು ಗಮನಿಸಿ. ಪ್ರಸ್ತುತ ದಿನಗಳಲ್ಲಿ ನರೇಂದ್ರ ಮೋದಿ ಸರಕಾರವು ಎತ್ತಿಕಟ್ಟಿ ತರುವಂತದ್ದೂ ಇದೇ ಆಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಅದರ ಒಂದು ಭಾಗವಾಗಿದೆ ಅಷ್ಟೇ. ರಾಷ್ಟ್ರೀಯ ಪೌರತ್ವ ನೋಂದಣಿಯು ಮುಂದೆ ಆಳವಾದ ಹಾಗೂ ವಿಸ್ತಾರವಾದ ವ್ಯಾಪ್ತಿಯ ವಿಭಜನೆಗೆ ಕಾರಣವಾಗುತ್ತದೆ ಎಂಬುದು ಸ್ಪಷ್ಟ.

ಭಾರತ ಈ ರೀತಿಯ ದುಸ್ಥಿತಿಗೆ ಎಂದೂ ತಲುಪಿಲ್ಲ. ಈಗ ಪೌರತ್ವ ತಿದ್ದುಪಡಿ ಕಾನೂನಿಗೆ ವಿರುದ್ಧವಾಗಿ ಜನ ಧ್ವನಿಗೂಡಿಸುವಂತೆಯೇ, ಸರಕಾರದ ಈ ಕ್ರಮದ ವಿರುದ್ಧವೂ ನಾಲ್ಕು ದಿಕ್ಕುಗಳಿಂದಲೂ ಉಗ್ರ ಹೋರಾಟ ಹಾಗೂ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಇತಿಹಾಸದ ಪಾಠಗಳು ನಾವು ಕಲಿಯಲೇಬೇಕಿದೆ. ಇಲ್ಲವಾದರೆ ಅದು ಪುನರಾವರ್ತನೆಗೊಳ್ಳುವಾಗ ನಾವು ದೂಷಣೆಗೆ ವಿಧೇಯರಾಗಬೇಕಾಗುತ್ತದೆ.

(ಲೇಖಕರು ಮಂಗಳೂರಿನ ಅರೆಬಿಕ್ ಶಿಕ್ಷಣ ಸಂಸ್ಥೆಯೊಂದರಲ್ಲಿ ಅಧ್ಯಾಪಕರು. ಲೇಖನದಲ್ಲಿರುವ ಅಭಿಪ್ರಾಯಗಳು ವ್ಯಕ್ತಿಗತವಾದವು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...