ಹಲವು ಆಮಿಷಗಳೊಡ್ಡಿದರೂ ಅದಕ್ಕೆ ಮಾರುಹೋಗದ ಪಕ್ಷದಲ್ಲೇ ನಿಷ್ಠಾವಂತರಾಗಿ ಉಳಿದುಕೊಂಡ ವ್ಯಕ್ತಿ ಬಿ. ಸತ್ಯನಾರಾಯಣ್ ನನ್ನ ಮಗನಂತಿದ್ದರು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಬಣ್ಣಿಸಿದ್ದಾರೆ.
ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದ ಬಿ. ಸತ್ಯನಾರಾಯಣ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಅತ್ಯಂತ ಸರಳ, ಸಜ್ಜನ ವ್ಯಕ್ತಿ. ನನ್ನ ಮಗನಂತೆಯೇ ನಡೆದುಕೊಳ್ಳುತ್ತಿದ್ದ. ಪಕ್ಷಕ್ಕೆ ನಿಷ್ಠೆ ಇಟ್ಟುಕೊಂಡಿದ್ದ. ಹಾಗಾಗಿ ಎರಡು ಬಾರಿ ಸಚಿವರನ್ನಾಗಿ ಮಾಡಿದ್ದೆ. ಒಮ್ಮೆ ಕಾರ್ಮಿಕ ಸಚಿವರನ್ನಾಗಿ ಕೆಲಸ ನಿರ್ವಹಿಸಿದ್ದರು. ಸತ್ಯನಾರಾಯಣ್ ಅವರನ್ನು ಕಳೆದುಕೊಂಡಿರುವುದು ಅತೀವ ದುಃಖ ತಂದಿದೆ ಎಂದು ಕಂಬನಿ ಮಿಡಿದರು.
ಬಿ. ಸತ್ಯನಾರಾಯಣ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಪಕ್ಷಾತೀತವಾಗಿ ಎಲ್ಲಾ ನಾಯಕರು ಆಗಮಿಸಿದ್ದರು. ಜೆಡಿಎಸ್ ಕಚೇರಿಯಲ್ಲಿ ಕೊರೊನ ಸಂದರ್ಭದಲ್ಲೂ ನೂರಾರು ಮಂದಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಜೆಡಿಎಸ್‌ನ ಮಾಜಿ ಸಚಿವ ಎಚ್. ಡಿ. ರೇವಣ್ಣ, ಕಾಂಗ್ರೆಸ್ ಮುಖಂಡ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಜೆಡಿಎಸ್‌ನ ಹಾಲಿ ಮತ್ತು ಮಾಜಿ ಶಾಸಕ ಮಾಜಿ ಸಚಿವ ಡಿ. ನಾಗರಾಜಯ್ಯ, ಎಸ್. ಆರ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಮುಖಂಡರಾದ ಟಿ. ಆರ್. ನಾಗರಾಜ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.
ಬಿಜೆಪಿಯ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಜಿ. ಬಿ. ಜ್ಯೋತಿಗಣೇಶ್, ಬಿಜೆಪಿ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್ ಸೇರಿದಂತೆ ಬಿಜೆಪಿ ಮುಖಂಡರು ಕೂಡ ಆಗಮಿಸಿದ್ದರು.
ಕಾಂಗ್ರೆಸ್‌ನ ಮಾಜಿ ಶಾಸಕ ರಫೀಕ್ ಅಹಮದ್, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿದ್ದೇಗೌಡ, ಮಾಜಿ ಶಾಸಕ ಎಂ. ಟಿ. ಕೃಷ್ಣಪ್ಪ, ಕೆ. ಎಂ. ತಿಮ್ಮರಾಯಪ್ಪ, ವೀರಭದ್ರಯ್ಯ, ಗೌರಿಶಂಕರ್ ಸೇರಿದಂತೆ ಹಲವರು ಆಗಮಿಸಿ ಪುಷ್ಪಗುಚ್ಚ ಇರಿಸಿ ಅಂತಿಮ ದರ್ಶನ ಪಡೆದರು.
ಸಂಜೆ ಭೂವನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಓದಿ: ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುವುದನ್ನು ದೇಶಕ್ಕೆ ತಿಳಿಸಿ: ಹೆಚ್. ಡಿ. ದೇವೇಗೌಡ