Homeಕರ್ನಾಟಕದೇವೇಗೌಡರೂ ಬೆದರಿದರಾ ಮೋದಿ-ಶಾ ಜೋಡಿಯ ‘ಅರೆಸ್ಟ್’ ರಾಜಕಾರಣಕ್ಕೆ?

ದೇವೇಗೌಡರೂ ಬೆದರಿದರಾ ಮೋದಿ-ಶಾ ಜೋಡಿಯ ‘ಅರೆಸ್ಟ್’ ರಾಜಕಾರಣಕ್ಕೆ?

- Advertisement -
- Advertisement -

ಮನಿ ಲಾಂಡರಿಂಗ್ ಕೇಸಿನಲ್ಲಿ ಕೇಂದ್ರ ಸರ್ಕಾರದ ಇಡಿ ಬಂಧಿಸಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರ ಮನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಹೋಗಿಬಂದಿದ್ದಾರೆ. ಡೀಕೆ ತಾಯಿ ಹೆಚ್ಡಿಕೆ ಮುಂದೆ ಗೋಳಾಡಿದ ವೀಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಯಾರಾದರು ನಮ್ಮನ್ನಗಲಿದರೆ ಅಂತವರ ಮನೆಗೆ ಹೋಗಿ ಸಂಬಂಧಿಕರಿಗೆ ಸಾಂತ್ವನ ಹೇಳಿಬರೋದು ವಾಡಿಕೆ. ಆದರೆ ಪ್ರಕರಣವೊಂದರಲ್ಲಿ (ಅದು ಸರಿಯೋ, ತಪ್ಪೋ) ಆರೋಪಿಯಾಗಿ ಅರೆಸ್ಟಾದ ವ್ಯಕ್ತಿಯ, ಅದೂ ತನ್ನ ಎದುರಾಳಿ ರಾಜಕೀಯ ಮುಖಂಡನ ಮನೆಗೆ ಮಾಜಿ ಸಿಎಂ ಒಬ್ಬರು ಹೋಗಿಬಂದದ್ದು ಮೇಲ್ನೋಟಕ್ಕೆ ಕಾಣುವಷ್ಟು ‘ಸಾಂತ್ವನ’ದ ಪ್ರಸಂಗವಲ್ಲ. ಅದರ ಹಿಂದೆ ಸೋ ಕಾಲ್ಡ್ ಫೀನಿಕ್ಸ್ ರಾಜಕಾರಣಿ ದೇವೇಗೌಡರ ಸ್ಪಷ್ಟ ಲೆಕ್ಕಾಚಾರಗಳಿವೆ.

ಹೌದು, ದೇವೇಗೌಡರ ನೇರ ನಿರ್ದೇಶನಗಳಿಲ್ಲದೆ ಕುಮಾರಸ್ವಾಮಿ ಕನಕಪುರದ ಕೋಡಿಹಳ್ಳಿ ಮನೆಗೆ ಕಾಲಿಡಲು ಸಾಧ್ಯವೇ ಇಲ್ಲ. ಬಿಜೆಪಿಯ ಅಧಿಕಾರ ದುರ್ಬಳಕೆಯನ್ನು ವಿರೋಧಿಸಬೇಕೆನ್ನುವ ದಿಟ್ಟ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ತನ್ನ ಪಾರ್ಟಿಯ ಡಿ.ಕೆ.ಶಿವಕುಮಾರ್ ಪರವಾಗಿ ಗಟ್ಟಿ ದನಿ ಎತ್ತುತ್ತಿದೆಯಾದರು ಆ ಪಕ್ಷದ ಯಾರೂ ಶಿವಕುಮಾರ್ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಅಂತದ್ದರಲ್ಲಿ ಕುಮಾರಸ್ವಾಮಿ ಹೋಗಿ ಬಂದದ್ದನ್ನು ಅಷ್ಟು ಸಲೀಸಾಗಿ ನೋಡಲಾಗದು.

ಕೇಂದ್ರದ ಬಿಜೆಪಿ ಸರ್ಕಾರ, ನಿರ್ದಿಷ್ಟವಾಗಿ ಮೋದಿ-ಶಾ ಜೋಡಿ, ವಿರೋಧ ಪಕ್ಷಗಳನ್ನು ಮಟ್ಟಹಾಕಲು ಅಸ್ತ್ರವೊಂದನ್ನು ಅಣಿಗೊಳಿಸಿಕೊಂಡು ಕೂತಿದೆ. ಎದುರಾಳಿ ನಾಯಕರ ಮೇಲಿರುವ ಕೇಸುಗಳಿಗೆಲ್ಲ ಜೀವತುಂಬಿ ಬೆದರಿಸಿ, ಜೈಲುಭೀತಿ ಹುಟ್ಟಿಸಿ ಅವರನ್ನು ಒಂದೋ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳೋದು ಇಲ್ಲವೇ ಜೈಲಿಗೆ ತಳ್ಳಿ ಎದುರಾಳಿಗಳ ಬಲ ಕುಗ್ಗಿಸುವುದು ಈಗ ನಡೆಯುತ್ತಿರುವ ರಾಜಕೀಯ ಸರ್ಕಸ್ಸು. ಬೇರೆಬೇರೆ ಪಕ್ಷಗಳ ರಾಜಕಾರಣಿಗಳು ದಂಡಿಯಾಗಿ ಬಿಜೆಪಿಯತ್ತ ಗುಳೆ ಹೊರಟಿರೋದು ಈ ಅನುಮಾನವನ್ನು ದಟ್ಟವಾಗಿಸಿದರೆ, ಮಾಜಿ ಕೇಂದ್ರ ಮಂತ್ರಿ ಪಿ.ಚಿದಂಬರಂಗೆ ಆದ ಗತಿ ಇದನ್ನು ಒತ್ತಿ ಹೇಳುತ್ತೆ. ಕರ್ನಾಟಕದಲ್ಲೇ ತೆಗೆದುಕೊಂಡರೆ ಅಧಿಕಾರದಲ್ಲಿದ್ದ ಮೈತ್ರಿ ಸರ್ಕಾರವನ್ನು ಅನಾಮತ್ತು ಅಡ್ಡಡ್ಡ ಮಲಗಿಸಿ ಮಹಾರಾಷ್ಟ್ರದ ರೆಸಾರ್ಟು ಸೇರಿಕೊಂಡ ಅತೃಪ್ತ ಕಂ ಅನರ್ಹ ಶಾಸಕರನ್ನು ಸೆಳೆದಿದ್ದೂ ಇದೇ ತಂತ್ರದಿಂದ ಎನ್ನುವುದು ದಿನೇದಿನೇ ದಟ್ಟವಾಗುತ್ತಿರುವ ಸಂಗತಿ.

ಈ ಭಯವೇ ದೇವೇಗೌಡರಿಗೆ ಕಾಡಲು ಶುರುವಾಗಿದೆಯಾ? ಇಂಥಾ ಡರ್ಟಿ ರಾಜಕಾರಣಕ್ಕೆ ಕೌಂಟರ್ ಕೊಡಲೆಂದೇ ಅವರು ತಮ್ಮ ವೆರಿ ಓಲ್ಡ್ ‘ಒಕ್ಕಲಿಗ’ಜಾತಿ ಅಸ್ತ್ರವನ್ನು ಮೊನಚು ಮಾಡಿಕೊಳ್ಳುತ್ತಿದ್ದಾರಾ? ಎಂಬೆಲ್ಲ ಅನುಮಾನಗಳು ಎಚ್ಡಿಕೆ ಹೋಗಿ ಡೀಕೆ ತಾಯಿಯನ್ನು ಭೇಟಿ ಮಾಡಿ ಬಂದದ್ದರ ಸುತ್ತ ತಲೆ ಎತ್ತುತ್ತಿವೆ. ಅಜಮಾಸು ಅರ್ಧ ಶತಮಾನಗಳ ಕಾಲ ರಾಜ್ಯ ಮತ್ತು ದೇಶ ರಾಜಕಾರಣದಲ್ಲಿ ಸರಿದಾಡಿದ ಗೌಡರ ಕುಟುಂಬದ ಬೆನ್ನಿಗೆ ದೊಡ್ಡ ಸಂಖ್ಯೆಗಳಲ್ಲಿ ಹಗರಣಗಳು ಮೆತ್ತಿಕೊಂಡಿಲ್ಲ ಎನ್ನುವುದು ನಿಜವೇ ಆದರು ಕ್ಲೀನ್‌ಚಿಟ್ ಪಡೆದು ಬೀಗುವಷ್ಟು ಪಾರದರ್ಶಕವಾಗೇನೂ ಅವರ ವ್ಯವಹಾರಗಳಿಲ್ಲ. ಅದರಲ್ಲೂ ತೀರಾ ಇತ್ತೀಚೆಗಿನ ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಪ್ರಕರಣ, ಫೋನ್ ಕದ್ದಾಲಿಕೆ ಹಗರಣ, ಮುಖ್ಯವಾಗಿ ಐಎಂಎ ವಂಚನೆ ಕೇಸುಗಳು ಕುಮಾರಸ್ವಾಮಿಯ ಮಗ್ಗುಲ ಮುಳ್ಳಾಗುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಸಮನ್ಸ್ ಕೂಡಾ ಜಾರಿಯಾಗಿದೆ. ಜೊತೆಗೆ ಅವರ ಕುಟುಂಬದಿಂದ ಸ್ಪರ್ಧಿಸಿದ್ದ ಮೂವರು ಹುರಿಯಾಳುಗಳಲ್ಲಿ ಗೆದ್ದ ಏಕೈಕ ಸಂಸದ ಪ್ರಜ್ವಲ್ ರೇವಣ್ಣರ ಆಯ್ಕೆ ಅನೂರ್ಜಿತಗೊಳಿಸಬೇಕೆಂದು ಬಿಜೆಪಿಯ ಎ.ಮಂಜು ಕೊಟ್ಟ ಕೇಸ್ ಕೂಡಾ ಹೈಕೋರ್ಟ್‌ನಲ್ಲಿ ಲಗುಬಗೆಯಿಂದ ವಿಚಾರಣೆಗೆ ಒಳಪಟ್ಟಿದೆ. ಇಷ್ಟು ಸಾಕಲ್ಲವೇ ಮೋ-ಶಾ ಜೋಡಿಗೆ ದೇವೇಗೌಡರ ಕುಟುಂಬವನ್ನು ಮಟ್ಟಹಾಕಲು.

ವೀರಶೈವ ಓಟ್‌ಬ್ಯಾಂಕ್ ಮೂಲಕ ಉತ್ತರ ಕರ್ನಾಟಕದಲ್ಲಿ ಭರ್ಜರಿ ಬೇರೂರಿರುವ ಬಿಜೆಪಿಯನ್ನು ಕರ್ನಾಟಕದಲ್ಲಿ ಗಟ್ಟಿ ನೆಲೆಗೊಳಿಸಬೇಕೆಂದರೆ ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಪ್ರಾಂತ್ಯದಲ್ಲೂ ಅಷ್ಟೇ ಆಳವಾಗಿ ಬೇರೂರಿಸಬೇಕು ಎಂಬ ಆಲೋಚನೆ ಬಿಜೆಪಿ ಹೈಕಮಾಂಡ್ ನದ್ದು. ಅದಕ್ಕೋಸ್ಕರ ಒಕ್ಕಲಿಗ ಲೀಡರುಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ತಂತ್ರಗಾರಿಕೆ ದೇವೇಗೌಡರ ಕಿವಿಗೂ ತಲುಪಿದೆ. ಈಗಾಗಲೇ ಡೀಕೆ ಮೇಲೆ ಮುರಕೊಂಡು ಬಿದ್ದಿರುವ ಮೋದಿ-ಶಾ ಜೋಡಿಯ ಮುಂದಿನ ಟಾರ್ಗೆಟ್ ತಮ್ಮ ಕುಟುಂಬ ಎನ್ನುವುದೂ ಅವರಿಗೆ ಚೆನ್ನಾಗಿ ಮನದಟ್ಟಾಗಿದೆ. ಅದರಲ್ಲೂ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಕರ್ನಾಟಕ ಪೊಲೀಸರು ದುಬೈಗೆ ಹೋಗಿ ಅರೆಸ್ಟು ಮಾಡಿ ಕರೆತರುತ್ತಿದ್ದ ಐಎಂಎ ಆರೋಪಿ ಮನ್ಸೂರ್ ಖಾನ್‌ನನ್ನು ಕೇಂದ್ರದ ಇಡಿ ಅಧಿಕಾರಿಗಳು ದೆಹಲಿಯಲ್ಲೇ ಅಡ್ಡಗಟ್ಟಿ ತಮ್ಮ ವಶಕ್ಕೆ ಪಡೆದಿದ್ದಂತೂ (ವಿಶ್ವಾಸಮತ ಹೈಡ್ರಾಮಾ ಅವಧಿಯಲ್ಲಿ ಸ್ವತಃ ಕುಮಾರಸ್ವಾಮಿ ಸದನದಲ್ಲೇ ಈ ಬಗ್ಗೆ ಹೇಳಿಕೊಂಡಿದ್ದರು) ಗೌಡರ ಕುಟುಂಬಕ್ಕೆ ದೊಡ್ಡ ಕಗ್ಗಂಟಾಗುವ ಸಾಧ್ಯತೆಯಿದೆ. ನೆನಪಿರಲಿ, ತನ್ನ ಮಗಳು ಶೀನಾ ಬೋರಾ ಮರ್ಡರ್ ಕೇಸಿನಲ್ಲಿ ಜೈಲುಹಕ್ಕಿಯಾಗಿರುವ ಇಂದ್ರಾಣಿ ಮುಖರ್ಜಿಯಿಂದ ಪಡೆದುಕೊಂಡ ಹೇಳಿಕೆಯನ್ನು ನೆಪವಾಗಿಟ್ಟುಕೊಂಡೇ ಪಿ.ಚಿದಂಬರಂ ಅವರನ್ನು ಅರೆಸ್ಟ್ ಮಾಡಿರೋದು. ಈಗ ಮನ್ಸೂರ್ ಖಾನನಿಂದಲೂ ಅಂತದ್ದೇ ಹೇಳಿಕೆ ಬರೆಸಿಕೊಳ್ಳೋದೇನು ಕಷ್ಟವಿಲ್ಲ. ಇನ್ನು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿರೋದು ಕೂಡಾ ಗೌಡರ ಆತಂಕವನ್ನು ದುಪ್ಪಟ್ಟುಗೊಳಿಸಿರಲಿಕ್ಕೂ ಸಾಕು.

ಹಾಗಂತ, ಬಿಜೆಪಿಯ ಈ ಅರೆಸ್ಟ್ ರಾಜಕಾರಣಕ್ಕೆ ದೇವೇಗೌಡರ ಮೊದಲ ಅಸ್ತ್ರ ಜಾತಿ ರಾಜಕಾರಣವಾಗಿರಲಿಲ್ಲ. ಮೈತ್ರಿ ಸರ್ಕಾರವನ್ನು ಬಿಜೆಪಿ ಬೀಳಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು ತಮ್ಮ ವಾಕ್ಚಾತುರ್ಯವನ್ನು ಖರ್ಚು ಮಾಡಿದ್ದು ಸಿದ್ದರಾಮಯ್ಯನನ್ನು ತೆಗೆಳುವುದಕ್ಕೇ ವಿನಾಃ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕಲ್ಲ. ಒಂದು ಹಂತದಲ್ಲಿ, ಒಂದಷ್ಟು ಜೆಡಿಎಸ್ ಶಾಸಕರು ದೇವೇಗೌಡರ ಮನೆಯಲ್ಲಿ ಕೂತು ಬಿಜೆಪಿ ಸರ್ಕಾರಕ್ಕೆ ಬೆಂಬಲ ಕೊಡಬೇಕೆನ್ನುವ ಮಾತುಗಳೂ ಕೇಳಿಬಂದವು. ಆ ರೀತಿಯಲ್ಲಿ ಬಿಜೆಪಿಯೊಂದಿಗೆ ಸನಿಹಗೊಳ್ಳಲು ಗೌಡರು ಯತ್ನಿಸಿದ್ದುಂಟು. ಆದರೆ ಗೌಡರ ವರಾತಗಳ ಬಗ್ಗೆ ಚೆನ್ನಾಗಿ ಅರಿವಿರುವ ಬಿಜೆಪಿ ಅದಕ್ಕೆ ಸೊಪ್ಪು ಹಾಕಲಿಲ್ಲ.

ಯಾವಾಗ ಡೀಕೆ ಬುಡಕ್ಕೇ ‘ಇಡಿ’ ನೆಪದಲ್ಲಿ ಮೋ-ಶಾ ಜೋಡಿ ಲಗ್ಗೆ ಇಟ್ಟಿತೊ ಆಗ ಗೌಡರಿಗೆ ಅನಿವಾರ್ಯವಾಗಿ ಉಳಿದದ್ದು ತಮ್ಮ ಹಳೇ ಅಸ್ತ್ರ. ಅದು ಜಾತಿ ರಾಜಕಾರಣ. ಡೀಕೆ ಬಂಧನ ವಿರೋಧಿಸಿ ಒಕ್ಕಲಿಗರ ಪ್ರಾಬಲ್ಯವಿರುವ ಸ್ಥಳಗಳಲ್ಲಿ (ಅಲ್ಲಿ ಸ್ವತಃ ಕಾಂಗ್ರೆಸ್ ಪಕ್ಷ ಬಲಾಢ್ಯವಾಗಿಲ್ಲವಾದರು) ದೊಡ್ಡದೊಡ್ಡ ಪ್ರತಿಭಟನೆಗಳು ನಡೆದಿವೆ, ವಿಶ್ವ ಒಕ್ಕಲಿಗರ ಸಂಘ ಕೇಂದ್ರದ ದ್ವೇಷ ರಾಜಕಾರಣದ ವಿರುದ್ಧ ಹೇಳಿಕೆ ಕೊಟ್ಟಿದೆ. ಇವೆಲ್ಲವುಗಳ ಹಿಂದೆ ದೇವೇಗೌಡರ ಮುತುವರ್ಜಿ ಇದೆ ಎನ್ನುವುದು ಲೇಟೆಸ್ಟ್ ವರ್ತಮಾನ. ಆ ಮೂಲಕ ಒಕ್ಕಲಿಗ ನಾಯಕರ ಮೇಲೆ (ತಮ್ಮ ಕುಟುಂಬದ ಮೇಲೆ) ಅಟ್ಯಾಕ್ ಮಾಡಿದರೆ ಇಡೀ ಒಕ್ಕಲಿಗ ಸಮುದಾಯವೇ ಬಿಜೆಪಿ ವಿರುದ್ಧ ತಿರುಗಿಬೀಳಲಿದೆ ಎಂಬ ಸಂದೇಶವನ್ನು ಡೀಕೆ ಪ್ರಕರಣದ ಮೂಲಕ ಬಿಜೆಪಿ ಹೈಕಮ್ಯಾಂಡ್‌ಗೆ ರವಾನಿಸಲು ಗೌಡರು ಯತ್ನಿಸುತ್ತಿದ್ದಾರೆ.

ಅದರ ಭಾಗವಾಗಿಯೇ ಕುಮಾರಸ್ವಾಮಿ, ಡಿಕೆಶಿಯವರ ಮನೆಗೆ ಹೋಗಿ ಅವರ ತಾಯಿ ಜೊತೆ ಮಾತನಾಡುವ ಭಾವನಾತ್ಮಕ ಎಪಿಸೋಡು ಕ್ರಿಯೇಟ್ ಆಗಿರೋದು. ಅಲ್ಲಿ ನಿಂತು ಆಡಿದ ಕುಮಾರಸ್ವಾಮಿಯವರ ಮಾತಿನಲ್ಲೂ ಜಾತಿಯನ್ನು ಎಳೆದು ತರುವ ಪ್ರಯತ್ನ ಜೋರಾಗಿಯೇ ನಡೆಯಿತು. ‘ನಾನು ೧೪ ತಿಂಗಳ ಕಾಲ ಮುಖ್ಯಮಂತ್ರಿ ಆಗಿದ್ದೆ. ಮನಸ್ಸು ಮಾಡಿದ್ದರೆ ಯಡಿಯೂರಪ್ಪ ಅವರ ಆಡಿಯೊ ಪ್ರಕರಣವನ್ನು ಇಟ್ಟುಕೊಂಡು ಕ್ರಮ ಕೈಗೊಳ್ಳಬಹುದಿತ್ತು. ಹಾಗೆ ಮಾಡಿದ್ದರೆ ವೀರಶೈವ ಸಮಾಜದ ಮುಖಂಡರ ಮೇಲೆ ಕುಮಾರಸ್ವಾಮಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ದೂರುತ್ತಿದ್ದರು. ಈಗಾಗಲೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐ.ಟಿ. ಅಧಿಕಾರಿಗಳು ಅವರನ್ನು ಬಲಿ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಶಿವಕುಮಾರ್‌ಗೆ ತೊಂದರೆ ಕೊಡುತ್ತಿದ್ದಾರೆ’ ಎನ್ನುವ ಕುಮಾರಸ್ವಾಮಿಯವರ ಮಾತಿನಲ್ಲಿ ಜಾತಿ ರಾಜಕಾರಣ ಎದ್ದು ಕಾಣುತ್ತದೆ. ಸಿದ್ಧಾರ್ಥ್ ಆತ್ಮಹತ್ಯೆ ಮತ್ತು ಡೀಕೆ ಬಂಧನ ಪ್ರಕರಣಗಳನ್ನು ಮುಂದೆ ಮಾಡಿ ಬಿಜೆಪಿಯ ಅಡ್ಡಹಾದಿಗೇ ಚೆಕ್‌ಪೋಸ್ಟ್ ಕಟ್ಟುವ ಪ್ರಯತ್ನ ಇದು. ಈ ಪ್ರಯತ್ನದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೊ ಕಾದುನೋಡಬೇಕು. ಒಟ್ಟಿನಲ್ಲಿ ಕುತಂತ್ರಗಳೇ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ನಾವಿರೋದು ದುರಂತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇಂದ್ರಾಣಿ ಮುಖರ್ಜಿಯ ಹೇಳಿಕೆಯ ಆಧಾರದ ಮೇಲೆ ಚಿದಂಬರಂರನ್ನು ಬಂಧಿಸಿರುವ ರೀತಿಯಲ್ಲಿಯೇ; ಡಿಕೆಶಿ ಬಾಯಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿಯವರ ಹೆಸರು ಹೇಳಿಸಿ, ಇವರಿಬ್ಬರ ವಿರುದ್ಧವೂ ಎಫ್. ಐ.ಆರ್ ಮತ್ತು ಆರೋಪ ಪಟ್ಟಿ ಸಲ್ಲಿಸುವ ಎಲ್ಲಾ ಸಾಧ್ಯತೆಗಳು ಇವೆ.

LEAVE A REPLY

Please enter your comment!
Please enter your name here

- Advertisment -

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...