Homeಅಂತರಾಷ್ಟ್ರೀಯರಷ್ಯಾ ಮೇಲೆ ಆರ್ಥಿಕ ನಿರ್ಬಂಧ: ಗೂಗಲ್ ಪೇ, ಆಪಲ್ ಪೇ ಸ್ಥಗಿತದಿಂದ ಪರದಾಡಿದ ನಾಗರಿಕರು

ರಷ್ಯಾ ಮೇಲೆ ಆರ್ಥಿಕ ನಿರ್ಬಂಧ: ಗೂಗಲ್ ಪೇ, ಆಪಲ್ ಪೇ ಸ್ಥಗಿತದಿಂದ ಪರದಾಡಿದ ನಾಗರಿಕರು

ಅಂಕಿಅಂಶಗಳ ಪ್ರಕಾರ, 29% ರಷ್ಯನ್ನರು ಗೂಗಲ್ ಪೇ ಬಳಸುತ್ತಾರೆ ಮತ್ತು 20% ಜನರು ಆಪಲ್ ಪೇ ಬಳಸುತ್ತಾರೆ..

- Advertisement -
- Advertisement -

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ನಂತರ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿವೆ. ಅಂತರರಾಷ್ಟ್ರೀಯ ಹಣಕಾಸು ವಹಿವಾಟುಗಳಿಗೆ ಬಳಸಲಾಗುತ್ತಿರುವ ಸ್ವಿಫ್ಟ್‌ (Society for Worldwide Interbank Financial Telecommunications) ಪಾವತಿ ವ್ಯವಸ್ಥೆಯನ್ನೂ ರಷ್ಯಾದ ಕೆಲವು ಬ್ಯಾಂಕುಗಳಲ್ಲಿ ಬಳಕೆ ಮಾಡಲಾಗದಂತೆ ನಿರ್ಬಂಧಿಸಲಾಗಿದೆ. ಇದರಿಂದಾಗಿ, ಸೋಮವಾರ ಅಮೆರಿಕನ್ ಡಾಲರ್ ವಿರುದ್ಧ ರಷ್ಯಾದ ಕರೆನ್ಸಿ ಸುಮಾರು 30% ರಷ್ಟು ಕುಸಿತ ಕಂಡಿದೆ.

ಈ ಎಲ್ಲಾ ಕಾರಣಗಳಿಂದಾಗಿ ರಷ್ಯಾ ಜನರ ದೈನಂದಿನ ವಹಿವಾಟಿನ ಮೇಲೆ ಅಪಾರ ಪರಿಣಾಮ ಬೀರಿದ್ದು, ಜನರು ಹಣಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಷ್ಯಾದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆಯನ್ನು ಅರಿತವರು, ನಗದು ಹಣ ಪಡೆಯಲು ಹಲವಾರು ದಿನಗಳಿಂದ ಬ್ಯಾಂಕ್‌ಗಳು ಮತ್ತು ಎಟಿಎಂಗಳಿಗೆ ಅಲೆದಾಡುತ್ತಿದ್ದಾರೆ. ಬ್ಯಾಂಕ್-ಎಟಿಎಂಗಳ ಮುಂದೆ ದೀರ್ಘ ಸಾಲುಗಳಲ್ಲಿ ನಿಂತಿದ್ದಾರೆ.

ಅಮೆರಿಕ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಮುಂದುವರಿಸಿದ್ದು, ರಷ್ಯಾದಲ್ಲಿ ಆಪಲ್ ಪೇ ಮತ್ತು ಗೂಗಲ್ ಪೇ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಇದು ರಷ್ಯಾ ಜನರ ಆನ್‌ಲೈನ್ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

ರಷ್ಯಾದ ಹಲವಾರು ಬ್ಯಾಂಕ್‌ಗಳಲ್ಲಿನ ಗ್ರಾಹಕರು ತಮ್ಮ ಬ್ಯಾಂಕ್ ಕಾರ್ಡ್‌ಗಳನ್ನು ಆಪಲ್ ಪೇ ಮತ್ತು ಗೂಗಲ್ ಪೇ ಜೊತೆಗೆ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. “ನಿರ್ಬಂಧಕ್ಕೆ ಸಿಲುಕಿರುವ ಬ್ಯಾಂಕುಗಳ ಗ್ರಾಹಕರು (ವಿಟಿಬಿ ಗ್ರೂಪ್, ಸೋವ್ಕಾಂ ಬ್ಯಾಂಕ್, ನೋವಿಕೊಂ ಬ್ಯಾಂಕ್, ಪ್ರಾಮ್ಸ್ವ್ಯಾಜ್ ಬ್ಯಾಂಕ್, ಒಟ್ಕ್ರಿಟಿ) ತಮ್ಮ ಬ್ಯಾಂಕಿಂಗ್ ಕಾರ್ಡ್‌ಗಳನ್ನು ಆಪಲ್ ಪೇ ಮತ್ತು ಗೂಗಲ್ ಪೇ ಸೇವೆಗಳೊಂದಿಗೆ ಬಳಸಲು ಸಾಧ್ಯವಾಗುತ್ತಿಲ್ಲ. ಆದರೆ, ಈ ಕಾರ್ಡ್‌ಗಳ ಮೂಲಕ ಸ್ಥಳೀಯ ಪಾವತಿಗಳನ್ನು ಮಾಡಲು ರಷ್ಯಾದ್ಯಂತ ಸಾಧ್ಯವಿದೆ” ಎಂದು ರಷ್ಯನ್ ಸೆಂಟ್ರಲ್ ಬ್ಯಾಂಕ್ ತಿಳಿಸಿದೆ.

ಗೂಗಲ್ ಪೇ ಮತ್ತು ಆಪಲ್ ಪೇಗಳು ಅಮೆರಿಕ ರೀತಿಯಲ್ಲಿ ರಷ್ಯಾದಲ್ಲಿ ಜನಪ್ರಿಯವಾಗಿಲ್ಲ. ರಷ್ಯಾದ ಜನರು ಅಲ್ಲಿನ ಅತ್ಯಂತ ಜನಪ್ರಿಯ ಮೊಬೈಲ್ ಪಾವತಿ ಸೇವೆಯಾಗಿರುವ, ರಷ್ಯಾದ ಒಡೆತನದ್ದೇ ಆದ ಸ್ಬರ್‌ ಬ್ಯಾಂಕ್ ಆನ್ಲೈನ್ ಪೇ, ಯೂಮನಿ (ಹಿಂದೆ ಯಾಂಡೆಕ್ಸ್ ಮನಿ) ಮತ್ತು ಕ್ಯುವಿಗಳನ್ನು ಬಳಸುತ್ತಿದ್ದಾರೆ ಎಂದು ದಿ ವೆರ್ಜ್ ವರದಿ ಮಾಡಿದೆ.

ಅಂಕಿಅಂಶಗಳ ಪ್ರಕಾರ, 29% ರಷ್ಯನ್ನರು ಗೂಗಲ್ ಪೇ ಬಳಸುತ್ತಾರೆ ಮತ್ತು 20% ಜನರು ಆಪಲ್ ಪೇ ಬಳಸುತ್ತಾರೆ ಎಂದು ವರದಿ ಹೇಳಿದೆ.

ರಷ್ಯಾದ ಎರಡು ದೊಡ್ಡ ಹಣಕಾಸು ಸಂಸ್ಥೆಗಳಾದ ಸ್ಬರ್‌ ಬ್ಯಾಂಕ್ ಮತ್ತು ವಿಟಿಬಿ ಬ್ಯಾಂಕ್‌ಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರಿದೆ. ಆದೇ ರೀತಿಯಲ್ಲಿ ಯುನೈಟೆಡ್ ಕಿಂಗ್‌ಡಂ ರಷ್ಯಾದ ಐದು ಬ್ಯಾಂಕ್‌ಗಳ ವಹಿವಾಟು ಮತ್ತು ಆಸ್ತಿಗಳನ್ನು ಸ್ಥಗಿತಗೊಳಿಸಿದೆ.


ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಬಿಕ್ಕಟ್ಟು: ಕ್ಷಿಪಣಿ ದಾಳಿ; ಕರ್ನಾಟಕ ಮೂಲದ ವಿದ್ಯಾರ್ಥಿ ಬಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...