Homeಮುಖಪುಟ‘ಹೆಬ್ಬೆಟ್ಟು ಗಿರಾಕಿಗಳು’ ಮತ್ತು ಕನ್ನಡದ ಪರಂಪರೆಯು

‘ಹೆಬ್ಬೆಟ್ಟು ಗಿರಾಕಿಗಳು’ ಮತ್ತು ಕನ್ನಡದ ಪರಂಪರೆಯು

- Advertisement -
- Advertisement -

ಕೆಲ ದಿನಗಳ ಹಿಂದೆ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಛೇರ್‌ಮನ್ ‘ಇಲ್ಲಿಯವರೆಗೆ ಪರಿಷತ್ತಿನ ಸದಸ್ಯತ್ವ ಪಡೆದವರಲ್ಲಿ ಹೆಚ್ಚಿನವರು ಹೆಬ್ಬೆಟ್ಟು ಗಿರಾಕಿಗಳು, ಇನ್ನು ಮುಂದೆ ಪರಿಷತ್ತಿನ ಸದಸ್ಯತ್ವ ಪಡೆಯಲು ಕನಿಷ್ಟ ಹತ್ತನೇ ತರಗತಿ ಪಾಸಾಗಿರಬೇಕು, ಇಲ್ಲವೆ ಪರಿಷತ್ತು ನಡೆಸುವ ಪರೀಕ್ಷೆಯಲ್ಲಿ ಪಾಸಾದವರಿಗೆ ಮಾತ್ರ ಸದಸ್ಯತ್ವ ನೀಡಲಾಗುವುದು’ ಎಂದಿದ್ದಾರೆ. ಇದಲ್ಲದೆ ಸದಸ್ಯತ್ವ ಪಡೆಯಲು ಹತ್ತನೇ ತರಗತಿ ಪಾಸಾಗಿರಬೇಕು ಎಂಬ ಷರತ್ತು ಹಾಕಿ ಶತಮಾನಗಳಷ್ಟು ಹಳೆಯದಾದ ಪರಿಷತ್ತಿನ ಬೈಲಾಕ್ಕೆ ತಿದ್ದುಪಡಿಯನ್ನು ಮಾಡಿದ್ದಾರೆ. ಈಗ ಅದನ್ನು ಏಳನೇ ತರಗತಿಗೆ ತಂದು ನಿಲ್ಲಿಸಿದ್ದಾರೆಂದು ವರದಿಯಾಗಿದೆ. ಅಲ್ಲಿಗೆ ಸಾಹಿತ್ಯ ಪರಿಷತ್ತಿನ ಸದಸ್ಯತ್ವವು ಏಳನೇ ತರಗತಿ ಪಾಸಾದವರಿಗೆ ಮಾತ್ರ ಲಭಿಸಲಿದೆ. ಏಳನೇ ತರಗತಿ ಪಾಸು ಮಾಡದ ಬಹುಸಂಖ್ಯಾತರಿಗೆ ಪರಿಷತ್ತಿನ ಬಾಗಿಲು ಮಾತ್ರವಲ್ಲದೆ, ಸ್ವರ್ಗದ ಬಾಗಿಲೂ ಮುಚ್ಚಿಹೋಗಲಿದೆ. ಈ ಸಾಹಿತ್ಯ ಪರಿಷತ್ತು ಎಂಬ ಸಂಸ್ಥೆಯು, ಏಳನೇ ಕ್ಲಾಸು ಪಾಸು ಮಾಡಿದ ಅಥವಾ ಪಾಸು ಮಾಡದ ಬಹುಸಂಖ್ಯಾತ ಜನರ ಜೀವನ್ಮರಣದ ಅಗತ್ಯಗಳ ಪಟ್ಟಿಯಲ್ಲೇನು ಇಲ್ಲ. ಆದರೆ ಒಂದು ಸಾರ್ವಜನಿಕ ಸಾಹಿತ್ಯಿಕ ಸಂಸ್ಥೆಯ ಸದಸ್ಯತ್ವ ಪಡೆಯಲು ಕನಿಷ್ಟ ವಿದ್ಯಾರ್ಹತೆಯನ್ನು ನಿಗದಿ ಮಾಡಿರುವ ಮನಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಈ ಏಳನೇ ತರಗತಿ ಪಾಸು ಮಾಡದವರು, ಪಾಸು ಮಾಡಿದವರಿಗಿಂತ ಕನಿಷ್ಟರು, ಅನ್ಯರು ಎಂಬ ಧೋರಣೆಯು ಈ ವರ್ಗೀಕರಣದ ಹಿಂದಿದೆ.

ಕಳೆದ ಕೆಲ ತಿಂಗಳ ಹಿಂದೆ ಕುಶಾಲನಗರದ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿ ನಿರಪರಾಧಿ ಆದಿವಾಸಿ ಯುವಕನ ಮೇಲೆ ಗುಂಡು ಹಾರಿಸಿ ಕೊಲ್ಲಲೆತ್ನಿಸಿದ ಘಟನೆ ಮೆಲ್ಲಗೆ ಮರೆವಿಗೆ ಸರಿದಿರಬಹುದು. ಸಾವುಬದುಕಿನ ಮಧ್ಯೆ ಹೋರಾಡುತ್ತಿದ್ದ ಆ ನಿಷ್ಪಾಪಿ ಆದಿವಾಸಿಯ ಮೇಲೆ ಅದೇ ಅರಣ್ಯ ಸಿಬ್ಬಂದಿ ದೂರು ಕೊಟ್ಟು ಎಫ್‌ಐಆರ್ ದಾಖಲಾಗುವಂತೆ ಮಾಡಿತ್ತು. ಉಡುಪಿ ಬಳಿಯ ಕೋಟತಟ್ಟುವಿನ ಕೊರಗರು ಮದುವೆ ಸಂಭ್ರಮದಲ್ಲಿ ಧ್ವನಿವರ್ಧಕವನ್ನು ಬಳಸಿದರು ಎಂದು ಸ್ಥಳೀಯ ಪೊಲೀಸರು ಮದುಮಕ್ಕಳು ಇದ್ದ ಮನೆಗೆ ನುಗ್ಗಿ ಸಿಕ್ಕಸಿಕ್ಕವರನ್ನೆಲ್ಲ ಥಳಿಸಿದ್ದರು. ಮದುವೆಯ ಸಡಗರ ಮಾಯವಾಗಿ ಅನಿರೀಕ್ಷಿತ ದಾಳಿಯಿಂದ ತತ್ತರಿಸಿಹೋಗಿದ್ದ ಆದಿವಾಸಿಗಳನ್ನು ಠಾಣೆಗೆ ಎಳೆದು ತಂದು ಹಿಂಸಿಸಿದ್ದಲ್ಲದೆ ಅವರ ಮೇಲೆ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದರು. ಬುದ್ಧಿವಂತರ ನಾಡಿನ ಕಾಲೇಜುಗಳಲ್ಲಿ ಈಗ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿ ಸಾಮಾಜಿಕ ಸಮಾನತೆಯನ್ನು ಇದ್ದಕ್ಕಿದ್ದಂತೆ ಸಾಧಿಸುವ ಧಾವಂತ ಕೆಲವರಲ್ಲಿ ಭುಗಿಲೆದ್ದಿದೆ.

ಶತಮಾನಗಳಿಂದ ಈ ದೇಶದಲ್ಲಿ ಠಿಕಾಣಿ ಹೂಡಿರುವ ಸಾಮಾಜಿಕ ಅಸಮಾನತೆಗೆ ಅಲ್ಪಸಂಖ್ಯಾತ ಸಮುದಾಯದ ಹುಡುಗಿಯರು ಹಾಕುತ್ತಿರುವ ಹಿಜಾಬೇ ಕಾರಣ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ. ನಮ್ಮ ಟಿವಿ ಚಾನಲ್‌ಗಳು ಸರ್ವ ಅಸಮಾನತೆಗೆ ಕಾರಣವಾದ ಹಿಜಾಬು ಮತ್ತು ಅದನ್ನು ಹಾಕಿಕೊಳ್ಳುವ ಹುಡುಗಿಯರು ಹೇಗೆ ಅಂತಾರಾಷ್ಟ್ರೀಯ ಭಯೋತ್ಪಾದಕ ಗುಂಪುಗಳಿಂದ ಪ್ರೇರಣೆ ಪಡೆದಿದ್ದಾರೆ ಎಂಬುದನ್ನು ತೋರಿಸಲು ಪೈಪೋಟಿಗೆ ಬಿದ್ದಿವೆ. ಇದೆಲ್ಲವನ್ನೂ ಸಹಿಸಿಕೊಂಡು ಉಸಿರು ತೆಗದುಕೊಳ್ಳುವ ಹವಣಿಕೆಯಲ್ಲಿದ್ದ ಜನರು ಸಾಹಿತ್ಯ ಪರಿಷತ್ ಎಂಬ ಸಂಸ್ಥೆಯ ಛೇರ್‌ಮನ್ ಒಬ್ಬರಿಂದ ಇದ್ದಕ್ಕಿದ್ದಂತೆ ‘ಹೆಬ್ಬಟ್ಟು ಗಿರಾಕಿ’ಗಳಾಗಿ ಹೋಗಿದ್ದಾರೆ. ಮೇಲ್ನೋಟಕ್ಕೆ ಈ ಮೇಲಿನ ಸಂದರ್ಭಗಳು ಬೇರೆಬೇರೆ ಎಂದು ಕಂಡರೂ ಇವುಗಳ ಆಳದಲ್ಲಿ ಒಂದು ವರ್ಗದ ಜನರನ್ನು ಶಾಶ್ವತವಾಗಿ ಅಂಚಿಗೆ ತಳ್ಳುವ ಹುನ್ನಾರಗಳಿವೆ.

ಗುರು ಗೋವಿಂದಭಟ್ಟರ ವಂಶಸ್ಥ ತಾನು ಎಂದು ಹೇಳಿಕೊಳ್ಳುವ ಸಾಹಿತ್ಯ ಪರಿಷತ್ತಿನ ಇಂದಿನ ಛೇರ್‌ಮನ್ ನಮ್ಮ ನಾಡಿನ ಬಹುಸಂಖ್ಯಾತರನ್ನು ‘ಹೆಬ್ಬೆಟ್ಟು ಗಿರಾಕಿ’ಗಳೆಂದು ಪರಿಗಣಿಸಿಬಿಟ್ಟಿದ್ದಾರೆ. (ಆ ಗುರುಗೋವಿಂದ ಭಟ್ಟರು ಶಿಶುನಾಳ ಶರೀಫರಿಗೆ ಭೇದಗಳೆಣಿಸದೆ ಪಾಠ ಹೇಳಿದ ಗುರುಗಳು) ಈ ಹೆಬ್ಬೆಟ್ಟು ಗಿರಾಕಿಗಳು ಒಂದು ದೇಶದ ನಾಗರಿಕರಾಗಿ ದೇಶದ ಪ್ರಧಾನಿ ಯಾರಾಗಬೇಕೆಂದು ಮತ ಚಲಾಯಿಸಿ ತೀರ್ಮಾನಿಸುತ್ತಾರೆ. ಸರ್ವಸ್ವತಂತ್ರ ಭಾರತದ ನಾಗರಿಕ ಹಕ್ಕು ಅಧಿಕಾರಗಳು ಇವರಿಗೂ ಇವೆ. ಆಳುವ ವರ್ಗಗಳ ತಾರಾತಿಗಡಿಗಳಲ್ಲಿ ಹಾಳಾಗಿಹೋಗಿದ್ದ ದೇಶವನ್ನು ಕಟ್ಟಿ ನಿಲ್ಲಿಸಿದ ಜನ ಇವರು. ಈ ದೇಶದ ಆತ್ಮವೆನ್ನಿಸಿಕೊಂಡಿರುವ ಬಹುತ್ವವನ್ನು ಬದುಕಿಬಂದ ಜನ ಇವರು. ದೇಶದ ಪರಂಪರೆಯ ಪ್ರತೀಕಗಳಾದ ಭಾಷೆ, ಸಂಸ್ಕೃತಿ, ಕಲೆ, ನೃತ್ಯ, ಸಂಗೀತ ಮತ್ತು ಮಹಾಕಾವ್ಯಗಳನ್ನು ಕಟ್ಟಿದ್ದಲ್ಲದೆ ಅವುಗಳನ್ನು ಉಳಿಸಿ ಬೆಳೆಸುತ್ತಾ ಬಂದ ಜನ ಇವರು.

ನಮ್ಮ ದೇಶದ ಮಹಾಕಾವ್ಯಗಳೆಂದು ಕರೆಯಲ್ಪಡುವ ರಾಮಾಯಣ ಮಹಾಭಾರತಗಳು ಮೂಲತಃ ಹಾಡುಕಾವ್ಯಗಳು. ಜನ ಕಟ್ಟಿದ ಈ ಕಾವ್ಯಗಳು ಕಲಾನಂತರ ಆಯಾ ಸಮುದಾಯಗಳ ಹಿತಾಸಕ್ತಿಗಳಿಗೆ ಅನುಗುಣವಾಗಿ ಅಕ್ಷರಕ್ಕಿಳಿದು ‘ಶಿಷ್ಟ’ ಕಾವ್ಯಗಳು ಎಂದು ವರ್ಗೀಕರಿಸಲ್ಪಟ್ಟಿವೆ. ಈಗಲೂ ನಮ್ಮ ದೇಶದಲ್ಲಿ ಅಕ್ಷರ ಬರೆಯಲು ಬಾರದ ಆದಿವಾಸಿಗಳು, ಆಲೆಮಾರಿಗಳು, ತಳಸ್ತರದ ಸಮುದಾಯಗಳಿಗೆ ಅವುಗಳದ್ದೇ ಆದ ರಾಮಾಯಣ ಮಹಾಭಾರತಗಳಿವೆ. ಈ ‘ಹೆಬ್ಬೆಟ್ಟು ಗಿರಾಕಿ’ಗಳು ಕಟ್ಟಿದ ಕಾವ್ಯಗಳನ್ನು ನಮ್ಮ ಸಾಹಿತ್ಯದ ಮಂದಿ ‘ಜನಪದ’ ಕಾವ್ಯಗಳು ಎಂದು ಕರೆದುಬಿಟ್ಟರು. ಪಂಡಿತೋತ್ತಮರು ಬರೆದ ಕಾವ್ಯಗಳು ‘ಶಿಷ್ಟ’ವಾದವುಗಳು ಮತ್ತು ಅವು ಶ್ರೇಷ್ಠ. ಈ ‘ಹೆಬ್ಬೆಟ್ಟು ಗಿರಾಕಿ’ಗಳು ಕಟ್ಟಿದ ಕಾವ್ಯಗಳು ‘ಜನಪದ’ ಮತ್ತು ಇವು ಅಷ್ಟರಮಟ್ಟಿಗೆ ಕನಿಷ್ಟ ಎಂಬ ತರತಮ ನೋಟಕ್ರಮ ನಮ್ಮ ಸಾಹಿತ್ಯ ಮೀಮಾಂಸೆಯಲ್ಲಿಯೇ ಅಂತರ್ಗತವಾಗಿದೆ. ನಮ್ಮ ಬಹುಸಂಖ್ಯಾತ ಈ ‘ಹೆಬ್ಬೆಟ್ಟು ಗಿರಾಕಿ’ಗಳು ಕಟ್ಟಿದ ಸಾಹಿತ್ಯವು ‘ಶಿಷ್ಟ’ ನಾಗರಿಕರಿಗೆ ‘ಅನ್ಯ’ವಾಗಿ, ಅಂಚಿನ ಸಾಹಿತ್ಯವೆಂದೇ ಪರಿಗಣಿಸಲ್ಪಡುತ್ತಾ ಬಂದಿದೆ. ಹಾಗಾದರೆ ಈ ‘ಅನ್ಯರು’ ಮತ್ತು ‘ಹೆಬ್ಬೆಟ್ಟು ಗಿರಾಕಿ’ಗಳು ಸ್ಮೃತಿಗಳಲ್ಲಿ ಕಟ್ಟಿಕೊಂಡು ಬಂದ ಸಾಹಿತ್ಯದ ಸ್ವರೂಪವೇನು? ಎಂಬುದನ್ನು ನೋಡೋಣ.

ಪಂಪ, ರನ್ನರು ರಚಿಸಿದ ‘ಶಿಷ್ಟ’ ಎಂದು ಪರಿಗಣಿಸಲ್ಪಟ್ಟಿರುವ ಮಹಾಕಾವ್ಯಗಳ ಲಕ್ಷಣಗಳಿಗಿಂತ ಈ ‘ಜನಪದ’ ಕಾವ್ಯಗಳು ವಸ್ತು ಮತ್ತು ಅಭಿವ್ಯಕ್ತಿ ಕ್ರಮಗಳಲ್ಲಿ ಮಾತ್ರ ಭಿನ್ನವಾಗಿವೆ. ಆದರೆ ‘ಶಿಷ್ಟ’ ಕಾವ್ಯಗಳಂತೆ ಈ ಕಾವ್ಯಗಳೂ ಸಹ ತಾವು ಹುಟ್ಟಿದ ನೆಲದ ಪರಂಪರೆಯ ಸಾರವನ್ನು ಹೀರಿಕೊಂಡೇ ಮೈದಾಳಿವೆ. ಈ ನಾಡಿನ ದುಡಿವ ಸಮುದಾಯಗಳ ವಿವೇಕ ಮತ್ತು ತಿಳಿವಳಿಕೆಗಳು ಈ ಕಾವ್ಯಗಳ ಹುಟ್ಟಿನ ಪ್ರೇರಕ ಶಕ್ತಿಗಳಾಗಿವೆ. ‘ಶಿಷ್ಟ’ ಎಂದು ಕರೆಯಲ್ಪಡುವ ಕಾವ್ಯಗಳ ರಚನೆಯ ಹಿಂದೆ ನಾಡಿನ ವಿವೇಕ ಮತ್ತು ಕಾಲದ ಒತ್ತಡಗಳು ಪ್ರಧಾನ ಪಾತ್ರ ವಹಿಸುತ್ತವೆ. ಹೀಗಿದ್ದಾಗ ಮೌಖಿಕ ಪಠ್ಯಗಳು ಲಿಖಿತ ಪಠ್ಯಗಳಿಗಿಂತ ಹೇಗೆ ಭಿನ್ನ? ಯಾವ ಯಾವ ಅಂಶಗಳಲ್ಲಿ ಇವು ಲಿಖಿತ ಪಠ್ಯಗಳಿಂದ ಭಿನ್ನವಾಗಿವೆ? ಜಾನಪದ ತಿಳಿವಳಿಕೆ ಎಂಬುದು ಒಂದು ಸ್ವಯಂಪೂರ್ಣ ಜಗತ್ತಿನ ಸೃಷ್ಟಿಯೇ? ‘ಶಿಷ್ಟ’ ’ಜನಪದ’ (ಪರಿಶಿಷ್ಟ) ಈ ರೀತಿಯ ವರ್ಗೀಕರಣದ ಅಪಾಯಗಳೇನು? ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಕರ್ನಾಟಕದ ಅಥವಾ ಭಾರತದ ಒಟ್ಟು ಪರಿಕಲ್ಪನೆಯಲ್ಲಿ ಜನಸಾಮಾನ್ಯರ ತಿಳಿವಳಿಕೆಯು ಕತ್ತಲಲೋಕದ ಕನವರಿಕೆಯಲ್ಲ. ಈ ಸಾಮಾನ್ಯರು ಹಾಡಿದ ಹಾಡು, ಸೃಷ್ಟಿಸಿದ ಕಲೆಗಳು ಕರ್ನಾಟಕದ ಪರಂಪರೆ ಎಂದು ಏನನ್ನು ಕರೆಯಲಾಗುತ್ತಿದೆಯೋ ಆ ಪರಂಪರೆಯ ವಿಶಿಷ್ಟ ಅಭಿವ್ಯಕ್ತಿಗಳು. ಪಂಡಿತರದು ಮಾತ್ರ ಜ್ಞಾನ, ಅನಕ್ಷರಸ್ಥರದು ಜ್ಞಾನವಲ್ಲ ಎಂದು ವರ್ಗೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಡಿ.ಅರ್. ನಾಗರಾಜ ಪ್ರತಿಪಾದಿಸುತ್ತಾರೆ. ಹಾಗೆಯೇ ಈ ‘ಜನಪದ ಕಾವ್ಯ’, ‘ಶಿಷ್ಟ’ ಕಾವ್ಯ ಎಂಬ ಪರಿಗಣನೆಯೂ ಅಸಂಬದ್ಧ. ಸಾಹಿತ್ಯ ವಿಮರ್ಶೆ ಮತ್ತು ಸಂಸ್ಕೃತಿ ಚಿಂತನೆಯ ಸಂದರ್ಭದಲ್ಲೂ ಈ ವಿಂಗಡಣೆಯನ್ನು ಮಾನ್ಯ ಮಾಡುವುದು ಸರಿಯಲ್ಲ. ಏಕೆಂದರೆ ಇಂಡಿಯಾದ ವಿಷಮ ಸಾಮಾಜಿಕ ಸಂದರ್ಭದಲ್ಲಿ, ಒಂದೆಡೆ ರಾಜನ ಆಶ್ರಯ ಪಡೆದು ವೈಭೋಗಗಳ ನಡುವೆ ಕಾವ್ಯಗಳನ್ನು ರಚಿಸಿದ ಒಂದು ಲಿಖಿತ ಪರಂಪರೆ ಇದೆ. ಶ್ರೇಣೀಕರಣ ಮತ್ತು ಸಾಮಾಜಿಕ ಸ್ಥಾನಮಾನಗಳಿಂದ ವಂಚಿತವಾದ ಮತ್ತು ಉದ್ದೇಶಪೂರ್ವಕವಾಗಿ ವಿದ್ಯಾಭ್ಯಾಸದಿಂದ ದೂರ ಇರಿಸಲ್ಪಟ್ಟ ಸಮುದಾಯಗಳು ಬೀದಿಗಳಲ್ಲಿ ಹಾಡು ಕಟ್ಟಿದ ಮಹಾಕಾವ್ಯಗಳ ಪರಂಪರೆಯೂ ಇಲ್ಲಿದೆ. ಈ ಎರಡೂ ಸೃಜನಶೀಲ ಪರಂಪರೆಗಳು ಒಂದೇ ಕಾಲ ಮತ್ತು ಸಾಮಾಜಿಕ ಸಂದರ್ಭದಲ್ಲಿ ಕ್ರಿಯಾಶೀಲವಾಗಿದ್ದುಕೊಂಡು ಬಂದಿವೆ.

ಆದರೆ ಈ ಎರಡೂ ಪರಂಪರೆಗಳ ಸಂವೇದನೆಗಳಿಗೆ ಕಾರಣವಾಗಿರುವ ವರ್ಗಪ್ರಜ್ಞೆ ಮಾತ್ರ ಭಿನ್ನವಾದದ್ದು. ತಳಸ್ತರದ ಸಮುದಾಯಗಳು ಅನೇಕ ಅವಮಾನ, ಹಿಂಸೆ, ನೋವು, ಅಸಹಾಯಕತೆಗಳಲ್ಲಿ ಬಸವಳಿದು ಹೋದರೂ ತಮ್ಮ ದುಮ್ಮಾನಗಳನ್ನು ಹಾಡು, ಕಥೆ, ನೃತ್ಯಾದಿ ಕಲೆಗಳಲ್ಲಿ ಜೀವಂತವಾಗಿಟ್ಟುಕೊಳ್ಳುತ್ತಲೇ ಬಂದಿವೆ. ಹೀಗೆ ‘ಶಿಷ್ಟ’ ಎಂದು ಭಾವಿಸಿದ ಜಗತ್ತಿನ ಮಹಾಕವಿಗಳು ಕಾವ್ಯಗಳನ್ನು ಅಕ್ಷರಗಳಲ್ಲಿ ಕಟ್ಟಿದ ಒಂದು ಪರಂಪರೆಯೂ ಇಲ್ಲಿದೆ. ಈ ಎರಡೂ ಸೃಜನಶೀಲ ಪ್ರತಿಭೆಗಳಿಗೆ ಕಾರಣವಾದ ಕನ್ನಡ ಸಂಸ್ಕೃತಿಯೊಂದಿದೆ.

ತಳಸ್ತರಗಳ ಸಮುದಾಯಗಳು ಕಟ್ಟಿದ ಮೌಖಿಕ ಪಠ್ಯಗಳು, ಲಿಖಿತ ಪಠ್ಯಗಳು ಪಡೆದ ಸಾಹಿತ್ಯಿಕ ಮಾನ್ಯತೆಯನ್ನು ಏಕೆ ಪಡೆಯಲಾಗಲಿಲ್ಲ? ಪಂಪನ ವಿಕ್ರಮಾರ್ಜುನ ವಿಜಯದಷ್ಟೇ ಶ್ರೇಷ್ಠ ಕಾವ್ಯಗಳನ್ನು ತನ್ನ ನಾಲಿಗೆ ತುದಿಯಲ್ಲಿಟ್ಟುಕೊಂಡ ಬುರ್ರಕಥಾ ಈರಮ್ಮ ಏಕೆ ಮಹಾಕವಿ ಎಂದು ಪರಿಗಣಿಸಲ್ಪಡಲಿಲ್ಲ? ಯಾವ ’ಶೈಕ್ಷಣಿಕ ತರಬೇತಿ ಇಲ್ಲದೇ ಹನ್ನೆರಡು ಮಹಾಕಾವ್ಯಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಬಂದ ಬುರ್ರಕಥಾ ಈರಮ್ಮ, ಹಾಡುತ್ತಲೇ ಬದುಕಿದ ಕಾಡುಗೊಲ್ಲರ ಸಿರಿಯಜ್ಜಿ, ತಮ್ಮ ಹಾಡು ಮತ್ತು ಆಚರಣೆಗಳ
ಮೂಲಕ ನಾಡಿನ ಬಹುದೊಡ್ಡ ಪರಂಪರೆಗಳನ್ನು ಜೀವಂತವಾಗಿಟ್ಟುಕೊಂಡು ಬಂದಿರುವ ನೀಲಗಾರರು, ದೇವರಗುಡ್ಡರು, ಅಲೆಮಾರಿ ಗೊರವರು, ಬುಡಬುಡಿಕೆಯವರು, ಜೋಗಿಗಳು, ಸೂಫಿಗಳು, ತತ್ವಪದಕಾರರೆಲ್ಲ ಬರೀ ‘ಹೆಬ್ಬೆಟ್ಟು ಗಿರಾಕಿ’ಗಳೆ? ಈರಮ್ಮನಲ್ಲಿ ಕನ್ನಡದ ಮಹಾಕಾವ್ಯಗಳ ಸಾಲಿಗೆ ಸೇರುವಂತಹ ಅನೇಕ ಕಾವ್ಯಗಳೇ ಇವೆ.

ಇಂದು ಇತಿಹಾಸಕಾರರೆನ್ನಿಸಿಕೊಂಡು ಶಾಸನ, ತಾಳೆಗರಿ, ಹಸ್ತಪ್ರತಿ ಹಿಡಿದು ಓಡಾಡುವ ತಜ್ಞ ಚರಿತ್ರೆಕಾರರು ಎಂದೂ ಮುಟ್ಟದ, ಅರಿಯದ ಕನ್ನಡ ಸಂಸ್ಕೃತಿಯ ವಿಭಿನ್ನ ಮೌಲ್ಯಗಳನ್ನು ಪ್ರತಿನಿಧಿಸುವ ಚರಿತ್ರೆಯ ಸರಕು ಅವಳ ಬಳಿ ಇದೆ. ಹೀಗಿದ್ದರೂ ಅವಳು ಎಂದೂ ಮಹಾಕವಿ ಎಂದು ಪರಿಗಣಿಸಲ್ಪಡಲಿಲ್ಲ. ಹೀಗೆ ನಮ್ಮ ತಳಸ್ತರದ ಸಮುದಾಯಗಳ ಅಂತಸ್ಥ ಶ್ರೀಮಂತಿಕೆಯನ್ನು ಗೌಣವಾಗಿಸಿದ ರಾಜಕಾರಣ ಇಂದೂ ಸಹ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿದೆ.

ಪಂಪನ ವಿಕ್ರಮಾರ್ಜುನ ವಿಜಯ, ಮಂಟೇಸ್ವಾಮಿ ಕಾವ್ಯಗಳನ್ನು ಅಕ್ಕಪಕ್ಕದಲ್ಲಿಟ್ಟು ನೋಡಿದಾಗ ಮೇಲ್ನೋಟಕ್ಕೆ ಅವು ಭಿನ್ನ ಸಮುದಾಯಗಳ ಅಭಿವ್ಯಕ್ತಿ ಕ್ರಮಗಳಿಂದ ರೂಪುಗೊಂಡವು ಎಂಬುದು ಸ್ಪಷ್ಟವಾಗುತ್ತದೆ. ಆದರೆ ಯಾವುದನ್ನು ನಾವು ಕರ್ನಾಟಕ ಪರಂಪರೆ ಎಂದು ಕರೆಯುತ್ತೇವೋ, ಆ ಪರಂಪರೆಯ ಆಯಾ ಕಾಲಘಟ್ಟದ ಸಾಮಾಜಿಕ ಸಂದರ್ಭಗಳ ಪುನರ್ ಸೃಷ್ಟಿಗಳಂತೆ ಅವು ಜೀವ ಪಡೆದಿರುತ್ತವೆ. ಇದೇ ಕಾರಣಕ್ಕೆ
ಮಂಟೇಸ್ವಾಮಿ ಕಾವ್ಯ ಎಂಬುದು ಅಜ್ಞಾತ ಪಾತಾಳಲೋಕದ ಕೃತಿಯೆಂಬಂತೆ ಕಾಣುವುದಿಲ್ಲ. ಅಲ್ಲದೆ ಕಾವ್ಯದ ಒಳಗಡೆ ಬರುವ ಸನ್ನಿವೇಶಗಳು ಸಹ ಶಿಷ್ಟ, ಪರಿಶಿಷ್ಟ ಎಂಬ ವರ್ಗೀಕರಣವನ್ನು ಹಂತಹಂತವಾಗಿ ನಿರಾಕರಿಸುತ್ತಾ ಹೋಗುತ್ತವೆ. ಇದರ ಜೊತೆಗೆ, ಶಿಷ್ಟ ಎಂದು ಕರೆಯುವ ಮಹಾಕಾವ್ಯಗಳು ಹೇಗೆ ಒಂದು ಕಾಲದಲ್ಲಿ ಸಾಮಾನ್ಯರು ಕಟ್ಟಿದ ಪಠ್ಯಗಳಾಗಿದ್ದವು ಎಂಬುದಕ್ಕೆ ಅನೇಕ ಉದಾಹರಣೆಗಳನ್ನು ನೀಡಬಹುದು.

ರಾಮಾಯಣದ ಮೇಲೆ ವಿಶೇಷ ಅಧ್ಯಯನ ಮಾಡಿರುವ ರೋಮಿಲಾ ಥಾಪರ್ ತಮ್ಮ ‘Exile and Kingdom’ ಕೃತಿಯಲ್ಲಿ ರಾಮಾಯಣದ ಮೂಲವನ್ನು, ಬುದ್ಧ ಪೂರ್ವಕಾಲದ ಜಾನಪದ ಪಠ್ಯಗಳಾದ ಜಾತಕ ಕಥೆಗಳಲ್ಲಿ ಗುರುತಿಸುತ್ತಾರೆ. ಈಗಲೂ ಆದಿವಾಸಿಗಳಲ್ಲಿ ಭಿನ್ನ ರಾಮಾಯಣದ ಪಾಠಗಳಿವೆ. ಭಾರತದುದ್ದಕ್ಕೂ ಜನಪದರಲ್ಲಿ ನೂರಾರು ಬಗೆಯ ರಾಮಾಯಣಗಳಿರುವುದನ್ನು ಅಧ್ಯಯನಕಾರರು ಗುರುತಿಸಿದ್ದಾರೆ. ಹೀಗಾಗಿ ರಾಮಾಯಣ ಹೇಗೆ ಒಂದು ಶುದ್ಧ ಮತ್ತು ಶಿಷ್ಟ ಜಗತ್ತಿನ ಪಠ್ಯವಲ್ಲವೋ, ಮಂಟೇಸ್ವಾಮಿ ಕಾವ್ಯವೂ ಸಹ ಶುದ್ಧ ‘ಜನಪದ’ ಕಾವ್ಯವಲ್ಲ. ಹೀಗಾಗಿ ಕನ್ನಡ ಸಂಸ್ಕೃತಿಯ ಸಂದರ್ಭದಲ್ಲಿ ಅಥವಾ ಸಾಹಿತ್ಯಿಕ ಚರ್ಚೆಯಲ್ಲಿ ‘ಶಿಷ್ಟ’, ‘ಪರಿಶಿಷ್ಟ’ ಮತ್ತು ಶ್ರೇಷ್ಠ, ಕನಿಷ್ಟ ಎಂಬ ಚರ್ಚೆಯು ಶುದ್ಧ ಅವಿವೇಕದ್ದು. ಈ ಬಗೆಯ ಅವಿವೇಕವು ಕರ್ನಾಟಕದ ಅಥವಾ ಭಾರತದ ಸಂದರ್ಭದಲ್ಲಿ ಈ ಪಠ್ಯಗಳು ಭಿನ್ನ ಜಗತ್ತಿನ ಕನವರಿಕೆಗಳೋ ಅಥವಾ ಬೇರೆಯದೇ ಆದ ಒಂದು ಕತ್ತಲಲೋಕದ ವಿವರಗಳೋ ಎಂದು ಬಿಂಬಿಸಿಬಿಡುತ್ತದೆ.

ಸಾಹಿತ್ಯ ಮತ್ತು ಸಂಸ್ಕೃತಿ ಚರ್ಚೆಯ ಕ್ಷೇತ್ರದಲ್ಲಿ ಸಂವೇದನೆಗಳಿಲ್ಲದವರು ಶ್ರೇಷ್ಠ ಕನಿಷ್ಟಗಳ ಶುಷ್ಕ ವಾದಗಳನ್ನು ಜೀವಂತವಾಗಿಡುತ್ತಲೇ ಬಂದಿದ್ದಾರೆ. ನೀವು ಈ ದೇಶದ ನಾಗರಿಕರಾಗಿದ್ದರೂ ಹಲವು ಕಾರಣಗಳಿಗಾಗಿ ನೀವು ‘ಅನ್ಯರು’ ಎಂದು ಇಲ್ಲಿ ಬೆಟ್ಟು ಮಾಡಿ ವರ್ಗೀಕರಿಸಲಾಗುತ್ತಿದೆ. ಇಂತವರಿಗೆ ನಾಡನ್ನು ಕಟ್ಟಿದ, ಹಿಂಸೆ ಅವಮಾನಗಳನ್ನು ಅವುಡುಗಚ್ಚಿ ಸಹಿಸಿಕೊಂಡ ಶ್ರೇಷ್ಠ ಜನರು ‘ಹೆಬ್ಬೆಟ್ಟು ಗಿರಾಕಿ’ಗಳಂತೆ ಕಾಣುತ್ತಾರೆ.

ಡಾ. ಎ ಎಸ್ ಪ್ರಭಾಕರ

ಡಾ. ಎ ಎಸ್ ಪ್ರಭಾಕರ
ಹಂಪಿ ವಿವಿಯ ಬುಡಕಟ್ಟು ವಿಭಾಗದ ಅಧ್ಯಾಪಕರಾದ ಡಾ.ಎ.ಎಸ್.ಪ್ರಭಾಕರ, ಮೂಲತಃ ಹರಪನಹಳ್ಳಿಯವರು. ಕರ್ನಾಟಕದ ಜನಪರ ಚಳವಳಿಗಳ ಸಂಗಾತಿಯೂ ಆಗಿರುವ ಅವರ ಹೊಸ ಪುಸ್ತಕ ‘ಚಹರೆಗಳೆಂದರೆ ಗಾಯಗಳೂ ಹೌದು’ ಬಿಡುಗಡೆಯಾಗಿದೆ


ಇದನ್ನೂ ಓದಿ: ಕಸಾಪ ನೂತನ ಅಧ್ಯಕ್ಷರಾದ ಮಹೇಶ್‌ ಜೋಶಿ ಬಿಜೆಪಿ ಬೆಂಬಲಿತರು ಎಂಬುದಕ್ಕೆ ಇಲ್ಲಿದೆ ಪುರಾವೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...