ಭಾರತದ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲರಾದವರು ವಿದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಉಕ್ರೇನ್-ರಷ್ಯಾ ಯುದ್ಧದ ಹಿನ್ನಲೆಯಲ್ಲಿ ಹೇಳಿಕೆ ನೀಡಿದ್ದ ಒಕ್ಕೂಟ ಸರ್ಕಾರದ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಿರುಗೇಟು ನೀಡಿದ್ದಾರೆ.
ಜೋಶಿ ಅವರ ಹೇಳಿಕೆಯು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. “ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಬಯಸುತ್ತಾರೆ ಮತ್ತು ಅಂತಹ ಟೀಕೆಗಳನ್ನು ಮಾಡುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.
ದುಬಾರಿ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳುತ್ತಿದ್ದಾರೆ. ಮೃತ ನವೀನ್ ಪಿಯುಸಿಯಲ್ಲಿ 97% ಗಳಿಸಿದ್ದರೂ ಮೆಡಿಕಲ್ ಸೀಟ್ ದೊರೆತಿರಲಿಲ್ಲ. ಪ್ರಹ್ಲಾದ್ ಜೋಷಿ ಹೇಳಿಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳನ್ನು ಅವಮಾನಿಸಿದಂತೆ. ಭಾರತೀಯ ವೈದ್ಯಕೀಯ ಮಂಡಳಿ ಉಕ್ರೇನಿನ ಕಾಲೇಜುಗಳಿಗೆ ಮಾನ್ಯತೆ ನೀಡಿರುವುದು ನಿಮಗೆ ತಿಳಿದಿಲ್ಲವೇ?
— DK Shivakumar (@DKShivakumar) March 2, 2022
ಸಚಿವರ ಹೇಳಿಕೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‌ಗೆ ಹೋಗಿದ್ದ ನವೀನ್ ಜ್ಞಾನಗೌಡರ್ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದರು ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ನವೀನ್ ಮಂಗಳವಾರ ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಹತರಾಗಿದ್ದರು. ಅದೇ ದಿನ, ಸಚಿವ ಜೋಶಿ ಅವರು ವಿದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವ 90% ವಿದ್ಯಾರ್ಥಿಗಳು ಭಾರತದಲ್ಲಿ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿಫಲರಾದವರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು, ಜೋಶಿ ಅವರ ಹೇಳಿಕೆಯಿಂದ ಆಶ್ಚರ್ಯವಾಯಿತು. ನವೀನ್ ಸಾವು ನೀಟ್‌ನ ಉದ್ದೇಶವನ್ನೇ ಪ್ರಶ್ನಿಸಿದೆ ಎಂದು ಹೇಳಿದ್ದಾರೆ. “ನೀಟ್ ಮಧ್ಯಮ ವರ್ಗ ಮತ್ತು ಬಡವರ ವೈದ್ಯಕೀಯ ಓದುವ ಕನಸುಗಳನ್ನು ಭಗ್ನಗೊಳಿಸುತ್ತಿದೆ. ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮಾತ್ರ ಮೀಸಲಿಡಲಾಗುತ್ತಿದೆ, ಇಲ್ಲದವರಿಗೆ ನಿರಾಕರಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.


