Homeಕರ್ನಾಟಕಎಟಿ&ಎಸ್ ಕಾರ್ಮಿಕರ ಧರಣಿಗೆ 365 ದಿನಗಳು ತುಂಬಿದ ಸಂದರ್ಭದಲ್ಲಿ: ದೇವನೂರ ಮಹಾದೇವ

ಎಟಿ&ಎಸ್ ಕಾರ್ಮಿಕರ ಧರಣಿಗೆ 365 ದಿನಗಳು ತುಂಬಿದ ಸಂದರ್ಭದಲ್ಲಿ: ದೇವನೂರ ಮಹಾದೇವ

ಎಟಿ&ಎಸ್ ಸಮಸ್ಯೆ ತಕ್ಷಣವೇ ಬಗೆಹರಿಯದಿದ್ದರೆ, ಶಾಸಕ ಹರ್ಷವರ್ಧನ್ ಅವರು ಧರಣಿ ನಿರತ ನೌಕರರ ನಡುವೆ ತಾವೂ ಭಾಗಿಗಳಾಗಿ ಧರಣಿ ಮಾಡುವ ಮೂಲಕ ನಿಜವಾದ ಜನಪ್ರತಿನಿಧಿ ಆಗಬೇಕಿದೆ.

- Advertisement -
- Advertisement -

ನಮ್ಮ ನಂಜನಗೂಡಿನಲ್ಲಿರುವ, ವಿದೇಶಿ ಮೂಲದ ಬಹುರಾಷ್ಟ್ರೀಯ ಕಂಪನಿಯಾದ ಎಟಿ&ಎಸ್ ಕಂಪನಿಗೆ ಸೇರಿದ ಟ್ರೈನಿ ನೌಕರರು ಹಾಗೂ ಕಾರ್ಮಿಕವರ್ಗವು ಎರಡೂ ಕರೋನಾ ಅಲೆಗಳನ್ನು ದಾಟಿಕೊಂಡು ನಡೆಸುತ್ತಿರುವ ಈ ಧರಣಿ ಚಳುವಳಿಗೆ ಇಂದಿಗೆ ಒಂದು ವರ್ಷ ತುಂಬಿತು. ಇದು ದುಃಖದ ದಿನ. ಕಳೆದ ಒಂದು ವರ್ಷದ ಕಾಲದ ಈ ಕಾರ್ಮಿಕರ ಬದುಕನ್ನು ಹೇಗೆ ವಿವರಿಸಬೇಕು? ಅವರ ಬದುಕು ಒಂದು ಯಾತನಾ ಶಿಬಿರದಂತೆಯೇ ಕಾಣಿಸುತ್ತದೆ. ಈ ಯಾತನಾ ಶಿಬಿರ ಯಾಕಾಗಿ? ನೌಕರರು ಕೇಳುತ್ತಿರುವುದಾದರೂ ಏನು?

ಅವರು ಕೇಳುತ್ತಿರುವುದು ಇಷ್ಟೆ : “ನಾವು ಟ್ರೈನಿಗಳು ಕಳೆದ ಎಂಟತ್ತು ವರ್ಷಗಳಿಂದಲೂ ತಿಂಗಳಿಗೆ ಹೆಚ್ಚೆಂದರೆ ಹತ್ತು ಸಾವಿರ ರೂಪಾಯಿಗಳಿಗೆ ಕೆಲಸ ಮಾಡುತ್ತಾ ಬಂದಿದ್ದೇವೆ. ನಾವು ಕಂಪನಿಗೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ 2 ವರ್ಷಗಳು ಟ್ರೈನಿ ಅವಧಿ ಎಂದಿತ್ತು. ಆ ಅವಧಿ ಮುಗಿದು ಎಷ್ಟೋ ವರ್ಷಗಳಾಗಿದ್ದರೂ ನಮ್ಮನ್ನು ಖಾಯಂ ಮಾಡಿಲ್ಲ. ಈಗಲಾದರೂ ನಮ್ಮ ಕೆಲಸವನ್ನು ಪರ್ಮನೆಂಟ್ ಮಾಡಿ ಹಾಗೂ ನಮ್ಮ ಸಂಬಳವನ್ನು ಹೆಚ್ಚು ಮಾಡಿ” – ಇದಿಷ್ಟೆ ಈ ನೌಕರರು ಕೇಳುತ್ತಿರುವುದು. ಇದಿಷ್ಟೆ. ಇದಿಷ್ಟನ್ನು ಕೇಳಿದ್ದಕ್ಕಾಗಿ ಈ ವಿದೇಶಿ ಮೂಲದ ಎಟಿ&ಎಸ್ ಕಂಪನಿಯು ನ್ಯಾಯ ಕೇಳಿದ ನೌಕರರನ್ನು ಕೆಲಸದಿಂದಲೇ ವಜಾ ಮಾಡಿಬಿಟ್ಟಿತು. ಈ ಅನ್ಯಾಯವನ್ನು ಪ್ರಶ್ನಿಸಿದ್ದಕ್ಕಾಗಿ, ಪ್ರಶ್ನಿಸಿದ ಕಾರ್ಮಿಕ ನಾಯಕನನ್ನೇ ವಜಾ ಮಾಡಿಬಿಟ್ಟಿತು. ವಜಾ ಮಾಡಿದ್ದಕ್ಕೆ “ಆ ಕಾರ್ಮಿಕ ನಾಯಕ ಒಂದು ದಿನ ಕೆಲಸಕ್ಕೆ ಗೈರು ಹಾಜರಾಗಿದ್ದ” ಎಂಬ ಚಿಲ್ಲರೆ ಕಾರಣ ಕೊಟ್ಟಿತು! ಇದು ಕಂಪನಿ ಆಡಳಿತ ಮಂಡಳಿಯ ಚಿಲ್ಲರೆ ಬುದ್ದಿಯ ಕೆಲಸ. ಇದಿರಲಿ, ತಮ್ಮ ಕಾರ್ಮಿಕ ನಾಯಕನನ್ನು ವಜಾ ಮಾಡಿದ್ದಕ್ಕೆ ನೊಂದ ಕಾರ್ಮಿಕರು ಸಾಂಕೇತಿಕ ಪ್ರತಿರೋಧವಾಗಿ “ಮೂರು ದಿನಗಳ ಕಾಲ ಕಂಪನಿ ಕಾರ್ಖಾನೆಯ ಕ್ಯಾಂಟೀನಿನಲ್ಲಿ ಊಟ ಮಾಡಲ್ಲ” ಎಂದು ಆಡಳಿತ ಮಂಡಳಿಗೆ ಪತ್ರ ಬರೆದದ್ದಕ್ಕೆ ಆ ಕಾರ್ಮಿಕರನ್ನೂ ವಜಾ ಮಾಡಲಾಯ್ತು. ಏನಿದು? ಉಸಿರೆತ್ತಿದರೆ ಉಸಿರನ್ನೇ ತೆಗೆಯುವ ಕೆಲಸ. ಹೀಗೆ 75 ಜನ ಕಾರ್ಮಿಕರನ್ನು ವಜಾ ಮಾಡಿದ್ದಾರೆ. ವಜಾದ ಮೇಲೆ ವಜಾ. ನಾವು ನೋಡಿಕೊಂಡು ಪ್ರೇಕ್ಷಕರಾಗಿದ್ದೇವೆ.

ಇದರ ನಡುವೆ ಒಂದು ತಮಾಷೆ. ಆಥವಾ ಕ್ರೂರ ವ್ಯಂಗ್ಯ. ಈ ವಿದೇಶಿ ಮೂಲದ ಕಂಪನಿಗೆ ನಂದಕಿಶೋರ್ ರವರು ಮಾನವ ಸಂಪನ್ಮೂಲ ಅಧಿಕಾರಿ. ಇವರು ಇಂಡಸ್ಟ್ರಿಯಲ್ ಟ್ರಿಬ್ಯೂನಲ್ ಗೆ ಲಿಖಿತ ಹೇಳಿಕೆ ನೀಡುತ್ತಾ ತಮ್ಮ ಕಂಪನಿಯು ಟ್ರೈನಿ ನೌಕರರಿಗೆ ತಿಂಗಳಿಗೆ ಹೆಚ್ಚೆಂದರೆ ಹತ್ತು ಸಾವಿರ ಕೊಡುವುದನ್ನೆ “ಕಂಪನಿಯು ಎಲ್ಲರಿಗಿಂತಲೂ Better, ಅಂದರೆ ಉತ್ತಮ ಸಂಬಳವನ್ನು ನೀಡುತ್ತಿದೆ” ಎಂದು ಹೇಳಿದ್ದಾರೆ. ನಾನು ಕುತೂಹಲಕ್ಕೆ ಅವರ ಸಂಬಳವನ್ನು ವಿಚಾರಿಸಿದೆ. ಶ್ರೀ ನಂದಕಿಶೋರ್ ಅವರು ತಿಂಗಳಿಗೆ ಅಧಿಕೃತವಾಗಿ ಎರಡೂವರೆ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ! ಇವರಿಗೆ ಅತ್ಮಸಾಕ್ಷಿ ಇದೆಯೇ? ಅವರ ಅತ್ಮಸಾಕ್ಷಿ ಸತ್ತಿದೆ ಎಂದುಕೊಳ್ಳೊಣ. ಆದರೆ ಅವರ ಮಕ್ಕಳು ಸಂವೇದನಾಶೀಲರಾಗಿದ್ದಲ್ಲಿ “ಈ ನಮ್ಮ ಅಪ್ಪ ತಾನು ಮಾತ್ರ ತಿಂಗಳಿಗೆ ಎರಡೂವರೆ ಲಕ್ಷ ಸಂಬಳ ತೆಗೆದುಕೊಳ್ಳುತ್ತಾ, ತನ್ನ ಕಂಪನಿಯ ಕಾರ್ಮಿಕರಿಗೆ ತಿಂಗಳಿಗೆ ಕೇವಲ ಹತ್ತು ಸಾವಿರ ಕೊಟ್ಟು ಅದನ್ನು Better ಸಂಬಳ ಅನ್ನುತ್ತಿದ್ದಾರಲ್ಲ! ಇವರಿಗೆ ಏನಾಗಿದೆ?” ಎಂಬ ಪ್ರಶ್ನೆ ಅವರ ಮಕ್ಕಳಲ್ಲಿ ಬಂದರೆ, ಶ್ರೀ ನಂದಕಿಶೋರ್ ಅವರ ಮಕ್ಕಳ ಕಣ್ಣಲ್ಲಿ ಕುಬ್ಜರಾಗುವುದಿಲ್ಲವೇ?.

ಇದನ್ನೆಲ್ಲಾ ಹೇಗೆ ಆರ್ಥಮಾಡಿಕೊಳ್ಳಬೇಕೋ ನನಗೆ ಅರ್ಥವಾಗುತ್ತಿಲ್ಲ. ಒಟ್ಟಿನಲ್ಲಿ ಎಟಿ&ಎಸ್ ಆಡಳಿತ ಮಂಡಳಿಯ ನಡಾವಳಿ ನೋಡಿದರೆ ಇದು ಮನುಷ್ಯರು ಮಾಡುವ ಕೆಲಸ ಅಲ್ಲ ಅನಿಸುತ್ತದೆ. ಅಥವಾ ಆ ಆಡಳಿತ ಮಂಡಳಿಯಲ್ಲಿ ‘ಮನುಷ್ಯರು’ ಇದ್ದರೂ ಅವರೊಳಗೆ ‘ಮನುಷ್ಯತ್ವ’ ಇಲ್ಲ ಅನ್ನಿಸಿಬಿಡುತ್ತದೆ.
ಅಥವಾ ಹೀಗೂ ಇರಬಹುದೇ? “BECAUSE WE SAY SO” ಅಂತ ಒಂದು ಪುಸ್ತಕ ಇದೆ. ‘ಯಾಕೆಂದರೆ ನಾವು ಹೇಳ್ತಾ ಇದ್ದೇವೆ, ಅಷ್ಟೇ’ ಅಂತ ಆದರ ಅರ್ಥ. ಇದನ್ನು ಬರೆದವರು ನೋಮ್ ಚೋಮ್‌ಸ್ಕಿ. ಜಗತ್ತಿನ ಮಹಾನ್ ಚಿಂತಕ. ಇವರು ಜಗತ್ತಿಗೇ ಸೇರಿದವರು. ನೋಮ್ ಚೋಮ್‌ಸ್ಕಿಯವರು ಹೇಳಿದ ಆ ಮಾತು, ಬಂಡವಾಳಶಾಹಿ ಕಾಂಚಾಣದ ಧಿಮಾಕಿನ ಗರ್ವದ ಬಗ್ಗೆ. ಇಲ್ಲೂ ನಂಜನಗೂಡಿನ ಎಟಿ&ಎಸ್ ಕಂಪನಿ ಆಡಳಿತ ಮಂಡಳಿಯೂ ಅದೇ ಕಾಂಚಾಣದ ಗರ್ವದ ಧಿಮಾಕು ತೋರಿಸಿದೆ. ಅವರು ಹೇಳಿದ್ದೇ ಮಾತು. ಅದರಲ್ಲಿ ಸತ್ಯ ನ್ಯಾಯ ಇರಬೇಕೆಂದಿಲ್ಲ. ಅವರು ಹೇಳಿದ್ದೇ ಕಾನೂನು! ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲವೆ? ಸರ್ಕಾರದ ಕಾರ್ಮಿಕ ಇಲಾಖೆ, ಇಂಡಸ್ಟ್ರಿಯಲ್ ಟ್ರಿಬ್ಯೂನಲ್ ಹಾಗೂ ಕಾರ್ಮಿಕ ನ್ಯಾಯಾಲಯ ಏನು ಮಾಡುತ್ತಿವೆ?
ಇವುಗಳದೂ ಕೂಡಾ ಒಂದು ದಾರುಣ ಕಥೆಯೇ. ಕೆಲಸ ಕಳೆದುಕೊಂಡ ಕಾರ್ಮಿಕರ ಬದುಕು ಪ್ರೈ ಆಗುತ್ತ ಬೇಯುತ್ತಿದ್ದರೂ, ಕಳೆದ ಮೂರು ವರ್ಷಗಳಿಂದಲೂ ಕಾರ್ಮಿಕ ಇಲಾಖೆ, ಇಂಡಸ್ಟ್ರಿಯಲ್ ಟ್ರಿಬ್ಯೂನಲ್, ಕಾರ್ಮಿಕ ನ್ಯಾಯಾಲಯಗಳು ಈ ಸಮಸ್ಯೆಯ ವಾದವಿವಾದವನ್ನು ಸವಿಯುತ್ತಾ ಕಾಲ ಸವೆಸುತ್ತಿವೆ. ಹೀಗೆ ಇನ್ನೊಂದಿಷ್ಟು ದಿನ ತಳ್ಳಿಬಿಟ್ಟರೆ ಆ ಕೆಲಸ ಕಳೆದುಕೊಂಡ ನೌಕರರ ಸೇವಾವಧಿಯೇ ಮುಗಿದು ಬಿಡುವುದೇನೊ? ನ್ಯಾಯವು ಎಲ್ಲಿದೆ?

ನೋಮ್ ಚಾಮ್ಸ್ಕಿ

ಆಯ್ತು, ಈ ಕಾಯ್ದೆಗಳನ್ನು ರೂಪಿಸುವವರಾದರೂ ಯಾರು? ಶಾಸನಗಳನ್ನು ರೂಪಿಸುವುದಕ್ಕಾಗಿಯೇ ರಾಜ್ಯದಲ್ಲಿ ಶಾಸನಸಭೆ ಅಂತ ಒಂದಿದೆ. ಶಾಸನಗಳನ್ನು ರೂಪಿಸುವುದಕ್ಕಾಗೇ ಶಾಸನಸಭೆ ಅಂತ ಇರೋದು. ಮತದಾರರ ಮೂಲಕ ಆಯ್ಕೆಯಾಗಿ ಶಾಸನಸಭೆಗೆ ಹೋಗುವ ಇಂದಿನ ಬಹುಸಂಖ್ಯಾತ ಶಾಸಕರಿಗೆ, ತಾವು ಶಾಸನ ಮಾಡುವುದಕ್ಕಾಗಿ ಆಯ್ಕೆಯಾಗಿ ಶಾಸಕ ಆಗಿರುವುದು ಎಂಬ ಅರಿವು ಇದ್ದಂತಿಲ್ಲ. ಇಂಥವರು ಆಯ್ಕೆಯಾದ ಮೇಲೆ ತಾವು ಜನಪ್ರತಿನಿಧಿಗಳು ಎಂದು ಅಂದುಕೊಂಡಂತೂ ಇಲ್ಲ. ಅವರಿಗೆ ಪ್ರಜ್ಞೆ ಇದ್ದಿದ್ದರೆ, ಎಲ್ಲಾದರೂ ಎರಡು ವರ್ಷಗಳ ಟ್ರೈನಿ ಕಾಲಾವಧಿ ಮುಗಿದ ಮೇಲೆ ಅಲ್ಲೆ ಕೆಲಸವನ್ನು ಮುಂದುವರಿಸಿದರೆ ಅದು ‘ಖಾಯಂ’ ಎಂದೇ ಆಗುತ್ತದೆ ಎಂಬ ಕಾಯ್ದೆ ರಚಿಸಲ್ಪಡುತ್ತಿತ್ತು. ಆದ್ದರಿಂದ, ದುರಂತ ಇರುವುದು ಇಲ್ಲೇ.

ಈಗ ನಂಜನಗೂಡಿಗೆ ಬಂದರೆ, ಇಲ್ಲಿ ನಡೆಯುತ್ತಿರುವ ಎಟಿ&ಎಸ್ ಕಾರ್ಮಿಕರ 365 ದಿನಗಳ ಬವಣೆ ನೋಡಿಕೊಂಡು ಈ ಕ್ಷೇತ್ರದ ಶಾಸಕರು ಇದ್ದಾರೋ ಇಲ್ಲವೋ ಅನ್ನುವಂತೆ ಇದ್ದಾರೆ. ನಿಗೂಢವಾದ ಮೌನ ವಹಿಸಿದ್ದಾರೆ. ಇಲ್ಲಿನ ಶಾಸಕರು ತಮ್ಮ ಮೌನವನ್ನು ಇನ್ನೂ ಮುಂದುವರಿಸಿದರೆ, ದಿನಕಳೆದಂತೆ ಅದಕ್ಕೆ ‘ನಾನಾರ್ಥ’ ಹುಟ್ಟಿಕೊಳ್ಳುತ್ತದೆ. ಇದು ನನಗೆ ಹೆಚ್ಚು ನೋವು ತಂದಿದೆ. ಯಾಕೆಂದರೆ, ಶಾಸಕ ಹರ್ಷವರ್ಧನ್ ಅವರು ಕರ್ನಾಟಕದ ಧೀಮಂತ ನಾಯಕ ಬಸವಲಿಂಗಪ್ಪನವರ ಮೊಮ್ಮಗ. ಹಾಗೇ ದಿಟ್ಟತನಕ್ಕೆ ಹೆಸರಾದ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಳಿಯ. ಪ್ರಸಾದ್ ರವರು ಎಟಿ&ಎಸ್ ಕಂಪನಿಯ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ ಕೂಡ. ಆದರೂ ಅವರ ಮಾತಿಗೆ ಬೆಲೆ ಸಿಕ್ಕಿಲ್ಲ. ಬಸವಲಿಂಗಪ್ಪ, ಶ್ರೀನಿವಾಸ ಪ್ರಸಾದ್‌ರವರ ಗೌರವ ಉಳಿಸುವುದು ಶ್ರೀ ಹರ್ಷವರ್ಧನ್ ಅವರ ಕರ್ತವ್ಯ ಮತ್ತು ಹೊಣೆಗಾರಿಕೆ ಎಂದು ಅವರಿಗೆ ನೆನಪಿಸುತ್ತಿರುವೆ, ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ. ಎಟಿ&ಎಸ್ ಸಮಸ್ಯೆ ತಕ್ಷಣವೇ ಬಗೆಹರಿಯದಿದ್ದರೆ, ಶಾಸಕ ಹರ್ಷವರ್ಧನ್ ಅವರು ಧರಣಿ ನಿರತ ನೌಕರರ ನಡುವೆ ತಾವೂ ಭಾಗಿಗಳಾಗಿ ಧರಣಿ ಮಾಡುವ ಮೂಲಕ ನಿಜವಾದ ಜನಪ್ರತಿನಿಧಿ ಆಗಬೇಕಿದೆ. ಇವರು ಇನ್ನೂ ಯುವಕರಾಗಿರುವುದರಿಂದ ಇದನ್ನು ಅವರಿಂದ ನಿರೀಕ್ಷಿಸುತ್ತೇನೆ.

ಬಿ ಹರ್ಷವರ್ಧನ್

ಇಲ್ಲದಿದ್ದರೆ, ನಾಳೆ ಏನಾದರೂ ಜನತಾ ನ್ಯಾಯಾಲಯ ಏರ್ಪಟ್ಟು ಎಟಿ&ಎಸ್ ಕಾರ್ಮಿಕರ ಸಮಸ್ಯೆ ವಿಚಾರಣೆ ನಡೆದರೆ, ಅಲ್ಲಿ, ಆ ಜನತಾ ನ್ಯಾಯಾಲಯದಲ್ಲಿ ಮೊದಲನೇ ಅಪರಾಧಿ ಸ್ಥಾನದಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ನಂದಕಿಶೋರ್ ಹಾಗೂ ಎರಡನೇ ಸ್ಥಾನದಲ್ಲಿ ಈ ಕ್ಷೇತ್ರದ ಶಾಸಕ ಶ್ರೀ ಹರ್ಷವರ್ಧನ್ ನಿಲ್ಲುತ್ತಾರೆ ಎಂದೇ ನನಗೆ ಅನ್ನಿಸುತ್ತದೆ. ಇದಾಗದಿರಲಿ ಎಂದು ಆಶಿಸುವೆ.

ಇದನ್ನೂ ಓದಿ: ಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು – ದೇವನೂರು ಮಹಾದೇವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....