Homeಮುಖಪುಟಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು - ದೇವನೂರು ಮಹಾದೇವ

ಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು – ದೇವನೂರು ಮಹಾದೇವ

ಇಂದು ಮನುಷ್ಯರು ಧರ್ಮ-ದೇವರಿಗೆ ತಮ್ಮ ರೋಗ ಅಂಟಿಸುತ್ತಿದ್ದಾರೆ. ಇದಕ್ಕೆ ಧರ್ಮಜಾಢ್ಯ ಅಂತಾರೆ. ವಿದ್ಯಾರ್ಥಿಗಳು ಇನ್ನೂ ಎಳೆಯರು, ಇನ್ನೂ ಯಾವ ರಾಗ-ದ್ವೇಷ ಇಲ್ಲದವರು. ಅವರು ಈ ಧರ್ಮಜಾಢ್ಯದಿಂದ ಬಿಡುಗಡೆ ಪಡೆಯಲಿ.

- Advertisement -
- Advertisement -

(ಹಿಜಾಬ್ ಮತ್ತು ಕೇಸರಿ ಶಾಲಿನ ಹೆಸರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತಲೆದೋರಿರುವ ವಿವಾದ ಕುರಿತಂತೆ ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಅತ್ಯಂತ ಕಳಕಳಿಯಿಂದ ತಮ್ಮ ಅಭಿಪ್ರಾಯಗಳನ್ನು ಟಿವಿ-9 ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಸಹಜ ಹಾಗೂ ಚಿಂತನಾ ಅಭಿಪ್ರಾಯಗಳನ್ನು ನಮ್ಮ ಓದುಗರಿಗೆ ನೀಡುತ್ತಿದ್ದೇವೆ. – ಸಂಪಾದಕ)

ಈ ಬೆಳವಣಿಗೆ ತುಂಬಾ, ಅಂದರೆ ತುಂಬಾನೇ ದುಃಖವಾಗುತ್ತದೆ. ಈ ಹಿಂದೆ ಏನಾಗುತ್ತಿತ್ತು? ಹಿಜಾಬ್ ಅನ್ನು ಅಲ್ಲೊಬ್ಬರು ಇಲ್ಲೊಬ್ಬರು ಧರಿಸುತ್ತಿದ್ದರು. ಅದು ಸಹಜವಾಗಿ ನಡೆದುಕೊಂಡು ಹೋಗುತ್ತಿತ್ತು. ಎದ್ದು ಕಾಣಿಸುತ್ತಿರಲಿಲ್ಲ. ಯಾವಾಗ ಹಾಕಿಕೊಂಡು ಬರಬಾರದೆಂದು ನಿಷೇಧ ಹೇರಲಾಯಿತೋ ಆಗ ಪ್ರತಿರೋಧ ಆರಂಭವಾಯಿತು. ಜೊತೆಗೆ ಹಿಜಾಬ್ ಧರಿಸುವುದು ಹೆಚ್ಚೇ ಆಯಿತು.

ಈ ಹೆಚ್ಚಾಗುವುದರ ಹಿಂದೆ ಅಲ್ಪಸ್ವಲ್ಪ ಪಟ್ಟಭದ್ರರ ಹಿತಾಸಕ್ತಿ ಇದ್ದೇ ಇದೆ ಎನ್ನಿಸುತ್ತೆ. ಆದರೆ ಯಾವಾಗ ಕೇಸರಿ ಬಣ್ಣವು ಹಿಜಾಬ್ ವಿರುದ್ಧ ಪ್ರತಿಕ್ರಿಯೆಯಾಗಿ ಬಂತೋ, ಆ ಕೇಸರಿ ಬಣ್ಣದ ಅದ್ಧೂರಿತನ ನೋಡಿದರೆ, ಆ ಕೇಸರಿ ಪೇಟ ನೋಡಿದರೆ, ಅದರ ವ್ಯಾಪಕತೆ ನೋಡಿದರೆ, ಇದೆಲ್ಲಾ ವಿದ್ಯಾರ್ಥಿಗಳದ್ದಲ್ಲಾ ಎಂದು ಹೆಚ್ಚು ಸ್ಪಷ್ಟವಾಗುತ್ತೆ. ಹಣ ಉಳ್ಳವರು, ಪಟ್ಟಭದ್ರ ಹಿತಾಸಕ್ತಿಗಳು ಚೆಲ್ಲಾಟ ನಡೆಸುತ್ತಿದ್ದಾರೆ ಎನ್ನಿಸುತ್ತದೆ.

ಇದರ ಜೊತೆಗೆ ರಾಜಕಾರಣಿಗಳದ್ದೂ ಕೈವಾಡ ಇದೆ. ಏಕೆಂದರೆ ಈ ಗಲಾಟೆ ಉಲ್ಬಣ ಮಾಡಿಕೊಂಡು ತಮ್ಮ ಸೋಲು-ಗೆಲುವನ್ನು ಇದರಲ್ಲಿ ನಿರ್ಧರಿಸಿಕೊಳ್ಳಬೇಕು. ಚಾನ್ಸ್ ಇದು. ಬಳಸಿಕೊಳ್ಳಬೇಕೆನ್ನುವ ದುರಾಸೆ ಅಥವಾ ಕೆಟ್ಟ ದುಷ್ಟತನ ಇದರಲ್ಲಿ ಕಂಡು ಬರುತ್ತಿದೆ. ಒಟ್ಟಿನಲ್ಲಿ ಇದರಲ್ಲಿ ಬಡಿದಾಡುತ್ತಿರುವವರು ಯಾರು ಎಂದು ನೋಡಿದರೆ, ಎರಡೂ ಕಡೆಯ ವಿದ್ಯಾರ್ಥಿಗಳೇ. ಅವರೇ ಬಲಿಪಶುಗಳು.

ಇದೇ ರೀತಿಯಾದರೆ, ಇದು ಎಲ್ಲಿಗೆ ಕರೆದೊಯ್ಯುತ್ತದೆ ಎಂದರೆ, ನಾಳೆ ಮಹಿಳೆಯರು ಪಿಂಕ್ ಗುಲಾಬಿ ಬಣ್ಣದ ವಸ್ತ್ರ ಧರಿಸಿ ಬರಬಹುದು. ಹಾಗೆಯೇ ದಲಿತರು ನೀಲಿ, ರೈತರು ಹಸಿರು ಟವೆಲ್, ಮತ್ತೆ ದುಡಿಯುವ ವರ್ಗ ಕೆಂಪು, ದ್ರಾವಿಡರು ಕಪ್ಪು, ಹಿಂದುಳಿದ ವರ್ಗ ಹಳದಿ, ಆಮೇಲೆ ಅದರೊಳಗಡೆನೇ ಮದಕರಿ ಬಣ್ಣವಾಗಿ ಮೆರೂನ್… ಹೀಗೆ ಬಣ್ಣ ಬಣ್ಣಗಳಲ್ಲಿ ಬರಲು ಈ ಗಲಾಟೆ ಉಲ್ಬಣಗೊಂಡರೆ ಪ್ರೇರಣೆಯಾಗಲಿದೆ.
ಸುಸ್ತು ಆದ ಮೇಲೆ ಶಾಂತಿ ಬೇಕೆನ್ನುವ ಬಿಳಿಬಣ್ಣ ಕೂಡ ಬರುತ್ತೆ.

ಈಗ ನಾವು ಯೋಚಿಸಬೇಕಿರುವುದು ಇದೆಲ್ಲಾ ನಮಗೆ ಬೇಕಿತ್ತಾ? ಎನ್ನುವುದಾಗಿದೆ. ಈಗ ತಾಯಂದಿರು, ಎಲ್ಲಾ ಜಾತಿ-ಧರ್ಮದ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ತಮ್ಮ ಮಕ್ಕಳು ಪಟ್ಟಭದ್ರ ಹಿತಾಸಕ್ತಿಗೆ ಮತ್ತು ರಾಜಕಾರಣಿಗಳ ಚೆಲ್ಲಾಟಕ್ಕೆ ಈ ತರ ದಾಳವಾಗುತ್ತಿದ್ದಾರೆ ಎಂದರೆ, ಅವರ ಆತಂಕ ಹೆಚ್ಚಾಗುವುದಿಲ್ಲವೇ? ಇದು ಬಹುಸಂಖ್ಯಾತ ಮಹಿಳೆಯರು, ತಾಯಂದಿರಲ್ಲಿ ಆತಂಕ ಹೆಚ್ಚು ಮಾಡಿದೆ ಎಂದು ನನಗೆ ಅನ್ನಿಸುತ್ತೆ. ಇದೇ ರೀತಿ ಉಲ್ಬಣವಾದರೆ ಒಂದಲ್ಲಾ ಒಂದು ದಿನ ಈ ತಾಯಂದಿರ ಆತಂಕವು ಆಕ್ರೋಶ ಆಗಬಹುದು. ಅದು ಸಹಜ. ನೆನಪಿರಲಿ.

ನಾನು ವಿದ್ಯಾರ್ಥಿಗಳಲ್ಲಿ ಗಮನಕ್ಕೆ ತರುವುದು ಒಂದೇ ವಿಚಾರ. ಈ ರೀತಿಯ ಭಾವನಾತ್ಮಕ ವಿಚಾರಗಳನ್ನು ಉಂಡು, ತಿಂದು, ಕುಣಿದು ಕುಪ್ಪಳಿಸುತ್ತ ಗದ್ದಲ ಮಾಡುತ್ತಿದ್ದೀರಲ್ಲಾ ನೀವು, ನಿಮಗೆ ನನ್ನ ಪ್ರಶ್ನೆ ಇಷ್ಟು: ನಾಳೆ ಬದುಕಿ ಬಾಳಬೇಕಾದ ನಿಮಗೆ ಈ ಭಾವನಾತ್ಮಕ ವಿಷಯಗಳು, ಈ ಭ್ರಮೆಗಳು ನಿಮ್ಮ ಭವಿಷ್ಯವನ್ನು ಮತ್ತು ನಾಳಿನ ಜೀವನವನ್ನು ರೂಪಿಸುತ್ತಾ? ಈ ಪ್ರಶ್ನೆಯನ್ನು ಎಲ್ಲಾ ವಿದ್ಯಾರ್ಥಿಗಳು ತಮ್ಮಲ್ಲಿ ತಾವು ಕೇಳಿಕೊಳ್ಳಬೇಕಾಗಿದೆ ಈಗ.

ಈಗ ಎಲ್ಲರಿಗೂ ಗೊತ್ತು ನಿರುದ್ಯೋಗ ಹೆಚ್ಚುತ್ತಿದೆ. ಕಳೆದ 50 ವರ್ಷಗಳಲ್ಲೆ ಈಗ ಉದ್ಯೋಗ ಕಡಿಮೆ ಆಗಿದೆ. ಶಿಕ್ಷಣಕ್ಕೆ ಬಜೆಟ್‌ನಲ್ಲಿ ಕಮ್ಮಿ ಹಣ ನಿಗದಿ ಮಾಡಿದರು. ಶಿಕ್ಷಣ ಉಳಿಯುತ್ತದಾ? ಇದರ ಉದ್ದೇಶವೇನು? ಶಿಕ್ಷಣ ಕೊಡಬೇಕು ಅಂತಾನೋ? ನಿಧಾನವಾಗಿ ನಿಲ್ಲಿಸಬೇಕು ಅಂತಾನೋ? ಮತ್ತು ಪ್ರಾಥಮಿಕ ಆರೋಗ್ಯಕ್ಕೆ ಬಜೆಟ್‌ನಲ್ಲಿ ಅನುದಾನ ಕಡಿಮೆ ಮಾಡಿದ್ದಾರೆ. ಇದನ್ನೆಲ್ಲಾ ವಿದ್ಯಾರ್ಥಿಗಳು ಪ್ರಶ್ನೆ ಮಾಡಬೇಕಿತ್ತು. ಏಕೆಂದರೆ ಶಿಕ್ಷಣ, ಉದ್ಯೋಗ ನಿಮ್ಮದೇ ಸಮಸ್ಯೆಯಲ್ಲವೆ? ನಾಳೆ ಬದುಕಿ ಉಳಿಯಬೇಕಾದ ವಿದ್ಯಾರ್ಥಿ ಯುವಜನರಿಗೆ ಈ ಪ್ರಶ್ನೆ ಕೇಳುತ್ತಿದ್ದೇನೆ.

ಇಂದು ಪೆಟ್ರೋಲ್, ಗ್ಯಾಸ್ ಬೆಲೆ ಜಾಸ್ತಿಯಾಗುತ್ತಿದೆ. ಈ ಬೆಲೆ ಏರಿಕೆ ಸಿಕ್ಕಾಪಟ್ಟೆ ಕಂಟ್ರೋಲ್ ತಪ್ಪಿ ಹೆಚ್ಚುತ್ತಿದೆ. ಇದನ್ನು ಪ್ರಶ್ನೆ ಮಾಡಬೇಕಾದವರು ವಿದ್ಯಾರ್ಥಿಗಳಲ್ಲವೇ? ಈ ಎಚ್ಚರ ಎಲ್ಲಾ ಜಾತಿಯ, ಎಲ್ಲಾ ಧರ್ಮೀಯರ ವಿದ್ಯಾರ್ಥಿಗಳಲ್ಲೂ ಇರಬೇಕಾಗಿದೆ. ಇದನ್ನೂ ವಿದ್ಯಾರ್ಥಿಗಳು ಯೋಚನೆ ಮಾಡಬೇಕು.

ಈ ನೋಟ್ ಬ್ಯಾನ್ ಆವಾಂತರ, ಜಿಎಸ್‌ಟಿ ಅವಿವೇಕಿತನವು ದೇಶವನ್ನು ದಿಕ್ಕೆಡಿಸಿದೆ. ಗಮನಿಸಿ, ಇವತ್ತು ಮಧ್ಯಮ ವರ್ಗವು ಬಡತನದ ಕಡೆಗೆ ಹೋಗುತ್ತಿದೆ. ಮತ್ತು ಬಡವರು ಹಸಿವಿನ ಕಡೆಗೆ ಹೋಗುತ್ತಿದ್ದಾರೆ. ಈ ಸಮಸ್ಯೆಯನ್ನು ವಿದ್ಯಾರ್ಥಿಗಳಲ್ಲವೇ ಕೈಗೆ ತೆಗೆದುಕೊಳ್ಳಬೇಕಾದ್ದು. ಕೆಲವೇ ಜನ ಕಾರ್ಪೊರೇಟ್ ಕಂಪನಿ ಮಾಲೀಕರು, ಅವರ ಸಂಪತ್ತು ದೇಶದ ಸಂಪತ್ತಿನಲ್ಲಿ ಅರ್ಧ ಭಾಗವಿದೆ. ಅಂದರೆ ಕೆಲವೇ ಜನ ಕಾರ್ಪೋರೇಟ್ ಕುಟುಂಬಗಳ ಕೈಯಲ್ಲಿ ದೇಶದ ಅರ್ಧ ಭಾಗದ ಸಂಪತ್ತಿದೆ. ಕೊರೊನಾ, ಜಿಎಸ್‌ಟಿ, ನೋಟ್ ಬ್ಯಾನ್ ಆಗಿ ಜನರು ತತ್ತರಿಸುವಾಗ ಕಾರ್ಪೋರೇಟ್ ಕಂಪನಿಗಳ ಆದಾಯ ಹೆಚ್ಚಾಗಿದೆ. ಇದಕ್ಕೆ ಕಾರಣವೇನು? ಲೂಟಿ ಎಲ್ಲಿ ಆಗುತ್ತಿದೆ. ಇದನ್ನು ಎಚ್ಚೆತ್ತ ವಿದ್ಯಾರ್ಥಿಗಳು ಸಮಾಜಕ್ಕೆ ಹೇಳಬೇಕು. ಆ ಜವಾಬ್ದಾರಿ ಯುವ ಜನಾಂಗದ ಮೇಲಿದೆ.

ಆರ್ಥಿಕ ತಜ್ಞರು, ತಿಳಿದವರು ಹೇಳುತ್ತಿದ್ದಾರೆ. ಅದೇನೆಂದರೆ, ಕಾರ್ಪೊರೇಟ್ ಕಂಪನಿಗಳ ಸಂಪತ್ತಿನ ಮೇಲೆ ಶೇ.2ರಷ್ಟು ತೆರಿಗೆ ವಿಧಿಸಿದರೆ, ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗುತ್ತದೆ, ಪ್ರಾಥಮಿಕ ಆರೋಗ್ಯ ಸುಧಾರಣೆ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಕೇಂದ್ರ ಸರ್ಕಾರ ಶೇ.2ರಷ್ಟು ತೆರಿಗೆಯನ್ನು ಅವರಿಗೆ ವಿಧಿಸಲಿಲ್ಲ. ಬದಲಾಗಿ ಅವರಿಗೆ ತೆರಿಗೆ ಕಮ್ಮಿ ಮಾಡಿತು. ಉಳ್ಳವರಿಗೆ ಎಲ್ಲವನ್ನೂ ನೀಡುತ್ತದೆ. ಆದರೆ ರೈತರು, ದುಡಿಯುವ ವರ್ಗಕ್ಕೆ ಕೇಳಿದರೂ ಇಲ್ಲ. ಅವರಿಗೆ (ಉಳ್ಳವರು/ಕಾರ್ಪೊರೇಟ್ ಕಂಪನಿಗಳು) ಭೂಮಿ, ನೀರು, ವಿದ್ಯುತ್ ರಿಯಾಯಿತಿ. ಇಲ್ಲದವರಿಗೆ ಇಲ್ಲ. ಇದು ಯಾವ ನೀತಿ ಅಂತ ಸರ್ಕಾರವನ್ನು ಪ್ರಶ್ನಿಸಬೇಕಾದ ಹೊಣೆ ಹೊತ್ತುಕೊಳ್ಳಲು ವಿದ್ಯಾರ್ಥಿಗಳಲ್ಲಿ ಪ್ರಾರ್ಥನೆ ಮಾಡುತ್ತೇನೆ.

ಇಂದು ಮನುಷ್ಯರು ಧರ್ಮ-ದೇವರಿಗೆ ತಮ್ಮ ರೋಗ ಅಂಟಿಸುತ್ತಿದ್ದಾರೆ. ಇದಕ್ಕೆ ಧರ್ಮಜಾಢ್ಯ ಅಂತಾರೆ. ವಿದ್ಯಾರ್ಥಿಗಳು ಇನ್ನೂ ಎಳೆಯರು, ಇನ್ನೂ ಯಾವ ರಾಗ-ದ್ವೇಷ ಇಲ್ಲದವರು. ಅವರು ಈ ಧರ್ಮಜಾಢ್ಯದಿಂದ ಬಿಡುಗಡೆ ಪಡೆಯಿರಿ ಎಂದು ವಿದ್ಯಾರ್ಥಿ ಯುವಜನರಲ್ಲಿ ಕೇಳಿಕೊಳ್ಳುತ್ತೇನೆ.

ಆಯ್ತು, ಸಮವಸ್ತ್ರದ ಜೊತೆಗೆ ಹಿಜಾಬ್ ಹಾಕಿಕೊಂಡರೆ ಏನು ತೊಂದರೆ? ಬೇಕಾದರೆ ನಿಮಗೆ ಇಷ್ಟವಾದರೆ ನಿಮ್ಮಗಿಷ್ಟವಾದ ಬಣ್ಣದ ಹಿಜಾಬ್ ಅನ್ನು ನೀವೂ ಹಾಕಿಕೊಳ್ಳಿರಿ. ಇಂದು ಕುಂಕುಮ, ಬಳೆಗಳನ್ನು ಎಲ್ಲರೂ ಹಾಕಿಕೊಳ್ಳುವುದಿಲ್ಲವೇ? ಇಂತವೆಲ್ಲವೂ ದಿನಕಳೆದಂತೆ ಅಲಂಕಾರವೇ ಆಗಿ ಬಿಡಬಹುದು. ಆದ್ದರಿಂದ ಇದನ್ನೊಂದು ವಿವಾದ ಮಾಡಿಕೊಳ್ಳಬೇಕಾಗಿರಲಿಲ್ಲ. ಆದರೆ ಇಲ್ಲಿ ಅಹಂಕಾರ ಅವಿತುಕುಳಿತಿದೆ. ದ್ವೇಷ ಬಚ್ಚಿಟ್ಟುಕೊಂಡಿದೆ. ರಾಜಕಾರಣವೂ ಇದ್ದೇಇದೆ. ಪಟ್ಟಭದ್ರ ಹಿತಾಸಕ್ತಿಗಳೂ ಗುಡುರು ಹಾಕುತ್ತಿವೆ. ಹಾಗಾಗಿ ಸಹಜವಾಗಿ ನಡೆದುಕೊಂಡು ಹೋಗುತ್ತಿದ್ದುದು ಇಂದು ವಿವಾದವಾಗಿ ಉಲ್ಬಣಿಸಿದೆ. ನನ್ನ ವಿನಂತಿ ಹಿಜಾಬ್ ಇರಲಿ ಬಿಡಿ, ಅದನ್ನು ಏಕೆ ದೊಡ್ಡದು ಮಾಡುತ್ತೀರಿ? ಅದು ತನ್ನಷ್ಟಕ್ಕೆ ತಾನೇ ಕಮ್ಮಿ ಆಗುತ್ತಾ ಹೋಗಲೂ ಬಹುದು. ನಿಷೇಧ ಮಾಡಿದರೆ ಇದು ಹೆಚ್ಚುತ್ತಾ ಪ್ರತಿಭಟನೆಯ ಜೊತೆಗೆ ಬೇರೆಯವರೂ ಬಳಸಿಕೊಳ್ಳುವುದೂ ಹೆಚ್ಚಬಹುದು. ಈ ಎಚ್ಚರ ನಮಗಿರಲಿ.

ಈಗ ಈ ವಿವಾದ ನ್ಯಾಯಾಲಯದ ಮುಂದಿದೆ. ಅವರು ತಕ್ಷಣ ಇದಕ್ಕೆ ಪರಿಹಾರ ನೀಡಬೇಕು. ಅಲ್ಲಿಯವರೆಗೂ ತೂಗುಗತ್ತಿ ಆಡುತ್ತಲೇ ಇರುತ್ತದೆ. ಇಲ್ಲಿ ಒಂದು ತುಂಬಾ ನೋವಿನ ಸಂಗತಿಯೆಂದರೆ, ಹಿಜಾಬ್ ವಿವಾದ ಎಲ್ಲಿ ಹುಟ್ಟಿತೊ, ಆ ಒಂದೆರಡು ಶಾಲೆಗಳಲ್ಲೇ ಆಯಾಯ ಜನಾಂಗಗಳ ವಿವೇಕಿ ನಾಯಕರ ಸಮ್ಮುಖದಲ್ಲಿ ಶಾಂತಿ ಸಮಾಧಾನ ಮಾಡಿದ್ದರೆ, ಈ ವಿವಾದ ಬೆಳೆಯುತ್ತಿರಲಿಲ್ಲವೇನೋ. ಯಾವಾಗ ಈ ವಿವಾದವನ್ನು ಬಗೆಹರಿಸುವ ನೆಪದಲ್ಲಿ ಶಿಕ್ಷಣ ಸಚಿವರು ಸುತ್ತೋಲೆ ಹೊರಡಿಸಿದರೋ ಆವಾಗ ಇದು ರಾಜ್ಯವ್ಯಾಪ್ತಿ ಹಬ್ಬಿತು. ಇದಾಗಬಾರದಿತ್ತು. ಇಲ್ಲಿ ವಿವೇಕ, ವಿವೇಚನೆ ಅಗತ್ಯವಿತ್ತು. ಇದನ್ನು ನೆನಸಿಕೊಂಡರೆ ನೋವುಂಟಾಗುತ್ತದೆ.

ದೇವನೂರು ಮಹಾದೇವ

(ಹಿರಿಯ ಸಾಹಿತಿಗಳು ಮತ್ತು ಚಿಂತಕರು, ಮೈಸೂರು)


ಇದನ್ನೂ ಓದಿ: ಅಧ್ಯಾಪನದ ಧರ್ಮ: ನಮ್ಮ ವಿವೇಕದ ಮೇಲೆ, ಧರ್ಮದ ಮರ್ಮದ ಮೇಲೆ ನಡೀತಿರೋ ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...