Homeಕರ್ನಾಟಕಸಾಣೇಹಳ್ಳಿಗೆ ಹೋದಾಗ ಜಂಬಪ್ಪದೇವರು ನೆನಪಾದರು

ಸಾಣೇಹಳ್ಳಿಗೆ ಹೋದಾಗ ಜಂಬಪ್ಪದೇವರು ನೆನಪಾದರು

- Advertisement -
- Advertisement -

ಯಾರೀ ಜಂಬಪ್ಪ ದೇವರು? ಇವರು ಕನ್ನಡ ನಾಡಿನ ಹೆಮ್ಮೆಯ ಧಾರ್ಮಿಕ ಕೇಂದ್ರ ಶ್ರೀ ತರಳಬಾಳು ಜಗದ್ಗುರು ಪರಂಪರೆಯ 11ನೆಯ ಜಗದ್ಗುರುಗಳು. ಅವರೇಕೆ ನೆನಪಾದರು? ಕಾರಣ ಗೊತ್ತಿಲ್ಲ. ಐತಿಹಾಸಿಕ ತರಳಬಾಳು ಪೀಠಕ್ಕೆ ರೋಮಾಂಚಕಾರಿ ಇತಿಹಾಸವಿದೆ.

ಸಿರಿಗೆರೆ ಶ್ರೀ ಪೀಠದ ಇತಿಹಾಸ ಕೆದಕುತ್ತಾ ಹೋದಂತೆ ನಿಗೂಢತೆ ಬಿಚ್ಚಿಕೊಳ್ಳುತ್ತಲೇಹೋಯಿತು. ಬಸವನ ಪಾದದವರೆಗೆ ಅದು ಬೆಳೆಯಿತು. ಬಸವಣ್ಣನವರ ಸಮಕಾಲೀನರಾಗಿದ್ದ ಮರುಳಸಿದ್ಧ ಶರಣರು ಈ ಐತಿಹಾಸಿಕ ಪೀಠದ ಮೂಲ ಪುರುಷರು. ಹುಟ್ಟಿನಿಂದ ಅಸ್ಪೃಶ್ಯರಾಗಿದ್ದ ಇವರು ತಮ್ಮ ಜೀವಮಾನವನ್ನೆಲ್ಲ ಅಂತ್ಯಜರ ಉದ್ಧಾರಕ್ಕಾಗಿ ಮೀಸಲಿಟ್ಟವರು. ಬ್ರಾಹ್ಮಣರೇ ದೇವರೆಂದು ಭಾವಿಸಿದ್ದ ಕಾಲದಲ್ಲಿ ಅಂತ್ಯಜರ ಏಳಿಗೆಗಾಗಿ ವರ್ಗ, ವರ್ಣವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರು. ಅನುಭಾವದ ವಚನ ನುಡಿದರು. ಶಿವಯೋಗಿ ಸಿದ್ಧರಾಮೇಶ್ವರರ ವಚನದಲ್ಲಿ “ಮರುಳಸಿದ್ಧರು 68 ಸಾವಿರ ವಚನಗಳನ್ನು ಬರೆದಿರುವುದಾಗಿ” ಪ್ರಸ್ತಾಪಿಸಿದ್ದಾರೆ. ಮರುಳಸಿದ್ಧ ಶರಣರ ಪ್ರಸ್ತಾಪ ಹಾವಿನಹಾಳ ಕಲ್ಲಯ್ಯ, ಮೆರೆಮಿಂಡದೇವರು ಮುಂತಾದ ಶರಣರ ವಚನಗಳಲ್ಲಿ ಸಹ ಕಾಣಬಹುದು. ವಿಷಾದದ ಸಂಗತಿ ಎಂದರೆ ಅವರ ಒಂದೇ ಒಂದು ವಚನ ಮಾತ್ರ ಇಂದಿಗೆ ದೊರೆತಿದೆ. ವಚನ ಒಂದೇ ಆದರೂ ಅದು ಅನುಭಾವದ ಆಗರವಾಗಿದೆ. ಈ ಕೆಳಗಿನ ವಚನ ಇಷ್ಟಲಿಂಗದ ನೆಲೆಕಲೆಗಳನ್ನು ತಿಳಿಸುತ್ತದೆ.

ಮರುಳಸಿದ್ದರು

ಆಲಿ ಆಲಯದಲ್ಲಿ ಕರಿಗೊಳಲು,
ಆಲಿಸುವ ಶ್ರವಣವು ಮೇಲಿಪ್ಪ ಆಕಾಶವನಡರಲು,
ಉಲುಹು ನಿರ್ಭೂತಚಿತ್ತ ಸಮಾಧಾನವನನೆಯ್ದಲು,
ಕಾಲ ಕರ್ಮ ಭವಂಗಳ ಗೆಲುವುದಿದೇನು
ಸೋಜಿಗವು ಹೇಳಾ, ರೇವಣ್ಣಪ್ರಭುವೆ.

ಇಲ್ಲಿ ಕಾಲ, ಕರ್ಮ, ಭವಂಗಳ ಗೆಲುವುದಿದೇನು ಸೋಜಿಗ ಎನ್ನುವುದು ಗಮನಿಸಬೇಕಾದ ಸಂಗತಿ. ಗೆಲ್ಲಲು ಬೇಕು ಇಷ್ಟಲಿಂಗದಲ್ಲಿ ನಿಷ್ಠೆ. ’ಆಲಿ’ ಎಂದರೆ ಕಣ್ಣು. ’ಆಲಯ’ ಎಂದರೆ ಇಷ್ಟಲಿಂಗ. ಲಿಂಗಭಕ್ತನಾದವನು ಅಂಗೈಯಲ್ಲಿ ಇಷ್ಟಲಿಂಗವನ್ನು ಇರಿಸಿ ಏಕಾಗ್ರದೃಷ್ಟಿಯಿಂದ ಲಿಂಗದ ಅನುಸಂಧಾನ ಮಾಡುತ್ತಿದ್ದರೆ ಬಾಹ್ಯ ಶಬ್ದಗಳೆಲ್ಲ ಅಡಗಿ ಚಿತ್ತದಲ್ಲಿ ಸಮಾಧಾನ ನೆಲೆಗೊಳ್ಳುವುದು. ಅದರಿಂದಾಗಿ ಕಾಲ, ಕರ್ಮ, ಭವಗಳನ್ನು ಗೆಲ್ಲುವುದು ಸುಲಭವಾಗುವುದು. ಇದು ಮರುಳಸಿದ್ಧರ ವಚನದ ಅನುಭಾವ.

ಇವರು ಇಂದಿನ ಬಳ್ಳಾರಿ ಜಿಲ್ಲೆಯ ಉಜ್ಜಯನಿಯಲ್ಲಿ ಸದ್ಧರ್ಮ ಪೀಠ ಸ್ಥಾಪಿಸಿದ್ದರು. ಆ ಪೀಠದ ಮೇಲೆ ತಮ್ಮ ಶಿಷ್ಯ ’ತೆಲುಗುಬಾಳು’ ಸಿದ್ಧಯ್ಯನವರನ್ನು ಕೂರಿಸಿ “ತರಳ ಬಾಳು” ಎಂದು ಆಶೀರ್ವದಿಸಿದರು ಎಂದು ಇತಿಹಾಸ ಹೇಳುತ್ತದೆ.

ಎಚ್ ದೇವೀರಪ್ಪನವರು ಮರುಳಸಿದ್ಧರ ಬಗ್ಗೆ ಬರೆಯುತ್ತ “ಜಾತಿ-ಮತಗಳ ವಿರುದ್ಧವಾಗಿ, ಮಾನವತೆಯ ಸಮತೆಗಾಗಿ, ದೇವರು ಮತ್ತು ಧರ್ಮಗಳ ಸಾರ್ವತ್ರಿಕ ಬಳಕೆಗಾಗಿ ಮರುಳಸಿದ್ಧನು ನಡೆಸಿದ ಹೋರಾಟ ಮಾನವ ಜನಾಂಗದ ಇತಿಹಾಸದಲ್ಲಿಯೇ ಅಪ್ರತಿಮವಾದುದಾಗಿದೆ. ಅಣ್ಣ ಬಸವಣ್ಣನು ಯಜ್ಞಗಳ ಬಗ್ಗೆ ಮತ್ತು ಕುಲಜಾತಿಗಳ ಬಗ್ಗೆ ಹೇಳಿರುವುದನ್ನೆಲ್ಲ ಮರುಳುಸಿದ್ಧನು ಪ್ರಯೋಗದಲ್ಲಿ ತಂದು ’ವಿಶ್ವಬಂಧು’ವೆನಿಸಿದ್ದಾನೆ. ಆದುದರಿಂದಲೇ ಅಣ್ಣ ಬಸವಣ್ಣನು ’ನುಡಿ ನಡೆಗಾರ’ನಾದರೆ, ವಿಶ್ವಬಂಧು ಮರುಳಸಿದ್ಧ ’ನಡೆಗಾರ ಬಸವಪ್ಪ’ ನೆನ್ನಬಹುದು. ಅಣ್ಣ ಬಸವಣ್ಣನ ಸಾಹಿತ್ಯವು ಅಣ್ಣನು ನುಡಿದನೆಂಬುದಕ್ಕೆ ಸಾಕ್ಷಿಯಾಗಿದ್ದರೆ ಮರುಳಸಿದ್ಧನ ಜೀವನ ಇತಿಹಾಸವು ಅಣ್ಣನು ನುಡಿದಂತೆ (ಈತನು) ನಡೆದನು ಎಂಬುದಕ್ಕೆ ಸಾಕ್ಷಿಯಾಗಿದೆ. ಅಥವಾ
ಬಸವಣ್ಣನ ನುಡಿಗಳಿಗೆ ನಡೆಗಳನ್ನು ಪ್ರಯೋಗಿಸಿದವನು ಮರಳುಸಿದ್ಧನಾದುದರಿಂದ ಇವನನ್ನು ’ನಡೆ ಬಸವಣ್ಣ’ನೆಂದು ಕರೆಯಬಹುದು” ಎಂದಿದ್ದಾರೆ. ಬಸವಣ್ಣನ ಸಮಕಾಲೀನರಾಗಿದ್ದ ಮರಳುಸಿದ್ದರು 1210ರ ಸುಮಾರಿಗೆ ಬಯಲಲ್ಲಿ ಬಯಲಾದರು.

ಮರುಳಸಿದ್ಧರ ತರವಾಯ ಹತ್ತು ಜಂಗಮ ಪೂಜ್ಯರು ಮಠದ ಪೀಠಕ್ಕೆ ಉತ್ತರಾಧಿಕಾರಿಗಳಾಗಿ, ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ನಿರಂತರವಾಗಿ ಬೆಳೆಸಿಕೊಂಡು ಹೋಗಿದ್ದರು. ಹನ್ನೊಂದನೆಯ ಪೀಠಾಧಿಕಾರಿಯಾಗಿದ್ದ ಜಂಬಪ್ಪದೇವರ ಕಾಲದಲ್ಲಿ ಗುರು ವಿರಕ್ತರ ಮಧ್ಯೆ ಅವಿಶ್ವಾಸ ಮತ್ತು ಪಾಳೇಗಾರರ ಆಂತರಿಕ ಯುದ್ಧದಿಂದಾಗಿ ಮಠದಲ್ಲಿ ಬಿರುಕು ಕಾಣಿಸಿಕೊಂಡಿತು. ಮನನೊಂದ ಜಂಬಪ್ಪದೇವರು ಉಜ್ಜಯಿನಿಯನ್ನು ತೊರೆದು ಕ್ರಿ.ಶ 1740ರ ಸುಮಾರಿಗೆ ಸಿರಿಗೆರೆಗೆ ಬಂದು ನೆಲೆಸಿದರು. ಅಲ್ಲೇ ಮಠ ಸ್ಥಾಪಿಸಿ ತಮ್ಮ ಜೀವನದ ಉಳಿದ ದಿನಗಳನ್ನು ಸಿರಿಗೆರೆಯಲ್ಲಿಯೇ ಕಳೆದರು. 1740ರಲ್ಲಿ ಸ್ಥಾಪಿತವಾದ ಸಿರಿಗೆರೆಯ ತರಳಬಾಳು ಮಠಕ್ಕೆ ಜಂಬಪ್ಪ ದೇವರ ಜಂಗಮ ಪರಂಪರೆಯಲ್ಲಿ ಒಂಬತ್ತನೆಯ ಪೀಠಾಧಿಪತಿಗಳಾಗಿ ಬಂದವರು ಶ್ರೀ ಶಿವಕುಮಾರ ಶಿವಾಚಾರ್ಯರು. ಇವರ ಅವಧಿಯಲ್ಲಿ ಮಠದ ಬೆಳವಣಿಗೆ ಲಿಂಗಾಯತ ಮಠಗಳ ಇತಿಹಾಸದಲ್ಲಿಯೇ ಮೊದಲೆಂಬಂತೆ ಹೆಮ್ಮರವಾಯಿತು. ಇವರಿಂದಲೇ
’ತರಳ ಬಾಳು’ ಎಂದು ಆಶೀರ್ವಾದ ಪಡೆದು 21ನೇ ಪೀಠಾಧಿಪತಿಯಾದವರು ಇಂದಿನ ಪೀಠಾಧ್ಯಕ್ಷರಾಗಿರುವ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರು.

ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿ

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾಧ್ಯಕ್ಷರಾದ ಅವಧಿಯಲ್ಲಿ ಒಟ್ಟು ನೂರಾರು ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯಗಳು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸ್ಥಾಪಿತವಾಗಿದ್ದು ಅವುಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಲಕ್ಷಲಕ್ಷ. ಆಗ ಸಾವಿರಾರು ನೌಕರರು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿದ್ದರು. ಸಂಸ್ಥೆಯ ಪ್ರಸಾದ ನಿಲಯದಲ್ಲಿ ಎಂಟ್ಹತ್ತು ಸಾವಿರ ವಿದ್ಯಾರ್ಥಿಗಳು ನಿತ್ಯ ಉಚಿತ ಪ್ರಸಾದ ಸ್ವೀಕರಿಸುತ್ತಿದ್ದರು. ಹೀಗೆ ಇತಿಹಾಸದ ಪುಟಗಳು ಮನದಲ್ಲಿ ಬಿಚ್ಚಿಕೊಳ್ಳುತ್ತಿರುವಾಗ ನಾನು ಮುಟ್ಟಿದ್ದೇ ಸಾಣೆಹಳ್ಳಿಯನ್ನು. ಉಸ್ಸೆಂದು ಕಾರಿಳಿದಾಗ ಎದುರಿಗೆ ಕಂಡವು ಸಾಣೆಹಳ್ಳಿಯ ವಿದ್ಯಾಸಂಸ್ಥೆಗಳು. ಅಲ್ಲಿ ಸ್ವಾಗತಿಸಿದ್ದು ಮಠದ ವ್ಯವಸ್ಥಾಪಕರು. (ಭಕ್ತರ ಆಶಯ ಪೂರೈಸಲು ಹೋಗಬೇಕಾಗಿದೆಯೆಂದು ಪೂಜ್ಯರು ಹಿಂದಿನ ದಿನ ನನಗೆ ತಿಳಿಸಿದ್ದರು).

ಸಾಣೇಹಳ್ಳಿಯಲ್ಲಿ ಎಂಟುನೂರಕ್ಕಿಂತ ಹೆಚ್ಚು ಬಾಲಕ ಬಾಲಕಿಯರು ಓದುತ್ತಿದ್ದು, ಐದುನೂರ ಐವತ್ತಕ್ಕಿಂತ ಹೆಚ್ಚು ಮಕ್ಕಳು ಗುರುಗಳ ತಾಯ್ತನದಲ್ಲಿ ಕೈತುತ್ತು ಹಾಕಿಸಿಕೊಳ್ಳುತ್ತಿದ್ದಾರೆ. ಎಲ್ಲಿಯೂ ಇರದ ಅಪರೂಪದ ಶಾಲೆ ಸಾಣೇಹಳ್ಳಿಯಲ್ಲಿದೆ. ಅದುವೇ ’ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ’. ಅದನ್ನು ಪ್ರಾರಂಭಿಸಿರುವ ಕಾರಣ ಕೂಡ ಅಪರೂಪದ್ದೇ. ಹಿಂದಿನ ಪೂಜ್ಯರಾದ ಶ್ರೀ ಶಿವಕುಮಾರ ಸ್ವಾಮಿಗಳು ಶುದ್ಧ ಬಸವ ಭಕ್ತರು. ಬಸವ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ತುಡಿತ ಅವರದು.

ಅದನ್ನು ತಲುಪಿಸಲು ದೃಶ್ಯ ಮಾಧ್ಯಮವೇ ಸೂಕ್ತ ಎಂದುಕೊಂಡಿದ್ದರು. ತತ್ವಪ್ರಚಾರಕ್ಕಾಗಿ ರಂಗಭೂಮಿಯನ್ನು ಬಳಸಿಕೊಂಡ ಅಪರೂಪದ ಜಗದ್ಗುರುಗಳು ಅವರು. ಅದೇ ಪರಂಪರೆಯನ್ನು ಮುಂದುವರಿಸಿದವರು ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರು ಕೂಡ ತಮ್ಮ ಗುರುಗಳಂತೆ ನಾಟಕ ಬರೆದು, ಕಲಾವಿದರನ್ನು ಆಯ್ಕೆ ಮಾಡಿ, ಆ ನಾಟಕಗಳನ್ನು ನಿರ್ದೇಶಿಸಿದ್ದುಂಟು. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಕೆಲವು ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರ ನಿರ್ವಹಿಸಿದ್ದರಿಂದ ಕಲಾಸಕ್ತಿ ಹೆಚ್ಚಾಯ್ತು. ತಮ್ಮ ಗುರುಗಳ ಸದಾಶಯವನ್ನು ಅರಿತು ಅದನ್ನು ಕಾರ್ಯಗತಗೊಳಿಸಲು 1987ರಲ್ಲಿ ’ಶ್ರೀ ಶಿವಕುಮಾರ ಕಲಾಸಂಘ’ ಕಟ್ಟಿದರು. ಆರಂಭದಲ್ಲಿ ಟ್ರ್ಯಾಕ್ಟರ್‌ನಲ್ಲೇ ಕಲಾವಿದರನ್ನು ಹಳ್ಳಿಹಳ್ಳಿಗೆ ಕಳಿಸಿ ನಾಟಕ ಪ್ರದರ್ಶನಕ್ಕೆ ಪ್ರೇರಣೆ ನೀಡಿದ್ದರು. 1997ರಲ್ಲಿ ಅಧಿಕೃತವಾಗಿ ’ಶಿವಸಂಚಾರ’ ಹೆಸರಿನಲ್ಲಿ ರಂಗರೆಪರ್ಟರಿ ಪ್ರಾರಂಭವಾಯ್ತು. ವರ್ಷದುದ್ದಕ್ಕೂ 120ಕ್ಕಿಂತ ಹೆಚ್ಚು ಪ್ರಯೋಗಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರದರ್ಶಿಸುತ್ತಿದ್ದರು. ಶಿವಕುಮಾರ ಕಲಾಸಂಘ, ಶಿವಸಂಚಾರ, ಶ್ರೀ ಶಿವಕುಮಾರ ರಂಗಪ್ರಯೋಗಶಾಲೆ ಸಾಣೇಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದವು.

ಮಠದ ಚರ-ಸ್ಥಿರ ಆಸ್ತಿಯೊಂದಿಗೆ ರಂಗಭೂಮಿಯೂ ಶ್ರೀಗಳ ಪಾಲಿಗೆ ಬಳುವಳಿಯಾಗಿ ಬಂದಿತಂತೆ. ಆಗ ಶ್ರೀಗಳ ನೆರವಿಗೆ ಬಂದವರೆ ಕರ್ನಾಟಕದ ಷೇಕ್ಸ್‌ಪಿಯರ್ ಸಿಜಿಕೆ. ಮಠದೊಂದಿಗೆ ಅವರ ಒಡನಾಟ ಎಲ್ಲಿಯವರೆಗೆ ಬೆಳೆಯಿತೆಂದರೆ ಸಿಜಿಕೆ ಇಂದು ಸಾಣೇಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದ ಪಕ್ಕದಲ್ಲೇ ಶಾಶ್ವತವಾಗಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ಸಾಣೇಹಳ್ಳಿ ಮಠ ಇಂದು ಕಲಾಕಾರರನ್ನು ಉತ್ಪತ್ತಿ ಮಾಡುವ ಮಹಾಶಾಲೆಯಾಗಿ ಮಾರ್ಪಟ್ಟಿದೆ. ರಂಗಶಾಲೆಯಲ್ಲಿ ಶಿಕ್ಷಣ ಪಡೆದು ಶಿವಸಂಚಾರಕ್ಕೆ ಬರುವ ಕಲಾವಿದರಿಗೆ ಗುರುಗಳು ಊಟ-ವಸತಿಯೊಂದಿಗೆ ಎಂಟು ಸಾವಿರ ಗೌರವಧನ ನೀಡುವರು. ಇದಕ್ಕಾಗಿ ಶ್ರೀಮಠದಿಂದ ಪ್ರತಿವರ್ಷ 50 ಲಕ್ಷಕ್ಕಿಂತ ಹೆಚ್ಚು ಹಣ ವಿನಿಯೋಗವಾಗುತ್ತದೆ ಎನ್ನುತ್ತಾರೆ ಮುಗುಳುನಗುತ್ತ, ಪೂಜ್ಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು.

ಪಂಡಿತಾರಾಧ್ಯ ಸ್ವಾಮೀಜಿ

ದೇಶ ವಿದೇಶ ಸುತ್ತಿದ ನನಗೆ ಸಾಣೇಹಳ್ಳಿಯ ನಾಟ್ಯ ಶಾಲೆ ನೋಡಿ ಹುಬ್ಬೇರಿಸುವಂತಾಯ್ತು. ಯುರೋಪ್, ಅಮೆರಿಕಾ ದೇಶಗಳಿಗೆ ಕಡಿಮೆ ಇಲ್ಲದಂತೆ ತಲೆ ಎತ್ತಿ ನಿಂತಿದೆ ಸಾಣೆಹಳ್ಳಿಯ ನಾಟ್ಯಶಾಲೆ. ಅಲ್ಲಿ ಏಳನೂರ ಆಸನಗಳನ್ನು ಹೊಂದಿದ ಹವಾನಿಯಂತ್ರಿತ ಆಡಿಟೋರಿಯಂ ಇದೆ. ಅದರ ಪಕ್ಕದಲ್ಲೇ ನಾಲ್ಕು ಸಾವಿರ ಪ್ರೇಕ್ಷಕರು ಕುಳಿತು ನಾಟಕ ನೋಡುವ ’ಶ್ರೀ ಶಿವಕುಮಾರ ಬಯಲು ರಂಗಮಂದಿರ’ ಇದೆ. ಏನೋ ಅದ್ಭುತವಾದುದನ್ನು ನೋಡಿದವನಂತೆ ಅವುಗಳ ಫೋಟೋ ತಗೆಯಲು ಪ್ರಾರಂಭಿಸಿದೆ. ಆಗ ಕಂಡ ಅಲ್ಲೊಬ್ಬ ಕಾಯಕಯೋಗಿ; ರಂಗಮಂದಿರವನ್ನು ಸ್ವಚ್ಛಗೊಳಿಸುತ್ತಿದ್ದ ಮಠದ ಸಹಾಯಕ. ಅಂದು ಅವನು ನನ್ನ ಹೀರೋ ಆಗಿಬಿಟ್ಟ. ಸ್ವಚ್ಛತೆಗೆ ಹಾಗೂ ಕಲೆಗೆ ನಾವು ಯಾವ ದೇಶಕ್ಕೂ ಕಡಿಮೆ ಇಲ್ಲ ಎಂಬಂತೆ ಬೀಗುತ್ತಿದ್ದ. ಅವನಿಗೆ ಸೆಲ್ಯೂಟ್ ಹೊಡೆದು ಮುಂದೆ ಸಾಗಿದೆ.

ನಂತರ ನನ್ನ ಕಣ್ಣಿಗೆ ಕಂಡದ್ದು ’ಸಿಜಿಕೆ ರೆಕಾರ್ಡಿಂಗ್ ರೂಮ್’. ’ಒಳ ಬನ್ನಿ’ ಎಂದು ಆಹ್ವಾನ ನೀಡಿದರು ಅದರ ಮೇಲ್ವಿಚಾರಕ ರಾಜು. ಒಳಗೆ ಕಾಲಿಟ್ಟಾಗ ತೆರೆದುಕೊಂಡವು ಎರಡೆರಡು ದೈತ್ಯ ಬಾಗಿಲುಗಳು. ಹವಾನಿಯಂತ್ರಿತ ಕೋಣೆಯ ಒಳವಿನ್ಯಾಸ ನನ್ನನ್ನು ದಂಗು ಬಡಿಸಿತು. ಅಲ್ಲಿದ್ದ ಅತ್ಯಾಧುನಿಕ ಸಲಕರಣೆಗಳು ’ನನ್ನನ್ನು ಉಪಯೋಗಿಸಿ’ ಎಂದು ಅಹ್ವಾನ ನೀಡುತ್ತಿದ್ದವು. ಇತ್ತೀಚಿಗೆ ನಾನೂ ಒಂದು ಮೀಡಿಯಾ ಹೌಸ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಸ್ಟುಡಿಯೋಗಿಂತ ನಿಮ್ಮ ಸ್ಟುಡಿಯೋ ಅತ್ಯಂತ ಸುಸಜ್ಜಿತ ಎನ್ನುವ ಮಾತನ್ನು ಹೇಳದೆ ಇರಲಾಗಲಿಲ್ಲ.

ಮಠದಲ್ಲಿರುವ ರಸ್ತೆಯ ಮಣ್ಣು ಭಕ್ತರ ಕಾಲಿಗೆ ಸೋಂಕದಿರಲಿ ಎಂದು ಮಠದ ಆವರಣದಲ್ಲೆಲ್ಲ ಕಲ್ಲು ಹಾಸಿಗೆ ಹಾಕಿಸುತ್ತಿದ್ದಾರೆ ಶಿಸ್ತಿನ ಧರ್ಮಾಧಿಕಾರಿ ಪಂಡಿತಾರಾಧ್ಯ ಶ್ರೀಗಳು. ಹತ್ತಾರು ಎಕರೆಯ ಮಠದ ಆವರಣ ಸಾವಿರಾರು ಮಕ್ಕಳ ಕಲರವದಲ್ಲಿಯೂ ಶಾಂತವಾಗಿತ್ತು. ನಮ್ಮತ್ತಲೂ ನೋಡಿ ಆನಂದಪಡಿ ಎನ್ನುತ್ತಿದ್ದವು ಮಠದಲ್ಲಿಯ ಹೂ-ಬಳ್ಳಿಗಳು. ಅವುಗಳೊಂದಿಗೆ ಪೈಪೋಟಿಗಿಳಿದಿದ್ದವು ಹಣ್ಣಿನ ಮರಗಳು.

’ಮಧ್ಯಾಹ್ನ ಮೂರು ಗಂಟೆಯಾಯ್ತು, ಇನ್ನೇನು ಗುರುಗಳು ಆಗಮಿಸಬಹುದು. ಪ್ರಸಾದ ಮಾಡೋಣ’ ಎಂದರು ಮಠದ ವ್ಯವಸ್ಥಾಪಕರು. ಇಲ್ಲಿರುವ ರಂಗದೇಗುಲಗಳನ್ನು ನೋಡಿ ಹೊಟ್ಟೆ ತುಂಬಿದೆ ಎಂದೆ. ಬಲವಂತಪಡಿಸಿದರು ವ್ಯವಸ್ಥಾಪಕರು. ಊಟದ ತಟ್ಟೆಯಲ್ಲಿಯ ಎರಡು ಚಪಾತಿಗಳು ಒಡಲ ಸೇರಿದ್ದವು. ’ಸರ್ ಅನ್ನ ಉಣ್ಣಲೇಬೇಕು, ಸಾರು ಚನ್ನಾಗಿದೆ’ ಎಂದಾಗ ’ಬೇಡ’ ಎನ್ನಲಾಗಲಿಲ್ಲ.

ಊಟ ಮುಗಿಯುತ್ತಿದ್ದಂತೆ ಪೂಜ್ಯರ ಕರೆ ಬಂತು. ಅವರ ಜೊತೆ ನನ್ನ ಸಂತೋಷ ಹಂಚಿಕೊಳ್ಳುತ್ತಿದ್ದಂತೆ ಭಕ್ತರು ದರ್ಶನಕ್ಕೆ ಬರುತ್ತಲೇ ಇದ್ದರು. ನಾನು ಮಠ ನೋಡಲು, ಗುರುಗಳ ದರ್ಶನ ಪಡೆಯಲು ಬಂದಿದ್ದೆ, ಎರಡು ಸಿಕ್ಕಿದ್ದವು. “ನಾನು ಬೆಂಗಳೂರಿಗೆ ಹೊರಡುತ್ತೇನೆ. ಮತ್ತೊಮ್ಮೆ ಬರುತ್ತೇನೆ” ಆಶೀರ್ವದಿಸಿ ಎಂದೆ. ಮಠದಿಂದ ಹೊರ ಬಂದೆ, ಮನಸ್ಸು ಉಲ್ಲಸಿತವಾಗಿತ್ತು. “ಹೊರಡೋಣವೆ” ಎಂದೆ ನನ್ನ ಸಾರಥಿಗೆ.

ಜಿ ಬಿ ಪಾಟೀಲ

ಜಿ ಬಿ ಪಾಟೀಲ
ಬಸವನ ಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ಓಶೋ ಕಂಡಂತೆ ವಿವೇಕಾನಂದರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...