ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ದಿಟ್ಟದನಿ ಅಕ್ಕಯ್ ಪದ್ಮಶಾಲಿಯವರ ಜೀವನ ಕಥೆ ಆಧಾರಿತ ‘ಅಕ್ಕಯ್’ ನಾಟಕ ನಾಗರಿಕ ಸಮಾಜಕ್ಕೆ ಹಲವು ಪ್ರಶ್ನೆಗಳನ್ನು ಎಸೆಯಿತು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಭಾನುವಾರ ‘ಅಕ್ಕಯ್’ ಏಕವ್ಯಕ್ತಿ ನಾಟಕ ಪ್ರದರ್ಶನಗೊಂಡು, ಕಿಕ್ಕಿರಿದು ತುಂಬಿದ್ದ ಇಡೀ ಸಭಾಂಗಣ ಹಲವು ಅನುಭವಗಳಿಗೆ ಸಾಕ್ಷಿಯಾಯಿತು.
ಅಕ್ಕಯ್ ಪದ್ಮಶಾಲಿಯವರ ಜೀವನ ಕಥನವನ್ನು ರಂಗದ ಮೇಲೆ ನೋಡಿ ಪ್ರೇಕ್ಷಕರು ಕಂಬನಿ ಮಿಡಿದರು. ಅಕ್ಕಯ್ ಅವರು ತಮ್ಮ ಜೀವನದುದ್ದಕ್ಕೂ ಕಂಡ ನೋವಿನ ಘಟನೆಗಳು ರಂಗದ ಮೇಲೆ ಎಳೆಎಳೆಯಾಗಿ ತೆರೆದುಕೊಂಡವು. ನಾಗರಿಕ ಸಮಾಜದೊಳಗಿನ ಕ್ರೌರ್ಯ ಮನಸ್ಸುಗಳನ್ನು ದುಃಖದ ಕಡಲಿಗೆ ದೂಡಿತು. ಅಕ್ಕಯ್ ಪಾತ್ರವಾಗಿ ಅಭಿನಯಿಸಿದ ನಯನಾ ಸೂಡ ಅವರ ಅಭಿನಯಕ್ಕೆ ಪ್ರೇಕ್ಷಕರು ಭರಪೂರ ಮೆಚ್ಚುಗೆ ಸೂಚಿಸಿದರು. ನಾಟಕ ಮುಗಿದ ಕೆಲವು ನಿಮಿಷಗಳ ಕಾಲ ಇಡೀ ಸಭಾಂಗಣ ಕರತಾಡನ ಮಾಡುತ್ತಲೇ ಇತ್ತು.
ಈ ನಾಟಕ ನಮ್ಮನ್ನು ಮತ್ತೊಂದು ಜಗತ್ತಿಗೆ ಕರೆದುಕೊಂಡು ಹೋಗಿ, ನಾವು ಮಾಡುತ್ತಿರುವ ಅಸಮಾನತೆ, ಅನ್ಯಾಯಗಳನ್ನು ಬೊಟ್ಟು ಮಾಡಿ ತೋರಿಸಿತು. ಇದು ಅಕ್ಕಯ್ ಒಬ್ಬರ ಜೀವನ ಕಥೆಯಷ್ಟೇ ಅಲ್ಲ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಜಗದೀಶರ ಕಥೆ (ಜಗದೀಶ ಎಂಬುದು ಅಕ್ಕಯ್ ಅವರ ಮೊದಲ ಹೆಸರು).
ಸಿಗ್ನಲ್‌ಗಳಲ್ಲಿ, ರಸ್ತೆ ಬದಿಯಲ್ಲಿ, ಸಾರ್ವಜನಿಕ ಸಾರಿಗೆಗಳಲ್ಲಿ ಅವರನ್ನು ಕಂಡು ಕಣ್ಣು ತಪ್ಪಿಸಿ ಹೋಗುವುದನ್ನು ಬಿಟ್ಟು ಅವರು ನಮ್ಮವರೇ ಎಂಬ ಸತ್ಯ ಅರ್ಥವಾದರೂ ಸಾಕು, ಅವರು ಭಿಕ್ಷೆ ಬೇಡಲು, ಲೈಂಗಿಕ ಕಾರ್ಯಕರ್ತೆಯರಾಗಲು ನಮ್ಮ ಪಾಲು ಇದೆ ಎಂಬ ಸತ್ಯ ಅರಿವಾಗುತ್ತದೆ ಎಂಬ ಸಂದೇಶವನ್ನು ‘ಅಕ್ಕಯ್’ ನಾಟಕ ಸಾರಿತು.

ಹೆಣ್ಣು ಅಲ್ಲದ, ಗಂಡೂ ಅಲ್ಲದ ಜೀವವನ್ನು ಈ ಸಾಮಾಜಿಕ ವ್ಯವಸ್ಥೆ ವಿಚಿತ್ರವಾಗಿ ನೋಡುವ, ರಣ ಹದ್ದಿನಂತೆ ಕುಕ್ಕಿ ತಿನ್ನುವ ಹಲವು ಪ್ರಸಂಗಗಳು ಭೀಭತ್ಸವಾಗಿವೆ. ಯಾವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂಬ ಪ್ರಶ್ನೆಗಳನ್ನು ಅಕ್ಕಯ್ ಜೀವನ ಕಥೆ ಹುಟ್ಟು ಹಾಕುತ್ತವೆ. ಮೂಲತಃ ಪ್ರಶ್ನಿಸುವ ಮನೋಭಾವದರಾದ ಅಕ್ಕಯ್, ಅಲ್ಪಸಂಖ್ಯಾತ ಸಮುದಾಯಗಳಲ್ಲಿನ ಮೌಢ್ಯ, ಅಸಮಾನ ವ್ಯವಸ್ಥೆಗಳನ್ನೂ ನಿಕಷಕ್ಕೊಡುತ್ತಾರೆ.
ಇಷ್ಟೆಲ್ಲ ನೋವುಗಳ ನಡುವೆ ಪೀನಿಕ್ಸ್‌ನಂತೆ ಎದ್ದು ಬರುವ ಅಕ್ಕಯ್, ಎಲ್ಲ ನೊಂದ ಜೀವಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. “ನಮಗೆ ಕರುಣೆ ಬೇಡ, ಸಮಾನತೆ ಬೇಕು. ನಾವು ಸಮಾಜದಿಂದ ಹೊರಗಿನವರಲ್ಲ; ನಾವು ಕೂಡ ಸಮಾಜ. ಲಿಂಗತ್ವ ಅಲ್ಪಸಂಖ್ಯಾತರು ಕುಟುಂಬದಿಂದ ಹೊರಗಿನವರಲ್ಲ; ನಾವೂ ಕೂಡ ಕುಟುಂಬ. ಎಲ್ಲ ಸಂಕೋಲೆಗಳಿಂದ ನಮಗೆ ಬಿಡುಗಡೆ ಬೇಕು” ಎಂಬ ಸಂದೇಶವನ್ನು ಸಾರುವ ಅಕ್ಕಯ್ ಜೀವನ ಕಥನ ಈ ಬಿಡುಗಡೆಯ ಹಾದಿಗೆ ಅಂಬೇಡ್ಕರ್ ಮಾರ್ಗವನ್ನು ಸೂಚ್ಯವಾಗಿ ಹೇಳುತ್ತ ಮುಕ್ತಾಯವಾಗುತ್ತದೆ.
ಬೇಲೂರು ರಘುನಂದನ್ ಅವರು ‘ಅಕ್ಕಯ್’ ಜೀವನವನ್ನು ಮನೋಜ್ಞವಾಗಿ ರಂಗರೂಪಕ್ಕೆ ತಂದು ನಿರ್ದೇಶಿಸಿದ್ದಾರೆ. ರಾಜ್‌ಗುರು ಹೊಸಕೋಟೆ ಹೊಸ ಅವರ ಸಂಗೀತ ನಾಟಕದ ಶಕ್ತಿಯನ್ನು ಹಿಮ್ಮಡಿಗೊಳಿಸಿದೆ. ಜಯರಾಜ್ ಹುಸ್ಕೂರು ಅವರ ಪ್ರಸಾದನ, ಎಂ.ಜಿ.ನವೀನ್ ಅವರ ಬೆಳಕು ನಾಟಕದ ಆಶಯವನ್ನು ದಾಟಿಸುವಲ್ಲಿ ಯಶಸ್ವಿಯಾಯಿತು.


***
ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಅಪಹಾಸ್ಯ ಮಾಡುವ ‘ಮಜಾಭಾರತ ಷೋ’: ಹೋರಾಟಗಾರ್ತಿ ಸೌಮ್ಯಾ
ಖಾಸಗಿ ಮನರಂಜನಾ ಮಾಧ್ಯಮವೊಂದರ ‘ಮಜಾಭಾರತ’ ಕಾಮಿಡಿ ಷೋನಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯವನ್ನು ಅಪಹಾಸ್ಯ ಮಾಡಲಾಗಿದೆ ಎಂದು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ನಾಯಕಿ ಸೌಮ್ಯಾ ಬೇಸರ ವ್ಯಕ್ತಪಡಿಸಿದರು.
ಕಾಜಾಣ ಮತ್ತು ರಂಗಪಯಣ ಸಹಯೋಗದಲ್ಲಿ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕೇತ್ರದಲ್ಲಿ ಆಯೋಜಿಸಲಾಗಿದ್ದ ಸಾಮಾಜಿಕ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿಯವರ ಜೀವನ ಆಧಾರಿತ, ಬೇಲೂರು ರಘುನಂದನ್ ನಿರ್ದೇಶನದ ‘ಅಕ್ಕಯ್’ ಏಕವ್ಯಕ್ತಿ ನಾಟಕ ಪ್ರದರ್ಶನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಮಜಾಭಾರತ ಷೋನಲ್ಲಿ ಟ್ರಾನ್ಸ್‌ಜೆಂಡರ್‌ಗಳ ವೇಷಧರಿಸಿ ಅಭಿನಯಿಸುತ್ತಾರೆ. ಒಳ್ಳೆಯ ಟಿಆರ್‌ಪಿ ಬಂದಿರುವ ಷೋ ಅದು. ಆದರೆ ಪ್ರಾಮಾಣಿಕವಾಗಿ ನೋಡಿದರೆ ನಮ್ಮ ಸಮುದಾಯದ ಕುರಿತು ಎಷ್ಟು ತಾರತಮ್ಯ ಮಾಡುತ್ತಾರೆಂಬುದು ತಿಳಿಯುತ್ತದೆ; ನಮ್ಮ ಸಮುದಾಯವನ್ನು ಎಷ್ಟು ತಾತ್ಸಾರದಿಂದ ಕಾಣುತ್ತಾರೆ ಎಂಬುದು ಕಾಣುತ್ತದೆ” ಎಂದು ವಿವರಿಸಿದರು.
“ಟ್ರಾನ್ಸ್‌ಜೆಂಡರ್ ಸಮುದಾಯದ ಕುರಿತು ಅಭಿಮಾನ, ಗೌರವವಿಲ್ಲ. ಈ ಸಮುದಾಯವನ್ನು ಮೂಲೆಗುಂಪು ಮಾಡಿದ್ದೇವೆ; ಇಂತಹ ಸಮುದಾಯವನ್ನು ಸಮಾಜವನ್ನು ಮುಖ್ಯವಾಹಿನಿಗೆ ತರಬೇಕೆಂಬ ಭಾವನೆ ಯಾರಿಗೂ ಇಲ್ಲ. ಎಲ್ಲರಿಗೂ ಮಜಾ ತಗೆದುಕೊಳ್ಳಬೇಕು, ತಮಾಷೆ ಮಾಡಬೇಕು, ಗೇಲಿ ಮಾಡಬೇಕೆಂಬ ಮನಸ್ಥಿತಿ ಇದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮಜಾ ಭಾರತ ತೀರ್ಪುಗಾರರು ಕೂಡ ತಲೆ ಬಗ್ಗಿಸಿಕೊಂಡು ನಗುತ್ತಾರೆ. ಅದೇ ರೀತಿಯಲ್ಲಿ ಇದನ್ನು ನೋಡುವ ಜನರೂ ನಗುತ್ತಾರೆ. ಎಷ್ಟು ಚೆನ್ನಾಗಿ ಅಭಿನಯಿಸುತ್ತಾನೆ ನೋಡು, ನೋಡಲಿಕ್ಕೆ ಥೇಟ್ ಹುಡುಗಿ ಥರನೇ ಇದ್ದಾನೆ ಎಂದು ಬಣ್ಣಿಸುತ್ತಾರೆ. ಅವನು ಎಲ್ಲಿಯಾದರೂ ಸಿಕ್ಕರೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಒಳ್ಳೆಯ ಆಕ್ಟಿಂಗ್ ಮಾಡ್ತೀರಿ. ನಿಮ್ಮ ಅಭಿಮಾನಿ ನಾವು ಅಂತಾರೆ. ಆದರೆ ತಮ್ಮ ಕುಟುಂಬದಲ್ಲಿನ ಒಂದು ಮಗು ಟ್ರಾನ್ಸ್‌ಜೆಂಡರ್ ಆಗಿದ್ದರೆ ಇವರು ಒಪ್ಪಿಕೊಳ್ಳುತ್ತಾರಾ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿರಿ: ಅಂಬೇಡ್ಕರ್ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್.ಡಿ ಮಾಡುತ್ತಿರುವ ಟ್ರಾನ್ಸ್‌ಜೆಂಡರ್ ಮಹಿಳೆಯ ಮನದಾಳ
“ಸಿನಿಮಾಗಳಲ್ಲೂ ನೋಡಿರುತ್ತೀರಿ. ನಮ್ಮ ಸಮುದಾಯವನ್ನು ಹಾಸ್ಯಕ್ಕಲ್ಲ, ಅಪಹಾಸ್ಯಕ್ಕೆ ಹೆಚ್ಚು ಬಳಸುತ್ತಾರೆ. ಒಂದು ಮೆಸೇಜ್ ಸಮಾಜಕ್ಕೆ ಕೊಡೋಣ ಎಂಬ ಕಾಳಜಿ ಯಾರಿಗೂ ಇಲ್ಲ. ಆದರೆ ನಿರ್ದೇಶಕ ಬೇಲೂರು ರಘುನಂದನ್ ಅವರು ಎಲ್ಲರ ರೀತಿಯಲ್ಲಿ ನಮ್ಮನ್ನು ನೋಡಿ ಒಂದು ಸ್ಮೈಲ್ ಮಾಡಿ ಯಾಕೆ ಸುಮ್ಮನಾಗಲಿಲ್ಲ? ಏಕೆ ಈ ಕಥೆಯನ್ನು ಆಯ್ಕೆ ಮಾಡಿಕೊಂಡು ನಾಟಕ ಮಾಡುತ್ತಿದ್ದೀರಿ ಎಂದು ಬೇಲೂರು ರಘುನಂದನ್ ಅವರನ್ನು ಎಷ್ಟೋ ಜನ ಕೇಳಿರುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹೋರಾಟಗಾರ್ತಿ ಕೋಲ್ಕತ್ತದ ಅನಿಂದ್ಯಾ ಹಾಜ್ರ ಮಾತನಾಡಿ, “ಸಮಾಜದಲ್ಲಿನ ವ್ಯವಸ್ಥೆ ಬದಲಾಗುವವರೆಗೂ ಲೈಂಗಿಕ ಅಲ್ಪಸಂಖ್ಯಾತರು ಹೋರಾಟ ನಡೆಸಬೇಕು. ಹೋರಾಟದ ಮೂಲಕವೇ ಪ್ರತಿರೋಧ ತೋರಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೆ ಅನುಕಂಪ ಬೇಕಾಗಿಲ್ಲ. ಘನತೆಯಿಂದ ಬದುಕುವ ಅವಕಾಶ ಕಲ್ಪಿಸಬೇಕು. ಸಮಾಜದ ಮುಖ್ಯವಾಹಿನಿಗೆ ತರಬೇಕು” ಎಂದು ಹೇಳಿದರು.

“ಲೈಂಗಿಕ ಅಲ್ಪಸಂಖ್ಯಾತರ ಬದುಕು ಮತ್ತು ಸಾವಿಗೂ ಮಾನ್ಯತೆ ಇಲ್ಲದಂತಾಗಿದೆ. ಆದರೆ ಇದನ್ನು ಬದಲಾಯಿಸಲು ಶ್ರಮಿಸಬೇಕಿದೆ. ನಮ್ಮ ಅಸ್ತಿತ್ವ ಸ್ಥಾಪನೆಗೆ ರಾಜಕೀಯ ಕ್ಷೇತ್ರವೂ ಪ್ರಮುಖ ವೇದಿಕೆಯಾಗಿದೆ. ಲೈಂಗಿಕ ಅಲ್ಪಸಂಖ್ಯಾತರನ್ನು ಒಳಗೊಳ್ಳುವಂತೆ ಸಮಾಜದ ಮನಸ್ಥಿತಿ ಬದಲಿಸಬೇಕು” ಎಂದರು.
ನಾಟಕದ ನಿರ್ದೇಶಕ ಬೇಲೂರು ರಘುನಂದನ್ ಮಾತನಾಡಿ, “ಅಕ್ಕಯ್ ಅವರ ಜೀವನದ ಕುರಿತು ಓದಿದರೆ ನಾವು ಅತ್ತು ಬಿಡುತ್ತೇವೆ. ನಮ್ಮಲ್ಲಿ ಕಣ್ಣೀರು ಬರದಿದ್ದರೆ ನಾವು ಮನುಷ್ಯರಾಗಿರುವುದಿಲ್ಲ” ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ರವೀಂದ್ರ ಭಟ್ಟ ಅವರು ಮಾತನಾಡಿ, “ಕುರುಡುನೊಬ್ಬನ ಕಷ್ಟಕ್ಕೆ ನೆರವಾಗದಿದ್ದರೆ ಸಮಾಜ ಕುರುಡಾಗಿರುತ್ತದೆಯೇ ಹೊರತು, ಹುಟ್ಟಿನಿಂದ ಕುರುಡನಾದವನು ನಿಜವಾದ ಕುರುಡನಲ್ಲ. ಹಾಗೆಯೇ ಲೈಂಗಿಕ ಅಲ್ಪಸಂಖ್ಯಾತರನ್ನು ಒಳಗೊಳ್ಳದ ಸಮಾಜ ನಾಗರಿಕವಾಗಿರುವುದಿಲ್ಲ” ಎಂದು ತಿಳಿಸಿದರು.
ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಡಾ.ಡಿ.ಡೊಮಿನಿಕ್, ಬೇಲೂರು ತಹಸೀಲ್ದಾರ್ ಉಲಿವಾಲ ಮೋಹನ್‌ಕುಮಾರ್, ಅಕ್ಕಯ್ ಪದ್ಮಶಾಲಿ ಅವರ ಸಹೋದರ ಪ್ರದೀಪ್ ವೇದಿಕೆ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದನ್ನೂ ಓದಿರಿ: ’ಕರುಣೆ ಬೇಡ, ಘನತೆಯಿಂದ ಬದುಕುವ ಹಕ್ಕು ಬೇಕು’: ರಂಗದ ಮೇಲೆ ಇಂದು ’ಅಕ್ಕಯ್’ ಕಥನ


