ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮದತ್ತಿ ಸಚಿವ ಪಿ ಕೆ ಸೇಕರ್ ಬಾಬು ಅವರ ನವವಿವಾಹಿತ ಪುತ್ರಿ ಜಯಕಲ್ಯಾಣಿ ಸೋಮವಾರ ತನ್ನ ತಂದೆಯಿಂದ ಬೆದರಿಕೆಗೆ ಒಳಗಾಗಿ ಬೆಂಗಳೂರು ನಗರ ಪೊಲೀಸರಿಂದ ರಕ್ಷಣೆ ಕೋರಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಬಾಬು ಅವರು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಆಪ್ತರಾಗಿದ್ದಾರೆ ಎಂದು ಡಿಎಚ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ವೈದ್ಯೆಯಾಗಿರುವ ಜಯಕಲ್ಯಾಣಿ ಅವರು ಕುಟುಂಬದವರ ತೀವ್ರ ವಿರೋಧದ ನಡುವೆಯೂ ಡಿಪ್ಲೊಮಾ ಪದವೀಧರರಾಗಿ ಉದ್ಯಮಿಯಾಗಿರುವ ಸತೀಶ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ.
ರಾಜ್ಯದ ವಿಜಯನಗರ ಜಿಲ್ಲೆಯ ಹಿರೇಹಡಗಲಿಯ ಹಾಲಸ್ವಾಮಿ ಮಠದಲ್ಲಿ ನಡೆದ ವಿವಾಹದ ನಂತರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಮಾತನಾಡಿರುವ ಜಯಕಲ್ಯಾಣಿ, “ಸತೀಶ್ ಮತ್ತು ನಾನು ಸುಮಾರು ಆರು ವರ್ಷಗಳಿಂದ ಸ್ನೇಹ ಹೊಂದಿದ್ದೇವೆ. ಮದುವೆಯಾಗಲು ನಮ್ಮ ಮನೆಯನ್ನು ತೊರೆದು ಬಂದಿದ್ದೇವೆ. ನಾವಿಬ್ಬರೂ ಪ್ರಾಪ್ತ ವಯಸ್ಕರಾಗಿದ್ದು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆಯ ಮಾಡಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೇಕೆದಾಟು: ಸರ್ವಪಕ್ಷ ಸಭೆಗೆ ಮುಂದಾದ ಬೊಮ್ಮಾಯಿ; ಒಂದು ಇಟ್ಟಿಗೆ ಇಡಲೂ ಬಿಡುವುದಿಲ್ಲ ಎಂದ ತಮಿಳುನಾಡು
ಸತೀಶ್ ಅವರ ಕುಟುಂಬಕ್ಕೆ ಬೆದರಿಕೆ ಹಾಕಬೇಡಿ ಎಂದು ಜಯಕಲ್ಯಾಣಿ ಅವರು ತನ್ನ ತಂದೆಯಾದ ಸಚಿವ ಪಿ.ಕೆ. ಸೇಕರ್ ಬಾಬು ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ವರದಿಯ ಪ್ರಕಾರ ಜಯಕಲ್ಯಾಣಿ ಅವರಿಗೆ 24 ವರ್ಷ, ಸತೀಶ್ ಅವರಿಗೆ 27 ವರ್ಷ ವಯಸ್ಸಾಗಿದೆ.
ಮೂಲಗಳ ಪ್ರಕಾರ ಹುಡುಗಿಯ ಮನೆಯವರು ಆಕೆಯನ್ನು ಬೇರೆ ಸಮುದಾಯದ ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಲು ಬಯಸಿದ್ದರು. ಆದರೆ ಅವರು ಸತೀಶ್ ಜೊತೆ ಮನೆಬಿಟ್ಟು ತೆರಳಿದ್ದರು. ಇದರ ನಂತರ ಚೆನ್ನೈನಲ್ಲಿ ಜಯಕಲ್ಯಾಣಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.
ವಿವಾಹ ನಡೆಸುವ ಮೊದಲು ದಂಪತಿಗಳ ವಿಚಾರಗಳನ್ನು ತಮಿಳುನಾಡಿನ ನಮ್ಮ ಮೂಲಗಳ ಮೂಲಕ ಪರಿಶೀಲಿಸಿದ್ದೇವೆ ಎಂದು ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮಿ ಅವರು ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.
“ನಾವು ಪ್ರೇಮ ವಿವಾಹಗಳನ್ನು ಬೆಂಬಲಿಸುವುದಿಲ್ಲ. ಆದರೆ ವೈದ್ಯೆಯಾಗಿರುವ ಕಲ್ಯಾಣಿ ತನ್ನ ಒಪ್ಪಿಗೆಯ ವಿರುದ್ಧ ಮದುವೆಯಾಗಲು ನಿರಾಕರಿಸಿ ತನ್ನ ಮನೆಯನ್ನು ತೊರೆದಿದ್ದಾರೆ. ಸತ್ಯಾಂಶ ತಿಳಿದುಕೊಂಡ ನಂತರವೇ ಹಿಂದೂ ಸಂಪ್ರದಾಯದಂತೆ ಮದುವೆ ನಡೆಸಿದ್ದೇವೆ” ಎಂದು ಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾತನಾಡಿ, ಸಚಿವರ ಮಗಳು ರಕ್ಷಣೆ ಕೋರಿ ಇದುವರೆಗೆ ಅವರನ್ನು ಅಥವಾ ಅವರ ಕಚೇರಿಯನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡು ಪೊಲೀಸರು ತಮಗೆ ಸಹಾಯ ಮಾಡಿಲ್ಲ ಎಂದು ಜಯಕಲ್ಯಾಣಿ ಆರೋಪಿಸಿದ್ದಾರೆ. ಡಿಎಂಕೆ ಸರ್ಕಾರದಲ್ಲಿ ಸಚಿವರಾಗಿರುವ ತನ್ನ ತಂದೆ ತನಗೆ ಬೆದರಿಕೆ ಹಾಕಲು ಸಚಿವ ಸ್ಥಾನವನ್ನು ಬಳಸುತ್ತಿದ್ದಾರೆ, ಹೀಗಾಗಿ ಅವರು ಪೊಲೀಸರ ಬೆಂಬಲವನ್ನು ಕೋರಿ ಬೆಂಗಳೂರಿಗೆ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು-ನ್ಯೂಸ್18ಗೆ ಮಾಜಿ ಸಿಎಂ ಪಳನಿಸ್ವಾಮಿಯಿಂದ ಲೀಗಲ್ ನೋಟಿಸ್


