ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ನ್ಯೂಸ್18 ಮಾಧ್ಯಮ ಗುಂಪಿಗೆ ಲೀಗಲ್ ನೋಟೀಸ್ ಕಳುಹಿಸಿದ್ದು, ಮಾರ್ಚ್ 7ರಂದು ಪ್ರಕಟವಾದ ಸುದ್ದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 7ರಂದು ‘ಶಶಿಕಲಾ ಒಗ್ಗಟ್ಟಿನ ಬಿಕ್ಕಟ್ಟು… ಪಳನಿಸ್ವಾಮಿ ಪ್ರತ್ಯೇಕ ಪಕ್ಷವನ್ನು ಆರಂಭಿಸುತ್ತಿದ್ದಾರೆಯೇ?’ ಎಂಬ ಶೀರ್ಷಿಕೆಯ ಸುದ್ದಿಯನ್ನು ಪ್ರಕಟಿಸಿದ್ದಕ್ಕಾಗಿ ನ್ಯೂಸ್ 18 ಮಾಧ್ಯಮ ಗುಂಪಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ವರದಿಯು ಸುಳ್ಳು, ಕ್ಷುಲ್ಲಕ ಮತ್ತು ಅವಹೇಳನಕಾರಿಯಾಗಿದೆ ಎಂದು ಪಳನಿಸ್ವಾಮಿ ಆರೋಪಿಸಿದ್ದು, ಟಿವಿ 18 ಬ್ರಾಡ್‌ಕಾಸ್ಟ್ ಲಿಮಿಟೆಡ್ ಮತ್ತು ನ್ಯೂಸ್ 18ಗೆ ಸೂಚನೆಯನ್ನು ನೀಡಲಾಗಿದೆ. ಈ ಸುದ್ದಿಯನ್ನು ‘ನ್ಯೂಸ್ 18 ತಮಿಳು ವೆಬ್‌ಸೈಟ್’ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯು ಪಕ್ಷದ (ಎಐಎಡಿಎಂಕೆ) ಕಾರ್ಯಕರ್ತರಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದ ಕೂಡಿದೆ. ಸುದ್ದಿಯನ್ನು ಪ್ರಕಟಿಸುವ ಮೊದಲು, ಸುದ್ದಿಯ ಸತ್ಯಾಸತ್ಯೆಯನ್ನು ಸಂಬಂಧಪಟ್ಟರಿಂದ ಪರಿಶೀಲಿಸಲಾಗಿಲ್ಲ ಎಂದು ಆಕ್ಷೇಪಿಸಲಾಗಿದೆ. ಸಂಸ್ಥೆಯು ಎಚ್ಚರಿಕೆ ವಹಿಸದೆ ಪಳನಿಸ್ವಾಮಿಯವರ ಪ್ರತಿಷ್ಠೆಗೆ ತೊಂದರೆಯುಂಟು ಮಾಡಿದೆ ಎಂದು ದೂರಲಾಗಿದೆ.
ಪಳನಿಸ್ವಾಮಿ ಅವರು ತಮ್ಮ ನೋಟಿಸ್‌ನಲ್ಲಿ, ಸುದ್ದಿಯಲ್ಲಿನ ಹಲವಾರು ವಿಷಯಗಳತ್ತ ಬೆರಳು ತೋರಿಸಿದ್ದಾರೆ. “ಪಕ್ಷದ ಕಾರ್ಯಕರ್ತರಲ್ಲಿ, ಸಾರ್ವಜನಿಕರ ಮನಸ್ಸಿನಲ್ಲಿ ಈ ಸುದ್ದಿಯು ಗೊಂದಲ ಮೂಡಿಸಿದೆ. ನನಗೆ ಹಾಗೂ ಪಕ್ಷದ ಪ್ರತಿಷ್ಠೆಗೆ ಅಡ್ಡಿಪಡಿಸಿದೆ” ಎಂದಿದ್ದಾರೆ.
“ಅವಹೇಳನಕಾರಿ, ಆಧಾರ ರಹಿತ ಸುದ್ದಿ ಪ್ರಕಟಿಸಿದ್ದಕ್ಕಾಗಿ ಕ್ಷಮೆಯಾಚಿಸಬೇಕು. ತಮ್ಮ ಎಲ್ಲಾ ಚಾನೆಲ್, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಸುದ್ದಿಯನ್ನು ತೆಗೆದುಹಾಕಬೇಕು, ಬೇರೆ ಮಾಧ್ಯಮಗಳು ಈ ಸುದ್ದಿಯನ್ನು ಉಲ್ಲೇಖಿಸುವುದನ್ನು ತಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ನ್ಯೂಸ್ 18 ಸಂಸ್ಥೆಯು ಒಂದು ವೇಳೆ ಈ ಕೆಲಸವನ್ನು ಮಾಡುವಲ್ಲಿ ವಿಫಲವಾದಲ್ಲಿ ಮುಂದೆ ಯಾವುದೇ ಸೂಚನೆ ನೀಡದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಳನಿಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಪಳನಿಸ್ವಾಮಿ ಪರ ವಕೀಲ ಎಸ್‌ಆರ್ ರಾಜಗೋಪಾಲ್ ಅವರು ನೋಟಿಸ್ ಕಳುಹಿಸಿದ್ದಾರೆ.
அனைத்திந்திய அண்ணா திராவிட முன்னேற்றக் கழக இணை ஒருங்கிணைப்பாளர் மாண்புமிகு எடப்பாடி கே.பழனிசாமி அவர்களை குறித்து விஷம நோக்கத்துடன் ட்விட்டரில் அவதூறு பதிவை 7.3.2022 அன்று வெளியிட்ட நியூஸ் 18 தமிழ் செய்தி நிறுவனம் @News18TamilNadu உடனடியாக மன்னிப்பு கோர வேண்டும் என்றும், pic.twitter.com/iA0IvN8Ubz
— AIADMK (@AIADMKOfficial) March 8, 2022
ನ್ಯೂಸ್18 ಸಂಸ್ಥೆಗಿದೆ ಕ್ಷಮೆಯಾಚಿಸಿದ ಇತಿಹಾಸ
ನ್ಯೂಸ್18 ಸಂಸ್ಥೆಯ ಕನ್ನಡ ಆವೃತ್ತಿಯು ಈ ಹಿಂದೆ ಕ್ಷಮೆಯಾಚಿಸಿತ್ತು. ಕೊರೊನಾ ಒಂದನೆ ಅಲೆಯ ಸಮಯದಲ್ಲಿ ‘ತಬ್ಲೀಘಿ ಜಮಾಅತ್’ ವಿರುದ್ದ ಅಪಪ್ರಚಾರ ಮಾಡಿದ್ದಕ್ಕೆ ‘ನ್ಯೂಸ್ 18 ಕನ್ನಡ’ ಚಾನೆಲ್ ಕ್ಷಮೆ ಕೇಳಿತ್ತು. ಕೊರೊನಾ ಹರಡುವಿಕೆಗೆ ‘ಒಂದು ಸಮುದಾಯ ಕಾರಣ’ ಎಂಬಂತೆ ಬಿಂಬಿಸಿ ಹಲವು ಚಾನೆಲ್‌ಗಳು ದ್ವೇಷ ಹರಡಿದ್ದವು. ಈ ಚಾನೆಲ್‌ಗಳ ವಿರುದ್ದ, ಬೆಂಗಳೂರು ಮೂಲದ ‘ಹೇಟ್ ಸ್ಪೀಚ್ ಬೇಡ’ ಎಂಬ ದ್ವೇಷ ಭಾಷಣಗಳ ವಿರುದ್ದ ಅಭಿಯಾನದ ತಂಡವು ನಡೆಸಿದ ಹೋರಾಟಕ್ಕೆ ಗೆಲುವು ದೊರೆತ್ತಿತ್ತು.
‘ಹೇಟ್ ಸ್ಪೀಚ್ ಬೇಡ’ ಅಭಿಯಾವು NBSA ಗೆ ದೂರುಗಳನ್ನು ಸಲ್ಲಿಸಿ, ಏಪ್ರಿಲ್ 1, 2020 ರಂದು ತಬ್ಲಿಘಿ ಜಮಾಅತ್ ಬಗ್ಗೆ ‘ನ್ಯೂಸ್ 18 ಕನ್ನಡ’ ಪ್ರಸಾರ ಮಾಡಿದ ಎರಡು ಕಾರ್ಯಕ್ರಮಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ದೂರಿನ ವಿಚಾರಣೆ ನಡೆಸಿದ್ದ NBSA, ವಿವಾದಾತ್ಮಕ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕೆ ನ್ಯೂಸ್ 18 ಕನ್ನಡಕ್ಕೆ 1 ಲಕ್ಷ ದಂಡ ವಿಧಿಸಿತ್ತು. ಅಲ್ಲದೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜೂನ್ 23 ರಂದು ರಾತ್ರಿ 9 ಗಂಟೆಯ ಸುದ್ದಿಗೆ ಮುಂಚಿತವಾಗಿ ಕ್ಷಮೆಯಾಚಿಸುವುದನ್ನು ಪ್ರಸಾರ ಮಾಡಬೇಕು ಎಂದು ಚಾನೆಲ್‌ಗೆ ನಿರ್ದೇಶನ ನೀಡಿತ್ತು. ಜೊತೆಗೆ ಎಲ್ಲಾ ವೆಬ್ ಪೋರ್ಟಲ್‌ಗಳಿಂದ ಎರಡು ಕಾರ್ಯಕ್ರಮಗಳ ವೀಡಿಯೊಗಳನ್ನು ತೆಗೆಯುವಂತೆ ಆದೇಶಿಸಿತ್ತು.
ಅದು ತನ್ನ ವಿಷಾದ ಸಂದೇಶದಲ್ಲಿ, “ನ್ಯೂಸ್18 ಕನ್ನಡವು 1-4-2020 ರಂದು ಪ್ರಸಾರ ಮಾಡಿದ ‘ದೇಶಕ್ಕೆ ಕೊರೊನಾ ವೈರಸ್ ಹಬ್ಬಿಸಿದ ದೆಹಲಿ ನಿಝಾಮುದ್ದೀನ್ ಹೇಗಿದೆ ಗೊತ್ತಾ?’ ಮತ್ತು ‘ಕರ್ನಾಟಕದಿಂದ ದೆಹಲಿಯ ಜಮಾಅತ್ ಸಭೆಗೆ ಹೋದವರ ಸಂಖ್ಯೆ ಎಷ್ಟು?’ ಎಂಬ ಎರಡು ವರದಿಗಳನ್ನು ಪ್ರಸಾರ ಮಾಡಿದ್ದು, ನೀತಿ ಸಂಹಿತೆ ಹಾಗೂ ಪ್ರಸಾರ ಮತ್ತು ಗುಣಮಟ್ಟದ ಪ್ರಕಾರ ಪ್ರಸಾರ ಮಾಧ್ಯಮ ಪಾಲಿಸಬೇಕಾದ ನಿಷ್ಪಕ್ಷತೆ, ವಸ್ತುನಿಷ್ಠತೆ ಹಾಗೂ ತಟಸ್ಥತೆ ಕಾಪಾಡಿಕೊಳ್ಳುವುದರಲ್ಲಿ ನಾವು ನಿಯಮ ಉಲ್ಲಂಘಿಸಿದ್ದು, ಈ ಕಾರ್ಯಕ್ರಮ ಪ್ರಸಾರವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇವೆ” ಎಂದು ಹೇಳಿತ್ತು.
ಇದನ್ನೂ ಓದಿರಿ: ಮೇಕೆದಾಟು: ಸ್ಟಾಲಿನ್ ಸರ್ವಪಕ್ಷ ಸಭೆ ಕರೆಯಲಿ- ಕೇಂದ್ರ ಮಾಜಿ ಸಚಿವ ಒತ್ತಾಯ


