ಇತ್ತೀಚೆಗೆ ಪಕ್ಷಾಂತರದ ಜೊತೆಗೆ ಸಿದ್ಧಾಂತರವೂ ಆಗಿರುವ ಸಚಿವ ಸುಧಾಕರ್ ಅವರು ’ಬೌದ್ಧ ಧರ್ಮದ ಅಪಾಯದಿಂದ ಭಾರತವನ್ನು ಬ್ರಾಹ್ಮಣರು ರಕ್ಷಿಸಿದರು’ ಎಂಬ ಸಾವರ್ಕರ್ ಚಿಂತನೆಯನ್ನು ದಲಿತ ಸಂಘರ್ಷ ಸಮಿತಿಯ ಭದ್ರಕೋಟೆಯಲ್ಲೊಂದಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಪ್ರಚಾರ ಮಾಡಿದ್ದಾರೆ. ಅವರ ಬೇಜವಾಬ್ದಾರಿ ಮಾತಿನ ವಿರುದ್ಧ ಪ್ರತಿಭಟನೆಗಳು ಬಂದೊಡನೆಯೇ ಯಥಾಪ್ರಕಾರ ’ತಿರುಚಿದ’ ಕಂಠಪಾಠವನ್ನು ಒಪ್ಪಿಸಿ ಮತ್ತೊಂದು ಸುಳ್ಳನ್ನು ಹೇಳಿ ಮತ್ತೆ ದಲಿತ ಸಂಘರ್ಷ ಸಮಿತಿ, ಬೌದ್ಧರು, ಪ್ರಗತಿಪರರು ಹಾಗೂ ಅಂಬೇಡ್ಕರ್‌ವಾದಿಗಳ ಕೆಂಗಣ್ಣಿಗೆ ತುತ್ತಾಗಿದ್ದಾರೆ. ’ಬುದ್ಧ ವಿಷ್ಣುವಿನ ಅವತಾರ’ ಎಂಬ ಬ್ರಾಹ್ಮಣವಾದಿಗಳ ಸುಳ್ಳನ್ನು ಹೇಳಿ ಪೇಚಿಗೆ ಸಿಲುಕಿಕೊಂಡಿದ್ದಾರೆ.
2002ರ ಗುಜರಾತಿನ ಗೋದ್ರಾ ಹತ್ಯಾಕಾಂಡದ ಬಳಿಕ ಬಿಜೆಪಿಯ ಎಲ್ಲರಿಗೂ ನರೇಂದ್ರ ಮೋದಿಯವರು ಮಾದರಿ ನಾಯಕರಾಗಿದ್ದರು. ಮುಂದೆ ಅವರು ಪ್ರಧಾನಿಯಾದದ್ದು ಇನ್ನಷ್ಟು ಇಂಬು ನೀಡಿತು. ಅದಾದ ಬಳಿಕ ಈಗ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿ ಪುರುಷರಾಗಿದ್ದಾರೆ. ಬಿಜೆಪಿಯಲ್ಲಿರುವ ಪ್ರತಿಯೊಬ್ಬ ನಾಯಕರಿಗೂ ’ಕ್ರೌರ್ಯವೇ’ ಮಾನದಂಡವಾಗಿದೆ. ಯಾರು ಮುಸ್ಲಿಮರ, ಕ್ರೈಸ್ತರ ಹಾಗೂ ದಲಿತರ ವಿರುದ್ಧ ಹೆಚ್ಚು ಕ್ರೂರವಾಗಿ ನಡೆದುಕೊಳ್ಳುತ್ತಾರೋ ಅಷ್ಟು ನಾಗಪುರದ ಆರೆಸ್ಸೆಸ್ ಕಚೇರಿಗೆ ಹತ್ತಿರವಾಗುತ್ತಾರೆ. ಯಾರು ಎಷ್ಟು ಹೆಚ್ಚು ’ದ್ವೇಷ ಭಾಷಣ’ ಮಾಡುತ್ತಾರೋ ಅಷ್ಟು ಆರೆಸ್ಸೆಸ್ ಸರಸಂಚಾಲಕರ ಕಣ್ಣಿಗೆ ಗೋಚರವಾಗುತ್ತಾರೆ. ಈ ಸ್ಪರ್ಧೆಯಲ್ಲಿ ನಾಮುಂದು ತಾಮುಂದು ಎಂದು ಬಿಜೆಪಿಯ ರಾಜಕಾರಣಿಗಳಲ್ಲಿ ಪೈಪೋಟಿ ಏರ್ಪಟ್ಟಿರುವ ಕಾರಣ ಸಚಿವ ಸುಧಾಕರ್ ಬಾಯಲ್ಲಿ ಇಂತಹ ಮಾತುಗಳು ಮೂಡಿಬಂದಿವೆ. ಅವರ ಮಾತುಗಳು ಯಾರನ್ನು ಮೆಚ್ಚಿಸಲು ಹೊರಟಿವೆ ಎಂದು ಮೂಲವನ್ನು ಹುಡುಕುತ್ತಾ ಹೋದರೆ ಅದು ನಾಗಪುರದ ಆರೆಸ್ಸೆಸ್ ಕಚೇರಿ ಬಾಗಿಲ ಮೆಟ್ಟಿಲ ಬಳಿ ಹೋಗಿ ನಿಲ್ಲುತ್ತದೆ.
ಮೊದಲಿಗೆ ಬೌದ್ಧ ಧರ್ಮ ಒಡ್ಡಿದ್ದ ಅಪಾಯದಿಂದ ಭಾರತವನ್ನು ಬ್ರಾಹ್ಮಣರು
ಕಾಪಾಡಿದರು ಎಂಬ ಸುಳ್ಳಿನ ವಿಚಾರಕ್ಕೆ ಬರೋಣ. ಆರ್ಯರ ಆಗಮನದಿಂದಾಗಿ ಭಾರತ ಚಾತುರ್ವರ್ಣ ಪದ್ಧತಿಯೆಡೆಗೆ ನಂತರ ಪುರುಷಪ್ರಧಾನ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆ ಕಡೆಗೆ ನಡೆಯಿತು. ಬಹುಶಃ ಆರ್ಯರು ಬರದಿದ್ದರೆ ಇಂದಿನ ಭಾರತ ಹೀಗೆ ಜಾತಿಪದ್ಧತಿಗಳಿಂದ ಛಿದ್ರಗೊಂಡಿರುತ್ತಿರಲಿಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅವರು ಆರ್ಯರು ರಚಿಸಿದ ವೇದಗಳನ್ನು ಅಧ್ಯಯನ ಮಾಡಿ (ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ) ಆರ್ಯ ಸಮಾಜದಲ್ಲಿದ್ದ ಅನೀತಿಗಳನ್ನು ಬಯಲಿಗೊಳಿಸುತ್ತಾರೆ. ಅವುಗಳಲ್ಲಿ ಪ್ರಮುಖವಾದವುಗಳು 1. ಆರ್ಯರ ರಾಜರುಗಳು ಜೂಜುಕೋರರಾಗಿದ್ದರು. ಅವರಲ್ಲಿ ಜೂಜಿನ ಹುಚ್ಚು ಅದೆಷ್ಟಿತ್ತೆಂದರೆ ತಮ್ಮ ಇಡೀ ರಾಜ್ಯವನ್ನೇ ಪಣಕ್ಕಿಡುತ್ತಿದ್ದರು. ಅಷ್ಟೇ ಅಲ್ಲ ಸ್ವತಃ ಹೆಂಡತಿಯನ್ನೇ ಜೂಜಿಗಿಡುವರಾಗಿದ್ದರು; 2. ಆರ್ಯರು ಮದವ್ಯಸನಿಗಳಾಗಿದ್ದರು. ಗಂಡಸರ ಜೊತೆಗೆ ಹೆಂಗಸರೂ ಕುಡಿಯುತ್ತಿದ್ದರು. ಸೋಮ ಮತ್ತು ಸುರಾ ಮದವನ್ನು ಕುಡಿಯಲೆಂದೇ ಕೆಲವು ಯಜ್ಞಗಳನ್ನು ಮಾಡುತ್ತಿದ್ದರು; 3. ಆರ್ಯರಲ್ಲಿ ಅಣ್ಣ-ತಂಗಿ, ತಂದೆ-ಮಗಳು, ಅಜ್ಜ-ಮೊಮ್ಮಕ್ಕಳ ಮದುವೆಗೆ ಸಮ್ಮತಿ ಇತ್ತು; 4. ಆರ್ಯರಲ್ಲಿ ಬಹುಪತಿತ್ವ ಆಚರಣೆಯಿತ್ತು. ಅಪ್ಪ ಮತ್ತು ಮಗ ಇಬ್ಬರೂ ತಮ್ಮ ಮಕ್ಕಳು ಮೊಮ್ಮಕ್ಕಳನ್ನೇ ಮದುವೆಯಾಗುತ್ತಿದ್ದರು; 5. ಆರ್ಯರಲ್ಲಿ ಬಯಲು ಸಂಭೋಗವಿತ್ತು. ಹಲವು ಯಜ್ಞಗಳು ನಡೆಯುವಾಗ ಯಜ್ಞ ನಡೆಸುವ ರಾಜನ ರಾಣಿಯರೊಂದಿಗೆ ಋಷಿಗಳೇ ಬಯಲಲ್ಲಿ ಸಂಭೋಗಿಸುತ್ತಿದ್ದರು; 6. ಆರ್ಯರು ತಮ್ಮ ಹೆಣ್ಣು ಮಕ್ಕಳನ್ನು ಸಂತಾನಕ್ಕಾಗಿ ಬಾಡಿಗೆಗೆ ಕೊಡುತ್ತಿದ್ದರು. ಮಕ್ಕಳನ್ನು ಹಡೆದ ನಂತರ ತಂದೆಯ ಬಳಿಗೆ ಮರಳುತ್ತಿದ್ದರು; 7. ಆರ್ಯರಲ್ಲಿನ ದೇವಗಣಕ್ಕೆ ತಮ್ಮ ಹೆಣ್ಣುಮಕ್ಕಳನ್ನು ಉತ್ತಮ ಸಂತಾನಕ್ಕಾಗಿ ಕೊಡುವ ಪದ್ಧತಿ ಇತ್ತು; 8. ಆರ್ಯರಲ್ಲಿ ಪ್ರಾಣಿಗಳನ್ನು ಸಂಭೋಗಿಸುವ ಪದ್ಧತಿ ಇತ್ತು. ಯಜ್ಞಗಳಲ್ಲಿ ಕುದುರೆ, ಜಿಂಕೆಗಳನ್ನು ಸಂಭೋಗಿಸುತ್ತಿದ್ದರು; 9. ಆರ್ಯರು ಯಜ್ಞಗಳಲ್ಲಿ ನರಬಲಿ ನೀಡುತ್ತಿದ್ದರು; 10. ಆರ್ಯರು ಚಾತುರ್ವರ್ಣ ಪದ್ಧತಿಯನ್ನು ಆಚರಿಸುತ್ತಿದ್ದರು; ಇವಿಷ್ಟು ಆರ್ಯರಲ್ಲಿದ್ದ ಅಸಹ್ಯಕರ ಪದ್ಧತಿಗಳಲ್ಲಿ ಕೆಲವು.
ಈ ಪದ್ಧತಿಗಳಲ್ಲಿ ಆರ್ಯರಲ್ಲಿನ ಬ್ರಾಹ್ಮಣರು ಮತ್ತು ಕ್ಷತ್ರಿಯರು ಮುಖ್ಯವಾಗಿ ಭಾಗವಹಿಸುತ್ತಿದ್ದರು. ಇಂತಹ ನೀಚ ಪದ್ಧತಿಗಳನ್ನು ಬುದ್ಧ ಗುರು ಖಂಡಿಸಿ ವಿರೋಧಿಸಿದ್ದರು. ಇದಕ್ಕೆ ಪರ್ಯಾಯವಾದಂತಹ ಸಿದ್ಧಾಂತವನ್ನು ರೂಪಿಸಿ ಸಂಘ ಕಟ್ಟಿದರು. ಜ್ಞಾನ, ಕರುಣೆ, ಶೀಲ ಮತ್ತು ಮೈತ್ರಿಯೇ ಧರ್ಮದ ಮುಖ್ಯ ವಿಷಯಗಳು. ಮನುಷ್ಯರು ಮತ್ತು ಮನುಷ್ಯರ ನಡುವಿನ ಉತ್ತಮ ಸ್ನೇಹವೇ ಧರ್ಮ. ಧರ್ಮದ ಕೇಂದ್ರ ಬಿಂದು ನೈತಿಕತೆಯೇ ಹೊರತು ದೇವರಲ್ಲ ಎಂದು ಭೋಧಿಸಿದರು. ಮನುಷ್ಯರಲ್ಲಿ ಭೇದವಿಲ್ಲ ಎಲ್ಲರೂ ಸಮಾನರು ಎಂದು ಸಾರಿದರು. ಈಗ ಹೇಳಿ ಆರ್ಯರ ವೈದಿಕ-ಬ್ರಾಹ್ಮಣ ಧರ್ಮ ಭಾರತಕ್ಕೆ ಅಪಾಯವಾಗಿತ್ತೋ? ಬುದ್ಧ ಗುರುವಿನ ಬೌದ್ಧ ಧಮ್ಮ ಭಾರತಕ್ಕೆ ಅಪಾಯವಾಗಿತ್ತೋ?
ಈಗ ಎರಡನೆಯ ವಿಚಾರಕ್ಕೆ ಬರೋಣ. ಅದು ಬುದ್ಧ ಗುರು ವಿಷ್ಣುವಿನ ಅವತಾರ ಎಂಬ ಸುಳ್ಳು. ಈ ವಾದವನ್ನು ಬಹಳ ಸುಲಭವಾಗಿ ಹೊಡೆದುರುಳಿಸಬಹುದು. ಬುದ್ಧ ಗುರು ಜನಿಸಿದ್ದು ಕ್ರಿ.ಪೂ 6ನೇ ಶತಮಾನದಲ್ಲಿ; ವಿಷ್ಣುವಿನ ಅವತಾರಗಳು ಪ್ರಸ್ತಾಪವಾಗುವುದು ಕ್ರಿ.ಶ 4ನೇ ಶತಮಾನದ ನಂತರ ರಚಿತವಾದ ಪುರಾಣಗಳಲ್ಲಿ. ಡಾನಿಗರ್ ಅವರ ಪ್ರಕಾರ ಕ್ರಿ.ಶ 4-5ರಲ್ಲಿ ರಚನೆಯಾದ ವಿಷ್ಣು ಪುರಾಣದಲ್ಲಿ ಮೊದಲು ಬುದ್ಧಗುರುವನ್ನು ವಿಷ್ಣುವಿನವತಾರಕ್ಕೆ ಸೇರಿಸಿಕೊಳ್ಳಲಾಯಿತು. ಕ್ರಿ.ಶ 8ನೇ ಶತಮಾನದಲ್ಲಿ ಪ್ರಚಾರಗೊಂಡ ಭಾಗವತ ಪಂಥದಲ್ಲಿ ವಿಷ್ಣುವಿನ ಅವತಾರ ಕಲ್ಪನೆಗೆ ಹೆಚ್ಚು ಒತ್ತು ಕೊಡಲಾಗಿದೆ. ಇದಕ್ಕೂ ಮುಂಚಿನ ಬೌದ್ಧ ಸಾಹಿತ್ಯವಾಗಲೀ, ಜೈನ ಸಾಹಿತ್ಯವಾಗಲೀ ಅಷ್ಟೇ ಏಕೆ ಬ್ರಾಹ್ಮಣ ಸಾಹಿತ್ಯದಲ್ಲೆಲ್ಲಿಯೂ ವಿಷ್ಣುವಿನ ಅವತಾರದ ಮಾತೇ ಬರುವುದಿಲ್ಲ.
ಹಿಂದೂ ಧರ್ಮ ಹಾಗೂ ಬೌದ್ಧ ಧಮ್ಮಗಳ ತಾತ್ವಿಕತೆಯಲ್ಲಿರುವ ಭಿನ್ನತೆಗಳೂ ಸಹ ಬುದ್ಧ ಗುರು ವಿಷ್ಣುವಿನ ಅವತಾರವಲ್ಲ ಎಂದೇ ಸಾಬೀತು ಪಡಿಸುತ್ತವೆ.

ಈ ಮೇಲಿನ ಅಂಶಗಳಿಂದ ಹಿಂದೂ ಧರ್ಮಕ್ಕೂ ಬೌದ್ಧ ಧರ್ಮಕ್ಕೂ ಸಾಮ್ಯತೆಗಳಿರಲಿ ಎರಡೂ ತದ್ವಿರುದ್ಧವಾದದ್ದೆಂದು ತಿಳಿಯುತ್ತದೆ. ಹೀಗಿರುವಾಗ ಬುದ್ಧ ಗುರು ಹಿಂದೂ ದೇವರಾಗಲು ಹೇಗೆ ಸಾಧ್ಯ?
ಮತ್ತೊಂದು ಆಶ್ಚರ್ಯಕರ ವಿಚಾರವೆಂದರೆ ಸ್ವತಃ ಪುರಾಣಗಳಲ್ಲಿಯೇ ವಿಷ್ಣುವಿನ ಅವತಾರಗಳ ಸಂಖ್ಯೆಗಳಲ್ಲಿ ಒಮ್ಮತವಿಲ್ಲ. ಇದರ ಬಗ್ಗೆ ಬಹಳ ಹಿಂದೆಯೇ ಡಾ. ಬಿ. ಆರ್. ಅಂಬೇಡ್ಕರ್‌ರವರು ಪುರಾಣಗಳನ್ನು ಸಂಶೋಧಿಸಿ ವಿಷ್ಣುವಿನ ಮೇಲೆ ಆರೋಪಿಸಿದ್ದು ಕೇವಲ ಹತ್ತು ಅವತಾರಗಳಲ್ಲ ಅದಕ್ಕಿಂತಲೂ ಹೆಚ್ಚು ಎಂದು ನಿರೂಪಿಸಿದ್ದಾರೆ. ಅಂಬೇಡ್ಕರರು ತಮ್ಮ ’ಹಿಂದೂ ಧರ್ಮದ ಒಗಟುಗಳು’ ಕೃತಿಯಲ್ಲಿ ’ತ್ರಿಮೂರ್ತಿಗಳ ಒಗಟು’ ಎಂದು ಚರ್ಚಿಸುತ್ತಾ ವಿಷ್ಣುವಿನ ಅವತಾರಗಳು ಹತ್ತಲ್ಲ ಅವು ಅಸಂಖ್ಯವೆಂದು ತೋರಿಸಿಕೊಟ್ಟಿದ್ದಾರೆ. ಅವರು ಊಳಿಗಮಾನ್ಯ ಕಾಲದಲ್ಲಿ ರಚಿತವಾದ ಪುರಾಣಗಳಿಂದಲೇ ಸಾಕ್ಷಿಗಳನ್ನು ನೀಡುತ್ತಾರೆ. (ಸಂಪುಟ 3, 646). ಹರಿವಂಶದ ಪ್ರಕಾರ ವಿಷ್ಣುವಿನ ಅವತಾರಗಳು 6, ನಾರಾಯಣೀ ಆಖ್ಯಾನ 10, ವರಾಹ ಪುರಾಣ 10, ವಾಯುಪುರಾಣ 12 ಹಾಗೂ ಭಾಗವತ ಪುರಾಣದಲ್ಲಿ 21 ವಿಷ್ಣುವಿನ ಅವತಾರಗಳನ್ನು ನಮೂದಿಸಿರುವುದನ್ನು ಬಯಲು ಮಾಡುತ್ತಾರೆ. ಜೊತೆಗೆ ಅವತಾರಗಳು ಶಿವನದ್ದೂ ಇವೆ. ಶಕ್ತಿ ದೇವತೆಗಳದ್ದೂ ಇವೆ.
ಹಾಗಾಗಿ ಸ್ವತಃ ಪುರಾಣಗಳಲ್ಲಿಯೇ ವಿಷ್ಣುವಿನ ಅವತಾರದ ಬಗ್ಗೆ ಒಮ್ಮತವಿಲ್ಲ ಹಾಗೂ ಅವತಾರ ಕಲ್ಪನೆ ಹೊತ್ತ ಏಕೈಕ ದೇವತೆ ವಿಷ್ಣು ಅಲ್ಲ. ಆದಕಾರಣ ಬುದ್ಧ ಗುರುವನ್ನು ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿಸಿಕೊಂಡಿರುವುದು ಬೌದ್ಧರನ್ನೂ ಹಾಗೂ ಬೌದ್ಧ ವಿಹಾರಗಳನ್ನು ಹಿಂದೂ ಧರ್ಮದ ಭಾಗವಾಗಿಸಿಕೊಳ್ಳಲು ಹೊರಟಿರುವ ಹುನ್ನಾರವಷ್ಟೆ. ಈ ಭಾಗವಾಗಿಯೇ ದೇಶದ ಹಲವು ಬುದ್ಧ ವಿಹಾರಗಳು ಇಂದು ವಿಷ್ಣು ದೇಗುಲಗಳಾಗಿವೆ. ಶಿವದೇಗುಲಗಳಾಗಿವೆ.

ಈ ವಿದ್ಯಮಾನ ಕೇವಲ ಬೌದ್ಧರಿಗೆ ಸೀಮಿತವಾದದ್ದಲ್ಲ. ’ಅವತಾರಗಳು’ ಎಂಬ ಕಲ್ಪನೆಯಿಂದ ಬ್ರಾಹ್ಮಣ ಧರ್ಮವು ಭಾರತದ ಹಲವು ಬುಡಕಟ್ಟು, ಅಲೆಮಾರಿ, ದಕ್ಷಿಣ-ಪಶ್ಚಿಮ-ಪೂರ್ವ ಭಾರತದ ಜನ ಸಮುದಾಯಗಳ ದೈವಗಳನ್ನು ತನ್ನದಾಗಿಸಿಕೊಂಡು ಹಿಂದೂ ಧರ್ಮವಾಗಿದೆ. ಬ್ರಾಹ್ಮಣ ಧರ್ಮವು ಬೌದ್ಧ ಧರ್ಮದ ಕ್ರಾಂತಿಯ ಪರಿಣಾಮವಾಗಿ ನಿರ್ನಾಮವಾಗುತ್ತಿದ್ದ ಸಂದರ್ಭದಲ್ಲಿ ಕೃಷಿಯ ವಿಸ್ತರಣೆಯ ಭಾಗವಾಗಿ ಆರ್ಯವರ್ತದಿಂದ ಭಾರತದ ಬೇರೆಬೇರೆ ಭಾಗಗಳಿಗೆ ಹೊರಡಿ ತನ್ನ ಯಜ್ಞ-ಯಾಗಾದಿ ಆಚರಣೆಗಳೆಲ್ಲವನ್ನೂ ತೊರೆದು, ಈ ಮೇಲೆ ತಿಳಿಸಿದ ಬುಡಕಟ್ಟು ಸಮುದಾಯಗಳೊಂದಿಗೆ ಸಂಘರ್ಷ-ಸಮ್ಮಿಲನ ಹೊಂದಿ ಅವರ ಪೂಜಾ ವಿಧಾನಗಳನ್ನು ನವೀಕರಿಸಿಕೊಂಡು ಇಂದು ಹಿಂದೂ ಧರ್ಮವಾಗಿದೆ. ಈ ವಿದ್ಯಮಾನದ ಭಾಗವಾಗಿ ಪ್ರತಿಯೊಂದು ಅವತಾರಕ್ಕೂ ಕಲ್ಪಿತ ಕತೆಗಳನ್ನು ಹೆಣೆಯಲಾಗಿದೆ. ಅವೇ ಪುರಾಣಗಳು. ಇಂದ್ರ, ವರುಣ, ಅಗ್ನಿ, ಪೂಷನ್‌ಗಳಂತಹ ಇರಾನ್ ಮೂಲದ ದೇವತೆಗಳನ್ನು ಪೂಜಿಸುತ್ತಿದ್ದ ವೈದಿಕ ಬ್ರಾಹ್ಮಣ ಧರ್ಮವು ದ್ರಾವಿಡ ಬುಡಕಟ್ಟುಗಳೊಂದಿಗೆ ಕೃಷಿ ವಿಸ್ತರಣೆಗಾಗಿ ಸಮ್ಮಿಲನ-ಸಂಘರ್ಷ ಹೊಂದುತ್ತಾ ತನ್ನ ಇಡೀ ಮುಖವನ್ನೇ ಬದಲಾಯಿಸಿಕೊಂಡಿದೆ.
ಒಟ್ಟಾರೆ ’ಅವತಾರ’ ಎಂಬುವುದು ಭಾರತದ ಚರಿತ್ರೆಯ ದಿಕ್ಕನ್ನೇ ಬದಲಾಯಿಸಿದ ಹಾಗೂ ಬದಲಾಯಿಸುತ್ತಿರುವ ಕಲ್ಪನೆ. ಸಾಂಸ್ಕೃತಿಕವಾಗಿ ಇದೊಂದು ವಿದ್ಯಮಾನ. ಯಾಜಮಾನ್ಯ ಸಂಸ್ಕೃತಿಗೆ ಇದು ಆಧ್ಯಾತ್ಮ. ಜನಪದ ಸಂಸ್ಕೃತಿಗಳಿಗೆ ಇದೊಂದು ’ಸೋಲು’ ಹಾಗೂ ’ಶರಣಾಗತಿ’. ಹೀಗೆ ಸೋತು ಶರಣಾಗಿರುವ ಜನಪದ ಸಂಸ್ಕೃತಿಯ ಸಮುದಾಯದ ವ್ಯಕ್ತಿಯೊಬ್ಬ ಯಾಜಮಾನ್ಯ ಸಂಸ್ಕೃತಿ ಪ್ರಚಾರ ಮಾಡಿರುವ ಸುಳ್ಳನ್ನು ನಿಜವೆಂದು ನಂಬಿ ಸ್ವತಃ ಪ್ರಚಾರಕ್ಕಿಳಿದಿರುವುದೇ ಈ ಕಾಲದ ದುರಂತ. ಇಂತಹವರ ನಡೆಯನ್ನು ಬಯಲುಗೊಳಿಸಿ ಸತ್ಯವನ್ನು ಸಾರಿ ತಡೆಯದ ಹೊರತು ಬೌದ್ಧ, ಜೈನ, ಶಾಕ್ತ ಪಂಥ, ಪಾಶುಪತ-ಕಾಪಾಲಿಕ-ದತ್ತಪಂಥ, ಲಿಂಗಾಯತ, ಭಕ್ತಿ ಪಂಥಗಳು ಮುಂತಾದ ಜನಪರ ಸಿದ್ಧಾಂತಗಳನ್ನು ವೈದಿಕ ಬ್ರಾಹ್ಮಣ್ಯದ ವಿರಾಟ್ ರೂಪ ಸ್ವಾಹಾ ಮಾಡಿಕೊಳ್ಳುತ್ತಿರುತ್ತದೆ.
ಇದನ್ನೂ ಓದಿ: ಬೌದ್ಧಧರ್ಮವು ಹಿಂದೂ ಧರ್ಮದ ಒಂದು ಶಾಖೆ: ಸಚಿವ ಡಾ.ಕೆ.ಸುಧಾಕರ್



Wonderful ಚರಿತ್ರೆಯ ಮರುಶೋಧ..Thank u Gouri.com and Team
Very useful to present generation