“ಸೀರೆ ಅಲ್ಲ, ಗೌನೂ ಅಲ್ಲ ಉಟ್ಟ ಬಟ್ಟೆಲೇನೈತೇ, ನೋಡೋದ್ರಾಗೆ ಎಲ್ಲ ಐತೆ, ನಿಮ್ಮ ಬುದ್ಧಿ ಇಲ್ಲ ಸುದ್ದಿ” ಎಂದು ‘ಪುಷ್ಪ’ ಸಿನಿಮಾದ ‘ಹೂಂ ಅಂತೀಯಾ’ ಹಾಡಿನಲ್ಲಿ ಹೇಳಲಾಗಿತ್ತು. ಈ ಹಾಡಿಗೆ ಹೆಜ್ಜೆ ಹಾಕಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ನಟಿ ಸುಮಂತಾ ರುತ್‌ಪ್ರಭು ಅವರೀಗ, ತೊಟ್ಟ ಬಟ್ಟೆಯ ಕುರಿತ ಆಕ್ಷೇಪಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ತಾನು ಧರಿಸಿದ ಬಟ್ಟೆಯ ಕಾರಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಎದುರಿಸಿದ ದಕ್ಷಿಣ ಭಾರತದ ಹೆಸರಾಂತ ನಟಿ ಸಮಂತಾ ರುತ್ ಪ್ರಭು, “ಹೆಣ್ಣು ಮಕ್ಕಳು ಧರಿಸುವ ಉಡುಪಿನ ಆಧಾರದಲ್ಲಿ ಅವರನ್ನು ಅಳೆಯಬೇಡಿ” ಎಂದು ಪ್ರತಿಕ್ರಿಯಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮುನ್ನ ಸಮಂತಾ ರುತ್ ಪ್ರಭು ತನ್ನ ಹಲವು ಸುಂದರ ಫೋಟೊಗಳನ್ನು ತೆಗೆದು Instagram ನಲ್ಲಿ ಪೋಸ್ಟ್ ಮಾಡಿದ್ದರು. ಕಪ್ಪು ಮತ್ತು ಪಚ್ಚೆ ಹಸಿರು ಬಣ್ಣದ, ನೆಲದವರೆಗೂ ತಾಗುವಂತಹ ಗೌನ್ ಧರಿಸಿ ಫೋಟೊಗೆ ಪೋಸ್ ನೀಡಿದ್ದರು. ಆ ಫೋಟೊಗಳನ್ನು Instagramನಲ್ಲಿ ಹಂಚಿಕೊಳ್ಳುವಾಗ “ನನ್ನ ಅತ್ಯಂತ ನೆಚ್ಚಿನ ನೋಟಗಳಲ್ಲಿ ಒಂದು” ಎಂದು ಬರೆದಿದ್ದರು. ಆದರೆ ಕೆಲವರು ಅದನ್ನೂ ಟೀಕಿಸಿ ಟ್ರೋಲ್ ಮಾಡಿದ್ದರು.
View this post on Instagram
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮಂತಾ “ಮಹಿಳೆಯರನ್ನು ಅವರು ಧರಿಸುವ ಬಟ್ಟೆ, ಅವರ ಜನಾಂಗ, ಶಿಕ್ಷಣ, ಸಾಮಾಜಿಕ ಸ್ಥಾನಮಾನ, ನೋಟ, ಚರ್ಮದ ಬಣ್ಣ… ಇತ್ಯಾದಿಗಳನ್ನು ಆಧರಿಸಿ ಅಳೆಯಲಾಗುತ್ತಿದೆ. ಒಬ್ಬ ವ್ಯಕ್ತಿಯನ್ನು ಅವರು ಧರಿಸುವ ಬಟ್ಟೆಗಳನ್ನು ಆಧರಿಸಿ ಅಳೆಯುವುದು ಯಾರೇ ಆದರೂ ತಕ್ಷಣವೇ ಮಾಡಬಹುದಾದ ಸುಲಭದ ಕೆಲಸವಾಗಿದೆ. ಒಬ್ಬ ಮಹಿಳೆಯಾಗಿ, ಈ ರೀತಿ ಅಳೆಯುವುದರ ಅರ್ಥವೇನೆಂಬುದನ್ನು ನಾನು ಪ್ರತ್ಯಕ್ಷವಾಗಿ ತಿಳಿದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.
“ನಾವೀಗ 2022 ರ ಇಸವಿಯಲ್ಲಿದ್ದೇವೆ. ಅಂತಿಮವಾಗಿ ಮಹಿಳೆಯರು ಧರಿಸುವ ಮಿನಿ ಸ್ಕರ್ಟ್‌ಗಳು, ಡೀಪ್ ನೆಕ್ ಉಡುಪುಗಳ ಆಧಾರದ ಮೇಲೆ ಅವರನ್ನು ಅಳೆಯುವುದನ್ನು ನಿಲ್ಲಿಸಿ, ನಮ್ಮನ್ನು ಉತ್ತಮಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸಬಹುದೇ? ಇನ್ನೊಬ್ಬರನ್ನು ಅಳೆಯುವುದರ ಬದಲು ನಮ್ಮನ್ನು ನಾವು ನೋಡಿಕೊಳ್ಳಲು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದೇ? ನಮ್ಮ ವಿಚಾರಗಳನ್ನು ಬೇರೆಯವರ ಮೇಲೆ ಹೇರುವುದು ಯಾರಿಗೂ ಒಳ್ಳೆಯದನ್ನು ಮಾಡಿಲ್ಲ. ನಾವು ಒಬ್ಬ ವ್ಯಕ್ತಿಯನ್ನು ಅಳೆಯುವ ಮತ್ತು ಅರ್ಥಮಾಡಿಕೊಳ್ಳುವ ವಿಧಾನವನ್ನು ಮರುರೂಪಿಸಬಹುದೆ?” ಎಂದು ಸಮಂತಾ ಬರೆದಿದ್ದಾರೆ.
View this post on Instagram
ನಟಿ ಸಮಂತಾರವರು ನಾಗಚೈತನ್ಯರಿಂದ ವಿಚ್ಚೇದನ ಪಡೆದ ಮೇಲೆ ಸಾಕಷ್ಟು ಆನ್‌ಲೈನ್ ಟ್ರೋಲ್‌ಗಳನ್ನು ಎದುರಿಸಬೇಕಾಗಿದೆ. ಅವರು ವಿಚ್ಛೇದನ ಪಡೆದುದ್ದೇ ತಪ್ಪು ಎನ್ನುವ ರೀತಿಯಲ್ಲಿ ಕೆಲವರು ಮಾತನಾಡಿದ್ದರು. ಇನ್ನು ಸಾಕಷ್ಟು ಹೆಸರು ಗಳಿಸಿದ ಪುಷ್ಪ ಸಿನಿಮಾದಲ್ಲಿ ಸಮಂತಾ ಹಾಡೊಂದಕ್ಕೆ ನೃತ್ಯ ಮಾಡಿದ್ದಕ್ಕೂ ಅವರನ್ನು ಟ್ರೋಲ್ ಮಾಡಲಾಗಿತ್ತು.
ಸ್ನೇಹಿತೆಯೊಂದಿಗೆ ಸ್ವಿಮ್ ಸೂಟ್ ನಲ್ಲಿರುವ ಫೋಟೊ ಹಂಚಿಕೊಂಡಿದ್ದಕ್ಕೆ ಸಹ ನಿಮಗ್ಯಾಕೆ ಇದೆಲ್ಲಾ, ನೆಟ್ಟಗೆ ಬಟ್ಟೆ ಹಾಕಲು ಆಗೊಲ್ವೆ ಎಂದು ಟೀಕಿಸಲಾಯಿತು. ಈಗ ಅವರ ಸುಂದರ ಫೋಟೋಗೂ ಕೆಲ ಪುರುಷರು ಕ್ಯಾತೆ ತೆಗೆದಿದ್ದಾರೆ. ತಿನ್ನುವ ಆಹಾರ, ಉಡುಗೆ ಮತ್ತು ಜೀವನ ಶೈಲಿ ಪ್ರತಿಯೊಬ್ಬರ ವೈಯಕ್ತಿಕ ಹಕ್ಕಾಗಿದೆ. ಅದರಿಂದ ಬೇರೆಯವರಿಗೆ ಯಾವ ರೀತಿಯಲ್ಲಿಯೂ ತೊಂದರೆಯಾಗುವುದಿಲ್ಲ. ಆದರೂ ಇನ್ನೊಬ್ಬರ ಉಡುಪು-ಜೀವನ ಶೈಲಿಯ ಬಗ್ಗೆ ಕೆಲವರು ಏಕೆ ದಾಳಿ ಮಾಡುತ್ತಾರೆ? ಇಂಥವರಿಗೆ ನಟಿ ಸಮಂತಾ ಪ್ರಭು ಬಹಳ ಪ್ರಬುದ್ಧತೆಯಿಂದ ಉತ್ತರಿಸಿದ್ದಾರೆ. ಟ್ರೋಲ್ ಮಾಡಿದವರು ಇದನ್ನು ಈಗಲಾದರೂ ಅರ್ಥ ಮಾಡಿಕೊಳ್ಳುವರೆ?
ಇದನ್ನೂ ಓದಿ; ಪುರುಷ ಪ್ರಧಾನ ನೈತಿಕತೆ ಪ್ರಶ್ನಿಸಿ ನಟಿ ಸಮಂತಾ ಪೋಸ್ಟ್; ಆರೋಪಗಳಿಗೆ ಸ್ಪಷ್ಟನೆ


