ಸೋಮವಾರ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯ ವೇಳೆ ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಸಂದೀಪ್ ಸಿಂಗ್ ನಂಗಲ್ ಅಂಬಿಯಾನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.
ಘಟನೆ ನಡೆದ ಕೂಡಲೆ ಸಂದೀಪ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿನ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ನಾಕೋದರ್‌ನ ಮಲ್ಲಿಯನ್ ಖುರ್ದ್ ಗ್ರಾಮದಲ್ಲಿ ಸಂದೀಪ್ ಪಂದ್ಯಾವಳಿಯ ಸ್ಥಳದಿಂದ ಹೊರಬಂದಾಗ ನಾಲ್ವರು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಮೇಲೆ ಎಂಟರಿಂದ ಹತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಹತ್ಯೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಮರಗಳ ಮರೆಯಲ್ಲಿ ನಿಂತು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಎನ್‌ಡಿಟಿವಿ ತನ್ನ ವರದಿಯಲ್ಲಿ ಹೇಳಿದೆ.
“ಆಟಗಾರನು ಮೂಲತಃ ಶಾಹಕೋಟ್‌ನ ನಂಗಲ್ ಅಂಬಿಯಾನ್ ಗ್ರಾಮದವರಾಗಿದ್ದಾರೆ. ಇದೀಗ ಅವರು ಇಂಗ್ಲೇಂಡ್‌ನಲ್ಲಿ ನೆಲೆಸಿದ್ದು, ಬ್ರಿಟೀಷ್ ಪ್ರಜೆಯಾಗಿದ್ದಾರೆ” ಎಂದು ಜಲಂಧರ್‌ನ ಗ್ರಾಮೀಣ ಪೊಲೀಸ್ ಉಪ ಅಧೀಕ್ಷಕ ಲಖ್ವಿಂದರ್ ಸಿಂಗ್ ಹೇಳಿದ್ದಾರೆ.
ಅವರು ತಮ್ಮ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: ಬಾಂಬೆ ಹೈಕೋರ್ಟ್‌ನ ವಿವಾದಾತ್ಮಕ ನ್ಯಾಯಮೂರ್ತಿ ಪುಷ್ಪಾ ಅವರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿ


