“ಯಾರು ಯಾವ ಬಟ್ಟೆ ಧರಿಸಿದರೆ ಸರ್ಕಾರಕ್ಕೆ ಏನು ಸಂಬಂಧ? ಹಿಜಾಬ್ ವಿವಾದ ಏಕೆ? ನೀವು ಸಮಾಜವನ್ನೇಕೆ ಹದಗೆಡಿಸುತ್ತಿದ್ದಿರಿ?” ಎಂದು ತೆಲಂಗಾಣ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪ್ರಶ್ನಿಸಿದ್ದಾರೆ.
ತೆಲಂಗಾಣ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿ ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯು ‘ಹಿಜಾಬ್ ಪಂಚಾಯತ್’ (ಹಿಜಾಬ್ ಮೇಲೆ ರಾಜಕೀಯ) ಮಾಡುತ್ತಿದೆ. ಕೋಮು ವಿಭಜನೆ ಮಾಡಲು ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದೆ” ಎಂದು ವಾಗ್ದಾಳಿ ನೆಡೆಸಿದ್ದಾರೆ.
“ಯಾರು ಯಾವ ಬಟ್ಟೆಹಾಕಿದರೆ ಸರ್ಕಾರಕ್ಕೆ ಏನು ಸಂಬಂಧ? ಹಿಜಾಬ್ ಕುರಿತು ವಿವಾದ ಏಕೆ? ನೀವು ಸಮಾಜವನ್ನೇಕೆ ಹದಗೆಡಿಸುತ್ತಿದ್ದೀರಿ?” ಎಂದು ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಪ್ರಶ್ನಿಸಿದ ಅವರು, ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ರಾಜಕೀಯವನ್ನು ಉಲ್ಲೇಖಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ, ಹಿಜಾಬ್ ಇಸ್ಲಾಂನಲ್ಲಿ ಅತ್ಯಗತ್ಯ ಆಚರಣೆಯಲ್ಲ ಎಂದು ಹೇಳಿದೆ.
ಹೈಕೋರ್ಟ್‌ನಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಹಿಜಾಬ್ ನಮ್ಮ ಹಕ್ಕು ಎಂದು ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರು. “ಹಿಜಾಬ್ ಧರಿಸುವುದು ಇಸ್ಲಾಂ ಧಾರ್ಮಿಕ ಆಚರಣೆಯ ಅತ್ಯಗತ್ಯ ಭಾಗವಲ್ಲ ಎಂದು ನಾವು ಪರಿಗಣಿಸಿದ್ದೇವೆ” ಎಂದು ಹೈಕೋರ್ಟ್ ಹೇಳಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಸಿಆರ್ ಪ್ರತಿಕ್ರಿಯೆ ನೀಡಿದ್ದಾರೆ.
2014 ರಲ್ಲಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿಯವರೆಗೆ ಆಡಳಿತ ನಡೆಸುತ್ತಿರುವ ಚಂದ್ರಶೇಖರ್ ರಾವ್ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕೆಗೆ ಒಳಪಡಿಸುತ್ತಲೇ ಇದ್ದಾರೆ.
ಇದನ್ನೂ ಓದಿರಿ: ಹಿಜಾಬ್ ತೀರ್ಪು: ಸುಪ್ರೀಂಕೋರ್ಟ್ ಮೆಟ್ಟಿಲೇರಲಿರುವ ವಿದ್ಯಾರ್ಥಿನಿಯರು


