ಶಿಕಾರಿಪುರ ತಾಲ್ಲೂಕಿನ ತೊಗರ್ಸಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಿರೇಕೆರೂರಿನ ವಕೀಲರಾದ ಜಯದೇವ ಬಿ.ಕೆರೂಡಿ ಅವರ ಮೇಲೆ ಶಿರಾಳಕೊಪ್ಪ ಠಾಣೆ ಪೊಲೀಸರು ಹಲ್ಲೆ ಮಾಡಿದ್ದಲ್ಲದೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಹಿರೇಕೆರೂರು ನ್ಯಾಯವಾದಿಗಳ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಮಾರ್ಚ್ 13ರಂದು ಮಲ್ಲಿಕಾರ್ಜುನ ದೇವರ ರಥೋತ್ಸವ ಪ್ರಯುಕ್ತ ದರ್ಶನಕ್ಕೆಂದು ಹಿರೇಕೆರೂರು ತಾಲ್ಲೂಕಿನ ಹಂಸಭಾವಿ ಗ್ರಾಮದ ವಕೀಲರಾದ ಜಯದೇವ ಬಿ. ಕೆರೂಡಿ ತೆರಳಿದ್ದರು. ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಜನ ಸಂದಣಿ ಹೆಚ್ಚಾಗಿದ್ದು, ಸಣ್ಣ ಮಕ್ಕಳು, ಹೆಣ್ಣು ಮಕ್ಕಳು ದೇವರ ದರ್ಶನಕ್ಕೆಂದು ಹರಸಾಹಸ ಪಡುತ್ತಿದ್ದರು. ನೂಕುನುಗ್ಗಲನ್ನು ತಡೆಯುವಂತೆ ಪೊಲೀಸರಿಗೆ ಜಯದೇವ ಅವರು ಕೋರಿದಾಗ ಪೊಲೀಸರು ದರ್ಪ ತೋರಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ. ದೇವಾಲಯದ ಸಿಸಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದೆ ಎಂದು ವಕೀಲರ ಸಂಘ ತಿಳಿಸಿದೆ.
ಸರತಿ ಸಾಲನ್ನು ಸರಿಪಡಿಸಲು ಕೋರಿದಾಗ ಅಲ್ಲಿದ್ದ ಸಿಪಿಐ ಗುರುರಾಜ ಮೈಲಾರಿ ಹಾಗೂ ಸಿಬ್ಬಂದಿ ಅವ್ಯಾಚ್ಯವಾಗಿ ನಿಂದಿಸಿದ್ದಾರೆ. ವಕೀಲಿ ವೃತ್ತಿಗೂ ಅವಹೇಳನ ಮಾಡಿದ್ದಾರೆ. ಈ ವೇಳೆ ಸಿಪಿಐ ಹಾಗೂ ಹೆಡ್‌ಕಾನ್‌ಸ್ಟೇಬಲ್ ಇಬ್ಬರೂ ವಕೀಲರಿಗೆ ಥಳಿಸಿದ್ದಾರೆ. ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಠಾಣೆಗೆ ಕರೆದೊಯ್ದು ಅಲ್ಲಿಯೂ ಮೃಗೀಯ ವರ್ತನೆ ತೋರಿಸಿದ್ದಾರೆ. ಜಯದೇವ ಅವರು ಮಹಿಳಾ ಸಿಬ್ಬಂದಿ ಮೇಲೆ ಕೈ ಮಾಡಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಸದರಿ ವಕೀಲರಿಗೆ ಕಾನೂನು ಬಾಹಿರವಾಗಿ ಕೈಗೆ ಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ ಎಂದು ವಕೀಲರು ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಮೇಲಾದ ಹಲ್ಲೆಯ ಕುರಿತು ನ್ಯಾಯಾಧೀಶರ ಮುಂದೆ ಸದರಿ ವಕೀಲರು ತಿಳಿಸಿದ್ದಾರೆ. ದೇವಾಲಯದ ದೃಶ್ಯವು ಹಲ್ಲೆಯನ್ನು ದಾಖಲಿಸಿದೆ. ವಕೀಲರು ಯಾವುದೇ ದುವರ್ತನೆ ತೋರಿಲ್ಲ. ಆದರೆ ಸಾರ್ವಜನಿಕ ಮಟ್ಟದಲ್ಲಿ ಪೊಲೀಸರ ದರ್ಪ ಎಷ್ಟರ ಮಟ್ಟಿಗಿರುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಿಂದಾಗಿ ಪೊಲೀಸರು ಸಾಮಾನ್ಯ ಜನರ ಮೇಲೆ ಹೇಗೆ ದೌರ್ಜನ್ಯ ಎಸಗುತ್ತಾರೆಂಬುದು ಸ್ಪಷ್ಟವಾಗಿದೆ. ಹೀಗಾಗಿ ದರ್ಪ ತೋರಿದ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸದರಿ ಪೊಲೀಸರನ್ನು ಅಮಾನತು ಮಾಡಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ.
ಇದನ್ನೂ ಓದಿರಿ: ಬಜರಂಗದಳ ಮುಖಂಡನಿಂದ ಕೊಲೆಯಾದ ದಲಿತ ವ್ಯಕ್ತಿ ದಿನೇಶ್ ಮನೆಗೆ ಸಿದ್ದರಾಮಯ್ಯ ಭೇಟಿ


