ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿಹಿಡಿದಿರುವ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ಇತರರಿಗೆ ವ್ಯಕ್ತಿಯೊಬ್ಬರು ಕೊಲೆ ಬೆದರಿಕೆ ಹಾಕಿದ್ದಾರೆಂಬ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ವಿಡಿಯೊ ಸಂಬಂಧ ವಕೀಲ ಉಮಾಪತಿ ಎಸ್ ಅವರು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಶನಿವಾರ ದೂರು ಸಲ್ಲಿಸಿದ್ದಾರೆ.
ತನಗೆ ವಾಟ್ಸಾಪ್‌ನಲ್ಲಿ ವೀಡಿಯೋ ಬಂದಿದ್ದು, ಜಾರ್ಖಂಡ್ ನ್ಯಾಯಾಧೀಶರೊಬ್ಬರನ್ನು ಹತ್ಯೆಗೈದಿದ್ದನ್ನು ಭಾಷಣಕಾರ ಉಲ್ಲೇಖಿಸಿದ್ದಾರೆ. ಜಾರ್ಖಂಡ್‌ನ ಧನ್‌ಬಾದ್ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಕೊಲೆಯಾಗಿದ್ದರು. ಕಳೆದ ವರ್ಷ ವಾಹನವನ್ನು ಹರಿಸಿ ಅವರನ್ನು ಕೊಲ್ಲಲಾಗಿತ್ತು ಎಂದು ದೂರುದಾರರು ತಿಳಿಸಿದ್ದಾರೆ.
“ಕರ್ನಾಟಕದ ಮುಖ್ಯ ನ್ಯಾಯಾಧೀಶರು ಎಲ್ಲಿಗೆ ವಾಕಿಂಗ್ ಹೋಗುತ್ತಾರೆ ಎಂಬುದು ಜನರಿಗೆ ತಿಳಿದಿದೆ ಎಂದು ಹೇಳುವ ಮೂಲಕ ಭಾಷಣಕಾರರು ಕೊಲೆ ಬೆದರಿಕೆ ಹಾಕಿದ್ದಾರೆ. ನ್ಯಾಯಮೂರ್ತಿಯು ಕುಟುಂಬ ಸದಸ್ಯರೊಂದಿಗೆ ಉಡುಪಿ ಮಠಕ್ಕೆ ಭೇಟಿ ನೀಡುವುದರ ಬಗ್ಗೆ ಉಲ್ಲೇಖವನ್ನು ಮಾಡಿದ್ದಾರೆ. ಅಲ್ಲದೆ ನ್ಯಾಯಾಲಯದ ತೀರ್ಪಿನ ಬಗ್ಗೆ ತುಂಬಾ ಅಸಭ್ಯ ಭಾಷೆಯಲ್ಲಿ ಮಾತನಾಡಿದ್ದಾರೆ” ಎಂದು ದೂರಲಾಗಿದೆ. ಬಹುಶಃ ತಮಿಳುನಾಡಿನ ಮಧುರೈನಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ.
ಮತ್ತೋರ್ವ ವಕೀಲೆ ಸುಧಾ ಕಟ್ವಾ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 506 (1), 505 (2), 505 (1) (ಸಿ), 505 (1) (ಬಿ), 153 ಎ, 109, 504 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಮುಖ್ಯ ನ್ಯಾಯಮೂರ್ತಿ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಮತ್ತು ಖಾಝಿ ಎಂ ಜೈಬುನ್ನಿಸಾ ಅವರನ್ನೊಳಗೊಂಡ ಹೈಕೋರ್ಟ್‌ನ ತ್ರಿಸದಸ್ಯ ಪೀಠವು ತರಗತಿಯಲ್ಲಿ ಹಿಜಾಬ್ ಧರಿಸದಿರುವುದನ್ನು ಎತ್ತಿ ಹಿಡಿದಿತ್ತು.
An open murder threat to the judges…
But DMK and @tnpoliceoffl are u still going to sit and watch this drama…. pic.twitter.com/VwHzk3rfJ2
— Indu Makkal Katchi (Offl) 🇮🇳 (@Indumakalktchi) March 18, 2022
ತಮಿಳುನಾಡಿನಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ತಮಿಳುನಾಡಿನಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡು ತೌಹೀದ್ ಜಮಾತ್‌ನ (ಟಿಎನ್‌ಟಿಜೆ) ಮೂವರು ಕಾರ್ಯಕರ್ತರು ನ್ಯಾಯಮೂರ್ತಿಯವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
ಶುಕ್ರವಾರ, ತೀರ್ಪಿನ ವಿರುದ್ಧ ಪ್ರತಿಭಟಿಸಲು ಕೋರಿಪಾಳ್ಯಂ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ತೌಹೀದ್ ಜಮಾತ್ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಸಂಘಟಕರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಗೆ ಸಂಘಟಕರು ಜೀವ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.
ಮೂವರು ಟಿಎನ್‌ಟಿಜೆ ಪದಾಧಿಕಾರಿಗಳ ವಿರುದ್ಧ ಸೆಕ್ಷನ್ 153 (ಎ) (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 505 (1) (ಸಿ) (ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶ), 505 (2), 506 (1) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಮಧುರೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠವು ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದನ್ನು ಖುರಾನ್ ಕಡ್ಡಾಯಗೊಳಿಸುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿರಿ: ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ: ಹಂತಕರನ್ನು ಪತ್ತೆ ಮಾಡಿದ ಪುತ್ರಿ; ಕೋರ್ಟ್‌ನಲ್ಲಿ ಹೇಳಿಕೆ


