“ಎಲ್ಲವನ್ನೂ ಇಲ್ಲಿಗೆ ಬಿಟ್ಟು, ನಿಮ್ಮ ಕೆಲಸ ನೀವು ಮಾಡಿ. ಇಲ್ಲದಿದ್ದರೆ, ಸರ್ಕಾರದಿಂದ ಕಠಿಣ ಕ್ರಮ ಖಂಡಿತ” ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿನ ಕೋಮುದ್ವೇಷ ಬೆಳವಣಿಗೆಗಳನ್ನು ಖಂಡಿಸಿರುವ ಅವರು, ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ಧರ್ಮ ಸಂಘರ್ಷ’ ಹಾಗೂ ನುಗ್ಗಿಕೇರಿ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಹಿಂದೂ-ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಸೌಹಾರ್ದತೆಯಿಂದ ಬದುಕಬೇಕೆಂಬುದು ನಮ್ಮ ಆಸೆ. ಅದನ್ನು ಹಾಳು ಮಾಡುವ ಕೆಲಸ ಮಾಡಬೇಡಿ” ಎಂದು ಎಚ್ಚರಿಸಿದ್ದಾರೆ.
“ಯಾರಾದರೂ ನಮ್ಮ ಸಹಬಾಳ್ವೆಗೆ ಅಡ್ಡಿ ಮಾಡುವಂತಹ ಪ್ರಯತ್ನ ಮಾಡಿದರೆ, ಮುಖ್ಯಮಂತ್ರಿಗಳು ಹೇಳಿದಂತೆ ಅಂಥವರ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಮುಂದೆಯಾದರೂ ಅಹಿತಕರ ಘಟನೆ ನಡೆಯದಂತೆ ಒಟ್ಟಾಗಿ ಬಾಳುವುದಕ್ಕೆ ಅವಕಾಶ ಮಾಡಿಕೊಡಬೇಕು” ಎಂದು ತಿಳಿಸಿದ್ದಾರೆ.
“ಈಗಾಗಲೇ ಮುಖ್ಯಮಂತ್ರಿ ಎಚ್ಚರಿಕೆ ಕೊಟ್ಟಿದ್ದಾರೆ. ಇಂತಹ ಘಟನೆಗಳನ್ನ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಾನೂ ಕೂಡ ಕಿವಿಮಾತು ಹೇಳುತ್ತಿದ್ದೇನೆ. ಇಲ್ಲಿಗೆ ಎಲ್ಲವನ್ನೂ ನಿಲ್ಲಿಸಿ, ನಿಮ್ಮ-ನಿಮ್ಮ ಕೆಲಸ ಮಾಡಿ. ಎಲ್ಲರೂ ಗೌರವ, ನೆಮ್ಮದಿಯಿಂದ ಬದುಕಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ಮತೀಯ ಸಂಘಟನೆಗಳು ಸಂಘರ್ಷವನ್ನು ಉಂಟು ಮಾಡುತ್ತಿರುವ ಕುರಿತು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪನವರು ಇಳಿದ ಬಳಿಕ ಬೊಮ್ಮಾಯಿಯವರಿಗೆ ಮುಖ್ಯಮಂತ್ರಿ ಸ್ಥಾನ ದೊರಕಿತು. ಬೊಮ್ಮಾಯಿಯವರು ಯಡಿಯೂರಪ್ಪನವರ ಆಪ್ತರಾದ ಕಾರಣ, ನಿಜವಾದ ಸಿಎಂ ಯಡಿಯೂರಪ್ಪನವರೇ ಎಂಬ ವಿಶ್ಲೇಷಣೆಗಳು ಬಂದಿದ್ದವು.
ಬೊಮ್ಮಾಯಿಯವರು ಸಮಾಜವಾದಿ ಹಿನ್ನೆಲೆಯವರಾಗಿದ್ದು, ರಾಜ್ಯದ ಅಭಿವೃದ್ಧಿಯಾಗುತ್ತದೆ ಎಂದು ಭಾವಿಸಲಾಗಿತ್ತು. ದುರಾದೃಷ್ಟವಶಾತ್ ಬೊಮ್ಮಾಯಿಯವರ ಅವಧಿಯಲ್ಲಿ ಹಲವಾರು ಕೋಮುದ್ವೇಷ ಪ್ರಕರಣಗಳು ಘಟಿಸಿವೆ. ಮುಖ್ಯಮಂತ್ರಿಯವರೇ ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿದ್ದು ಟೀಕೆಗೆ ಒಳಗಾಗಿದೆ.
ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರೆ ರಾಜ್ಯದ ಪರಿಸ್ಥಿತಿ ಇಷ್ಟು ದುಸ್ಥಿತಿಗೆ ಇಳಿಯುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ಮೂಡಿಬರುತ್ತಿವೆ. ಈಗ ಯಡಿಯೂರಪ್ಪನವರೇ ಮತೀಯ ಸಂಘಟನೆಗಳಿಗೆ ಕಡಿವಾಣ ಹಾಕುವ ಹೇಳಿಕೆ ನೀಡಿರುವುದು ಭರವಸೆ ಮೂಡಿಸಿದೆ.
ಇದನ್ನೂ ಓದಿರಿ: ಚಂದ್ರು ಕೊಲೆ ಪ್ರಕರಣ: ಪೊಲೀಸ್ ಕಮಿಷನರ್ ಹೇಳಿಕೆ ಅಲ್ಲಗಳೆದ ಬಿಜೆಪಿ ನಾಯಕರಿಗೆ ಭಾಸ್ಕರ್ ರಾವ್ ಖಡಕ್ ಪ್ರತಿಕ್ರಿಯೆ



ಮಾನ್ಯ ಯೆಡಿಯೂರಪ್ಪ ನವರ ಮಾತು ಎಲ್ಲರೂ ಸ್ವಾಗತಿಸ ಬೇಕಾದುದ್ದೆ, ಈ ಮಾತು ಮುಖ್ಯಮಂತ್ರಿಗಳು ಹೇಳಬೇಕಿತ್ತು ಮತ್ತು ಕಠಿಣ ನಿರ್ಧಾರ ತೆಗೆದುಕೊಂಡು ಯಾರೇ ಕೋಮು ದ್ವೇಷ ಕದಡುವ ಪ್ರಯತ್ನ ಪಟ್ಟಿದ್ದಾರೆ ಅವರಿಗೆಲ್ಲ ದೇಶದ್ರೋಹ ಪ್ರಕರಣ ದಾಖಲಿಸಿ ಶಿಕ್ಷೆ ಕೊಡಬೇಕಿತ್ತು,
ಮನುಷ್ಯ ಎಂದಿಗೂ ಮನುಷ್ಯತ್ವ ಮರೀಬಾರ್ದು
ಜೈ ಹಿಂದ್
ಜೈ ಕರ್ನಾಟಕ
ಅಧಿಕಾರಕ್ಕಾಗಿ ಹಸಿದ ತೋಳದ ಕಾವಲಿನಲ್ಲಿರುವ ಜನತೆಗೆ ಬಿಡುಗಡೆ ಅಷ್ಟು ಸುಲಬದ್ದಲ್ಲ .