ಗುರುವಾರ ಸಂಜೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದ, ಸಂತೋಷ್ ಆತ್ಮಹತ್ಯೆ ಪ್ರಚೋದನೆಯ ಪ್ರಮುಖ ಆರೋಪಿ ಸಚಿವ ಈಶ್ವರಪ್ಪನನ್ನು ಅಗತ್ಯವಿದ್ದರಷ್ಟೆ ಪೊಲೀಸರು ಬಂಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಈಶ್ವರಪ್ಪ ಅವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ. ಅವರ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಸಾವು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಅಗತ್ಯವಿದ್ದರೆ ಅವರನ್ನು ಬಂಧಿಸಲಿದ್ದಾರೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈಶ್ವರಪ್ಪ ಅವರೊಂದಿಗೆ ತಾನು ಈಗಾಗಲೆ ಮಾತನಾಡಿದ್ದೇನೆ ಎಂದು ಹೇಳಿರುವ ಸಿಎಂ ಬೊಮ್ಮಾಯಿ, “ಈಶ್ವರಪ್ಪ ತಾವು ನಿರಪರಾಧಿ ಎಂದು ಹೇಳಿದ್ದು, ಆದಷ್ಟು ಬೇಗನೆ ತನಿಖೆ ಮಾಡಿದರೆ ಆರೋಪದಿಂದ ಮುಕ್ತನಾಗುತ್ತೇನೆ ಎಂದು ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂತೋಷ್ ಸಾವು ಪ್ರಕರಣ: ಸಚಿವ ಈಶ್ವರಪ್ಪ ರಾಜೀನಾಮೆ ಘೋಷಣೆ
ನಿನ್ನೆ ಸಂಜೆ ವೇಳೆ ತಮ್ಮ ಕಾರ್ಯಕ್ಷೇತ್ರವಾದ ಶಿವಮೊಗ್ಗದಲ್ಲಿ ದಿಢೀರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದ ಈಶ್ವರಪ್ಪ, “ಪ್ರಕರಣದ ವಿಚಾರದಲ್ಲಿ ಪಕ್ಷದ ಹಿರಿಯರಿಗೆ, ಮುಖ್ಯಮಂತ್ರಿಗಳಿಗೆ, ರಾಷ್ಟ್ರೀಯ ನಾಯಕರುಗಳಿಗೆ ಇರುಸುಮುರುಸು ಆಗಬಾರದು. ಈ ಒಂದೇ ಕಾರಣಕ್ಕೆ ನಾನು ರಾಜೀನಾಮೆ ಕೊಡುತ್ತಿದ್ದೇನೆ. ಈ ವಿಷಯದ ಬಗ್ಗೆ ನಾನು ಮುಖ್ಯಮಂತ್ರಿಗೆ ಈಗಾಗಲೇ ಹೇಳಿದ್ದೇನೆ” ಎಂದು ಹೇಳಿದ್ದರು.
“ಶುಕ್ರವಾರ ಸಂಜೆ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾ ಇದ್ದೇನೆ. ಇಲ್ಲಿ ತನಕ ಸಹಕಾರ ಕೊಟ್ಟಂತಹ ಮುಖ್ಯಮಂತ್ರಿಗಳಿಗೆ ಹಾಗೂ ಎಲ್ಲಾ ಸ್ನೇಹಿತರಿಗೆ ಅಭಿನಂಧನೆ ಸಲ್ಲಿಸುತ್ತೇನೆ. ನಾನು ದೇವರನ್ನು ನಂಬುವವನು, ಪ್ರಕರಣದ ಬಗ್ಗೆ ನನಗೆ ಪೂರ್ಣ ವಿಶ್ವಾವಿದೆ. ಈ ಇಡೀ ಎಪಿಸೋಡಲ್ಲಿ ಒಂದೇ ಒಂದು ಪರ್ಸೆಂಟ್ ನನ್ನದೇನಾದರೂ ತಪ್ಪಿದ್ದರೆ, ಆ ಭಗವಂತ ನನಗೆ ಶಿಕ್ಷೆ ಕೊಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ” ಎಂದು ಹೇಳಿದ್ದರು.
“ಪ್ರಕರಣದಲ್ಲಿ ನಾನು ಮುಕ್ತವಾಗಿ ಹೊರಬರುತ್ತೇನೆ ಎಂದು ನನಗೆ ಪೂರ್ಣ ನಂಬಿಕೆ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ನಾನು ಮುಖ್ಯಮಂತ್ರಿಗೆ ಹೇಳಿದಾಗ ಅವರು ಕೂಡಾ ಸಂತೋಷದಿಂದ ತನಿಖೆ ಮಾಡುತ್ತೇನೆ ಎಂದು ಅವರು ಒಪ್ಪಿಕೊಂಡಿದ್ದಾರೆ. ನನ್ನ ಮನೆ ದೇವರಾದ ಚೌಡೇಶ್ವರಿ ನಾನು ತಪ್ಪಿತಸ್ಥ ಅಲ್ಲ ಎಂದು ನಿರ್ದೋಷಿಯಾಗಿ ನನ್ನನ್ನು ಹೊರ ತರುತ್ತಾಳೆ” ಎಂದು ಈಶ್ವರಪ್ಪ ಗುರುವಾರ ಹೇಳಿದ್ದರು.
“ನನಗೆ ಸಹಕಾರ ಕೊಟ್ಟ ಎಲ್ಲಾ ಕಾರ್ಯಕರ್ತರಿಗೆ ಅಭಿನಂಧನೆ ಅರ್ಪಿಸುತ್ತೇನೆ. ಗ್ರಾಮೀಣಾಭಿವೃದ್ದಿ ಇಲಾಖೆ ಸಿಕ್ಕಿದ್ದು ನನ್ನ ಸೌಭಾಗ್ಯ. ಇಲಾಖೆಯಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಪ್ರಕರಣದಲ್ಲಿ ಯಾರಿಗೂ ಇರಿಸುಮುರಿಸು ಮಾಡಲು ಇಷ್ಟವಿಲ್ಲ. ಎಲ್ಲವನ್ನೂ ಎದುರಿಸಿ ಮುಕ್ತವಾಗಿ ಹೊರಬರುತ್ತೇನೆ. ಒಂದೇ ಒಂದು ಪರ್ಸೆಂಟ್ ತಪ್ಪಿದ್ದರೆ ಸಾಬೀತಾಗಲಿ” ಎಂದು ಈಶ್ವರಪ್ಪ ಗುರುವಾರ ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ರಾಜೀನಾಮೆ ಸಾಲದು, ಈಶ್ವರಪ್ಪ ಬಂಧನವಾಗಬೇಕು: ಡಿ.ಕೆ ಶಿವಕುಮಾರ್


