ಕಳೆದ ಕೆಲವು ತಿಂಗಳುಗಳಿಂದ ಕೊರೊನಾ ಪ್ರಕರಣಗಳಲ್ಲಿ ಸತತ ಇಳಿಕೆ ಕಂಡುಬರುತ್ತಿತ್ತು. ಏಪ್ರಿಲ್ 4 ರಂದು ಕೇವಲ 795 ಹೊಸ ಪ್ರಕರಣಗಳು ದಾಖಲಾಗಿದ್ದವು. ಅದರ ನಂತರವೂ ಸಹ ಪ್ರತಿನಿತ್ಯ ಸರಾಸರಿ ಒಂದು ಸಾವಿರದಷ್ಟು ಪ್ರಕರಣಗಳು ಕಂಡುಬರುತ್ತಿದ್ದವು. ಆದರೆ ಏಪ್ರಿಲ್ 17ರಂದು ಒಂದೇ ದಿನ ಹೊಸ ಪ್ರಕರಣಗಳಲ್ಲಿ ಏಕಾಏಕಿ ಹೆಚ್ಚಳ ಕಂಡುಬಂದಿರುವುದು ಆತಂಕ ಮೂಡಿಸಿದೆ.
ಕಳೆದ 24 ಗಂಟೆಗಳಲ್ಲಿ 2,183 ಹೊಸ ಪ್ರಕರಣಗಳು ವರದಿಯಾಗಿವೆ. ಅದರ ಹಿಂದಿನ ದಿನ 1,150 ಪ್ರಕರಣಗಳು ವರದಿಯಾಗಿದ್ದವು. ಅಂದರೆ ಒಂದು ದಿನದಲ್ಲಿ ಶೇ.90 ರಷ್ಟು ಹೆಚ್ಚಾಗಿವೆ. ಇನ್ನು ಕೇರಳದ ಹಳೆಯ ಕೋವಿಡ್ ಸಾವಿನ ಲೆಕ್ಕಗಳನ್ನು ನಿನ್ನೆಯ ವರದಿಗೆ ಸೇರಿಸಿರುವುದರಿಂದ ಕಳೆದ 24 ಗಂಟೆಗಳಲ್ಲಿ 214 ಕೋವಿಡ್ ಸಾವುಗಳು ವರದಿಯಾಗಿವೆ. ಇದರಲ್ಲಿ ಕೇರಳದ ಏಪ್ರಿಲ್ 13 ರಿಂದ ಏಪ್ರಿಲ್ 16ರ ವರೆಗಿನ ಸಾವುಗಳು ಸಹ ಸೇರಿವೆ.
ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಪತಿ ಸಾವು: ಹಸುಗೂಸನ್ನು ಹತ್ಯೆ ಮಾಡಿ ಜೀವ ಕಳೆದುಕೊಂಡ ಮಹಿಳೆ
ಕೋವಿಡ್ ಪಾಸಿಟಿವಿಟಿ ದರವು 0.36 ನಿಂದ 0.81 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ. ಆದರೆ ದೇಶಾದ್ಯಂತದ ಸಕ್ರಿಯ ಪ್ರಕರಣಗಳಲ್ಲಿ ಕೊಂಚ ಇಳಿಕೆ ಕಂಡಿದ್ದು, 11,588 ರಿಂದ 11,542ಕ್ಕೆ ಇಳಿದಿದೆ.
ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 517 ಹೊಸ ಪ್ರಕರಣಗಳು ಕಂಡುಬಂದಿದ್ದು, ದೆಹಲಿಯಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,518ಕ್ಕೆ ಏರಿಕೆಯಾಗಿದೆ.


