ಪ್ರಸಂಗ ಒಂದು:
ಜನವರಿ 26ರಂದು ನಡೆದ 73ನೆಯ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ರಾಯಚೂರಿನಲ್ಲಿ ಒಂದು ಘಟನೆ ನಡೆಯಿತು. ಅಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ದಲಿತ, ಹಿಂದುಳಿದ ಮತ್ತು ಪ್ರಗತಿಪರವಾಗಿ ಯೋಚಿಸುವ ವಕೀಲರು ಆಯೋಜಿಸಿದ್ದ ಗಣರಾಜ್ಯೋತ್ಸವ ಆಚರಣೆಯ ಸಮಾರಂಭದಲ್ಲಿ ಗಾಂಧಿಯವರ ಫೋಟೋ ಜೊತೆಗೆ ಅಂಬೇಡ್ಕರ್ ಫೋಟೋವನ್ನು ಇಟ್ಟಿದ್ದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ’ಸವರ್ಣೀಯ’ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್ ಫೋಟೋಗೆ ಆಕ್ಷೇಪ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಅಂಬೇಡ್ಕರ್ ಪಟ ತೆಗೆಯುವಂತೆ ಸೂಚಿಸಿದರು. ಈ ನಡೆಯನ್ನು ವಿರೋಧಿಸಿದ ವಕೀಲರಿಗೆ, ’ಅಂಬೇಡ್ಕರ್ ಪಟ ಇಡುವಂತೆ ಹೈಕೋರ್ಟ್ ನಿರ್ದೇಶನ ನೀಡಿಲ್ಲ’ ಎನ್ನುವ ಉತ್ತರ ಕೊಟ್ಟರು. ಇಲ್ಲಿ ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಲು ನ್ಯಾಯಾಧೀಶರೊಬ್ಬರಿಗೆ ಸರ್ಕಾರದ ಅಥವಾ ಉನ್ನತ ಕೋರ್ಟ್ ನಿರ್ದೇಶನ ಬೇಕಾಗುತ್ತದೆ. ಜಿಲ್ಲಾ ನ್ಯಾಯಾಧೀಶರ ಈ ಜಾತ್ಯಸ್ಥ ನಡೆಯನ್ನು ವಿರೋಧಿಸಿ ದಲಿತ, ಪ್ರಗತಿಪರ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದವು. ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಕಣ್ಣೊರೊಸಿವಂತೆ ಮಾಡಿತು ಆಡಳಿತ ವ್ಯವಸ್ಥೆ.
ಪ್ರಸಂಗ ಎರಡು:
ಈ ಎರಡು ಘಟನೆಗಳು ರಾಜಸ್ಥಾನದಲ್ಲಿ ನಡೆದಂತದು. ಜೀತೇಂದ್ರ ಮೇಘ್ವಾಲ್ ಎನ್ನುವ ದಲಿತ ಯುವಕನನ್ನು ರಜಪೂತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಎಂಟುನೂರು ಕಿಲೋಮೀಟರ್ ದೂರ ಹುಡುಕಿಕೊಂಡು ಹೋಗಿ ಭೀಕರವಾಗಿ ಹತ್ಯೆ ಮಾಡಿದರು. ದಲಿತ ಯುವಕನ ಹತ್ಯೆಗೆ ಕಾರಣಗಳು: ಆ ಯುವಕ ನೋಡುವುದಕ್ಕೆ ಸ್ಫುರದ್ರೂಪಿಯಾಗಿದ್ದ, ಬ್ರಾಂಡೆಡ್ ಬಟ್ಟೆ ಧರಿಸುತ್ತಿದ್ದ, ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯನಾಗಿದ್ದ ಎನ್ನುವುದು.
ಶ್ರೀರಾಮ್ ಮೇಘ್ವಾಲ್ ಎನ್ನುವ ದಲಿತ ಯುವಕ ತನ್ನ ಮದುವೆಯಲ್ಲಿ ಕುದುರೆ ಸವಾರಿ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ. ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ದಲಿತ ಯುವಕನೊಬ್ಬ ಸಾರ್ವಜನಿಕವಾಗಿ ಕುದುರೆ ಸವಾರಿ ಮಾಡಿದ ಘಟನೆ ಇದು. ಅದೂ ಸಾವಿರಾರು ಜನ ಪೋಲಿಸರ ಬೆಂಗಾವಲಿನಲ್ಲಿ ಮತ್ತು ಮಾಧ್ಯಮಗಳ ಮುಂದೆ. ಇಲ್ಲಿ ಮರೆಯಬಾರದ ವಿಷಯ ಆ ದಲಿತ ಯುವಕ ಐಎಎಸ್ ಅಧಿಕಾರಿಯಾಗಿದ್ದಾನೆ ಎನ್ನುವುದನ್ನು.
ಇಲ್ಲಿ ಕೇವಲ ಉದಾಹರಣೆ ನೀಡುವುದಕ್ಕಾಗಿ ಈ ಎರಡು ಘಟನೆಗಳನ್ನು ಆರಿಸಿಕೊಳ್ಳಲಾಗಿದೆ. ಹುಡುಕಿದರೆ ಇಂತಹ ನೂರಾರು ಘಟನೆಗಳು ನಮಗೆ ಸಿಗುತ್ತವೆ ಮತ್ತು ಇವು ಈ ದೇಶದಲ್ಲಿ ದಿನ ನಿತ್ಯ ಘಟಿಸುವ ವಿದ್ಯಮಾನಗಳು. ಈ ಘಟನೆಗಳು ಬೇರೆಬೇರೆ ಕಡೆ, ಬೇರೆಬೇರೆ ಸಂದರ್ಭಗಳಲ್ಲಿ ನಡೆದಂತೆ ಕಂಡರೂ ಇವು ಪರಸ್ಪರ ಸಂಬಂಧ ಹೊಂದಿವೆ. ಈ ಎಲ್ಲ ಘಟನೆಗಳ ಹಿಂದಿರುವ ಸಾಮಾನ್ಯ ಅಂಶ ಅಂಬೇಡ್ಕರ್ ಮತ್ತು ದಲಿತರ ಕುರಿತ ಜಾತಿ ಅಸಹನೆ.
ಇಲ್ಲಿ ಅಂಬೇಡ್ಕರ್ ಫೋಟೋಗೆ ಗೌರವ ತೋರಿಸಿದ ನ್ಯಾಯಮೂರ್ತಿ ಆ ಮೂಲಕ ಮಾಡಲು ಯತ್ನಿಸಿದ್ದು ಅಂಬೇಡ್ಕರ್ ಅವರನ್ನು ಅನುಸರಿಸುವ, ಆರಾಧಿಸುವ ದೊಡ್ಡ ಸಮುದಾಯವೊಂದನ್ನು ಅವಮಾನಿಸುವುದು ಮತ್ತು ರಾಜಸ್ಥಾನದಲ್ಲಿ ನಡೆದ ಘಟನೆಗಳ ಹಿಂದೆ ಇರುವ ಉದ್ದೇಶ ಅಂಬೇಡ್ಕರ್ ಅವರ ಆಶಯಗಳನ್ನು ಅವಮಾನಿಸುವುದು.
ಇಂತಹ ವಿದ್ಯಮಾನಗಳಿಗೆ ಕಾರಣಗಳನ್ನು ಗ್ರಹಿಸುವುದು ಕಷ್ಟವೇನಲ್ಲ. ಸಂವಿಧಾನದ ಕಾರಣಕ್ಕಾಗಿ ಈ ದೇಶದ ದಲಿತ, ಬಹುಜನರ ಬದುಕಿಗೆ ಅಷ್ಟೋ ಇಷ್ಟೋ ಚಲನೆ ಸಿಕ್ಕಿದೆ. ತಮ್ಮ ಬದುಕು, ಬರಹ, ಹೋರಾಟವನ್ನು ಈ ದೇಶದ ದಲಿತ, ದಮನಿತರ ಏಳಿಗೆಗಾಗಿ ಮುಡುಪಾಗಿಟ್ಟ ಅಂಬೇಡ್ಕರ್ ಸಂವಿಧಾನವನ್ನು ರೂಪಿಸಿಕೊಟ್ಟರು. ಅದಕ್ಕಾಗಿಯೇ ಅಂಬೇಡ್ಕರ್ ಅವರಲ್ಲಿ ದಲಿತ ಸಮುದಾಯ ತಮ್ಮ ವಿಮೋಚಕನನ್ನು ಕಾಣುತ್ತದೆ, ಗೌರವಿಸುತ್ತದೆ. ಅಂಬೇಡ್ಕರ್ ರೂಪಿಸಿದ ಸಂವಿಧಾನ ಅನ್ನುವ ಕಾರಣಕ್ಕಾಗಿಯೇ ದಲಿತರು ಸಂವಿಧಾನವನ್ನು ತಮ್ಮದು ಎಂದು ಭಾವಿಸಿ ಸಂಭ್ರಮಿಸುತ್ತಾರೆ. ಆದರೆ ಇದನ್ನು ಸಹಿಸಿಕೊಳ್ಳಲು ಈ ದೇಶದ ಜಾತ್ಯಸ್ಥ ಮನಸ್ಥಿತಿಗೆ ಕಷ್ಟವಾಗುತ್ತಿದೆ. ಇವತ್ತಿಗೂ ಸಂವಿಧಾನ ಅಂದರೆ ಕೇವಲ ತಳಸಮುದಾಯಗಳ ಹಿತಕಾಯುವುದಕ್ಕೆ ಅಂಬೇಡ್ಕರ್ ರಚಿಸಿದ ಗ್ರಂಥ ಎನ್ನುವ ತಪ್ಪು ತಿಳಿವಳಿಕೆ ಇದೆ. ಹಾಗಾಗಿಯೇ ಇಲ್ಲಿ ದಲಿತರ ಬಗ್ಗೆ ಇರುವ ಅಸಹನೆಯನ್ನು ವ್ಯಕ್ತಪಡಿಸಲು ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಲಾಗುತ್ತದೆ ಮತ್ತು ಅಂಬೇಡ್ಕರ್ ಬಗ್ಗೆ ಇರುವ ಅಸಹನೆಯನ್ನು ವ್ಯಕ್ತಪಡಿಸಲು ದಲಿತರ ಮೇಲೆ ದೌರ್ಜನ್ಯ ಎಸಗಲಾಗುತ್ತದೆ.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅಂಬೇಡ್ಕರ್ ದೇಶದೊಳಗೆ ಆಂತರಿಕ ಸ್ವಾತಂತ್ರ್ಯ ಇರಬೇಕು ಎನ್ನುವ ಪ್ರಶ್ನೆಯನ್ನು ಎತ್ತಿದರು. ವಿದೇಶಿಗರಿಂದ ರಾಜಕೀಯ ಸ್ವಾತಂತ್ರ್ಯ ಎಷ್ಟು ಮುಖ್ಯವೊ ಅದೇ ರೀತಿ ದೇಶದೊಳಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಕೂಡ ಅಷ್ಟೇ ಮುಖ್ಯ ಎನ್ನುವುದು ಅಂಬೇಡ್ಕರ್ ಅವರ ನಿಲುವಾಗಿತ್ತು.
ಇದಕ್ಕಾಗಿ ತಾವು ರೂಪಿಸಿದ ಸಾಮಾಜಿಕ ಚಳವಳಿಗಳು, ತಾವು ಕಟ್ಟಿದ ರಾಜಕೀಯ ಪಕ್ಷಗಳ ಮೂಲಕ ದಲಿತರ ಪ್ರಶ್ನೆಗಳನ್ನು ಮುನ್ನಲೆಗೆ ತಂದರು. ಇದು ರಾಷ್ಟ್ರೀಯ ಚಳವಳಿಯ ನಾಯಕರಿಗೆ ಇರುಸುಮುರುಸು ಉಂಟುಮಾಡಿತು. ಗಾಂಧಿ ಜೊತೆಗಿನ ಭಿನ್ನಾಭಿಪ್ರಾಯ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಚಳವಳಿಯ ನಾಯಕರಿಗೆ ಅಂಬೇಡ್ಕರ್ ಬಗ್ಗೆ ಅಸಹನೆ ಮೂಡಿಸಿತ್ತು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ನಮ್ಮದೇ ಸಂವಿಧಾನ ರಚಿಸುವ ಅನಿವಾರ್ಯತೆ ಎದುರಾದಾಗ ಗಾಂಧಿಯವರಿಗೆ ಅಂಬೇಡ್ಕರ್ ಸೂಕ್ತ ವ್ಯಕ್ತಿಯಾಗಿ ಕಂಡರು. ಅಂಬೇಡ್ಕರ್ ಅವರಿಗೆ ಇದ್ದ ವಿದ್ವತ್ತು ಮತ್ತು ತಳಸಮುದಾಯದ ದೃಷ್ಟಿಕೋನ ಸಂವಿಧಾನ ರಚನಾ ಸಮಿತಿಯ ಕರಡು ರಚಿಸುವ ಜವಾಬ್ದಾರಿಯನ್ನು ಹೊರುವಂತೆ ಮಾಡಿತು. ಅಂಬೇಡ್ಕರ್ ಅವರಿಗೆ ಪಶ್ಚಿಮದ ಜಗತ್ತಿನ ಸೈದ್ಧಾಂತಿಕ
ಚಿಂತನಾಕ್ರಮಗಳು ಮತ್ತು ಬೇರೆಬೇರೆ ದೇಶಗಳ ಸಂವಿಧಾನಗಳ ಬಗ್ಗೆ ಇದ್ದ ಅಪಾರವಾದ ಅರಿವು, ಸಮಾನತಾವಾದಿ ಪ್ರಭುತ್ವವನ್ನು ಕಟ್ಟುವುದಕ್ಕೆ ಅಗತ್ಯವಾದ ಸಂವಿಧಾನವನ್ನು ಒಂದು ಅಸ್ತ್ರವನ್ನಾಗಿ ರೂಪಿಸಲು ಸಹಕಾರಿಯಾಯಿತು. ಈ ದೇಶದ ಸಾಮಾಜಿಕ ವ್ಯವಸ್ಥೆಯ ಆಳಅಗಲಗಳನ್ನು ಅರ್ಥ ಮಾಡಿಕೊಂಡಿದ್ದ ಅಂಬೇಡ್ಕರ್ ಸಂವಿಧಾನದಲ್ಲಿ ಸಮಾನ ವಯಸ್ಕ ಮತದಾನ, ಮೂಲಭೂತ ಹಕ್ಕುಗಳು, ಅಸ್ಪೃಶ್ಯತೆಯ ನಿಷೇಧ, ಮೀಸಲಾತಿಯಂತಹ ಅಂಶಗಳನ್ನು ಸೇರಿಸಿದರು. ಇವು ಸಾಂಪ್ರದಾಯಿಕ ಜಾತಿ ವ್ಯವಸ್ಥೆಗೆ ಸವಾಲಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಚಲನೆಗೆ ಕಾರಣವಾದವು.

ಅಂಬೇಡ್ಕರ್ ನಿಧನದ ನಂತರ ಮಹಾರಾಷ್ಟ್ರದಲ್ಲಿ ಮೊದಲಾಗಿ, ನಂತರ ಇಡೀ ದೇಶದಲ್ಲಿ ಶುರುವಾದ ದಲಿತ ಚಳುವಳಿ ಅಂಬೇಡ್ಕರ್ ಅವರಿಗೆ ಆವರೆಗೂ ನಿರಾಕರಿಸ್ಪಟ್ಟಿದ್ದ ’ಸೋಷಿಯಲ್ ಸ್ಪೇಸ್’ಅನ್ನು ದೊರಕಿಸಿಕೊಟ್ಟವು. ಬಿಎಸ್‌ಪಿ ತರದ ಪಕ್ಷಗಳು ತಮ್ಮ ಪಕ್ಷದ ಪ್ರಣಾಳಿಕೆ ಮತ್ತು ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ರೂಪಿಸಿದವು. ಇನ್ನೂ ಮುಂದೆ ಹೋದ ಮಾಯಾವತಿಯವರು ತಮ್ಮ ಅಧಿಕಾರಾವಧಿಯಲ್ಲಿ ಫುಲೆ, ಅಂಬೇಡ್ಕರ್, ಪೆರಿಯಾರ್ ಸೇರಿದಂತೆ ಜಾತಿವಿನಾಶಕ್ಕಾಗಿ ಹೋರಾಡಿದ ಚಿಂತಕರ ಥೀಮ್ ಪಾರ್ಕುಗಳನ್ನು ನಿರ್ಮಿಸುವುದರ ಮೂಲಕ ಅಂಬೇಡ್ಕರ್ ಅವರಿಗೆ ಇನ್ನಷ್ಟು ’ಸೋಷಿಯಲ್ ಸ್ಪೇಸ್’ಅನ್ನು ನಿರ್ಮಿಸಿದರು. ಅಂಬೇಡ್ಕರ್ ಅವರ ಪ್ರತಿಮೆಗಳು ತಳಸಮುದಾಯದ ಜನರು ವಾಸ ಮಾಡುವ ಪ್ರದೇಶಗಳಿಂದ ಆರಂಭವಾಗಿ ಸರ್ಕಾರಿ ಕಛೇರಿಗಳು, ಸಾರ್ವಜನಿಕ ಸ್ಥಳಗಳು, ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಸ್ಥಾಪನೆಯಾದವು. ವಿಧಾನಸೌಧ, ಸಂಸತ್ ಭವನಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳು ಸ್ಥಾಪನೆಯಾದವು.
ಈ ರೀತಿಯ ಪ್ರತಿಮೀಕರಣದಿಂದಾಗಿ ಅಂಬೇಡ್ಕರ್ ಆಶಯಗಳಿಗೆ ಧಕ್ಕೆಯಾಗುತ್ತದೆ ಎನ್ನುವ ಟೀಕೆ ಮಾಡುವ ದಲಿತೇತರರು ಯಾಕೆ ವಿ.ಪಿ.ಸಿಂಗ್ ಪ್ರಧಾನಿಯಾಗುವವರೆಗೂ ಸಂಸತ್ ಭವನದಲ್ಲಿ ಅಂಬೇಡ್ಕರ್ ಭಾವಚಿತ್ರ ಬರಲಿಲ್ಲ, ಅಂಬೇಡ್ಕರ್ ಅವರಿಗೆ ’ಭಾರತ ರತ್ನ’ ಸಿಕ್ಕಿರಲಿಲ್ಲ ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಾರತದ ’ಸೋಷಿಯಲ್ ಸ್ಪೇಸ್’ ತುಂಬಾ ಮೇಲ್ಜಾತಿಯ ನಾಯಕರು ಸಹಜವಾಗಿ ತುಂಬಿಕೊಂಡಿದ್ದಾರೆ. ಇವರ ಮಧ್ಯೆ ಅಂಬೇಡ್ಕರ್ ಅವರಿಗೆ ಜಾಗ ದೊರಕಿಸಿಕೊಳ್ಳುವುದು ದಲಿತರಿಗೆ ಅಗತ್ಯವಾಗಿತ್ತು.
ಅಂಬೇಡ್ಕರ್ ಹೆಸರು, ಭಾವಚಿತ್ರ, ಪ್ರತಿಮೆಗಳು ಸಾರ್ವಜನಿಕ ಸ್ಥಳಗಳಲ್ಲಿರುವುದು ದಲಿತರಿಗೆ ಅದು ತಮ್ಮದೇ ಜಾಗ ಎನ್ನುವ ಆತ್ಮವಿಶ್ವಾಸವನ್ನು ತುಂಬುತ್ತದೆ. ದಲಿತರಿಗೆ ಒಂದು ಐಡೆಂಟಿಟಿಯನ್ನು ತಂದುಕೊಡುತ್ತದೆ. ಪ್ರತಿಮೆಗಳ ರಾಜಕಾರಣದ ಬಗ್ಗೆ ವಿಮರ್ಶಾತ್ಮಕ ದೃಷ್ಟಿಕೋನ ಹೊಂದಿರುವವರು ಪ್ರತಿಮೆಗಳ ಮೂಲಕವೇ ದಲಿತರು ಗಳಿಸಿಕೊಳ್ಳುವ ಆತ್ಮವಿಶ್ವಾಸವನ್ನು, ಆ ಮೂಲಕ ಅಂಬೇಡ್ಕರ್ ಅವರನ್ನು ಹೆಚ್ಚು ಕಾಣತೊಡಗಿದ್ದನ್ನು ಮರೆಯಬಾರದು.
ಒಂದು ಕಡೆ ಎಪ್ಪತ್ತರ ದಶಕದ ನಂತರ ದೇಶದ ’ಸೋಷಿಯಲ್ ಸ್ಪೇಸ್’ನಲ್ಲಿ ಅಂಬೇಡ್ಕರ್ ಅವರ ಸ್ಥಾನ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಾ ಹೋದರೆ ಇನ್ನೊಂದು ಕಡೆ ಸಂವಿಧಾನದ ಕಾರಣಕ್ಕೆ ದಲಿತರು ಹೆಚ್ಚು ಆತ್ಮವಿಶ್ವಾಸವನ್ನು, ಸ್ವಾವಲಂಬನೆಯನ್ನು ಪಡೆಯುತ್ತಾ ಹೋದರು. ಸಂವಿಧಾನ ಸಮರ್ಪಣಾ ದಿನವನ್ನು ದಲಿತರು ಹೆಚ್ಚೆಚ್ಚು ಆಚರಿಸಲು ಪ್ರಾರಂಭಿಸಿದರು. ಅಂಬೇಡ್ಕರ್ ಅವರು ಸಂವಿಧಾನವನ್ನು ಯಾವುದಕ್ಕೆ ಅಸ್ತ್ರವನ್ನಾಗಿ ಬಳಸಲು ಇಚ್ಛಸಿದ್ದರೋ ಅದು ಒಂದು ಮಟ್ಟಕ್ಕೆ ಸಾಕಾರಗೊಳ್ಳುವ ಸಾಧ್ಯತೆಗೆ ತೆರೆದುಕೊಳ್ಳುತ್ತಿತ್ತು. ಇದು ಸಾಂಪ್ರದಾಯಿಕ ಸಮಾಜದ ಕೆಂಗಣ್ಣಿಗೆ ಗುರಿಯಾಯಿತು. ಜಾತಿವ್ಯವಸ್ಥೆಯ ಬುಡ ಅಲ್ಲಾಡುವ ಭಯ ಶುರುವಾಯಿತು. ಹಾಗಾಗಿಯೇ ಅಂಬೇಡ್ಕರ್ ರೂಪಿಸಿದ ಸಂವಿಧಾನ ಮತ್ತು ದಲಿತರ ಬಗ್ಗೆ ಅಸಹನೆ ಶುರುವಾಯಿತು. ಈ ಅಸಹನೆಯನ್ನು ಸವರ್ಣೀಯರು ದಲಿತರ ಮೇಲಿನ ಹಲ್ಲೆಗಳು, ಅಂಬೇಡ್ಕರ್ ಅವರನ್ನು ನೇರವಾಗಿ ಅವಮಾನಿಸುವ ರೂಪದಲ್ಲಿ ಮಾತ್ರವಲ್ಲದೇ, ಪರೋಕ್ಷವಾಗಿ ಅವರ ಹೆಸರನ್ನು ಮರೆಮಾಚುವುದರಿಂದಲೂ ತೋರ್ಪಡಿಸಿದರು. ಅಕೆಡೆಮಿಕ್ ವಲಯದಲ್ಲಿ ಸಂವಿಧಾನದ ಬಗ್ಗೆ ಆಗುವ ಗೋಷ್ಠಿಗಳಲ್ಲಿ ಅಂಬೇಡ್ಕರ್ ಹೆಸರನ್ನು ಎತ್ತದೇ ಚರ್ಚಿಸುವುದರಿಂದ ಹಿಡಿದು ಎಷ್ಟೋ ನ್ಯಾಯಾಲಯಗಳಲ್ಲಿ ನೀಡಿದ ತೀರ್ಪುಗಳಲ್ಲಿ ಅಂಬೇಡ್ಕರ್ ಅವರನ್ನು ಉಲ್ಲೇಖಿಸುವ ಅಗತ್ಯವಿದ್ದರೂ ಅದನ್ನು ಮರೆಮಾಚುವಂತಹ ಕೆಲಸಗಳು ಆದವು.
ದಲಿತರು ಮತ್ತು ಅಂಬೇಡ್ಕರ್ ಕುರಿತು ಸಮಾಜ ಹೊಂದಿರುವ ಅಸಹನೆಯ ಮೂಲಕಾರಣವಾಗಿರುವ ಸಂವಿಧಾನ ನಿಜವಾಗಿಯೇ ಜಾತಿವ್ಯವಸ್ಥೆಗೆ ಅಷ್ಟು ದೊಡ್ಡ ಸವಾಲಾಗಿದೆಯೇ? ಅಥವಾ ಸಂವಿಧಾನ ಜಾತಿವಿನಾಶ ಮಾಡಲು ಪ್ರೇರೇಪಿಸುತ್ತದೆಯೇ? ಎನ್ನುವ ಪ್ರಶ್ನೆಗಳನ್ನು ಕೇಳಿಕೊಂಡರೆ ಸಹಜವಾಗಿಯೇ ಇಲ್ಲ ಎನ್ನುವ ಉತ್ತರ ಮೂಡುತ್ತದೆ. ಆದರೆ ಸಂವಿಧಾನ ಜಾತಿ ವ್ಯವಸ್ಥೆಯ ಆಧಾರದ ಮೇಲೆ ಅಸಮಾನತೆ ಅಚರಿಸುವುದನ್ನು ತಡೆಯುತ್ತದೆ. ಸಮಾನತೆಯನ್ನು ಜಾರಿಗೆ ತರುವಂತೆ ಒತ್ತಾಯಿಸುತ್ತದೆ.
ಸಂವಿಧಾನ ಎಷ್ಟೇ ಉದಾತ್ತ ಮೌಲ್ಯಗಳನ್ನು ಹೊಂದಿದ್ದರೂ, ಎಷ್ಟು ದೊಡ್ಡ ಮಟ್ಟದಲ್ಲಿ ಸಮಾನತೆಯನ್ನು ಪ್ರತಿಪಾದಿಸಿದರೂ ಅದನ್ನು ಆಚರಣೆಗೆ ತರುವ ಸಮಾಜ ಸಿದ್ಧವಿಲ್ಲದಿದ್ದರೆ ಅಂತಹ ಸಂವಿಧಾನ ವ್ಯರ್ಥ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ. ಜಗತ್ತಿನ ಶ್ರೇಷ್ಠ ಉದಾರವಾದಿ ಮೌಲ್ಯಗಳನ್ನು ಹೊಂದಿರುವ ಸಂವಿಧಾನವನ್ನು ರಚಿಸಿ ಅಳವಡಿಸಿಕೊಂಡಿದ್ದರೂ ಭಾರತೀಯ ಸಮಾಜದ ಮನೋಭೂಮಿಕೆಯನ್ನು ಆಳುತ್ತಿರುವುದು ಬೇರೆಯೇ ಸಂವಿಧಾನ. ಅದು ಮನುಧರ್ಮಶಾಸ್ತ್ರ. ಮನುಧರ್ಮಶಾಸ್ತ್ರ ಪ್ರತಿಪಾದಿಸುವ ಮೇಲು-ಕೀಳಿನ ಅಸಮಾನತೆಯ ಮೌಲ್ಯವಾಗಿರುವ ಜಾತಿವ್ಯವಸ್ಥೆ ಭಾರತದ ಅಂತರಂಗದಲ್ಲಿ ಆವರಿಸಿಕೊಂಡಿದೆ. ಹಾಗಾಗಿಯೇ ಅದು ಸಂವಿಧಾನದಿಂದಾಗಿ ಉಂಟಾಗುವ ಚಲನೆಯನ್ನು ತೀವ್ರವಾಗಿ ವಿರೋಧಿಸುತ್ತದೆ. ಅಸಮಾನತೆಯನ್ನು, ತಳಸಮುದಾಯಗಳಿಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಲು ಸಂವಿಧಾನ ಪ್ರಯತ್ನಪಡುತ್ತದೆ.
ಸಂವಿಧಾನದ ಮೂಲಕ ಸಿಕ್ಕ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯ ಕಾರಣಕ್ಕೆ ದಲಿತರು ಸಾರ್ವಜನಿಕ ಜಾಗಗಳಿಗೆ ಪ್ರವೇಶ ಪಡೆದುಕೊಂಡರು. ಇದು ದಲಿತರನ್ನು ರಾಜಕೀಯ ಪ್ರಜ್ಞೆ ಹೊಂದಿದ ಸಮುದಾಯವಾಗಿ ಬದಲಾಯಿಸಿತು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬನೆಯ ಕಡೆಗೆ ತೆಗೆದುಕೊಂಡು ಹೋಗುವುದಕ್ಕೆ ಶುರುಮಾಡಿತು. ಸಂವಿಧಾನದ ಮೂಲಕ ಶುರುವಾದ ಸಾಮಾಜಿಕ
ಕ್ರಾಂತಿಗೆ ಪ್ರತಿಕ್ರಾಂತಿಯಾಗಿ ದಲಿತರನ್ನು ದಮನ ಮಾಡಲು ಸಮಾಜ ಶುರುಮಾಡಿತು.
ಕಿಲ್ವೇನ್ಮಣಿ, ಖೈರ್ಲಾಂಜಿ, ಕಂಬಾಲಪಲ್ಲಿ, ನಾಗಮಾಲಪಲ್ಲಿ, ಕರಂಚೇಡು, ಚಂಡೂರುಗಳಂತಹ ದಲಿತರ ಹತ್ಯಾಕಾಂಡಗಳ ಹಿಂದೆ ದಲಿತರು ಅರ್ಥಿಕ ಸ್ವಾವಲಂಬನೆಯ ಕಡೆ ಸಾಗುತ್ತಿರುವ ಬಗ್ಗೆ ತೀವ್ರ ಅಸಹನೆ ಇದೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳು ಆತ್ಮಹತ್ಯೆಗಳಿಗೆ ಶರಣಾಗುವಂತೆ ಮಾಡುತ್ತಿರುವುದರ ಹಿಂದೆ ಮೀಸಲಾತಿಯ ಬಗ್ಗೆ ಇರುವ ಅಸಹನೆ ಕೆಲಸ ಮಾಡುತ್ತಿದೆ. ಸರ್ಕಾರಿ ಉದ್ಯೋಗಗಳನ್ನು ದಶಕಗಟ್ಟಲೆ ಭರ್ತಿ ಮಾಡದಿರುವುದರ ಮತ್ತು ಖಾಸಗೀಕರಣಕ್ಕೆ ಹೆಚ್ಚು ಅವಕಾಶ ಮಾಡಿಕೊಡುವುದರ ಹಿಂದೆ ಉದ್ಯೋಗದಲ್ಲಿ ಮೀಸಲಾತಿಯನ್ನು ವಂಚಿಸುವ ಉದ್ದೇಶ ಇದೆ.
ಸಂವಿಧಾನ ಕೊಟ್ಟ ಮೀಸಲಾತಿಯನ್ನು ರದ್ದುಗೊಳಿಸುವುದು ಅಸಾಧ್ಯ ಎನ್ನುವ ಕಾರಣಕ್ಕಾಗಿಯೇ ಮೀಸಲಾತಿಯ ಬಗ್ಗೆ, ಮೀಸಲಾತಿಯ ಫಲಾನುಭವಿಗಳ ಬಗ್ಗೆ ಆಳವಾದ ಪೂರ್ವಾಗ್ರಹಗಳನ್ನು ಸಮಾಜ ಸೃಷ್ಟಿಮಾಡಿತು. ಮೀಸಲಾತಿಯನ್ನು ಪಡೆಯುವವರು ಕೀಳರಿಮೆ ಅನುಭವಿಸುವಂತೆ ಮಾಡಿತು. ಕೊನೆಗೆ ಮೀಸಲಾತಿಯ ಆಶಯವನ್ನೇ ಗೇಲಿ ಮಾಡುವಂತೆ ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ ಹತ್ತು ಪರ್ಸೆಂಟ್ ಮೀಸಲಾತಿಯನ್ನು ನೀಡಲಾಯಿತು. ಇನ್ನು ರಾಜಕೀಯ ಮೀಸಲಾತಿಯನ್ನು ಅಸ್ಪೃಶ್ಯರಲ್ಲದ ಜಾತಿಗಳಿಗೆ ಹೆಚ್ಚು ಸಿಗುವಂತೆ ಮಾಡಿ ಅಸ್ಪೃಶ್ಯ ಜಾತಿಗಳಿಗೆ ವಂಚಿಸಲಾಗುತ್ತಿದೆ. ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎನ್ನುವ ನೆಪವೊಡ್ಡಿ ಅಸ್ಪೃಶ್ಯತೆಯ ನಿಷೇಧ ಕಾನೂನನ್ನು ತಿದ್ದುಪಡಿ ಮಾಡುವುದಕ್ಕೆ ಸುಪ್ರೀಂಕೋರ್ಟ್ ಮುಂದಾಗುತ್ತದೆ. ಆದರೆ ಇದೇ ಸಂವಿಧಾನವನ್ನು ಅಸ್ತ್ರವನ್ನಾಗಿಸಿಕೊಂಡು ದಲಿತರು ಹೋರಾಟ ಮಾಡಿ, ಸಂವಿಧಾನ ತಮಗೆ ಕೊಟ್ಟಿರುವ ಅವಕಾಶಗಳನ್ನು ಉಳಿಸಿಕೊಂಡಿದ್ದಾರೆ.
ಭಾರತದ ಸಂವಿಧಾನವನ್ನು ಹಲವು ದೇಶಗಳ ಸಂವಿಧಾನಗಳಿಂದ ಎರವಲು ಪಡೆದ ದಾಖಲೆಗಳ ಮೊತ್ತ, ಸಂವಿಧಾನ ಪಶ್ಚಿಮದ ಉದಾರವಾದಿ ಮೌಲ್ಯಗಳ ಅನುಕರಣೆ, ಸಂವಿಧಾನ ದಲಿತರನ್ನು ಕ್ರಾಂತಿಕಾರಿಗಳನ್ನಾಗುವುದನ್ನು ತಡೆದು ಸಂವಿಧಾನದ ಮೇಲೆ ಹೆಚ್ಚು ಅವಲಂಬಿತರಾಗುವಂತೆ ಮಾಡುತ್ತದೆ ಎನ್ನುವ ಟೀಕೆಗಳನ್ನು ಮಾಡುವವರಿದ್ದಾರೆ. ಆದರೆ, ಸಂವಿಧಾನ ಪರೋಕ್ಷವಾಗಿ ಜಾತಿವಿನಾಶದ ಅಸ್ತ್ರವಾಗಿ ಕೆಲಸ ಮಾಡುವುದರ ಮೂಲಕ ಸಮಾನತೆಯ ಸಮಾಜ ಕಟ್ಟುವುದಕ್ಕೆ ದಾರಿಯಾಗಿದೆ ಎನ್ನುವುದನ್ನು ಅವರು ಮರೆಯುತ್ತಾರೆ. ದೊಡ್ಡ ಮಟ್ಟದಲ್ಲಿ ಮೇಲ್ಜಾತಿಗಳ ಮನಸ್ಸನ್ನು ಪರಿವರ್ತಿಸುವುದಕ್ಕೆ ಸಂವಿಧಾನಕ್ಕೆ ಸಾಧ್ಯವಾಗದಿರಬಹುದು ಆದರೆ ದಲಿತರಿಗೆ ಅಪಾರವಾದ ಆತ್ಮವಿಶ್ವಾಸವನ್ನು, ವ್ಯಕ್ತಿ ಗೌರವವನ್ನು, ಸ್ವಾವಲಂಬನೆಯನ್ನು ತಂದುಕೊಟ್ಟಿದೆ. ಈ ಕಾರಣಕ್ಕಾಗಿಯೇ ದಲಿತರಿಗೆ ಸಂವಿಧಾನದ ಬಗ್ಗೆ ಹೆಚ್ಚು ಭರವಸೆಯಿದೆ. ದಲಿತರಿಗೆ ಸಂವಿಧಾನದ ಬಗ್ಗೆ ಇರುವ ಈ ಭರವಸೆಯೇ ಮೇಲ್ಜಾತಿಗಳಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಕುರಿತು ಹೆಚ್ಚು ಅಸಹನೆ ಬೆಳೆಯಲು ಕಾರಣವಾಗಿದೆ. ಕಳೆದುಕೊಂಡಿರುವ ಮಾನವ ಘನತೆಯನ್ನು ಮರಳಿ ಪಡೆಯುವುದೇ ನಮ್ಮ ಹೋರಾಟದ ಗುರಿ ಎಂದಿದ್ದರು ಅಂಬೇಡ್ಕರ್. ದಲಿತರಿಗೆ ಘನತೆ ತಂದುಕೊಡುವುದಕ್ಕೆ ಸಂವಿಧಾನ ಪ್ರಯತ್ನಿಸುತ್ತದೆ ಎನ್ನುವ ಕಾರಣಕ್ಕಾಗಿಯೇ ಇದು ಅಂಬೇಡ್ಕರ್ ಅವರ ಸಂವಿಧಾನ.

ವಿ ಎಲ್ ನರಸಿಂಹಮೂರ್ತಿ
ಬೆಂಗಳೂರಿನ ಬಸವನಗುಡಿಯ ’ದಿ ನ್ಯಾಷನಲ್ ಕಾಲೇಜ್’ನಲ್ಲಿ ಇಂಗ್ಲಿಷ್ ಅಧ್ಯಾಪಕರು.
ಇದನ್ನೂ ಓದಿ: ದಹಿಸುತ್ತಿರುವ ಕೋಮು ವಿಷಮತೆಗೆ ಮಠಾಧೀಶರುಗಳ ತುಪ್ಪ..



ಈ ಲೇಖನವನ್ನು ಡಾಬಸ್ ಪೇಟೆ ವಾಯ್ಸ್ ಕನ್ನಡ ಮಾಸಪತ್ರಿಕೆಯಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕೆಂದು ವಿನಂತಿ.
ಕೃಪೆ ಹಾಕಿ ಪ್ರಕಟಿಸಿ ಸರ್