ನನಗೆ ಮತ್ತು ನನ್ನ ಕುಟುಂಬದವರಿಗೆ ತರಳಬಾಳು ಜಗದ್ಗುರು 1108 ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಮತ್ತು ತರಳಬಾಳು ಬೆಂಗಳೂರು ಕೇಂದ್ರದ ಕಾರ್ಯದರ್ಶಿ ವಿಶ್ವನಾಥ ಮತ್ತು ಅವರ ನೌಕರರಾದ ಮರುಳಸಿದ್ದಪ್ಪ ಎಂಬುವವರಿಂದ ಜೀವ ಬೆದರಿಕೆ ಇದೆ ಎಂದು ಬೆಂಗಳೂರಿನ ಶಿಲ್ಪ ಎಂಬ ಮಹಿಳೆಯೊಬ್ಬರು ಆರೋಪಿಸಿದ್ದು, ರಕ್ಷಣ ನೀಡಬೇಕೆಂದು ಬೆಂಗಳೂರಿನ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
“ನನ್ನ ಪತಿ ಸಿದ್ದೇಶ್ ಎಸ್ ಎಂಬುವವರು 16 ವರ್ಷಗಳ ಕಾಲ ತರಳಬಾಳು ಕೇಂದ್ರ ಬೆಂಗಳೂರು ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ 2013 ರಲ್ಲಿ ವಿನಾಕಾರಣ ಜಗದ್ಗುರುಗಳು ನನ್ನ ಪತಿಯ ಮೇಲೆ ತಮ್ಮ ನೌಕರರಿಂದ ಹಲ್ಲೆ ನಡೆಸಿದ್ದರು. ಅದನ್ನು ಪ್ರಶ್ನಿಸಿದ ನನ್ನ ಅತ್ತೆ-ಮಾವನನ್ನು ಬೆದರಿಸಿ ಕೊಲೆ ಬೆದರಿಕೆ ಹಾಕಿದ್ದರು. ಈಗ ಮತ್ತೆ 2022ರ ಜನವರಿ ತಿಂಗಳಿನಲ್ಲಿ ಜಗದ್ಗುರುಗಳ ನೌಕರರು ನಮ್ಮ ಮನೆಯನ್ನು ಅತಿಕ್ರಮಣ ಮಾಡಿದ್ದಾರೆ. ನಮ್ಮ ರಕ್ಷಣೆಗೆ ಇದ್ದ ಸಿಸಿಟಿವಿಗಳನ್ನು ಧ್ವಂಸಗೊಳಿಸಿದ್ದಾರೆ. ನಮ್ಮ ಮನೆಯ ಗೇಟು, ಬಾಗಿಲುಗಳನ್ನು ಒಡೆದುಹಾಕಿ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ” ಎಂದು ಶಿಲ್ಪ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯಕ್ಕೆ ವಿಶ್ವನಾಥ, ಮರುಳಸಿದ್ದಪ್ಪ ಮತ್ತು ಅವರ ಸಹಚರರು ನಮ್ಮ ಮನೆಯನ್ನು ಅತಿಕ್ರಮಣ ಮಾಡಿ ವಾಸಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ಜಗದ್ಗುರಗಳ ಬೆಂಬಲ ಆರೋಪಿಗಳಿಗೆ ಇರುವುದರಿಂದ ನಾವು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ನಮ್ಮ ಸ್ವಂತ ಊರಾದ ವಿಜಯನಗರ ಜಿಲ್ಲೆಯ ತೊಲಹಳ್ಳಿಯಿಂದಲೂ ನಮ್ಮನ್ನು ಒಕ್ಕಲೆಬ್ಬಿಸಿದ್ದರು. ಈಗ ಇಲ್ಲಿಯು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಗುಬ್ಬಿ: ಇಬ್ಬರು ದಲಿತ ಯುವಕರ ಭೀಕರ ಹತ್ಯೆ; ಖೈರ್ಲಾಂಜಿ ಮಾದರಿ ಪ್ರಕರಣ?
ಏಪ್ರಿಲ್ 20 ರಂದು ಮರುಳಸಿದ್ದಪ್ಪ, ಸುರೇಶ್ ಮತ್ತು ವಾಹನ ಚಾಲಕರಾದ ನಾಗೇಶ್ ಎಂಬುವವರು ಜೊತೆಗೂಡಿ ಕುಡಿದು ಬಂದು ನಮ್ಮ ಮನೆಯಲ್ಲಿ ಜಗಳ ಮಾಡಿರುತ್ತಾರೆ. ನನಗೆ ಮತ್ತು ನನ್ನ ಗಂಡನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ. ದೂರು ನೀಡಲು ಹೋದ ನನ್ನ ಪತಿ ಸಿದ್ದೇಶ್‌ರವರನ್ನು ಪೊಲೀಸರು ಕೆಲ ಹೊತ್ತು ಠಾಣೆಯಲ್ಲಿಯೇ ಇಟ್ಟುಕೊಂಡಿದ್ದರು. ಆ ನಂತರ ವಾಪಸ್ ಕಳಿಸಿದ ಪರಿಣಾಮ 21ನೇ ತಾರೀಖು ದೂರು ನೀಡಿದ್ದೇವೆ. ಈಗಲಾದರೂ ನಮಗೆ ನ್ಯಾಯ ಕೊಡಿಸಿ ಮತ್ತು ರಕ್ಷಣೆ ಕೊಡಿಸಿ. ಇಲ್ಲ ಇದರಿಂದ ನಮ್ಮ ಮತ್ತು ನಮ್ಮ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ, ಅಥವಾ ಸಾವು ಸಂಭವಿಸಿದರೆ ಶಿವಮೂರ್ತಿ ಶಿಚಾಚಾರ್ಯ ಮಹಾಸ್ವಾಮಿ ಮತ್ತು ತರಳಬಾಳು ಬೆಂಗಳೂರು ಕೇಂದ್ರದ ಕಾರ್ಯದರ್ಶಿ ವಿಶ್ವನಾಥ, ನೌಕರರಾದ ಮರುಳಸಿದ್ದಪ್ಪ, ಅವರ ಹೆಂಡತಿ, ಸುರೇಶ, ನಾಗೇಶ, ವೀರಯ್ಯ, ಪುನೀತರವರೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಪ್ರತಿಯನ್ನು ಮುಖ್ಯಮಂತ್ರಿಗಳು, ಗೃಹಮಂತ್ರಿಗಳು, ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ಕಮಿಷನರ್, ಡಿಸಿಪಿ, ಎಸಿಪಿ, ಮಹಿಳಾ ಆಯೋಗ, ಮಕ್ಕಳ ಇಲಾಖೆಗೂ ಕೂಡ ಸಲ್ಲಿಸಲಾಗಿದೆ.
ಮಠದ ಅನ್ನ ತಿಂದು ಮಠಕ್ಕೆ ಕಳಂಕವ ತಂದು ಇದೀಗ ಜೀವ ಬೆದರಿಕೆಯ ನಾಟಕವಾಡುವಿದು, ಸಮಾಜದಲ್ಲಿ ಗಣ್ಯರ ತೇಜೋವಧೆಗೆ ಯತ್ನಿಸುವವರನ್ನು ಎಂದಿಗೂ ನಂಬಬಾರದು