ಏಪ್ರಿಲ್ ತಿಂಗಳ 14ರಂದು ಬಾಬಾಸಾಹೇಬರ ಜಯಂತಿ ಆಚರಿಸುವುದರಿಂದ, ಇದನ್ನು ’ದಲಿತ ಇತಿಹಾಸ ತಿಂಗಳ’ನ್ನಾಗಿ ಪರಿಗಣಿಸಿ, ಡಾ. ಅಂಬೇಡ್ಕರ್ ಅವರನ್ನು ಸ್ಮರಿಸುವುದರ ಜೊತೆಗೆ ದಲಿತ ಚಿಂತನೆ-ಹೋರಾಟಗಳು ಮತ್ತು ದಲಿತ ಚಿಂತಕ-ಹೋರಾಟಗಾರರನ್ನು ನೆನೆಯಲಾಗುತ್ತಿದೆ. ಆ ನಿಟ್ಟಿನಲ್ಲಿ ಏಪ್ರಿಲ್ 21 ಕೂಡ ಕರ್ನಾಟಕಕ್ಕೆ ನೆನಪಿಸಿಕೊಳ್ಳಲೇಬೇಕಾದ ಮಹತ್ವದ ದಿನವಾಗಿತ್ತು. ಆದರೆ ಅಂದು ನಡೆದ ಎರಡು ಘಟನೆಗಳು ನಮ್ಮ ಸಮಾಜದ ಕರಾಳತೆಯನ್ನು ನೆನಪಿಸಿದವು. ಕರಾಳ ಇತಿಹಾಸ ವರ್ತಮಾನವೂ ಆಗಿ ಮುಂದುವರೆದಿರುವುದನ್ನು ಮನಗಾಣಿಸಿದವು.
ಅಂದು ಬಿಬಿಎಂಪಿ ಪತ್ರಿಕಾಗೋಷ್ಠಿ ನಡೆಸಿ ಒಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತು. ಅದರೆ ಮೊದಲ ಪ್ಯಾರಾಗ್ರಾಫ್ ಹೀಗಿತ್ತು: “ಭಾರತ ಸರ್ಕಾರದ ಸೂಚನೆಯಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳನ್ನು ಗುರುತಿಸಿ ಗುರುತಿನ ಚೀಟಿ ವಿತರಿಸಲಾಗುತ್ತಿದ್ದು, ಇಂದು ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತರವರು ಸಾಂಕೇತಿಕವಾಗಿ 8 ಮಂದಿಗೆ ಗುರುತಿನ ಚೀಟಿ ವಿತರಣೆ ಮಾಡಿದರು”. ಅಂತೂ ತಮ್ಮ ಪತ್ರಿಕಾ ಹೇಳಿಕೆಯಲ್ಲಿಯೇ ಇದನ್ನು ’ಸಾಂಕೇತಿಕ’ ಪ್ರಚಾರ ಅಭಿಯಾನ ಎಂದು ಗುರುತಿಸಿಕೊಂಡಿದ್ದಾರೆ. 2013ರ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆಯ ಪ್ರಕಾರ ಆಗಬೇಕಿದ್ದ ಕೆಲಸದ ಬದಲಿಗೆ ’ಸಾಂಕೇತಿಕ ಪತ್ರಿಕಾ ಗೋಷ್ಠಿ’ಯನ್ನು ನಡೆಸಲು ಆಯ್ದುಕೊಂಡ ದಿನದ ಮಹತ್ವ ಬಿಬಿಎಂಪಿ ಆಯುಕ್ತರಿಗೆ ತಿಳಿದಿತ್ತೋ ಇಲ್ಲವೋ! ಮಲ ಹೊರುವ ಪದ್ಧತಿಯನ್ನು ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನಿಷೇಧಿಸಿ, ಉಳಿದ ರಾಜ್ಯಗಳಿಗೆ ಮತ್ತು ಇಡೀ ದೇಶಕ್ಕೆ ಮಾದರಿಯಾಗಿದ್ದ ದಲಿತ ರಾಜಕಾರಣಿ ಬಿ ಬಸವಲಿಂಗಪ್ಪನವರ 101ನೇ ಜಯಂತಿಯಾಗಿತ್ತು ಅದು. 73ರಲ್ಲಿ ಅವರು ಮಾಡಿದ ಕಾನೂನಿನ ನಂತರ ಹಲವು ಕಾನೂನು ಕಾಯ್ದೆಗಳು ಬಂದು ತಿದ್ದುಪಡಿಯಾಗಿ ಉಚ್ಚೆ-ಕಕ್ಕಸ್ಸುಗಳ ಸಂಪರ್ಕಕ್ಕೆ ಬರುವ ಈ ಕೆಲಸವನ್ನು ನಿಷೇಧಗೊಳಿಸಲಾಗಿದ್ದರೂ, ಇನ್ನೂ ಕಕ್ಕಸ್ಸು ಗುಂಡಿಗಳಿಗೆ ಇಳಿಯುವ ದೃಶ್ಯ ಬೆಂಗಳೂರಿನಂತಹ ಮಹಾನಗರಗಳಲ್ಲಿಯೇ ನಿಂತಿಲ್ಲ! ಪ್ರತಿ ವರ್ಷ ಬೆಂಗಳೂರಿನಲ್ಲಿ ಕಟ್ಟಿಕೊಂಡ ’ಮ್ಯಾನ್‌ಹೋಲ್’ಗಳನ್ನು ಸರಿಪಡಿಸಲು ಮನುಷ್ಯರನ್ನು ಇಳಿಸುತ್ತಿರುವುದು ಆಗಾಗ ವರದಿಯಾಗುತ್ತಲೇ ಇದೆ. ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವ ಜೆಟ್ಟಿಂಗ್ ಯಂತ್ರಗಳು ಇನ್ನೂ ಸಂಪೂರ್ಣವಾಗಿ ಮನುಷ್ಯರನ್ನು ಬದಲಿಸಿಲ್ಲ! ಇನ್ನು ಬಿಬಿಎಂಪಿ ಸೇರಿದಂತೆ ಹಲವು ಪಾಲಿಕೆಗಳು ಮತ್ತು ಸರ್ಕಾರಗಳು ಮಲ ಬಾಚುವ ಕೆಲಸವನ್ನು ಮಾಡುತ್ತಿದ್ದವರನ್ನು ಗುರುತಿಸಿ, ಪುನರ್ವಸತಿ ಒದಗಿಸುವುದನ್ನು ಸಂಪೂರ್ಣಗೊಳಿಸುವುದಿರಲಿ, ’ಸಾಂಕೇತಿಕ’ ಗುರುತು ಚೀಟಿಗಳನ್ನೇ ಸರಿಯಾಗಿ ನೀಡಿಲ್ಲ!

ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ಸದಸ್ಯರಾಗಿರುವ ಸಿದ್ದಾರ್ಥ ಅವರು ಈ ’ಸಾಂಕೇತಿಕ’ ರಾಜಕಾರಣದ ಅಪಾಯಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾರೆ: “2020-21ರಲ್ಲಿ ರಾಜ್ಯಮಟ್ಟದ ಕಾವಲು ಸಮಿತಿ, ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರಿನಲ್ಲಿಯೇ ಸುಮಾರು 1400ಕ್ಕೂ ಹೆಚ್ಚು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಅನ್ನು ಗುರುತಿಸಿದೆ. ಹೀಗೆ ಗುರುತಿಸಿದ 15 ದಿನಗಳಲ್ಲಿ ಅವರಿಗೆ 2013ರ ಕಾಯ್ದೆಯಲ್ಲಿರುವಂತೆ ನಗದು ಸಹಾಯ ನೀಡಿ, ಪುನರ್ವಸತಿ ಕಲ್ಪಿಸಬೇಕು. ಹೀಗೆ ಗುರುತಿಸಿ ವರ್ಷಾನುಗಟ್ಟಲೆ ಕಳೆದಿದ್ದರೂ ಬಿಬಿಎಂಪಿ 201 ಜನರನ್ನು ಮಾತ್ರ ಗುರುತಿಸಿರುವ ಬಗ್ಗೆ ಹೇಳುತ್ತಿದೆ. ಇನ್ನು ಆ 1400 ಜನರಲ್ಲಿ ಕಳೆದ ಎರಡು ವರ್ಷಗಳಲ್ಲಿ ಹಲವರು ಕೋವಿಡ್ ಇಂದ ತೀರಿ ಹೋದರು. ಬಿಬಿಎಂಪಿ ಒಪ್ಪಿಕೊಂಡಿರುವ 201 ಜನರಿಗೂ ಸಂಪೂರ್ಣವಾಗಿ ಪುನರ್ವಸತಿ ಕಲ್ಪಿಸುವ ಕೆಲಸವಾಗಿಲ್ಲ. ಐಡಿ ಕಾರ್ಡ್ ಕೊಡುವ ಸಾಂಕೇತಿಕತೆ ಮುಖ್ಯವಲ್ಲ. ಈ ಬಡಪಾಯಿಗಳಿಗೆ ತಮ್ಮ ಜೀವನವನ್ನು ಕಟ್ಟಿಕೊಡಲು ತುರ್ತಾಗಿ ಸಹಾಯವನ್ನು ಕಲ್ಪಿಸಿಕೊಡಬೇಕು” ಎನ್ನುತ್ತಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಗ್ಗೆ ಮಾತನಾಡುತ್ತಿರುವ ಸರ್ಕಾರದ ಇಂತಹ ನಡೆಗಳ ಬಗ್ಗೆ ನಾಗರಿಕ ಸಮಾಜವೂ ತಲೆತಗ್ಗಿಸಬೇಕಿದೆ. ಅಸ್ಪೃಶ್ಯತೆಯಲ್ಲಿ ಕಟ್ಟಕಡೆಯ ವ್ಯಕ್ತಿಗಳ ಬಗ್ಗೆ ಈ ಸಮಾಜದ ನಡವಳಿಕೆ ಸಮಗ್ರವಾಗಿ ಬದಲಾಗದೆ ಇರುವುದಕ್ಕೆ ಇವುಗಳು ಸಣ್ಣ ಸಾಕ್ಷಿಗಳಂತೆ ಕಾಣುತ್ತವಷ್ಟೇ! ಇದರ ಆಳ ಮ್ಯಾನ್‌ಹೋಲ್‌ಗಿಂತಲೂ ದೊಡ್ಡದು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸುದೀರ್ಘ ಕಾಲದವರೆಗೆ ರಾಜಕಾರಣಿಯಾಗಿದ್ದ ಬಸವಲಿಂಗಪ್ಪನವರು 73ರಲ್ಲಿ ಜಾರಿ ಮಾಡಿದ ಕಾಯ್ದೆಯನ್ನು ನಮ್ಮ ಇಂದಿನ ರಾಜಕಾರಣಿಗಳಿ, ನೀತಿ ನಿರೂಪಕರು ಇನ್ನಾದರೂ ನೆನೆಯಬೇಕಿದೆ. ಅಷ್ಟೇ ಅಲ್ಲ, ಹಲವು ಬಾರಿ ಸಂಪುಟ ಸಚಿವರಾಗಿ ಅವರು ಮಾಡಿದ ಮಹತ್ವದ ಕೆಲಸಗಳು ಇಂದು ನೇಪಥ್ಯಕ್ಕೆ ಸರಿದಿವೆ. ಅವರನ್ನು ಗುರಿಯಾಗಿಸಿ ರಾಜೀನಾಮೆ ಪಡೆಯಲು ಸಾಧ್ಯವಾಗಿದ್ದ ’ಬೂಸಾ ಚಳವಳಿ’ಯೊಂದಿಗೆ ಅಲ್ಪಸ್ವಲ್ಪ ನೆನಪುಗಳು ಆಗಾಗ ಮರುಕಳಿಸುತ್ತಿರುತ್ತವಷ್ಟೇ. ಸದಾ ಕೋಮು ದ್ವೇಷದ ಮಲದಲ್ಲಿ ಒದ್ದಾಡುವ ಸಮಾಜಕ್ಕೆ
ಬಸವಲಿಂಗಪ್ಪನವರ ಬದುಕು ಮತ್ತು ಬರಹ ಬಡಿದೆಚ್ಚರಿಸಬೇಕಿದೆ. ಅವರ ಒಂದು ಭಾಷಣದ ಕೆಲವು ಮಾತುಗಳನ್ನು ಇಲ್ಲಿ ಸ್ಮರಿಸಬಹುದಾದರೆ: “ಈ ಹೇಲು-ಉಚ್ಚಿ ಹೊರುವಂಥಹುದನ್ನು ನಾನು ನಿಲ್ಲಿಸಿದೆ. ಪತ್ರಿಕೆಗಳಲ್ಲೆಲ್ಲ ಮಲ-ಮೂತ್ರ ಹೊರುವುದನ್ನು ನಿಲ್ಲಿಸಲು ಬಸವಲಿಂಗಪ್ಪ ಪ್ರಯತ್ನ ಮಾಡುತ್ತಿದ್ದಾನೆ ಎಂದು ಬರೆದರೇ ಹೊರತು ಹೇಲು-ಉಚ್ಚಿ ಅಂತ ಒಬ್ಬರೂ ಬರೆಯಲಿಲ್ಲ. ನಾನು ಹೇಳಿದ್ದೆಲ್ಲ ಹೇಲು-ಉಚ್ಚಿ ಅಂತಲೇ. ಏಕೆಂದರೆ ಎಲ್ಲರಿಗೂ ತಿಳಿವಳಿಕೆಯಾಗುತ್ತದೆ. ಮಲನೂ ಸಂಸ್ಕೃತ ಮೂತ್ರನೂ ಸಂಸ್ಕೃತ.
ಯಾರಿಗೆ ಅರ್ಥವಾಗುತ್ತದೆ? ನಾನು ವೇದಿಕೆಯಿಂದ ಹೇಲು-ಉಚ್ಚಿ ಅಂತ ಹೇಳಿದರೆ ’ಅಸಿಸಿಸೀ’ ಅಂತ ಹೇಳುತ್ತಿದ್ದರು. ಹೇಳಿದ್ದನ್ನು ಕೇಳಿಯೇ ’ಅಸಿಸೀ’ ಅಂದರೆ, ಹೊರುವಂತಹ ವ್ಯಕ್ತಿಗೆ ಅದು ಹೇಗಿರಬೇಕು? ಆದುದರಿಂದ ಸಮಾಜ ಬದಲಾವಣೆ ಮಾಡಬೇಕು. ಸಮಾಜದ ವಿಚಾರಶಕ್ತಿಯನ್ನು ಬದಲಾವಣೆ ಮಾಡಬೇಕು…”

ಮೂಲತಃ ಬಿಜಾಪುರದವರಾದರೂ, ಹರಿಹರಕ್ಕೆ ವಲಸೆ ಬಂದು ನೆಲೆಸಿದ್ದ ಕುಟುಂಬದಲ್ಲಿ ಜನಿಸಿದ ಬಿ ಬಸವಲಿಂಗಪ್ಪನವರು 1949ರಿಂದ ಸುಮಾರು ನಾಲ್ಕು ದಶಕಗಳ ಕಾಲ ಕರ್ನಾಟಕದ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದವರು. ಎಷ್ಟೋ ಬಾರಿ ಮುಖ್ಯಮಂತ್ರಿಯಾಗಬೇಕಿದ್ದರೂ ಸವರ್ಣೀಯರ ಪ್ರಾಬಲ್ಯದಲ್ಲಿ ಆ ಅವಕಾಶವನ್ನು ಕಳೆದುಕೊಂಡವರು. 57ರಲ್ಲಿ ಗೃಹಖಾತೆ ಉಪಸಚಿವ, 72ರಲ್ಲಿ ಪೌರಾಡಳಿತ ಸಚಿವ, 77ರಲ್ಲಿ ಕಂದಾಯ ಮಂತ್ರಿ, 83ರಲ್ಲಿ ಪಶುಸಂಗೋಪನಾ ಮತ್ತು ಅರಣ್ಯಸಚಿವ, 83ರಲ್ಲಿ ಗ್ರಾಮೀಣಾಭಿವೃದ್ಧಿ ನಂತರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದವರು. ಹೇಲು ಹೊರುವ ಪದ್ಧತಿಯನ್ನು ನಿಷೇಧ ಮಾಡಿದ್ದಷ್ಟೇ ಅಲ್ಲ, ಕಂದಾಯ ಮಂತ್ರಿಯಾಗಿದ್ದಾಗ ಭೂಸುಧಾರಣಾ ಕಾಯ್ದೆಗೆ, ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಜಿಲ್ಲಾ ಪಂಚಾಯತ್ ಮಸೂದೆಗೆ ತಿದ್ದುಪಡಿ ತಂದು, ಪರಿಶಿಷ್ಟ, ಮಹಿಳಾ ಮತ್ತು ಹಿಂದುಳಿದ ವರ್ಗದವರು ಪಂಚಾಯತ್ ಛೇರ್ಮನ್ ಆಗುವ ಅವಕಾಶ ಕಲ್ಪಿಸಿಕೊಡಲು ಕಾರಣರಾಗಿದ್ದರು. ಕರ್ನಾಟಕದ ಏಳಿಗೆಗೆ ತಮ್ಮ ಅಧಿಕಾರಾವಧಿಯಲ್ಲಿ ಇಂತಹ ಪ್ರಗತಿಪರವಾದ ನೂರಾರು ಕೆಲಸಗಳನ್ನು ಮಾಡಿದ್ದ ಬಸವಲಿಂಗಪ್ಪನವರು ನೀಡಿದ ಒಂದು ಸಾಮಾನ್ಯ ಹೇಳಿಕೆಗೆ ಅವರನ್ನು ಖಳನಾಯಕನನ್ನಾಗಿಸಿ ರಾಜೀನಾಮೆ ನೀಡುವಂತೆ ಮಾಡಿತ್ತು ಕರ್ನಾಟಕ.
1973ರಲ್ಲಿ ’ಹೊಸ ಅಲೆಗಳು’ ಎಂಬ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ’ಕನ್ನಡ ಸಾಹಿತ್ಯದಲ್ಲಿ ಬಹುತೇಕ ಬೂಸಾ’ ಎಂಬ ಅವರ ಹೇಳಿಕೆಯ ಕಾರಣಕ್ಕಾಗಿ, ಅವರ ವೈಚಾರಿಕತೆಯಿಂದ ಬೆದರಿದ್ದ ವೈದಿಕಶಾಹಿ ಅವರ ಮೇಲೆ ಇನ್ನಿಲ್ಲದಂತೆ ದಾಳಿ ನಡೆಸಿತು. ಬಸವಲಿಂಗಪ್ಪನವರು ರಾಜೀನಾಮೆ ನೀಡುವಂತೆ ಮಾಡಲಾಯಿತು. ಆಗ ರಾಜ್ಯಾದ್ಯಂತ ಬಸವಲಿಂಗಪ್ಪನವರ ಬೆಂಬಲಕ್ಕೆ ನಿಂತ ದಲಿತರು ಮತ್ತು ಹಿಂದುಳಿದವರ ಮೇಲೆ ಹಲ್ಲೆಗಳಾದವು. ದಲಿತ ಸಮುದಾಯದ ರಾಜಕೀಯ ಪ್ರತಿನಿಧಿಗಾದ ಈ ಅವಮಾನ ಮತ್ತು ದ್ರೋಹ ಕರ್ನಾಟಕದಲ್ಲಿ ಮತ್ತೊಂದು ದೊಡ್ಡ ಸಂಘಟನೆ ಹುಟ್ಟುವುದಕ್ಕೆ ಕಾರಣವಾಯಿತು. ಹರಿಹರ ತಾಲೂಕಿನವರೇ ಆದ ಬಿ ಕೃಷ್ಣಪ್ಪ ಆಗ ಭದ್ರಾವತಿಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೃಷ್ಣಪ್ಪ, ದೇವನೂರ ಮಹದೇವ, ಸಿದ್ಧಲಿಂಗಯ್ಯ ಮುಂತಾದ ಚಿಂತಕರು, ಸಂಘಟಕರು ಸೇರಿ ಕಟ್ಟಿದ ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಂತ ದಮನಿತ ಮತ್ತು ತುಳಿತಕ್ಕೊಳಗಾದವರ ಪರವಾಗಿ ಕಟ್ಟಿದ ಹೋರಾಟಗಳು ಇಂದು ಕೂಡ ಮಾರ್ದನಿಸುತ್ತವೆ. ಇಂದಿನ ಸವಾಲುಗಳ ವಿರುದ್ಧ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರಿಗೆ ಮತ್ತು ಚಳವಳಿಗಾರರಿಗೆ ಚಿಂತನೆಯ ಚಿಲುಮೆಯಾಗಿವೆ. ಬಿ ಕೃಷ್ಣಪ್ಪನವರು 1997ರ ಏಪ್ರಿಲ್ ತಿಂಗಳ 30ನೇ ತಾರೀಕು ಕೊನೆಯುಸಿರೆಳೆದರು. ಇಂತಹ ಮಹಾನ್ ಹೋರಾಟಗಾರರು ನಮ್ಮ ಮಕ್ಕಳ ಶಿಕ್ಷಣದಲ್ಲಿ-ಪಠ್ಯಗಳಲ್ಲಿ ಇನ್ನೂ ಜಾಗ ಪಡೆದಿಲ್ಲವೇಕೆ ಎಂಬ ಪ್ರಶ್ನೆಗೆ ಇನ್ನಾದರು ಉತ್ತರ ಕಂಡುಕೊಳ್ಳಬೇಕಿದೆ.

ಏಪ್ರಿಲ್ 21ರ ರಾತ್ರಿ ನಡೆದ ಮತ್ತೊಂದು ಘಟನೆ ಆ ದಿನವನ್ನು ಇನ್ನಷ್ಟು ದುಗುಡಕ್ಕೆ ನೂಕಿತು. ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಎಂಬ ಗ್ರಾಮದಲ್ಲಿ ಇಬ್ಬರು ದಲಿತ ಯುವಕರು ಕೊಲೆಯಾಗಿ ಹೋದರು. ಈ ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಕೊಲೆಗಳು ದಿನನಿತ್ಯದ ವಿದ್ಯಮಾನಗಳಾಗಿ ಮುಂದುವರೆದಿವೆ. ಇತ್ತೀಚಿಗೆ ಆ ದೌರ್ಜನ್ಯಗಳನ್ನು ವಿಡಿಯೋ ಮಾಡಿ ಹಂಚಿಕೊಳ್ಳುವುದಕ್ಕೂ ಹಿಂಜರಿಯುತ್ತಿಲ್ಲ ದುಷ್ಕರ್ಮಿಗಳು. ಈ ಘಟನೆಯ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳು ಪೆದ್ದನಹಳ್ಳಿ ಗ್ರಾಮಕ್ಕೆ ತೆರಳಿ ಸರಿಯಾದ ತನಿಖೆ ನಡೆಸುವಂತೆ ಆಗ್ರಹಿಸುತ್ತಿವೆ.
ದಮನಿತರನ್ನು ಕೊಲೆ ಮಾಡಿ ಕಳ್ಳತನದ ಆರೋಪ ಹೊರಿಸುವುದು ಕೂಡ ಈ ದೇಶದಲ್ಲಿ ಸಾಮಾನ್ಯ ಸಂಗತಿಯೇ! ಅದು ಈ ಕೊಲೆಗಳ ಸಮಯದಲ್ಲಿಯೂ ನಡೆಯುತ್ತಿದೆ. ನಾನುಗೌರಿ ನ್ಯಾಯಪಥ ತಂಡದ ಯತಿರಾಜ್ ಅವರು ಪೆದ್ದನಹಳ್ಳಿ ಗ್ರಾಮಕ್ಕೆ ತೆರಳಿ ಮಾಡಿದ ವರದಿಯಲ್ಲಿ ಕೊಲೆಯಾದ ಪೆದ್ದನಹಳ್ಳಿಯ ಗಿರೀಶ್ (ಕೊಲೆಯಾದ ಇಬ್ಬರ ಹೆಸರೂ ಗಿರೀಶ್) ಅವರ ತಾಯಿ ಗೌರಮ್ಮ, “ನನ್ನ ಮಗ ಪಿಟ್ (ಮಲದ ಗುಂಡಿ) ಕ್ಲೀನ್ ಮಾಡುತ್ತಿದ್ದ. ಯಾವುದೇ ಕೆಲಸ ಇಲ್ಲದಿದ್ದಾಗ ಮಲದ ಗುಂಡಿ ಶುಚಿಗೊಳಿಸುವ ಕೆಲಸಕ್ಕೆ ಹೋಗುತ್ತಿದ್ದ. ಈ ಕೆಲಸ ಮಾಡೋರು, ಕಳ್ಳತನ ಮಾಡುತ್ತಾರಾ ಸ್ವಾಮಿ?” ಅಂದಿದ್ದು ಈ ರೋಗಗ್ರಸ್ತ ಸಮಾಜದಿಂದ ನೊಂದು ಬಸವಳಿದ ತಾಯಿಯ ಮಾತುಗಳು. ಕೊಲೆ ಯಾವ ಕಾರಣಕ್ಕಾಗಿದೆಯೋ ಅದು ತನಿಖೆಯಿಂದ ಹೊರಬರಬೇಕಿದೆ. ಆದರೆ ಈ ದೇಶದಲ್ಲಿ ಮಲದಗುಂಡಿಯನ್ನು ಮನುಷ್ಯರು ಕ್ಲೀನ್ ಮಾಡುವ ಸಂಪ್ರದಾಯ ಜೀವಂತವಾಗಿರುವುದು ಮತ್ತು ಆ ಕೆಲಸ ಮಾಡುವವರು ಈ ದೇಶದ ದುಷ್ಕರ್ಮಿಗಳಿಗೆ, ಸವರ್ಣೀಯರಿಗೆ ಸುಲಭದ ಟಾರ್ಗೆಟ್ ಆಗಿರುವುದಂತೂ ಸತ್ಯ ಎಂಬುದು ನಿರ್ವಿವಾದ.
ಏಪ್ರಿಲ್ ದಮನಿತ ಸಮುದಾಯಗಳ ಹಲವು ಹೋರಾಟಗಳ ನೆನಪುಗಳನ್ನು ಬಿಚ್ಚಿಡುವ ತಿಂಗಳು. ಆದರೆ ಅದೇ ಸಮಯದಲ್ಲಿ ದಮನಿತರ, ದಲಿತರ ಮೇಲಿನ ಹಲ್ಲೆಗಳು, ಅವರ ಕೊಲೆಗಳು ಸಾಂಗೋಪವಾಗಿ ನಡೆಯುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಕ್ಷಿಪ್ರಜ್ಞೆಯಂತಿರುವ ಗುಜರಾತ್‌ನ ದಲಿತ ಶಾಸಕ-ಹೋರಾಟಗಾರ ಜಿಗ್ನೇಶ್ ಮೇವಾನಿ ಅವರನ್ನು ಕ್ಷುಲ್ಲಕ ಕಾರಣ ನೀಡಿ ಬಂಧಿಸಲಾಗುತ್ತದೆ. ಜಾಮೀನು ನಿರಾಕರಿಸಿ ಮೂರು ದಿನಗಳ ಕಾಲ ಬಂಧಿಸಲಾಗುತ್ತದೆ. ಜಾಮೀನು ಸಿಕ್ಕ ನಂತರ ಅದೇ ಆರೋಪದಡಿ ಮತ್ತೊಂದು ಜಿಲ್ಲೆಯಲ್ಲಿ ಬಂಧಿಸಲಾಗುತ್ತದೆ! ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಭಾರತ ದೇಶದ ದುರಂತವಲ್ಲದೆ ಮತ್ತೇನು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್: ಪೆದ್ದನಹಳ್ಳಿಯಲ್ಲಿ ದಲಿತರ ಹತ್ಯೆ; ನೊಂದ ಕುಟುಂಬಗಳ ನೋವಿನ ಕಥೆ ಇದು


