Homeರಾಜಕೀಯಕ್ಷೇತ್ರ ಮರು ವಿಂಗಡಣೆ: ಹಿಂದೂಗಳು ಹೆಚ್ಚಿರುವ ಜಮ್ಮುವಿನಲ್ಲಿ 6 ಹೆಚ್ಚು ಕ್ಷೇತ್ರ ಸೃಷ್ಟಿ, ಮುಸ್ಲಿಮರು ಹೆಚ್ಚಿರುವ...

ಕ್ಷೇತ್ರ ಮರು ವಿಂಗಡಣೆ: ಹಿಂದೂಗಳು ಹೆಚ್ಚಿರುವ ಜಮ್ಮುವಿನಲ್ಲಿ 6 ಹೆಚ್ಚು ಕ್ಷೇತ್ರ ಸೃಷ್ಟಿ, ಮುಸ್ಲಿಮರು ಹೆಚ್ಚಿರುವ ಕಾಶ್ಮೀರಕ್ಕೆ ಕೇವಲ 1

ಜಮ್ಮು ಮತ್ತು ಕಾಶ್ಮೀರದ ಚುನಾವಣಾ ನಕ್ಷೆಯ ಯದ್ವಾತದ್ವಾ ಬದಲಾವಣೆಯು ಹಿಂದೂಗಳ ಪ್ರಭಾವವನ್ನು ಹೆಚ್ಚಿಸಿ, ಮುಸ್ಲಿಮರ, ದಲಿತರ ಪ್ರಾತಿನಿಧ್ಯವನ್ನು ಕಡಿಮೆ ಮಾಡಲಿದೆ. ಕ್ಷೇತ್ರ ಮರುವಿಂಗಡಣೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿಗೆ ಲಾಭ ಮಾಡಿಕೊಡುವ ಯೋಚಿತ ಸಂಚು ಭರದಿಂದ ಸಾಗಿದೆ.

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ಮುಗಿದ ಬಳಿಕ ಅಲ್ಲಿ ಚುನಾವಣೆ ನಡೆಸುವುದಾಗಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಘೋಷಿಸಿದ್ದಾರೆ. ಆದರೆ, ಕ್ಷೇತ್ರಗಳ ಮರುವಿಂಗಡಣೆಗಾಗಿ ರಚಿಸಲಾಗಿದ್ದ ಮೂವರು ಸದಸ್ಯರ  ಆಯೋಗದ ವರದಿಯ ವಿಶ್ಲೇಷಣೆಯು ಹಿಂದೂ ಮತಗಳು ಹಿಂದೆಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿ ಮುಸ್ಲಿಮರ ಪ್ರಭಾವವು ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂಬುದನ್ನು ಸೂಚಿಸುತ್ತದೆ. ಕ್ಷೇತ್ರ ಮರುವಿಂಗಡಣೆಯ ಮಾನಡಂಡಗಳು, ಜನಸಂಖ್ಯೆ, ಭೌಗೋಳಿಕ ಅನುಕೂಲತೆ ಮತ್ತು ವಿಸ್ತೀರ್ಣಗಳ ನಿಯಮಗಳನ್ನು ಸಂಪೂರ್ಣ ಕಡೆಗಣಿಸುವುದರಿಂದ ಇದು ಸಾಧ್ಯವಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದ 90 ಕ್ಷೇತ್ರಗಳಲ್ಲಿ 70ನ್ನು ಮರುವಿಂಗಡಣೆ ಮಾಡಲಾಗುತ್ತಿದೆ. ಹೀಗೆ ಹೇಳುವುದಕ್ಕೆ ಬದಲಾಗಿ ಬಿಜೆಪಿಗೆ ಅನುಕೂಲವಾಗುವಂತೆ ಹೊಸದಾಗಿ ರಚನೆ ಮಾಡಲಾಗುತ್ತಿದೆ ಎನ್ನುವುದೇ ಸೂಕ್ತ. ಉದಾಹರಣೆಗೆ ಕಾಶ್ಮೀರ ಕಣಿವೆಯಲ್ಲಿ ಮುಸ್ಲಿಂ ಜನಸಂಖ್ಯೆ 95 ಶೇಕಡಾ ಇದ್ದು, ಅಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ. ತೀರಾ ಸರಳವಾಗಿ ಹೇಳುವುದಾದರೆ, ಹಿಂದೂಗಳು ಹೆಚ್ಚಿರುವಲ್ಲಿ ಕಡಿಮೆ ಮತದಾರರಿರುವ ಹೆಚ್ಚು ಕ್ಷೇತ್ರಗಳನ್ನು ರಚಿಸಿ, ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚು ಮತದಾರರಿರುವ ಕಡಿಮೆ ಕ್ಷೇತ್ರಗಳನ್ನು ರಚಿಸಲಾಗುತ್ತಿದೆ.

ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಒಟ್ಟು 114 ವಿಧಾನಸಭಾ ಕ್ಷೇತ್ರಗಳಿದ್ದವು. ಇವುಗಳಲ್ಲಿ 24 ಕ್ಷೇತ್ರಗಳನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮೀಸಲಿಡಲಾಗಿದೆ. ಅದು ತನ್ನ ಪ್ರದೇಶ ಎಂದು ಭಾರತವು ಹೇಳುತ್ತಿದ್ದು, ಅಲ್ಲಿ ಸದ್ಯಕ್ಕೆ ಪಾಕಿಸ್ತಾನದ ಆಡಳಿತವಿದ್ದರೂ, ಮುಂದೊಂದು ದಿನ ಅದು ಭಾರತಕ್ಕೆ ಸೇರ್ಪಡೆಯಾಗುವ “ನಿರೀಕ್ಷೆ” ಇರುವುದರಿಂದ ಈ 24 ಕ್ಷೇತ್ರಗಳನ್ನು ಕಾಯ್ದಿಡುವುದು ಅನಿವಾರ್ಯವಾಗಿದೆ. ಅಲ್ಲಿ ಚುನಾವಣೆ ನಡೆಸುವುದು ಅಸಾಧ್ಯವಾದುದರಿಂದ  ವಾಸ್ತವಿಕವಾಗಿ ಭಾರತದ ಆಡಳಿತವಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವುದು ಕೇವಲ 90 ಕ್ಷೇತ್ರಗಳು ಮಾತ್ರ. ಇವುಗಳಲ್ಲಿ 70 ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಲಾಗುತ್ತಿದೆ.

ಮೂವರು ಸದಸ್ಯರ ಕ್ಷೇತ್ರ ಮರುವಿಂಗಡಣಾ ಆಯೋಗವನ್ನು ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶ ಆಂಜನ ಪ್ರಕಾಶ್ ನೇತೃತ್ವದಲ್ಲಿ  ಮಾರ್ಚ್ 6, 2020ರಂದು ರಚಿಸಲಾಗಿತ್ತು. ಇದರ ಕೆಲಸವೆಂದರೆ, ಜಮ್ಮು ಮತ್ತು ಕಾಶ್ಮೀರ  ಪುನರ್ರಚನಾ ಕಾಯಿದೆ 2019 ಮತ್ತು ಕ್ಷೇತ್ರ ಪುನರ್ರಚನಾ (ತಿದ್ದುಪಡಿ) ಕಾಯಿದೆ 2002ಕ್ಕೆ ಅನುಗುಣವಾಗಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡಿಸಿ, ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದು. ಇದಕ್ಕೆ ಈ ಎರಡು ಕಾಯಿದೆಗಳೇ ಮೂಲಾಧಾರ.

ಕ್ಷೇತ್ರ ಮರುವಿಂಗಡಣೆಯ ಹಿಂದಿರುವ ಮೂಲ ಆಶಯವೇ ಮತದಾರರು ಮತ್ತು ಅವರ ಪ್ರತಿನಿಧಿಗಳ ನಡುವೆ ಸಂಪರ್ಕವನ್ನು ಸುಲಭಗೊಳಿಸುವುದು. ಉದಾಹರಣೆಗೆ ಒಂದು ಕ್ಷೇತ್ರದ ಕೇಂದ್ರದಿಂದ ಬಹಳ ದೂರದಲ್ಲಿ ಅಥವಾ ಕ್ರಮಿಸಲು ಕಷ್ಟವಾಗುವ ಪ್ರದೇಶದ ಮತದಾರರನ್ನು ಸಂಪರ್ಕ ಸುಲಭವಾಗುವ ಹತ್ತಿರದ ಇನ್ನೊಂದು ಕ್ಷೇತ್ರಕ್ಕೆ ಸೇರಿಸುವುದು. ಪರ್ವತ, ನದಿ, ರಸ್ತೆ ಸಂಪರ್ಕ ಇತ್ಯಾದಿ ಭೌಗೋಳಿಕ ನೆಲೆಗಳು ಮತ್ತು ಆಡಳಿತ ಕೇಂದ್ರಕ್ಕೆ ಹೆಚ್ಚು ಹತ್ತಿರವಾಗಿರುವ ನೆಲೆಯಲ್ಲಿ ಇದನ್ನು ಮಾಡಲಾಗುತ್ತದೆ. ಇನ್ನೊಂದು ಮಹತ್ವದ ನೆಲೆಯೆಂದರೆ, ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯ ಒದಗಿಸುವುದು. ಮತದಾರರ ಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಿಂದ ಮತದಾರರನ್ನು ಮೇಲಿನ ನೆಲೆಗಳನ್ನು ಪರಿಗಣಿಸಿ, ಮತದಾರರು ಕಡಿಮೆ ಇರುವ ಕ್ಷೇತ್ರಗಳಿಗೆ ಸೇರಿಸುವುದು. ಅಥವಾ ಇದೇ ನೆಲೆಯಲ್ಲಿ ಬೇರೆಬೇರೆ ಕ್ಷೇತ್ರಗಳ ಹೆಚ್ಚುವರಿ ಮತದಾರರನ್ನು ಸೇರಿಸಿ ಹೊಸ ಕ್ಷೇತ್ರವನ್ನು ರಚಿಸುವುದು.

ಆದರೆ, ಇದನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬುದು ಪ್ರಸ್ತುತ ಮರುವಿಂಗಡನೆ ಪ್ರಸ್ತಾಪದಲ್ಲಿ ಮೇಲ್ನೋಟಕ್ಕೇ ಕಂಡುಬರುತ್ತದೆ. ಸದ್ಯಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ಲೋಕಸಭಾ ಸ್ಥಾನಗಳಿದ್ದು, ಹಿಂದೂಗಳು ಹೆಚ್ಚಿರುವ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಮುಸ್ಲಿಮರು ಹೆಚ್ಚಾಗಿರುವ ಮೂರರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಗೆದ್ದಿದೆ. ಲೋಕಸಭಾ ಸ್ಥಾನಗಳಲ್ಲಿ ಕೂಡಾ ಯದ್ವಾತದ್ವಾ ಕೈಯಾಡಿಸಿ, ಮುಸ್ಲಿಮರ ಪ್ರಾಬಲ್ಯವನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿದೆ. ಒಟ್ಟು ವಿಧಾನಸಭಾ ಸ್ಥಾನಗಳ ಸಂಖ್ಯೆಯನ್ನು ಏಳರಷ್ಟು ಹೆಚ್ಚಿಸಿ, ಹಿಂದೂಗಳು ಹೆಚ್ಚಾಗಿರುವ ಜಮ್ಮು ಪ್ರಾಂತ್ಯಕ್ಕೆ ಆರು ಹೆಚ್ಚುವರಿ ಮತ್ತು ಮುಸ್ಲಿಮರು ಹೆಚ್ಚಾಗಿರುವ ಕಾಶ್ಮೀರಕ್ಕೆ ಕೇವಲ ಒಂದು ಹೆಚ್ಚುವರಿ ವಿಧಾನಸಭಾ ಸ್ಥಾನ ನೀಡುವ ಪ್ರಸ್ತಾಪ ಇದೆ. ಇಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯದ ನಿಯಮವನ್ನೇ ಕಸದ ಬುಟ್ಟಿಗೆ ಎಸೆದಂತಾಗುತ್ತದೆ. ಇದು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಚಿತ್ರಣವನ್ನೇ ಸಂಪೂರ್ಣವಾಗಿ ಮತ್ತು  ಕೃತಕವಾಗಿ ಬದಲಿಸಲಿದೆ.

ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯಲ್ಲೂ ಇದೇ ತಂತ್ರ ಅನುಸರಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಮತದಾರರು ಹೆಚ್ಚಾಗಿರುವ ಪ್ರದೇಶಗಳನ್ನು ಹರಿದು ಬೇರೆಬೇರೆ ಕ್ಷೇತ್ರಗಳಿಗೆ ಹಂಚಲಾಗಿದೆ. ಹೆಚ್ಚು ಜನಸಂಖ್ಯೆ ಇರುವ ಕಾಶ್ಮೀರಕ್ಕೆ ಕಡಿಮೆ ಮತ್ತು ಕಡಿಮೆ ಜನಸಂಖ್ಯೆ ಇರುವ ಜಮ್ಮುವಿಗೆ ಹೆಚ್ಚು ವಿಧಾನಸಭಾ ಸ್ಥಾನಗಳನ್ನು ನೀಡುವ ಪ್ರಸ್ತಾಪ ಮಾಡಲಾಗಿದೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಎರಡು ಮುಖ್ಯ ಕಾನೂನು ಪ್ರಶ್ನೆಗಳೂ ಇವೆ. ಮೊದಲನೆಯದಾಗಿ, ಈ ಮರುವಿಂಗಡಣೆಗೆ ಮೂಲಾಧಾರಗಳಲ್ಲಿ ಒಂದಾದ ಜಮ್ಮು ಮತ್ತು ಕಾಶ್ಮೀರ ಪುನರ್ರಚನಾ ಕಾಯಿದೆ 2019 ಈಗಲೂ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬಾಕಿಯಿದ್ದು, ಅದರ ಸಿಂಧುತ್ವದ ತೀರ್ಮಾನ ಇನ್ನೂ ಆಗಿಲ್ಲ. ಎರಡನೆಯದಾಗಿ, ದೇಶದ ಎಲ್ಲಾ ಕಡೆ 2026ರ ತನಕ ಕ್ಷೇತ್ರ ಮರುವಿಂಗಡಣೆಯನ್ನು ಅಮಾನತ್ತಿನಲ್ಲಿಡಲಾಗಿದೆ. ಹೀಗಿರುವಾಗ, ಜಮ್ಮು ಮತ್ತು ಕಾಶ್ಮೀರವನ್ನು ಯಾಕೆ ಬೇರೆಯಾಗಿ ಪರಿಗಣಿಸಲಾಗಿದೆ ಎಂದು ಪ್ರಶ್ನಿಸಿ ಮಾರ್ಚ್ 29ರಂದು ಶ್ರೀನಗರದ ಇಬ್ಬರು ನಾಗರಿಕರು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅದರ ತೀರ್ಮಾನವೂ ಆಗಿಲ್ಲ.

ಮುಸ್ಲಿಮರಿಗೆ ಮತ್ತು ದಲಿತರಿಗೆ ಅದರಲ್ಲೂ ಕಾಶ್ಮೀರದ ಬುಡಕಟ್ಟು ಜನರಿಗೆ ಮಾಡಲಾಗುತ್ತಿರುವ ಅನ್ಯಾಯಗಳ ಕುರಿತು ಕೆಲವೇ ಉದಾಹರಣೆಗಳನ್ನಷ್ಟೇ ಭೌಗೋಳಿಕ, ಸಾಂಸ್ಕೃತಿಕ ಮತ್ತು ಮತದಾರರ ಅನುಕೂಲದ ನೆಲೆಯಲ್ಲಿ ನೋಡಿದಾಗಲೂ ಇದನ್ನು ಬಿಜೆಪಿಯ ಅನುಕೂಲಕ್ಕಾಗಿಯೇ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಅನ್ನ ಬೆಂದಿದೆಯೋ ನೋಡಲು ಒಂದೆರಡು ಅಗುಳು ಹಿಚುಕಿದರೆ ಸಾಕು. ಜಮ್ಮು ಮತ್ತು ಕಾಶ್ಮೀರದ ಭಾಷಾ, ಸಾಂಸ್ಕೃತಿಕ ಮತ್ತು ಭೌಗೋಳಿಕ ವೈವಿಧ್ಯಗಳನ್ನು ಕಡೆಗಣಿಸಲಾಗಿದೆ. ಇಲ್ಲಿರುವ ದೋಗ್ರಾ, ಪಹಾಡಿ, ಗುಜ್ಜರ್, ಬಕೇರ್‌ವಾಲ್ ಮುಂತಾದ ಬುಡಕಟ್ಟುಗಳಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಇದ್ದಾರೆ. ಹೆಚ್ಚಿನವರು ಭಾವಿಸುವಂತೆ ಕಾಶ್ಮೀರಿ ಮಾತ್ರ ಇಲ್ಲಿನ ಭಾಷೆಯಲ್ಲ. ಗೋಜ್ರಿ, ದೋಗ್ರಿ ಪಹಾಡಿ, ಮುಂತಾದ ಹಲವಾರು ಸ್ದಳೀಯ ಬುಡಕಟ್ಟು ಭಾಷೆಗಳೂ ಇದ್ದು, ಅವರಿಗೆ ಕಾಶ್ಮೀರಿ ಗೊತ್ತಿಲ್ಲ. ಪರ್ವತಗಳ ಕಾರಣದಿಂದ ಕೆಲವು ಪ್ರದೇಶಗಳಿಗೆ ಕೆಲವು ಪ್ರದೇಶಗಳನ್ನು ಸಂಪರ್ಕಿಸುವುದು ಸಾಧ್ಯವೇ ಇಲ್ಲ. ಕೆಲವು ಕಡೆಗಳಲ್ಲಿ ರಸ್ತೆಗಳು ಇದ್ದರೂ, ಹಿಮದ ಕಾರಣದಿಂದ ವರ್ಷದಲ್ಲಿ ಐದು ತಿಂಗಳು ಅವುಗಳ ಬಳಕೆ ಸಾಧ್ಯವೇ ಇಲ್ಲ. ಇವ್ಯಾವುದನ್ನೂ ಪರಿಗಣಿಸದೆ ಮರುವಿಂಗಡಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ದಲಿತ ಇತಿಹಾಸ ತಿಂಗಳು: ಗತದ ನೆನಪುಗಳು ಮತ್ತು ವರ್ತಮಾನದ ಅವಮಾನ, ಹಲ್ಲೆ- ಕೊಲೆಗಳು

ಹಿಂದೂ ಬಹುಸಂಖ್ಯಾತ ಜಮ್ಮು-ಪೂಂಚ್ ಲೋಕಸಭಾ ಕ್ಷೇತ್ರವನ್ನೇ ನೋಡೋಣ. ಇದರಲ್ಲಿ ಇರುವ ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಿಲ್ಲೆಗಳಾದ ರಜೌರಿ (62 ಶೇಕಡಾ) ಮತ್ತು ಪೂಂಚ್ (90 ಶೇಕಡಾ) ಜಿಲ್ಲೆಗಳನ್ನೇ ಈ ಕ್ಷೇತ್ರದಿಂದ ಕಿತ್ತು ಮುಸ್ಲಿಮರು ಬಹುಸಂಖ್ಯಾತರಾಗಿರುವ ಅನಂತನಾಗ್ ಲೋಕಸಭಾ ಕ್ಷೇತ್ರಕ್ಕೆ ಎಸೆಯಲಾಗುತ್ತಿದೆ. ಅದೇ ರೀತಿಯಲ್ಲಿ ಇದೇ ಕ್ಷೇತ್ರದ ಕಾಶ್ಮೀರ ಭಾಗದ ಸಂಪೂರ್ಣವಾಗಿ ಮುಸ್ಲಿಂ ಜನಸಂಖ್ಯೆ ಇರುವ ಸೋಫಿಯಾನ್, ಪುಲ್ವಾಮಾ ಮತ್ತು ತ್ರಾಲ್ ಪ್ರದೇಶಗಳನ್ನು ಕಿತ್ತು ಮುಸ್ಲಿಂ ಪ್ರಾಬಲ್ಯದ ಶ್ರೀನಗರ-ಬುದ್ಗಾಂವ್ ಲೋಕಸಭಾ ಕ್ಷೇತ್ರಕ್ಕೆ ಎಸೆಯಲಾಗುತ್ತಿದೆ.

ಜಮ್ಮುವಿನ ಉಧಾಂಪುರ್ ಜಿಲ್ಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಒಂದನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ  ಪರಸ್ಪರ ಸಂಬಂಧ ಇರುವ ಆದರೆ, ಹೊರ ಜಗತ್ತಿನ ಜೊತೆ ಸಂಪರ್ಕ ಇಲ್ಲದ ದುರ್ಗಮ ಪರ್ವತ ಪ್ರದೇಶವನ್ನು ಒಡೆದು ಎರಡು ಮೂರು ಕ್ಷೇತ್ರಗಳಲ್ಲಿ ಹಂಚಲಾಗಿದೆ. ಚೆನ್ನಾನಿ ವಿಧಾನಸಭಾ ಕ್ಷೇತ್ರದಲ್ಲಿ ದುಡು, ಜಾಖಡ್, ಸಿರಾ, ಪಠಾಣ್‌ಗಡ್, ಬಾರ್ಮೀನ್ ಮುಂತಾದ ಹಲವಾರು ಪಂಚಾಯಿತಿಗಳನ್ನು ರಾಂನಗರ್ ಕ್ಷೇತ್ರಕ್ಕೆ ಎತ್ತಂಗಡಿ ಮಾಡಲಾಗುತ್ತಿದೆ. ಅವುಗಳಿಗೆ ಆ ಕ್ಷೇತ್ರದೊಂದಿಗೆ ಭೌಗೋಳಿಕ ಸಂಪರ್ಕವೇ ಇಲ್ಲ. ಇವು ಎಲ್ಲಾ ಕಡೆಗಳಿಂದ ಚೆನ್ನಾನಿ ಪರ್ವತದಿಂದ ಸುತ್ತುವರಿಯಲ್ಪಟ್ಟಿದೆ. ಇದಕ್ಕೆ ಇರುವ ಕಾರಣ ಒಂದೇ: ಇವುಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಿರುವುದು. ಉದಾಹರಣೆಗೆ ದುಡುವಿನಲ್ಲಿ ಪರಿಶಿಷ್ಟರ ಸಂಖ್ಯೆ  48.09 ಶೇಕಡಾ. ಜಮ್ಮು ಕಾಶ್ಮೀರದಲ್ಲಿ 25 ವರ್ಷಗಳಿಗೊಮ್ಮೆ ಪರಿಶಿಷ್ಟ ಮೀಸಲಾತಿ ಬದಲಾಗುತ್ತದೆ. ಚೆನ್ನಾನಿ 25 ವರ್ಷ ಪೂರೈಸಿರುವುದರಿಂದ ಮುಂದೆ ರಾಂನಗರ ಎಸ್‌ಸಿ ಮೀಸಲು ಕ್ಷೇತ್ರವಾಗಲಿದೆ. ಅದಕ್ಕೆಂದೇ ಭೌಗೋಳಿಕ ರಸ್ತೆ ಸಂಪರ್ಕ ಇತ್ಯಾದಿ ಪರಿಗಣಿಸದೆಯೇ ಪರಿಶಿಷ್ಟ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನೆಲ್ಲಾ ಕಿತ್ತು ಕಿತ್ತು ರಾಂ ನಗರಕ್ಕೆ ಸೇರಿಸಲಾಗುತ್ತಿದೆ. ಝಕಾನಿ ಎಂಬ ಊರಿನಲ್ಲಿ 334 ಮತದಾರರಿದ್ದು, 92.8 ಶೇಕಡಾ ಪರಿಶಿಷ್ಟರು. ಇದು ಬಿಜೆಪಿ ಪ್ರಾಬಲ್ಯದ ಉಧಾಂಪುರ ಪಟ್ಟಣದ ಹೊರವಲಯದಲ್ಲೇ ಇದೆ. ಇವರ್ಯಾರೂ ಬಿಜೆಪಿಗೆ ಮತಹಾಕದ ಕಾರಣ ಅವರನ್ನು ಕಿತ್ತು ಚೆನ್ನಾನಿಗೆ ಎಸೆಯಲಾಗಿದೆ.

ಹಿಂದೂ ಮತ್ತು ಮುಸ್ಲಿಮರ ನಡುವೆ ಇರುವಂತೆ ಪಹಾಡಿ ಮತ್ತು ಗುಜ್ಜರರ ನಡುವೆ ಬಿರುಕು ಇದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಮೀಸಲು ಕ್ಷೇತ್ರಗಳಲ್ಲೂ ಯೋಜಿತವಾಗಿ ಕೈಯಾಡಿಸಿ, ಪರಿಶಿಷ್ಟ ಒಳಪಂಗಡಗಳ ನಡುವೆ ಬಿರುಕು ಹೆಚ್ಚುವಂತೆ ಮಾಡಲಾಗಿದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಪರಿಶಿಷ್ಟರಲ್ಲದ ಪಹಾಡಿಗಳಿಗೆ ಪರಿಶಿಷ್ಟರ ಸ್ಥಾನಮಾನ ನೀಡುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ. ಹಾಗೆ ಮಾಡಿದಲ್ಲಿ ಪಹಾಡಿ- ಗುಜ್ಜರ್ ಬಿರುಕು ಇನ್ನಷ್ಟು ಹೆಚ್ಚಲಿದೆ ಮಾತ್ರವಲ್ಲದೇ, ಮೀಸಲು ಕ್ಷೇತ್ರಗಳ ಅರ್ಥವೇ ಅನರ್ಥವಾಗಲಿದೆ.

ಇಂತಹ ನೂರಾರು ಉದಾಹರಣೆಗಳನ್ನು ವರದಿಗಳು ಅಂಕಿಅಂಶಗಳ ಸಹಿತ ನೀಡುತ್ತವೆ. ಆದರೆ, ದಕ್ಷಿಣ ಭಾರತೀಯರಾದ ನಮಗೆ ಜಮ್ಮು ಮತ್ತು ಕಾಶ್ಮೀರದ ಭೌಗೋಳಿಕ ಪರಿಸರ, ಹವಾಮಾನ, ರಸ್ತೆ ಸಂಪರ್ಕ, ಸಂಕೀರ್ಣ ಬುಡಕಟ್ಟು ವ್ಯವಸ್ಥೆ, ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯ ಇವೆಲ್ಲವೂ ಪರಿಚಯವಾಗದೆ ಇದು ಸಂಪೂರ್ಣ ಅರ್ಥವಾಗುವುದು ಕಷ್ಟ. ಆದರೆ, ಈ ಅಂಕಿಅಂಶಗಳನ್ನು ನೋಡಿದಾಗ ಈ ಸಂಚು ಸ್ವಲ್ಪ ಮಟ್ಟಿಗೆ ಅರ್ಥವಾದೀತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಜಮ್ಮು ಪ್ರಾಂತ್ಯವು 62 ಶೇಕಡಾ ಭೂಪ್ರದೇಶ ಹೊಂದಿದ್ದು, ಕಾಶ್ಮೀರದ ಪಾಲು 38 ಶೇಕಡಾ. ಆದರೆ ಜನಸಂಖ್ಯೆಯಲ್ಲಿ ಜಮ್ಮುವಿನ ಪಾಲು 43.6 ಶೇಕಡಾ ಆಗಿದ್ದರೆ, ಕಾಶ್ಮೀರದ ಪಾಲು 56.3 ಶೇಕಡಾ. ಲಡಾಕ್ ಜನಸಂಖ್ಯೆ ನಗಣ್ಯ. ಆದರೆ, ಹೊಸ ಮರುವಿಂಗಡಣೆಯ ನಂತರ ಹೆಚ್ಚುವರಿ ಸ್ಥಾನಗಳನ್ನು ಸೇರಿಸಿದರೆ, ಜಮ್ಮುವಿನ ಸ್ಥಾನಗಳು 37ರಿಂದ 43ಕ್ಕೆ ಮತ್ತು ಕಾಶ್ಮೀರದ ಸ್ಥಾನಗಳು 46ರಿಂದ 47ಕ್ಕೆ ಏರಲಿವೆ. ಅಂದರೆ, ಕಡಿಮೆ ಜನಸಂಖ್ಯೆಗೆ ಹೆಚ್ಚಿನ ಸ್ಥಾನಗಳು ಮತ್ತು ಹೆಚ್ಚು ಜನಸಂಖ್ಯೆಗೆ ಕಡಿಮೆ ಸ್ಥಾನಗಳು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕಡಿಮೆ ಇರುವ ಹಿಂದೂಗಳಿಗೆ ಹೆಚ್ಚು, ಹೆಚ್ಚಿರುವ ಮುಸ್ಲಿಮರಿಗೆ ಕಡಿಮೆ ಸ್ಥಾನಗಳು. ಇದನ್ನು ಅನ್ಯಾಯ, ವಂಚನೆ ಎನ್ನದೇ ಬೇರೇನು ಹೇಳಲು ಸಾಧ್ಯ?

(ವಿವಿಧ ಮೂಲಗಳಿಂದ)

ನಿರೂಪಣೆ: ನಿಖಿಲ್ ಕೋಲ್ಪೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...