Homeಮುಖಪುಟಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ಬಂಗಾಳದಲ್ಲಿ ವರದಾನವಾದ ಆಪರೇಷನ್ ಕಮಲ

- Advertisement -
- Advertisement -

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ (ಟಿಎಂಸಿ) ಆಪರೇಷನ್ ಕಮಲದ ಮೂಲಕ ಹಲವು ಶಾಸಕರು, ಸಂಸದರು ಮತ್ತು ಪಕ್ಷದ ಪ್ರಮುಖ ನಾಯಕರು ಬಿಜೆಪಿ ಸೇರಿಕೊಂಡಿದ್ದರು. ಅವರಲ್ಲಿ 148 ಜನರಿಗೆ ಬಿಜೆಪಿಯು ಟಿಕೆಟ್ ನೀಡಿತ್ತು. ಆದರೆ ಅವರಲ್ಲಿ ಗೆದ್ದವರು ಕೇವಲ ಆರು ಜನರು ಮಾತ್ರ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಅಂದರೆ, ಟಿಎಂಸಿಯ ’ಬಿ’ ಟೀಮ್ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಟಿಕೆಟ್ ಮೇಲೆ ಕಣದಲ್ಲಿತ್ತು! ಇದು ಬಿಜೆಪಿಗೆ ಉಲ್ಟಾ ಹೊಡೆದಿದೆ ಮತ್ತು ಆಪರೇಷನ್ ಕಮಲವು ಮಮತಾ ಬ್ಯಾನರ್ಜಿಯ ಪಕ್ಷಕ್ಕೆ ನೆರವು ನೀಡಿದೆ!

ಟಿಎಂಸಿಯ ಒಂದು ಡಜನ್ ಶಾಸಕರು ಸೇರಿದಂತೆ 148 ಪಕ್ಷಾಂತರಿಗಳಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಬಿಜೆಪಿ ಕಾರ್ಯಕರ್ತರಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಈ ಪಕ್ಷಾಂತರಿಗಳ ಪೈಕಿ ಆರು ಮಂದಿ ಮಾತ್ರ ಗೆದ್ದಿದ್ದಾರೆ, ಇದು ಕೇಸರಿ ಪಕ್ಷದೊಳಗೆ ಹೆಚ್ಚು ಅಸಮಾಧಾನಕ್ಕೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಅವರ ಮಾಜಿ ಆಪ್ತ ಸಹಾಯಕ ಸುವೇಂದು ಅಧಿಕಾರಿ ಮತ್ತು ಟಿಎಂಸಿ ಮಾಜಿ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್ ಗೆದ್ದ ಪ್ರಮುಖ ಪಕ್ಷಾಂತರಿಗಳು.

ಇದನ್ನೂ ಓದಿ: ಸುವೆಂದು ಅಧಿಕಾರಿ ವಿರುದ್ಧ ಸೋಲು: ಕೋರ್ಟಿಗೆ ಹೋಗುತ್ತೇನೆಂದ ಮಮತಾ ಬ್ಯಾನರ್ಜಿ

ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ, ಹೌರಾದ ಮಾಜಿ ಮೇಯರ್ ರತೀಂದ್ರನಾಥ್ ಚಕ್ರವರ್ತಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾಜಿ ಮುಖ್ಯಸ್ಥ ಜಗಮೋಹನ್ ದಾಲ್ಮಿಯಾ ಅವರ ಪುತ್ರಿ ಬೈಶಾಲಿ ಡಾಲ್ಮಿಯಾ ಬಿಜೆಪಿ ಸೇರಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.

ಹೌರಾ ಜಿಲ್ಲೆಯಲ್ಲಿ ತನ್ನ ಮೂಲ ಕ್ಷೇತ್ರವಾದ ಡೊಮ್ಜುರ್ ಅನ್ನು 42,512 ಮತಗಳಿಂದ ಕಳೆದುಕೊಂಡಿದ್ದಲ್ಲದೆ, ಜಿಲ್ಲೆಯ ಎಲ್ಲಾ 16 ಸ್ಥಾನಗಳಲ್ಲಿ ಟಿಎಂಸಿಯೇ ಗೆದ್ದಿರುವುದು ಮಾಜಿ ಮೇಯರ್ ರವೀಂದ್ರನಾಥ್‌ರಿಗೆ ಭಾರಿ ಮುಖಭಂಗ ಮಾಡಿದೆ.

ಟಿಎಂಸಿ ಮಾಜಿ ಶಾಸಕ ಮತ್ತು ಬಿಧನ್ನಗರ (ಸಾಲ್ಟ್ ಲೇಕ್) ಮಹಾನಗರ ಪಾಲಿಕೆಯ ಮೇಯರ್ ಸಭ್ಯಸಾಚಿ ದತ್ತಾ ಅವರು ಟಿಎಂಸಿ ಸಚಿವ ಸುಜಿತ್ ಬೋಸ್ ವಿರುದ್ಧ 7,758 ಮತಗಳಿಂದ ಸೋತಿದ್ದಾರೆ.

ಡಿಸೆಂಬರ್‌ನಲ್ಲಿ ಬಿಜೆಪಿಗೆ ತೆರಳಿದ ಡೈಮಂಡ್ ಹಾರ್ಬರ್ ಮಾಜಿ ಶಾಸಕ ದೀಪಕ್ ಹಲ್ದಾರ್ 16,996 ಮತಗಳಿಂದ ಟಿಎಂಸಿಯ ಪನ್ನಾಲಾಲ್ ಹಲ್ದಾರ್ ವಿರುದ್ಧ ಸೋತರು. ಡೈಮಂಡ್ ಹಾರ್ಬರ್ ಸಿಎಂ ಅವರ ಸೋದರಳಿಯ, ಸಂಸದ ಅಭಿಷೇಕ್ ಬ್ಯಾನರ್ಜಿಯ ಲೋಕಸಭಾ ಕ್ಷೇತ್ರದ ವ್ಯಾಪ್ರಿಗೆ ಬರುತ್ತದೆ.

ಆರು ಪಕ್ಷಾಂತರಿಗಳು ಮಮತಾ ಚಂಡಮಾರುತದ ವಿರುದ್ಧ ಈಜಿ ಗೆದ್ದಿದ್ದಾರೆ. ಸುವೆಂದು ಅಧಿಕಾರಿ, ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರನ್ನು ಅಲ್ಪ ಅಂತರದಲ್ಲಿ ಸೋಲಿಸಿದರು.

ಇದನ್ನೂ ಓದಿ: ಅಸ್ಸಾಂ ಚುನಾವಣೆ: ಜೈಲಿನಲ್ಲಿದ್ದುಕೊಂಡೇ ಜಯಗಳಿಸಿದ ಹೋರಾಟಗಾರ ಅಖಿಲ್ ಗೊಗೊಯ್‌

ಎರಡು ದಶಕಗಳ ನಂತರ ಚುನಾವಣೆಯಲ್ಲಿ ಹೋರಾಡಿದ ಮುಕುಲ್ ರಾಯ್, ನಾಡಿಯಾ ಕೃಷ್ಣನಗರ ಉತ್ತರದಲ್ಲಿ 35,809 ಮತಗಳಿಂದ ಜಯ ಗಳಿಸಿದರು. ಆದರೆ, ರಾಯ್ ಅವರ ತವರು ಬಿಜ್ಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರ ಮಗ ಸುಭ್ರಾನ್ಷು ರಾಯ್ ಸೋತರು.

ಇತರ ಪಕ್ಷಾಂತರಿಗಳಾದ ಮಿಹಿರ್ ಗೋಸ್ವಾಮಿ ಮತ್ತು ಬಿಜೆಪಿ ಸಂಸದ ಅರ್ಜುನ್ ಸಿಂಗ್ (ಇವರು 2019 ರಲ್ಲಿ ಪಕ್ಷಾಂತರವಾದವರು) ಅವರ ಪುತ್ರ ಪವನ್ ಸಿಂಗ್ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಕೂಚ್ ಬೆಹಾರ್‌ನ ನಟಬರಿಯಲ್ಲಿ ಪಕ್ಷಾಂತರಿ ಗೋಸ್ವಾಮಿ ಗೆದ್ದಿದ್ದಾರೆ. ಅಲ್ಲಿ ಅವರು ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯದ ಉತ್ತರ ಬಂಗಾಳದ ಅಭಿವೃದ್ಧಿ ಸಚಿವ ರವೀಂದ್ರನಾಥ ಘೋಷ್‌‌ ಅವರನ್ನು ಸೋಲಿಸಿದರು.

ಪಕ್ಷಾಂತರಿಗಳು ಗದ್ದಾರ್‌ಗಳಾದರು!

ಟಿಎಂಸಿಯ ಹಿರಿಯ ಮುಖಂಡರೊಬ್ಬರು, ಪಕ್ಷಾಂತರ ಮಾಡಿದವರನ್ನು ಜನರು “ಗದ್ದಾರ್” (ದೇಶದ್ರೋಹಿಗಳು, ಪಕ್ಷದ್ರೋಹಿಗಳು) ಎಂದು ನೋಡಿದ್ದಾರೆ ಎಂದು ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.

“ಅವರು 2016 ರಲ್ಲಿ ತಮ್ಮ ಪೋಸ್ಟರ್‌ಗಳಲ್ಲಿ ದೀದಿ ಅವರ ಮುಖವನ್ನು ಹೊಂದಿದ್ದರಿಂದ ಶಾಸಕರಾದರು. ಆದರೆ ತನ್ನ ಸಹೋದ್ಯೋಗಿಗಳು ಒಗ್ಗಟ್ಟಾಗಿ ಮತ್ತು ದೃಢವಾಗಿ ನಿಲ್ಲಬೇಕು ಎಂದು ದೀದಿ ಅಪೇಕ್ಷೆ ಪಡುತ್ತಿದ್ದಾಗ ಅವರು ಪಕ್ಷವನ್ನು ತೊರೆದರು. ಜನರು ಅಂತಹವರಿಗೆ ಪಾಠ ಕಲಿಸಿದ್ದಾರೆ” ಎಂದು ಹೆಸರಿಸಲು ಇಚ್ಛಿಸದ ನಾಯಕರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ವರದಿ ಮಾಡದಂತೆ ತಡೆಯಲು ಸಾಧ್ಯವಿಲ್ಲ: ಸುಪ್ರೀಂ

ಮಮತಾ ಬ್ಯಾನರ್ಜಿಯವರ `ಗದ್ದಾರ್’ ಅಭಿಯಾನವು, ನವೆಂಬರ್-ಡಿಸೆಂಬರ್ ನಂತರ ಬಿಜೆಪಿಗೆ ಸೇರಿದ ಪಕ್ಷಾಂತರಿಗಳ ವಿರುದ್ಧ ಕೆಲಸ ಮಾಡಿದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗಿಯಾ ಅವರು ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, `ಚುನಾವಣೆಯಲ್ಲಿ ಸೋತ ಪಕ್ಷಾಂತರಿಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅವರಲ್ಲಿ ಕೆಲವರು ಗೆದ್ದಿದ್ದಾರೆ. ಭರವಸೆ ಮೂಡಿಸಿದವರಿಗೆ ನಾವು ಟಿಕೆಟ್ ನೀಡಿದ್ದೆವು. ಈಗ ನಾವು ಫಲಿತಾಂಶಗಳನ್ನು ವಿಶ್ಲೇಷಿಸುತ್ತೇವೆ’ ಎಂದಿದ್ದಾರೆ.

ಬಿಜೆಪಿಯಲ್ಲಿ ಅಸಮಾಧಾನ

ಎರಡನೇ ಹಂತದ ಬಿಜೆಪಿ ಮುಖಂಡರು ಈ ಪಕ್ಷಾಂತರಿಗಳ ಬಗ್ಗೆ ಮೊದಲಿನಿಂದಲೂ ಅಸಮಾಧಾನ ಹೊಂದಿದ್ದರು. ಅಂತಹವರಿಗೆಲ್ಲ ಟಿಕೆಟ್ ನೀಡಿದಾಗಲೂ ಒಳಗೊಳಗೇ ಸಿಟ್ಟಾಗಿದ್ದರು. ಈಗ ಅವರೆಲ್ಲ ಸೋತ ನಂತರ ಪಕ್ಷದ ಎರಡನೇ ಹಂತದ ನಾಯಕರು ಮತ್ತು ತಳಮಟ್ಟದ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೇಳುತ್ತಿದೆ ಎಂದು ಬಂಗಾಳ ಬಿಜೆಪಿಯ ಹಿರಿಯ ನಾಯಕರೊಬ್ಬರು ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.

”ಕನಿಷ್ಠ 95% ಪಕ್ಷಾಂತರಿಗಳು ಸೋತಿದ್ದಾರೆ. ಇದಕ್ಕಾಗಿಯೇ ನಾವು ಪಕ್ಷಾಂತರಿಗಳನ್ನು ನಮ್ಮ ಪಕ್ಷಕ್ಕೆ ತೆಗೆದುಕೊಳ್ಳುವ ನಿರ್ಧಾರವನ್ನು ವಿರೋಧಿಸಿದ್ದೆವು. ಪಕ್ಷವು ತೃಣಮೂಲ-ಬಿ ತಂಡದಂತೆ ಕಾಣುತ್ತದೆ ಎಂದು ಎಚ್ಚರಿಸಿದ್ದೆವು” ಎಂದು ಅವರು ಹೇಳಿದ್ದಾರೆ.

“ಬಿಜೆಪಿಯ ಅನೇಕ ಅನುಭವಿ ನಾಯಕರಿಗೆ ಟಿಕೆಟ್ ಸಿಗಲಿಲ್ಲ, ಆದರೆ ಪಕ್ಷಾಂತರ ಮಾಡಿದವರಿಗೆ ಅವಕಾಶ ನೀಡಲಾಗಿತು. ಪಕ್ಷವು ತನ್ನ ಕಾರ್ಯಕರ್ತರ ಮಾತನ್ನು ಆಲಿಸಲೇ ಇಲ್ಲ. ಹೀಗಾಗಿ ಫಲಿತಾಂಶದ ಈ ಆಘಾತ ಸಹಜವಾಗಿಯೇ ಸಂಭವಿಸಿದೆ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಾತಿನ ಶೂರ ಮೋದಿಯವರು ಈಗ ಎಲ್ಲಿದ್ದಾರೆ: ವ್ಯಾಕ್ಸಿನೇಷನ್ ಮುಂದೂಡಿಕೆಗೆ ಸಿದ್ದರಾಮಯ್ಯ ಆಕ್ರೋಶ

ವಿಶೇಷವೆಂದರೆ, ಕೇಂದ್ರ ಸಚಿವ ಅಮಿತ್ ಶಾ ಅವರು ಕೆಲವು ಪಕ್ಷಾಂತರಿಗಳ ಪರ ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಿದ್ದರು, ಅದು ಪಕ್ಷದ ಕಾರ್ಯಕರ್ತರಿಗೆ ಒಪ್ಪಿಗೆ ಆಗಲಿಲ್ಲ.

ಶಾರದಾ ಚಿಟ್ ಫಂಡ್ ಹಗರಣ ಮತ್ತು ಶಾರದಾ ಸ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮೂವರು ಹಿರಿಯ ಟಿಎಂಸಿ ಪಕ್ಷಾಂತರಿಗಳು- ಮುಕುಲ್ ರಾಯ್, ಸುವೇಂದು ಅಧಿಕಾರಿ ಮತ್ತು ಸೋವನ್ ಚಟರ್ಜಿ ಅವರಿಗೆ ಬಿಜೆಪಿಯಲ್ಲಿ ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ.

ಕೆಲವು ತಿಂಗಳ ಹಿಂದೆ ಮುಕುಲ್ ರಾಯ್ ಅವರಿಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹುದ್ದೆಯನ್ನು ನೀಡಲಾಗಿದ್ದರೆ, ಮಾಜಿ ಸಚಿವ ಮತ್ತು ಕೋಲ್ಕತ್ತಾದ ಮಾಜಿ ಮೇಯರ್ ಸೋವನ್ ಚಟರ್ಜಿಯನ್ನು ಕೋಲ್ಕತಾ ವಲಯದ ಪಕ್ಷದ ವೀಕ್ಷಕರಾಗಿ ನೇಮಿಸಲಾಯಿತು.

ಡಿಸೆಂಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಸುವೆಂದು ಅಧಿಕಾರಿ, ವಿಧಾನಸಭೆಯ ನಿರ್ಣಾಯಕ ಚುನಾವಣೆಗೆ ಮುನ್ನ ಪಕ್ಷದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿ ಬಡ್ತಿ ಪಡೆದರು.

ಅಮಿತ್ ಶಾ ಪಕ್ಷಾಂತರಿಗಳ ಮೇಲೆ ಅವಲಂಬಿತರಾಗಿದ್ದರೆ ಹೊರತು, ಪಕ್ಷದ ಹಳೆಯ ತಲೆಗಳ ಮೇಲೆ ಅಲ್ಲ. ಅವರು ಯಾವಾಗಲೂ ಪಕ್ಷಾಂತರಿಗಳ ಗುಂಪನ್ನು ದೆಹಲಿಗೆ ಕರೆಸಿ ಸಭೆ ನಡೆಸುತ್ತಿದ್ದರು. ನಿಷ್ಠಾವಂತ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಕಡೆಗಣಿಸಿ ಚುನಾವಣಾ ಕಾರ್ಯತಂತ್ರವನ್ನು ನಿರ್ಧರಿಸಿದರು. ಈ ಪಕ್ಷಾಂತರಿಗಳು ಬಿಜೆಪಿ ಪಕ್ಷದೊಳಗೆ ತಮ್ಮದೇ ಆದ ಬಣಗಳನ್ನು ರಚಿಸಿಕೊಂಡರು, ಅದು ಬಿಜೆಪಿಯಲ್ಲಿ ಹಿಂದೆಂದೂ ಸಂಭವಿಸರಲಿಲ್ಲ. ಅವರು ನಮ್ಮ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್‌ ಅವರನ್ನೂ ಕಡೆಗಣಿಸಿದ್ದಾರೆ ಎಂದು ಬಂಗಾಳ ಬಿಜೆಪಿಯ ಉನ್ನತ ನಾಯಕರೊಬ್ಬರು ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಇಂದೋರ್‌ನಲ್ಲಿನ ಈ ಕೊರೊನಾ ಆರೈಕೆ ಕೇಂದ್ರ RSS ನಿರ್ಮಿಸಿದ್ದಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -