ಜನರು ಆಮ್ಲಜನಕವಿಲ್ಲದೆ ಕಷ್ಟಕ್ಕೊಳಗಾಗುತ್ತಿದ್ದಾರೆ, ಇದನ್ನು ಸರಿಪಡಿಸಬೇಕಿದ್ದ ಆಡಳಿತರೂಢ ಬಿಜೆಪಿ ಸರ್ಕಾರವು ಬೆಂಗಳೂರಿನ ಹೊರವಲಯದ ಗಿಡ್ಡೇನಹಳ್ಳಿಯ ಬಳಿ ಕೋವಿಡ್‌ನಿಂದ ಮೃತಪಟ್ಟವ ಶವಸಂಸ್ಕಾರಕ್ಕೆ ತೆರಳುವವರಿಗೆ, “ಉಚಿತ ನೀರು, ಟೀ, ಕಾಫಿ, ತಿಂಡಿ, ಊಟದ ವ್ಯವಸ್ಥೆ ಮಾಡಿದ್ದೇವೆ” ಎಂದು ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಆರ್‌. ಅಶೋಕ್‌, ಬಿಡಿಎ ಅಧ್ಯಕ್ಷ, ಶಾಸಕ ಎಸ್. ಆರ್‌. ವಿಶ್ವನಾಥ್‌ ಸೇರಿದಂತೆ ಇನ್ನಿಬ್ಬರ ನಗುಮುಖದ ಫ್ಲೆಕ್ಸ್‌ ಹಾಕಿ ಅಸೂಕ್ಷತೆ ಮರೆದಿದ್ದಾರೆ.

ಕೊರೊನಾ ಎರಡನೆ ಅಲೆ ರಾಜ್ಯದಲ್ಲಿ ತೀವ್ರಗೊಳ್ಳುತ್ತಿದೆ. ರಾಜ್ಯದಾದ್ಯಂತ ಬೆಡ್‌ಗಳ ಕೊರತೆ, ಐಸಿಯುಗಳ ಕೊರತೆ ಬಗ್ಗೆ ನಿರಂತರವಾಗಿ ವರದಿಯಾಗುತ್ತಲೆ ಇದೆ. ಆದರೆ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಲೆ ಬಂದಿತ್ತು. ಈ ನಡುವೆ ನಿನ್ನೆ ನಡೆದ ಚಾಮರಾಜನಗರದ ದುರಂತವು ರಾಜ್ಯ ಸರ್ಕಾರದ ವೈಫಲ್ಯವನ್ನು ರಾಜ್ಯದ ಜನತೆಗೆ ಬಿಚ್ಚಿಟ್ಟಿದೆ. ಆದರೆ ಘಟನೆಗೆ ರಾಜ್ಯ ಸರ್ಕಾರ ಜನರನ್ನು ಮತ್ತು ಅಧಿಕಾರಿಗಳನ್ನು ಹೊಣೆ ಮಾಡಿದೆ. ಇಷ್ಟೇ ಅಲ್ಲದೆ ಕಲಬುರ್ಗಿಯಲ್ಲೂ ಆಮ್ಲಜನಕ ಕೊರೊತೆಯಿಂದ ಐದು ಸೋಂಕಿತರು ಮೃತಪಟ್ಟದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಗಳೆದ್ದಿದ್ದು ಸರ್ಕಾರವು ತನ್ನ ತಪ್ಪನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಲಸಿಕೆ ದರದಲ್ಲಿ ತಾರತಮ್ಯವೇಕೆ: ಸುಪ್ರೀಂ ಪ್ರಶ್ನೆ

ಜನರು ಪ್ರಾಣವಾಯು ಇಲ್ಲದೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಾ ಆಸ್ಪತ್ರೆಯ ಬಳಿ ನರಳಾಡುತ್ತಾ ಇದ್ದರೆ, ಬಿಜೆಪಿ ಸಾವಿನ ವಿಚಾರವನ್ನೂ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಾತ್ರೋ ರಾತ್ರಿ ಫ್ಲೆಕ್ಸ್‌ ಅನ್ನು ಎತ್ತಂಗಡಿ ಮಾಡಲಾಗಿದೆ.

ಫ್ಲೆಕ್ಸ್‌ನಲ್ಲಿ, ‘‘ಕೋವಿ‌ಡ್‌‌ನಿಂದ ಮೃತಪಟ್ಟವರ ಉಚಿತ ಅಂತ್ಯ ಸಂಸ್ಕಾರಕ್ಕೆ ಗಿಡ್ಡೇನಹಳ್ಳಿಗೆ ಹೋಗುವ ದಾರಿ. ಕೋವಿಡ್‌ನಿಂದ ಮೃತಪಟ್ಟವರನ್ನು ‘ಸಕಲ ಸರ್ಕಾರಿ ಮರ್ಯಾದೆ’ಯೊಂದಿಗೆ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆಯಾಗಿದೆ. ಈ ಕಾರ್ಯಕ್ಕೆ ಉಚಿತವಾಗಿ ನೀರು, ಕಾಫಿ, ಟೀ, ತಿಂಡಿ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ’’ ಎಂದು ಬರೆಯಲಾಗಿದೆ.

ಜೊತೆಗೆ, “ಟಿ-ಕಾಫಿಯ ಉಚಿತ ವ್ಯವಸ್ಥೆಯನ್ನು ಯಲಹಂಕದ ಶಾಸಕರಾದ ಎಸ್. ಆರ್‌. ವಿಶ್ವನಾಥ್‌ ಮಾರ್ಗದರ್ಶನದಲ್ಲಿ, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್‌. ಮಲ್ಲಯ್ಯನವರ ನೇತೃತ್ವದಲ್ಲಿ ಮಾಡಲಾಗಿದೆ” ಎಂದು ಕೂಡಾ ಬರೆದು, ಅವರ ನಗುಮುಖದ ಚಿತ್ರವನ್ನು ಹಾಕಲಾಗಿದೆ.

ಇದನ್ನೂ ಓದಿ: ಚಾಮರಾಜನಗರ ದುರಂತ: ಆಕ್ಸಿಜನ್ ಕೊರತೆಯಿಂದ ಆಗಿದ್ದರೆ ಸರ್ಕಾರವೆ ಹೊಣೆ – ಸಿಟಿ ರವಿ

 

ಈ ಫ್ಲೆಕ್ಸ್‌ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪತ್ರಕರ್ತ ಅಲ್‌ಮೈಡಾ ಗ್ಲಾಡ್‌ಸನ್‌ ಅವರು, “ಬಿಜೆಪಿಯನ್ನು ನಾನ್ಯಾಕೆ ವಿರೋಧಿಸುತ್ತೇನೆಂದು ಕೇಳುವವರು ಇದನ್ನೊಮ್ಮೆ ನೋಡಿ. ಅವರದ್ದು ಜೀವವಿರೋಧಿ, ಮನುಷತ್ವ ವಿರೋಧಿ ಸಿದ್ಧಾಂತ ಎಂದು ಅವರು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ಮನುಷ್ಯನಿರಬೇಕಾದ ಕನಿಷ್ಟ ಸಂವೇದನೆಗಳೂ ಇಲ್ಲ ಇವಕ್ಕೆ. ಸೋಂಕು ಹೆಚ್ಚಾದರೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ಇಲ್ಲ.

ಒಂದೊಮ್ಮೆ ಅಂಬುಲೆನ್ಸ್ ಸಿಕ್ಕರೆ ಆಸ್ಪತ್ರೆ/ಬೆಡ್ ಇಲ್ಲ. ಹತ್ತಾರು ಕಿ.ಮೀ ಅಲೆದು ಆಸ್ಪತ್ರೆ ಸಿಕ್ಕರೆ ಐಸಿಯುವಿನಲ್ಲಿ ಜಾಗವಿಲ್ಲ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಇಲ್ಲ. ಕೊನೆಗೆ ಸತ್ತವರ ಅಂತ್ಯ ಸಂಸ್ಕಾರಕ್ಕೂ ಜಾಗವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಈ ಬಿಜೆಪಿಗರು ಕೋವಿಡ್ ಸೋಂಕಿನಿಂದ ಸತ್ತವರ ಅಂತ್ಯ ಸಂಸ್ಕಾರವನ್ನೂ ಒಂದು ಈವೆಂಟ್ ಮಾಡುತ್ತಿದ್ದಾರೆ. ಉಚಿತ ಚಾ, ಕಾಫಿ, ಊಟವಂತೆ. ಈ ಚಿತ್ರದ ಮೇಲಿರುವ ‘No’ ಗಳ ಬೋರ್ಡೇ ಇವರ ಅದಕ್ಷತೆ, ಅಸಾಮರ್ಥ್ಯ ಹಾಗೂ ಕ್ರೌರ್ಯಕ್ಕೆ ಸಾಕ್ಷಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅಲ್ಲಿನ ಬ್ಯಾನರನ್ನು ತೆರವು ಗೊಳಿಸಲಾಗಿದೆ.

ಘಟನೆಗೆ ಶಾಸಕ ವಿಶ್ವನಾಥ್‌‌ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. ‘‘ಗಿಡ್ಡೇನಹಳ್ಳಿ ಸುತ್ತ–ಮುತ್ತ ಜನ ವಾಸವಿಲ್ಲ. ಸುತ್ತಲೂ ಕಲ್ಲು ಬಂಡೆಗಳು ಇವೆ. ಅಲ್ಲಿ ಕುಡಿಯಲು ನೀರು ಸೇರಿದಂತೆ ಯಾವುದೇ ಸೌಲಭ್ಯವೂ ಇಲ್ಲ. ಶವಸಂಸ್ಕಾರಕ್ಕೆ ಬರುವವರಿಗೆ ತೊಂದರೆಯಾಗಬಾರದು, ಅವರಿಗೆ ನೀರು ಮತ್ತು ಆಹಾರ ಪೂರೈಕೆ ಮಾಡುವಂತೆ ಮಾನವೀಯತೆಯ ದೃಷ್ಟಿಯಿಂದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆದರೆ, ಈ ಬಗ್ಗೆ ಪ್ರಧಾನಿ, ಮುಖ್ಯಮಂತ್ರಿ ಮತ್ತು ನನ್ನ ಫೋಟೊ ಇರುವ ಫ್ಲೆಕ್ಸ್‌ ಹಾಕಿರುವುದು ಸರಿಯಾದ ಕ್ರಮವಲ್ಲ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

  1. ಶವಸಂಸ್ಕಾರದಲ್ಲೂ ರಾಜಕೀಯ, ಪ್ರಚಾರ ಬಯಸುವುದು ಮನಷ್ಯತ್ವ ಅಲ್ಲ. ಮನುವಾದಿಗಳು ಮಾನವೀಯತೆಯನ್ನೂ ಮರೆತು, ಎಲ್ಲದರಲ್ಲೂ ಪ್ರಚಾರ ಪಡೆಯಲು ಹೊರಟಿದ್ದಾರೆ.

LEAVE A REPLY

Please enter your comment!
Please enter your name here