Homeಕರೋನಾ ತಲ್ಲಣಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಲಸಿಕೆ ದರದಲ್ಲಿ ತಾರತಮ್ಯವೇಕೆ: ಸುಪ್ರೀಂ ಪ್ರಶ್ನೆ

ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಲಸಿಕೆ ದರದಲ್ಲಿ ತಾರತಮ್ಯವೇಕೆ: ಸುಪ್ರೀಂ ಪ್ರಶ್ನೆ

- Advertisement -
- Advertisement -

ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಅರಿತು ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಹಾಗಾದಾಗ ಅದು ಎಲ್ಲಾ ರಾಜ್ಯಗಳಿಗೆ ಸಮಾನ ಪ್ರಮಾಣದಲ್ಲಿ ಹಂಚಬಹುದಲ್ಲವೇ ಎಂದು ಸುಪ್ರೀಂ ಕೋರ್ಟ್ ನಿನ್ನೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಕೋವಿಡ್ ಲಸಿಕೆಯ ಉತ್ಪಾದನೆ, ದರನಿಗಧಿ ಮತ್ತು ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಸ್ವಯಂ ವಿಚಾರಣೆಯನ್ನು ಕೈಗತ್ತಿಕೊಂಡಿರುವ ಜಸ್ಟೀಸ್ ಚಂದ್ರಚೂಡ್‌ರವರ ನೇತೃತ್ವದ ಪೀಠ ಹಲವು ವಿಚಾರದಲ್ಲಿ ಕೇಂದ್ರ ಸರ್ಕಾರ ಎಡವುತ್ತಿರುವುದನ್ನು ಬೊಟ್ಟು ಮಾಡಿ ತೋರಿಸಿದೆ.

ಲಸಿಕೆಯ ದರನಿಗಧಿ ಮತ್ತು ವಿತರಣೆಯ ನಿರ್ಧಾರವನ್ನು ತಯಾರಿಕ ಕಂಪನಿಗಳಿಗೆ ಬಿಡಬಾರದು. ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದ ಈ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು ಮತ್ತು ತನ್ನ ಅಧಿಕಾರ ಬಳಸಿ ಕಾರ್ಯಗತಗೊಳಿಸಬೇಕು ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರವರಿಗೆ ಜಸ್ಟೀಸ್ ಚಂದ್ರಚೂಡ್‌ ತಿಳಿಸಿದ್ದಾರೆ.

ಅಸ್ಟ್ರಜನಕಾ ಕಂಪನಿಯು ಅಮೆರಿಕದ ನಾಗರಿಕರಿಗೆ ಅತಿ ಕಡಿಮೆ ಬೆಲೆಗೆ ಲಸಿಕೆ ನೀಡುತ್ತಿದೆ. ಆದರೆ ನಾವು ಮಾತ್ರ ಏಕೆ ಹೆಚ್ಚು ಪಾವತಿ ಮಾಡಬೇಕು? ತಯಾರಕರು ಕೇಂದ್ರ ಸರ್ಕಾರಕ್ಕೆ ಅಂದರೆ ನಿಮಗೆ 150ರೂ ಡೋಸ್ ನೀಡುತ್ತಾರೆ. ಆದರೆ ರಾಜ್ಯಗಳು 300 ಅಥವಾ 400 ರೂ ಭರಿಸಬೇಕು. ದೇಶವೇಕೆ ಇಷ್ಟು ಹಣ ಪಾವತಿ ಮಾಡಬೇಕು ಎಂದು ಜಸ್ಟೀಸ್ ರವೀಂದ್ರ ಭಟ್ ಪ್ರಶ್ನಿಸಿದ್ದಾರೆ.

“ಲಸಿಕೆಯ ಬೆಲೆ ಸಮಸ್ಯೆಗಳು ತೀರಾ ಗಂಭೀರವಾದ ವಿಷಯವಾಗಿದೆ. ಈ ದೇಶದ ಬಹುಸಂಖ್ಯಾತರು ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಾಗಿವೆ. ನಮ್ಮಲ್ಲಿ ಖಾಸಗಿ ವಲಯದ ಮಾದರಿ ಸಾಧ್ಯವಿಲ್ಲ. ಹಾಗಾಗಿ ನಾವು ರಾಷ್ಟ್ರೀಯ ರೋಗನಿರೋಧಕ ಮಾದರಿಯನ್ನು ಅನುಸರಿಸಬೇಕು” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

ರೆಮ್ಡೆಸಿವಿರ್, ಫಾಸಿಪುರಾವಿರ್ ಮತ್ತು ಟೊಸಿಲಿಜುಮಾಬ್ ಮುಂತಾದ ಔಷಧಗಳ ವಿಷಯದಲ್ಲಿ ಪೇಟೆಂಟ್ ಕಾಯ್ದೆಯ ಸೆಕ್ಷನ್ 100 ರ ಅಡಿಯಲ್ಲಿ ಸರ್ಕಾರಿ ಉದ್ದೇಶಗಳಿಗಾಗಿ ಪೇಟೆಂಟ್ ಬಳಸಲು ಉನ್ನತ ನ್ಯಾಯಾಲಯ ಏಕೆ ಅಧಿಕಾರ ನೀಡಬಾರದು? ಅಥವಾ ಪೇಟೆಂಟ್ ಕಾಯ್ದೆಯ ಸೆಕ್ಷನ್ 92 ರ ಅಡಿಯಲ್ಲಿ ಕಡ್ಡಾಯ ಪರವಾನಗಿಗಳನ್ನು ಏಕೆ ನೀಡಬಾರದು? ವಿಶೇಷವಾಗಿ ಅಂತಹ ನಿರ್ದೇಶನವು ಕಾನೂನು ಕ್ರಮಗಳ ಭಯವಿಲ್ಲದೆ ಈ ಔ ಷಧಿಗಳನ್ನು ತಯಾರಿಸಲು ಜೆನೆರಿಕ್ಸ್‌ಗೆ ಅನುವು ಮಾಡಿಕೊಡುತ್ತದೆ ಎಂದು ಸುಪ್ರೀಂ ತಿಳಿಸಿದೆ.

ಕೇಂದ್ರ ಸರ್ಕಾರವು ಖರೀದಿಸುವ ಶೇ.50 ರಷ್ಟು ಲಸಿಕೆಗಳನ್ನು ರಾಜ್ಯಗಳಿಗೆ ಯಾವಾಗ ನೀಡುತ್ತೀರಿ? ಅಲ್ಲದೇ ಕೇಂದ್ರ ಮತ್ತು ರಾಜ್ಯಗಳಿಗೆ ಲಸಿಕೆ ಬೆಲೆಯಲ್ಲಿನ ವ್ಯತ್ಯಾಸಕ್ಕೆ ತರ್ಕವೇನು? ಎಂದು ಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ.

ಮುಂದಿನ ಆರು ತಿಂಗಳುಗಳವರೆಗೆ ಲಸಿಕೆ ದಾಸ್ತಾನುಗಳ ಪ್ರಸ್ತುತ ಮತ್ತು ಯೋಜಿತ ಲಭ್ಯತೆಯನ್ನು ಕೇಂದ್ರ ಮತ್ತು ರಾಜ್ಯಗಳು ಸೂಚಿಸಬಹುದೇ? ರಾಜ್ಯಗಳಿಗೆ ಸಮಾನವಾಗಿ ಲಸಿಕೆ ಸಿಗುತ್ತದೆಯೇ? ಏಕೆಂದರೆ ಕೆಲ ರಾಜ್ಯಗಳು ಒಮ್ಮೆಗೆ ಹೆಚ್ಚು ಆರ್ಡರ್ ಮಾಡಿದರೆ ಉಳಿದ ರಾಜ್ಯಗಳು ಕಾಯುತ್ತಾ ಕೂರಬೇಕೆ? ಇದನ್ನು ಕೇಂದ್ರ ಸರ್ಕಾರ ಮೇಲ್ವಿಚಾರಣೆ ನಡೆಸುತ್ತದೆಯೇ? ಈಗಾಗಲೇ 45 ವ‍ರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊರತೆಯಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಉತ್ತರವೇನು ಎಂದು ಪ್ರಶ್ನಿಸಿದೆ.

18-44 ವಯಸ್ಸಿನವರಿಗೆ ಯಾವಾಗ ಲಸಿಕೆ ನೀಡಲಾಗುತ್ತದೆ? ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು. ಈ ಕುರಿತು ಅಫಿಡವಿಟ್ ಸಲ್ಲಿಸುತ್ತೀರಾ ಎಂದು ಪ್ರಶ್ನಿಸಿರುವ ಕೋರ್ಟ್, ಅನಕ್ಷರಸ್ಥ ಅಥವಾ ಇಂಟರ್ನೆಟ್ ಲಭ್ಯತೆ ಇಲ್ಲದ ವ್ಯಕ್ತಿಗಳಿಗೆ ಲಸಿಕೆ ನೋಂದಣಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಶಕ್ತಗೊಳಿಸುತ್ತವೆ ಎಂದಿದೆ.

ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 10 ರಂದು ನಡೆಸುತ್ತೇವೆ ಎಂದು ಕೋರ್ಟ್ ತಿಳಿಸಿದೆ.


ಇದನ್ನೂ ಓದಿ: ಲಸಿಕೆ ರಾಜಕೀಯ: ರಾಜ್ಯಗಳ ಪಾಲಿಗೆ ವಿಲನ್ ಆದ ಮೋದಿ ಸರ್ಕಾರ?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೀಸಲಾತಿ ಹೇಳಿಕೆ: ಆಧಾರ ಸಹಿತ ಸಾಬೀತುಪಡಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು

0
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಹೇಳಿಕೆಯನ್ನು ಆಧಾರ ಸಹಿತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ...