‘ಸತೀಶ್ ಆಚಾರ್ಯ ಅವರೇ, ನೀವು ಆನೆಯಂತೆ‌ ನಡೆಯಿರಿ’: ಬಿಜೆಪಿ ಐಟಿ ಸೆಲ್‌ ದಾಳಿ ವಿರುದ್ದ ಆಕ್ರೋಶ | NaanuGauri

ಕೊರೊನಾ ಲಸಿಕೆಯನ್ನು ರಾಜಕೀಯಕ್ಕೆ ಬಳಸಿರುವ ರಾಜಕಾರಣದ ಕುರಿತು ಬರೆಯಲಾಗಿದ್ದ ವ್ಯಂಗ್ಯಚಿತ್ರದ ಕಾರಣಕ್ಕೆ, ಬಿಜೆಪಿ ಐಟಿ ಸೆಲ್‌ ಮತ್ತು ಬಲಪಂಥೀಯ ಬೆಂಬಲಿಗರು, ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ಅವರನ್ನು ನಿಂದಿಸುತ್ತಿದ್ದು, ಇದರ ವಿರುದ್ದವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಗಳೆದ್ದಿದೆ.

ಸತೀಶ್ ಆಚಾರ್ಯ ಅವರು ಕೊರೊನಾ ಸೋಂಕನ್ನು ಆಡಳಿತ ಪಕ್ಷಗಳು ಹೇಗೆ ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಹಾಗೂ ಕೊರೊನಾ ಸೋಂಕನ್ನು ಆಡಳಿತವು ನಿರ್ವಹಣೆ ಮಾಡುವಲ್ಲಿ ಆಗಿರುವ ವಿಫಲತೆಯ ಬಗ್ಗೆ ವ್ಯಂಗ್ಯ ಚಿತ್ರವನ್ನು ನಿರಂತರವಾಗಿ ಬರೆಯುತ್ತಲೆ ಬಂದಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೊರೊನಾ ಲಸಿಕೆಯನ್ನು ಆಡಳಿತ ಪಕ್ಷಗಳು ಹೇಗೆ ತಮ್ಮ ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂಬುವುದರ ಬಗ್ಗೆ ವ್ಯಂಗ್ಯಚಿತ್ರಗಳ ಮೂಲಕ ತೀಕ್ಷ್ಣವಾಗಿ ಟೀಕಿಸುತ್ತಲೆ ಬಂದಿದ್ದರು. ಇದು ಆಡಳಿತ ಪಕ್ಷವಾದ ಬಿಜೆಪಿ ಹಾಗೂ ಬಲಪಂಥೀಯರ ಕಣ್ಣು ಕೆಂಪಾಗಿಸುವಂತಾಗಿದೆ.

ದೇಶದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭವಾದ ಹಿನ್ನಲೆಯಲ್ಲಿ ಸತೀಶ್ ಅವರು ಲಸಿಕೆಯನ್ನು ಪಡೆದು, ತಾವು ಲಸಿಕೆ ಪಡೆಯುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಈ ಚಿತ್ರವನ್ನು ಹಾಗೂ ಲಸಿಕೆಯನ್ನು ರಾಜಕೀಯಕ್ಕೆ ಬಳಸಿರುವ ಕುರಿತು ಬರೆದಿದ್ದ ವ್ಯಂಗ್ಯ ಚಿತ್ರವನ್ನು ಬಳಸಿಕೊಂಡು ಬಲಪಂಥೀಯರು ಅವರ ನಿಂದನೆಗೆ ಇಳಿದಿದ್ದಾರೆ. ಕೆಲವರು ಅವರ ಜಾತಿಯನ್ನು ಉಲ್ಲೇಖಿಸಿ ಜನಾಂಗೀಯ ನಿಂದನೆಗೆ ಕೂಡಾ ಇಳಿದಿದ್ದಾರೆ.

ಇದನ್ನೂ ಓದಿ: ‘ಮತ ಎಣಿಕೆ ಮುಂದೂಡಿದರೆ ಸ್ವರ್ಗವೇನು ಬೀಳುವುದಿಲ್ಲ’ – ಯುಪಿ ಚುನಾವಣಾ ಆಯೋಗಕ್ಕೆ ಸುಪ್ರೀಂ ಕಟುನುಡಿ

ಈ ಬಗ್ಗೆ ಸತೀಶ್ ಅವರು ತಮ್ಮ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, “ಸಾರ್ವಜನಿಕವಾಗಿ ನಾನು ಲಸಿಕೆಯನ್ನು ಟೀಕಿಸುತ್ತೇನೆ ಆದರೆ ಖಾಸಗಿಯಾಗಿ ಅದನ್ನು ತೆಗೆದುಕೊಂಡಿದ್ದೇನೆ ಎಂದು ಬಿಜೆಪಿ ಐಟಿ ಸೆಲ್‌ ಹೇಳುತ್ತಿದೆ. ಲಸಿಕೆಯನ್ನು ರಾಜಕೀಯಕ್ಕೆ ಬಳಸಿರುವುದನ್ನು ನಾನು ಟೀಕಿಸುತ್ತಿದ್ದೇನೆ ಎಂದು ತಿಳಿದುಕೊಳ್ಳುವ ಸಾಮಾನ್ಯ ಜ್ಞಾನವಿರುತ್ತಿದ್ದರೆ, ಐಟಿ ಸೆಲ್‌ನ ಈ ಯೋಧರು, ಮೆದುಳಿಲ್ಲದ ಐಟಿ ಸೆಲ್‌ನಲ್ಲಿ ಇರುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ವ್ಯಂಗ್ಯಚಿತ್ರ ಬರೆದಿರುವ ಕಾರಣಕ್ಕೆ ಬಿಜೆಪಿ ಬೆಂಬಲಿಗರು ಮಾತ್ರವಲ್ಲದೆ ಪತ್ರಕರ್ತರು ಕೂಡಾ ಅವರನ್ನು ನಿಂದಿಸುತ್ತಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಚಾನೆಲ್‌ನ ನಿರೂಪರಕಾದ ಅಜಿತ್ ಹನುಮಕ್ಕನವರ್‌ ತಮ್ಮ ಟಿವಿ ಕಾರ್ಯಕ್ರಮವೊಂದರಲ್ಲಿ ವ್ಯಂಗ್ಯ ಚಿತ್ರವನ್ನು ಬರೆದ ಸತೀಶ್ ಅವರಿಗೆ ‘ಕೆರೆನೋ, ಬಾವಿನೋ ನೋಡಿಕೊಳ್ಳಿ’ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅಕ್ಕಿ ಕೊಡಿ ಎಂದ ರೈತನಿಗೆ ‘ಸತ್ತೊಗು’ ಎಂದ ಆಹಾರ ಸಚಿವ ಉಮೇಶ್ ಕತ್ತಿ

ಅಜಿತ್ ಅವರ ಮಾತಿಗೆ ಫೇಸ್‌‌ಬುಕ್‌ನ ಕಮೆಂಟ್‌ ಒಂದರಲ್ಲಿ ಪ್ರತಿಕ್ರಿಯಿಸಿರುವ ಸತೀಶ್ ಅವರು, “ಸರಕಾರವನ್ನು ಪ್ರಶ್ನಿಸದೆ ಐಟಿ ಸೆಲ್ ಸೇರಿಕೊಂಡ ಇಂತವರಿಗೆ ಜರ್ನಲಿಸಂ ಬರೀ ವ್ಯವಹಾರ. ಇದನ್ನು ಬಿಟ್ಟು ಹುಬ್ಳಿ-ದಾರಾವಾಡದಲ್ಲೋ ರಿಸಾರ್ಟ್ ವ್ಯವಹಾರ ಶುರು ಮಾಡಿದ್ರೆ ದೇಶಕ್ಕೂ ಉಪಕಾರವಾಗುತ್ತೆ. ಇಂತವರನ್ನು ನೋಡಿ ಯುವ ಜನರು ಜರ್ನಲಿಸಂ-ನಿಂದ ದೂರ ಓಡಿ ಹೋಗೋದೂ ನಿಲ್ಲುತ್ತೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲೇಖಕಿ ಚೇತನಾ ತೀರ್ಥಹಳ್ಳಿ, “ಸತೀಶ್ ಆಚಾರ್ಯರ ಕಾರ್ಟೂನ್ ಕೂಡಾ ಅರ್ಥವಾಗಲಿಲ್ಲ ಅಂದರೆ…ಅಜಿತ್ ನಿಜವಾಗ್ಲೂ ಪತ್ರಕರ್ತನೇ? ನನಗಂತೂ ಅನುಮಾನ, ಅಥವಾ ಮೆದುಳು ಅಡವಿಟ್ಟ ಪರಿಣಾಮವೆ!” ಎಂದು ಕಿಡಿ ಕಾರಿದ್ದಾರೆ.

ಅಷ್ಟೇ ಅಲ್ಲದೆ ಚಿರು ಭಟ್ ಎಂಬವರು ಸತೀಶ್ ಅವರನ್ನು ನಿಂದಿಸಿ ಹಾಕಿದ್ದ ಪೋಸ್ಟ್‌ ಒಂದಕ್ಕೆ ಜಯರಾಜ ಸಿ.ಎಂ. ಎಂಬವರೊಬ್ಬರು, “ಹುಟ್ಟಿನಿಂದ ಅವನು ಆಚಾರ್ಯನಾಗಿರಬಹುದು ಆದರೆ ಅವನು ಶೂದ್ರನಿಗಿಂತ ಕೆಟ್ಟವನು” ಎಂದು ಜನಾಂಗೀಯ ನಿಂದನೆ ಕೂಡಾ ಮಾಡಿದ್ದಾರೆ. ಇದರ ಆರ್ಕೈವ್ ಇಲ್ಲಿದೆ.

ಅಷ್ಟೇ ಅಲ್ಲದೆ ಅವರ ಜಾತಿ ವಿಚಾರದಲ್ಲಿ ಹಲವರು ಜನಾಂಗಿಯ ನಿಂದನೆ ಮಾಡಿದ್ದಾರೆ. ಆರ್ಕೈವ್ ಇಲ್ಲಿದೆ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಮೋದಿ ಫೋಟೊಗಳಿಗೆ ಹೆಚ್ಚುತ್ತಿರುವ #ResignModi ಕಮೆಂಟ್‌ಗಳು: ಹಳೆ ಫೋಟೊಗಳನ್ನು ಬಿಡದ ನೆಟ್ಟಿಗರು!

ಅವರ ಮೇಲೆ ಬಿಜೆಪಿ ಐಟಿ ಸೆಲ್ ದಾಳಿ ಹೆಚ್ಚುತ್ತಿದ್ದಂತೆ ಸಾಮಾಜಿಕ ಹೋರಾಟಗಾರು ಸೇರಿದಂತೆ ಹಲವಾರು ಗಣ್ಯರು ಸತೀಶ್ ಆಚಾರ್ಯ ಅವರನ್ನು ಬೆಂಬಲಿಸಿ ಅವರ ಬೆನ್ನಿಗೆ ನಿಂತಿದ್ದಾರೆ.

ವ್ಯಂಗ್ಯ ಚಿತ್ರಕಾರ ಪಿ. ಮೊಹಮ್ಮದ್ ಅವರು, “ಕೆಲವು ದಿನಗಳಿಂದ ಕೆಲವು ಬಿಜೆಪಿ ಬೆಂಬಲಿಗರು ಕಾರ್ಟೂನಿಸ್ಟ್ ಗೆಳೆಯ ಸತೀಶ್‌ ಆಚಾರ್ಯ ಅವರ ಹಿಂದೆ ಬಿದ್ದಿದ್ದಾರೆ. ಮೊನ್ನೆ ಟ್ವಿಟ್ಟರಲ್ಲಿ ಕೆಲವರು ಸತೀಶರ ಜಾತಿಯನ್ನು ಪ್ರಸ್ತಾಪಿಸಿ ಹೀಗಳೆಯುವುದು ಕಂಡು ಆಘಾತಪಟ್ಟೆ!. ನನಗೆ ಸತೀಶ್ ಮೂರು ದಶಕಗಳಿಗಿಂತಲೂ ಹೆಚ್ಚು ಪರಿಚಯ. ಆದರೆ ಅವರು ಯಾವ ಜಾತಿ ಎಂದು ಕೆದಕದೆಯೇ ನಮ್ಮ ಗೆಳೆತನ ಬೆಳೆದು ಬಂದಿದೆ. ಆದರೆ ಈಗಿನ ಕೆಲವು ‘ಹಿಂದೂ ಧರ್ಮ ರಕ್ಷಕ’ರಿಗೆ ಅವರ ಜಾತಿ ಪತ್ತೆ ಮಾಡಬೇಕು. ನಂತರ ಅದನ್ನು ಎತ್ತಿ ಹೇಳಿ ಅವಮಾನಮಾಡಬೇಕು!! ಆ ಟ್ರೋಲಿಂಗ್ ಮಾಡುತ್ತಿದ್ದ ಹೆಸರುಗಳೆಲ್ಲ ಮೇಲ್ಜಾತಿಯನ್ನು ಸೂಚಿಸುತ್ತಿದ್ದವು.
ಸತೀಶ್, ಇದು ನಿಮಗೆ ಹೊಸ ಅನುಭವವೇನೂ ಅಲ್ಲ. ಇಂಥ ವೈರಸಗಳಿಗೆ ಕಳೆದ ಕೆಲವು ವರ್ಷಗಳಿಂದ ನಮ್ಮೊಳಗೆಯೇ anti-bodies ನಿರ್ಮಾಣ ಆಗಿವೆ. ಟ್ರೋಲ್ ವೈರಸಗಳ ಕಾಲ ಮುಗಿಯುತ್ತಾ ಬಂತು!! take care.” ಎಂದು ಧೈರ್ಯ ತುಂಬಿದ್ದಾರೆ.

ಲೇಖಕ ನಾ. ದಿವಾಕರ ಅವರು, “ಅಜಿತ್ ಹನುಮಕ್ಕನವರೆ, ಮೊದಲು ನಿಮಗೆ ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ. ಯಾವ ರೀತಿಯಿಂದ ನೋಡಿದರೂ, ಯಾವ ಮಗ್ಗುಲಿನಿಂದ‌ ನೋಡಿದರೂ ನಿಮ್ಮನ್ನು ಪತ್ರಕರ್ತ ಎಂದು ಭಾವಿಸಲಾಗುವುದಿಲ್ಲ ಎನಿಸುತ್ತದೆ. ಆದರೂ ನೀವು ಒಂದು ಪ್ರತಿಷ್ಠಿತ ಸುದ್ದಿಮನೆಯಲ್ಲಿ ಕುಳಿತು ಅಧಿಕೃತವಾಗಿ ಸುದ್ದಿ ಸಂಪಾದಕತ್ವ ಮತ್ತು ನಿರೂಪಣೆ, ವಾಚನ (ಕ್ಷಮಿಸಿ ನಿಮ್ಮ ಅರಚಾಟದ ಹೊರತಾಗಿಯೂ ಅದನ್ನು ವಾಚನ ಎಂದೇ ಕರೆಯಬೇಕು, ಶಿಷ್ಟಾಚಾರ) ಮಾಡುತ್ತಿರುವುದರಿಂದ ನಿಮ್ಮನ್ನು ಮಾಧ್ಯಮ ಪ್ರತಿನಿಧಿ – ಪತ್ರಕರ್ತ ಎಂದೇ ತಾಂತ್ರಿಕವಾಗಿ ಪರಿಗಣಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

“ಒಬ್ಬ ಪತ್ರಕರ್ತನಿಗೆ, ಅದರಲ್ಲೂ ಸುದ್ದಿ ಸಂಪಾದಕನಿಗೆ ಮೂಲತಃ ಭಾಷಾ ಸೌಜನ್ಯ, ಭಾಷಾ ಸಭ್ಯತೆ ಮತ್ತು ಸಂಯಮ ಇರಬೇಕು. ಇದು ಪತ್ರಿಕೋದ್ಯಮದ ಮೂಲ‌ಮಂತ್ರ. ಇತ್ತೀಚಿನ ದಿನಗಳಲ್ಲಿ ಮೌಲ್ಯಗಳೇ ಇಲ್ಲದ ಮಾಧ್ಯಮಗಳು ಹೆಚ್ಚಾಗುತ್ತಿರುವುದರಿಂದ‌ ನಿಮ್ಮಿಂದ ಇದನ್ನು ನಿರೀಕ್ಷಿಸುವುದೂ ಸರಿಯಲ್ಲ ಎನಿಸುತ್ತದೆ. ಆದರೂ ನಿಮ್ಮ ಮಾತು, ನೀವು ಬಳಸುವ ಭಾಷೆ, ಪರಿಭಾಷೆ ಇವೆಲ್ಲವೂ ಲಕ್ಷಾಂತರ ಜನರನ್ನು ನೇರವಾಗಿ ತಲುಪುತ್ತದೆ. ಅಷ್ಟೇ ಪ್ರಭಾವವನ್ನೂ ಬೀರುತ್ತದೆ. ಇದು ದೃಶ್ಯ ಮಾಧ್ಯಮದ ವೈಶಿಷ್ಟ್ಯ. ಹಾಗಾಗಿ ನಿಮ್ಮ ಭಾಷಾ ಬಳಕೆಯನ್ನು ನೀವೇ ಒಮ್ಮೆ ಕುಳಿತು, ಕೇಳುಗನಾಗಿ ಆಲಿಸಿನೋಡಿ. ನಿಮ್ಮಲ್ಲಿ ಸಹಜ ಪ್ರಜ್ಞೆ ಇದ್ದರೆ ಕೇಳಿದ ನಂತರ ಕನ್ನಡಿಯ ಮುಂದೆ ನಿಲ್ಲಲಾರಿರಿ” ಎಂದು ಎಂದು ದಿವಾಕರ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಪರ ಹೋರಾಟಗಾರ, ದಿನೇಶ್ ಕುಮಾರ್‌ ಅವರು, “ಸತೀಶ್ ಆಚಾರ್ಯ ಅವರೇ, ನೀವು ಆನೆಯಂತೆ‌ ನಡೆಯಿರಿ. ನಿಮ್ಮ ಕಾರ್ಟೂನು ನಮಗೆ ಬೇಕು ಮತ್ತು ಬೇಕೇ ಬೇಕು” ಎಂದು ಹೇಳಿದ್ದಾರೆ.

ವ್ಯಂಗ್ಯ ಚಿತ್ರಕಾರ ದಿನೇಶ್‌ ಕುಕ್ಕುಜಡ್ಕ ಅವರು, “ಕಳೆದ ಆರೇಳು ವರ್ಷಗಳಿಂದ ಇಡೀ ದೇಶದಲ್ಲೇ ಕಾರ್ಟೂನಿಸ್ಟ್‌ಗಳ ಮೇಲೆ ಸೋಷಿಯಲ್ ಮೀಡಿಯಾ ಗುಂಪು ದಾಳಿಗಳು, ಫಿಸಿಕಲ್ ಅಟ್ಯಾಕ್ ಗಳೂ ನಡೆಯುವುದು ಸಾಮಾನ್ಯ ಎನಿಸಿಬಿಟ್ಟಿವೆ. ಎಷ್ಟೋ ಬಾರಿ ನಾನಂದುಕೊಂಡದ್ದು ಇದೆ. ಕಾರ್ಟೂನ್ ನೋಡುವುದು ಹೇಗೆ ಎಂಬ ಕುರಿತೇ ಜನರಿಗೆ ಪಠ್ಯ ಅಥವಾ ಸೆಮಿನಾರ್ ಮಾಡಬೇಕಾದ ಅಗತ್ಯವಿದೆ” ಎಂದು ಬರೆದಿದ್ದಾರೆ.

“ಅಂದಿನ ಬಸವಣ್ಣನಿಂದ ಹಿಡಿದು, ಮೊನ್ನೆ ಮೊನ್ನೆಯ ಗಾಂಧಿ, ದಾಬೋಲ್ಕರ್, ಗೌರಿಯರವರೆಗೆ…. ಇದೇ ಮೇಲ್ವರ್ಗದ ಸಂಚಿಗೆ ಬಲಿಯಾದ ದಕ್ಷಿಣ ಕನ್ನಡ ದ ಆರಾಧ್ಯ ದೈವಗಳಾದ ಕಲ್ಕುಡ ಕಲ್ಲುರ್ಟಿಯರಿಂದ ಹಿಡಿದು ಕೋಟಿ ಚೆನ್ನಯರವರೆಗೆ ಈ ನೆಲದಲ್ಲಿ ಪುರಾಣ ಇತಿಹಾಸಗಳ ಏಳುಬೀಳುಗಳ ಹಸಿಹಸಿ ನೆನಪು ನೆನವರಿಕೆಗಳಿವೆ. ಆ ನೆನಪುಗಳಲ್ಲಿ ಜೀವ ಪುಟಿಯುವ ಎದೆಯ ಉತ್ತೇಜಕ ದ್ರವ್ಯಗಳಿವೆ. ನನ್ನ ಚಿತ್ರ ನನ್ನದು. Always with you ಸತೀಶಣ್ಣ. ನಮ್ಮೆಲ್ಲರದೂ ಒಂದೇ ಧರ್ಮ- ಅದು ಮನುಷ್ಯ ಧರ್ಮ! Cheers!” ಎಂದು ದಿನೇಶ್‌ ಅವರು ಬರೆದಿದ್ದಾರೆ.

ಇದನ್ನೂ ಓದಿ: ಜನರ ಗಮನ ಬೇರೆಡೆ ಸೆಳೆಯಲು ರೋಮ್‌ ಚಕ್ರವರ್ತಿಗಳು ಗ್ಲಾಡಿಯೇಟರ್‌‌ಗಳನ್ನು ಆಡಿಸುತ್ತಿದ್ದರು, ನಮಗೆ ಐಪಿಎಲ್ ಇದೆ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here