Photo Courtesy: BBC

ತನ್ನ ಜವಾಬ್ದಾರಿಯಲ್ಲಿ ಎಲ್ಲ ಆಯಾಮಗಳಲ್ಲೂ ವಿಫಲವಾಗಿರುವ ಕೇಂದ್ರದ ಮೋದಿ ಸರ್ಕಾರವು ಲಸಿಕೆಯ ಜವಾಬ್ದಾರಿಯಿಂದ ನುಣುಚಿಕೊಂಡು ರಾಜ್ಯ ಸರ್ಕಾರಗಳ ಮೇಲೆ ಜವಾಬ್ದಾರಿ ವರ್ಗಾಯಿಸಲು ನೋಡುತ್ತಿದೆ. ಹಾಗಾಗಿ ಅದು ಭರ್ಜರಿಯಾಗಿ ಘೋಷಿಸಿಕೊಂಡಿದ್ದ, ನಾಳೆ ಆರಂಭವಾಗಬೇಕಿದ್ದ 18-44 ವಯೋಮಾನದವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಬಹುತೇಕ ರಾಜ್ಯಗಳಲ್ಲಿ ಆರಂಭವಾಗುತ್ತಿಲ್ಲ.

ಇದಕ್ಕೆ ಕೇಂದ್ರದ ಲಸಿಕಾ ನೀತಿಯೇ ಕಾರಣ. ಲಸಿಕೆಗಳನ್ನು ಎಲ್ಲರಿಗೂ ಉಚಿತವಾಗಿ ನೀಡಬೇಕಿದ್ದ ಅದು, ಎರಡೂ ಲಸಿಕಾ ಕಂಪನಿಗಳ ಪರ ನಿಂತು, ರಾಜ್ಯಗಳು ಈಗ ದುಬಾರಿ ದರ ತೆತ್ತು ಲಸಿಕೆ ಖರೀದಿಸುವಂತೆ ಮಾಡಿದೆ. ಇದರಿಂದಾಗಿ ಬಹುಪಾಲು ರಾಜ್ಯಗಳು ತಮ್ಮ ನಾಗರೀಕರಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಿದ್ದು, ಕಂಪನಿಗಳಿಗೆ ಆರ್ಡರ್ ನೀಡಿವೆ. ಆದರೆ, ಕಂಪನಿಗಳ ಉತ್ಪಾದನಾ ಸಾಮಥ್ಯ ಈ ಅಗತ್ಯವನ್ನು ಪೂರೈಸುತ್ತಿಲ್ಲ. ಅಥವಾ ಅವು ಈ ಹಿಂದೆ ಮೋದಿಯವರ ಮೂಲಕ ವಿದೇಶಗಳಿಗೆ ಕಳಿಸಿದ 5 ಕೋಟಿ ಡೋಸ್ ರಫ್ತು ಈಗ ಕಾಡತೊಡಗಿದೆ. ಜೊತೆಗೆ ಅವು ಈಗ ಹೆಚ್ಚಿನ ದರ ಸಿಗುವ ಖಾಸಗಿ ಆಸ್ಪತ್ರೆಗಳು ಮತ್ತು ಕಾರ್ಪೋರೇಟ್ ಕಂನಿಗಳಿಗೆ ಲಸಿಕೆ ಪೂರೈಕೆಯಲ್ಲಿ ಆಸಕ್ತಿ ಹೊಂದಿದ್ದು ಅವುಗಳ ಅತಿಯಾಶೆಗೆ ತಕ್ಕಂತೆಯೇ ಇದೆ. ಇದಕ್ಕೆ ನೀರೆರಿದಿದ್ದು ಮೋದಿ ಸರ್ಕಾರ ಎನ್ನುವುದಕ್ಕಿಂತ ಮೋದಿ ಸಾಹೇಬರೇ ಅನ್ನುವುದು ಸೂಕ್ತ.

ಇವತ್ತು ಮುಂಜಾನೆ ರಾಜ್ಯ ಆರೋಗ್ಯ ಸಚಿವ ಡಾ,ಸುಧಾಕರ್, ‘ಲಸಿಕೆಗಳ ಕೊರತೆಯಿಂದ ನಾಳೆಯಿಂದ ನಡೆಯಬೇಕಿದ್ದ 18-44 ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನ ಶುರು ಮಾಡುತ್ತಿಲ್ಲ. ಅಗತ್ಯ ಲಸಿಕೆ ದೊರೆತ ನಂತರ ಆರಂಭಿಸಲಾಗುವುದು’ ಎಂದಿದ್ದಾರೆ.
ಇದು ಕರ್ನಾಟಕದ ಸಮಸ್ಯೆ ಅಷ್ಟೇ ಅಲ್ಲ. ಇಲ್ಲಿಯಂತೆ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಗುಜರಾತ್ ಸರ್ಕಾರಗಳು ಕೂಡ ಮೇ1 ರಿಂದ 18-44 ವಯೋಮಾನದವರಿಗೆ ಲಸಿಕೆ ಅಭಿಯಾನ ಶುರು ಮಾಡಲಾಗದು ಎಂದಿವೆ. ಬಿಜೆಪಿಯೇತರ ಸರ್ಕಾರಗಳಿರುವ ದೆಹಲಿ, ಮಹಾರಾಷ್ಟ್ರ ಕೇರಳ, ಪಂಜಾಬ್-ಇನ್ನೂ ಹಲವು ರಾಜ್ಯಗಳು ಇದೇ ರೀತಿ ಘೋಷಣೆ ಮಾಡಿವೆ.

ಮಹಾರಾಷ್ಟ್ರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ (ಭಾನುವಾರದವರೆಗೆ) 45 ಮೇಲ್ಪಟ್ಟವರಿಗೆ ನಡೆಸುತ್ತಿದ್ದ ಲಸಿಕಾ ಅಭಿಯಾನವನ್ನೂ ನಿಲ್ಲಿಸಲಾಗಿದೆ. ಏಕೆಂದರೆ ರಾಜ್ಯಗಳ ಬಳಿ ಲಸಿಕೆಗಳ ಸಂಗ್ರಹಣೆ ಅಗತ್ಯ ಪ್ರಮಾಣದಲ್ಲಿ ಇಲ್ಲ. ಹಾಗೆಯೇ ಅವು ಸೀರಂ ಮತ್ತು ಭಾರತ್ ಬಯೋಟೆಕ್ ಕಂಪನಿಗಳಿಗೆ ಆರ್ಡರ್ ಕಳಿಸಿ ಕಾಯುವ ಪರಿಸ್ಥಿತಿಯಿದೆ.
ಇದಕ್ಕೆ ಯಾರು ಕಾರಣ? ಮತ್ತೆ ಅದು ತಲುಪುವುದು ಮೋದಿ ಸರ್ಕಾರದ ಗೊಂದಲದ ನೀತಿಗಳಿಗೆ ಅಷ್ಟೇ ಅಲ್ಲ, ಅದರ ಕಾರ್ಪೋರೇಟ್ ಪರ ಒಲುವುಗಳಿಗೂ ಅದು ಸಾಕ್ಷಿಯಾಗಿದೆ.
ಲಸಿಕೆ ಅವ್ಯವಸ್ಥೆಗೆ ಕಾರಣಗಳೇನು? ಇಲ್ಲಿಯೂ ಕೆಲವರ ಹಿತಾಸಕ್ತಿ ಮುಖ್ಯವಾಗಿದೆಯೇ ಎಂಬುದನ್ನು ನೋಡೋಣ.

ಸಾಂಕ್ರಾಮಿಕ ಲಸಿಕೆ ಮಾರಾಟಕ್ಕೆ: ದೇಶದಲ್ಲೇ ಮೊದಲ ಸಲ…

ಮೊದಲನೆದಾಗಿ, ನಾಳೆ 18-45 ವಯೋಮಾನದವರಿಗೆ ಲಸಿಕಾ ಅಭಿಯಾನ ಚಾಲೂ ಮಾಡಲು ಆಗದ್ದಕ್ಕೆ ಮೋದಿ ಸರ್ಕಾರದ ನೀತಿಗಳೇ ಕಾರಣ. ಅದು ಭಾರತದಲ್ಲಿ ಲಸಿಕೆ ತಯಾರಿಕೆ ಆರಂಭವಾದಾಗಿನಿಂದ ತನ್ನ ಸಾಕು ಮೀಡಿಯಾಗಳನ್ನು ಬಳಸಿಕೊಂಡು, ಮೋದಿಯೇ ಲಸಿಕೆ ಕಂಡು ಹಿಡಿದರು ಎಂದು ಪರೋಕ್ಷವಾಗಿ ಅನಿಸುವಂತೆ ಪ್ರಸಾರ ಮಾಡಿಸುತ್ತ ಬಂದಿತು. ಅಲ್ಲದೇ ಉಚಿತ ಲಸಿಕೆ ನೀಡುವುದಾಗಿ ಚುನಾವಣಾ ಪ್ರಚಾರದಲ್ಲಿ, ಪ್ರಣಾಳಿಕೆಯಲ್ಲಿ ಘೋಷಿಸಲಾಯಿತು! ಕೋವಿಡ್ ಮೊದಲ ಅಲೆ ಸಂದರ್ಭದಲ್ಲೇ ಈ ಸರ್ಕಾರ ತರಾತುರಿಯಲ್ಲಿ ಆಗಸ್ಟ್ 15ರಂದು ಕೆಂಪುಕೋಟೆ ಮೇಲೆ ಮೋದಿಯವರ ಕಡೆಯಿಂದ ಲಸಿಕೆ ಉದ್ಘಾಟಿಸುವ ಹೀನಾತಿಹೀನ ಯೋಚನೆಯನ್ನೂ ಮಾಡಿತ್ತು.

ಟ್ರಯಲ್ಸ್‌ಗಳಿಲ್ಲದೇ ಹಾಗೆ ಮಾಡಿದರೆ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎಂದು ಹೆದರಿದ ಕಂಪನಿಗಳು ಸಾಧ್ಯವಿಲ್ಲ ಎಂದವು.

ಎರಡನೆಯ ಸಮಸ್ಯೆ ಎಂದರೆ, ಭಾರತೀಯರೆಲ್ಲರಿಗೂ ಈ ಎರಡು ಕಂಪನಿಗಳೇ ತ್ವರಿತವಾಗಿ ಲಸಿಕೆ ಉತ್ಪಾದನೆ ಮಾಡುತ್ತವೆ ಎಂಬ ಹುಸಿ ನಂಬಿಕೆಯಲ್ಲಿ ಕಾಲ ಕಳೆದಿದ್ದು.

ಎರಡನೇ ಅಲೆ ಶುರುವಾಗುವ ಸಂದರ್ಭದಲ್ಲಿ ಚುನಾವಣೆಗಳತ್ತಲೇ ಎಲ್ಲ ಗಮನ ಕೇಂದ್ರಿಕರಿಸಿದ ಸರ್ಕಾರ 60 ದಾಟಿದವರಿಗೆ, 45 ದಾಟಿದವರಿಗೆ ಎಂದು ಎರಡು ಹಂತಗಳ ಲಸಿಕಾ ಅಭಿಯಾನ ಮಾಡಿತು. ಆದರೆ ಈಗ ಒಂದು ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಕೊಡುವುದು ಕಷ್ಟವಿದೆ. ಈಗ ಕೇಂದ್ರ ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಂಡು, ರಾಜ್ಯಗಳಿಗೆ ಲಸಿಕೆ ಖರೀದಿಸಿಕೊಳ್ಳಿ ಎನ್ನುವ ಮೂಲಕ ಕಾರ್ಪೋರೇಟ್ ಔಷಧಿ ಕಂಪನಿಗಳ ಪರ ನಿಂತಿದೆ.

ಈಗ ಬಿಜೆಪಿ ಆಡಳಿತ ಇರುವ ರಾಜ್ಯಗಳೇ ನಾಳೆಯಿಂದ 3ನೆ ಹಂತದ ಲಸಿಕಾ ಅಭಿಯಾನ ಶುರು ಮಾಡಲಾಗುವುದಿಲ್ಲ ಎಂದು ಘೋಷಿಸಿವೆ. ಅಂದರೆ ನಿಗದಿತ ಅವಧಿಯಲ್ಲಿ ಹಣ ಪಾವತಿಸಿದರೂ ಲಸಿಕೆ ಲಭ್ಯವಾಗುತ್ತಿಲ್ಲ! ಮತ್ತೆ ಇದಕ್ಕೆಲ್ಲ ಯಾರು ಕಾರಣ, ಹೇಳಬೇಕೆ ಅದನ್ನೂ…. ಬೇಡ ಅಲ್ಲವೇ?

ತಜ್ಞರ ಮಾತಿಗೆ ಮನ್ನಣೆ ಇಲ್ಲ!

ಎಲ್ಲರಿಗೂ ಉಚಿತ ಲಸಿಕೆ ಒದಗಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ರಾಹುಲ್ ಗಾಂಧಿ ಹೇಳಿದ್ದು ಈ ಸರ್ಕಾರಕ್ಕೆ ಅಪಥ್ಯದ ವಿಷಯ. ಆದರೆ ತಜ್ಞರು ಹೇಳಿದ ಮಾತಿಗೂ ಕಿವಿಗೊಡದೇ ಲಸಿಕೆಗಳಿಗೆ ಮೂರು ಬಗೆಯ ದರಗಳನ್ನು ವಿಧಿಸಲು ಕಂಪನಿಗಳಿಗೆ ಮೋದಿ ಸರ್ಕಾರ ಅವಕಾಶ ನೀಡಿತು.

ಕೇಂದ್ರ ಆರೋಗ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕೆ. ಸುಜಾತಾರಾವ್‌ರಂತಹ ಆಡಳಿತಾತ್ಮಕ ಅನುಭವ ಇರುವವರು, ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು-ಹೀಗೆ ಬಹುತೇಕರೆಲ್ಲ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕು ಎಂದೇ ಆಗ್ರಹಿಸಿದ್ದಾರೆ.

ಈಗ ಲಸಿಕಾ ಅಭಿಯಾನ ಶುರುವಾಗಿ 100 ದಿನಗಳು ದಾಟಿವೆ. 14 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ, ಅವರಲ್ಲಿ ಕೇವಲ ಶೇ.10 ಮಾತ್ರ ಎರಡೂ ಡೋಸ್ ಪಡೆದಿದ್ದಾರೆ.
ಹೀಗಿರುವಾಗ, ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಘೋಷಿಸುವ ಅಗತ್ಯವಿತ್ತೇ? ನಿಜ, ಆದಷ್ಟೂ ಬೇಗ ಆಗಬೇಕು, ಆದರೆ ನಮ್ಮ ಲಸಿಕಾ ಕಂಪನಿಗಳಿಗೆ ಅಷ್ಟು ಉತ್ಪಾದನಾ ಸಾಮರ್ಥ್ಯವೇ ಇಲ್ಲದಿರುವಾಗ? ವಿದೇಶಿ ಲಸಿಕೆಗಳನ್ನು ತರಿಸುವ ನಿರ್ಧಾರವನ್ನೂ ಚುನಾವಣೆಯ ಅಂತ್ಯದಲ್ಲಿ ಬಿಡುವಾದಾಗ ತೆಗೆದುಕೊಳ್ಳಲಾಗಿತು.

ಕೇಂದ್ರ ಬಜೆಟ್ 2021-22 ರಲ್ಲಿ ಲಸಿಕಾ ಅಭಿಯಾನಕ್ಕೆಂದೇ 35,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಆದರೆ, ಕೇವಲ ಶೇ.10 ಜನಸಂಖ್ಯೆಗೆ ಲಸಿಕೆ ಹಾಕಿದ ನಂತರ, ಕೇಂದ್ರವು ಏಕೆ ಹಿಂದೆ ಸರಿಯಿತು, ರಾಜ್ಯಗಳ ಮೇಲೆ ಏಕೆ ಭಾರ ಹಾಕಿತು? ಬಜೆಟ್ ಅನುದಾನ ಮತ್ತು ಪಿಎಂ ಕೇರ್ಸ್ ಹಣ ಬಳಸಿ ವಿದೇಶಿ ಲಸಿಕೆಗಳನ್ನು ತುರ್ತಾಗಿ ತರಿಸಿಕೊಳ್ಳಲಿಲ್ಲವೇಕೆ? -ಹೀಗೆ ಕಾಂಗ್ರೆಸ್, ಆಮ್ ಆದ್ಮಿ, ಎಡಪಕ್ಷಗಳು, ತಜ್ಞರು ಮತ್ತು ಇತ್ತೀಚೆಗೆ ಪ್ರಜ್ಞಾವಂತ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಮೋದಿ ಸರ್ಕಾರದ ಬಳಿ ಉತ್ತರವೇ ಇಲ್ಲ.

ಅದು ಒಕ್ಕೂಟ ವ್ಯವಸ್ಥೆಗೆ ಬಲವಾದ ಏಟು ಕೊಟ್ಟಿದೆ, ಬಂಡವಾಳಶಾಹಿಗಳ ಹಿಂಬಾಲಕನಂತೆ ವರ್ತಿಸುವ ಮೂಲಕ ಒಕ್ಕೂಟದ ಎಲ್ಲ ರಾಜ್ಯಗಳಿಗೂ, ಆ ಮೂಲಕ ಎಲ್ಲ ದೇಶವಾಸಿಗಳಿಗೂ ಮಹಾದ್ರೋಹ ಬಗೆದಿದೆ ಅಲ್ಲವೇ?

ದೇಶದಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕ ರೋಗದ ಲಸಿಕೆಯನ್ನು ಮಾರಾಟಕ್ಕಿಟ್ಟ, ಆ ಮೂಲಕ ಔಷಧಿ ಕಂಪನಿಗಳ ದಲ್ಲಾಳಿಯಂತೆ ವರ್ತಿಸುತ್ತ, ರಾಜ್ಯ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ ಏಕೈಕ ಪ್ರಧಾನಿ ಎಂದು ಇತಿಹಾಸದಲ್ಲಿ ಮೋದಿ ಹೆಸರು ಉಳಿಯಲಿದೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೆ ಆರೋಗ್ಯ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸುತ್ತಿದ್ದೆವು: ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮಲ್ಲನಗೌಡರ್‌ ಪಿ.ಕೆ
+ posts

LEAVE A REPLY

Please enter your comment!
Please enter your name here