‘‘ಇದು ಇಂದೋರ್‌ನಲ್ಲಿರುವ ಭಾರತದ ಎರಡನೇ ಅತಿದೊಡ್ಡ ಕೊರೊನಾ ಆರೈಕೆ ಕೇಂದ್ರ. ನಾಲ್ಕು ಆಮ್ಲಜನಕ ಘಟಕಗಳನ್ನು ಹೊಂದಿರುವ, 6000 ಹಾಸಿಗೆಗಳ ಬೃಹತ್ ವೈದ್ಯಕೀಯ ಸೌಲಭ್ಯವಿರುವ ಈ ಕೊರೊನಾ ಆಸ್ಪತ್ರೆಯನ್ನು ಆರೆಸ್ಸೆಸ್‌ ಸ್ಥಾಪಿಸಿದೆ” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪೋಟೋಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಕಳೆದ ಒಂದು ವಾರದಿಂದ ಈ ಸಂದೇಶ ವೈರಲ್ ಆಗಿದ್ದು, ನೋಡಿ ಇದೇ ನಿಜವಾದ ದೇಶಭಕ್ತಿ ಎಂದು ಬಿಜೆಪಿ ಅನುಯಾಯಿಗಳು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ಬೆಂಬಲಿಗರಾದ ಹರ್ಷವರ್ಧನ್ ಮುಪ್ಪವರಪು, ಅರುಣ್ ಪುದೂರ್ ಇಂತಹ ಪೋಸ್ಟ್‌ಗಳನ್ನು ಸಮಾಜಿಕ ಜಾಲತಾಣದಲ್ಲಿ ಮಾಡಿದ್ದಾರೆ.

ಇದನ್ನೂ ಓದಿ: 85 ವ‍ರ್ಷದ RSSನ ವೃದ್ದರೊಬ್ಬರು ಕೊರೊನಾ ಪೀಡಿತ ಯುವಕನಿಗಾಗಿ ತನ್ನ ಬೆಡ್ ಬಿಟ್ಟು ಕೊಟ್ಟಿದ್ದು ಸುಳ್ಳು, ಹಾಗೊಂದು ಘಟನೆಯೆ ನಡೆದಿಲ್ಲ!

ಬಿಜೆಪಿ ದೆಹಲಿ ಉಪಾಧ್ಯಕ್ಷ ರಾಜನ್ ತಿವಾರಿ ಅವರು ಆರೆಸ್ಸೆಸನ್ನು ಟ್ಯಾಗ್ ಮಾಡಿ ಇಂತಹದೆ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ಬಲಪಂಥೀಯ ಬೆಂಬಲಿಗರು ಈ ಸಂದೇಶವನ್ನು ಹಂಚಿಕೊಂಡಿದ್ದು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದಾಗಿದೆ.

ಫ್ಯಾಕ್ಟ್‌ಚೆಕ್

ಏಪ್ರಿಲ್ 22 ರ ಎಎನ್‌ಐ ವರದಿಯ ಪ್ರಕಾರ, ‘ಮಧ್ಯಪ್ರದೇಶದ ಅತಿದೊಡ್ಡ ಕೊರೊನಾ ಆರೈಕೆ ಕೇಂದ್ರವನ್ನು ಇಂದೋರ್‌ನಲ್ಲಿ ನಿರ್ಮಿಸಲಾಗಿದೆ. ಇದನ್ನು ಮೊದಲಿಗೆ 600 ಹಾಸಿಗೆಗಳೊಂದಿಗೆ ಪ್ರಾರಂಭಿಸಲಾಯಿತು, ನಂತರ ಅದನ್ನು 6000 ಕ್ಕೆ ಹೆಚ್ಚಿಸಲಾಗುತ್ತದೆ. ಇಂದೋರ್‌ನ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಸಂಸ್ಥೆಯ ಮೈದಾನವನ್ನು ಮಾ ಅಹಿಲ್ಯ ಕೊರೊನಾ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಯಿತು’.

ಈ ವರದಿಯಲ್ಲಿ ಮುಖ್ಯಮಂತ್ರಿ ಪರವಾಗಿ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಅವರಿಗೆ ಧನ್ಯವಾದಗಳನ್ನು ವ್ಯಕ್ತಪಡಿಸುವ ಬಿಜೆಪಿ ಶಾಸಕ ತುಳಸಿ ಸಿಲಾವತ್ ಅವರ ಹೇಳಿಕೆಯೂ ಸೇರಿದೆ.

“ಮೊದಲ ಹಂತದಲ್ಲಿ 600 ಹಾಸಿಗೆಗಳು ಲಭ್ಯವಾಗುತ್ತವೆ. ಅಲ್ಲಿ ಆರೆಸ್ಸೆಸ್‌ ಕಾರ್ಯಕರ್ತರು ಕೂಡಾ ಸ್ವಯಂ ಸೇವಕರಾಗಿದ್ದಾರೆ. ಇಂದೋರ್‌ನ ಅನೇಕ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಈ ಆರೈಕೆ ಕೇಂದ್ರಕ್ಕಾಗಿ ಹಣ ಮತ್ತು ಉಪಕರಣಗಳನ್ನು ದಾನ ಮಾಡಿದ್ದಾರೆ. ನಾನು ಅವರಿಗೆ ಕೃತಜ್ಞನಾಗಿದ್ದೇನೆ” ಎಂದು ಅವರು ಹೇಳಿದ್ದರು.

ಇದೇ ಸುದ್ದಿಯನ್ನು ನ್ಯೂಸ್18, ಎನ್‌ಡಿಟಿವಿ ಮತ್ತು ಅಮರ್ ಉಜಲಾ ಕೂಡಾ ಮಾಡಿತ್ತು. ಆದರೆ, ಈ ವರದಿಗಳಲ್ಲಿ ಈ ಆಸ್ಪತ್ರೆಯನ್ನು ಆರೆಸ್ಸೆಸ್‌ ನಿರ್ಮಿಸಿದೆ ಎಂದು ಉಲ್ಲೇಖಿಸಿಲ್ಲ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ದೇಶಾದ್ಯಂತ ಆಕ್ಸಿಜನ್ ಪ್ಲಾಂಟ್‌ ಸ್ಥಾಪನೆ ವಿಳಂಬಕ್ಕೆ ಮೋದಿ ಸರ್ಕಾರವೇ ಕಾರಣ ಹೊರತು ರಾಜ್ಯಗಳಲ್ಲ

ನ್ಯೂಸ್ 18 ಮಾಡಿರುವ ವರದಿಯೊಂದು ಹೀಗಿದೆ, ‘ಸೇವೆಗಳನ್ನು ಒದಗಿಸಲು ಮತ್ತು ರೋಗಿಗಳನ್ನು ನೋಡಿಕೊಳ್ಳಲು ಆರ್‌ಎಸ್‌ಎಸ್ ಕಾರ್ಯಕರ್ತರು ಕೂಡಾ ಕೇಂದ್ರದಲ್ಲಿ ಇರುತ್ತಾರೆ. ರೋಗಿಗಳ ಸುರಕ್ಷತೆ ಮತ್ತು ಮೇಲ್ವಿಚಾರಣೆಗಾಗಿ ಕ್ಯಾಂಪಸ್‌ನಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ”

ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಮಧ್ಯಪ್ರದೇಶದ ಕೊರೊನಾ ಸಲಹಾ ಸಮಿತಿಯ ಸದಸ್ಯ ಡಾ.ನಿಶಾಂತ್ ಖರೆ ಅವರನ್ನು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ ‘ಆಲ್ಟ್‌ನ್ಯೂಸ್‌’ ಸಂಪರ್ಕಿಸಿದ್ದು, ಅವರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹೇಳಿಕೆಗಳನ್ನು ನಿರಾಕರಿಸಿದ್ದಾರೆ.

“ಮಾ ಅಹಿಲ್ಯ ಕೊರೊನಾ ಕೇರ್ ಸೆಂಟರ್ ಅನ್ನು ರಾಧಾ ಸೋಮಿ ಸತ್ಸಂಗ್ ಬಿಯಾಸ್ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿದೆ. ಮುಂದಕ್ಕೆ 6000 ಹಾಸಿಗೆಗಳನ್ನು ಇಲ್ಲಿ ವ್ಯವಸ್ಥೆಗೊಳಿಸಲಾಗುತ್ತದೆ. ನಾವು ಮೊದಲ ಹಂತದಲ್ಲಿ 600 ಹಾಸಿಗೆಗಳನ್ನು ವ್ಯವಸ್ಥೆಗೊಳಿಸಿದ್ದೇವೆ. ಮುಂದಕ್ಕೆ 600 ರಂತೆ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಇದಕ್ಕೆ ಆಡಳಿತವು ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದು, ಜಿಲ್ಲಾಡಳಿತವು ಅದರ ಮಾಲೀಕತ್ವವನ್ನು ಪಡೆದುಕೊಂಡಿದೆ. ವೈದ್ಯಕೀಯ ಸೌಲಭ್ಯಗಳ ನಿರ್ವಹಣೆ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸುವ ಜವಾಬ್ದಾರಿಯನ್ನು ಮಧ್ಯಪ್ರದೇಶ ಸರ್ಕಾರ ಹೊಂದಿದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಮರಣ ಪ್ರಮಾಣಪತ್ರದಲ್ಲೂ ಮೋದಿ ಚಿತ್ರ?

ರಾಧಾ ಸೋಮಿ ಸತ್ಸಂಗ್ ಬಿಯಾಸ್ ಸಂಸ್ಥೆ ಕೂಡಾ ಪ್ರಮುಖ ಕೊಡುಗೆ ನೀಡಿದ್ದಾರೆ. ಸಂಸ್ಥೆಯು ಎಲ್ಲರಿಗೂ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದೆ. ಇದಲ್ಲದೆ, ನಮಗೆ ವ್ಯಾಪಕವಾದ ಸಾಮಾಜಿಕ ಬೆಂಬಲ ದೊರೆತಿದೆ. ಇದು ತುಂಬಾ ದೊಡ್ಡದಾಗಿದ್ದು, ಸರ್ಕಾರದ ಕೊಡುಗೆ 20% ಕ್ಕೆ ಇಳಿದಿದೆ. ಸ್ಥಳೀಯರ ಸಹಾಯದಿಂದ ಹಾಸಿಗೆಗಳು, ಟೆಂಟ್ ಮನೆಗಳು ಮತ್ತು ಕೂಲಿಂಗ್ ಲಾಗ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.

ರೋಗಿಯ ಕಿಟ್‌ಗಳಂತಹ ಇತರ ಅಗತ್ಯ ವಸ್ತುಗಳು, ಎಲ್ಲಾ ದೈನಂದಿನ ಬಳಕೆಯ ವಸ್ತುಗಳನ್ನು ಸಹ ನಾಗರಿಕರಿಂದ ಸಹಾಯದಿಂದ ಸಂಗ್ರಹಿಸಿದ್ದವೆ. ಇದುವರೆಗೂ 120 ಆಮ್ಲಜನಕ ಸಾಂದ್ರಕಗಳನ್ನು ದೇಣಿಗೆ ರೂಪದಲ್ಲಿ ಸ್ವೀಕರಿಸಿದ್ದೇವೆ. ಸರ್ಕಾರವು ಅವುಗಳನ್ನು ಖರೀದಿಸುವ ಅಗತ್ಯವಿಲ್ಲ. ಇವೆಲ್ಲವನ್ನೂ ಜಿಲ್ಲಾಡಳಿತ ಮತ್ತು ಸಮುದಾಯದ ಸಹಾಯದಿಂದ ಉತ್ತಮವಾಗಿ ನಡೆಸಲಾಗುತ್ತಿದೆ. ಆರೆಸ್ಸೆಸ್‌ ಕೇಂದ್ರವನ್ನು ನಡೆಸುತ್ತಿದೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳ ಹೇಳಿಕೆ/ಸಂದೇಶ ಸಂಪೂರ್ಣವಾಗಿ ಸುಳ್ಳು. ಇದನ್ನು ಸರ್ಕಾರ ಮತ್ತು ಸಾಮಾಜಿಕ ಬೆಂಬಲದೊಂದಿಗೆ ನಿರ್ಮಿಸಲಾಗಿದೆ.

ವಕೀಲರ ಬಾರ್ ಅಸೋಸಿಯೇಷನ್ ಮತ್ತು ರಿಯಲ್ ಎಸ್ಟೇಟ್ ಅಸೋಸಿಯೇಷನ್‌ ಸಹ ಇದಕ್ಕಾಗಿ ದಾನ ಮಾಡಿವೆ. ಈ ಸೌಲಭ್ಯಕ್ಕಾಗಿ ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಮುಖ್ಯವಾಗಿ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಹೆಚ್ಚಿನ ಕೊಡುಗೆ ನಿಡುತ್ತಿದೆ. ಆರೆಸ್ಸೆಸ್‌ ಮತ್ತು ಸೇವಾ ಭಾರತಿಯ 75 ಸ್ವಯಂಸೇವಕರು ಪ್ರತಿದಿನ ಇಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮತ್ತು ಅಡುಗೆ ಮಾಡುವ ರಾಧಾ ಸ್ವಾಮಿ ಸತ್ಸಂಗದ ಕಾರ್ಯಕರ್ತರಿಗೆ ನೆರವು ಮಾಡುತ್ತಾರೆ” ಎಂದು ಡಾ.ನಿಶಾಂತ್‌ ಖರೆ ಹೇಳಿದ್ದಾರೆ.

ಇದನ್ನೂ ಓದಿ: ಆದಿತ್ಯನಾಥ್ ಕುರಿತ ಪೋಸ್ಟ್ ಕಾರ್ಡ್‌ ಸುಳ್ಳು ಬಯಲು; ವಾಸ್ತವದಲ್ಲಿ ಇದು ಉಲ್ಟಾ ಕೇಸು

ಒಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಅತಿದೊಡ್ಡ ಕೊರೊನಾ ಸೌಲಭ್ಯವನ್ನು ಸ್ಥಳೀಯ ಸಮುದಾಯದ ಬೆಂಬಲದೊಂದಿಗೆ ನಿರ್ಮಿಸಲಾಗಿದೆಯೆ ಹೊರತು ಆರೆಸ್ಸೆಸ್ ಸ್ಥಾಪಿಸಿದೆ ಎಂಬುವುದು ಸುಳ್ಳು ಸುದ್ದಿಯಾಗಿದೆ. ಅಲ್ಲಿ ಕೆಲವೆ ಕೆಲವು ಆರೆಸ್ಸೆಸ್‌ ಕಾರ್ಯಕರ್ತರು ಉಪಕೆಲಸಗಳಿಗೆ ಸಹಾಯ ಮಾಡುತ್ತಿದ್ದಾರೆ.

ಇದರ ಜೊತೆಗೆ ಕತಾರ್‌ನ ‘ಅಲ್ ಬೈತ್‌’ ಕ್ರೀಡಾಂಗಣದ ಫೋಟೋವನ್ನು ಬಳಸಿಕೊಂಡು, ಆರೆಸ್ಸೆಸ್‌‌ ನಿರ್ಮಿಸಿದ ಕೊರೊನಾ ಕೇಂದ್ರ ಎಂದು ಸುಳ್ಳನ್ನ ಹಂಚಿಕೊಳ್ಳುತ್ತಿದ್ದಾರೆ.

ಅದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದಾಗಿದೆ.

(ಕೃಪೆ: ಅಲ್ಟ್ ನ್ಯೂಸ್)

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮಮತಾ ದರ್ಗಾಕ್ಕೆ ರಹಸ್ಯ ಭೇಟಿ ನೀಡಿಲ್ಲ, ಮಾಧ್ಯಮದ ಸಮ್ಮುಖದಲ್ಲೇ ಭೇಟಿ

LEAVE A REPLY

Please enter your comment!
Please enter your name here