ಕೇಂದ್ರ ಸರ್ಕಾರ ಹಣ ನೀಡಿದರೂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ 8 ಆಕ್ಸಿಜನ್ ಪ್ಲಾಂಟ್‌ಗಳನ್ನು, ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ 10 ಪ್ಲಾಂಟ್‌ಗಳನ್ನು ನಿರ್ಮಿಸಿಲ್ಲ. ಹಣವೆಲ್ಲಾ ನುಂಗಿ ನೀರು ಕುಡಿದಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾಸ್ ಶರ್ಮಾ ಸೇರಿದಂತೆ ಬಿಜೆಪಿಯ ಹಲವು ಸಚಿವರು, ನಾಯಕರು ಮತ್ತು ಅನುಯಾಯಿಗಳು ಆರೋಪಿಸಿದ್ದಾರೆ.

ಅವರು ಆಮ್ಲಜನಕ ಘಟಕಗಳ ಸ್ಥಾಪನೆ ಕುರಿತಂತೆ ದಾರಿ ತಪ್ಪಿಸುವ ಗ್ರಾಫಿಕ್ ಹಂಚಿಕೊಂಡಿದ್ದಾರೆ. ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಕೇಂದ್ರವು ರಾಜ್ಯ ಸರ್ಕಾರಗಳಿಗೆ ಪಿಎಂ-ಕೇರ್ಸ್‌ ನಿಧಿ ಅಡಿ ಹಂಚಿಕೆ ಮಾಡಿದ ಹಣ ಎಲ್ಲಿದೆ? ದೆಹಲಿಗೆ ಎಂಟು ಸ್ಥಾವರಗಳಿಗೆ ಹಣ ನೀಡಿದ್ದು ಒಂದನ್ನು ಮಾತ್ರ ಸ್ಥಾಪಿಸಿದೆ. ಮಹಾರಾಷ್ಟ್ರದಲ್ಲಿ ಕೂಡ ಒಂದು ಆಮ್ಲಜನಕ ಸ್ಥಾವರವನ್ನು ಮಾತ್ರ ಸ್ಥಾಪಿಸಲಾಗಿದೆ. ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸುಮ್ಮನೇ ಕೇಂದ್ರ ಸರ್ಕಾರ ಮತ್ತು ಪ್ರಧಾನಿಯನ್ನು ದೂರುತ್ತಿವೆ……. ಎಂಬುದು ಅವರ ಪ್ರಶ್ನೆಯ ಸಾರಾಂಶ.

ಫ್ಯಾಕ್ಟ್: ರಾಜ್ಯಗಳಿಗೆ ನಯಾಪೈಸೆ ನೀಡಿಲ್ಲ!

ಈ ಮೇಲಿನ ಆರೋಪಗಳು ಸಂಪೂರ್ಣ ಸುಳ್ಳಾಗಿವೆ. ಏಕೆಂದರೆ ಆಮ್ಲಜನಕ ಘಟಕಗಳ ಸ್ಥಾಪನೆಗೆ ಪಿಎಂ ಕೇರ್ಸ್‌ನಿಂದ ಕೇಂದ್ರ ಸರ್ಕಾರ ಹಣ ನೀಡಿಲ್ಲ. ಬದಲಿಗೆ ದೇಶಾದ್ಯಂತ 162 ಆಮ್ಲಜನಕ ಘಟಕಗಳ ಸ್ಥಾಪನೆಯ ಹೊಣೆ ಹೊತ್ತಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಆರೋಗ್ಯ ಸೇವೆಗಳ ಸೊಸೈಟಿ. ಹೀಗಾಗಿ ಇದು ಕೇಂದ್ರ ಸರ್ಕಾರ ಮತ್ತು ಮೋದಿಯವರ ವೈಫಲ್ಯವೇ ಹೊರತು, ದೆಹಲಿ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ವೈಫಲ್ಯ ಅಲ್ಲವೇ ಅಲ್ಲ.

ಜನವರಿ 5 ರ ಕೇಂದ್ರ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ, ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ 162 ಪಿಎಸ್‌ಎ (ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್) ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪಿಎಂ ಕೇರ್ಸ್ ಫಂಡ್ ಟ್ರಸ್ಟ್ 201.58 ಕೋಟಿ ರೂ. ಮೀಸಲಿರಿಸಿದೆ ಎಂದು ಹೇಳಲಾಗಿದೆ. ಈ ಸ್ಥಾವರಗಳನ್ನು ಸ್ಥಾಪಿಸಬೇಕಾದ ಸರ್ಕಾರಿ ಆಸ್ಪತ್ರೆಗಳನ್ನು ಸಂಬಂಧಪಟ್ಟ ರಾಜ್ಯಗಳೊಂದಿಗೆ ಸಮಾಲೋಚಿಸಿ ಗುರುತಿಸಲಾಗಿದೆ ಎಂದು ಕೇಂದ್ರ ಹೇಳಿತ್ತು.

ಸ್ಥಾವರಗಳ ಸ್ಥಾಪನೆಯನ್ನು ಕೇಂದ್ರದ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ಸಿಎಂಎಸ್‌ಎಸ್ ಮಾಡಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಬಿಡ್ ಕರೆದು ಕಂಪನಿಗಳನ್ನು ಗುರುತಿಸಿ ಹಣ ಪೂರೈಕೆ ಮಾಡುವುದು ಅದರ ಜವಾಬ್ದಾರಿ. ದೆಹಲಿ ಸೇರಿದಂತೆ ಇತರ ರಾಜ್ಯಗಳ ಜವಾಬ್ದಾರಿ ಕೇವಲ ಆಸ್ಪತ್ರೆಗಳಲ್ಲಿ ವಿದ್ಯುತ್ ಮತ್ತು ಸಿವಿಲ್ ಸೌಲಭ್ಯಗಳನ್ನು ಒದಗಿಸುವುದಾಗಿದೆ. ಹಾಗಾಗಿ ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಪಿಎಂ ಕೇರ್ಸ್ ಹಣ ಹೋಗುವ ಸಾಧ್ಯತೆಯೇ ಇಲ್ಲ. ಇನ್ನು ಇದೇ ಯೋಜನೆಯಡಿಯಲ್ಲಿ ಉತ್ತರ ಪ್ರದೇಶ ರಾಜ್ಯಕ್ಕೂ 14 ಪ್ಲಾಂಟ್‌ಗಳನ್ನು ನೀಡಲಾಗಿದ್ದು ಅದರಲ್ಲಿ ಕೇವಲ 1 ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಕ್ರೋಲ್ ವರದಿ ಮಾಡಿದೆ.

162 ಆಕ್ಸಿಜನ್ ಪ್ಲಾಂಟ್‌ಗಳ ಟೆಂಡರ್ 20 ಅಕ್ಟೋಬರ್ 2020 ರಂದು ಜೀವ ಪಡೆಯಿತು. ಅಂದರೆ ಕೊರನಾ ಕಾಣಿಸಿಕೊಂಡ ನಂತರ 8 ತಿಂಗಳು ತಡವಾಗಿತ್ತು. ಅದಾಗಿ ಆರು ತಿಂಗಳ ನಂತರ ದಿ ಸ್ಕ್ರೋಲ್ ವರದಿಗಾರರು ಈ ಬಗ್ಗೆ ಅಧ್ಯಯನ ನಡೆಸಿ, ದೇಶದ 60 ಆಸ್ಪತ್ರೆಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿ ಕೇವಲ 13 ಆಕ್ಸಿಜನ್ ಪ್ಲಾಂಟ್‌ಗಳನ್ನು ಹಾಕಲಾಗಿದೆ, ಅದರಲ್ಲಿ ಕೇವಲ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಪ್ರಕಟಿಸಿತು. ಆಗ ಎಚ್ಚೆತ್ತುಕೊಂಡು ಆರೋಗ್ಯ ಸಚಿವಾಲಯ ಸರಣಿ ಟ್ವೀಟ್‌ಗಳನ್ನು ಮಾಡಿ “162 ಪಿಎಸ್ಎ ಆಕ್ಸಿಜನ್ ಸ್ಥಾವರಗಳಲ್ಲಿ 33 ಅನ್ನು ಸ್ಥಾಪಿಸಲಾಗಿದೆ. 2021 ರ ಏಪ್ರಿಲ್ ಅಂತ್ಯದ ವೇಳೆಗೆ 59 ಸ್ಥಾಪಿಸಲಾಗುವುದು ಮತ್ತು 2021 ರ ಮೇ ಅಂತ್ಯದ ವೇಳೆಗೆ 80 ಸ್ಥಾಪಿಸಲಾಗುವುದು” ಎಂದು ತಿಳಿಸಿದೆ. ಅಂದರೆ ವರ್ಷವಾದರೂ ಘೋಷಿಸಿರುವುದರಲ್ಲಿ ಅರ್ಧದಷ್ಟನ್ನು ಸ್ಥಾಪಿಸಿಲ್ಲ ಎಂದು ಅದು ಒಪ್ಪಿಕೊಂಡಿದೆ. ಇನ್ನು ಸ್ಥಾಪಿಸಿರುವುದರಲ್ಲಿ ಎಷ್ಟು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಅದು ಖಚಿತಪಡಿಸಿಲ್ಲ.

ಇನ್ನು ದೆಹಲಿ ಸರ್ಕಾರ ಸೈಟ್ ಸಿದ್ಧತೆ ಮಾಡಿಕೊಂಡಿರಲಿಲ್ಲ ಎನ್ನುವುದು ದಾರಿ ತಪ್ಪಿಸುವ ವಿಷಯವೇ ಆಗಿದೆ. ‘ದೆಹಲಿ ಸರ್ಕಾರಿ ಆರೋಗ್ಯ ಇಲಾಖೆಯಲ್ಲಿ ಲಭ್ಯವಿರುವ ಇತ್ತೀಚಿನ ದಾಖಲೆಗಳ ಪ್ರಕಾರ, ಐದು ಆಸ್ಪತ್ರೆಗಳಿಂದ ಸೈಟ್ ಸಿದ್ಧತೆ ಪ್ರಮಾಣಪತ್ರಗಳನ್ನು ನೀಡಲಾಗಿದೆ’” ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.

ಕೇವಲ 45 ದಿನಗಳಲ್ಲಿ ಸ್ಥಾಪಿಸಬಹುದಾದ ಈ ಆಕ್ಸಿಜನ್ ಪ್ಲಾಂಟ್‌ಗಳನ್ನು ವರ್ಷ ಕಳೆದರೂ ಏಕೆ ಸ್ಥಾಪಿಸಿಲ್ಲ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಉತ್ತರ ನೀಡಿಲ್ಲ. 2020 ರ ಡಿಸೆಂಬರ್ ವೇಳೆಗೆ ಸ್ಥಾವರಗಳನ್ನು ಸ್ಥಾಪಿಸಬೇಕಿತ್ತು ಮತ್ತು “ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಬೇಕು” ಎಂದು ಸರ್ಕಾರ ಟೆಂಡರ್‌ನಲ್ಲಿ ಹೇಳಿತ್ತು.

ಒಬ್ಬ ಗುತ್ತಿಗೆದಾರನಿಗೆ 140 ಪ್ಲಾಂಟ್‌ಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ದೆಹಲಿ ಸರ್ಕಾರ ಕೋರ್ಟಿನಲ್ಲಿ ಹೇಳಿದೆ. ಆತ ಆ ಕೆಲಸವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಲಾಗಿದೆ.

‘ಆಮ್ಲಜನಕ ಘಟಕವನ್ನು ಕೇಂದ್ರದ ಅಧೀನದಲ್ಲಿರುವ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸಹ ಕಾರ್ಯಗತಗೊಳಿಸಲಾಗಿಲ್ಲ ಎಂಬ ಅಂಶವು ಕೇಂದ್ರವು ತನ್ನದೇ ಆದ ಸುಳ್ಳಿನ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ತೋರಿಸುತ್ತದೆ” ಎಂದು ದೆಹಲಿ ಸರ್ಕಾರ ಹೇಳಿದೆ.

ಸಾರಾಂಶ

ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಲ್ಲಿ 162 ಆಮ್ಲಜನಕ ಸ್ಥಾವರ ಸ್ಥಾಪನೆ ಕುರಿತು ಮಾರ್ಚ್‌ನಲ್ಲಿ ಘೋಷಿಸಿತ್ತು. ನಂತರ ಅಕ್ಟೋಬರ್ 2020ರಲ್ಲಿ ಟೆಂಡರ್ ಕರೆದಿತ್ತು. ಇದಕ್ಕಾಗಿ ಮೀಸಲಿಟ್ಟ ಹಣವನ್ನು ಅದು ಯಾವುದೇ ರಾಜ್ಯ ಸರ್ಕಾರಕ್ಕೂ ಹಂಚಿಲ್ಲ. ಇದನ್ನು ಕೇಂದ್ರ ಆರೋಗ್ಯ ಸಚಿವಾಲಯ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಡವಿಯೆಟ್‌ನಲ್ಲಿ ಒಪ್ಪಿಕೊಂಡಿದೆ.

ಇದರಿಂದ ಕಂಗನಾ, ಬಿ.ಎಲ್ ಸಂತೋಷ್ ಮತ್ತು ಸಾವಿರಾರು ಮೋದಿ ಅನುಯಾಯಿಗಳು ಈ ಬಿಕ್ಕಟ್ಟಿನ ಸಂದರ್ಭದಲ್ಲೂ ದಾರಿ ತಪ್ಪಿಸುವ ಮಾಹಿತಿ ನೀಡಿ ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗಿದೆ.

(ಆಧಾರ: ದಿ ಸ್ಕ್ರೋಲ್, ದಿ ಕ್ವಿಂಟ್ ಮತ್ತು ಇತರ ಫ್ಯಾಕ್ಟ್‌ಚೆಕ್ ಪೋರ್ಟಲ್‌ಗಳು)


ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಮದ್ರಾಸ್​ ಹೈಕೋರ್ಟ್

LEAVE A REPLY

Please enter your comment!
Please enter your name here