Homeನ್ಯಾಯ ಪಥರೆಮ್‌ಡೆಸಿವಿರ್ ರಣಹದ್ದುಗಳು; ಈ ಔಷಧಿ ಕೊರತೆಯ ಹಿಂದಿರಬಹುದಾದ ವ್ಯವಹಾರ!

ರೆಮ್‌ಡೆಸಿವಿರ್ ರಣಹದ್ದುಗಳು; ಈ ಔಷಧಿ ಕೊರತೆಯ ಹಿಂದಿರಬಹುದಾದ ವ್ಯವಹಾರ!

- Advertisement -
- Advertisement -

ಕೊರೊನಾ ಚಿಕಿತ್ಸೆಯಲ್ಲಿ ರೆಮ್‌ಡೆಸಿವಿರ್ “ಜೀವರಕ್ಷಕ” ಔಷಧಿಯೇನಲ್ಲ. ಹೆಚ್ಚೆಂದರೆ ಮಧ್ಯಮ ತೀವ್ರತೆಯ ರೋಗ ಇರುವವರಲ್ಲಿ ಅದು ಉಪಕಾರ ಮಾಡೀತು ಎಂದು ವೈದ್ಯಕೀಯ ಪರಿಣತರು ಮತ್ತೆ ಮತ್ತೆ ಹೇಳುತ್ತಿದ್ದರೂ, ಆ ಔಷಧಿಯ ಪ್ರಚಾರ-ಪ್ರಸಾರ ಭರಾಟೆ ಹಾಗೂ ಅದಕ್ಕೆ ಪ್ರಭುತ್ವದ ಹಿನ್ನೆಲೆ ಸಂಗೀತಗಳನ್ನು ಗಮನಿಸಿದಾಗ ಇದೆಲ್ಲ ಒಂದು ಉದ್ದೇಶಪೂರ್ವಕ ’ಸ್ಕ್ರಿಪ್ಟೆಡ್ ನಾಟಕದ ಒಂದು ಭಾಗ ಅನ್ನಿಸುವುದು ಸುಳ್ಳಲ್ಲ.

ರಾಜ್ಯದಲ್ಲಿ ರೆಮ್‌ಡೆಸಿವಿರ್ ಸರಬರಾಜಿನ ಹೊಣೆ ಹೊತ್ತಿರುವುದು ರಾಜ್ಯಸರ್ಕಾರದ ಅಧೀನದಲ್ಲೇ ಇರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST). ರಾಜ್ಯದಲ್ಲಿ ಕೊರೊನಾ ರೋಗಿಗಳ ಸಂಖ್ಯೆಯು ಎರಡನೇ ಅಲೆಗೆ ಹೆಚ್ಚ್ಚಾಗುತ್ತಾ ಹೋದಂತೆ, ರೆಮ್‌ಡೆಸಿವಿರ್ ಬೇಡಿಕೆ ಹೆಚ್ಚಾಗುತ್ತಾ ಹೋಗಿದೆ. ಈ ಏರುತ್ತಿರುವ ಬೇಡಿಕೆಯನ್ನು ನಿಭಾಯಿಸಲು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 21 ಏಪ್ರಿಲ್‌ನಿಂದ 30 ಏಪ್ರಿಲ್ ನಡುವೆ ಬಳಕೆಗಾಗಿ 1,22,000 ವಿಯಾಲ್ ರೆಮ್‌ಡೆಸಿವಿರ್ ಔಷಧಿ ಮಂಜೂರಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವರು ಏಪ್ರಿಲ್ 24ರಂದು ಟ್ವೀಟ್ ಮಾಡಿದ್ದರು. ಇದಲ್ಲದೆ ಏಪ್ರಿಲ್21ರಂದು, ರೆಮ್‌ಡೆಸಿವಿರ್ ಮತ್ತು ಆಕ್ಸಿಜನ್ ಬೇಡಿಕೆ/ಲಭ್ಯತೆಯನ್ನು ನಿರ್ವಹಿಸಲು ವಾರ್ ರೂಂ ರಚಿಸಿ 24/7ಕೆಲಸ ಮಾಡಲು ರಾಜ್ಯ ಸರ್ಕಾರ ಆದೇಶ ನೀಡಿತ್ತು. ಏಪ್ರಿಲ್ 17ರಂದು ರಾಜ್ಯದೆಲ್ಲೆಡೆ ನೋಡಲ್ ಅಧಿಕಾರಿಗಳನ್ನು ನೇಮಿಸಿ, ರೆಮ್‌ಡೆಸಿವಿರ್ ವಿತರಣೆಯ ಮೇಲೆ ನಿಗಾ ಇರಿಸಲು ಆದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸದ್ಯದ ಸ್ಥಿತಿಯಲ್ಲಿ ರಾಜ್ಯಕ್ಕೆ ರೆಮ್‌ಡೆಸಿವಿರ್ ಕೊರತೆ ಕಾಣಿಸಿಕೊಳ್ಳಬಾರದಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಎಲ್ಲೆಡೆ ಕಾಳಸಂತೆಯಲ್ಲಿ ಈ ಔಷಧಿ ಮಾರಾಟ ಆಗುತ್ತಿರುವುದು ಕಂಡುಬರುತ್ತಿದೆ.

ನೇರವಾಗಿ ಕೇಳಿದರೆ ಸಿಗದ, ಆದರೆ ಕಾಳಸಂತೆಯಲ್ಲಿ 15,000-25000 ರೂಗಳ ಮೊತ್ತದಲ್ಲಿ ಸಿಗುವ ರೆಮ್‌ಡೆಸಿವಿರ್ ಮಾರುಕಟ್ಟೆಯನ್ನು ಗಮನಿಸಿದಾಗ, ಸದ್ಯಕ್ಕೆ ಎರಡು ರೀತಿಯಲ್ಲಿ ಅವು ಕಾಳಸಂತೆಯಲ್ಲಿ ಲಭ್ಯವಿರುವುದು ಕಾಣಿಸುತ್ತದೆ. ಈ ಔಷಧಿಯ ಮೇಲೆ ಸರ್ಕಾರದ ಹದ್ದಿನ ಕಣ್ಣು ಇದ್ದರೂ ಕಾಳಸಂತೆಯಲ್ಲಿ ಹೇಗೆ ಲಭ್ಯವಾಗುತ್ತಿದೆ ಎಂಬುದನ್ನು ಪರಿಶೀಲಿಸಿದಾಗ ಕಂಡುಬಂದದ್ದು ಇಷ್ಟು:

ವೈದ್ಯ ರಣಹದ್ದುಗಳು

ಸರ್ಕಾರ ರೆಮ್‌ಡೆಸಿವಿರ್ ಮಾರುಕಟ್ಟೆಯ ಮೇಲೆ ನಿಯಂತ್ರಣ ಇರಿಸುವುದಕ್ಕಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅವೇನೆಂದರೆ, ಖಾಸಗಿ-ಸರ್ಕಾರಿ ಆಸ್ಪತ್ರೆ ವ್ಯವಸ್ಥೆಯಲ್ಲಿ, ಒಬ್ಬರು ಕೊರೊನಾ ರೋಗಿಗೆ ರೆಮ್‌ಡೆಸಿವಿರ್ ಔಷಧಿ ಅಗತ್ಯ ಇದೆ ಎಂಬುದನ್ನು ತಜ್ಞ ವೈದ್ಯರು ಅಥವಾ ಅರಿವಳಿಕೆ ತಜ್ಞರು ಲಿಖಿತವಾಗಿ ಪ್ರಮಾಣೀಕರಿಸಬೇಕು. ಇದಲ್ಲದೇ, ಪ್ರತಿಯೊಂದು ರೆಮ್‌ಡೆಸಿವಿರ್ ಚುಚ್ಚುಮದ್ದು ನೀಡಿದ ಬಳಿಕ ಅದರ ಸ್ಟಿಕರ್‌ಅನ್ನು ರೋಗಿಯ ಕೇಸ್ ಶೀಟಿನ ಮೇಲೆ ಹಚ್ಚಬೇಕು. ಆಗ, ರೆಮ್‌ಡೆಸಿವಿರ್ ದುರ್ಬಳಕೆ ಆಗುವುದಿಲ್ಲ ಎಂಬುದು ಸರ್ಕಾರದ ತರ್ಕ. ಇಷ್ಟೆಲ್ಲ ಬಿಗಿ ಬಂದೋಬಸ್ತ್ ಇದ್ದರೂ ರೆಮ್‌ಡೆಸಿವಿರ್ ಕಾಳಸಂತೆ ಮಾರುಕಟ್ಟೆಯನ್ನು ತಲುಪುವುದು ಹೇಗೆ?

ಇದು ಬಹಳ ಸರಳವಾದ ಸರ್ಕಾರಿ ಪೆದ್ದುತನದ ಮತ್ತು ವೈದ್ಯಕೀಯ ಜಗತ್ತಿನಲ್ಲಿರುವ ಕೆಲವು ಕರಿಕುರಿಗಳ ಅನಾವರಣವಾಗಿದೆ. ಬೆಣ್ಣೆಯಿಂದ ಕೂದಲನ್ನು ಎತ್ತಿ ಎಸೆಯುವ ನಾಜೂಕುತನದಲ್ಲೇ ಖಾಸಗಿ ಮತ್ತು ಕೆಲವೆಡೆ ಸರ್ಕಾರಿ ವೈದ್ಯರು ಇದನ್ನು ನಿರ್ವಹಿಸುತ್ತಿದ್ದಾರೆ. ಅದನ್ನು ಹಂತ ಹಂತವಾಗಿ ಹೀಗೆ ವಿವರಿಸಬಹುದು:
* ಒಬ್ಬ ಕೊರೊನಾ ರೋಗಿಗೆ ಹೆಚ್ಚೇನೂ ರೋಗಲಕ್ಷಣಗಳಿಲ್ಲದಿರುವಾಗಲೂ, ಆತ/ಆಕೆಗೆ ರೆಮ್‌ಡೆಸಿವಿರ್ ಖಂಡಿತಕ್ಕೂ ಅಗತ್ಯವಿಲ್ಲ ಎಂದು ಗೊತ್ತಿರುವಾಗಲೂ “ರೆಮ್‌ಡೆಸಿವಿರ್ ಚಿಕಿತ್ಸೆ ಅಗತ್ಯವಿದೆ ಎಂದು ಆ ರೋಗಿಯ ಕೇಸ್ ಶೀಟಿನಲ್ಲಿ ದಾಖಲಿಸಲಾಗುತ್ತದೆ.
* ಆ ರೋಗಿಗೆ ರೆಮ್‌ಡೆಸಿವಿರ್ ಚುಚ್ಚದಿದ್ದರೂ, ಪ್ರತಿಯೊಂದು ಚುಚ್ಚುಮದ್ದನ್ನು ಕೇಸ್ ಶೀಟಿನಲ್ಲಿ ದಾಖಲಿಸಿ, ಅದರ ಸ್ಟಿಕರ್‌ಅನ್ನು ಕೇಸ್ ಶೀಟಿಗೆ ಅಂಟಿಸಲಾಗುತ್ತದೆ.
* ಅಲ್ಲಿಂದ ಬಳಕೆಯಾಗದ ರೆಮ್‌ಡೆಸಿವಿರ್ ಚುಚ್ಚುಮದ್ದು ಬಾಟಲಿಗಳು ಆಸ್ಪತ್ರೆಯ ಆಯಕಟ್ಟಿನ ಜಾಗದ ಸಿಬ್ಬಂದಿಗಳ ಮೂಲಕ ಕಾಳಸಂತೆಕೋರರನ್ನು ತಲುಪುತ್ತದೆ.
* ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಯಾವುದಾದರೂ ರೋಗಿಗೆ ನಿಜಕ್ಕೂ ರೆಮ್‌ಡೆಸಿವಿರ್ ಚುಚ್ಚುಮದ್ದು ಬೇಕಾದಾಗ, ಚಿಕಿತ್ಸೆ ನಡೆಸುವ ವೈದ್ಯರು ಅಥವಾ ನಿಗಾ ಇರಿಸುವ ನೋಡಲ್ ಅಧಿಕಾರಿ, ಕಂಗಾಲಾಗಿ ಔಷಧಿಗೆ ಹುಡುಕಾಡುತ್ತಿರುವ ರೋಗಿಯ ಸಂಬಂಧಿಕರಿಗೆ ಮಹದುಪಕಾರ ಮಾಡುತ್ತಿರುವ ಪೋಸ್ ನೀಡಿ, ಈ ಕಾಳಸಂತೆಕೋರರ ಸಂಪರ್ಕ ನಂಬರ್‌ಗಳನ್ನು ಒದಗಿಸುತ್ತಾರೆ.
* ಕಾಳಸಂತೆಕೋರರು ತಾವು ಹೇಳಿದ ದರ ಸಿಕ್ಕಿದರೆ, ಈ ರೆಮ್‌ಡೆಸಿವಿರ್ ಚುಚ್ಚುಮದ್ದುಗಳನ್ನು ರೋಗಿಯ ಸಂಬಂಧಿಕರಿಗೆ ಒದಗಿಸುತ್ತಾರೆ. ತಮ್ಮ ಪ್ರೀತಿಪಾತ್ರರ ಬದುಕಿನ ಮುಂದೆ ಅವರಿಗೆ ಆ ಕ್ಷಣಕ್ಕೆ ಉಳಿದೆಲ್ಲ ಗೌಣವಾಗಿರುತ್ತದೆ.

ಎಲ್ಲ ಪರ್ಸೆಂಟೇಜ್ ವ್ಯವಹಾರ!
ಈ ಕಾಳಸಂತೆ ಆಟದಲ್ಲಿ ಆಸ್ಪತ್ರೆಯ ವೈದ್ಯರು ಮಾತ್ರವಲ್ಲದೇ ಇಲಾಖೆ, ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳಿಗೂ ಪಾಲಿರುತ್ತದೆ ಎಂದು ಹೇಳಲಾಗಿದೆ. ಇಷ್ಟು ಮಾತ್ರವಲ್ಲದೇ ಆಂಬ್ಯುಲೆನ್ಸ್ ಸೇವೆಗಳಲ್ಲಿ, ಬೇರೆ ದೂರದ ಸುಸಜ್ಜಿತ ಆಸ್ಪತ್ರೆಗಳಿಗೆ ರೆಫರಲ್‌ಗಳಲ್ಲೂ ಕಿಕ್ ಬ್ಯಾಕ್ ವ್ಯವಹಾರ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಸ್ಥಿತಿಯಲ್ಲೂ ಸರ್ಕಾರ ಇವನ್ನೆಲ್ಲ ಎಚ್ಚರದಿಂದ ಗಮನಿಸಿ ಕ್ರಮ ಕೈಗೊಳ್ಳದಿದ್ದರೆ, ಸ್ವತಃ ಸರ್ಕಾರದ ಮಟ್ಟದಲ್ಲೇ ಈ ಗೋಲ್‌ಮಾಲ್ ನಡೆಯುತ್ತಿದೆ ಎಂದೇ ಸಾರ್ವಜನಿಕರು ಊಹಿಸಿಕೊಳ್ಳಬೇಕಾಗುತ್ತದೆ.

– ವಿಶೇಷ ವರದಿಗಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...