ಹಿಂದಿ ಭಾಷೆಯ ಚರ್ಚೆಯ ನಡುವೆಯೇ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಅವರು ಹಿಂದಿಯನ್ನು ಇಷ್ಟಪಡದವರು ವಿದೇಶಿಗರಾಗಿದ್ದು, ಹಿಂದಿ ಬಾರದವರು ಭಾರತವನ್ನು ಬಿಟ್ಟು ಬೇರೆಡೆಗೆ ಹೋಗಲಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕನ್ನಡ ನಟ ಕಿಚ್ಚ ಸುದೀಪ್ ನಡುವಿನ ಟ್ವಿಟರ್ ಸಮರದ ನಂತರ ಮತ್ತೆ ಮುನ್ನೆಲೆಗೆ ಬಂದಿರುವ ಭಾಷಾ ಚರ್ಚೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಪ್ರದೇಶದ ಮೀನುಗಾರಿಕಾ ಸಚಿವರಾಗಿರುವ ಸಂಜಯ್ ನಿಶಾದ್, “ಭಾರತದಲ್ಲಿ ವಾಸಿಸಲು ಬಯಸುವವರು ಹಿಂದಿಯನ್ನು ಪ್ರೀತಿಸಬೇಕು. ನೀವು ಹಿಂದಿಯನ್ನು ಪ್ರೀತಿಸದಿದ್ದರೆ, ನೀವು ವಿದೇಶಿ ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನಾವು ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತೇವೆ. ಆದರೆ ಇದು ಒಂದು ದೇಶ ಮತ್ತು ಈ ದೇಶವನ್ನು ಸಂವಿಧಾನವು, ಭಾರತ ಎಂದರೆ ‘ಹಿಂದೂಸ್ತಾನ್’ ಎಂದು ಹೇಳುತ್ತದೆ. ಅಂದರೆ ಹಿಂದಿ ಮಾತನಾಡುವವರ ಸ್ಥಳವಾಗಿದೆ ಎಂದು. ಹಿಂದುಸ್ತಾನವು ಹಿಂದಿ ಮಾತನಾಡದೇ ಇರುವವರಿಗೆ ಇರುವ ಸ್ಥಳವಲ್ಲ. ಅವರು ಈ ದೇಶವನ್ನು ಬಿಟ್ಟು ಬೇರೆಡೆ ಹೋಗಲಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: BJP ನಾಯಕರು ಕನ್ನಡ ಧಿಕ್ಕರಿಸಿ ಹಿಂದಿಯನ್ನು ಮೆರೆಸುತ್ತಿರುವುದು ‘ಸಾಂಸ್ಕೃತಿಕ ಭಯೋತ್ಪಾದನೆ’: ಸಿದ್ದರಾಮಯ್ಯ ಆಕ್ರೋಶ
ಸಂವಿಧಾನದ 343 ನೇ ವಿಧಿ ಮತ್ತು ನಂತರದ ತಿದ್ದುಪಡಿಯ ಪ್ರಕಾರ, ಹಿಂದಿಯನ್ನು ಇಂಗ್ಲಿಷ್ ಜೊತೆಗೆ ಅಧಿಕೃತ ಭಾಷೆಯಾಗಿ ಗುರುತಿಸಲಾಗಿದೆ. ಭಾರತಕ್ಕೆ ಯಾವುದೆ ರಾಷ್ಟ್ರೀಯ ಭಾಷೆ ಇಲ್ಲ. ಅಧಿಕೃತ ಭಾಷೆ ಎಂದರೆ ಸರ್ಕಾರ ಬಳಸುವ ಭಾಷೆ. ರಾಜ್ಯಗಳು ತಮ್ಮ ಅಧಿಕೃತ ಭಾಷೆಯಾಗಿ ಭಾಷೆಯನ್ನು ಗೊತ್ತುಪಡಿಸಬಹುದು. ಅದರಂತೆ ತಮಿಳುನಾಡಿನ ಅಧಿಕೃತ ಭಾಷೆ ತಮಿಳು, ಮತ್ತು ಪಶ್ಚಿಮ ಬಂಗಾಳದ ಅಧಿಕೃತ ಭಾಷೆ ಬಂಗಾಳಿ.
ನಟ ಸುದೀಪ್ ಅವರು ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಹಿಂದಿ ಚಿತ್ರ ನಟ ಅಜಯ್ ದೇವಗನ್ ಅವರು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿ, ‘ಹಿಂದಿ ರಾಷ್ಟ್ರ ಭಾಷೆ’ ಎಂದು ಪ್ರತಿಪಾದಿಸಿದ್ದರು. ಇದನ್ನು ವಿರೋಧಿಸಿ ಸುದೀಪ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಸುದೀಪ್ ಅವರ ಹೇಳಿಕೆಯನ್ನು ಬೆಂಬಲಿಸಿ ನಟಿ ರಮ್ಯ ದಿವ್ಯ ಸ್ಪಂದನ, ಶ್ರೀನಗರ ಕಿಟ್ಟಿ, ಚೇತನ್ ಅಹಿಂಸಾ ಮತ್ತು ನಿನಾಸಂ ಸತೀಶ್ ಸೇರಿದಂತೆ ಹಲವಾರು ಕನ್ನಡದ ನಟ-ನಟಿಯರು ಅಜಯ್ ದೇವಗನ್ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲದೆ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಕೂಡಾ ಸುದೀಪ್ ಅವರನ್ನು ಸಮರ್ಥಿಸಿ ಅಜಯ್ ದೇವಗನ್ ಅವರ ವಿರುದ್ದ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಹಿಂದಿ ರಾಷ್ಟ್ರೀಯ ಭಾಷೆ ಎಂದ ಅಜಯ್ ದೇವಗನ್‌ಗೆ ಕನ್ನಡ ಕಲಾವಿದರ ಖಡಕ್ ಪ್ರತಿಕ್ರಿಯೆ
ಈ ತಿಂಗಳ ಆರಂಭದಲ್ಲಿ, ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ವಿವಿಧ ರಾಜ್ಯಗಳ ಜನರು ಪರಸ್ಪರ ಹಿಂದಿಯಲ್ಲಿ ಮಾತನಾಡಬೇಕು. ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಸ್ವೀಕರಿಸಬೇಕು ಎಂದು ಸೂಚಿಸುವ ಮೂಲ ಚರ್ಚೆಯನ್ನು ಹುಟ್ಟುಹಾಕಿದ್ದರು.


