ಕೇಂದ್ರ ಸರ್ಕಾರದ ವಿವಾದಾತ್ಮಕ ಸಿಎಎ ವಿರೋಧಿ ಹೋರಾಟದ ಕೇಂದ್ರತಾಣವಾಗಿದ್ದ ಶಾಹೀನ್‌ಬಾಗ್‌ನಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಬಿಜೆಪಿ ಆಡಳಿತದ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ಮುಂದಾಗಿದೆ. ಇಂದು ಬೆಳಿಗ್ಗೆ ಬುಲ್ಡೋಜರ್‌ಗಳನ್ನು ನುಗ್ಗಿಸಲಾಗಿದ್ದು ಅದನ್ನು ವಿರೋಧಿಸಿ ಪ್ರತಿಭಟನಾಕಾರರು ಜೆಸಿಬಿಗಳ ಎದುರು ಮಲಗಿ ಪ್ರತಿಭಟಿಸಿದ್ದಾರೆ.
ಕಳೆದ ತಿಂಗಳು ದೆಹಲಿಯ ಜಹಾಂಗೀರ್ ಪುರಿಯಲ್ಲಿಯೂ ಇದೇ ರೀತಿ ಬಿಜೆಪಿ ಆಡಳಿತದ ಎಂಸಿಡಿ ಬುಲ್ಡೋಜರ್‌ಗಳನ್ನು ನುಗ್ಗಿಸಿತ್ತು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ತೆರವು ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಮುಸ್ಲಿಮರು ಹೆಚ್ಚಾಗಿ ವಾಸಿಸುವ ಶಾಹೀನ್ ಬಾಗ್ ಅನ್ನು ಗುರಿ ಮಾಡಿ ಬುಲ್ಡೋಜರ್‌ಗಳನ್ನು ನುಗ್ಗಿಸಲಾಗುತ್ತಿದೆ.
A local sat in front the bulldozer and shouted the slogan, “Modi Sarkar Murdabad.” #ShaheenBagh
Video @MohdAbuzarCh pic.twitter.com/1MWhXLUP4Z— Alishan Jafri (@alishan_jafri) May 9, 2022
ಕಳೆದ ಶುಕ್ರವಾರವೇ ಬುಲ್ಡೋಜರ್ ನುಗ್ಗಿಸಿ ನಿರ್ನಾಮ ಮಾಡಲು ಬಿಜೆಪಿ ಯೋಜಿಸಿತ್ತು. ಅದರೆ ಪೊಲೀಸ್ ಬಲ ಸಾಲದೇ ಇದ್ದುದರಿಂದ ಅದನ್ನು ಮಾಡಿರಲಿಲ್ಲ. ಇಂದು ತಮ್ಮದೇ ಕೈಯಲ್ಲಿರುವ ದೆಹಲಿ ಪೊಲೀಸರನ್ನು ಬಳಸಿ ಬುಲ್ಡೋಜರ್ ನುಗ್ಗಿಸಲಾಗುತ್ತಿದೆ.
ಇದನ್ನೂ ಓದಿ: ಬುಲ್ಡೋಜರ್ ರಾಜಕಾರಣ: ’ಜಹಾಂಗೀರ್ ಪುರಿ’ಯಿಂದ ದೇಶದ ವಿನಾಶಕ್ಕೆ ಮುಂದಾದ ಬಿಜೆಪಿ-ಸಂಘ ಪರಿವಾರ
ತೆರವು ಕಾರ್ಯಾಚರಣೆ ವಿರೋಧಿಸಿ ಸ್ಥಳೀಯ ವ್ಯಾಪಾರಿಗಳು, ಕಾಂಗ್ರೆಸ್ ಮತ್ತು ಆಪ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಒಕ್ಲಾ ಕ್ಷೇತ್ರದ ಆಪ್ ಶಾಸಕ ಅಮಾನತುಲ್ಲಾಖಾನ್ ಪ್ರತಿಭಟನೆಗೆ ಕೈಜೋಡಿಸಿದ್ದಾರೆ. ಇಲ್ಲಿ ಯಾವುದೇ ಅಕ್ರಮ ಕಟ್ಟಡಗಳಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ ನಂತರ ಪೊಲೀಸರು ಮತ್ತು ವರ್ತಕರ ನಡುವೆ ಮಾತುಕತೆ ಆರಂಭವಾಗಿದ್ದು, ಸದ್ಯಕ್ಕೆ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಆದರೂ ದಕ್ಷಿಣ ದೆಹಲಿಯ ಮೇಯರ್ ಮುಖೇಶ್ ಸೂರ್ಯನ್, ನಮ್ಮ ಈ ತೆರವು ಕಾರ್ಯಾಚರಣೆಗೆ ದೆಹಲಿ ಜನರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.
ಕಳೆದ ತಿಂಗಳು ದೆಹಲಿಯ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಎಂಸಿಡಿಗೆ ಪತ್ರ ಬರೆದು ಶಾಹೀನ್ ಬಾಗ್‌ನಲ್ಲಿ ತೆರವು ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದ್ದರು. ಇಲ್ಲಿ ಅಕ್ರಮ ಬಾಂಗ್ಲಾ ನುಸುಳುಕೋರರು, ರೋಹಿಂಗ್ಯಾ ಮುಸ್ಲಿಮರು ಮತ್ತು ಸಮಾಜವಿರೋಧಿ ಶಕ್ತಿಗಳು ನೆಲಿಸಿದ್ದಾರೆ ಎಂದು ದೂರಿದ್ದರು. ಅದರ ಆಧಾರದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ದಕ್ಷಿಣ ದೆಹಲಿಯ ಕಾರ್ಪೊರೇಷನ್ 10 ದಿನಗಳ ತೆರವು ಕಾರ್ಯಾಚರಣೆಯ ಯೋಜನೆ ಸಿದ್ದಪಡಿಸಿಕೊಂಡಿದೆ. ಮೇ 13ರವರೆಗೂ ಅದು ನಡೆಯಲಿದೆ ಎಂದು ಮೇಯರ್ ತಿಳಿಸಿದ್ದಾರೆ. ಇದು ಬಿಜೆಪಿಯ ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಜಹಾಂಗೀರ್‌ಪುರಿಯಲ್ಲಿ ಎಂಸಿಡಿ ತೆರವು ಕಾರ್ಯಾಚರಣೆ ನಡೆಸಿದಾಗ ಸುಪ್ರೀಂ ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿತ್ತು. ಅದನ್ನು ಧಿಕ್ಕರಿಸಿ ಕಾರ್ಯಾಚರನೆ ಮುಂದುವರೆಸಿದಾಗ ಚೀಮಾರಿ ಹಾಕಿತ್ತು. ಇಂದು ಆ ವಿಷಯದ ಕುರಿತು ವಿಚಾರಣೆ ನಡೆಯುತ್ತಿರುವಾಗಲೇ ಶಾಹೀನ್‌ಬಾನ್‌ನಲ್ಲಿ ತೆರವು ಕಾರ್ಯಾಚರಣೆ ಆರಂಭವಾಗಿದೆ.


