ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರಿಗೆ ಕೊಡಗಿನ ಪೊನ್ನಂಪೇಟೆಯಲ್ಲಿ ತ್ರಿಶೂಲ ದೀಕ್ಷೆ ಹಾಗೂ ಏರ್‌ಗನ್ ತರಬೇತಿ ನೀಡಿರುವ ಕುರಿತು ವರದಿಯಾಗಿದ್ದು, ಈ ಅಸಂವಿಧಾನಿಕ ನಡೆಗೆ ಆಕ್ರೋಶ ವ್ಯಕ್ತಪವಾಗಿದೆ.
ಕೊಡಗಿನ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ನಡೆದ ‘ಶೌರ್ಯ ಪ್ರಶಿಕ್ಷಣ ವರ್ಗ’ದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ, ತ್ರಿಶೂಲ ದೀಕ್ಷೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆ ಎತ್ತಿರುವ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆಯವರು, “ಶಾಲೆಯ ವಿರುದ್ಧ ಕ್ರಮ ಜರುಗಿಸಿ” ಎಂದು ಶಿಕ್ಷಣ ಸಂಸ್ಥೆಯನ್ನು ಆಗ್ರಹಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ, ಶಾಲೆಗಳಲ್ಲಿ ಹಿಜಾಬ್ ನಿರ್ಬಂಧ ವಿಧಿಸಿರುವ ನಿಮ್ಮ ಸರ್ಕಾರ, ಬಜರಂಗದಳಕ್ಕೆ ಒಂದು ವಾರ ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರ ನಡೆಸಲು ಅನುಮತಿ ಕೊಟ್ಟ ಪೊನ್ನಂಪೇಟೆಯ ಸಾಯಿ ಶಂಕರ ಶಿಕ್ಷಣ ಸಂಸ್ಥೆಯ ವಿರುದ್ಧ ಯಾವ ಕ್ರಮ ಕೈಗೊಂಡಿದೆ” ಎಂದು ಅಫ್ಸರ್ ಪ್ರಶ್ನಿಸಿದ್ದಾರೆ.
ಮಾನ್ಯ @BCNagesh_bjp ರವರೇ ಶಾಲೆಗಳಲ್ಲಿ ಹಿಜಾಬ್ ಗೆ ನಿರ್ಭಂದ ವಿಧಿಸಿರುವ ನಿಮ್ಮ ಸರ್ಕಾರ, @bajarang_dal ಕ್ಕೆ ಒಂದು ವಾರದ ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರ ನಡೆಸಲು ಅನುಮತಿ ಕೊಟ್ಟ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಸಾಯಿ ಶಂಕರ್ ಶಿಕ್ಷಣ ಸಂಸ್ಥೆಯ ವಿರುದ್ಧ ಯಾವ ಕ್ರಮ ಕೈಗೊಂಡಿದೆ?@KodaguSp
@DgpKarnataka@PrasthuthaNews pic.twitter.com/0J2uFhfAQ5— afsarkodlipet (@afsarkodlipet) May 15, 2022
ಸುಮಾರು ಹತ್ತು ದಿನಗಳ ಕಾಲ ನಡೆದ ತರಬೇತಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರೂ ಪಾಲ್ಗೊಂಡಿದ್ದರೆಂದು ಮೂಲಗಳು ತಿಳಿಸಿರುವುದಾಗಿ ‘ಪ್ರಜಾವಾಣಿ’ ವರದಿ ಮಾಡಿದೆ.
ಶಾಲಾ ಆವರಣದಲ್ಲಿ ಬಂದೂಕು ಹಿಡಿದು ತರಬೇತಿ ಪಡೆಯುತ್ತಿರುವುದು, ಸಂಸ್ಥೆಯ ಸಭಾಂಗಣ ಮತ್ತು ಆವರಣದಲ್ಲಿ ತ್ರಿಶೂಲ ಹಿಡಿದು ದೀಕ್ಷೆ ಪಡೆಯುತ್ತಿರುವುದು, ತ್ರಿಶೂಲಕ್ಕೆ ಪೂಜೆ ಸಲ್ಲಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಟೀಕೆಗಳು ವ್ಯಕ್ತವಾಗಿವೆ.
ವಿವಿಧ ಜಿಲ್ಲೆಯಿಂದ ಆಗಮಿಸಿದ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನ 119 ಶಿಕ್ಷಣಾರ್ಥಿಗಳು ಸೇರಿ 140 ಮಂದಿ ತರಬೇತಿಯಲ್ಲಿ ಹಾಜರಿದ್ದರೆಂದು ವರದಿಯಾಗಿದೆ.
ಇದನ್ನೂ ಓದಿರಿ: ಜಹಾಂಗೀರ್‌ಪುರಿ ಹಿಂಸಾಚಾರದಲ್ಲಿ ಬಿಜೆಪಿ ಬೆಂಬಲಿತ ಸಂಘಟನೆ ವಿಎಚ್‌ಪಿ, ಬಜರಂಗದಳ ಭಾಗಿ ಎಂದ ದೆಹಲಿ ಪೊಲೀಸರು; ಕೆಲವೇ ಗಂಟೆಗಳಲ್ಲಿ ಹೇಳಿಕೆ…
ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಜರು ಗಣಪತಿ ಮಾತನಾಡಿದ್ದು, “ಬಂದೂಕು ತರಬೇತಿ ನೀಡಿರುವ ಕುರಿತು ಮಾಹಿತಿ ಇಲ್ಲ. ಆಯೋಜಕರೇ ಊಟ, ಮತ್ತಿತರ ವ್ಯವಸ್ಥೆ ಮಾಡಿಕೊಂಡಿದ್ದರು. ಇದಕ್ಕೂ ವಿದ್ಯಾಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ರಜೆಯಿದ್ದ ಕಾರಣ ಶಿಕ್ಷಕರೂ ಇರಲಿಲ್ಲ. ಈ ಹಿಂದೆ ರಾಷ್ಟ್ರಮಟ್ಟದ ತರಬೇತಿಯೂ ನಡೆದಿತ್ತು. ಹೊರ ರಾಜ್ಯದಿಂದ ಶಿಕ್ಷಣಾರ್ಥಿಗಳುಬಂದಿದ್ದರು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
“ಯೋಗ ಕಲಿಸಿ, ಆತ್ಮಸ್ಥೈರ್ಯ ತುಂಬಿದ್ದೇವೆ” ಎಂದು ವಿಶ್ವ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಪಿ.ಕೃಷ್ಣಮೂರ್ತಿ ಹೇಳಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋಗಳು ಬೇರೆಯೇ ಕಥೆಯನ್ನು ಹೇಳುತ್ತಿವೆ. ಈ ಶಸ್ತ್ರಾಸ್ತ್ರ ತರಬೇತಿಯಲ್ಲಿ ಎಷ್ಟು ಮಂದಿ ರಾಜಕಾರಣಿಗಳ ಮಕ್ಕಳು, ಸಂಘ ಪರಿವಾರದ ನಾಯಕರ ಮಕ್ಕಳು ಭಾಗವಹಿಸಿದ್ದರೆಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಹೆಚ್ಚಿನ ವಿವರ ಸಂಗ್ರಹಿಸಲು ‘ನಾನುಗೌರಿ.ಕಾಂ’ ಪ್ರಯತ್ನಿಸುತ್ತಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರನ್ನು ಸಂಪರ್ಕಿಸಲು ‘ನಾನುಗೌರಿ.ಕಾಂ’ ಪ್ರಯತ್ನಿಸಿದೆ. ಆದರೆ ಅವರು ಕರೆ ಸ್ವೀಕರಿಸಿಲ್ಲ. ಘಟನೆಯ ಕುರಿತು ಎದ್ದಿರುವ ಹಲವು ಪ್ರಶ್ನೆಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ ನೀಡಿದ ತಕ್ಷಣ ಅಪ್‌ಡೇಟ್ ಮಾಡಲಾಗುವುದು.


