ಏಪ್ರಿಲ್ 29 ರಂದು ತಿರುವನಂತಪುರಂನ ಅನಂತಪುರಿ ಹಿಂದೂ ಮಹಾ ಸಮ್ಮೇಳನದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಕೇರಳದ ಹಿರಿಯ ರಾಜಕಾರಣಿ ಪಿ.ಸಿ. ಜಾರ್ಜ್ ಅವರನ್ನು ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಗುರುವಾರ ಒಪ್ಪಿಸಿದೆ.
ತಿರುವನಂತಪುರಂನ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದ ನಂತರ ಮಂಗಳವಾರ ರಾತ್ರಿ ಪೊಲೀಸರು ಪಿಸಿ ಜಾರ್ಜ್ ಅವರನ್ನು ಬಂಧಿಸಿದ್ದರು. ಪಿಸಿ ಜಾರ್ಜ್ ಅವರು ಈಗಾಗಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಯಾವುದೇ ಜಾಮೀನು ಅರ್ಜಿಯನ್ನು ಸಲ್ಲಿಸಲಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬುಧವಾರ, ಅವರನ್ನು ಕೊಚ್ಚಿಯ ಪೊಲೀಸ್ ಠಾಣೆಯಿಂದ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಅವರು ಈ ತಿಂಗಳು ಕೊಚ್ಚಿಯ ದೇವಾಲಯದ ಉತ್ಸವವೊಂದರಲ್ಲಿ ಮಾಡಿದ ಮತ್ತೊಂದು ದ್ವೇಷ ಭಾಷಣದ ತನಿಖೆಯ ಭಾಗವಾಗಿ ತೆರಳಿದ್ದರು.
ಇದನ್ನೂ ಓದಿ: ಮುಸ್ಲಿಮರ ವಿರುದ್ದ ದ್ವೇಷ ಭಾಷಣ: ಕೇರಳದ ಮಾಜಿ ಶಾಸಕನ ಬಂಧನ, ಜಾಮೀನು
ಕೊಟ್ಟಾಯಂ ಜಿಲ್ಲಾ ಪಂಚಾಯತ್ ಸದಸ್ಯರಾಗಿರುವ ಜಾರ್ಜ್ ಅವರ ಪುತ್ರ ಶೋನ್, ತಮ್ಮ ತಂದೆಯ ಬಂಧನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪಿತೂರಿ ಎಂದು ಆರೋಪಿಸಿದ್ದಾರೆ. “ಅವರು (ವಿಜಯನ್) ಜಾರ್ಜ್ ಅವರನ್ನು ಕನಿಷ್ಠ ಒಂದು ಗಂಟೆ ಜೈಲಿನಲ್ಲಿ ಇರಿಸುವ ಮೂಲಕ ಯಾರನ್ನೊ ಮನವೊಲಿಸಲು ಬಯಸಿದ್ದರು. ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಬಾಕಿ ಇರುವ ಸಮಯದಲ್ಲಿ ನನ್ನ ತಂದೆಯನ್ನು ಬಂಧಿಸುವ ಮೂಲಕ ಅವರು ಕೆಲವು ವಲಯಗಳನ್ನು ಸಮಾಧಾನಪಡಿಸಲು ಬಯಸಿದ್ದರು” ಎಂದು ಶೋನ್ ಹೇಳಿದ್ದಾರೆ.
ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದ ನಂತರ ತಿರುವನಂತಪುರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರ್ಜ್ ಅವರ ಜಾಮೀನನ್ನು ರದ್ದುಗೊಳಿಸಿದೆ. ಈ ತಿಂಗಳು ಕೊಚ್ಚಿಯಲ್ಲಿ ನಡೆದ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಜಾರ್ಜ್ ಮತ್ತೊಂದು ದ್ವೇಷ ಭಾಷಣ ಮಾಡಿ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯದ ಗಮನಕ್ಕೆ ತಂದಿತ್ತು.
ಏಪ್ರಿಲ್ 29 ರಂದು ತಿರುವನಂತಪುರಂನ ಅನಂತಪುರಿ ಹಿಂದೂ ಮಹಾ ಸಮ್ಮೇಳನದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಕ್ಕಾಗಿ ಪಿ.ಸಿ ಜಾರ್ಜ್ ವಿರುದ್ಧ ಹಲವು ಸಂಘಟನೆಗಳು ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದವು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪಿ.ಸಿ. ಜಾರ್ಜ್, “ಮುಸ್ಲಿಮರು ನಡೆಸುತ್ತಿರುವ ರೆಸ್ಟೋರೆಂಟ್‌ಗಳಿಗೆ ಹೋಗಬಾರದು. ಅವರು ದೇಶದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಚಹಾದಲ್ಲಿ ಸಂತಾನಹರಣ ಆಗುವ ದ್ರವವನ್ನು ಅದರಲ್ಲಿ ಬಳಸುತ್ತಾರೆ” ಎಂದು ಹೇಳಿದ್ದರು.
ಇದನ್ನೂ ಓದಿ: ಕೇರಳದಲ್ಲಿ ಬಂಡವಾಳಶಾಹಿಗಳೊಂದಿಗೆ ಕೈಜೋಡಿಸಿದ ಆಪ್; ಹುಸಿಯಾಗುತ್ತಿರುವ ಪರ್ಯಾಯ ರಾಜಕಾರಣದ ಭರವಸೆ
33 ವರ್ಷಗಳ ಕಾಲ ರಾಜ್ಯ ವಿಧಾನಸಭೆಯಲ್ಲಿ ಪೂಂಜಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜಾರ್ಜ್ ಅವರು ಮುಸ್ಲಿಮರು ನಡೆಸುತ್ತಿರುವ ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಮುಸ್ಲಿಮೇತರರನ್ನು ಅಂದಿನ ಭಾಷಣದಲ್ಲಿ ಒತ್ತಾಯಿಸಿದ್ದರು.


