ಸಾಹಿತಿ-ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಅವರು ಭಾಗವಹಿಸಿದ ಚಳವಳಿಗಳಿಂದ, ತಮ್ಮ ಬರವಣಿಗೆಯಿಂದ ಮತ್ತು ತಮ್ಮ ಅಧ್ಯಯನದ ಕೆಲಸಗಳಿಂದ ಚಿರಪರಿಚಿತರು. ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ ಕೃಷ್ಣಮೂರ್ತಿ ಅವರು ಅದೇ ಸಂಸ್ಥೆಯಿಂದ ಆರೋಪಕ್ಕೆ ಒಳಗಾದವರು. ಆದರೆ ಈಗ ಕಾನೂನು ಹೋರಾಟ ನಡೆಸಿ, ಅದರಲ್ಲಿ ಜಯಗಳಿಸಿ ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದಾರೆ. ಅಕಾಡೆಮಿಯಲ್ಲಿ ತಾವು ತರಬಯಸಿದ ಸುಧಾರಣೆಗಳ ಕಾರಣಕ್ಕೆ ಗುರಿಯಾಗಿ ಸಂತ್ರಸ್ತನಾಗಿದ್ದಾಗಿ ತಿಳಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಕೃಷ್ಣಮೂರ್ತಿ ಅವರ ಅಮಾನತು ಆದೇಶವನ್ನು ವಾಪಸ್ ಪಡೆದಿದ್ದು, ಬಾಕಿ ವೇತನ, ನಿವೃತ್ತಿ ವೇತನ ಸೇರಿದಂತೆ ತಡೆಹಿಡಿಯಲಾಗಿದ್ದ ಎಲ್ಲಾ ಸೌಲಭ್ಯಗಳನ್ನು ಕಾನೂನುಪ್ರಕಾರ ನೀಡುವುದಾಗಿ ಹೇಳಿದೆ. ಈ ಸಂದರ್ಭದಲ್ಲಿ ನ್ಯಾಯಪಥ-ನಾನುಗೌರಿ ಅಗ್ರಹಾರ ಕೃಷ್ಟಮೂರ್ತಿ ಅವರನ್ನು ಸಂದರ್ಶಿಸಿತು. ತಮ್ಮ ಹೋರಾಟ ಮತ್ತು ಬರವಣಿಗೆ ದಿನಗಳನ್ನು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಾದ ಅಹಿತಕರ ಅನುಭವವನ್ನು ಮೆಲುಕು ಹಾಕಿದ ಈ ಸಂದರ್ಶನದ ಆಯ್ದ ಪಠ್ಯ ಇಲ್ಲಿದೆ. ಪೂರ್ಣ ವಿಡಿಯೋವನ್ನು ನಾನುಗೌರಿ ಯುಟ್ಯೂಬ್ ತಾಣದಲ್ಲಿ ಪ್ರಕಟಿಸಲಾಗುವುದು.
ಪ್ರಶ್ನೆ: ಸರ್ ನಮಸ್ಕಾರ. ನೀವು ’ಬೂಸಾ ಚಳವಳಿ’ಯ ಕಾಲು ಶತಮಾನದ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತ, ನೀವು ಚಳವಳಿಗಳಿಂದ ಬರಹಗಾರರಾಗಿದ್ದು. ಒಂದು tradition ಅಥವಾ ಪರಂಪರೆಯಿಂದ ಲೇಖಕರಾಗಿದ್ದಲ್ಲ ಅಂತ ಹೇಳಿದ್ರಿ. ಈಗ ಬೂಸಾ ಚಳವಳಿಗೆ ಅರ್ಧ ಶತಮಾನ ಆಗ್ತಾ ಬಂತು. ನಿಮ್ಮ ಚಳವಳಿಯ ದಿನಗಳನ್ನ ನೆನಪು ಮಾಡಿಕೊಳ್ಳಬಹುದ? ಬೂಸಾ ಚಳವಳಿ ಆಗಲಿ, ಜೆಪಿ ಚಳವಳಿ, ಜಾತಿ ವಿನಾಶ ಚಳವಳಿಯಲ್ಲಿ ಸಕ್ರಿಯವಾಗಿದ್ದವರು ನೀವು. ಚಳವಳಿಗಳ ಸಂಗಾತಿ ಆಗಿದ್ದವರು; ಅದನ್ನು ಸ್ವಲ್ಪ ಮೆಲುಕು ಹಾಕಬಹುದಾ..
ಅಗ್ರಹಾರ ಕೃಷ್ಣಮೂರ್ತಿ: ತುಂಬಾ ಒಳ್ಳೆ ಪ್ರಶ್ನೆ. ನಾವೆಲ್ಲ ಸಾಹಿತ್ಯ ಕಲಿಯಕ್ಕೆ ಅಂತಲೇ ಬಂದವರು, ಚಳವಳಿಯ ಮೂಲಕ ಬಂದವರೇನಲ್ಲ. ಆದರೆ ಒಂದು ರೀತಿಯ coincidence ಅನ್ನಬಹುದು. ಆ ಟೈಮಲ್ಲಿ ಅಂದರೆ ನಾವು ಸಾಹಿತ್ಯ ಕಲಿಯುವ ಕಾಲಕ್ಕೆ, ಕರ್ನಾಟಕದಲ್ಲಿ ಅನೇಕ ಚಳವಳಿಗಳು ಜಾರಿಯಲ್ಲಿದ್ವು. ಬರೀ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಭಾರತದಲ್ಲೇ ಅನೇಕ ಚಳವಳಿಗಳು ನಡೆಯುತ್ತಿದ್ದವು. ನಾವು ಕರ್ನಾಟಕದ ಒಳಗೇ ನೋಡುವುದಾದರೆ ಬೂಸಾ ಚಳವಳಿಗಿಂತ ಹಿಂದೆ Expo70 ಆಯ್ತು. ಅದು ನಮ್ಮನ್ನು ರೂಪಿಸುತ್ತಿದ್ದ formative ವರ್ಷಗಳು ಅನ್ನಬಹುದು. ನಾವೆಲ್ಲ 18-19 ವರ್ಷದವರು. ನ್ಯೂಸ್‌ಗಳಲ್ಲಿ ಬರುತ್ತಿದ್ದ Expo70 ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಒಂದು ಚಳವಳಿ ನಿಮಗೆ ಗೊತ್ತಿರಬಹುದು. ಯಾರೋ ಒಬ್ಬ ಮಂತ್ರಿ ಮಗನ್ನ ವಿದೇಶಕ್ಕೆ (ಜಪಾನಿಗೆ) Expo70 ಕಳುಹಿಸಿಕೊಟ್ಟರು. ಅದರ ವಿರುದ್ಧ ಬಹಳ ದೊಡ್ಡ ಚಳವಳಿ ಆಯ್ತು. ಆಮೇಲೆ ಬಹುಶಃ ಆ ಮಂತ್ರಿ ರಾಜೀನಾಮೆ ಕೊಡಬೇಕಾಗಿ ಬಂತು. ಅವಾಗೇನಾಯ್ತು ವಿದ್ಯಾರ್ಥಿಗಳಿಗೆ ಒಂದು ಶಕ್ತಿಯಿದೆ ಎಂದು ಗೊತ್ತಾಯ್ತು. ಆ ವಿದ್ಯಾರ್ಥಿ ಚಳವಳಿಗಳ ಬಗ್ಗೆ ಒಂದು ಕುತೂಹಲ ಇರ್ತಿತ್ತು. conscious ಆಗಿ ಅಲ್ಲ. ನಾವು ನಮ್ಮ ಪಾಡಿಗೆ ನಾವು ಸಾಹಿತ್ಯ ಓದುತ್ತಾ ಇದ್ವಿ, ಅದರ ಜತೆಜತೆಗೆ ಇದು ನಡೆಯುತ್ತಿತ್ತು.
ಇನ್ನೊಂದು ವಿಷಯ, ಆಗ ಬೆಂಗಳೂರಿಗೆ ಕಲಿಯುವುದಕ್ಕೆ ಬಂದಾಗ ಕಾಲೇಜುಗಳ ಚುನಾವಣೆಗಳು ಬಹಳ ಮಹತ್ವಪೂರ್ಣವಾದವು. ಇವಾಗಿನ ರೀತಿಯಲ್ಲ. ಚುನಾವಣೆಗಳ ಮೂಲಕ ಪ್ರತಿಯೊಂದು ಕಾಲೇಜುಗಳಲ್ಲಿ ಒಬ್ಬೊಬ್ಬ ವಿದ್ಯಾರ್ಥಿ ನಾಯಕರನ್ನ ಆಯ್ಕೆ ಮಾಡುತ್ತಿದ್ದರು. ಅದು ಪಕ್ಷಾತೀತವಾಗಿ ನಡೆಯುತ್ತಿತ್ತು. general secretary, finance secretary, president ಹೀಗೆ. ಈ ರೀತಿ ಆಯ್ಕೆಯಾದವರೆಲ್ಲ ಸೇರಿ ಮತ್ತೊಂದು federation ಆಗ್ತಿತ್ತು. ಎಲ್ಲಾ ಕಾಲೇಜಿನ ಎಲ್ಲಾ ಪ್ರತಿನಿಧಿಗಳು ಸೇರಿ ಮತ್ತೊಬ್ಬ ನಾಯಕನನ್ನು ಆಯ್ಕೆ ಮಾಡುವ ಒಂದು federation ಅದು. It was very vibrant elections. ಒಂದು democratic process ಒಳಗಡೆ ವಿದ್ಯಾರ್ಥಿಗಳ ಸಮೂಹ involve ಆಗ್ತಾ ಇತ್ತಲ್ಲ, that itself might be a reason for that generation to inculcate that kind of interest in movements. ಆಮೇಲೆ ನಿಮಗೆ ಗೊತ್ತಿರುವ ಹಾಗೆ, ಬಿಹಾರದ ಜೆಪಿ ಚಳವಳಿ. ಆಮೇಲೆ ಕರ್ನಾಟಕದಲ್ಲಿ ನಡೆದ ಇತರೆ ಚಳವಳಿಗಳು: ಜಾತಿವಿನಾಶ ಸಮ್ಮೇಳನ ಇರಬಹುದು ಅಥವಾ ಬೂಸಾ ಚಳವಳಿ ಇರಬಹುದು. ನಂತರದ ದಲಿತ ಸಂಘರ್ಷ ಸಮಿತಿಯ ಚಳವಳಿಗಳು; ಇವೆಲ್ಲ ನಡೆಯುವ ಕಾಲಕ್ಕೆ ನಾವು ವಿದ್ಯಾರ್ಥಿಗಳಾಗಿದ್ದೆವು. ಸಾಹಿತ್ಯದ ವಿದ್ಯಾರ್ಥಿಗಳಾಗಿ ಚಳವಳಿಗಳು ನಮಗೆ ಅಕರ್ಷಣೀಯವಾಗಿ ಕಂಡವು.
ನಾನು ಹಿಂದೆ ಒಂದು ಮಾತು ಹೇಳಿರಬಹುದು; ಚಳವಳಿಗಳಿಂದ ಬಂದು ಲೇಖಕರಾಗಿದ್ದೀವೆಂದು. it is true, given a different kind of impetus present to all of us. ಇದು ಇಲ್ಲದೆನೇ ಬಂದೋರು ನಮ್ಮ ಕಾಲದಲ್ಲಿ ಇದ್ರು. ಚಳವಳಿಗೆ ಯಾವುದೇ ಸಂಬಂಧ ಇಲ್ಲದೆ ಸಾಹಿತ್ಯವನ್ನು ಬರೆಯುವ ಲೇಖಕರೂ ಇದ್ದಾರೆ. ಅವರೂ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಚಳವಳಿಯಿಂದ ಸಾಹಿತ್ಯಕ್ಕೆ ಬಂದವರು ಕೂಡ social justice ಪ್ರಾಮುಖ್ಯತೆ ತಿಳಿದುಕೊಂಡು ಮಾಡಿದ ಕೆಲಸದ ಬಗೆಗೆ ನನಗೆ ಬಹಳ ಸಂತೋಷ ಇದೆ. ಈ ಚಳವಳಿಗಳ ಮೂಲಕ ಬರುವವರು aesthetics ಅಷ್ಟಾಗಿ ಗಮನಿಸುವುದಿಲ್ಲ ಅನ್ನೊ ಮಾತು ಇದೆ. ಆದರೆ it has got a different kind of aesthetics. Social aesthetics ಅನ್ನಬಹುದು. It is much more important than pure aesthetics.
ಪ್ರ: ನಿಮ್ಮ formative years ಚಳವಳಿಗಳ ಕಾಲ ಅಂದ್ರಿ. ನೀವು ಸಕ್ರಿಯವಾಗಿ ಬೂಸಾ ಚಳವಳಿಯಳ್ಳಿ ತೊಡಗಿಕೊಂಡ ಮೇಲೆ ಡಿಎಸ್‌ಎಸ್ ಚಳವಳಿಗಳನ್ನು ಹತ್ತಿರದಿಂದ ಕಂಡಿರಿ. ಡಿಎಸ್‌ಎಸ್ ಕೂಡ ನಿಮ್ಮನ್ನು ರೂಪಿಸಿತು ಎಂದು ಹೇಳಿದ್ದೀರಿ. ಆ ತರದಲ್ಲಿ ಸಮಾಜದಲ್ಲಿನ ಅನೇಕ ವರ್ಗಗಳನ್ನು ತೊಡಗಿಸಿಕೊಳ್ಳುತ್ತಿದ್ದ ಚಳವಳಿಗಳು ಇದ್ದವು ಮತ್ತು ಅದು ಸಾಹಿತ್ಯದಲ್ಲೂ reflect ಆಗ್ತಾ ಇತ್ತು. ಅವೆಲ್ಲವೂ ಒಗ್ಗೂಡಿ ಕೆಲಸ ಮಾಡುತ್ತಿದ್ದವು. ಆ ದಿನಗಳನ್ನು ಇವತ್ತಿಗೆ ಹೋಲಿಕೆ ಮಾಡಿಕೊಂಡರೆ ಏನನ್ನಿಸುತ್ತದೆ? ನೀವು ಸುಮಾರು ಸಾರಿ ಎಂ.ಡಿ ನಂಜುಂಡಸ್ವಾಮಿಯವರನ್ನು invoke ಮಾಡ್ತೀರ, ಅವರ ಹೋರಾಟಗಳು ಸಾಕಷ್ಟು ಸ್ಫೂರ್ತಿ ಕೊಟ್ವು, ಎಷ್ಟೋ ಸಲ ಆತ್ಮಸ್ಥೈರ್ಯ ನೀಡಿದ್ವು ಎಂದು ಹೇಳಿಕೊಂಡಿದ್ದೀರಾ. ಅವರು ಅಧಿಕಾರದ ವಿರುದ್ಧ ವರ್ತಿಸುತ್ತಿದ್ದ ರೀತಿಯ ಬಗ್ಗೆ ಮೆಚ್ಚಿ ಮಾತನಾಡಿದ್ದೀರಿ. ಅಂತಹ ಚಳವಳಿಗಳು ಇವತ್ತು ಕಾಣಿಸುತ್ತವ ಅಥವಾ ಇದ್ದ ಚಳವಳಿಗಳೂ ವಿಘಟನೆ ಆದ್ವು ಯಾಕೆ?
ಉ: ಇವತ್ತಿನ ಪರಿಸ್ಥಿತಿಗೆ ನಾವು ನೇರವಾಗಿ ಹೋಲಿಕೆ ಮಾಡುವುದಕ್ಕೆ ಆಗಲ್ಲ. ಅದಕ್ಕೆ ಬೇರೆಬೇರೆ ಕಾರಣಗಳು ಇರಬಹುದು. ಉದಾಹರಣೆಗೆ, ಬೂಸಾ ಚಳವಳಿಯನ್ನು ನಾವು ಒಂದು fixed reference point ಎಂದು ಇಟ್ಟುಕೊಳ್ಳಬಹುದು. ಅದು ಏಕಕಾಲದಲ್ಲಿ ಸಾಮಾಜಿಕ ಚಳವಳಿಯಾಗಿತ್ತು, ಅದೇ ಕಾಲದಲ್ಲಿ ಸಾಹಿತ್ಯ ಚಳವಳಿ ಕೂಡ ಆಗಿತ್ತು. ಬೂಸಾ ಚಳವಳಿಯ ಮಾತು ಸಾಹಿತ್ಯದ ಬಗೆಗಿನ ಮಾತಾಗಿ ಅದಕ್ಕೆ social stratificationಗಳೆಲ್ಲ ಸೇರಿಕೊಂಡವು. ನೋಡಿ ಅದನ್ನು ನಾನು ಯಾಕೆ fixed reference point ಎಂದು ಕರೆಯುತ್ತೇನೆ ಅಂದರೆ ಅಲ್ಲಿಯವರೆಗೆ ಸಾಹಿತ್ಯದ ಬಗ್ಗೆ ಇದ್ದ ಪರಿಕಲ್ಪನೆಗಳು ಬದಲಾದವು. ಕರ್ನಾಟಕದ ಬಹಳ ಮೇಜರ್ ಬರಹಗಾರರು ಕೂಡ ಬಸವಲಿಂಗಪ್ಪನವರ ಹೇಳಿಕೆಯ ಬಗ್ಗೆ ಪ್ರಾರಂಭದಲ್ಲಿ ಮೌನವಹಿಸಿದ್ದರು. ಯಾವಾಗ ಕುವೆಂಪು ಅವರು ಮತ್ತು ಇನ್ನಿತರ ಲೇಖಕರು ಧ್ವನಿ ಸೇರಿಸಲು ಶುರುಮಾಡಿದರೊ ಆವಾಗ ಅದಕ್ಕೆ ಒಂದು ಬೇರೆ ರೀತಿಯ ಮಾನ್ಯತೆ ಸಿಕ್ಕಿತು. ನಿಜ ಎನ್ನುವ ರೀತಿಯಲ್ಲಿ. ಅದರಲ್ಲಿ ಬೇರೆಬೇರೆ ತರಹದ contributionಗಳಿವೆ. ಉದಾಹರಣೆಗೆ media ಅಂದರೆ ಇವತ್ತಿನಷ್ಟು electronic media ಇಲ್ಲದೆ ಇದ್ದರೂ, ಕೂಡ ಮುದ್ರಣ ಮಾಧ್ಯಮದವರು ಅವುಗಳನ್ನು ಬೇಕಾದ ರೀತಿಯಲ್ಲಿ ಜನರಿಗೆ ತಲುಪಿಸಲು ಶುರು ಮಾಡಿದರು. ಅದು ಇಂಗ್ಲಿಷ್ ಮತ್ತು ಕನ್ನಡದ ನಡುವಿನ ಮಾತುಕತೆಯಾಗಿ, ಕೊನೆಗೆ ಸಾಹಿತ್ಯದ ಮೌಲ್ಯಾತ್ಮಕ ಬೆಳವಣಿಗೆಯಾಗಿ ಸಹಕರಿಸಿತು. ಪ್ರಾರಂಭದಲ್ಲಿ it was only matter of english and kannada. ನಿಮಗೆ ಗೊತ್ತಿರುವ ಹಾಗೇ ಬಸವಲಿಂಗಪ್ಪನವರು ಕನ್ನಡದಲ್ಲಿ ಏನಿದೆ, ಇಂಗ್ಲಿಷ್ ಓದಿ ಎಂಬ ಮಾತು ಬೆಳೆದು ಈ ಸ್ವರೂಪ ತಾಳಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇವತ್ತೇನಾಗಿದೆ ಎಂದರೆ ಚಳವಳಿಗಳು ಬೇರೆ ಸ್ವರೂಪ ತಾಳಿವೆ. ಇಂದು rightist angleನಲ್ಲಿ ನಡೆಯುತ್ತಿರುವಂತಹ ಚಳವಳಿಗಳಿವೆ. ಎಡಪಂಥೀಯ ವಿಚಾರಧಾರೆಗಳಿಂದ ಹಿಮ್ಮೆಟ್ಟಿಸುವುದಕ್ಕೆ ಆಗದೇ ಇರುವಂತಹ ಮಟ್ಟಿಗೆ ಬಲಪಂಥೀಯರು ವಿಚಾರಧಾರೆಗಳು ಚಳವಳಿಗಳನ್ನು ಮಾಡುತ್ತಿವೆ. ನಾವು ಅದನ್ನು ಚಳವಳಿ ಎಂದು ಕರೆಯಬಾರದು, ಒಂದು ರೀತಿಯಲ್ಲಿ ಪುಂಡಾಟಿಕೆ ಎನ್ನಬಹುದು. ಪುಂಡಾಟಿಕೆಯನ್ನು ಎದುರಿಸುವುದಕ್ಕೆ ಮತ್ತೊಬ್ಬರು ಪುಂಡರಾಗಬಾರದು, ಯಾಕೆಂದರೆ ಅವರ ವಿಚಾರಧಾರೆಗಳನ್ನು ನಾವು ನಮ್ಮ ವಿಚಾರಗಳಿಂದ ಎದುರಿಸುವ ಶಕ್ತಿಯನ್ನು ಹೆಚ್ಚು ಪಡೆಯಬೇಕು.
ಪ್ರ: Leadership ಕೊರತೆ ಕಾಣಿಸುತ್ತಾ ಇದೆಯೇ? ನೀವು ವಿದ್ಯಾರ್ಥಿಗಳಾಗಿದ್ದ ಕಾಲದಲ್ಲಿ ಒಂದು ದೊಡ್ಡ ನಾಯಕತ್ವ ಇರುತ್ತಿತ್ತು. ಸಾಹಿತ್ಯದಲ್ಲಾಗಲೀ ಬೇರೆ ವಲಯಗಳಲ್ಲಾಗಲೀ, ಅವರನ್ನು ನೋಡಿ ನಾವು ಕಲಿತುಕೊಳ್ಳಬೇಕು ಎನ್ನುವ ಅಥವಾ ವಿಶಾಲವಾಗಿ ಜನರನ್ನು ಪ್ರಭಾವಿಸಬಲ್ಲ ವ್ಯಕ್ತಿಗಳಿದ್ದರು. ಆ ಕೊರತೆ ಇವತ್ತಿನ ದಿನ ಕಾಡುತ್ತಿದೆಯೇ? ಯಾಕೆ ಹೀಗಾಯಿತು?
ಉ: ನೀವು ಹೇಳುವುದು ನೂರಕ್ಕೆ ನೂರು ಸತ್ಯ. ಯಾಕೆಂದರೆ ಅವತ್ತಿನ ದಿವಸ ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ ಯಾತಕ್ಕಾಗಿ ನಾವು ಒಂದು ವಿಚಾರದ ಹಿಂದೆ ಹೋದೆವು ಎಂದರೆ ಅದನ್ನು propagate ಮಾಡುತ್ತ ಇದ್ದಂತವರು ಅಷ್ಟರಮಟ್ಟಿಗೆ ಪ್ರಾಮಾಣಿಕ ನಾಯಕತ್ವ ವಹಿಸಿದವರಾಗಿದ್ದರು. ಕುವೆಂಪು ಅವರನ್ನೇ ತೆಗೆದುಕೊಳ್ಳಿ. ಜಾತಿವಿನಾಶ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಇದೆಯೆಲ್ಲ ಮತ್ತು ಒಂದು ಲೇಖಕರ ಒಕ್ಕೂಟ ಅಂತ ಆಯ್ತು, ಆ ಲೇಖಕರ ಒಕ್ಕೂಟವನ್ನ ಕುವೆಂಪು ಅವರು ಉದ್ದೇಶಿಸಿ ಮಾತನಾಡಿದ್ದರು. ಅಂತಹ stature ಇದ್ದಂತಹ ನಾಯಕರಿದ್ದರು. ಉದಾಹರಣೆಗೆ ಕರ್ನಾಟಕದಲ್ಲಿ ಲಂಕೇಶ್, ಅನಂತಮೂರ್ತಿ, ಎಂ.ಡಿ ನಂಜುಂಡಸ್ವಾಮಿ ಇವರುಗಳ ನಾಯಕತ್ವದ ವರ್ಚಸ್ಸಿಗೆ ಸಣ್ಣ ವಯಸ್ಸಿನ ನಾವೆಲ್ಲರೂ ಆಕರ್ಷಿತರಾದದ್ದು ಇದೆ.
ಕರ್ನಾಟಕದಲ್ಲಿ ಅಷ್ಟೇ ಅಲ್ಲ ಭಾರತದ ಇತರೆ ಭಾಗಗಳಲ್ಲಿ ಕೂಡ ಆ ರೀತಿಯಾದ ಚಳವಳಿಗಳು ನಡೆದವು. ಅದಕ್ಕೆ ದೊಡ್ಡ ನಾಯಕತ್ವ ಇತ್ತು. ಉದಾಹರಣೆಗೆ ಪೆರಿಯಾರ್ ಅವರ ನಾಯಕತ್ವ; ಇಡೀ ತಮಿಳುನಾಡಿನ ಒಳಗೆ ಪೆರಿಯಾರ್ ಒಂದು ಕಾಲಕ್ಕೆ ಮಾಡಿದ ಸಾಮಾಜಿಕ ಹೋರಾಟ ಮತ್ತು ಒಂದು rationalist association ಬೆಳೆಸಿದ ವಿಧಾನ ನೆನಪಿಸಿಕೊಳ್ಳಬಹುದು; ಅವು ಬರೀ ತಮಿಳುನಾಡಿನಲ್ಲಿ ಅಷ್ಟೇ ಅಲ್ಲ, ಕರ್ನಾಟಕದಲ್ಲೂ ಕೂಡ, ಕೇರಳದಲ್ಲೂ ಕೂಡ ಪ್ರಭಾವ ಬೀರಿದಂತವು. ಜೊತೆಗೆ ಆಂಧ್ರಪ್ರದೇಶದಲ್ಲೂ ನಡೆದ ಒಂದು ವಿಪ್ಲವ ಹೋರಾಟ; ಅಲ್ಲಿ ಕೆಲವು ಕ್ರಾಂತಿಕಾರಿ ಹೋರಾಟಗಳಾದವು. ಅದೇ ಸಮಯದಲ್ಲಿ ವೆಸ್ಟ್‌ಬೆಂಗಾಲ್ ಮತ್ತು ಕೇರಳದಲ್ಲಿ ನಕ್ಸಲ್‌ವಾದ ಇತ್ತು. ಆ ನಕ್ಸಲ್‌ವಾದ ಕೂಡ ಯುವಕರನ್ನು ಆಕರ್ಷಿಸಿದ್ದು ಉಂಟು. ಇನ್ನೊಂದು ಬಹಳ ಮುಖ್ಯವಾದ ವಿಚಾರವೆಂದರೆ ಕಮ್ಯುನಿಸ್ಟ್ ಮಾರ್ಕ್ಸಿಸ್ಟ್ ಪಾರ್ಟಿ. ಅದು ಕೂಡ ಬಿಹಾರ್, ವೆಸ್ಟ್‌ಬೆಂಗಾಲ್, ಕೇರಳ, ಕರ್ನಾಟಕದಲ್ಲಿ ಪ್ರಭಾವ ಇಟ್ಟುಕೊಂಡಿತ್ತು. ನಮ್ಮಲ್ಲಿ ಎಂ.ಕೆ ಭಟ್ಟರಿದ್ದರು; ಬಹಳ ದೊಡ್ಡ ವಿಜ್ಞಾನಿ. ಮಾರ್ಕ್ಸ್‌ವಾದಿ ಪಕ್ಷ ಸೇರಿದರು, ಅದರ ಮೂಲಕ ವಿದ್ಯಾರ್ಥಿಗಳನ್ನ ಆಕರ್ಷಿಸುತ್ತಾ ಇದ್ದರು. ನಕ್ಸಲ್‌ವಾದನೂ ಇತ್ತು; ಆದರೆ ಅದರ ತೀವ್ರವಾದದ ಕಡೆಗೆ ಯಾರೂ ಅಷ್ಟಾಗಿ ಹೋಗಲಿಲ್ಲ. ಅದು ಬಹಳ ಮುಖ್ಯವಾದ ಅಂಶ. democratic process ಒಳಗಡೆನೆ ಇರಬೇಕು ಮತ್ತು electoral politics ಒಳಗಡೆನೆ ನಮ್ಮ ಚಟುವಟಿಕೆಗಳನ್ನು ಮಾಡಬೇಕು ಎನ್ನುವ ಕಾರಣದಿಂದಾಗಿ ನಕ್ಸಲ್‌ವಾದದ ಕಡೆಗೆ ಹೆಚ್ಚು ಗಮನ ಕೊಡಲಿಲ್ಲ. ಇವೆಲ್ಲ ಚಳವಳಿಗಳು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಬೇರೆ ಕಡೆಯಲ್ಲೂ ಪ್ರಭಾವ ಬೀರುತ್ತಾ ಇದ್ದವು. ಲಂಕೇಶ್, ನಂಜುಂಡಸ್ವಾಮಿ, ಪೆರಿಯಾರ್ ಮತ್ತು ನಮ್ಮಲ್ಲಿ ಇನ್ನೊಬ್ಬರು ಇದ್ದರು ಪ್ರೊ. ಧರ್ಮಲಿಂಗಮ್ ಅಂತ. ಅವರು ಲಾ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಅವರು ಪೆರಿಯಾರ್ ವಿಚಾರಧಾರೆಯನ್ನು ಕರ್ನಾಟಕದಲ್ಲಿ ಹಬ್ಬಿಸಿದರು. ಜೊತೆಗೆ ಜನಪ್ರಗತಿ ಎಂಬ ಪೇಪರ್ ಇತ್ತು. ಆ ಪೇಪರ್ ಒಳಗಡೆ ’ದೇವರು ಸತ್ತ’ ಎಂಬ ಲೇಖನಮಾಲೆ ಬರುತ್ತಿತ್ತು. ಬರೆದವರು ವಸುದೇವ ಭೂಪಾಲಂ ಅಂತ. ಅವರ ಲೇಖನಗಳನ್ನು ಜನಪ್ರಗತಿಯೊಳಗೆ ನಾವು ಓದುತ್ತಾ ಇದ್ದೆವು. ಅದನ್ನು ಸರ್ಕಾರ ಬ್ಯಾನ್ ಮಾಡಿತು. ಬ್ಯಾನ್ ಮಾಡಿದ್ದರಿಂದ ಅದನ್ನು ತಮಿಳುನಾಡಿನಿಂದ ಪ್ರಿಂಟ್ ಮಾಡಿ ಕರ್ನಾಟಕದಲ್ಲಿ ಹಂಚಲು ಶುರು ಮಾಡಿದರು. ನಾವು ಬಿಎ ಓದುವಾಗ ನಾನು ಸಿದ್ದಲಿಂಗಯ್ಯ, ಡಿ.ಆರ್ ನಾಗರಾಜ್ ಎಲ್ಲರೂ ಭೂಪಾಲಂ ಅವರನ್ನು ನೋಡಲು ಹೋಗಿದ್ದೆವು. ಈ ರೀತಿ ಬರೆಯಬಾರದು ಎಂದು ಅವರಿಗೆ ಸುಮಾರು ಜನ ಹೆದರಿಸಿದ್ದರು. ನಾವು ಹೋದಾಗಲೂ ಕೂಡ ಅವರಿಗೆ ಸ್ವಲ್ಪ ಆತಂಕ ಇತ್ತು. ಎಲ್ಲ ತಿಳಿದ ಮೇಲೆ ನಮ್ಮನ್ನು ಮಾತನಾಡಿಸಿ ಕಳುಹಿಸಿದರು. ಅವೆಲ್ಲವೂ ನಮ್ಮ ಸಾಹಿತ್ಯದ ಮೇಲೆ ಪ್ರಭಾವ ಬೀರಿದಂತವು.
ಪ್ರ: ನೀವು ಈಗ ವೈಚಾರಿಕತೆ ಬಗ್ಗೆ ಮಾತನಾಡ್ತಾ ಇದ್ರಿ. ಪೆರಿಯಾರ್ ವೈಚಾರಿಕತೆ ನಿಮ್ಮ ಮೇಲೆ ಪ್ರಭಾವ ಬೀರಿತು, ವಸುದೇವ ಭೂಪಾಲಂ ಬಗ್ಗೆ ಕೂಡ ಹೇಳಿದ್ರಿ. ನೀವು ಡಿ.ಆರ್ ಅವರಿಗೆ ಬಹಳ ಆತ್ಮೀಯ ಗೆಳೆಯರಾಗಿದ್ರಿ. ಅವರ ಪುಸ್ತಕ ’ಸಂಸ್ಕೃತಿ ಕಥನ’ವನ್ನು ಕೂಡ ಎಡಿಟ್ ಮಾಡಿದ್ದೀರಿ. ಡಿ.ಆರ್ ವಿಚಾರಧಾರೆ ಪೆರಿಯಾರ್ ಅವರ ವೈಚಾರಿಕತೆಗಿಂತ ಭಿನ್ನವಾಗಿತ್ತಲ್ಲವಾ? ಅವರನ್ನು ಎಡಪಂಥೀಯ ವಿಚಾರಧಾರೆಯ ನೆಲೆಯಲ್ಲಿ ಗ್ರಹಿಸಬಹುದಾದರೂ, ವೈಚಾರಿಕತೆಯನ್ನು ಡಿ.ಆರ್ ಕಟ್ಟಿಕೊಟ್ಟ ಮಾರ್ಗ ಭಿನ್ನವಾಗಿತ್ತ?
ಉ: ಭಿನ್ನವಾಗಿತ್ತು. ಆದರೆ ಪ್ರಾರಂಭದಲ್ಲಿ ಡಿ.ಆರ್. ಶುರು ಮಾಡಿದ್ದು ಇಲ್ಲಿಂದಲೇ. ಪೆರಿಯಾರ್ ವಿಚಾರಧಾರೆಯಿಂದಲೇ ಅವರು ತಮ್ಮ ವೈಚಾರಿಕತೆಯನ್ನು ಬೆಳೆಸಿಕೊಳ್ಳುವುದಕ್ಕೆ ಶುರು ಮಾಡಿದ್ದು. ಆದರೆ ಯಾವುದೋ ಒಂದು ಕಾಲಘಟ್ಟದ ಒಳಗಡೆ ಅದರಿಂದ ಭಿನ್ನವಾದರು ನಿಜ. ಸರಿ ಕೂಡ; ಯಾಕೆ ಸರಿ ಅಂತ ಅಂದರೆ ಪೆರಿಯಾರ್ ಅವರನ್ನು ಡಿ.ಆರ್ ಋಷಿ ಎಂದು ಕರೆಯುತ್ತಿದ್ದರು. ಅದು ಬಹಳ ಮುಖ್ಯವಾದ ಮಾತು. ಅವರು ದ್ರಾವಿಡ ವಿಚಾರಧಾರೆಯ ಒಬ್ಬ ಋಷಿ. ಅದಕ್ಕೆ ಇದ್ದ ಲಿಮಿಟೇಷನ್ ಏನಪ್ಪ ಅಂದರೆ ಸರ್ವನಿರಾಕರಣವಾದ ಅನ್ನೋದು; ಪುರಾಣಗಳನ್ನು ನಿರಾಕರಿಸುವುದು, ನಿಮ್ಮ ಆಚರಣೆಗಳನ್ನು ನಿರಾಕರಿಸುವುದು; ಈ ಸರ್ವನಿರಾಕರಣೆ ಭಾವವನ್ನು ಡಿ.ಆರ್ ಒಪ್ಪಲಿಲ್ಲ. ಅವರಿಗೆ ಇದರಲ್ಲಿ, ಇಲ್ಲೂ ಏನೋ ಇರಬೇಕು ಅನ್ನಿಸಿ, ಭಿನ್ನವಾದ ವಿಚಾರಧಾರೆಗಳ ಕಡೆಗೆ ಹೊರಟು ಅದನ್ನು ಬೆಳೆಸಿದರು. ಅಕ್ಷರ ಚಿಂತನೆ ಮಾಲೆ ಒಳಗಡೆ ಬಂದಂತಹ ಎಲ್ಲಾ ಪುಸ್ತಕಗಳು ಪ್ರಾಚೀನ ಪರಂಪರೆಯೊಳಗೆ ಇದ್ದ ವಿಭಿನ್ನ ವಿಚಾರಧಾರೆಯಿಂದ, ವೈದಿಕ ವಿಚಾರಧಾರೆಯನ್ನು ಹೇಗೆ ಎದುರುಗೊಳ್ಳಬಹುದು ಎಂಬುದನ್ನು ಶೋಧಿಸಿತ್ತು.
ಭಿನ್ನವಾದ ಪರಂಪರೆ ಮೊದಲಿನಿಂದಲೂ ಇತ್ತು ಮತ್ತು ಈ ಭಿನ್ನವಾದ ಪರಂಪರೆ ಕರ್ನಾಟಕದ ಮತ್ತು ಭಾರತದ ಅನೇಕ ವೈದಿಕೇತರ ಗುಂಪುಗಳಾಗಿದ್ದವು ಅಥವಾ ವೈದಿಕೇತರ ವಿಚಾರಧಾರೆಗಳಾಗಿದ್ದವು. ಭೀಮಾ ಬೊಯಿ ಉದಾಹರಣೆ ನೋಡಿ; ಆ ಮರದ ಕಟ್ಟಿಗೆಯನ್ನು ನಾವು ಪೂಜಿಸುವುದಿಲ್ಲ ಅಂತ ಪೂರಿಜಗನ್ನಾಥನನ್ನು ಪೂಜಿಸದ ಒಂದು ಪಂಥ ಇತ್ತು. ಇಂತಹ ಪಂಥಗಳು ಮತ್ತು ಬಿಹಾರದ ಕೆಲವು ಪಂಥಗಳು ಅಲ್ಲದೆ ಕೆಲವು ಇಸ್ಲಾಮಿಕ್ ಪಂಥಗಳು ಕೂಡ ಇದ್ದವು. ಡಿ.ಆರ್ ನನ್ನ ಕೈಯಲ್ಲಿ ಒಂದು ಪುಸ್ತಕ ಬರೆಸಿದ್ದರು; ದಾರಾಶಿಕೋ ಮೇಲೆ. ದಾರಾಶಿಕೋ ಅಲ್ಲಿ ಇಸ್ಲಾಮ್ ತಾತ್ವಿಕ ಸಿದ್ಧಾಂತಗಳು ಮತ್ತು ಹಿಂದೂ ತಾತ್ವಿಕ ಸಿದ್ಧಾಂತಗಳ ಸಂಬಂಧ ಏನು ಅನ್ನುವುದನ್ನು ತುಂಬಾ ಚೆನ್ನಾಗಿ ಅಧ್ಯಯನ ಮಾಡಿದ್ದಾನೆ. ಅವನು ಅದನ್ನು ಸಮುದ್ರ ಸಂಗಮ ಅಂತ ಕರೆಯುತ್ತಾನೆ. ಅಂದರೆ ಇಸ್ಲಾಮ್ ಸಮುದ್ರ ಮತ್ತು ಹಿಂದೂ ಸಮುದ್ರ ಇವೆರಡು ಒಟ್ಟಾದಾಗ ಯಾವ ರೀತಿಯ ವಿಚಾರಧಾರೆಗಳು ಬರುತ್ತವೆ ಎಂದು; ಅಂತಿಮವಾಗಿ ನಾವು ದೇವರನ್ನು ಕಾಣುವುದಕ್ಕೆ ಹಲವು ಮಾರ್ಗಗಳಿವೆ ಅನ್ನುವ ಮಾತುಗಳನ್ನ ಈ ಬೇರೆಬೇರೆ ಪರಂಪರೆಗಳನ್ನು ಹುಡುಕುವುದರ ಮೂಲಕ ಮತ್ತು ಬರೀ ರ್‍ಯಾಶನಲಿಸಂ ಅಷ್ಟೇ ಅಲ್ಲ ಅನ್ನುವುದರ ಮೂಲಕ ಡಿ.ಆರ್ ನಾಗರಾಜ್ ತೋರಿಸಲು ಪ್ರಯತ್ನಿಸಿದರು.
ನನ್ನ ಮಟ್ಟಿಗೆ ಹೇಳುವುದಾದರೆ ಕರ್ನಾಟಕದಲ್ಲಿ ಪೆರಿಯಾರ್ ವಿಚಾರಧಾರೆ ಒಂದು ರೀತಿಯಲ್ಲಿ ಲಿಮಿಟೆಡ್ ಆದದ್ದು. ಯಾಕೆಂದರೆ ನಮ್ಮಲ್ಲಾಗಲೇ 12ನೇ ಶತಮಾನದಲ್ಲಿ ಬಸವಣ್ಣನ ಚಳವಳಿ ಇತ್ತು. ಅದಕ್ಕೆ ಹೋಲಿಸಿದರೆ, ಪೆರಿಯಾರ್ ಚಳವಳಿ is very much inferior thought process. ಇದೇ ವಿಚಾರವನ್ನು ಹೆಚ್ಚು ಶಕ್ತಿಯುತವಾಗಿ ಬಸವಣ್ಣನವರು ತೋರಿಸಿದ್ದರು. ಆದರೆ ಬಸವಣ್ಣನವರ ಕಾಲದಲ್ಲಿ ಅವರೂ ಒಂದು compromise ಮಾಡಿಕೊಂಡಿದ್ದರು. ಏನು ಅಂದರೆ 108 ದೇವರುಗಳಿಗಿಂತ ಒಬ್ಬ ದೇವರನ್ನು ನಾವೂ ಆರಾಧಿಸೋಣ ಮತ್ತು ಆ ಒಬ್ಬ ದೇವರನ್ನ ನಮಗೆ ಅತ್ಯಂತ ಪ್ರಿಯನಾದ ದೇವರನ್ನಾಗಿ ಮಾಡಿಕೊಂಡು ನಮ್ಮ ಕೈಯಲ್ಲೇ ಇಟ್ಟುಕೊಳ್ಳೋಣ ಅಂತ; ಪೆರಿಯಾರ್ ಅವರು ಅದನ್ನೂ ನಿರಾಕರಿಸುವುದಕ್ಕೆ ಶುರು ಮಾಡಿದರು. ಎಲ್ಲೋ ಒಂದೆಡೆ ಇದೂ ಸರಿ ಅದೂ ಸರಿ ಅನ್ನಿಸುತ್ತಿತ್ತು ಯಾಕೆಂದರೆ ಇವತ್ತಿನ ದಿನದಲ್ಲೂ ಕೂಡ ನಮಗೆ ಧರ್ಮ ಮತ್ತು ದೇವರು ಅನ್ನುವುದು ಒಂದು ರೀತಿಯಲ್ಲಿ abstract ಆಗಿರುವಂಥದ್ದೆ ಆಗಿದೆ.
ಪ್ರ: 21ನೇ ಶತಮಾನದಲ್ಲಿ ಬಲಪಂಥೀಯತೆ ಬೆಳೆದಿರುವ ರೀತಿ ನೋಡಿದರೆ ಮತ್ತು ಅದು ಜನಮಾನಸವನ್ನು ಆಕ್ರಮಿಸಿಕೊಂಡಿರುವುದನ್ನು ನೋಡಿದರೆ ಹಾಗೂ ಬಸವಣ್ಣನ ಚಳವಳಿಯಿಂದ ಪ್ರಭಾವಿತರಾದವರು ಅಥವಾ ಫಲಾನುಭವಿಗಳಾದ ಲಿಂಗಾಯುತರು ಒಂದು ಮಾಸ್ ಆಗಿ ಬಲಪಂಥೀಯ ಚಿಂತನೆಯ-ವೈದಿಕ ಚಿಂತನೆಯ ಬಿಜೆಪಿಗೆ ಓಟು ಹಾಕುತ್ತಿರುವುದನ್ನು ನೋಡಿದರೆ, ಇವತ್ತಿನ ಜನಾಂಗ ಪೆರಿಯಾರ್ ವಿಚಾರಧಾರೆಯ ಕಡೆ ಹೋಗುವುದು ಒಳ್ಳೆಯದು ಎಂದು ಅನ್ನಿಸುವುದಿಲ್ಲವೇ? ಆ ಚಿಂತನೆಗಳು ಬಲಪಂಥೀಯ ಉಗ್ರಗಾಮಿತ್ವವನ್ನು ಹಿಮ್ಮೆಟ್ಟಿಸಲು ಸಹಾಯ ಮಾಡಬಹುದು ಎಂದು ಅನ್ನಿಸುವುದಿಲ್ಲವೇ?
ಉ: ಮಾಡಬಹುದು. ತಮಿಳುನಾಡಿನ ಒಳಗೆ ಪೆರಿಯಾರ್ ಅವರ ಪ್ರಭಾವ ಎಂದಿಗೂ ಕಡಿಮೆಯಾಗಿಲ್ಲ. ಅದನ್ನು ನಾವು ಬಹಳ ವಿಶೇಷವಾಗಿ ಗಮನಿಸಬೇಕು. ಡಿಕೆ ಪಕ್ಷದಿಂದ ಬೆಳೆದು ಡಿಎಂಕೆ ಆಗಿ ಅಣ್ಣ ಡಿಎಂಕೆ ಆಗಿ ಒಡಕುಗಳು ಉಂಟಾದರೂ ಕೂಡ ಪೆರಿಯಾರ್ ವಿಚಾರಧಾರೆಯನ್ನು ಎರಡೂ ಪಕ್ಷಗಳು ಒಂದು ಮಟ್ಟದಲ್ಲಿ ಬೆಳೆಸಿಕೊಳ್ಳುತ್ತ ಹೋದವು. ಅದು ಪೊಲಿಟಿಕಲಿ ತುಂಬಾ ಪ್ರಭಾವ ಬೀರಿದೆ. ಎಂ.ಜಿ ರಾಮಚಂದ್ರನ್, ಜಯಲಲಿತಾ ಇವರೆಲ್ಲ ಸ್ವಲ್ಪ ಮಟ್ಟಿಗೆ ಪೆರಿಯಾರ್ ವಿಚಾರದಿಂದ ದೂರ ಆದರೂ ಕೂಡ ಮೂಲ ವಿಚಾರಧಾರೆಯನ್ನು ಮರೆಮಾಚುವುದಕ್ಕೆ ಆಗಲಿಲ್ಲ. ಕರುಣಾನಿಧಿಯವರೂ ಕೂಡ ಒಂದು ಕಾಲಘಟ್ಟದೊಳಗೆ ಪೆರಿಯಾರ್ ಅವರಿಂದ ಸೈದ್ಧಾಂತಿಕವಾಗಿ ದೂರ ಆಗಿದ್ದರು. ಅಣ್ಣಾದೊರೈ ಕೂಡ. ಆದರೆ ಎಂದೂ ಅವರ ವಿಚಾರಧಾರೆಯನ್ನು ಬಿಟ್ಟುಕೊಡಲಿಲ್ಲ. ಉದಾಹರಣೆಗೆ ದೇವಸ್ಥಾನಗಳಲ್ಲಿ ಎಲ್ಲಾ ಜನಾಂಗದ ಜನರು ಪೂಜೆ ಮಾಡಬೇಕು ಅನ್ನುವುದು ಪೆರಿಯಾರ್ ಅವರ ಮೂಲ ಆಶಯವಾಗಿತ್ತು. ಮೊದಲನೇ ಬಾರಿಗೆ ಕರುಣಾನಿಧಿ ಮುಖ್ಯಮಂತ್ರಿಯಾದಾಗ ಅವರು ಅದನ್ನು introduce ಮಾಡುತ್ತಾರೆ. ಅದನ್ನು ಒಂದು ಶಾಸನವಾಗಿ ತಂದುಬಿಡುತ್ತಾರೆ. ಆಗ ಪೆರಿಯಾರ್ ಅವರಿಗೆ ತುಂಬಾ ಖುಷಿಯಾಗುತ್ತದೆ. ನನ್ನಿಂದ ದೂರ ಹೋದರೂ ಪರವಾಗಿಲ್ಲ, ಆದರೆ ನೀವು ನನ್ನ ವಿಚಾರವನ್ನು ಶಾಸನಬದ್ಧವಾಗಿ ಇಂಪ್ಲಿಮೆಂಟ್ ಮಾಡ್ತ ಇದ್ದೀರಾ, ಆದ್ದರಿಂದ it will be percolated into the constitution of tamil generation ಅನ್ನುತ್ತಾರೆ. ಆದರೆ ಅದು ಕರ್ನಾಟಕದಲ್ಲಿ ಆಗಲಿಲ್ಲ.
ಕಾನ್ಶಿರಾಮ್ ಅವರು ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಪೆರಿಯಾರ್ ಅವರ ಹೆಸರು ತೆಗೆದುಕೊಳ್ಳುತ್ತಾರೆ. ನಾರಾಯಣಗುರು ಅವರ ಹೆಸರು ತೆಗೆದುಕೊಳ್ಳುತ್ತಾರೆ. ಇವರ ಸಿದ್ಧಾಂತಗಳನ್ನು ನಾವು ಹೆಚ್ಚುಹೆಚ್ಚು ಜನರಿಗೆ ತಲುಪಿಸಬೇಕೆಂಬ ಮಾತನಾಡುತ್ತಾರೆ. ಆ ಮೂಲಕ ಒಂದು ರಾಜಕೀಯ ಪಕ್ಷವನ್ನು ಕಟ್ಟುವುದಕ್ಕೆ ಹೋಗ್ತಾರೆ. ಈ ವಿಚಾರಗಳು ಎಂದೂ ತಮ್ಮ relevance ಕಳೆದುಕೊಳ್ಳಲಿಲ್ಲ.
ಪೆರಿಯಾರ್ ಮಾದರಿಯಲ್ಲಿ ಒಂದು ಚೂರು ಹಿಂಸೆಗೆ ಅವಕಾಶವಿತ್ತು. ಪೆರಿಯಾರ್ ಅವರು ನನಗೆ ಗೊತ್ತಿದೆ ಎಂದು ಏನು ಹೇಳಿದರೋ, ಅವರ ಫಾಲೋವರ್ಸ್ ಇದನ್ನು ಅನುಸರಿಸಿ ವಿರೋಧ ಮಾಡುವ ಹೊತ್ತಿಗೆ ಒಂಚೂರು ಪುಂಡಾಟಿಕೆ ಮಾಡಿದರು. ಯಾವುದನ್ನು ಬಲಪಂಥೀಯ ಪುಂಡಾಟಿಕೆ ಎಂದು ನಾವು ಕರೆಯುತ್ತೇವೋ ಅದು ಒಂದು ಕಾಲದಲ್ಲಿ ಪೆರಿಯಾರ್ ಪುಂಡಾಟಿಕೆ ಕೂಡ ಆಗಿತ್ತು. ಆದರೆ ಅದು most of the times symbolic ಆಗಿರುತ್ತಿತ್ತು. ಸಾಂಕೇತಿಕವಾಗಿ ಇರುತ್ತಿತ್ತು. ಅವರು ಏನು ಮಾಡುತ್ತಿದ್ದರು ಅಂದರೆ ಯಾರಾದರೂ ಜನಿವಾರ ಹಾಕಿದ್ದರೆ ಅದನ್ನು ಕಟ್ ಮಾಡುತ್ತಿದ್ದರು. ಆಮೇಲೆ ಬಿಟ್ಟು ಕಳುಹಿಸುತ್ತಿದ್ದರು. ಅದು ಒಂದು ಡಾಮಿನೆಂಟ್ ಧರ್ಮದ ವಿರುದ್ಧ ತೋರಿಸುವ ಸಾಂಕೇತಿಕವಾದ ಹೋರಾಟ. ಆದರೆ ಬಲಪಂಥೀಯ ಪುಂಡಾಟಿಕೆ ಏನಾಗಿದೆ ಅಂದರೆ lynching ಅಥವಾ ಕೊಲೆ ಸುಲಿಗೆಗೆ ಬಂದು ನಿಂತಿದೆ. ಇವುಗಳು ಪೆರಿಯಾರ್ ಹೋರಾಟದಲ್ಲಿ ಎಂದಿಗೂ ಆಗುತ್ತಿರಲಿಲ್ಲ. ಈವಾಗ ಆ ಮಟ್ಟಕ್ಕೆ ಬಂದು ನಿಂತಿರುವುದು ಒಂದು ದುರಂತ. ಇವರೆಲ್ಲ ಇದ್ದ ನಾಡಿನಲ್ಲಿ lynching ಕೊಲೆಗಳಾಗುತ್ತಿರುವುದು ತಲೆತಗ್ಗಿಸುವಂತಹ ವಿಚಾರ. ಇದು ನಾವು ಹೆಚ್ಚುಹೆಚ್ಚು ಯೋಚನೆ ಮಾಡಬೇಕಾದ ವಿಚಾರ.
ಪ್ರ: ಸರ್ ನೀವು 2006ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಗೆ secretary ಆಗಿದ್ದು; ಅದಕ್ಕೂ ಮುಂಚಿನಿಂದಲೇ ಅಕಾಡೆಮಿ ಜೊತೆಗೆ ಇದ್ರಾ?
ಉ: ನಾನು ಕೇಂದ್ರ ಸಾಹಿತ್ಯ ಅಕಾಡೆಮಿಗೆ 1986ಅಲ್ಲಿ ಸೇರಿದೆ. ಅದಕ್ಕಿಂತ ಮೊದಲು ಆಲ್‌ಇಂಡಿಯಾ ರೇಡಿಯೊದಲ್ಲಿ program executive ಅಗಿದ್ದೆ. ಅದಕ್ಕೆ ರಾಜಿನಾಮೆ ನೀಡಿದೆ. ಅಕಾಡೆಮಿಯ ದಕ್ಷಿಣ ಪ್ರಾದೇಶಿಕ ಕಚೇರಿ ಅವಾಗ ಚೆನೈನಲ್ಲಿತ್ತು. ನಾನು 1986 ಜುಲೈನಲ್ಲಿ ಮದರಾಸಿನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅದು ತಮಿಳು, ತೆಲುಗು, ಕನ್ನಡ, ಮಲೆಯಾಳಂ ನಾಲ್ಕು ಭಾಷೆಗೆ ಸಂಬಂಧಪಟ್ಟ ಪ್ರಾದೇಶಿಕ ಕಚೇರಿ. ಅಲ್ಲಿಗೆ ನಾನು ಪ್ರಾದೇಶಿಕ ಅಧಿಕಾರಿಯಾಗಿ ಹೋದೆ. ಆಮೇಲೆ ಅದು ಬೆಂಗಳೂರಿಗೆ ವರ್ಗಾವಣೆ ಆಯ್ತು. ಅದು ಒಂದು ದೊಡ್ಡ ಕಥೆ.
ಪ್ರ: ಕೇಂದ್ರ ಸಾಹಿತ್ಯ ಅಕಾಡೆಮಿ secretary ಆಗಿ ನಿಮ್ಮ ಚಟುವಟಿಕೆಗಳು ಯಾವ ಸ್ವರೂಪದಲ್ಲಿ ಇರುತ್ತಿದ್ದವು?
ಉ: ನಾನು secretary ಆಗಿ ದೆಹಲಿಗೆ ಹೋದಾಗ, ಒಂದು ಪ್ರಾದೇಶಿಕ ಕಚೆರಿಯನ್ನು 20 ವರ್ಷ ನಡೆಸಿದ ಅನುಭವ ಇತ್ತು. ಕೇಂದ್ರದವರು ಈ ಪ್ರಾದೇಶಿಕ ಕಚೆರಿಗಳಿಗೆ ಕೊಡಬೇಕಾದಷ್ಟು ಮಹತ್ವಗಳನ್ನು ಕೊಡುತ್ತಿರಲಿಲ್ಲ. ಹಣಕಾಸು ಇರಬಹುದು, ಕಾರ್ಯಕ್ರಮ ಇರಬಹುದು; ಅವುಗಳು ಮತ್ತು ಕಚೇರಿಯ ಒಳಗಡೆ ಇದ್ದಂತಹ ಸಿಬ್ಬಂದಿಗಳಿಗೆ ಇರುವ ಸವಲತ್ತುಗಳಿರಬಹುದು; ನಾನು southern regional office ಒಳಗೆ ಒಂದು ಲೈಬ್ರರಿಯನ್ನು establish ಮಾಡಿದೆ. ಅಂಥ ಒಂದು ಲೈಬ್ರರಿಯನ್ನು establish ಮಾಡಬೇಕೆಂದಾಗ ಎಷ್ಟು ಕಷ್ಟ ಪಟ್ಟಿದ್ದೀವಿ ಎಂದರೆ- ದುಡ್ಡು ಬೇಕು ಪುಸ್ತಕ ಬೇಕು ಜಾಗ ಬೇಕು ಅದಕ್ಕೆ ಬೇಕಾದಂತಹ ಉಪಕರಣಗಳು ಬೇಕು ಇವು ಯಾವೂ ನಮಗೆ ಸಿಗುತ್ತಿರಲಿಲ್ಲ.
ಇನ್ನೊಂದು ಮಾತು southern regional office ಬಾಡಿಗೆ ಕೊಟ್ಟು 30 ವರ್ಷಗಳಿಂದ ಚೆನೈನಲ್ಲಿ ನಡೆಯುತ್ತಿತ್ತು. ನಮಗೆ ಬರುವ ದುಡ್ಡೆಲ್ಲ ಬಾಡಿಗೆಗೆ ಹೋಗುತ್ತಿತ್ತು. ಅವಾಗ ನಾವು ಯೋಚನೆ ಮಾಡಿ ಕರ್ನಾಟಕದೊಳಗೆ ಒಂದು ಬಾಡಿಗೆರಹಿತ ಬಿಲ್ಡಿಂಗ್‌ಅನ್ನು ಸಂಪಾದನೆ ಮಾಡಿದ್ವಿ. ಅದಕ್ಕೆ ಅನೇಕ ಸ್ನೇಹಿತರು ನಮಗೆ ಸಹಾಯ ಮಾಡಿದರು. ಹಾಗಾಗಿ ಒಂದು ನಯಾ ಪೈಸೆ ಬಾಡಿಗೆ ಕೊಡದೆ ಕಳೆದ 30 ವರ್ಷದಿಂದ ಸಾಹಿತ್ಯ ಅಕಾಡೆಮಿ ಇಲ್ಲಿ ನಡೆಯುತ್ತ ಇದೆ. ಸೆಂಟ್ರಲ್ ಕಾಲೇಜಿನಲ್ಲಿ ಅದಕ್ಕೂ ಮೊದಲು ಎಡಿಎ ರಂಗಮಂದಿರದಲ್ಲಿ. ಇನ್ನು ಉಳಿದ ಆಫೀಸ್‌ಗಳು ಕೊಲ್ಕತ್ತಾದಲ್ಲಿ ಮತ್ತು ಬಾಂಬೆ ಆಫೀಸ್‌ನಲ್ಲಿ ಒಂದು ತಿಂಗಳಿಗೆ ಲಕ್ಷಲಕ್ಷ ರೂಪಾಯಿಗಳ ಬಾಡಿಗೆ ಕೊಟ್ಟು ನಡೆಯುತ್ತಿವೆ. ನನಗೆ ಅನ್ನಿಸುತ್ತದೆ ಈಗ ಇವುಗಳನ್ನೆಲ್ಲ ನಾವು ಯಾಕಾದರೂ ಮಾಡಿದ್ವಿ ಅಂತ. It’s a taxpayers money and it should be equally distributed, equal facilities should be given to all. ಕೊಲ್ಕತ್ತದವರು ಲಕ್ಷಾಂತರ ರೂಪಾಯಿ ಬಾಡಿಗೆ ಕೊಡೋದು; ಬಾಂಬೆಯಲ್ಲಿ ಲಕ್ಷಾಂತರ ರೂಪಾಯಿ ಬಾಡಿಗೆ ಕೊಡೋದು; ಆದರೆ ಇಲ್ಲಿ ಒಂದು ಕ್ಲರ್ಕ್ ಪೋಸ್ಟ್‌ಗಾಗಿ ಕಾಯುತ್ತ ಕುಳಿತಿರಬೇಕು. ಇಲ್ಲಿ ಒಬ್ಬ ಕ್ಲರ್ಕ್‌ಗೆ 20 ವರ್ಷ experience ಆದರು ಒಂದು ಬಡ್ತಿ ಇರುವುದಿಲ್ಲ; ಅದೇ ಹೆಡ್ ಆಫೀಸ್‌ನೊಳಗೆ ಕೆಲಸಕ್ಕೆ ಸೇರಿದ 10 ವರ್ಷಕ್ಕೆ ಬಡ್ತಿ ಸಿಕ್ಕಿರುತ್ತೆ. ಇದನ್ನು ನಾನು ಡೆಲ್ಲಿಗೆ ಹೋದಾಗ ನೋಡಿದೆ. ನಾನು ಏನು ಮಾಡಿದೆ ಅಂದರೆ ಲಿಸ್ಟ್‌ನಲ್ಲಿ ಯಾರು ಸೀನಿಯರ್ ಇರುತ್ತಾರೊ ಅವನು ಎಲ್ಲೇ ಇರಲಿ, ಆ ಪೋಸ್ಟ್‌ಅನ್ನು ಆ ರೀಜನ್‌ಗೆ ಹೋಗುವಂತೆ ಮಾಡಿದೆ. 30 ವರ್ಷಗಳಿಂದ ಆಗುತ್ತಿದ್ದ ಇಂತಹ ಕೆಲವು ಅನ್ಯಾಯಗಳನ್ನು ಸರಿಪಡಿಸುವುದಕ್ಕೆ ಮತ್ತು ರೂಲ್ಸ್ ಪ್ರಕಾರ ಇದ್ದಂತ reservation policy ಜಾರಿ ಮಾಡುವುದಕ್ಕೆ ಪ್ರಯತ್ನಿಸಿದೆ.
ಪ್ರ: ಇಂತಹ ಸುಧಾರಣಾ ಕ್ರಮಗಳು ನಿಮಗೇ ಮುಳುವಾಯ್ತಾ?
ಉ: ಇರಬಹುದು. ತಮಿಳರಿಗೆ ಇವತ್ತಿಗೂ ನನ್ನ ಮೇಲೆ ವೈಯಕ್ತಿಕವಾದ ಕೋಪ ಇದೆ. ಕಾರಣ ಏನು ಅಂದರೆ ಅಲ್ಲಿಯ regional office ಅನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದೆ ಅಂತ. ಅಲ್ಲಿ ನನ್ನ ವಿರುದ್ಧ ಬಹಳ protest ಮಾಡಿದರು. ನಾನು ಅವರಿಗೆ ಹೇಳಿದೆ ನಿಮಗೆ ಒಂದು ವರ್ಷ ಅಲ್ಲ ಎರಡು ವರ್ಷ ಸಾಹಿತ್ಯ ಅಕಾಡೆಮಿ ಟೈಮ್ ಕೊಡುತ್ತೆ, ನೀವು ಒಂದು ಜಾಗ ಬಾಡಿಗೆ ಇಲ್ಲದೆ ಇರುವುದನ್ನು ಹುಡುಕಿಕೊಡಿ. ಅವಾಗ ನಾವು ಶಿಫ್ಟ್ ಮಾಡೊಲ್ಲ ಅಂತ. ಅವರು ಅದನ್ನು ಕೊಡುವುದಕ್ಕೆ ಆಗಲಿಲ್ಲ, ಅದಕ್ಕೆ ನಾವು ಶಿಫ್ಟ್ ಮಾಡಿದೆವು. ನಾವು ಆಫೀಸ್ ಪೂರ್ತಿ ಶಿಫ್ಟ್ ಮಾಡಲಿಲ್ಲ, ಅಲ್ಲು ಒಂದು ಚಿಕ್ಕ ಪ್ರಸೆನ್ಸ್‌ಅನ್ನು ತಮಿಳಿನ ಚಟುವಟಿಕೆಗಳಿಗಾಗಿ ಬಿಟ್ಟಿದ್ದೇವೆ. ಈ ರೀತಿಯಾದ ಕೆಲವು ಬದಲಾವಣೆಗಳನ್ನು ಮಾಡಿದ್ದು ಅವರಿಗೆ ಕೋಪ.
ಪ್ರ: ಡೆಲ್ಲಿಯಲ್ಲಿ ಏಕಾಏಕಿ ನಿಮ್ಮ ಮೇಲೆ ಆರೋಪ ಮಾಡಿ ಕಮಿಟಿ ಮಾಡಿದರು; ಸಮರ್ಥಿಸಿಕೊಳ್ಳುವುದಕ್ಕೆ ಸರಿಯಾದ ಸಮಯ ಮತ್ತು ಅವಕಾಶ ಕೊಡಲಿಲ್ಲ ಅಂತ ದೂರಿದ್ದಿರಿ. ಆ ಟೈಮಲ್ಲಿ ಅಲ್ಲಿ ನಿಮ್ಮ ಸಪೋರ್ಟ್‌ಗೆ ಯಾರು ಇರಲಿಲ್ಲವ?
ಉ: ಅಲ್ಲಿ ನನ್ನ ಸಪೋರ್ಟ್‌ಗೆ ಇರಬೇಕಾದವರು ಇರಲಿಲ್ಲ. ಉದಾಹರಣೆಗೆ ಕನ್ನಡವನ್ನು ಪ್ರತಿನಿಧಿಸುವ ಮನುಷ್ಯ, ಆತನೆ ನನ್ನ ವಿರುದ್ಧ ಆಪಾದನೆ ಮಾಡುವುದಕ್ಕೆ ಶುರು ಮಾಡಿಬಿಟ್ಟ. ಆಗ ಒಂದು ಬಗೆಯ impression create ಆಗುತ್ತೆ. ಅಂದರೆ ಅವರ languageನವರೇ ಅವರ ವಿರುದ್ಧ ಮಾತಾನಾಡುತ್ತಿದ್ದಾರೆ ಅನ್ನುವ ಜನರಲ್ feeling ಬಂದುಬಿಡುತ್ತದೆ. ಇದು ಒಂದು ರೀತಿಯಲ್ಲಿ ಷಡ್ಯಂತ್ರ. ಈ ಷಡ್ಯಂತ್ರದ ಮೀಟಿಂಗ್‌ನಲ್ಲಿ false allegation ಮಾಡಿಬಿಟ್ಟರು. ಎಲ್ಲರಿಗೂ ಇದು ನಿಜ ಇರಬಹುದು ಅನ್ನಿಸಿಬಿಡ್ತು. ಆಗ ನನ್ನನ್ನು ನಾನೊಬ್ಬನೇ ಪ್ರತಿನಿಧಿಸಿಕೊಳ್ಳಬೇಕು. ಆ ಘಳಿಗೆಯಿಂದಲೇ ನಾನು ಪ್ರೊಟೆಸ್ಟ್ ಮಾಡಿ ಅಲ್ಲೇ ಒಂದು ಕಾಗದ ಬರೆದುಕೊಟ್ಟೆ. ಅಧ್ಯಕ್ಷರು ಅಲ್ಲೇ ಒಂದು ಕಮಿಟಿ ಫಾರ್ಮ್ ಮಾಡಿಬಿಟ್ಟರು. ಈ ಕಮಿಟಿ ಇನ್ನೊಂದು ತಿಂಗಳಲ್ಲಿ ರಿಪೋರ್ಟ್ ಕೊಡಬೇಕು ಎಂದು ಹೇಳಿಬಿಟ್ಟರು. ನಡೆಯುತ್ತಿದ್ದ ಮೀಟಿಂಗ್ ಮಧ್ಯೆ ಆ ಸಮಯದಲ್ಲಿ ನಾನು ಬಹಳ ನಿಸ್ಸಹಾಯಕನಾಗಿದ್ದೆ. ನಾನು ಅಲ್ಲಿ ಪರ್ಮಿಶನ್ ತೆಗೆದುಕೊಂಡು ಮಾತನಾಡಿದೆ. ಮಾಡಿರುವ ಎಲ್ಲ allegationಗಳೂ false. ಈ ಕಮಿಟಿ ಒಂದು ತಿಂಗಳಲ್ಲಿ ರಿಪೋರ್ಟ್ ಕೊಡಬೇಕು ಎಂದು ಹೇಳಲಾಗಿದೆ. ಈ ಕಮಿಟಿ ಸುಸೂತ್ರವಾಗಿ ಕೆಲಸ ಮಾಡುವುದಕ್ಕೋಸ್ಕರ ಈ ಘಳಿಗೆಯಿಂದ ನಾನು ಆಫೀಸ್‌ನಿಂದ ದೂರ ಉಳಿಯುತ್ತೀನಿ. ಒಂದು ತಿಂಗಳಲ್ಲಿ ನೀವು ಈ ವಿಚಾರಣೆಯನ್ನು ಮುಗಿಸಿ ನನ್ನನ್ನು ಮತ್ತೆ ಕೆಲಸಕ್ಕೆ ತಗೋಬೇಕು ಅಂದೆ.
5 ತಿಂಗಳಲ್ಲಿ ನಾನು ರಿಟೈರ್ಡ್ ಆಗಬೇಕಿತ್ತು. ವಿಚಾರಣೆಯನ್ನು ಪ್ರಾರಂಭ ಮಾಡಿದರು, ಅದನ್ನು ನಿಗದಿತ ಸಮಯದಲ್ಲಿ ಮುಗಿಸಲಿಲ್ಲ. ಮುಗಿಸುವುದಕ್ಕೆ ಎರಡು ವರ್ಷ ತೆಗೆದುಕೊಂಡರು. ವಿಚಾರಣೆ ಮಾಡುವ ಹೊತ್ತಿನಲ್ಲಿ ಆ ಕಮಿಟಿ ನನಗೆ ಒಂದು ಅವಕಾಶ ಕೊಡಬೇಕಾಗಿತ್ತು, ನನ್ನನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ. ಸಾಕ್ಷ್ಯಾಧಾರಗಳ ಪ್ರಕಾರ ಆ ಕಮಿಟಿ ಒಂದು unilateral decision ತೆಗೆದುಕೊಳ್ತು. ಏಕಪಕ್ಷೀಯವಾದ decision ತೆಗೆದುಕೊಂಡು ನನ್ನ ಮೇಲೆ ಆರೋಪ ಮಾಡಿತು. ಅಲ್ಲಿ 7-8 ಆರೋಪ ಇವೆ. ಅದರಲ್ಲಿ financial misappropriation, ಕನ್ನಡದ ಪರವಾಗಿ ಕೆಲಸ ಮಾಡಿರುವುದು ಎಲ್ಲವು; ನಿಮ್ಮ ಮೇಲೆ ನಾವು ಯಾಕೆ ಕ್ರಮ ತಗೊಬಾರ್ದು ಅಂತ ಕೇಳಿದ್ರು. ಅಮೇಲೆ ನಾನು ಅದನ್ನು ಪ್ರಶ್ನೆ ಮಾಡಿದೆ. ನೀವು ನನ್ನ ಮೇಲೆ ಕ್ರಮ ತಗೊಳೊದಕ್ಕೆ ಆಗೊಲ್ಲ. ಇದನ್ನು ನಾನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡ್ತೀನಿ ಎಂದೆ. ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ. ಅದು ನನ್ನ ಪರವಾಗಿ ಆಯ್ತು. ಅವರು ಐದಾರು adjournment ತೆಗೆದುಕೊಂಡರು. Just to kill time. ಅಮೇಲೆ ನನ್ನ ಪರವಾಗಿ ತೀರ್ಪು ಬಂತು. ಮತ್ತೆ ಅವರು ಅಪೀಲ್ ಮಾಡಿದರು. ಅದು ಡಿಸ್‌ಮಿಸ್ ಆಯ್ತು, ಎರಡನೆ ಸಲ ಕೂಡ ತೀರ್ಪು ನನ್ನ ಪರವಾಗಿ ಬಂತು. ಅದು ದ್ವಿಸದಸ್ಯತ್ವ ಪೀಠ. ಅದಾದರೂ ಕೂಡ ತುಂಬಾ ಡಿಲೇ ಮಾಡಿದರು.
ಪ್ರತಿ ಕೋರ್ಟಿನ ತೀರ್ಪಿಗೆ ಒಂದು ಸಮಯವಿರುತ್ತದೆ. ಆ ಸಮಯದ ಒಳಗೆ ಅವರು ಮತ್ತೆ ಅಪೀಲ್ ಹೋಗಬಹುದು, ಸುಪ್ರೀಂ ಕೋರ್ಟ್‌ಗೆ ಕೂಡ ಹೋಗಬಹುದು; ಅವರು ಅಷ್ಟು ಟೈಮನ್ನು ಕಳೆದು ಅಮೇಲೆ ಒಂದು ಮೀಟಿಂಗ್ ಮಾಡಿ ನಿಮ್ಮ ಎಲ್ಲ benefits ಕೊಡ್ತೀವಿ ಅಂತ ಹೇಳಿದರು.
ಪ್ರ: ಮುಂದೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಜೊತೆ ನಿಮ್ಮ ಅಸೋಸಿಯೇಷನ್ ಹೇಗಿರುತ್ತೆ?
ಉ: ನಾನು ಇನ್ನು ಅಸೋಸಿಯೇಟ್ ಆಗುವುದಕ್ಕೆ ಆಗುವುದಿಲ್ಲ. ನಾನು ಒಬ್ಬ ನಿವೃತ್ತ. ನನಗೆ ಒಂದು ಪೆನ್‌ಶನ್ ಕೊಡ್ತಾರೆ. ಆದರೆ ಅವರು ಮಾಡ್ತಾ ಇದ್ದ ತಪ್ಪು ಹೇಳ್ತಿನಿ. ಅದು ಏನೆಂದರೆ, ನಾನೊಬ್ಬ ಲೇಖಕ; in my own limited way ನನಗೊಂದು ವರ್ಧಮಾನ ಪ್ರಶಸ್ತಿ ಕೊಟ್ಟಿದ್ದಾರೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟಿದ್ದಾರೆ, ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದಾರೆ. ನನ್ನ ಲೇಖನಗಳನ್ನು ಕೃತಿಗಳನ್ನು ನನ್ನ ಚಟುವಟಿಕೆಗಳನ್ನು ನೋಡಿ ಕೊಟ್ಟಿದ್ದಾರೆ. ಸಾಹಿತ್ಯ ಅಕಾಡೆಮಿ ಕಳೆದ ಹತ್ತು ವರ್ಷದಿಂದ ಯಾಕೆ ಯಾವ ಕಾರ್ಯಕ್ರಮಕ್ಕೂ ನನ್ನ ಕರೆದಿಲ್ಲ? ಬೇಕಾದಷ್ಟು ಚಟುವಟಿಕೆಗಳನ್ನು ಮಾಡಿದ್ದಾರೆ, ಬೇಕಾದಷ್ಟು ಕಾರ್ಯಕ್ರಮಗಳನ್ನೂ ಮಾಡಿದ್ದಾರೆ. ಅದಕ್ಕೆ ನಾನು ಸಾಹಿತ್ಯ ಅಕಾಡೆಮಿಯನ್ನು ದೂರಲ್ಲ. ಸಾಹಿತ್ಯ ಅಕಾಡೆಮಿ as a system is good, the problem lies with people. ಇವೆಲ್ಲದರ ಬಗ್ಗೆ ಅತೃಪ್ತಿ ಇದೆ.
ಸಂದರ್ಶನದ ವಿಡಿಯೋ ಇಲ್ಲಿದೆ..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!


